ಅಮೃತ ಘಳಿಗೆ

ಕಂದನ ಹಸಿವು ನೀಗಿಸುವತ್ತ ವಾಣಿ ವಿಲಾಸ

Team Udayavani, Aug 2, 2019, 5:07 AM IST

ವಿಶ್ವ ಸ್ತನ್ಯಪಾನ ಸಪ್ತಾಹ ಆಗಸ್ಟ್‌ ಮೊದಲ ವಾರ

ಆಗಸ್ಟ್‌ ಮೊದಲ ವಾರವನ್ನು, ವಿಶ್ವ ಸ್ತನ್ಯಪಾನ ಸಪ್ತಾಹವೆಂದು ಆಚರಿಸಲಾಗುತ್ತದೆ. ತಾಯಿಯ ಹಾಲು ಅಮೃತಕ್ಕೆ ಸಮಾನ. ಯಾಕಂದ್ರೆ, ನವಜಾತ ಶಿಶುವಿಗೆ ಬೇಕಾದ ಅಗತ್ಯ ಪೋಷಕಾಂಶಗಳನ್ನೆಲ್ಲ ದೇವರು ಎದೆಹಾಲಿನಲ್ಲೇ ಇಟ್ಟಿದ್ದಾನೆ. ಆದರೆ, ಹೆರಿಗೆಯ ಸಂದರ್ಭದಲ್ಲಿ ತಾಯಿ ತೀರಿ ಹೋದರೆ, ಮಗುವಿಗೆ ಬೇಕಾದಷ್ಟು ಹಾಲನ್ನು ತಾಯಿ ಉತ್ಪಾದಿಸದಿದ್ದರೆ, ಹಾಲುಣಿಸಲು ತಾಯಿ ಅಶಕ್ತಳಾಗಿದ್ದರೆ, ಆ ಮಗು ತಾಯಿ ಹಾಲಿನಿಂದ ವಂಚಿತವಾಗುತ್ತೆ. ಪರ್ಯಾಯವಾಗಿ ಬೇರೆ ಆಹಾರ ಸೇವಿಸಬೇಕಾಗುತ್ತದೆ. ಆಗ, ಆ ಮಕ್ಕಳ ದೈಹಿಕ- ಮಾನಸಿಕ ಬೆಳವಣಿಗೆ ಕುಂಠಿತವಾಗಬಹುದು. ರೋಗ ನಿರೋಧಕ ಶಕ್ತಿ ಕಡಿಮೆಯಾಗಿ, ಸಾವನ್ನಪ್ಪಲೂಬಹುದು. ಇನ್ನೊಂದೆಡೆ, ಮಗುವಿನ ಅಗತ್ಯಕ್ಕಿಂತ ಹೆಚ್ಚು ಹಾಲು ಉತ್ಪಾದಿಸುವ ತಾಯಂದಿರು ಅದನ್ನು ಹಿಂಡಿ, ಚೆಲ್ಲುವುದೂ ಉಂಟು. ಹಾಗಾಗದಂತೆ ತಡೆದು, ಹೆಚ್ಚಾದ ಎದೆಹಾಲನ್ನು ಸಮರ್ಪಕವಾಗಿ ಸಂಗ್ರಹಿಸಿ, ಅಗತ್ಯವುಳ್ಳ ಮಕ್ಕಳಿಗೆ ನೀಡುವ ಪ್ರಯತ್ನವೇ ಎದೆಹಾಲು ಬ್ಯಾಂಕ್‌.

ನಗರದ ವಾಣಿ ವಿಲಾಸ ಆಸ್ಪತ್ರೆಯಲ್ಲಿ, ಕೆಲವೇ ತಿಂಗಳಲ್ಲಿ ಎದೆಹಾಲು ಬ್ಯಾಂಕ್‌ ಪ್ರಾರಂಭಗೊಳ್ಳಲಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಕರ್ನಾಟಕ ಆ್ಯಂಟಿಬಯೋಟಿಕ್ಸ್‌ ಆ್ಯಂಡ್‌ ಫಾರ್ಮಾಸ್ಯೂಟಿಕಲ್ಸ್‌ ಲಿಮಿಟೆಡ್‌ನ‌ ಸಹಯೋಗದಿಂದ, ಎದೆಹಾಲು ಸಂಗ್ರಹಕ್ಕೆ ಬೇಕಾದ ಫ್ರೀಜರ್‌, ರೆಫ್ರಿಜರೇಟರ್‌, ಬ್ರೆಸ್ಟ್‌ ಪಂಪ್ಸ್‌, ಸ್ಕ್ರೀನಿಂಗ್‌ ಯಂತ್ರ, ಕಂಪ್ಯೂಟರ್‌ ಹಾಗೂ ಇತರೆ ಯಂತ್ರಗಳು ಈಗಾಗಲೇ ಆಸ್ಪತ್ರೆಗೆ ಬಂದಿವೆ. ಬ್ಯಾಂಕ್‌ ಕಾರ್ಯಾರಂಭಕ್ಕೆ, ಹಾಲಿನ ಗುಣಮಟ್ಟ ಮತ್ತು ಅದರ ಪೋಷಕಾಂಶಗಳನ್ನು ಅಳೆಯುವ ಮಿಲ್ಕ್ ಅನಲೈಸರ್‌ ಬಂದ ನಂತರ, ಈ ಘಟಕ ಪ್ರಾರಂಭಗೊಳ್ಳಲಿದೆ.

ಹಾಲು ಸಂಗ್ರಹ ಹೇಗೆ?
ಆಸ್ಪತ್ರೆಯಲ್ಲಿ ಹೆರಿಗೆ ಆಗುವ ತಾಯಿಯ ಆರೋಗ್ಯ ತಪಾಸಣೆ ಮಾಡಿ, ಎದೆಹಾಲಿನಲ್ಲಿ ಯಾವುದೇ ರೀತಿಯ ರೋಗಾಣು ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಆಕೆ ತನ್ನ ಮಗುವಿನ ಹಾಲಿನ ಅಗತ್ಯವನ್ನು ಸರಿಯಾಗಿ ಪೂರೈಸಿದ ನಂತರವಷ್ಟೇ, ಹೆಚ್ಚುವರಿ ಅನ್ನಿಸುವ ಎದೆ ಹಾಲನ್ನು ಸಂಗ್ರಹಿಸಲಾಗುವುದು. ಇನ್ನು ಹೊರಗಿನಿಂದ ಹಾಲು ನೀಡಲು ತಾಯಂದಿರು (ದಾನಿಗಳು) ಬಂದಲ್ಲಿ, ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ನಂತರ ಅವರಿಂದ ಹಾಲು ಸಂಗ್ರಹಿಸಲಾಗುವುದು. ಸುಮಾರು 130 ಬಾಟಲಿ ಹಾಲನ್ನು ಸಂಗ್ರಹಿಸುವ ಅಂದಾಜಿದೆ. ಹೀಗೆ ಸಂಗ್ರಹಿಸಿದ ಹಾಲನ್ನು ಕನಿಷ್ಠ 2 ತಿಂಗಳ ಕಾಲ ಇಡಬಹುದು.

ಫ‌ಲಾನುಭವಿಗಳ್ಯಾರು?
ಅವಧಿ ಪೂರ್ವ ಜನಿಸುವ, ಕಡಿಮೆ ತೂಕದ ಶಿಶುಗಳಿಗೆ ಹಾಗೂ ಕಡಿಮೆ ಹಾಲುಣಿಸುವ ತಾಯಂದಿರ ಶಿಶುಗಳಿಗೆ, ಹೆಚ್ಚುವರಿ ಎದೆಹಾಲಿನ ಅಗತ್ಯವಿರುತ್ತದೆ. ಬೇರೆ ಜಿಲ್ಲೆಗಳಲ್ಲಿ ಹುಟ್ಟಿದ ಮಕ್ಕಳು ಕೆಲವೊಮ್ಮೆ ಚಿಕಿತ್ಸೆಗೆಂದು ವಾಣಿ ವಿಲಾಸಕ್ಕೆ ಬರುತ್ತವೆ. ಆದರೆ, ತಾಯಿ ಊರಿನಲ್ಲಿಯೇ ಇರುತ್ತಾಳೆ. ಅಂಥ ಮಕ್ಕಳ ಅಗತ್ಯಕ್ಕೆ ಬ್ಯಾಂಕ್‌ನಲ್ಲಿ ಸಂಗ್ರಹವಾದ ಹಾಲನ್ನು ನೀಡಲಾಗುವುದು. ಕೆಲವೊಮ್ಮೆ, ಅವಧಿ ಪೂರ್ವ ಜನನವಾದ ಮಕ್ಕಳ ಜೀರ್ಣಶಕ್ತಿ ಕಡಿಮೆಯಿರುತ್ತದೆ. ಅಂಥ ಮಕ್ಕಳಿಗೆ, ಅವಧಿಗೂ ಮುಂಚೆ ಹೆರಿಗೆಯಾದ ತಾಯಿಯ ಹಾಲನ್ನೇ ಕೊಡಬೇಕಾಗುತ್ತದೆ. ಹಾಲಿನ ಬ್ಯಾಂಕ್‌ನಲ್ಲಿ ಸಂಗ್ರಹವಿದ್ದರೆ, ಇಂಥ ಸಂದರ್ಭಗಳನ್ನು ಸುಲಭವಾಗಿ ಎದುರಿಸಬಹುದು.

ಸ್ತನ್ಯಪಾನ ಸಪ್ತಾಹ
ಹುಟ್ಟಿದ ಒಂದು ಗಂಟೆಯೊಳಗೆ ಮಗುವಿಗೆ ಎದೆ ಹಾಲು ಕುಡಿಸಬೇಕು ಹಾಗೂ ಆರು ತಿಂಗಳವರೆಗೆ ಕೇವಲ ತಾಯಿ ಹಾಲನ್ನು ಮಾತ್ರ ಕುಡಿಸಬೇಕು. ಈ ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ, ಕರ್ನಾಟಕದಲ್ಲಿ ಶೇ.56ರಷ್ಟು ಮಕ್ಕಳಿಗೆ ಮಾತ್ರ ಹುಟ್ಟಿದ ಒಂದು ಗಂಟೆಯೊಳಗೆ ಹಾಲು ಉಣಿಸಲಾಗುತ್ತದೆ ಹಾಗೂ ಶೇ. 54ರಷ್ಟು ಮಕ್ಕಳಿಗೆ ಮಾತ್ರ ಪೂರ್ತಿ 6 ತಿಂಗಳು ಎದೆಹಾಲನ್ನು ಕುಡಿಸಲಾಗುತ್ತದೆ. ಈ ಅಂಕಿ-ಅಂಶಗಳನ್ನು ಗಮನಿಸಿ, ಜನರಲ್ಲಿ ಅರಿವು ಮೂಡಿಸಲು ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತಿದೆ.

ಉದ್ಯೋಗಸ್ಥ ತಾಯಂದಿರೇ…
ಬೆಂಗಳೂರಂಥ ಮಹಾನಗರದ, ವಿದ್ಯಾವಂತ ತಾಯಂದಿರೂ ಆರು ತಿಂಗಳೊಳಗೆ ಮಕ್ಕಳಿಗೆ ಬಾಟಲಿ ಹಾಲುಣಿಸುತ್ತಾರೆ. ಕೆಲಸಕ್ಕೆ ಮರಳಬೇಕಾದ ಅನಿವಾರ್ಯತೆ ಇದಕ್ಕೆ ಕಾರಣವಿರಬಹುದು. ಆದರೆ, ಈಗ ಬಹುತೇಕ ಎಲ್ಲ ಕಚೇರಿಯಲ್ಲೂ, ತಾಯಂದಿರಿಗೆ ಕನಿಷ್ಠ 6 ತಿಂಗಳು ರಜೆ ಸಿಗುತ್ತದೆ. ಅದನ್ನು ಸದುಪಯೋಗಪಡಿಸಿಕೊಳ್ಳಿ ಅಥವಾ ಕನಿಷ್ಠ ಪಕ್ಷ, ಎದೆಹಾಲನ್ನು ಹಿಂಡಿ, ಬಾಟಲಿಗೆ ಹಾಕಿ ಮಗುವಿಗೆ ಕೊಡಿ.

ಸ್ತನಪಾನದ ಲಾಭಗಳು
ಅತಿಸಾರ, ಭೇದಿ, ನ್ಯೂಮೋನಿಯಾದಿಂದ ಮಕ್ಕಳು ಸಾಯುವುದನ್ನು ತಡೆಯಬಹುದು.
ಮಗುವಿನ ಮಾನಸಿಕ ಆರೋಗ್ಯ ಮತ್ತು ಬುದ್ಧಿಮತ್ತೆ (ಐಕ್ಯೂ) ಹೆಚ್ಚಲು ಎದೆಹಾಲು ಸಹಕಾರಿ.
ತಾಯಿ-ಮಗುವಿನ ಸಂಬಂಧ ಗಟ್ಟಿಯಾಗುತ್ತದೆ.
ಮೊದಲ ಮೂರು ದಿನದ ಗಿಣ್ಣದ ಹಾಲಿನಲ್ಲಿ ರೋಗ ಪ್ರತಿರೋಧಕ ಶಕ್ತಿ ಅಧಿಕವಾಗಿರುತ್ತದೆ.
ಮಗುವಿನ ದವಡೆ, ಕೆನ್ನೆ ಹಾಗೂ ಹಲ್ಲುಗಳ ಬೆಳವಣಿಗೆಗೆ ಎದೆಹಾಲು ಹೀರುವಿಕೆ ಪೂರಕ.
ಎದೆಹಾಲು ಕುಡಿದ ಮಕ್ಕಳಲ್ಲಿ ಮಾನಸಿಕ ಸಾಮರ್ಥ್ಯ, ಆತ್ಮವಿಶ್ವಾಸ ಹೆಚ್ಚಿರುತ್ತದೆ.
ತಾಯಂದಿರಲ್ಲಿ ಸ್ತನ ಕ್ಯಾನ್ಸರ್‌, ಅಂಡಾಶಯ ಕ್ಯಾನ್ಸರ್‌, ಮೂಳೆ ಸವೆತವನ್ನು ತಡೆಯಬಹುದು.
ಎದೆ ಹಾಲು ಉಣಿಸುವುದರಿಂದ, ಗರ್ಭಾವಸ್ಥೆಯಲ್ಲಿ ಗಳಿಸಿದ ತೂಕವನ್ನು ತಾಯಿ ಕಳೆದುಕೊಳ್ಳಬಹುದು.

ನೆನಪಿಡಿ…
ಮಗುವಿನ ಅಗತ್ಯಕ್ಕಿಂತ ಹೆಚ್ಚು ಹಾಲನ್ನು ತಾಯಿ ಸ್ರವಿಸಬಲ್ಲಳು.
ಮೊದಲು ಸ್ರವಿಸುವ ಹಳದಿ ಬಣ್ಣದ ಹಾಲನ್ನು ಚೆಲ್ಲದೆ, ಮಗುವಿಗೆ ಕುಡಿಸಬೇಕು.
6 ತಿಂಗಳವರೆಗೆ ನೀರು, ಜೇನುತುಪ್ಪ, ಸಕ್ಕರೆ ನೀರು, ದ್ರಾಕ್ಷಿ ರಸ ಸೇರಿದಂತೆ ಏನನ್ನೂ ಕುಡಿಸಬಾರದು.
1-2 ಗಂಟೆಗಳಿಗೊಮ್ಮೆ, ಹಸಿವಿನಿಂದ ಅತ್ತಾಗ ಹಾಗೂ ರಾತ್ರಿ ನಿದ್ದೆಯಿಂದ ಏಳಿಸಿ ಹಾಲುಣಿಸಬೇಕು.

ಮಗುವಿಗೆ ಎದೆಹಾಲು ಸಾಕಾದರೆ…
ಒಂದೆರಡು ಗಂಟೆ ನಿದ್ದೆ ಮಾಡುತ್ತದೆ.
8-10 ಬಾರಿ ಮೂತ್ರ ಮಾಡುತ್ತದೆ.
1-6 ಬಾರಿ ಮಲ ವಿಸರ್ಜನೆ.ತೂಕ ಕ್ರಮೇಣ ಹೆಚ್ಚುತ್ತದೆ.

1911 ವಿಶ್ವದ ಮೊದಲ ಎದೆಹಾಲು ಬ್ಯಾಂಕ್‌
ಎಲ್ಲಿ?: ವಿಯೆನ್ನಾ
1989 ಏಷ್ಯಾದ ಮೊದಲ
ಮಿಲ್ಕ್ ಬ್ಯಾಂಕ್‌
ಎಲ್ಲಿ?: ಮುಂಬೈ
2017 ಕರ್ನಾಟಕದ ಮೊದಲ ಮಿಲ್ಕ್ ಬ್ಯಾಂಕ್‌
ಎಲ್ಲಿ?: ಫೋರ್ಟಿಸ್‌ ಲಾ ಫೆಮಾ ಆಸ್ಪತ್ರೆ, ಬೆಂ.
2019 ಕರ್ನಾಟಕದ ಮೊದಲ ಸರ್ಕಾರಿ ಆಸ್ಪತ್ರೆಯ ಮಿಲ್ಕ್ ಬ್ಯಾಂಕ್‌
ಎಲ್ಲಿ?: ವಾಣಿ ವಿಲಾಸ ಆಸ್ಪತ್ರೆ, ಬೆಂಗಳೂರು

ಬ್ಯಾಂಕ್‌ನ ಪರಿಕಲ್ಪನೆಯೇ, ಅಮೂಲ್ಯವಾದುದನ್ನು ಸಂಗ್ರಹಿಸುವ ಉದ್ದೇಶ. ಇನ್ನು, ಎದೆಹಾಲಿನಂಥ ಅಮೂಲ್ಯ ಪದಾರ್ಥವನ್ನು ರಕ್ಷಿಸಲು ಬ್ಯಾಂಕ್‌ ಇಲ್ಲದಿದ್ದರೆ ಹೇಗೆ? ವಾಣಿ ವಿಲಾಸ ಆಸ್ಪತ್ರೆಯಲ್ಲಿ ಅಂಥ ಅಪರೂಪದ ಎದೆ ಹಾಲು ಬ್ಯಾಂಕ್‌ ಸಜ್ಜುಗೊಳ್ಳುತ್ತಿದೆ. ಇದು, ದಕ್ಷಿಣ ಭಾರತದಲ್ಲೇ ಮೊದಲ ಸರ್ಕಾರಿ ಎದೆಹಾಲು ಬ್ಯಾಂಕ್‌ ಎಂಬ ಅಗ್ಗಳಿಕೆಗೆ ಪಾತ್ರ­ವಾಗಲಿದೆ. ವಿಶ್ವ ಸ್ತನ್ಯಪಾನ ಸಪ್ತಾಹದ ನಿಮಿತ್ತ, ಎದೆಹಾಲು ಬ್ಯಾಂಕ್‌ನ ಕಾರ್ಯಾಚರಣೆ ಹಾಗೂ ಎದೆ ಹಾಲುಣಿಸುವ ಮಹತ್ವದ ಬಗ್ಗೆ ವಾಣಿ ವಿಲಾಸ ಆಸ್ಪತ್ರೆಯ ವೈದ್ಯ ಅಧೀಕ್ಷಕಿ ಡಾ. ಗೀತಾ ಶಿವಮೂರ್ತಿ ಹಾಗೂ ಶಿಶುವೈದ್ಯ ವಿಭಾಗದ ಮುಖ್ಯಸ್ಥೆ ಡಾ. ಸರಳಾ ಸಭಾಪತಿ, ಮಾಹಿತಿ ನೀಡಿದ್ದಾರೆ…

ಪ್ರಿಯಾಂಕ ಎನ್‌.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಗರುಡಾ ಮಾಲ್‌ನಲ್ಲಿ ಮೂರು ದಿನಗಳ, ಗೊಂಬೆ ಹಬ್ಬ ಹಾಗೂ ಬೃಹತ್‌ ಪುಸ್ತಕ ಮೇಳ ಹಮ್ಮಿಕೊಳ್ಳಲಾಗಿದೆ. ದಿನದಿಂದ ದಿನಕ್ಕೆ ನಶಿಸುತ್ತಿರುವ ಅಪರೂಪದ ಕಲಾ ಪ್ರಾಕಾರವಾದ...

  • ಬೆಂಗಳೂರು, ವಲಸಿಗರ ಕರ್ಮಭೂಮಿ. ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದವರಿಗೆ ಪ್ರತಿಕ್ಷಣವೂ ಕಾಡುವುದು ಜನ್ಮಭೂಮಿಯ ನೆನಪುಗಳು. ಇಲ್ಲಿ ನೆಲೆನಿಂತು ವರುಷಗಳುರುಳಿದರೂ,...

  • ಜಗತ್ತಿನ ಯಾವ ಭಾಗ ದಿಂದಲೇ ಬಂದಿರಲಿ, ಬೆಂಗಳೂರಿನಲ್ಲಿ ಅವರಿಗೆ ಊಟಕ್ಕೇನೂ ತೊಂದರೆ ಆಗುವುದಿಲ್ಲ. ಮುದ್ದೆಯೂಟ, ಗಂಜಿ ಊಟ, ಉತ್ತರ ಭಾರತೀಯ, ದಕ್ಷಿಣ ಭಾರತೀಯ, ಚೈನೀಸ್‌,...

  • ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶಾಪಿಂಗ್‌ ಮಾಡುವ ಯೋಚನೆಯಲ್ಲಿದ್ದೀರಾ? ಹಾಗಾದ್ರೆ, ನಿಮಗಿದೋ ಸಿಹಿ ಸುದ್ದಿ. ಸಂಪೂರ್ಣ ಸಂಘದ ವತಿಯಿಂದ, "ವಸ್ತ್ರಭೂಷಣ' ಕರಕುಶಲ...

  • ಓಲ್ಡ್‌ ಈಸ್‌ ಗೋಲ್ಡ್‌ ಅನ್ನೋದು, ಶಿವಾಜಿ ಮಿಲ್ಟ್ರಿ ಹೋಟೆಲ್‌ನ ವಿಷಯದಲ್ಲಿ ನೂರಕ್ಕೆ ನೂರು ಸತ್ಯ. ಶತಮಾನಗಳಷ್ಟು ಹಳೆಯದಾದ ಈ ಹೋಟೆಲ್‌ನ ತಾಜಾ ತಾಜಾ ಖಾದ್ಯಕ್ಕೆ...

ಹೊಸ ಸೇರ್ಪಡೆ