ಗಣಪತಿ ಬಪ್ಪ moreಯಾ!

ಚತುರ್ಥಿಯಂದು ಅರಳುವ ಉದ್ಯಮ

Team Udayavani, Aug 26, 2019, 3:12 AM IST

ಈದ್‌, ದಸರಾ, ದೀಪಾವಳಿ, ಕ್ರಿಸ್‌ಮಸ್‌ ಹಬ್ಬಗಳಿಗೆ ಮುಂಚಿತವಾಗಿ ಭರ್ಜರಿ ಓಪನಿಂಗ್‌ ನೀಡುವ ಹಬ್ಬ ಗಣೇಶ ಚತುರ್ಥಿ. ಇದು ಸಾಂಸ್ಕೃತಿಕ ಹಬ್ಬವೇನೋ ಹೌದು, ಆದರೆ ಗಣೇಶ ವಿಗ್ರಹ ತಯಾರಿಕೆ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನದಾನ… ಹೀಗೆ ಅದರ ಹಿಂದೆ ಒಂದು ದೊಡ್ಡ ಮಾರುಕಟ್ಟೆಯೇ ಸೃಷ್ಟಿ ಆಗಿರುವುದೂ ಸುಳ್ಳಲ್ಲ. ಭಕ್ತಿ, ಸಾಂಸ್ಕೃತಿಕ ಹಿನ್ನೆಲೆ ಎಲ್ಲವನ್ನೂ ಪಕ್ಕಕ್ಕಿಟ್ಟು ನೋಡುವುದಾದರೆ, ದೇಶಾದ್ಯಂತ ಆಚರಿಸಲ್ಪಡುವ ಗಣೇಶೋತ್ಸವದ ಒಟ್ಟು ಮಾರುಕಟ್ಟೆಯ ಮೊತ್ತ ಏನಿಲ್ಲವೆಂದರೂ 20,000 ಕೋಟಿಗೂ ಅಧಿಕ. ಹೀಗಾಗಿ ವ್ಯಾಪಾರಸ್ಥರು, ಉದ್ಯಮಿಗಳು ಗಣೇಶನನ್ನು ಹೆಚ್ಚು ಹೆಚ್ಚು ಇಷ್ಟಪಡುವುದು ಸುಮ್ಮನೆಯೇ ಅಲ್ಲ. ಈ ಸಮಯದಲ್ಲಿ ವಿವಿಧ ಉದ್ಯಮಗಳು ಯಾವೆಲ್ಲಾ ರೀತಿ ಬೆಳಕು ಕಂಡುಕೊಳ್ಳುತ್ತವೆ ಎಂಬುದರ ಬಗ್ಗೆ ಅನೇಕರು ಅನುಭವ ಹಂಚಿಕೊಂಡಿದ್ದಾರೆ.

ಮಳೆಯಲಿ ಜೊತೆಯಲಿ ಗಣೇಶ
ಗಣೇಶೋತ್ಸವದ ಕಳೆ ಒಂದು ತಿಂಗಳು ಮಾತ್ರವೇ ಇದ್ದರೂ ನಾವು ಗಣೇಶನ ಮೂರ್ತಿ ಮಾಡುವವರು ವರ್ಷವಿಡೀ ಅದರ ತಯಾರಿಯಲ್ಲಿ ತೊಡಗಿರುತ್ತೇವೆ. ಈ ವರ್ಷವೂ ಮಣ್ಣಿನ ಗಣೇಶನ ಮೂರ್ತಿಗಳನ್ನು ಶೆಡ್‌ನ‌ಲ್ಲಿ ದಾಸ್ತಾನು ಮಾಡಿಟ್ಟುಕೊಂಡಿದ್ದೆವು. ಆದರೆ ಈ ಬಾರಿ ಹೆಚ್ಚಿನ ಮಳೆ ಬಂದು ಅವುಗಳಲ್ಲಿ ಒಂದಷ್ಟು ಮೂರ್ತಿಗಳು ಹಾಳಾದವು. ಉತ್ತರಕರ್ನಾಟಕ ಭಾಗದಲ್ಲಿ ಗಣೇಶ ವಿಗ್ರಹ ತಯಾರಿಯಲ್ಲಿ ತೊಡಗಿರುವ ಅನೇಕರ ಪಾಡು ಇದೇ. ಹೀಗಾಗಿ, ಧಾರವಾಡ ಭಾಗದಲ್ಲಿ ವಿಗ್ರಹಗಳ ಕೊರತೆ ಉಂಟಾಗಿದೆ ಅಂತ ಹೇಳಬಹುದು. ಹೀಗಾಗಿ ವ್ಯಾಪಾರ ಹೇಗಾಗುತ್ತೋ ಎನ್ನುವ ಆತಂಕವೂ ಇದೆ. ಪ್ಲಾಸ್ಟರ್‌ ಆಫ್ ಪ್ಯಾರಿಸ್‌(ಪಿ.ಓ.ಪಿ.) ವಿಗ್ರಹಗಳನ್ನು ನಾವು ಮಾಡುವುದಿಲ್ಲ. ಮಣ್ಣಿನ ವಿಗ್ರಹಗಳನ್ನೇ ಹಗುರವಾಗಿಸಿ, ಬಣ್ಣ ಎಲ್ಲವನ್ನೂ ಅವರಿಗೆ ಬೇಕಾದ ರೀತಿಯಲ್ಲೇ ಕೊಡುತ್ತಿರುವುದರಿಂದ ಗ್ರಾಹಕರು ಈಗ ಮಣ್ಣಿನ ಮೂರ್ತಿಗಳನ್ನೇ ಕೊಳ್ಳುತ್ತಿದ್ದಾರೆ. ಪಿ.ಓ.ಪಿ. ವಿಗ್ರಹಗಳಿಗಿಂತ ಮಣ್ಣಿನ ಮೂರ್ತಿಗಳ ತಯಾರಿಕೆಯೇ ದುಬಾರಿ. ಏಕೆಂದರೆ ಮಣ್ಣಿನ ಮೂರ್ತಿಗಳ ತಯಾರಿಗೆ ಮೌಲ್ಡನ್ನು ಬಳಸುವುದಿಲ್ಲ. ಅಚ್ಚನ್ನು ಕೈಯಿಂದಲೇ ರೂಪಿಸಬೇಕಾಗುತ್ತದೆ. ಇದಕ್ಕೆ ಕುಶಲಕರ್ಮಿಗಳು ಬೇಕಾಗುತ್ತಾರೆ. ಹೆಚ್ಚಿನ ಕೆಲಸಗಾರರು ಬೇಕಾಗುತ್ತಾರೆ. ಹೀಗಾಗಿ ಪಿ.ಓ.ಪಿ. ಮೂರ್ತಿಗಿಂತ, ಮಣ್ಣಿನ ಮೂರ್ತಿ ದುಬಾರಿಯಾಗುತ್ತದೆ. ವರ್ಷಕ್ಕೆ 7- 8 ಲಕ್ಷ ಬಂಡವಾಳವನ್ನು ಈ ಗಣೇಶ ಮೂರ್ತಿಗಳ ಉದ್ಯಮ ಬೇಡುತ್ತದೆ. 5- 6 ಮಂದಿ ಕೆಲಸಗಾರರಿದ್ದಾರೆ ಅಂತಿಟ್ಟುಕೊಂಡರೂ ಅವರ ಸಂಬಳ, ಇತರೆ ವೆಚ್ಚ ಎಲ್ಲವನ್ನೂ ಗಮನದಲ್ಲಿರಿಸಿಕೊಂಡು ಲೆಕ್ಕ ಹಾಕುವುದಾದರೆ, ಹಾಕಿದ ಬಂಡವಾಳದಲ್ಲಿ 30% - 40% ಲಾಭ ಬರುತ್ತದೆ.
-ಮಂಜುನಾಥ ಹಿರೇಮಠ, ಗಣೇಶ ಮೂರ್ತಿ ತಯಾರಕ, ಧಾರವಾಡ

***

ರೇಡಿಯೋ ಜಾಹೀರಾತುಗಳು
ಗಣೇಶೋತ್ಸವದ ಸಂದರ್ಭದಲ್ಲಿ ನಮ್ಮ ಎಫ್.ಎಂ ಕೇಂದ್ರದಲ್ಲೂ ಹಬ್ಬದ ವಾತಾವರಣ ಇರುತ್ತದೆ. ಅದಕ್ಕಿಂತ ಹೆಚ್ಚಾಗಿ ಈ ಸಂದರ್ಭದಲ್ಲೇ ನಾವು ಬಿಝಿಯಾಗುವುದು. ಏಕೆಂದರೆ, ಹಬ್ಬ, ತಿಂಗಳು ಪೂರ್ತಿ ನಡೆಯುವು ದರಿಂದ ಹಬ್ಬದ ವಾತಾವರಣವನ್ನು ಅಷ್ಟು ದಿನಗಳ ಕಾಲ ಕಾಪಾಡಿಕೊಳ್ಳ ಬೇಕಾಗುತ್ತದೆ. ಅದರ ನಿಮಿತ್ತ ಅನೇಕ ಮನರಂಜನಾ ರೇಡಿಯೊ ಕಾರ್ಯಕ್ರಮಗಳನ್ನು ರೂಪಿಸಬೇಕಿರುತ್ತದೆ. ಅಲ್ಲದೆ, ಈ ಸಂದರ್ಭದಲ್ಲಿ ಜಾಹೀರಾತುದಾರರು ನಮ್ಮ ಎಫ್.ಎಂ ಕಛೇರಿಯ ಬಾಗಿಲು ತಟ್ಟುತ್ತಾರೆ. ಗಣೇಶ, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಪ್ರಿಯನಾದವನು. ಆದ್ದರಿಂದಲೇ ಈ ಸಂದರ್ಭದಲ್ಲಿ ಜಾಹೀರಾತುದಾರರು ತಮ್ಮ ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಹಾತೊರೆಯುತ್ತಾರೆ. ಗಣೇಶೋತ್ಸವದ ಸಮಯದಲ್ಲಿ ಜಾಹೀರಾತುಗಳ ಮಹಾಪೂರವೇ ಹರಿದುಬರುತ್ತದೆ. ಎಂದಿನ ರೇಡಿಯೊ ಕಾರ್ಯಕ್ರಮಗಳ ಜೊತೆ ರಾಜಿ ಮಾಡಿಕೊಳ್ಳದೆ, ಜಾಹೀರಾತುದಾರರಿಗೂ ಬೇಸರವಾಗದಂತೆ ಸಮಯಯವನ್ನು ಹೊಂದಿಸಿಕೊಂಡು ವಿವಿಧ ಟೈಮ್‌ ಸ್ಲಾಟ್‌ಗಳಲ್ಲಿ ಅವುಗಳ ಪ್ರಸಾರ ಮಾಡುವುದೇ ನಮಗೆ ದೊಡ್ಡ ಸವಾಲು. ಸಾಮಾನ್ಯವಾಗಿ ನಮ್ಮ ಕೇಂದ್ರದಲ್ಲಿ ಗಂಟೆಗೆ 10 ನಿಮಿಷಗಳಷ್ಟು ಸಮಯವನ್ನು ಜಾಹೀರಾತುಗಳಿಗೆ ಮೀಸಲಿಡುತ್ತೇವೆ. ಗಣೇಶೋತ್ಸವ ಸಮಯದಲ್ಲಿ ಈ ಮಿತಿ 13 ರಿಂದ- 14 ನಿಮಿಷಗಳವರೆಗೆ ಹೋಗುತ್ತದೆ.
-ಭಾನು ಪ್ರತಾಪ್‌ ಸಿಂಗ್‌, ಬಿಝಿನೆಸ್‌ ಹೆಡ್‌, ರೇಡಿಯೋ ಮಿರ್ಚಿ(ಕರ್ನಾಟಕ)

***

ಸೌಂಡ್‌ ಲೈಟ್ಸ್‌ ಆ್ಯಕ್ಷನ್‌!
ನಮ್ಮದು ಚಿಕ್ಕ ಅಂಗಡಿ. ಹೀಗಾಗಿ ಸಣ್ಣಪುಟ್ಟ ಸಮಾರಂಭಗಳಿಗಷ್ಟೇ ಧ್ವನಿವರ್ಧಕ, ಸೀರಿಯಲ್‌ ಸೆಟ್‌, ಲೈಟಿಂಗ್‌ ಅನ್ನು ಸಪ್ಲೆ„ ಮಾಡುತ್ತೇನೆ. ಹಬ್ಬದ ಸಮಯವೇ ನನಗೆ ವ್ಯಾಪಾರಕ್ಕೆ ಒಳ್ಳೆಯ ಕಾಲ ಅಂತ ಅನ್ನಬಹುದು. ಅದರಲ್ಲೂ ಗಣೇಶೋತ್ಸವದ ಸಮಯದಲ್ಲಿ ತಿಂಗಳುಗಳ ಕಾಲ ಆರ್ಡರ್‌ಗಳು ಬರುತ್ತವೆ. ಚಿಕ್ಕ ಪುಟ್ಟ ಆರ್ಡರ್‌ ಆದರೂ ನನ್ನ ಜೀವನ ಅದರಿಂದಲೇ ಸಾಗುತ್ತಿದೆ. ಮೈದಾನಗಳಲ್ಲಿ ಪೆಂಡಾಲುಗಳನ್ನೆಬ್ಬಿಸಿ, ಆಳೆತ್ತರದ ಗಣಪತಿಯನ್ನು ಕೂರಿಸಿ, ಸಿನಿಮಾ ತಾರೆಯರನ್ನು ಕರೆಸಿ ಧಾಮ್‌ ಧೂಮ್‌ ಆಗಿ ಗಣೇಶೋತ್ಸವ ಆಯೋಜಿಸುತ್ತಾರಲ್ಲ, ಆ ಸಂಘಟನೆಗಳು ನನ್ನ ಗಿರಾಕಿಗಳಲ್ಲ. ನನ್ನ ಗಿರಾಕಿಗಳೇನೇ ಇದ್ದರೂ ರಸ್ತೆ ಬದಿ ಅಕ್ಕಪಕ್ಕದ ಮನೆಗಳಲ್ಲಿ ಚಂದಾ ಎತ್ತಿ ಪುಟ್ಟದಾಗಿ ಗಣಪತಿಯನ್ನು ಆಚರಿಸುತ್ತಾರಲ್ಲ; ಆ ಹುಡುಗರು, ಆಚರಿಸುವ ಗಣೇಶೋತ್ಸವದಿಂದಲೇ ನನ್ನ ಜೀವನ ಸಾಗುತ್ತಿದೆ. ಒಂದು ಆರ್ಡರ್‌ಗೆ 2,000ದಿಂದ 10,000ದ ತನಕ ಚಾರ್ಚ್‌ ಮಾಡುತ್ತೇನೆ. ಡೆಕೋರೇಷನ್‌, ಆರ್ಕೆಸ್ಟ್ರಾ ತಂಡ ಮುಂತಾದವನ್ನು ನೋಡಿಕೊಂಡು ರೇಟ್‌ ಫಿಕ್ಸ್‌ ಮಾಡುತ್ತೇನೆ. ಏನಿಲ್ಲವೆಂದರೂ ಒಂದು ತಿಂಗಳಲ್ಲಿ 50,000 ದಷ್ಟು ಬಿಝಿನೆಸ್‌ ಆಗುತ್ತದೆ.
-ಅಶೋಕ್‌, ಶ್ರೀ ಲೈಟ್ಸ್‌ ಅ್ಯಂಡ್‌ ಸೌಂಡ್ಸ್‌ ಮಾಲೀಕ, ಹಾಸನ

***

ಹೂವೇ ಹೂವೇ..
ಹಬ್ಬ ಕಳೆಗಟ್ಟುವುದೇ ಹೂವುಗಳ ಅಲಂಕಾರದಿಂದ. ಹೀಗಾಗಿ ಹೂಗಳ ಮಾರುಕಟ್ಟೆ ಯಾವುದೇ ಹಬ್ಬದ ಸಮಯದಲ್ಲಿ ಹಿಗ್ಗುವುದು, ಜೋರಾಗಿ ವ್ಯಾಪಾರ ನಡೆಯುವುದು ಸಹಜವೇ. ಅದರಲ್ಲೂ ಗಣೇಶ ಹಬ್ಬ ಎಂದರೆ ಹೂ ವ್ಯಾಪಾರಿಗಳಿಗೆ ಹೆಚ್ಚಿನ ಸಂತಸ. ಏಕೆಂದರೆ ಗಣೇಶ ಚತುರ್ಥಿ ಒಂದು ದಿನ ಬಂದು ಹೋಗುವ ಹಬ್ಬ ಅಲ್ಲವಲ್ಲ. ವಾರಗಟ್ಟಲೆ, ಕೆಲವೆಡೆ 10 ದಿನದಿಂದ ತಿಂಗಳ ಕಾಲವೂ ಆಚರಣೆ ನಡೆಯುವುದುಂಟು. ಅಂದರೆ ಪ್ರತಿದಿನವೂ ಗಣೇಶನಿಗೆ ಅಲಂಕಾರಕ್ಕೆ, ಪೂಜೆ- ಪುನಸ್ಕಾರ ಹಾಗೂ ಇತರೆ ಧಾರ್ಮಿಕ ಚಟುವಟಿಕೆಗಳಿಗೆ ಅಂತ ಹೂವು ಬೇಕೇ ಬೇಕಾಗುತ್ತದೆ. ಹೀಗಾಗಿ ಗಣೇಶೋತ್ಸವಕ್ಕೆ ಹೂ ವ್ಯಾಪಾರಿಗಳು ವಿಶೇಷ ತಯಾರಿ ಮಾಡಿಕೊಳ್ಳುತ್ತಾರೆ. ವರ್ಷದ ಮೂರು ನಾಲ್ಕು ತಿಂಗಳಲ್ಲಿ ಆಗುವ ಸಂಪಾದನೆ, ಗಣೇಶ ಹಬ್ಬದ ಸೀಜನ್‌ನಲ್ಲಿ ಆಗಿಬಿಡುವುದುಂಟು. ಕೆಲಸ ಖುಷಿ ಕೊಟ್ಟಿದೆ ಅನಿಸುವುದು ಈ ಹಬ್ಬದ ಸಂದರ್ಭದಲ್ಲೇ… ಮಾರುಕಟ್ಟೆಯಲ್ಲಿ ಸ್ಪರ್ಧೆಯೂ ಇದೆ, ಇಲ್ಲವೆಂದಲ್ಲ. ಏಕೆಂದರೆ ಈಗ ಮೈಸೂರನ್ನು ಉದಾಹರಣೆಯನ್ನಾಗಿ ತೆಗೆದುಕೊಂಡರೆ, ಇತ್ತೀಚಿಗೆ ಕೆಲ ಕಾರ್ಖಾನೆಗಳು ಬಂದ್‌ ಆದವು. ಅಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರೆಲ್ಲರೂ ಈಗ ಕೈಗಾಡಿ ಇಟ್ಟುಕೊಂಡು ಹೂವು, ತರಕಾರಿ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಅವರು ಮಾರುಕಟ್ಟೆಯಲ್ಲಿ ನಿಗದಿಯಾಗಿರುವ ದರಕ್ಕಿಂತಲೂ ಕಡಿಮೆ ಹಣದಲ್ಲಿ ಹೂ, ತರಕಾರಿಯನ್ನು ಮನೆ ಮನೆಗೆ ಒದಗಿಸುತ್ತಿದ್ದಾರೆ. ಹೀಗಾಗಿ ಕೆಲವರು ಮಾರುಕಟ್ಟೆಗೆ ಬರದೆಯೂ ಇರಬಹುದು.
-ಪೈಲ್ವಾನ್‌ ಮಹಾದೇವ, ದೇವರಾಜ ಅರಸು ಮಾರುಕಟ್ಟೆ ಬಾಡಿಗೆದಾರ ಸಂಘದ ಅಧ್ಯಕ್ಷ, ಮೈಸೂರು

***

ಪ್ರಾಜೆಕ್ಟ್ ಸಸ್ಯ ಗಣಪತಿ
ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಗಣೇಶೋತ್ಸವವನ್ನು ಹೇಗೆ ಆಚರಿಸಬಹುದು ಎಂದು ಯೋಚಿಸಿದಾಗ “ಸಸ್ಯ ಗಣಪತಿ’ಯ ಕಿಟ್‌ ಕೊಡುವ ಉಪಾಯ ಹೊಳೆಯಿತು. ಮಣ್ಣಿನಿಂದ ತಯಾರಾದ ಪುಟ್ಟ ಗಣಪತಿಯ ವಿಗ್ರಹದ ಒಳಗೆ ಸಸ್ಯದ ಬೀಜವನ್ನು ಹುದುಗಿಸುತ್ತೇವೆ. ಗಣಪತಿಯನ್ನು ಕೆರೆಗಳಲ್ಲಿ ವಿಸರ್ಜಿಸುವಂತೆ ಇದನ್ನು ವಿಸರ್ಜಿಸಲು ಪುಟ್ಟ ಪಾಟ್‌ಅನ್ನು ಕೊಡುತ್ತೇವೆ. ಅದರೊಳಗೆ ನೀರು ಹಾಕಿ, ಕಿಟ್‌ನಲ್ಲಿರುವ ಸೂಚನೆಗಳನ್ನು ಪಾಲಿಸಿ ವಿಗ್ರಹವನ್ನು ಒದರೊಳಗೆ ಮುಳುಗಿಸಿದರೆ ಆ ಪಾಟ್‌ಅಲ್ಲೇ ಸಸ್ಯ ಚಿಗುರುತ್ತದೆ. ಗಣೇಶೋತ್ಸವವನ್ನು ಅರ್ಥಪೂರ್ಣವನ್ನಾಗಿ ಆಚರಿಸುವುದು ಇದರಿಂದ ಸಾಧ್ಯ ಎನ್ನುವುದು ನಮ್ಮ ಯೋಚನೆ. ಪ್ರತಿ ವರ್ಷ ಸುಮಾರು 500 ಕಿಟ್‌ಗಳನ್ನು ತಯಾರು ಮಾಡಿಟ್ಟುಕೊಳ್ಳುತ್ತೇವೆ. ಫೋನ್‌ ಮೂಲಕ, ಫೇಸ್‌ಬುಕ್‌ನಲ್ಲಿ ನಮಗೆ ಆರ್ಡರ್‌ ಬರುತ್ತದೆ. ಗ್ರಾಹಕರು ವಿಳಾಸ ಪಡೆದು ಅವರ ಮನೆಗೆ ಸಸ್ಯ ಗಣಪತಿಯ ಕಿಟ್‌ಅನ್ನು ಕೊರಿಯರ್‌ ಮಾಡಿಬಿಡುತ್ತೇವೆ. ಒಂದು ಕಿಟ್‌ನ ಬೆಲೆ 1500 ರು. ಒಂದು ಕಿಟ್‌ಗೆ ನಮಗೆ ತಗುಲುವ ವೆಚ್ಚ ಸುಮಾರು 1200 ರು. ಪ್ರತಿ ವರ್ಷವೂ 500 ಕಿಟ್‌ಗಳು ಖಾಲಿಯಾಗುತ್ತವೆ. ಈ ಬಾರಿಯೂ 500 ಆರ್ಡರ್‌ಗಳು ಬಂದಿವೆ. ನಾನು, ಸ್ನೇಹಿತ ಮತ್ತು ಮೂರು ಮಂದಿ ಕೆಲಸಗಾರರು ಈ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಾರೆ. ನಮಗೆ ಪ್ರತಿ ವರ್ಷ 500ಕ್ಕಿಂತ ಹೆಚ್ಚು ಆರ್ಡರ್‌ಗಳು ಬರುತ್ತವೆಯಾದರೂ ನಾವು ಹೆಚ್ಚು ಆರ್ಡರ್‌ಗಳನ್ನು ಸ್ವೀಕರಿಸುವುದಿಲ್ಲ. ಇದನ್ನು ಪಾರ್ಟ್‌ ಟೈಮ್‌ ಥರ ಮಾಡಿಕೊಂಡು ಬಂದಿರುವುದರಿಂದ ಹೆಚ್ಚಿನ ಸಮಯ ನೀಡಲಾಗುತ್ತಿಲ್ಲ
-ಪುನೀತ್‌, ಇ- ಕಾಮರ್ಸ್‌ ಉದ್ಯೋಗಿ ಬೆಂಗಳೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ರೈತರಿಗೂ ಪೆನ್ಷನ್ ರೂಪದಲ್ಲಿ ಒಂದಷ್ಟು ಹಣ ಸಿಗುವಂತೆ ಮಾಡುವ ಅಪರೂಪದ ಯೊಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಇದರಿಂದ ರೈತರಿಗೆ ಏನೇನು ಉಪಯೋಗಗಳಿವೆ ಎಂಬುದರ...

  • ಪ್ರಗತಿಪರ ಕೃಷಿಕ ವೆಂಕಟೇಶಪ್ಪ ಅವರು ಅನುಸರಿಸುತ್ತಿರುವ "ಗುಣಿರಾಗಿ ಪದ್ಧತಿ'ಯಲ್ಲಿ ಬಹಳಷ್ಟು ವಿಶೇಷತೆ ಇದೆ. ಇದು ಮಣ್ಣು- ನೀರು ಸೂಕ್ತ ನಿರ್ವಹಣೆಗೆ ಸಹಾಯಕ ಎಂಬ...

  • ಪ್ಲಾಸ್ಟಿಕ್‌ ನಿಷೇಧ, ಪರಿಸರಕ್ಕೆ ವರದಾನ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಜನಸಾಮಾನ್ಯನಿಗಂತೂ ಇದರಿಂದ ಗೊಂದಲವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ....

  • ಮಳೆಗಾಲದಲ್ಲಿ ನೆಲೆ ಕಳೆದುಕೊಂಡ ಪ್ರಾಣಿಗಳು, ಹುಳ ಹುಪ್ಪಟೆಗಳು ಮನೆ ಹೊಕ್ಕಲು ಪ್ರಯತ್ನಿಸಬಹುದು. ಇವುಗಳಲ್ಲಿ ವಿಷಜಂತುಗಳೂ ಇರುವುದರಿಂದ, ನಾವು ವಿಶೇಷ ಕಾಳಜಿ...

  • ಕೆಲವು ಹೋಟೆಲ್‌ಗ‌ಳು ವಿಶೇಷ ತಿಂಡಿ, ಊಟದಿಂದ ವಿಶೇಷವಾಗಿ ಗುರುತಿಸಿಕೊಂಡಿರುತ್ತವೆ. ಆದರೆ, ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿರುವ "ಲಕ್ಷ್ಮೀ ಹೋಟೆಲ್‌'...

ಹೊಸ ಸೇರ್ಪಡೆ