ಸುತ್ತೂರಿಗೆ ಫೇಮಸ್ಸು ಶಂಕರ ಇಡ್ಲಿ

Team Udayavani, Jul 22, 2019, 5:00 AM IST

ನೂರಾರು ಜನರು ಅಂಗಡಿ ಸುತ್ತ ನಿಲ್ಲುತ್ತಾರೆ. ಈ ಅಂಗಡಿಯಲ್ಲಿ ಮಾಲೀಕನಿಗೂ ಕೂರಲು ಜಾಗವಿಲ್ಲದಷ್ಟು ಜನಸಂದಣಿ, ಇದುವೇ ಬಾಗಲಕೋಟೆ ಜಿಲ್ಲೆ ರಬಕವಿಯಲ್ಲಿರುವ ಸಿದ್ಧಿ ವಿನಾಯಕ ಇಡ್ಲಿ ಸೆಂಟರ್‌ನ ಸ್ಪೆಷಲ್‌. ಈ ಇಡ್ಲಿಯ ರುಚಿಗೆ ಮನಸೋಲದವರೇ ಇಲ್ಲ. ಪಟ್ಟಣದ ಬಸ್‌ನಿಲ್ದಾಣದ ಎದುರಿಗೆ ರಬಕವಿ- ಜಾಂಬೋಟಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಸಿದ್ಧಿ ವಿನಾಯಕ ಇಡ್ಲಿ ಸೆಂಟರ್‌ನಲ್ಲಿ ಇಡ್ಲಿ ಸವಿಯಲು ಗ್ರಾಹಕರು ಮುಗಿಬೀಳುತ್ತಾರೆ. ಬೆಳಗ್ಗೆ 7ರಿಂದ 10ರವರೆಗೆ ತೆರೆದಿರುವ ಈ ಸೆಂಟರ್‌ನಲ್ಲಿ ನಾಲ್ಕೇ ನಾಲ್ಕು ಗಂಟೆಯಲ್ಲಿ 1600ಕ್ಕೂ ಹೆಚ್ಚು ಇಡ್ಲಿ ಮಾರಾಟವಾಗುವುದೂ ಇದೆ.

ಸುತ್ತಲಿನ ಊರುಗಳಿಂದಲೂ ಪಾರ್ಸೆಲ್‌ ಆರ್ಡರ್‌ ಬರುತ್ತವೆ. ಹೈಟೆಕ್‌ ಹೋಟೆಲ್‌ಗ‌ಳಲ್ಲೂ ಇಲ್ಲದ ರುಚಿ ಇಲ್ಲಿ ಸಿಗುತ್ತೆ ಎನ್ನುತ್ತಾರೆ ಗ್ರಾಹಕರು. ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಭೆ ಸಮಾರಂಭಗಳು ಏರ್ಪಾಡಾದರೆ ಶಂಕರ ಇಡ್ಲಿ ಬೇಕೇ ಬೇಕು. ಗೋಕಾಕ, ರಬಕವಿ- ಬನಹಟ್ಟಿ, ಮುಧೋಳ, ಜಮಖಂಡಿ, ರಾಯಬಾಗ್‌, ತೇರದಾಳ ಸೇರಿದಂತೆ ಹಲವು ತಾಲ್ಲೂಕುಗಳ ಜನರು ಇಡ್ಲಿ ತಿನ್ನಲೆಂದೇ ಇಲ್ಲಿಗೆ ಬರುವುದೂ ಉಂಟು.

ಇಡ್ಲಿ ಶಂಕರ ಎಂದೇ ಪ್ರಖ್ಯಾತಿ
ಸಿದ್ಧಿ ವಿನಾಯಕ ಇಡ್ಲಿ ಸೆಂಟರ್‌ನ ಮಾಲೀಕ, ಶಂಕರ ಶಿರೋಳ ಅವರು ಕಡುಬಡತನದಲ್ಲೇ ಬೆಳೆದವರು. 15 ವರ್ಷಗಳ ಕಾಲ ನೇಕಾರಿಕೆ ಮಾಡುತ್ತಾ ಕಷ್ಟದ ಜೀವನ ನಡೆಸಿ ಬೇಸತ್ತಿದ್ದರು. ನಂತರ ಆ ವೃತ್ತಿಯನ್ನು ಕೈಬಿಟ್ಟು, ಚಕ್ಕುಲಿ, ಮಸಾಲೆ ಶೇಂಗಾ, ಚಹಾ ಮಾರಾಟ ಮಾಡಲು ಶುರುಮಾಡಿದರು. ನಂತರವೇ ಇಡ್ಲಿ ವ್ಯಾಪಾರವನ್ನು ಪ್ರಾರಂಭಿಸಿದ್ದು. ಕಳೆದ 11 ವರ್ಷಗಳಿಂದ ಇಡ್ಲಿ ವ್ಯಾಪಾರ ಮಾಡುತ್ತಿದ್ದು. ಎಲ್ಲೆಡೆ “ಇಡ್ಲಿ ಶಂಕರ’ ಎಂದೇ ಪ್ರಖ್ಯಾತಿ ಪಡೆದಿದ್ದಾರೆ.

ಪ್ಲೇಟ್‌ನಲ್ಲಿ ಏನಿರುತ್ತದೆ?
ಮಿಕ್ಕ ಹೋಟೆಲ್‌ಗ‌ಳಲ್ಲಿ ಸಾಮಾನ್ಯವಾಗಿ ಒಂದು ಪ್ಲೇಟ್‌ಗೆ 2 ಇಡ್ಲಿ ಕೊಟ್ಟರೆ ಇಲ್ಲಿ 3 ಇಡ್ಲಿ ಕೊಡುತ್ತಾರೆ. ಉತ್ತಮ ಗುಣಮಟ್ಟದ ಎರಡು ವಿಧದ ಚಟ್ನಿ, ಸಾಂಬಾರ್‌ ಸಿಗುತ್ತದೆ. ಮೊದಲು 3 ಇಡ್ಲಿಗೆ 10ರು. ತೆಗೆದುಕೊಳ್ಳುತ್ತಿದ್ದರು, ಬೆಲೆ ಏರಿಕೆಯ ಪರಿಣಾಮ ಈಗ 20ರು. ನಿಗದಿ ಪಡಿಸಿದ್ದಾರೆ. ಶಂಕರ ಅವರಿಗೆ ಪತ್ನಿ ಸವಿತಾ ಮತ್ತು ಮಕ್ಕಳಾದ ವೀರೇಶ, ಸಿದ್ದಾರೂಢ ಸಾಥ್‌ ನೀಡುತ್ತಿದ್ದಾರೆ. ಅಷ್ಟೇ ಅಲ್ಲ; 7 ಜನರಿಗೆ ತಮ್ಮ ಇಡ್ಲಿ ಸೆಂಟರ್‌ನಲ್ಲಿ ಕೆಲಸವನ್ನು ನೀಡಿದ್ದಾರೆ.

ತೇರದಾಳ ಮತಕ್ಷೇತ್ರದ ಮಾಜಿ ಶಾಸಕಿ, ಸಚಿವೆ, ನಟಿ ಉಮಾಶ್ರೀಯವರು ಕ್ಷೇತ್ರಕ್ಕೆ ಬಂದಾಗಲೆಲ್ಲಾ ಅವರಿಗೆ ಶಂಕರ ಇಡ್ಲಿಯೇ ಆಗಬೇಕು ತಿಂಡಿಗೆ. ಅವರು ಸಚಿವರಾಗಿದ್ದಾಗಲೂ, ಬಿಝಿ ಕಾರ್ಯಕ್ರಮಗಳ ನಡುವೆ ರಸ್ತೆ ಪಕ್ಕ ವಾಹನ ನಿಲ್ಲಿಸಿ, ವಾಹನದಲ್ಲೇ ಕುಳಿತು ಶಂಕರ ಇಡ್ಲಿಯನ್ನು ಸವಿಯುತ್ತಿದ್ದರು.

ಭಿಕ್ಷುಕರಿಗೆ ಇಡ್ಲಿ ಉಚಿತ
ವಯಸ್ಸಾದ, ನಿರ್ಗತಿಕ, ಅನಾಥ ಭಿಕ್ಷುಕರಿಗೆ ವಾರದಲ್ಲಿ ಒಂದು ದಿನ ಇಡ್ಲಿಯನ್ನು ಉಚಿತವಾಗಿ ನೀಡುವುದರ ಮೂಲಕ ಸಾಮಾಜಿಕ ಕಳಕಳಿಯನ್ನೂ ಮೆರೆಯುತ್ತಿದ್ದಾರೆ ಶಂಕರ ಶಿರೋಳ.

ಗ್ರಾಹಕರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸುವುದು ನಮ್ಮ ಉದ್ಧೇಶ. ನಮ್ಮ ಇಡ್ಲಿ ಸೆಂಟರ್‌ಗೆ ಬಂದವರು ಯಾರೂ ಅತೃಪ್ತಿಯಿಂದ ಹೋಗಬಾರದು, ಸಂತೋಷದಿಂದ ಹೋಗಬೇಕು. ಅದಕ್ಕಾಗಿ 11 ವರ್ಷಗಳಿಂದ ನಮ್ಮ ರುಚಿ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡು ಬಂದಿದ್ದೇವೆ.
– ಶಂಕರ ಶಿರೋಳ, ಸಿದ್ಧಿ ವಿನಾಯಕ ಇಡ್ಲಿ ಸೆಂಟರ್‌ನ ಮಾಲೀಕ

ಹೋಟೆಲ್‌ ಸಮಯ: ಮುಂಜಾನೆ 6ರಿಂದ 10-30ರವರೆಗೆ ತೆರೆದಿರುತ್ತದೆ.
ವಿಳಾಸ : ಸಿದ್ಧಿ ವಿನಾಯಕ ಇಡ್ಲಿ ಸೆಂಟರ್‌, ಬಸ್‌ ನಿಲ್ದಾಣದ ಎದುರು, ರಬಕವಿ-ಜಾಂಬೋಟಿ ರಾಜ್ಯ ಹೆದ್ದಾರಿ, ಮಹಾಲಿಂಗಪುರ. ತಾ. ರಬಕವಿ-ಬನಹಟ್ಟಿ, ಜಿ. ಬಾಗಲಕೋಟ.
ಸಂಪರ್ಕ- 7760038072

-ಚಿತ್ರ-ಲೇಖನ: ಚಂದ್ರಶೇಖರ ಮೋರೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಎಂದರೆ ಕೇವಲ ಭತ್ತ ಎನ್ನುವಂಥ ಪರಿಸ್ಥಿತಿ ಇದೆ. ಹೀಗಿರುವಾಗ ಅದೇ ಪ್ರದೇಶದ ಯಡಹಳ್ಳಿ ಗ್ರಾಮದ ಯುವ ರೈತ ಭೀಮಾಶಂಕರ ಹೂವಿನ...

  • ಭೂಮಿಯನ್ನು ಏಳು ಸುತ್ತು ಸುತ್ತುವಷ್ಟು ಬೃಹತ್ತಾದ ಆಪ್ಟಿಕಲ್‌ ಫೈಬರ್‌ ಕೇಬಲ್‌ ಸಂಪರ್ಕ ಭಾರತದಲ್ಲಿದೆ. ಹಾಗಿದ್ದೂ ಈ ಕಾಲದಲ್ಲೂ ಒಂದು ಜಾಲತಾಣ ಓಪನ್‌ ಆಗಲು,...

  • ಈ ವರ್ಷದಲ್ಲಿ ಫೆಬ್ರವರಿ, ಏಪ್ರಿಲ್‌, ಜೂನ್‌ ಮತ್ತು ಆಗಸ್ಟ್‌ ತಿಂಗಳಿನಲ್ಲಿ ರಿಸರ್ವ್‌ ಬ್ಯಾಂಕ್‌, ಸತತವಾಗಿ ನಾಲ್ಕು ಸಲ ರೆಪೋ ದರವನ್ನು ಕಡಿಮೆ ಮಾಡಿದೆ. ಹೀಗಾಗಿ...

  • ಇಟ್ಟಿಗೆ ಗೋಡೆಗಳು ಸಾಮಾನ್ಯವಾಗಿ ಮೇಲಿನಿಂದ ಬರುವ ಭಾರವನ್ನು ಮಾತ್ರ ಹೊರುವ ಸಾಮರ್ಥ್ಯ ಹೊಂದಿರುತ್ತವೆ. ಆದರೆ ಪ್ರವಾಹದಲ್ಲಿ ನೀರು ಅಲೆಗಳ ರೂಪದಲ್ಲಿ ಅಪ್ಪಳಿಸುತ್ತಿದ್ದರೆ,...

  • ವಾರಗಟ್ಟಲೆ ಒಂದೆಡೆ ಮೊಕ್ಕಾಂ ಹೂಡಿ ಮನೆಯವರ ಚಲನವಲನಗಳನ್ನು ಗಮನಿಸಿ, ರಾತ್ರಿ ಹೊತ್ತಿನಲ್ಲಿ ಚಹರೆ ಮುಚ್ಚಿಕೊಂಡು, ಅಕ್ಕಪಕ್ಕದ ಮನೆಯವರಿಗೆ ಗೊತ್ತಾಗದಂತೆ...

ಹೊಸ ಸೇರ್ಪಡೆ