ಅಗ್ಗದ ದರಕ್ಕೆ ಅಂದದ ಮೊಬೈಲ್‌

ಸ್ಮಾರ್ಟ್‌ ಅಂಡ್‌ ಸ್ವೀಟ್‌

Team Udayavani, Apr 15, 2019, 10:57 AM IST

ಈಗ ಎಲ್ಲರ ಬಳಿ ಸ್ಮಾರ್ಟ್‌ಫೋನ್‌ ಇದೆ ಎಂಬ ಮಾತನ್ನು ಆಗಾಗ ಹೇ(ಕೇ)ಳುತ್ತಿರುತ್ತೇವೆ. ಆದರೆ ವಾಸ್ತವಾಂಶ ಏನು ಗೊತ್ತಾ?! ಭಾರತದ 130 ಕೋಟಿ ಜನಸಂಖ್ಯೆಯಲ್ಲಿ 97 ಕೋಟಿಗೂ ಹೆಚ್ಚು ಮಂದಿ ಸ್ಮಾರ್ಟ್‌ಫೋನ್‌ ಅನ್ನು ಇನ್ನೂ ಬಳಸಿಲ್ಲ! ಈ ಅಂಶ ಕಂಡುಕೊಂಡ ಭಾರತದ ನಂ.1 ಸ್ಮಾರ್ಟ್‌ಫೋನ್‌ ಕಂಪೆನಿ ಶಿಯೋಮಿ ಫೀಚರ್‌ ಫೋನ್‌ (ಕೀಪ್ಯಾಡ್‌ ಫೋನ್‌) ಬಳಕೆದಾರರನ್ನು ಸ್ಮಾರ್ಟ್‌ ಫೋನ್‌ ಬಳಕೆಗೆ ಪ್ರೇರೇಪಿಸುವ ಸಲುವಾಗಿ ರೆಡ್‌ಮಿ ಗೊ ಎಂಬ ನಾಲ್ಕು ಸಾವಿರದ ಐದು ನೂರು ರೂಪಾಯಿಯ ಅಗ್ಗದ ಸ್ಮಾರ್ಟ್‌ ಫೋನ್‌ ಬಿಡುಗಡೆ ಮಾಡಿರುವುದು ನಿಮಗೆ ತಿಳಿದಿದೆ. ಇಂಥ ಅಗ್ಗದ ಫೋನ್‌ ಬಳಕೆಯಲ್ಲಿ ಹೇಗಿದೆ? ಅದು ಹೇಗೆ ಕೆಲಸ ಮಾಡುತ್ತದೆ? ಎಂಬುದನ್ನು ಈಗ ನೋಡೋಣ.

ವಿನ್ಯಾಸ: 4500 ರೂ.ನ ಈ ಮೊಬೈಲ್‌ನ ತಯಾರಿಕಾ ಗುಣಮಟ್ಟ, ವಿನ್ಯಾಸ ಸಾಧಾರಣವಾಗಿರಬಹುದು ಎಂದು ಭಾವಿಸಿದ್ದೆ. ಆದರೆ ಬಾಕ್ಸ್‌ ತೆರೆದಂತೆ ಊಹೆ ಸುಳ್ಳಾಯಿತು. ಪ್ಲಾಸ್ಟಿಕ್‌ ದೇಹ ಹೊಂದಿದ್ದರೂ ಗುಣಮಟ್ಟ ಉತ್ತಮವಾಗಿದೆ. ವಿಮರ್ಶೆಗೆಂದು ಕಳುಹಿಸಲಾಗಿದ್ದ ಮೊಬೈಲ್‌ ನೀಲಿ ಬಣ್ಣದ್ದು. ಮುಂಭಾಗ ಕಪ್ಪು ಬಣ್ಣದಲ್ಲಿದೆ. ಮಾಮೂಲಿ ಹಳೆಯ ಮಾದರಿಗಳಂತೆ ಇದಕ್ಕೆ ಪರದೆಯ ಮೇಲೆ ಕೆಳಗೆ ದೊಡ್ಡ ಅಂಚಿನ ಬೆಜೆಲ್ಸ್‌ ಇವೆ. ಮೇಲಿನ ಬೆಜೆಲ್ಸ್‌ನೊಳಗೆ ಮಾತನ್ನು ಕೇಳಿಸುವ ಸ್ಪೀಕರ್‌ ಮತ್ತು ಸೆಲ್ಫಿ ಕ್ಯಾಮರಾ ಇದೆ. ಈ ದರಕ್ಕೆ ವಾಟರ್‌ಡ್ರಾಪ್‌ ನಾಚ್‌ ಡಿಸ್‌ಪ್ಲೇ ಕೇಳುವುದು ಉಚಿತವಲ್ಲ! ಮೊಬೈಲ್‌ನ ಬಲಭಾಗದಲ್ಲಿ (ನಮ್ಮ ಎಡಕ್ಕೆ) ಪಿನ್‌ ಚುಚ್ಚಿದಾಗ ತೆಗೆಯಬಹುದಾದ ಎರಡು ಸಿಮ್‌ ಟ್ರೇ ಇವೆ. ಒಂದು ಟ್ರೇನಲ್ಲಿ ಒಂದು ನ್ಯಾನೋ ಸಿಮ್‌, ಇನ್ನೊಂದು ಟ್ರೇಯಲ್ಲಿ ಒಂದು ನ್ಯಾನೋ ಸಿಮ್‌ ಹಾಕಿ ಒಂದು ಮೆಮೊರಿ ಕಾರ್ಡ್‌ ಹಾಕಬಹುದು. ಮೊಬೈಲ್‌ನ ಮೇಲ್ಭಾಗದಲ್ಲಿ 3.5 ಎಂ.ಎಂ. ಆಡಿಯೋ ಜಾಕ್‌ ಇದೆ. ಮೊಬೈಲ್‌ನ ತಳಭಾಗದಲ್ಲಿ ಮೈಕ್ರೋ ಯುಎಸ್‌ಬಿ ಕಿಂಡಿ, ಅದರ ಪಕ್ಕ ಆಡಿಯೋ ಸ್ಪೀಕರ್‌ ಮತ್ತು ಮಾತನಾಡುವ ಮೈಕ್‌ನ ಸಣ್ಣ ಕಿಂಡಿ ಇದೆ. ಹಿಂಬದಿ ಎಡಭಾಗದ ಮೂಲೆಯಲ್ಲಿ ಒಂದು ಕ್ಯಾಮರಾ ಮತ್ತು ಫ್ಲಾಶ್‌ ಇದೆ.

ಮೊಬೈಲ್‌ನ ಪರದೆಯಿಂದ ಕೆಳಗೆ ನ್ಯಾವಿಗೇಶನ್‌ (ಹಿಂದೆ, ಮುಂದೆ, ಹೋಮ್‌ ಗೆ ಹೋಗುವ ಬಟನ್‌ಗಳು) ಬಟನ್‌ಗಳಿವೆ. ಈಗಿನ ಮೊಬೈಲ್‌ಗ‌ಳಂತೆ ಪರದೆಯ ಒಳಗಿಲ್ಲ. ಒಂದು ಸಣ್ಣ ದೂರೆಂದರೆ ಈ ನ್ಯಾವಿಗೇಶನ್‌ ಕೀಗಳಿಗೆ ಹಿಂಬದಿಯಿಂದ ಬೆಳಕಿಲ್ಲ. ಹೀಗಾಗಿ ಮಂದ ಬೆಳಕಿನಲ್ಲಿ ಬಲಗಡೆ, ಎಡಗಡೆ ಮಧ್ಯ ಎಂಬ ಅಂದಾಜಿನಲ್ಲಿ ಆಪರೇಟ್‌ ಮಾಡಬೇಕು.

ಮೊಬೈಲ್‌ ತೆಳುವಾಗಿದ್ದು ಹಿಡಿದುಕೊಳ್ಳಲು ಸುಲಲಿತವಾಗಿದೆ. ನಮ್ಮ ಶರ್ಟಿನ ಮೇಲು ಜೇಬಿನಲ್ಲಿ ಹಾಕಿದರೆ ಆರಾಮವಾಗಿ ಹಿಡಿಸುತ್ತದೆ, ಹೊರಗೆ ಕಾಣುವುದಿಲ್ಲ. ಇದರ ತೂಕ 137 ಗ್ರಾಂ.ಗಳು. 140.4 ಮಿ.ಮೀ. ಉದ್ದ, 70 ಮಿ.ಮೀ. ಅಗಲ, 8.35 ಮಿ.ಮೀ. ದಪ್ಪ ಇದೆ. ನೀವು ಈಗ್ಗೆ ಮೂರು ವರ್ಷಗಳ ಹಿಂದೆ ಕೊಳ್ಳುತ್ತಿದ್ದ 5 ಇಂಚು ಪರದೆ ಇರುವ ಫೋನ್‌ ನೆನಪಿಸಿಕೊಳ್ಳಿ.

ಕಾರ್ಯಾಚರಣೆ
ಈ ಫೋನನ್ನು ಎರಡು ವಾರ ಬಳಸಿ ನೋಡಿದೆ. 8 ಜಿಬಿ. ಆಂತರಿಕ ಸಂಗ್ರಹ, 1 ಜಿಬಿ ರ್ಯಾಮ್‌ನ ಈ ಫೋನು ಸಖತ್‌ ಸ್ಲೋ ಆಗಿರಬಹುದು ಎಂಬ ಪೂರ್ವಗ್ರಹ ಇತ್ತು. ಆದರೆ ಶಿಯೋಮಿಯವರು ಗೂಗಲ್‌ನ ಆಂಡ್ರಾಯ್ಡ ಗೋ ಕಾರ್ಯಾಚರಣೆ ವ್ಯವಸ್ಥೆ ಬಳಸಿರುವುದರಿಂದ ಅಷ್ಟು ಕಡಿಮೆ ರೋಮ್‌ ಮತ್ತು ರ್ಯಾಮ್‌ನಲ್ಲೂ ಒಂದು ಮಟ್ಟದ ತೃಪ್ತಿಕರ ವೇಗದಲ್ಲಿ ಕೆಲಸ ಮಾಡುತ್ತದೆ. ಆಂಡ್ರಾಯ್ಡ ಗೋ ಇಂಟರ್‌ಫೇಸ್‌ನಲ್ಲಿ ಸಾಮಾನ್ಯ ಆಂಡ್ರಾಯ್ಡ ಆವೃತ್ತಿಗಿಂತ ಎರಡರಷ್ಟು ಹೆಚ್ಚಿನ ಸ್ಟೋರೇಜ್‌ ಅವಕಾಶ ದೊರಕುತ್ತದೆ. ಹೇಗೆಂದರೆ ಇದರಲ್ಲಿ ಬಳಸುವ ಆ್ಯಪ್‌ಗ್ಳನ್ನು ಇಂಥ ಆರಂಭಿಕ ಫೋನ್‌ಗಳಿಗಾಗಿಯೇ ಗೂಗಲ್‌ ಹಗುರವಾಗಿ ವಿನ್ಯಾಸಗೊಳಿಸಿದೆ. ಹಾಗಾಗಿ ಇದರಲ್ಲಿರುವ ಗೂಗಲ್‌ ಆ್ಯಪ್‌ಗ್ಳಿಗೆ ಗೋ ಎಂಬ ಬಾಲ ಸೇರಿಕೊಂಡಿದೆ. ಗೂಗಲ್‌ ಗೋ, ಮ್ಯಾಪ್ಸ್‌ ಗೋ, ಯೂಟ್ಯೂಬ್‌ ಗೋ, ಜಿಮೇಲ್‌ ಗೋ, ಅಸಿಸ್ಟೆಂಟ್‌ ಗೋ ಆಗಿವೆ! ಜೊತೆಗೆ ಮೊಬೈಲ್‌ ಜೊತೆಗೇ ಮೊದಲೇ ಸ್ಥಾಪಿತವಾಗಿ ಬಂದಿರುವ ಕೆಲ ಆ್ಯಪ್‌ಗ್ಳು ಲೈಟ್‌ ಆವೃತ್ತಿ ಹೊಂದಿವೆ. ಉದಾಹರಣೆಗೆ ಫೇಸ್‌ಬುಕ್‌ ಲೈಟ್‌.

ನಾವು ಈ ಮೊಬೈಲ್‌ ಬಳಸುವಾಗ ಇದಕ್ಕೆ 4500 ರೂ. ಮಾತ್ರ ಎಂಬುದನ್ನು ಗಮನದಲ್ಲಿಟ್ಟುಕೊಂಡಿರಬೇಕು. ಈ ದರಕ್ಕೆ ಈ ಫೋನ್‌ ಉತ್ತಮ ಆಯ್ಕೆ ಎಂದೇ ಹೇಳಬೇಕು. ಮೊದಲೇ ಹೇಳಿದಂತೆ ಕೀಪ್ಯಾಡ್‌ ಮೊಬೈಲ್‌ ಬಿಟ್ಟು ಸ್ಮಾರ್ಟ್‌ ಫೋನ್‌ ಗೆ ಬರುವ ಕಡಿಮೆ ಆದಾಯದ ವರ್ಗಕ್ಕೆ ಇದು ಸೂಕ್ತವಾದದ್ದು. ಹಾಗೆಯೇ ಕೆಲವರು ಕರೆ ಮಾಡಲು ಹೆಚ್ಚುವರಿಯಾಗಿ ಇನ್ನೊಂದು ಕೀಪ್ಯಾಡ್‌ ಫೋನ್‌ ಇಟ್ಟುಕೊಂಡಿರುತ್ತಾರೆ ಅಂಥವರಿಗೆ ಇದು ಸೂಕ್ತ. ಕೈಯಲ್ಲಿ ಹಿಡಿಯಲು ಪುಟ್ಟದಾಗಿರುವುದರಿಂದ ಆರಾಮಾಗಿ ಕಾಲ್‌ ಮಾಡಲು, ವಾಟ್ಸಪ್‌ ಬಳಸಲು ಅನುಕೂಲಕರವಾಗಿದೆ.

ಡಿಸ್‌ಪ್ಲೇ, ಕ್ಯಾಮರಾ
ಇದರ ಪರದೆ (ಎಚ್‌ಡಿ) ರೆಸ್ಯೂಲೇಶನ್‌ 1280*720 ಇದೆ. ಪರದೆಯ ಬ್ರೈಟ್‌ನೆಸ್‌ ಉತ್ತಮವಾಗಿದೆ. ಯಾವ ಕೋನದಿಂದ ನೋಡಿದರೂ ಪರದೆ ಸ್ಪಷ್ಟವಾಗಿ ಕಾಣುತ್ತದೆ. ಇನ್ನು ಮೊಬೈಲ್‌ ಹಿಂಬದಿಯಲ್ಲಿ 8 ಮೆ.ಪಿ. ಕ್ಯಾಮರಾ, 5 ಮೆ.ಪಿ. ಮುಂಬದಿ ಕ್ಯಾಮರಾ ಹೊಂದಿದೆ. ಹೊರಾಂಗಣ ಹಾಗೂ ಒಳಾಂಗಣದಲ್ಲಿ ಉತ್ತಮ ಬೆಳಕಿದ್ದರೆ ಒಂದು ಮಟ್ಟಕ್ಕೆ ಫೋಟೋಗಳು ಚೆನ್ನಾಗಿ ಮೂಡಿಬಂದವು. ಮಂದ ಬೆಳಕಿನಲ್ಲಿ ತೆಳುವಾದ ಚುಕ್ಕಿ ಸ್ವರೂಪ ಬರುತ್ತದೆ. ಆದರೆ ಮೊಬೈಲ್‌ಗಿರುವ ದರಕ್ಕೆ ಇದರ ಕ್ಯಾಮರಾ ಸಮಾಧಾನಕರವಾಗಿದೆ. ಸೆಲ್ಫಿ ಫೋಟೋ ಕೂಡ ತೃಪ್ತಿಕರವಾಗಿ ಬರುತ್ತದೆ.

ಬ್ಯಾಟರಿ: ಇದು 3000 ಎಂಎಎಚ್‌ ಬ್ಯಾಟರಿ ಹೊಂದಿದೆ. ಇದು ಆರಂಭಿಕ ದರ್ಜೆಯ ಫೋನ್‌ ಅಗಿದ್ದು, ಆಂಡ್ರಾಯ್ಡ ಗೋ ಎಡಿಷನ್‌ ಆಗಿರುವುದರಿಂದ 3000 ಎಂಎಎಚ್‌ ಬ್ಯಾಟರಿ ಒಂದರಿಂದ ಒಂದೂವರೆ ದಿನ ಬಾಳಿಕೆ ಬರುತ್ತದೆ. ಆದರೆ ಇದರ ಜೊತೆಗೆ ನೀಡಿರುವ ಚಾರ್ಜರ್‌ನಲ್ಲಿ ಚಾರ್ಜ್‌ ಮಾಡಿದರೆ (2 ಗಂಟೆಗೂ ಮೀರಿ) ಸಮಯ ಹಿಡಿಯುತ್ತದೆ. ಇದು ಸ್ವಲ್ಪ ಕಿರಿಕಿರಿಯ ವಿಷಯ.

ಯೂಟ್ಯೂಬ್‌ ಗೋ
ಇದರಲ್ಲಿ ಯೂಟ್ಯೂಬ್‌ ಬಳಸಿದಾಗ ಹೊಸತೊಂದು ಫೀಚರ್‌ ಅನ್ನು ಪರಿಚಯಿಸಿರುವುದು ಕಂಡು ಬಂದಿತು. ಯಾವುದೇ ವಿಡಿಯೋ ತೆರೆದುಕೊಳ್ಳುವ ಮುನ್ನ ಮೂಲಭೂತ ಗುಣಮಟ್ಟ, ಪ್ರಮಾಣಿತ ಗುಣಮಟ್ಟ ಹಾಗೂ ಉನ್ನತ ಗುಣಮಟ್ಟ ಎಂಬ ಮೂರು ಆಯ್ಕೆಗಳನ್ನು ತೋರಿಸುತ್ತದೆ. ಮತ್ತು ಅದು ಎಷ್ಟು ಎಂಬಿ ಡಾಟಾ ಬಳಸುತ್ತದೆ ಎಂಬುದನ್ನೂ ತೋರಿಸುತ್ತದೆ. ನಿಮಗೆ ಬೇಕಾದ ಆಯ್ಕೆ ಮಾಡಿಕೊಂಡು ನೋಡಬಹುದು. ಅಲ್ಲದೇ ಆ ವಿಡಿಯೋವನ್ನು ನೀವು ಡೌನ್‌ಲೋಡ್‌ ಮಾಡಿಕೊಂಡು ಡಾಟಾ ಇಲ್ಲದೆಯೂ ನೋಡಬಹುದು.

ಸಾರಾಂಶ: ಒಟ್ಟಾರೆ, ಇದೇ ಮೊದಲ ಬಾರಿ ಸ್ಮಾರ್ಟ್‌ಫೋನ್‌ ಬಳಸುವವರಿಗೆ, ಕೀಪ್ಯಾಡ್‌ ಫೋನ್‌ನಿಂದ ಬಡ್ತಿ ಹೊಂದ ಬಯಸುವವರಿಗೆ, ಕೇವಲ ಕರೆ, ವಾಟ್ಸಪ್‌, ಫೇಸ್‌ಬುಕ್‌, ಯೂಟ್ಯೂಬ್‌ ನೋಡಬಯಸುವ ಸಾಧಾರಣ ಬಳಕೆದಾರರಿಗೆ, 5 ಸಾವಿರದೊಳಗೆ ಒಂದು ಉತ್ತಮ ಕಂಪೆನಿಯ ಫೋನ್‌ ಬೇಕು ಎನ್ನುವವರಿಗೆ ಇದು ಉತ್ತಮ ಆಯ್ಕೆ.

ಅಂಡ್ರಾಯ್ಡ ಗೋ ಎಡಿಶನ್‌
ಇದರಲ್ಲಿರುವುದು ಸ್ನಾಪ್‌ಡ್ರಾಗನ್‌ 425, ನಾಲ್ಕು ಕೋರ್‌ಗಳ ಪ್ರೊಸೆಸರ್‌. ನಿಮಗೊಂದು ಸ್ವಾರಸ್ಯ ಹೇಳುತ್ತೇನೆ. ಈ ಪ್ರೊಸೆಸರ್‌ ಅನ್ನು ಕೆಲವು ಸೋ ಕಾಲ್ಡ್‌ ಕಂಪೆನಿಗಳು 12 ರಿಂದ 15 ಸಾವಿರ ರೂ. ಗಳ ಮೊಬೈಲ್‌ಗ‌ೂ ಹಾಕಿವೆ. 7 ಸಾವಿರ ಕೊಟ್ಟರೂ, ಕೆಲವು ಕಂಪೆನಿಗಳು ಹೆಸರೇ ಕೇಳಿಲ್ಲದ ಪ್ರೊಸೆಸರ್‌ ಹಾಕುತ್ತವೆ. ಇಲ್ಲವೇ ಮೀಡಿಯಾ ಟೆಕ್‌ ಪ್ರೊಸೆಸರ್‌ ಬಳಸುತ್ತವೆ. ಆದರೆ ಶಿಯೋಮಿ 4,500 ರೂ. ಗಳಿಗೆ ಸ್ನಾಪ್‌ಡ್ರಾಗನ್‌ 425 ಬಳಸಿ, ಅದಕ್ಕೆ ಅಂಡ್ರಾಯ್ಡ ಗೋ ಎಡಿಶನ್‌ ಅಳವಡಿಸಿರುವುದರಿಂದ ನಿಮಗೆ ಮೊಬೈಲ್‌ ವೇಗ ನಿಧಾನ ಗತಿ ಎನಿಸುವುದಿಲ್ಲ. ಇದರಲ್ಲಿರುವುದು ಅಂಡ್ರಾಯ್ಡ ಓರಿಯೋ ಆವೃತ್ತಿ. ಆ್ಯಪ್‌ಗ್ಳು ತೆರೆದುಕೊಳ್ಳುವ ವೇಗ ತೃಪ್ತಿಕರವಾಗಿದೆ. ಡಾಟಾ ಬಳಕೆಯ ಆನ್‌ಲೈನ್‌ ವೆಬ್‌ಪುಟಗಳು ತೆರೆದುಕೊಳ್ಳುವ ವೇಗವೂ ಇದೆ. ಇದರ ಮೂಲಕ ಇಂಟರ್‌ನೆಟ್‌ ಬ್ರೌಸ್‌ ಮಾಡುವವರನ್ನೂ ಈ ಮೊಬೈಲ್‌ ನಿರಾಸೆಗೊಳಿಸುವುದಿಲ್ಲ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ