ಅ”ಕೌಂಟ್‍ಡೌನ್’: ಬ್ಯಾಂಕ್‌ ಖಾತೆ ಕ್ಲೋಸ್‌ ಮಾಡುವುದು ಸುಲಭವಲ್ಲ

Team Udayavani, Aug 26, 2019, 3:07 AM IST

ಬ್ಯಾಂಕ್‌ ಖಾತೆಯನ್ನು ಕ್ಲೋಸ್‌ ಮಾಡುವುದು ಎಂದರೆ ಖಾತೆ ತೆರೆದಷ್ಟೇ ಸುಲಭವಲ್ಲ. ಅದಕ್ಕೆ ನೂರೆಂಟು ರಿವಾಜುಗಳಿವೆ. ಹಣಕಾಸು ವ್ಯವಹಾರಗಳನ್ನೇನೋ ಕುಳಿತಲ್ಲೇ ಇಂಟರ್ನೆಟ್‌ ಬ್ಯಾಂಕಿಂಗ್‌ ಹಾಗೂ ಮೊಬೈಲ್‌ ಬ್ಯಾಂಕಿಂಗ್‌ ಮುಖಾಂತರ ಮಾಡಬಿಡಬಹುದು. ಆದರೆ ಖಾತೆ ಕ್ಲೋಸ್‌ ಮಾಡಲು ಖುದ್ದು ಗ್ರಾಹಕನೇ ಬ್ಯಾಂಕಿಗೆ ಹೋಗಬೇಕಾಗುತ್ತದೆ. ಇಂಥ ಹಲವು ನಿಬಂಧನೆಗಳ ಕುರಿತು ಲೇಖಕರು ಇಲ್ಲಿ ವಿವರಣೆಯಿದೆ…

ಜನರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಬ್ಯಾಂಕುಗಳಲ್ಲಿ ಖಾತೆಯನ್ನು ತೆರೆಯುತ್ತಾರೆ. ತಮಗೆ ಅವಶ್ಯಕತೆ ಬ್ಯಾಂಕಿನೊಂದಿಗೆ ವ್ಯವಹಾರ ಮುಂದುವರಿಸುತ್ತಾರೆ. ಒಬ್ಬ ಗ್ರಾಹಕ ಇಷ್ಟೇ ದಿನ ಅಥವಾ ಇಷ್ಟು ದಿನಗಳು ಅಥವಾ ಇಷ್ಟು ವರ್ಷಗಳ ಕಾಲ ಖಾತೆಯನ್ನು ಇಟ್ಟುಕೊಳ್ಳಬಹುದು ಎನ್ನುವ ಕಟ್ಟಳೆ ಇರುವುದಿಲ್ಲ. ಗ್ರಾಹಕರು, ವಿವಿಧ ಕಾರಣ­ಗಳಿಗಾಗಿ ಖಾತೆಗಳನ್ನು ಕ್ಲೋಸ್‌ ಮಾಡುತ್ತಾರೆ. ವರ್ಗಾವರ್ಗಿ, ಮನೆ ಬದಲಾಯಿಸುವಿಕೆ, ಸೇವೆಯಲ್ಲಿ ತೃಪ್ತಿ ಇರದಿರುವುದು, ಮನೆ, ಬಿಜಿನೆಸ್‌ ಸ್ಥಳ ಅಥವಾ ಕಚೇರಿ ಹತ್ತಿರ ಬ್ಯಾಂಕ್‌ ಖಾತೆಗಳನ್ನು ಇಟ್ಟುಕೊಳ್ಳುವ ಉದ್ದೇಶ,

ಬೇರೆ ಬ್ಯಾಂಕಿನಲ್ಲಿ ದೊರಕಬಹುದಾದ ಹೆಚ್ಚಿನ ಸವಲತ್ತುಗಳು, ಕೆಲವು ಬಾರಿ ಬ್ಯಾಂಕ್‌ ಖಾತೆ ತೆರೆದ ಉದ್ದೇಶ ಮುಗಿದ ಮೇಲೆ, ಹೀಗೆ ಹಲವಾರು ಕಾರಣಗಳಿಗಾಗಿ ಗ್ರಾಹಕರು ತಮ್ಮ ಬ್ಯಾಂಕ್‌ ಖಾತೆಗಳನ್ನು ಕ್ಲೋಸ್‌ ಮಾಡುತ್ತಾರೆ. ಹಾಗೆಯೇ, ಯಾವುದೇ ಗ್ರಾಹಕನಿಗೆ, ಬ್ಯಾಂಕ್‌ ಖಾತೆ ಕ್ಲೋಸ್‌ ಮಾಡದಂತೆ ಬ್ಯಾಂಕುಗಳು ಒತ್ತಾಯ ಮಾಡಲಾಗದು. ಖಾತೆಗಳನ್ನು ಮುಂದುವರಿಸು­ವುದು ಅಥವಾ ಕ್ಲೋಸ್‌ ಮಾಡುವುದು ಖಾತೆದಾರನ ವಿವೇಚನೆಗೆ ಬಿಟ್ಟ ವಿಷಯ. ಖಾತೆಯನ್ನು ಕ್ಲೋಸ್‌ ಮಾಡದಂತೆ ಬ್ಯಾಂಕುಗಳು ವಿನಂತಿಸಿಕೊಳ್ಳಬಹುದು. ಅದರೆ, ಒತ್ತಾಯ ಮಾಡಲಾಗದು.

ಕ್ಲೋಸ್‌ ಮಾಡುವುದು ಹೇಗೆ?: ಖಾತೆಗಳನ್ನು ತೆರೆಯುವಾಗ ಹಲವು ಪ್ರಕ್ರಿಯೆಗಳು ಇರುತ್ತವೆ ಮತ್ತು ಹಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಹಾಗೆಯೇ ಖಾತೆಗಳನ್ನು ಕ್ಲೋಸ್‌ ಮಾಡುವಾಗ ಕೂಡಾ ಕೆಲವು ಪ್ರಕ್ರಿಯೆಗಳು ಇರುತ್ತವೆ. ಖಾತೆಗಳನ್ನು ಕ್ಲೋಸ್‌ ಮಾಡುವಾಗ ಖಾತೆದಾರನು ಲಿಖೀತವಾಗಿ ಕೋರಿಕೆಯನ್ನು ಸಲ್ಲಿಸಬೇಕಾಗುತ್ತದೆ ಮತ್ತು ಬ್ಯಾಂಕಿಗೆ ಸ್ವತಃ ಬರಬೇಕಾಗುತ್ತದೆ. ಇಂಥ ಕೋರಿಕೆ, ಬೇರೆ ಬ್ಯಾಂಕುಗಳ ಆಥವಾ ಬೇರೆ ಶಾಖೆಗಳ ಮೂಲಕ ಬಂದರೆ ಪರಿಗಣಿಸುವ ಸಾಧ್ಯತೆ ಇರುತ್ತದೆ. ಆದರೆ, ಸುರಕ್ಷತೆಯ ದೃಷ್ಟಿಯಲ್ಲಿ ಖಾತೇದಾರನೇ ಸ್ವತಃ ಬರಬೇಕೆಂದು ಬ್ಯಾಂಕ್‌ ಅಧಿಕಾರಿಗಳು ಒತ್ತಾಯಿಸುತ್ತಾರೆ. ಖಾತೆಗಳನ್ನು ಕ್ಲೋಸ್‌ ಮಾಡಲು ಪ್ರತ್ಯೇಕವಾದ ನಮೂನೆ (form) ಇರುವುದಿಲ್ಲ. ಖಾಲಿ ಕಾಗದದಲ್ಲಿ ಬರೆದುಕೊಟ್ಟರೂ ಸಾಕು.

ಕೆಲವು ಬ್ಯಾಂಕುಗಳಲ್ಲಿ ಬ್ಯಾಂಕ್‌ ಖಾತೆ ಕ್ಲೋಸ್‌ ಮಾಡಲು ಖಾತೆದಾರರು ನಿರ್ದಿಷ್ಟ ನಮೂನೆ (form)ಗಳನ್ನು ಭರ್ತಿ ಮಾಡಿ ನೀಡುವ ವ್ಯವಸ್ಥೆ ಇದೆ. ಖಾತೆಗಳನ್ನು ಕ್ಲೋಸ್‌ ಮಾಡುವ ಪ್ರಕ್ರಿಯೆಯಲ್ಲಿ ಬ್ಯಾಂಕಿನಿಂದ ಬ್ಯಾಂಕಿಗೆ ಸ್ವಲ್ಪ ವ್ಯತ್ಯಾಸ ಇರುತ್ತದೆ. ಆದರೆ, ಈ ಕೆಳಗಿನ ಪ್ರಕ್ರಿಯೆಗಳು ಎಲ್ಲಾ ಬ್ಯಾಂಕುಗಳಿಗೂ ಸಾಮಾನ್ಯವಾಗಿರುತ್ತವೆ. ಪರಿಶೀಲನೆ ನಡೆಸಲಾಗುತ್ತದೆ ಖಾತೆಯು ಸ್ತಬ್ದವಾಗಿದ್ದರೆ (dormant), ಅಂದರೆ, ವರ್ಷಗಳ ಕಾಲ ಖಾತೆಯಲ್ಲಿ (ಉಳಿತಾಯ ಶಾತೆಯಲ್ಲಿ ಎರಡು ವರ್ಷ ಮತ್ತು ಚಾಲ್ತಿ ಖಾತೆಯಲ್ಲಿ ಒಂದು ವರ್ಷ) ವ್ಯವಹಾರ (transaction) ನಡೆದಿರದಿದ್ದರೆ, ಅಂಥ ಖಾತೆಗಳನ್ನು ಮೊದಲು Active ಮಾಡಿ, ಒಂದೆರಡು ವ್ಯವಹಾರ ತೋರಿಸಿ ನಂತರ ಖಾತೆಯನ್ನು ಕ್ಲೋಸ್‌ ಮಾಡಬೇಕಾಗುತ್ತದೆ.  ಬಳಸದ ಚೆಕ್‌ಗಳನ್ನು ಬ್ಯಾಂಕಿಗೆ ಹಿಂತಿರುಗಿಸ­ಬೇಕಾಗುತ್ತದೆ.

ಈಗಾಗಲೇ ಚೆಕ್‌ಗಳನ್ನು ನೀಡಿದ್ದು, ಅದು ಪೇಮೆಂಟ್‌ಗೆ ಬಂದಿರದಿದ್ದರೆ, ಅದರ ಬಗೆಗೆ ಮಾಹಿತಿಯನ್ನು ಬ್ಯಾಂಕಿಗೆ ನೀಡಬೇಕಾಗುತ್ತದೆ. ಬಿಲ್‌ ಪೇಮೆಂಟ್‌ ಮತ್ತು ಸಾಲದ ಕಂತುಗಳ ಪೇಮೆಂಟ್‌ಗಾಗಿ ಖಾತೆಯನ್ನು ಲಿಂಕ್‌ ಮಾಡಿದ್ದರೆ, ಅದನ್ನು ಡಿ-ಲಿಂಕ್‌ ಮಾಡಬೇಕು. ಕ್ಲೋಸ್‌ ಮಾಡುವ ಮೊದಲು ಖಾತೆಯಲ್ಲಿರುವ ಎಲ್ಲಾ ಬ್ಯಾಲೆನ್ಸನ್ನು ಹಿಂಪಡೆಯಬಹುದು ಅಥವಾ ಖಾತೆ ಕ್ಲೋಸ್‌ ಮಾಡಿದ ನಂತರ ಬ್ಯಾಲೆನ್ಸನ್ನು ವರ್ಗಾಯಿಸಲು ಬೇರೆ ಬ್ಯಾಂಕ್‌ ಖಾತೆಯ ವಿವರಗಳನ್ನು ಕೊಡಬೇಕು. ಕೆಲವು ಸಂದರ್ಭದಲ್ಲಿ ಬ್ಯಾಲೆನ್ಸನ್ನು ನಗದು ರೂಪದಲ್ಲಿಯೂ ಕೊಡುತ್ತಾರೆ. ಕ್ಲೋಸ್‌ ಮಾಡುವ ಖಾತೆ ಜಂಟಿ ಖಾತೆಯಾಗಿದ್ದರೆ, ಖಾತೆ ಕ್ಲೋಸ್‌ ಮಾಡುವ ಕೋರಿಕೆ ಅರ್ಜಿಗೆ ಎಲ್ಲರೂ ಸಹಿ ಹಾಕಬೇಕು. ಸಾಲ ಬಾಕಿ ಇರುವಾಗ ಸಾಮಾನ್ಯವಾಗಿ ಬ್ಯಾಂಕ್‌ ಖಾತೆಯನ್ನು
ಕ್ಲೋಸ್‌ ಮಾಡಲಾಗದು.

ಹೇಳದೇ ಬಂದ್‌ ಮಾಡುವಂತಿಲ್ಲ: ಬ್ಯಾಂಕುಗಳು ಒಬ್ಬ ಗ್ರಾಹಕನ ಖಾತೆಯನ್ನು ಗ್ರಾಹಕನ ಅನುಮತಿ ಇಲ್ಲದೇ, ಅವನ ಗಮನಕ್ಕೆ ಲಿಖೀತವಾಗಿ ತರದೇ ಬಂದ್‌ ಮಾಡಲಾಗದು. ಯಾವುದಾದರೂ ಕಾರಣಕ್ಕೆ ಒಬ್ಬರ ಖಾತೆಯನ್ನು ಬಂದ್‌ ಮಾಡುವ ಅನಿವಾರ್ಯತೆ ಬಂದರೆ, ಈ ನಿಟ್ಟಿನಲ್ಲಿ ಬ್ಯಾಂಕುಗಳು ಖಾತೆದಾರನಿಗೆ ಲಿಖೀತವಾಗಿ ಮಾಹಿತಿ ನೀಡಬೇಕಾಗುತ್ತದೆ. ಖಾತೆದಾರನಿಗೆ ಮಾಹಿತಿ ನೀಡದೇ ಖಾತೆಯನ್ನು ಬಂದ್‌ ಮಾಡಿದರೆ, ಖಾತೇದಾರನು ಬ್ಯಾಂಕ್‌ನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು. ಗ್ರಾಹಕರು ಸಾಮಾನ್ಯವಾಗಿ ಸದುದ್ದೇಶದಿಂದಲೇ ಬ್ಯಾಂಕ್‌ ಖಾತೆಯನ್ನು ತೆರೆಯುತ್ತಾರೆ. ಆದರೆ, ಕೆಲವರು ಇದನ್ನು ದುರುಪಯೋಗ ಮಾಡಿಕೊಳ್ಳುವ ಸಂದರ್ಭಗಳು ಇರುತ್ತವೆ. ಅಂತೆಯೇ ಬ್ಯಾಂಕ್‌ ಖಾತೆ ತೆರೆಯುವಾಗ ತೆಗೆದುಕೊಳ್ಳಬಹುದಾದ ಮುಂಜಾಗ್ರತೆ ಮತ್ತು ಎಚ್ಚರಿಕೆಯನ್ನು ಬ್ಯಾಂಕ್‌ ಖಾತೆ ಬಂದ್‌ ಮಾಡುವಾಗಲೂ ಬ್ಯಾಂಕ್‌ಗಳು ತೆಗೆದುಕೊಳ್ಳುತ್ತಿದ್ದು, reasonable enquiry ಯನ್ನು ಮಾಡುತ್ತವೆ.

ಅಕೌಂಟ್‌ ಕ್ಲೋಸ್‌ ಮಾಡಲು ಶುಲ್ಕ ಇದೆಯೇ?: ಯಾವ ಸೇವೆಯೂ ಉಚಿತವಾಗಿ ದೊರಕುವುದಿಲ್ಲ. ಉದಾರೀಕರಣ, ಜಾಗತೀಕರಣ ಮತ್ತು ಅರ್ಥಿಕ ಸುಧಾರಣೆಯ ನಂತರದ ಮಾತು ಇಲ್ಲಿಯೂ ಅನ್ವಯವಾಗುತ್ತದೆ. ಬ್ಯಾಂಕ್‌ ಖಾತೆ ಬಂದ್‌ ಮಾಡಿದರೆ ಬ್ಯಾಂಕುಗಳು ಅದಕ್ಕೂ ಶುಲ್ಕ ವಿಧಿಸುತ್ತವೆ. ಆದರೆ ಇದಕ್ಕೆ ಒಂದು ಸಮಯದ ಪರಿಮಿತಿ ಇದೆ. ಖಾತೆ ತೆರೆದು 14 ದಿವಸಗಳೊಳಗಾಗಿ ಬಂದ್‌ ಮಾಡಿದರೆ, ಸಾಮಾನ್ಯವಾಗಿ ಬ್ಯಾಂಕುಗಳು ಶುಲ್ಕವನ್ನು ವಿಧಿಸುವುದಿಲ್ಲ. ಖಾತೆ ತೆರೆದು ಒಂದು ವರ್ಷದ ನಂತರ ಬಂದ್‌ ಮಾಡಿದರೆ, ಆಗಲೂ ಶುಲ್ಕವನ್ನು ವಿಧಿಸಲಾಗುವುದಿಲ್ಲ.

ಮೊದಲು ಒಂದು ವರ್ಷದ ನಂತರ ಖಾತೆ ಬಂದ್‌ ಮಾಡಿದರೂ ಬ್ಯಾಂಕುಗಳು 500+GST ವಿಧಿಸುತ್ತಿದ್ದರು. ಮೃತಹೊಂದಿದವನ ಖಾತೆಯನ್ನು ಬಂದ್‌ ಮಾಡಿದರೆ ಯಾವುದೇ ಶುಲ್ಕವಿಲ್ಲ. ಬ್ಯಾಂಕುಗಳ ಪ್ರಕಾರ, ಈ ಶುಲ್ಕ ಖಾತೆ ತೆರೆಯುವ, ಚೆಕ್‌ ಬುಕ್‌ ಮತ್ತು ಡೆಬಿಟ್‌ ಕಾರ್ಡ್‌ಗಳ ವೆಚ್ಚವನ್ನು ಮರಳಿ ಪಡೆಯುವುದು. ಚಾಲ್ತಿ ಖಾತೆಗಳ ನಿಟ್ಟಿನಲ್ಲಿ ಎಲ್ಲಾ ಬ್ಯಾಂಕುಗಳು 14 ದಿನಗಳ ಅವಧಿ ಮೀರಿದ ಖಾತೆಗಳಿಗೆ ಖಾತೆ ಬಂದ್‌ ಮಾಡುವಾಗ 500ರಿಂದ 1000ವರೆಗೆ ಶುಲ್ಕ ವಿಧಿಸುತ್ತವೆ. ಬ್ಯಾಂಕ್‌ ಖಾತೆ ಬಂದ್‌ ಮಾಡುವ ಶುಲ್ಕದ ನಿಟ್ಟಿನಲ್ಲಿ ರಿಸರ್ವ್‌ ಬ್ಯಾಂಕ್‌ನ ಯಾವುದೇ ನಿರ್ದೇಶನ ಅಥವಾ ಸುತ್ತೋಲೆ ಇರುವುದಿಲ್ಲ. ಇದು ಬ್ಯಾಂಕುಗಳ ವಿವೇಚನೆಗೆ ಬಿಟ್ಟದ್ದು.

* ರಮಾನಂದ ಶರ್ಮಾ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ