ನ್ಯಾಯಾಲಯದ ಮುಂದೆ ಹಾಜರಾಗಲು ನಿರ್ದೇಶನ

Team Udayavani, Oct 21, 2019, 4:30 AM IST

ಯಾವುದೇ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಒತ್ತಾಯಿಸಲು ನ್ಯಾಯಾಲಯವು ಎರಡು ರೀತಿಯಲ್ಲಿ ನಿರ್ದೇಶಿಸಲಬಹುದು.

ಮೊದಲನೆಯದು- ಸಮನ್ಸ್‌ ಮೂಲಕ
ಎರಡೆಯದು- ವಾರೆಂಟ್‌ ಮೂಲಕ
ನ್ಯಾಯಾಲಯ ಹೊರಡಿಸುವ ಸಮನ್ಸ್‌ ನಿರ್ದಿಷ್ಟ ನಮೂನೆಯಲ್ಲಿ ಬರವಣಿಗೆಯಲ್ಲಿದ್ದು ದ್ವಿಪ್ರತಿಯಲ್ಲಿರಬೇಕು. ಸಾಮಾನ್ಯವಾಗಿ ಇದನ್ನು ನ್ಯಾಯಾಧೀಶರಾಗಲೀ ಅಥವಾ ಹೈಕೋರ್ಟ್‌ ನಿರ್ದೇಶಿಸಿದ ಇತರೆ ಯಾವುದೇ ಅಧಿಕಾರಿಯಾಗಲಿ ಸಹಿ ಮಾಡಬೇಕು. ಸಮನ್ಸಿಗೆ ನ್ಯಾಯಾಲಯದ ಮುದ್ರೆ ಕೂಡಾ ಇರಬೇಕು.
ಸಮನ್ಸ್‌ ಕೆಳಗಿನ ವಿವರಗಳನ್ನು ಒಳಗೊಂಡಿರುತ್ತದೆ.
1. ನ್ಯಾಯಾಲಯದ ಹೆಸರು ಮತ್ತು ಮುದ್ರೆ
2. ಊರು
3. ಪ್ರಕರಣದ ಸಂಖ್ಯೆ
4. ಆರೋಪಿಯ ಹೆಸರು ಮತ್ತು ವಿಳಾಸ
5. ಯಾವ ಅಪರಾಧದ ಬಗ್ಗೆ ಸಮನ್ಸ್‌ ನೀಡಲಾಗಿದೆ
6. ಆರೋಪಿಯು ಹಾಜರಾಗಬೇಕಾದ ದಿನಾಂಕ ಮತ್ತು ಸಮಯ
ಯಾವುದೇ ಸಮನ್ಸ್‌ಅನ್ನು ಪೊಲೀಸ್‌ ಅಧಿಕಾರಿಯ ಮೂಲಕ ಜಾರಿ ಮಾಡಿಸಬೇಕು. ಸಮನ್ಸ್‌ ಅನ್ನು ಆರೋಪಿಗೆ ಮುಖತಃ ಜಾರಿ ಮಾಡಬೇಕು. ಆ ರೀತಿ ಜಾರಿ ಮಾಡಿದ ಬಗ್ಗೆದ್ವಿಪ್ರತಿಯ ಹಿಂಭಾಗದಲ್ಲಿ ಅವನ ಸಹಿ ಪಡೆದುಕೊಳ್ಳಬೇಕು. ಒಂದು ವೇಳೆ ಸಮನ್ಸಿನಲ್ಲಿ ನಮೂದಾದ ವ್ಯಕ್ತಿಯು ಪ್ರಯತ್ನಪಟ್ಟರೂ ಸಿಗದೇ ಹೋದಲ್ಲಿ ಅದನ್ನು ಅವನ ಕುಟುಂಬದ ಸದಸ್ಯನಾದ ವಯಸ್ಕ ಪುರುಷನ ಮೇಲೆ ಜಾರಿ ಮಾಡಬಹುದು ಮತ್ತು ಅವನ ಸಹಿಯನ್ನು ದ್ವಿಪ್ರತಿಯ ಹಿಂದೆ ಪಡೆದುಕೊಳ್ಳಬೇಕು. ಸೇವಕನು ಮನೆಯ ಸದಸ್ಯನೆಂದು ಗಣನೆಗೆ ಬರುವುದಿಲ್ಲವಾದ್ದರಿಂದ ಅವನ ಮೇಲೆ ಸಮನ್ಸ್‌ ಜಾರಿ ಮಾಡುವ ಹಾಗಿಲ್ಲ.

ಒಂದು ವೇಳೆ ಸಮನ್ಸ್‌ಅನ್ನು ಮುಖತಃ ಆಗಲೀ ಅಥವಾ ಮೇಲೆ ತಿಳಿಸಿದ ರೀತಿಯಲ್ಲಿ ಕುಟುಂಬದ ಸದಸ್ಯನ ಮೇಲೇ ಆಗಲಿ ಜಾರಿ ಮಾಡಲಾಗದಿದ್ದಲ್ಲಿ ಆರೋಪಿಯು ವಾಸಿಸುತ್ತಿರುವ ಮನೆಯ ಮೇಲೆ ಎದ್ದು ಕಾಣು ಜಾಗದಲ್ಲಿ ಅಂಟಿಸಿ ನ್ಯಾಯಾಲಯಕ್ಕೆ ವರದಿ ಮಾಡಬೇಕು. ಒಂದು ವೇಳೆ ನ್ಯಾಯಾಲಯಕ್ಕೆ ಆ ರೀತಿ ಜಾರಿ ಮಾಡಿರುವುದು ಸೂಕ್ತವಲ್ಲವೆಂದು ಕಂಡುಬಂದಲ್ಲಿ ಹೊಸದಾಗಿ ಸಮನ್ಸ್‌ಅನ್ನು ಜಾರಿ ಮಾಎಡಬೇಕೆಂದು ನಿರ್ದೇಶಿಸಬಹುದು. ಸಮನ್ಸ್‌ ಜಾರಿಯಾಗಬೇಕಾದ ವ್ಯಕ್ತಿ ಸರ್ಕಾರಿ ಸೇವೆಯಲ್ಲಿದ್ದರೆ ಯಾಯಾಲಯವು ಸಮನ್ಸ್‌ಅನ್ನು ದ್ವಿಪ್ರತಿಯಲ್ಲಿ ಆ ಕಛೇರಿಯ ಮುಖ್ಯ ಅಧಿಕಾರಿಗೆ ಕಳಿಸಿಕೊಡುತ್ತದೆ. ಆ ಅದಿಕಾರಿ ನೌಕರನ ಮೇಲೆ ಸಮನ್ಸ್‌ಅನ್ನು ಆಜರಿ ಮಾಡಿ ನ್ಯಾಲಯಕ್ಕೆ ಹಿಂದಿರುಗಿಸುತ್ತಾನೆ. ನ್ಯಾಯಾಲಯದ ಅಧಿಕಾರ ವ್ಯಾಪ್ತಿಯ ಹೊರಗೆ ಸಮನ್ಸ್‌ ಜಾರಿ ಆದರೆ ಹಾಗೆ ಜಾರಿ ಮಾಡಿದ ವ್ಯಕ್ತಿಯ ಪ್ರಮಾಣ ಪತ್ರವನ್ನು ಸಾಕ್ಷ್ಯವನ್ನಾಗಿ ಪರಿಗಣಿಸಲಾಗುತ್ತದೆ.

ಆರೋಪಿಗಲ್ಲದೆ, ಸಾಕ್ಷಿಗೂ ಸಹ ಸಮನ್ಸ್‌ ಕಳಿಸಲಾಗುತ್ತದೆ. ಸಾಕ್ಷಿಗೆ ಸಮನ್ಸ್‌ ಕಳಿಸುವಾಗ, ನ್ಯಾಯಾಲಯಕ್ಕೆ ಅವಶ್ಯಕವೆಂದು ತೋರಿದರೆ, ಮುದ್ದಾಂ ಮೂಲಕವಲ್ಲದೆ ನೋಂದಣಿ ಅಂಚೆಯಲ್ಲೂ ಸಹ ಸಮನ್ಸ್‌ಅನ್ನು ಕಳಿಸಬೇಕೆಂದು ನಿರ್ದೇಶಿಸಬಹುದು. ಒಂದು ವೇಳೆ ಸಾಕ್ಷಿ ಸಮನ್ಸ್‌ಅನ್ನು ತೆಗೆದುಕೊಳ್ಳಲು ನಿರಾಕರಿಸಿದರೆ ನ್ಯಾಲಯ ಸಮನ್ಸ್‌ ಜಾರಿ ಆಗಿದೆ ಎಂದು ಘೋಷಣೆ ಮಾಡಬಹುದು.

-ಎಸ್‌.ಆರ್‌. ಗೌತಮ್‌ (ಕೃಪೆ: ನವ ಕರ್ನಾಟಕ ಪ್ರಕಾಶನ)

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ