ಕಟ್ಟುವ ಹೆಗ್ಗಳಿಕೆಯಲ್ಲೇ ಮಸುಕಾದ ಶಾಕುಂತಲಾ

Team Udayavani, Jul 29, 2017, 4:30 PM IST

ಕಾಳಿದಾಸದನ ವಿಖ್ಯಾತ ನಾಟಕ ಕೃತಿ “ಅಭಿಜ್ಞಾನ ಶಾಕುಂತಲ’ವನ್ನು ಆಯಾ ಕಾಲಧರ್ಮದ ಸಂವೇದನೆಯಲ್ಲಿ ತೂಗಿ ನೋಡಲು ಬಯಸುವವರು ಮರು ವ್ಯಾಖ್ಯಾನಕ್ಕೆ ಈ ಕೃತಿಯನ್ನು ಒಡ್ಡಲು ಬಯಸುತ್ತಿರುತ್ತಾರೆ. ನಾಟಕ ಕೃತಿಯೊಂದು ಕಾಲದೇಶ ಮೀರಿ ಹೀಗೆ ಬೆಳೆಯುತ್ತಲೇ ಸಾಗುತ್ತಿರುತ್ತದೆ. ಹೊಸ ಸಂವೇದನೆಗಳ ಲೇಖಕರು ಆಧುನಿಕ ಪ್ರಜಾಪ್ರಭುತ್ವದಲ್ಲಿನ ಸವಾಲುಗಳು ಮತ್ತು ವೈರುಧ್ಯಗಳನ್ನು ತುಂಬ ಸೂಚ್ಯವಾಗಿ ವ್ಯಾಖ್ಯಾನಿಸಿ ನಾಟಕ ಕೃತಿಯಲ್ಲಿ ಹೊಸ ಭಾಷ್ಯ ಬರೆಯುತ್ತಿರುತ್ತಾರೆ. ಕೆ.ವಿ. ಸುಬ್ಬಣ್ಣ “ಲೋಕ ಶಾಕುಂತಲ’ದಲ್ಲಿ ಈ ಕೆಲಸ ಮಾಡಿದ್ದಾರೆ. ಕಾಳಿದಾಸನ ಮನೋಧರ್ಮದ ಜೊತೆಗೆ ಇವತ್ತಿನ ಕಾಲದ ವೈಪರೀತ್ಯಗಳನ್ನು ಅಲ್ಲಲ್ಲಿ ಸೂಚ್ಯವಾಗಿ ಹೇಳಿಸಿದ್ದಾರೆ. ಇದು ಅನುವಾದ ಮತ್ತು ಬರವಣಿಗೆಯಲ್ಲಿನ ದರ್ಶನ.

ಅಂತರಂಗ ತಂಡ ಈಚೆಗೆ ರಂಗಶಂಕರದಲ್ಲಿ ಕೆ.ವಿ. ಸುಬ್ಬಣ್ಣ ಕನ್ನಡೀಕರಿಸಿದ “ಲೋಕ ಶಾಕುಂತಲ’ ನಾಟಕವನ್ನು ಪ್ರದರ್ಶಿಸಿತ್ತು. ನಿರ್ದೇಶಕ ಜಂಬೆಯವರು ಪ್ರತಿಯೊಂದನ್ನೂ ಶೈಲೀಕೃತ ರೀತಿಯಲ್ಲಿ ಕಟ್ಟಿನಿಲ್ಲಿಸಬೇಕೆನ್ನುವ ಹಂಬಲದಲ್ಲಿ ಅಥವಾ ಕಡೆದು ನಿಲ್ಲಿಸಬೇಕೆನ್ನುವ ಹಠ ತೊಡಲು ಹೋಗಿ, ಪ್ರಯೋಗದ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲರಾದಂತೆ ಕಂಡುಬಂದರು.

ಕಾಳಿದಾಸನ “ಶಾಕುಂತಲ’ ನಾಟಕ ಕಾವ್ಯಮಯವಾದದ್ದು; ಬೆರಗುಗೊಳಿಸುವ ಪ್ರತಿಮೆಗಳಿಂದ ಕೂಡಿರುವಂಥದ್ದು; ಪ್ರಕೃತಿಯ ರಮ್ಯತೆಯ ಮೂಲಕ ಸ್ಮೃತಿ ವಿಸ್ಮೃತಿಗಳ ಕಥೆಗಳನ್ನು ಬಹಳ ಸ್ವಾರಸ್ಯಕರವಾಗಿ ಬಿಚ್ಚಿಡುವಂಥದ್ದು; ಪ್ರಾಣಿಲೋಕದ ವಿಶಿಷ್ಟ ಕಥಾನಕಗಳು ರೂಪಕಗಳಾಗಿ ಅದರ ಒಡಲಲ್ಲಿ ಅಡಕಗೊಂಡಿವೆ; ಕಾವ್ಯಗುಣ, ಅನನ್ಯ ಅನಿಸುವಂಥ ರೂಪಕಗಳ ಮೂಲಕ ಜಾಗತಿಕ ಓದುಗರನ್ನು ಇಂದಿಗೂ ಸೆಳೆಯುತ್ತಿರುವ ನಾಟಕ ಕೃತಿಯಾದ “ಶಾಕುಂತಲ’ದ ಪ್ರಸ್ತುತಿ ಮತ್ತು ಪ್ರಯೋಗದ ವಿಚಾರ ಬಂದಾಗ ನಿರ್ದೇಶಕ ರೂಪಕಗಳನ್ನು ಗೌಣಗೊಳಿಸಬಾರದು; ನಾಟಕಕೃತಿ ಯಾವ ಪ್ರಧಾನ ಅಂಶಗಳಿಂದ ತನ್ನ ಆವರಣ ಕಟ್ಟಿಕೊಂಡಿದೆಯೋ, ಅದನ್ನು ಮೀರಿದ್ದನ್ನು ಕಟ್ಟಿನಿಲ್ಲಿಸುವ ಸೃಜನ ಕಾರ್ಯಕ್ಕೆ ನಿರ್ದೇಶಕ ಮುಂದಾಗಬಾರದು.

ಆದರೆ, ನಿರ್ದೆಶಕ ಜಂಬೆ ಅವರು ಲೋಕಶಾಕುಂತಲದಲ್ಲಿ ಈ ಕಟ್ಟುವಿಕೆಯ ಕಡೆಗೇ ಹೆಚ್ಚು ಗಮನಹರಿಸಲು ಹೋಗಿ ನಾಟಕ ಕೃತಿಯಲ್ಲಿ ಧ್ವನಿತವಾಗಬೇಕಾದ ರೂಪಕಗಳನ್ನು ಮರೆಯಾಗಿಸಿರುವುದು ಕಂಡುಬಂತು. ಕೃತಿಯ ಸತ್ವ ಕಾಣಿಸುವ ಬದಲಾಗಿ ತನ್ನ ಸೃಜನ ಕಟ್ಟುವಿಕೆಯ ಹಿರಿಮೆ ಮತ್ತು ಗರಿಮೆಗಳನ್ನು ಅದರಲ್ಲಿ ಕಾಣಿಸಲು ಮುಂದಾದಂತೆ ಇತ್ತು. ಆದರೆ, ಇದರಲ್ಲೂ ಅವರಿಗೆ ಸಿದ್ಧಿ ಲಭಿಸಿದಂತೆ ತೋರಲಿಲ್ಲ. ಜಂಬೆ ತಮ್ಮ ಸೃಜನಶಕ್ತಿಯ ಕಾಣೆRಯ ಆವರಣ ಮತ್ತು ಮ್ಯಾನರಿಸಂಗಳನ್ನೇನೂ ಇಲ್ಲಿ ಸೃಷ್ಟಿಸಿಲ್ಲ. ಯಕ್ಷಗಾನದ ನಡೆಗೆ ಮನಸೋತವರಂತೆ ಅಲ್ಲಿನ ನಡೆಯನ್ನು ಈ ನಾಟಕದಲ್ಲಿ ಅಳವಡಿಸಲು ಹೋಗಿ ಅಲ್ಲೂ ಸೋತಿದ್ದಾರೆ. ಮಾತಿನ ಧಾಟಿಯೂ ಯಕ್ಷಗಾನದ ನಕಲೇ. ಭಾಗವತಿಕೆಯವರನ್ನು ಬೇರೆ ಪೋಷಾಕಿನಲ್ಲಿ ಸೂಚ್ಯವಾಗಿ ಕೂರಿಸಿದ್ದರು ಅಷ್ಟೇ; ಆದರೆ, ಅಸಲಿ ಯಕ್ಷಗಾನದ ಪ್ರಯೋಗಗಳು ನೀಡುವ ಚೇತೋಹಾರಿ ಅನುಭವವನ್ನೂ ಈ ಪ್ರಯೋಗ ನೀಡಲಿಲ್ಲ. ಯಕ್ಷಗಾನದ ಪ್ರಯೋಗಮೊಂದು ತೀರಾ ಡೈಲ್ಯೂಟಾದರೆ ಹೇಗಿರುತ್ತದೆಯೋ ಹಾಗಿತ್ತು “ಲೋಕ ಶಾಕುಂತಲಾ’. ದೃಶ್ಯಗಳ ನಡುವೆ ಅನಗತ್ಯ ಅನಿಸುವ ಮತ್ತದೇ ಯಕ್ಷಗಾನ ಹೆಜ್ಜೆಗಳ ನೃತ್ಯ- ಅದೂ ದೀರ್ಘ‌ವಾಗಿ; ಅಷ್ಟು ಲಂಬಿಸುವ ಅಗತ್ಯವಿರಲಿಲ್ಲ. ಮಾತುಗಳ ಧಾಟಿಯಲ್ಲೂ ಅಸಲಿ ಯಕ್ಷಗಾನಗಳಲ್ಲಿನ ಅರ್ಥಗಾರಿಕೆ ಮತ್ತು ಧಾಟಿ ಎರಡೂ ವ್ಯಕ್ತವಾಗಲಿಲ್ಲ. 

ಹಾಡುಗಳು, ದೃಶ್ಯಗಳಲ್ಲೂ ಸಾಂದ್ರತೆ ಇರಲಿಲ್ಲ. ದೀಪಕ್‌ ಸುಬ್ರಹ್ಮಣ್ಯ ನಕಲಿ ಭಟ್ಟನಾಗಿ ಚೂರು ನಗಿಸಿದ್ದು ಬಿಟ್ಟರೆ, ಉಳಿದವರ ಮಾತುಗಳಲ್ಲಿ ಪಸೆಯೇ ಇರಲಿಲ್ಲ. ಕನ್ನಡದ ಸರಾಗವಿದ್ದರೂ ಏಕಾಏಕಿ ಸಂಸ್ಕೃತದ ಮಾತುಗಳು ನಡುವೆ ನುಸುಳಿ ಅರ್ಥಗ್ರಹಿಕೆಗೆ ತೊಡಕು ಸೃಷ್ಟಿಸಿದವು. ನಿರ್ದೇಶಕ ಜಂಬೆಯ ಹೆಸರಿನಲ್ಲಿದ್ದ ನಿರೀಕ್ಷೆ ಈ ಪ್ರಯೋಗದಲ್ಲಿ ಹುಸಿಯಾದದ್ದು ಅಚ್ಚರಿಯೂ ಹೌದು, ಸತ್ಯವೂ ಹೌದು.

ಎನ್‌.ಸಿ. ಮಹೇಶ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಓಲ್ಡ್‌ ಈಸ್‌ ಗೋಲ್ಡ್‌ ಅನ್ನೋದು, ಶಿವಾಜಿ ಮಿಲ್ಟ್ರಿ ಹೋಟೆಲ್‌ನ ವಿಷಯದಲ್ಲಿ ನೂರಕ್ಕೆ ನೂರು ಸತ್ಯ. ಶತಮಾನಗಳಷ್ಟು ಹಳೆಯದಾದ ಈ ಹೋಟೆಲ್‌ನ ತಾಜಾ ತಾಜಾ ಖಾದ್ಯಕ್ಕೆ...

  • ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಕುಟೀರ ನಿರ್ಮಾಣವಾಗಿದೆ. ಹಾಗಂತ, ಅಲ್ಯಾರೋ ಋಷಿಮುನಿಗಳು ಧ್ಯಾನಕ್ಕೆ ಕುಳಿತಿದ್ದಾರೆ ಅಂದುಕೊಳ್ಳಬೇಡಿ. ನಾವು ಹೇಳುತ್ತಿರೋದು,...

  • ಚಿತ್ರಕಲೆ ಕೇವಲ ಕಲೆಯಲ್ಲ, ಅದೊಂದು ಧ್ಯಾನ.  ತನ್ಮಯತೆಯಿಂದ ಗಂಟೆಗಟ್ಟಲೆ, ಕೆಲವೊಮ್ಮೆ  ದಿನಗಟ್ಟಲೆ, ವಾರಗಟ್ಟಲೆ ಕುಳಿತು ಚಿತ್ರವೊಂದನ್ನು  ಬಿಡಿಸುವ ತಾಳ್ಮೆ...

  • ಆಹಾ, ಮಳೆ ಬರ್ತಿದೆ! ವರ್ಲ್ಡ್‌ ಕಪ್‌ ಮ್ಯಾಚ್‌ ಬೇರೆ. ಯಾರ್‌ ಅಡುಗೆ ಮಾಡ್ತಾರೆ? ಮನೆಯೂಟ ತಿಂದೂ ತಿಂದು ಬೋರ್‌ ಆಗಿದೆ. ಏನಾದ್ರೂ ಸ್ಪೆಷೆಲ್ಲಾಗಿ ಆರ್ಡರ್‌ ಮಾಡೋಣ...

  •   ನಿಮ್ಗೆ ಹೇಗೇ ಬೇಕೋ ಹಾಗೆ ಪಾನಿಪುರಿ ಕೈಗಿಡೋ ಮಷಿನ್ನಿನ ಕತೆ ಇದು. ಇದನ್ನು ಬೆಂಗಳೂರಿಗೆ ಪರಿಚಯಿಸಿದ್ದು, , ಮಿ. ಪಾನಿಪುರಿ, ಫಾಸ್ಟ್‌ಫ‌ುಡ್‌ ಸೆಂಟರ್‌. ಬೆಂಗಳೂರಿನಲ್ಲಿ...

ಹೊಸ ಸೇರ್ಪಡೆ