ಪೆರುವಿನ ನೆನಪಿನ ದೋಣಿ

Team Udayavani, Oct 5, 2019, 3:08 AM IST

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ “ಮಾತುಕತೆ- 24′ ಕಾರ್ಯಕ್ರಮದಲ್ಲಿ, ಹಿರಿಯ ಲೇಖಕಿ ನೇಮಿಚಂದ್ರ ಅವರ ಭಾಷಣದ ಆಯ್ದಭಾಗವಿದು. “ಪೆರುವಿನ ಪವಿತ್ರ ಕಣಿವೆಯಲ್ಲಿ’ ಓದುಗರನ್ನೂ ಕೊಂಡೊಯ್ಯುವ ಒಂದು ಪುಟ್ಟ ನೆನಪಿನ ದೋಣಿ ಇದು…

ಪ್ರವಾಸಕ್ಕೆ ಹೋದಾಗ, ಮನುಷ್ಯ- ಮನುಷ್ಯರ ಜತೆಗೆ ಸಂಪರ್ಕ ಸಾಧಿಸುವುದು ಇದೆಯಲ್ಲ, ಅದು ಯಾವುದೇ ಗೂಗಲ್‌ ಮ್ಯಾಪ್‌ಗಿಂತಲೂ ಮೌಲ್ಯದಾಯಕ. ಅಲ್ಲಿನ ಜನರನ್ನು, ನೆಲವನ್ನೂ ನೋಡುವ ಒಳಗಣ್ಣು ಇದ್ದುಬಿಟ್ಟರೆ, ಅಲ್ಲಿ ಸಿಗುವ ಅನುಭವಗಳಿಗೆ ಏನೋ ಹೊಳಪು.

ಸುಮಾರು ಇಪ್ಪತ್ತು ವರುಷಗಳ ಹಿಂದಿನ ಕತೆ. ನಾವು ಗೊತ್ತಿಲ್ಲದ, ಗುರಿಯಿಲ್ಲದ ಒಂದು ತಾಣದಲ್ಲಿ ನಿಂತಿದ್ದೆವು. ಅದು ಪೆರು. ಅಮೆಜಾನ್‌ ನದಿಯ ಮೇಲೆ, ಪೆರುವಿನಿಂದ ಬ್ರೆಜಿಲ್‌ಗೆ ಹೋಗುವುದು ನನ್ನ ಕನಸಾಗಿತ್ತು. ಪೆರುವಿನ ಜನರದ್ದು ಸ್ಪ್ಯಾನಿಷ್‌ ಭಾಷೆ. ನಮುª ಇಂಗ್ಲಿಷು. ಅವರಿಗೆ ಇಂಗ್ಲಿಷಿನ ಒಂದು ಪದವೂ ಅರ್ಥ ಆಗ್ತಿರಲಿಲ್ಲ. ಇಂಗ್ಲಿಷ್‌ ಅರ್ಥವಾಗದಿದ್ದ ಮೇಲೆ, ಅದರ ಹಂಗಾದರೂ ಏತಕೆ ಎಂದು ತೀರ್ಮಾನಿಸಿ, ಸ್ವಲ್ಪ ಹೊತ್ತು ಕಳೆದಮೇಲೆ, ನಾವು ಕನ್ನಡದಲ್ಲೇ ಮಾತಾಡೋಕೆ ಶುರುಮಾಡಿದೆವು. ಭಾವನೆಗಳಿಂದಲೇ ಅಲ್ಲಿನ ಜನರನ್ನು ಸಂಪರ್ಕಿಸಲು ಮುಂದಾದೆವು.

ಅಲ್ಲಿ ಯಾರೋ ಹೇಳಿದರು: “ಒಂದು ಕ್ರೂಸ್‌ ಇದೆ. 2 ಸಾವಿರ ಕೊಟ್ರೆ, ಕರಕೊಂಡ್‌ ಹೋಗ್ತಾರೆ’. ಆ ಹೊತ್ತಿನಲ್ಲಿ ನಮಗೆ ಹಣದ್ದೂ ಚಿಂತೆ ಆಗಿತ್ತು. ಸುಮಾರು 7-8 ವರುಷದ ದುಡಿಮೆಯ ಹಣವನ್ನು ಕೂಡಿಸಿ, ನಾವು ಪೆರುವಿನತ್ತ ಪಯಣಿಸಿದ್ದೆವು. ಕ್ರೂಸ್‌ನ ಅನುಭವಕ್ಕಿಂತ ಹೆಚ್ಚಾಗಿ ಬೇಕಿದ್ದಿದ್ದು, ಅಮೆಜಾನ್‌ ನದಿಯ ಜನಜೀವನದ ಕತೆ. ನಸುಕಿನಲ್ಲಿ, 60- 70 ಡಾಲರ್‌ಗಳಿಗೆ ಕರೆದೊಯ್ಯುವ, ಯಾವುದೋ ಒಂದು ಸ್ಪೀಡ್‌ ಬೋಟ್‌ ಇರೋದು ಗೊತ್ತಾಯಿತು. ಗೆಳತಿ ಮಾಲತಿ ಅವರು ನನ್ನೊಂದಿಗೆ ಎಲ್ಲಿಗೆ ಬರಲೂ ಸೈ ಅಂತ ಇರೋವಾಗ, ಅದಕ್ಕೂ ಅಣಿಯಾಗಿಬಿಟ್ಟೆ.

ಅಲ್ಲಿ ನಾವು ಹಾವಭಾವದಿಂದಲೇ ನಮಗೆ ಇಂಥದ್ದೊಂದು ಬೋಟ್‌ ಹಿಡ್ಕೊಬೇಕು ಅಂತ ಅಭಿನಯಿಸಿ ಕೇಳಿದ್ದಾಗಿತ್ತು. ಇಳಿರಾತ್ರಿಯ ಕತ್ತಲನ್ನು ಸೀಳುತ್ತಾ, ಬೋಟ್‌ನವ ಬರುವವನಿದ್ದ. ನಮ್ಮನ್ನು ಅಮೆಜಾನ್‌ ಮೇಲೆ ಕರೆದೊಯ್ಯುವನಿದ್ದ. ಮರುದಿನ. ಮುಂಜಾವಿನ ನಾಲ್ಕೋ, ಐದೋ ಗಂಟೆಯ ಕತ್ತಲಿನಲ್ಲಿ, ಅಮೆಜಾನ್‌ ತೀರದ ಆ ಬೋಟ್‌ ಸ್ಟೇಷನ್ನಿಗೆ ಹೋದರೆ, ಅಲ್ಲಿ ಕತ್ತಲೋ ಕತ್ತಲು. ಒಂದು ಮಂಕುದೀಪ. ಅದರ ಕೆಳಗೆ ಒಂದಿಷ್ಟು ಜನ ಚಳಿಯಲ್ಲಿ, ಮುದುಡಿ ಕೂತಿದ್ದಾರೆ. ಅಲ್ಲಿದ್ದವರಲ್ಲಿ ಬಹುತೇಕರು ಬಡಜನ.

ತಕ್ಷಣ ಮಾಲತಿ - “ಇಂಟರ್‌ನ್ಯಾಷನಲ್‌ ಬೋಟ್‌ ಸ್ಟೇಷನ್‌ ಇದಾಗಿರೋಲ್ಲ. ಆತ ಎಲ್ಲಿಗೋ ಕರಕೊಂಡು ಹೋಗ್ತಾನೆ’ ಅಂತ ಹೇಳಿದ್ರು. ಆಗ ನಾನು, “ಇಲ್ಲ ಮಾಲತಿ, ಸ್ವಲ್ಪ ಸಮಾಧಾನ ಮಾಡ್ಕೊಳ್ಳಿ. ಈ ಬಡ ದೇಶದಲ್ಲಿ, ಇದಕ್ಕಿಂತ ಜಾಸ್ತಿ ಇಲ್ಲದೇ ಇರಬಹುದು’ ಅಂದೆ. ಇಷ್ಟು ಆತಂಕದಿಂದ, ಇಷ್ಟು ಗಾಬರಿಯಲ್ಲಿ ನಾವು ಕಾಯ್ತಾ ಇರಬೇಕಾದರೆ, ಕೊನೆಗೆ ಕತ್ತಲಲ್ಲಿ ಒಂದು ಬೋಟ್‌ ಬಂತು. ನಾವೆಲ್ಲ ಹತ್ತಿ ಕುಳಿತೆವು. ನಾನು, ಮಾಲತಿ, ಇನ್ನೊಬ್ಬ ಯಾರೋ ಜಪಾನಿಗನೊಬ್ಬ ಬಂದಿದ್ದ. ನಾವು ಮೂವರು ಬಿಟ್ಟರೆ, ಉಳಿದವರೆಲ್ಲ ನದಿಯ ತಟದ ಜನರು.

ದೋಣಿಯೊಳಗೆ ಹತ್ತಿ ಕುಳಿತಾಗ, ಕೆಳಗೆ ಅಮೆಜಾನ್‌ ನದಿಯ ನೀರೂ ಕಂಡಿರಲಿಲ್ಲ. ಅಷ್ಟು ಕತ್ತಲೆ. ಬೋಟ್‌ ಹೊರಟಿತು. ಸ್ವಲ್ಪವೇ ಹೊತ್ತಿಗೆ ಪೂರ್ವ ದಿಗಂತದಲ್ಲಿ ಸೂರ್ಯೋದಯ. ಇನ್ನೊಂದು ತೀರ ಕಾಣಿಸದಷ್ಟು ವಿಶಾಲವಾಗಿರೋ ನದಿ. ಲಕಲಕ ಅಂತ ಆ ಸೂರ್ಯನ ಕಿರಣಗಳು, ನೀರಿನ ಮೇಲೆ ಬಿದ್ದು, ಇಡೀ ನದಿ ಹೊಂಬಣ್ಣದೊಂದಿಗೆ ಕಂಗೊಳಿಸಿತ್ತು. “ಬಂಗಾರ ನೀರ ಕಡಲಾಚೆ ಗೀಚೆಗಿದೆ ನೀಲ ನೀಲ ತೀರ’ ಎನ್ನುವ ಬೇಂದ್ರೆಯ ಹಾಡು, ನೆನಪಾಗಿ, ಮೈಮನ ಪುಳಕಗೊಂಡಿತು.

* ನೇಮಿಚಂದ್ರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಜಧಾನಿಯಲ್ಲಿ ನೆಲೆನಿಂತ ಕರಾವಳಿಗರು ಇಡೀ ದಿನ ದುಡಿದು ದಣಿದರೂ, "ಆಟ ಉಂಟು ಮಾರ್ರೆ' ಅಂದಾಗ, ಕೊಂಚ ರಿಲ್ಯಾಕ್ಸ್‌ ಆಗುತ್ತಾರೆ. ರಾತ್ರಿ ಸಂಪೂರ್ಣವಾಗಿ ನಿದ್ದೆ...

  • ಕಣ್ಣಗಲಿಸಿಕೊಂಡು ಅಡುಗೆ ಮಾಡುವವರಿಗೇ, ಒಮ್ಮೊಮ್ಮೆ ಪಾಕಪ್ರಯೋಗಗಳು ಕೈಕೊಡುತ್ತವೆ ಅಥವಾ ರುಚಿಸುವುದೇ ಇಲ್ಲ. ಇನ್ನು ಈ ಹುಡುಗ ಏನು ಮಾಡಿಯಾನು? ಎಂದು ಅಚ್ಚರಿಪಟ್ಟೆ....

  • ನಿತ್ಯವೂ ಮನೆಯಲ್ಲಿ ಸಿಲೋನ್‌ ರೇಡಿಯೊ ಹಾಡುತ್ತಿತ್ತು. ಎಪ್ಪತ್ತರ ದಶಕದ ಆ ಕಾಲಕ್ಕೆ ಅದೇ ನಮ್ಮ ಕಣ್ಣಮುಂದಿನ ಗಾಯಕ. ಕೇಳಲು ಇಂಪಾದ ಚಿತ್ರಗೀತೆಗಳನ್ನು ಹೊತ್ತು...

  • ರಂಗ ನಿರಂತರ ಸಾಂಸ್ಕೃತಿಕ ಸಂಘದ ವತಿಯಿಂದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಹಮ್ಮಿಕೊಳ್ಳಲಾಗಿದೆ. ಭಾನುವಾರದಿಂದ, ಐದು ದಿನಗಳ ಕಾಲ ರಂಗೋತ್ಸವ ನಡೆಯಲಿದ್ದು, ಬಹುಭಾಷಾ...

  • ಕಲಾವಿದೆ ರಕ್ಷಾ ಶ್ರೀರಾಮ್‌ ಅವರ ಪರಿಕಲ್ಪನೆಯಲ್ಲಿ "ದಿ ಚಕ್ರಾಸ್‌'- ಪ್ರಜ್ಞೆಯೆಡೆಗಿನ ಯಾತ್ರೆ ಎಂಬ ಕಂಟೆಂಪರರಿ ಡ್ಯಾನ್ಸ್‌ ಮತ್ತು ಫ್ಯೂಷನ್‌ ಮ್ಯೂಸಿಕ್‌...

ಹೊಸ ಸೇರ್ಪಡೆ