ಪಾಲಿಸಿ ಸರೆಂಡರ್‌ ಮಾಡುವ ಮುನ್ನ…

Team Udayavani, May 20, 2019, 6:00 AM IST

ಇಪ್ಪತ್ತು ವರ್ಷ ಅವಧಿಯ ಜೀವ ವಿಮಾ ಪಾಲಿಸಿಯೊಂದಕ್ಕೆ ಕಂತು ಕಟ್ಟಲು ಆರಂಭಿಸುತ್ತೀರಿ. ಆದರೆ, ನಾಲ್ಕು ವರ್ಷ ಮುಗಿಯುವುದರೊಳಗೆ, ಹಣ ಕಟ್ಟಲು ಸಾಧ್ಯವಿಲ್ಲ ಅನಿಸುತ್ತದೆ. ತಕ್ಷಣ, ಅವಧಿಗೂ ಮೊದಲೇ ಪಾಲಿಸಿಯನ್ನು ಕ್ಲೋಸ್‌ ಮಾಡುವಂತೆ, ಈವರೆಗೂ ಕಟ್ಟಿರುವ ಹಣ ಕೊಡುವಂತೆ ಕೇಳುತ್ತೀರಿ. ಆಗ ನಿಮಗೆ, ಕಟ್ಟಿರುವ ಹಣಕ್ಕಿಂತ ಕಡಿಮೆ ಮೊತ್ತ ಸಿಗುತ್ತದೆ. ಯಾಕೆ ಗೊತ್ತ?

ಜೀವ ವಿಮೆಯ ಹೂಡಿಕೆಯ ಅದೆಷ್ಟೋ ವಿವರಣೆಗಳು ಭಾರತೀಯರಿಗೆ ಇಂದಿಗೂ ಅರ್ಥವಾಗದೇ ಉಳಿದು ಹೋಗಿವೆ ಎಂದರೆ ತಪ್ಪಾಗಲಾರದು.ವಿಮೆ ಎಂದರೆ ಸತ್ತ ಮೇಲೆ ಬರುವಂಥಹ ಹಣ ಮಾತ್ರ ಎನ್ನುವ ಪೂರ್ವಾಗ್ರಹವುಳ್ಳ ಸಮಾಜದಲ್ಲಿ ವಿಮೆಯ ಕುರಿತಾಗಿ ತಾಂತ್ರಿಕ ವಿವರಣೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುವವರ ಸಂಖ್ಯೆಯೂ ಕಡಿಮೆಯೇ.ಹಾಗೆ ಜನಸಾಮಾನ್ಯರಿಗೆ ಅರ್ಥವಾಗದೇ ಉಳಿದುಹೋಗಿರುವ ವಿಮೆಯ ಕುರಿತಾದ ಒಂದು ಬಹುಮುಖ್ಯ ಸಂಗತಿಯೆಂದರೆ “ಸರೆಂಡರ್‌ ವ್ಯಾಲ್ಯೂ’ವಿನ ಕುರಿತಾದದ್ದು.ಕನ್ನಡದಲ್ಲಿ “ತ್ಯಾಗ ಮೌಲ್ಯ’ಎಂದು ಕರೆಯಲ್ಪಡುವ ಈ ಆರ್ಥಿಕ ಲೆಕ್ಕಾಚಾರ, ಬಹುತೇಕ ವಿಮಾದಾರರನ್ನು ಗೊಂದಲಕ್ಕೆ ತಳ್ಳುತ್ತದೆ.ಹೆಚ್ಚಿನ ವಿವರಣೆಗೂ ಮುನ್ನ ವಿಮೆಗೆ ಸಂಬಂಧಿಸಿದಂತೆ ತ್ಯಾಗ ಮೌಲ್ಯಎಂದರೇನು ಎಂದರಿಯುವುದೊಳಿತು.

ನೀವು ಯಾವುದೋ ಒಂದು ಕಂಪನಿಯಿಂದ ಜೀವ ವಿಮೆಯನ್ನು ಖರೀದಿಸಿದಿರಿ ಅಂದುಕೊಳ್ಳಿ.ಇಪ್ಪತ್ತು ವರ್ಷದ ಅವಧಿಯವರೆಗೂ ಪ್ರೀಮಿಯಂ ಕಟ್ಟುವ ಕರಾರಿನೊಂದಿಗೆ ನಿಮ್ಮ ಪಾಲಿಸಿ ಇದೆ ಎಂದುಕೊಳ್ಳಿ.ಮೊದಲ ಮೂರು ವರ್ಷ ನೀವು ಸರಿಯಾಗಿಯೇ ಪ್ರೀಮಿಯಂ ಕಂತು ಕಟ್ಟಿದಿರಿ.ಆದರೆ ನಿಮ್ಮದೇ ಆದರೆ, ಕಾರಣಕ್ಕೆ ನಾಲ್ಕನೇ ವರ್ಷದ ಹೊತ್ತಿಗೆ ನಿಮಗೆ ಪಾಲಿಸಿಯನ್ನು ಮುಂದುವರೆಸುವುದು ಬೇಡವೆನ್ನಿಸಿತು.ಪಾಲಿಸಿಯನ್ನು ಅವಧಿಗೆ ಮುನ್ನವೇ ಮುಕ್ತಾಯಗೊಳಿಸಲು ಯೋಚಿಸಿ, ನೀವು ಪಾಲಿಸಿ ಖರೀದಿಸಿದ ವಿಮೆಯ ಕಚೇರಿಗೇ ಹೋಗಿ ಪಾಲಿಸಿಯನ್ನು ನಿಲ್ಲಿಸಿ ,ನೀವು ಅಲ್ಲಿಯವರೆಗೂ ಕಟ್ಟಿದ ಹಣವನ್ನು ಮರಳಿಸಬೇಕಾಗಿ ಕಂಪನಿಯನ್ನು ವಿನಂತಿಸಿದಿರಿ.ಹೀಗೆ ನಿಗದಿತ ಅವಧಿಗೂ ಮುನ್ನ ನೀವು ಪಾಲಿಸಿ ನಿಲ್ಲಿಸುವ ಪ್ರಕ್ರಿಯೆಯನ್ನು ಪಾಲಿಸಿ ಸರೆಂಡರಿಂಗ್‌ ಎಂದು ಕರೆಯಲಾಗುತ್ತದೆ.ಹಾಗೆ ಪಾಲಿಸಿಯೊಂದನ್ನು ಅವಧಿಪೂರ್ವವೇ ನಿಲ್ಲಿಸಿದಾಗ, ಕಂಪನಿಯು ತನ್ನೆಲ್ಲ ಶುಲ್ಕವನ್ನು ಕಳೆದು ಪಾಲಿಸಿದಾರನ ಕೈಗಿಡುವ ಹಣವನ್ನು ನಿರ್ಧರಿಸುವ ಅಂಶವೇ ಈ ಸರೆಂಡರ್‌ ವ್ಯಾಲ್ಯೂ ಅಥವಾ ತ್ಯಾಗ ಮೌಲ್ಯ.

ತ್ಯಾಗ ಮೌಲ್ಯದ ಬಹುದೊಡ್ಡ ಸಮಸ್ಯೆಯೆಂದರೆ ಪಾಲಿಸಿದಾರರು ಹಿಂಪಡೆಯುವ ಮೊತ್ತದ್ದು. ಸಾಮಾನ್ಯವಾಗಿ ಪಾಲಿಸಿಯೊಂದನ್ನು ಆರಂಭಿಕ ವರ್ಷಗಳಲ್ಲಿಯೇ ಅಕಾಲಿಕವಾಗಿ ತ್ಯಜಿಸಿದಾಗ ಪಾಲಿಸಿದಾರನ ಕೈಗೆ ಸಿಗುವುದು ಅವನು ಕಟ್ಟಿರುವ ಒಟ್ಟು ಪ್ರೀಮಿಯಂ ಮೊತ್ತಕ್ಕಿಂತಲೂ ಕಡಿಮೆ ಹಣವೇ.ಹೀಗೊಂದು ಸಂದರ್ಭ ಎದುರಾದಾಗಲೆಲ್ಲ ತ್ಯಾಗಮೌಲ್ಯದ ಅಸಲಿ ಲೆಕ್ಕಾಚಾರ ಅರ್ಥವಾಗದ ಪಾಲಿಸಿದಾರರು ಕಂಪನಿಯ ಪ್ರತಿನಿಧಿಗಳು ತಮಗೆ ಮೋಸ ಮಾಡಿದರೆಂದು ಕಂಪನಿಯೊಂದಿಗೆ ಜಗಳವಾಡಿರುವ ಸಂದರ್ಭಗಳೂ ಇಲ್ಲದಿಲ್ಲ.ಇಷ್ಟಕ್ಕೂ ಜೀವವಿಮೆಯೊಂದರ ತ್ಯಾಗಮೌಲ್ಯದ ಮೊತ್ತ,ನಮ್ಮ ಹೂಡಿಕೆಯ ಮೊತ್ತಕ್ಕಿಂತ ಕಡಿಮೆ ಸಿಗುವುದೇಕೆ..?

ನಿರ್ದಿಷ್ಟ ಮೊತ್ತ ಸಿಗುತ್ತೆ
ಮೂಲತ: ಜೀವವಿಮೆಯೆನ್ನುವುದು ಹಂಚಿಕೆ ಮತ್ತು ಹೊಂದಾಣಿಕೆಯ ಹೂಡಿಕೆ.ಈ ಸಿದ್ಧಾಂತವನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳುವುದಕ್ಕಾಗಿಯೇ ಒಂದು ಉದಾಹರಣೆಯನ್ನು ನೋಡೋಣ.ಸಾವಿರ ಜನರದ್ದೊಂದು ಗುಂಪಿದೆ ಎಂದುಕೊಳ್ಳೋಣ.ಸಾವಿರ ಜನರಲ್ಲಿ ವರ್ಷಕ್ಕೆ ಸರಿಸುಮಾರು ಮೂವರು ಖಂಡಿತವಾಗಿಯೂ ತೀರಿಕೊಳ್ಳುತ್ತಾರೆನ್ನುವುದು ಒಂದು ಅನುಭವದ ಲೆಕ್ಕಾಚಾರ. ಹಾಗೆ ತೀರಿಕೊಳ್ಳುವ ಮೂರು ಜನರ ಕುಟುಂಬಕ್ಕೆ ಮರಣಾನಂತರ ಒಂದೊಂದು ಲಕ್ಷ$ ರೂಪಾಯಿಗಳಷ್ಟು ಸಹಾಯ ಧನವನ್ನು ಒದಗಿಸಲು ಸಾವಿರ ಜನರ ಗುಂಪು ನಿರ್ಧರಿಸಿತು. ಹೊಂದಿಸಬೇಕಾದ ಮೂರು ಲಕ್ಷ$ ರೂಪಾಯಿಗಳನ್ನು ಸಾವಿರ ಜನರಲ್ಲಿ ಭಾಗಿಸಿ ಒಬ್ಬೊಬ್ಬರು ತಲಾ ಮುನ್ನೂರು ರೂಪಾಯಿಗಳಂತೆ ಒಂದು ಡಬ್ಬಿಯಲ್ಲಿ ಸಂಗ್ರಹಿಸಿಟ್ಟರು.ವರ್ಷಾಂತ್ಯದ ವೇಳೆಗೆ ತೀರಿಕೊಂಡ ಮೂರು ಜನರ ಕುಟುಂಬಕ್ಕೆ ಪೂರ್ವನಿಗದಿಯಂತೆ ಒಂದೊಂದು ಲಕ್ಷ ರೂಪಾಯಿಗಳನ್ನು ನೀಡಲಾಯಿತು.

ಹಾಗೆ ಮುನ್ನೂರು ರೂಪಾಯಿಯಷ್ಟು ಚಿಕ್ಕ ಮೊತ್ತವನ್ನು ವ್ಯಯಿಸಿದ ಸಾವಿರ ಜನ ಮರಣಾನಂತರ ತಮ್ಮ ತಮ್ಮ ಕುಟುಂಬಗಳಿಗೆ ಲಕ್ಷ$ ರೂಪಾಯಿಯಷ್ಟು ಖಚಿತಮೊತ್ತವನ್ನು ಕೂಡಿಡುವಂತಾಯಿತು.ಈಗ ಮೇಲಿನ ಉದಾಹರಣೆಯಲ್ಲಿ ಲಕ್ಷ$ ರೂಪಾಯಿಯೆನ್ನುವುದು ನೀವು ಕೊಂಡ ಒಟ್ಟು ವಿಮೆಯ ಮೊತ್ತವಾದರೆ ,ಕೂಡಿಡುವ ಮುನ್ನೂರು ರೂಪಾಯಿಗಳು ಅದಕ್ಕೆ ಕಟ್ಟಬಹುದಾದ ಪ್ರೀಮಿಯಂ ಹಣ ಮತ್ತು ಹಣ ಕೂಡಿಟ್ಟ ಡಬ್ಬಿಯೇ ಇನ್ಸುರನ್ಸ್‌ ಕಂಪನಿ. ವಿಮೆಯ ಮೂಲಸಿದ್ಧಾಂತವಿದು.

ಆದರೆ ಕಾಲ ಕ್ರಮೇಣ ಜನರ ಮನಸ್ಥಿತಿ ಬದಲಾಯಿತು.ತಾವು ಸಾಯದೇ ಹೋದರೆ ವರ್ಷಗಟ್ಟಲೇ ತಾವು ಕಟ್ಟಬಹುದಾದ ಪ್ರೀಮಿಯಂನ ಹಣವನ್ನು ಪೂರ್ತಿಯಾಗಿ ಕಳೆದುಕೊಳ್ಳುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದರು. ಹಾಗಾಗಿ, ವಿಮಾ ಕಂಪನಿಗಳು ಮೂಲ ಪ್ರೀಮಿಯಂನ ಜೊತೆಗೆ ಇನ್ನೊಂದಿಷ್ಟು ಹಣವನ್ನು ವಿಮೆದಾರರಿಂದ ಪಡೆದುಕೊಂಡು,ವಿಮೆಗೆ ಸಂದಾಯವಾಗುವ ಹಣದ ಭಾಗವನ್ನು ಹೊರತುಪಡಿಸಿ ಉಳಿದ ಮೊತ್ತವನ್ನು ದೇಶದ ವಿವಿಧ ಯೋಜನೆಗಳಲ್ಲಿ ಹೂಡಿಕೆಗಳಂತೆ ವಿನಿಯೋಗಿಸಿ ಬಂದ ಲಾಭವನ್ನು ವಿಮಾದಾರರಿಗೆ ಪಾಲಿಸಿ ಅವಧಿಯ ನಂತರ ಲಾಭದಂತೆ ಹಂಚಲಾರಂಭಿಸಿದರು.ಇದರಿಂದಾಗಿ ಅಕಾಲಿಕ ಮರಣಕ್ಕೆ ತುತ್ತಾಗದೇ ಹೋದರೂ ವಿಮೆದಾರರಿಗೆ ಅವಧಿಯ ನಂತರ ನಷ್ಟವಾಗದೇ ಒಂದು ನಿರ್ದಿಷ್ಟ ಮೊತ್ತ ಕೈಗೆ ಸಿಗುವಂತಾಯಿತು.

ಕೂಡಿ, ಕಳೆದು ನೋಡಿದ ಮೇಲೆ…
ಈಗ ತ್ಯಾಗಮೌಲ್ಯವೆನ್ನುವುದು ನಾವು ಕಟ್ಟಿರುವ ಹಣಕ್ಕಿಂತಲೂ ಕಡಿಮೆ ಬರುವುದೇಕೆ ಎಂಬ ನಮ್ಮ ಮೂಲ ಪ್ರಶ್ನೆಯತ್ತ ಬರೋಣ.ನೀವು ಹೊಸದೊಂದು ಪಾಲಿಸಿ ಖರೀದಿಸಿದ ಮರುಕ್ಷಣವೇ ವಿಮಾ ರಕ್ಷ$ಣೆ ಹೊಂದಿದ ಲಕ್ಷಾಂತರ ಜನರ ವ್ಯಾಪ್ತಿಗೆ ನೀವು ಒಳಪಡುತ್ತೀರಿ.ಆಗಲೇ ತಿಳಿಸಿದಂತೆ ವರ್ಷಕ್ಕೆ ಇಂತಿಷ್ಟೇ ಜನರು ಮರಣಿಸುವ ಲೆಕ್ಕಾಚಾರ ನಿಮ್ಮ ವಿಮಾಕಂಪನಿಯ ಬಳಿಯಿರುತ್ತದೆ.ಮರ್ತಯ ದರಎಂದು ಕರೆಯಲ್ಪಡುವ ಈ ಲೆಕ್ಕಾಚಾರದ ಪ್ರಕಾರ ಮತ್ತು ಹೊಂದಾಣಿಕೆಯ ಕರಾರಿನಂತೆ ನೀವು ಕಟ್ಟಿದ ಪ್ರೀಮಿಯಂನ ಒಂದು ಭಾಗ ಮರಣಿಸಿದವರ ಮರಣದಾವೆಯ ಪಾಲಾಗುತ್ತದೆ.ಉಳಿದ ಮೊತ್ತದಲ್ಲಿ ಕಂಪನಿಯ ಖರ್ಚುವೆಚ್ಚಗಳು,ವಿಮೆಯ ಕರಾರಿಗೆ ತಗಲುವ ಖರ್ಚುಗಳು,ವಿಮಾ ಪ್ರತಿನಿಧಿಯ ಕಮಿಶನ್ನು ಎಲ್ಲವನ್ನೂ ಕಳೆಯಲಾಗುತ್ತದೆ.

ಸಾಮಾನ್ಯವಾಗಿ ವಿಮೆಯೆನ್ನುವುದು ಧೀರ್ಘಾವಧಿಯ ಹೂಡಿಕೆಯಾಗಿರುವುದರಿಂದ ಹೆಚ್ಚಿನ ಗೊಂದಲಗಳಿಂದ ತಪ್ಪಿಸಿಕೊಳ್ಳಲು , ವಿಮಾ ಕರಾರೊಂದು ಶುರುವಾದ ಮೊದಲ ಮೂರ್ನಾಲ್ಕು ವರ್ಷಗಳಲ್ಲೇ ಹೆಚ್ಚಿನ ಶುಲ್ಕವನ್ನು ವಿಧಿಸುವ ಮೂಲಕ ಕಂಪನಿ ಆರ್ಥಿಕ ಲೆಕ್ಕಾಚಾರಗಳನ್ನು ಸರಿದೂಗಿಸಿಕೊಂಡುಬಿಟ್ಟಿರುತ್ತದೆ. ಇಂಥ ಸಂದರ್ಭದಲ್ಲಿ ಪಾಲಿಸಿದಾರನೊಬ್ಬ ಪಾಲಿಸಿಯನ್ನು ತ್ಯಜಿಸಲು ಮುಂದಾಗುವುದು ಕಂಪನಿಗೆ ಅನಿರೀಕ್ಷಿತ ಬೆಳವಣಿಗೆ.ಹಾಗಾಗಿಯೇ ಪಾಲಿಸಿಯೊಂದು ಆರಂಭವಾದ ಕೆಲವೇ ವರ್ಷಗಳಲ್ಲಿ ಅದನ್ನು ಸರೆಂಡರ… ಮಾಡುವುದು ನಷ್ಟದ ಬಾಬ್ತು. ಸ್ಪಷ್ಟವಾಗಿ ಹೇಳಬೇಕೆಂದರೆ ಮೊದಲ ಐದು ವರ್ಷಗಳಲ್ಲಿ ಸರೆಂಡರ್‌ ಮಾಡುವ ಪಾಲಿಸಿಯೊಂದರ ನಿರ್ವಹಣಾ ವೆಚ್ಚಗಳು ಸರಿಸುಮಾರು ಮೊದಲ ಎರಡು ವರ್ಷದ ಪ್ರೀಮಿಯಂ ಕಂತುಗಳಷ್ಟು ಎಂದರೆ ನಿಮಗೆ ಅರ್ಥವಾದೀತು.

ಪಾಲಿಸಿ ಮಾಡುವಾಗಲೇ ಯೋಚಿಸಿ
ಹಾಗಾಗಿ ಮುಂದಿನ ಬಾರಿ ಪಾಲಿಸಿಯೊಂದನ್ನು ಖರೀದಿಸುವಾಗ ತ್ಯಾಗಮೌಲ್ಯದ ಈ ಅಂಕಗಣಿತವನ್ನು ನೆನಪಿಟ್ಟುಕೊಳ್ಳಿ.ಪಾಲಿಸಿಯನ್ನು ಖರೀದಿಸುವಾಗಲೇ ನಿಮ್ಮ ಸಾಧಕಬಾಧಕಗಳ ಬಗ್ಗೆ ಅರಿವಿರಲಿ.ಅವಧಿಗೂ ಮುನ್ನವೇ ವಿಮೆಯನ್ನು ನಿಲ್ಲಿಸುವ ಯೋಚನೆಯಿದ್ದರೆ,ಅಂಥಹ ಸಂದರ್ಭಗಳು ಎದುರಾಗುವ ಅನುಮಾನಗಳಿದ್ದರೆ ಧೀರ್ಘಾವಧಿಗಿಂತ,ಹೆಚ್ಚಿನ ತ್ಯಾಗಮೌಲ್ಯ ಸಿಗುವ ಕಡಿಮೆ ಅವಧಿಯ ಪಾಲಿಸಿಗಳನ್ನು ಖರೀದಿಸುವುದೊಳಿತು.

ಗುರುರಾಜ ಕೊಡ್ಕಣಿ,ಯಲ್ಲಾಪುರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ