ಚಿನ್ನ ಚಿನ್ನ ಆಸೆ

Team Udayavani, May 20, 2019, 6:00 AM IST

ಮೊದಲ ಅವಧಿಯಲ್ಲಿ ಚಿನ್ನದ ವಹಿವಾಟಲ್ಲಿ ಚೇತರಿಕೆ ಕಂಡಿರುವುದರಿಂದ ಮುಂಬರುವ ಹಬ್ಬ ಹರಿದಿನ, ಮದುವೆ- ಮುಂಜಿಗಳು ಚಿನ್ನದ ಮಾರುಕಟ್ಟೆಯಲ್ಲಿ ಮನ್ವಂತರ ಸೃಷ್ಟಿಸಬಹುದು ಅನ್ನೋ ನಿರೀಕ್ಷೆ ಇದೆ. ಆದರೆ, ಚಿನ್ನದ ಮೇಲೆ ಬೀಳುತ್ತಿರುವ ತೆರಿಗೆಗಳು, + ಮೇಕಿಂಗ್‌ ಚಾರ್ಜ್‌ಗಳಿಂದ ಗ್ರಾಹಕರ ಆಸೆಯ ಗಂಟಲಿಗೆ ಇಕ್ಕಳ ಇಟ್ಟಂತಾಗಿದೆ.

ಏಪ್ರಿಲ್‌ ಮುಗಿದಿದೆ. ಮೇ ಮಧ್ಯಭಾಗ ದಾಟಿದೆ. ಒಂದಷ್ಟು ಮೋಡಗಳು ಕೂಡಿಕೊಂಡು ಮಳೆ ತರಿಸಿದೆ. ಹೀಗಾಗಿ, ಚಿನ್ನದ ಮಾರಾಟಗಾರರ ಕಂಗಳು ಗರಿಗೆದರಿವೆ. ಹಾಗೆ ನೋಡಿದರೆ, ಚಿನ್ನಕ್ಕೆ ಶುಕ್ರದೆಸೆ ಶುರುವಾಗುವುದೇ ಅಕ್ಷಯ ತೃತೀಯ ಹಬ್ಬದಿಂದ. ಆನಂತರ ದಾರಿಗುಂಟ ಸಿಗುವ ಹಬ್ಬಗಳ ಸಾಲು, ಜೂನ್‌ ನಂತರ ಮದುವೆಗಳ ಸೀಜನ್‌ ಈ ಸಲ ಚಿನ್ನದ ಬಗೆಗೆ ಇನ್ನಷ್ಟು ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟು ಹಾಕುತ್ತಿದೆ.

ಮಳೆಗೂ ಚಿನ್ನಕ್ಕೂ ಸಂಬಂಧ ಇದೆಯಾ? ಹೀಗಂತ ಕೇಳಬೇಡಿ. ಸಂಬಂಧ ಇದೆ. ಮಳೆ ಬಂದರೆ ಕೃಷಿ ಗರಿಗೆದರುತ್ತದೆ, ಅದೇ ಕಾರಣದಿಂದ ಜನರ ಕೈತುಂಬ ಹಣ ಓಡಾಡುತ್ತದೆ. ಆಗ, ರೈತಾಪಿಗಳಿಗೆ ಬಂಗಾರದ ಆಸೆ ಹುಟ್ಟಿ, ವ್ಯಾಪಾರ ಜೋರಾಗುತ್ತದೆ. ಇದು ನಿಜವಾದ ಲೆಕ್ಕ. ಹಾಗೆ ನೋಡಿದರೆ, ನಮ್ಮ ಇಡೀ ಚಿನ್ನದ ಮಾರ್ಕೆಟ್‌ನಲ್ಲಿ ಹೆಚ್ಚೆಚ್ಚು ಬಂಗಾರ ಕೊಳ್ಳುವುದು ಗ್ರಾಮೀಣ ಪ್ರದೇಶದ ಮಂದಿಯೇ. ಅರ್ಥಾತ್‌ ರೈತರು. ಇವರಿಗಿನ್ನೂ ಚಿನ್ನದೊಂದಿಗಿನ ಭಾವನಾತ್ಮಕ ನಂಟು ಕಳೆದಿಲ್ಲ. ಎಷ್ಟೋ ಜನ ಚಿನ್ನದ ಒಡವೆಗಳನ್ನು ಕಷ್ಟಕಾಲಕ್ಕೆ ಆಗುವ ನೆಂಟ ಎಂದೇ ಭಾವಿಸಿದ್ದಾರೆ. ಆದರೆ, ನಗರ ಪ್ರದೇಶದಲ್ಲಿನ ಮಂದಿಗೆ ಒಡವೆ ಎಂಬುದು ಕೇವಲ ಪ್ಯಾಷನ್‌. ಹೂಡಿಕೆಯಲ್ಲ. ಹೂಡಿಕೆ ಮಾಡಬೇಕಾದರೆ ಅವರೆಲ್ಲ ಭದ್ರತೆ ದೃಷ್ಟಿಯಿಂದ ಡಿಜಿಟಲ್‌ ಚಿನ್ನವನ್ನು ಕೊಳ್ಳುತ್ತಾರೆ.

ಇದು ಲಾಭವೇ ಅನ್ನೋ ಪ್ರಶ್ನೆ ಇದೆ.
ಹೇಗೆಂದರೆ, 24 ಕ್ಯಾರಟ್‌ನ ಒಂದು ಗ್ರಾಂ. ಗಟ್ಟಿ ಚಿನ್ನಕ್ಕೆ ಮೂರು ಸಾವಿರ ರೂ. ಇದೆ ಅಂತಿಟ್ಟುಕೊಳ್ಳಿ. ಇದಕ್ಕೆ ಶೇ.3, 4 ರಷ್ಟು ತೆರಿಗೆ, ಇತರೆ ಚಾರ್ಜಸ್‌ಗಳನ್ನು ಸೇರಿಸಿದರೆ, ಹೆಚ್ಚು ಕಮ್ಮಿ ಗ್ರಾಂಗೆ. 200ರೂ.ನಂತೆ 3,200ರೂ. ಬೆಲೆ ಇರೋದು. ಆದರೆ, ಹೂಡಿಕೆ ದಾರನಿಗೆ 200ರೂ. ಜಾಸ್ತಿಯಾದರೆ ಅಸಲು ಮಾತ್ರ ಬರುತ್ತಿತ್ತು. 3, 200+ ಹೆಚ್ಚಾದಂತೆ ಲಾಭದ ಮುಖ ನೋಡಬಹುದು. ಹೀಗೆ ಲೆಕ್ಕ ಮಾಡಿದರೆ, ಬಂಗಾರದ ಬೆಲೆ 200ರೂ, ಜಾಸ್ತಿಯಾಗಲು ಕನಿಷ್ಠ. ಮೂರು ನಾಲ್ಕು ತಿಂಗಳು ಬೇಕು. ಎಷ್ಟೋ ಸಲ ವರ್ಷಗಳ ಕಾಲ ಹಿಡಿದಿರುವುದೂ ಉಂಟು. ಹೀಗಾಗಿ, ತೀರಾ ಲಾಭ ಸಿಗುತ್ತದೆ ಎಂದು ಹೇಳಲು ಆಗದು. ಅದೇ ರೀತಿ, ನೀವೇ ಏನಾದರೂ ಆಭರಣದ ಮೇಲೆ ಹೂಡಿಕೆ ಮಾಡಿದರೆ- ಜಿಎಸ್‌ಟಿ ಶೇ.3, ಮೇಕಿಂಜ್‌ ಜಿಎಸ್‌ಟಿ ಶೇ.5ರಷ್ಟು ಸೇರಿಸಿದರೆ ಒಟ್ಟು ಶೇ.8ರಷ್ಟು ಹಣವನ್ನು ತೆರಿಗೆ ರೂಪದಲ್ಲಿ ಕಟ್ಟಬೇಕು. ಅಂದರೆ, ಗ್ರಾಂಗೆ ಮೂರು ಸಾವಿರ ಇದೆ ಅಂತಾದರೆ, ಹೆಚ್ಚುವರಿಗೆ 240ರೂ. ಹೂಡಿಕೆ ಮಾಡಬೇಕು. ಗ್ರಾಂ.ಗೆ 240ರೂ. ಸಿಗಬೇಕಾದರೆ ಇವತ್ತಿನ ಪರಿಸ್ಥಿತಿಯಲ್ಲಿ ವರ್ಷಗಟ್ಟಲೆ ಕಾಯದೆ ಬೇರೆ ವಿಧಿಯೇ ಇಲ್ಲ. ಹಾಗೆಯೇ, ಒಂದು ಪಕ್ಷ ನೀವು ಕೊಳ್ಳುವ ಬಂಗಾರ ವಿದೇಶದಿಂದ ಆಮದಾಗಿದ್ದರೆ. ಅದರ ಮೇಲೆ ಶೇ.10ರಷ್ಟು ಜಿಎಸ್‌ಟಿ ಸೇರಿರುತ್ತದೆ. ಕಾರ್ಡ್‌ನಲ್ಲಿ ಹಣ ಕಟ್ಟುವುದಿದ್ದರೆ ಶೇ. 2ರಷ್ಟು ಸರ್‌ ಚಾರ್ಜ್‌ ಕೂಡ ಇದೆ. ಆಗ ಹೂಡಿಕೆಯ ಮೊತ್ತ ಇನ್ನೂ ಏರುತ್ತದೆ. ಹೀಗಾಗಿ ನಿಜಕ್ಕೂ ಚಿನ್ನ ಹೂಡಿಕೆಯ ವಸ್ತುವೇ? ಅನ್ನೋ ಪ್ರಶ್ನೆ ಎದ್ದಿದೆ.

ನಿಜಹೇಳಬೇಕೆಂದರೆ, ಈಗ ಚಿನ್ನ ಹೂಡಿಕೆ ವಸ್ತುವಾಗಿಲ್ಲ. ಈ ಮೊದಲು ಚಿನ್ನವನ್ನು ಮೋಹದಿಂದ ಕೊಳ್ಳುತ್ತಿದ್ದರು. ಆನ್‌ಲೈನ್‌ ಹೂಡಿಕೆ ಬಂದಮೇಲಂತೂ, ಅದಕ್ಕೆ ಟ್ಯಾಕ್ಸ್‌ಗಳು ಬಿದ್ದ ಮೇಲಂತೂ ಚಿನ್ನ ಲಾಭದ ದಾರಿ ಸವೆಯುತ್ತಲೇ ಇಲ್ಲ. ನಾಲ್ಕೈದು ವರ್ಷದ ಹಿಂದೆ, ಚಿನ್ನವು ವಾರ್ಷಿಕ ಶೇ.8-10ರಷ್ಟು ರಿಟರ್ನ್ ತಂದು ಕೊಟ್ಟದ್ದು ಇದೆ. ಮೂರು ನಾಲ್ಕ ವರ್ಷಗಳಲ್ಲಿ ಶೇ. 20,30ರಷ್ಟು ಲಾಭ ಕೊಟ್ಟಿದ್ದನ್ನು ಯಾರೂ ಮರೆಯುವ ಹಂಗಿಲ್ಲ. ಈಗ ಅದ್ಯಾಕೋ ಏರಿದ ಬೆಲೆ ಇಳಿಯಲು, ಇಳಿಯುವ ಬೆಲೆ ಏರಲು ಪರದಾಡುತ್ತಿರುವಂತಿದೆ. ಹೀಗಾಗಿ, ಚಿನ್ನದ ಮೇಲಿನ ಹೂಡಿಕೆ ಎಲ್ಲವೂ ಶೇರು, ರಿಯಲ್‌ ಎಸ್ಟೇಟಿನ ಕಡೆ ತಿರುಗಿಬಿಟ್ಟಿದೆ.

ಚಿನ್ನದ ಹೂಡಿಕೆ ಅಂದರೆ ಕೇವಲ ಚಿನ್ನದ ಬಾರ್‌, ಬಿಸ್ಕೇಟ್‌, ಇಟಿಎಫ್ನಂಥವು ಮಾತ್ರ ಆಗಿರಲಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಬಂಗಾರದ ಆಭರಣಗಳೂ ಹೂಡಿಕೆಯ ಒಂದು ಭಾಗವೇ ಆಗಿಬಿಟ್ಟಿದ್ದವು. ಆದರೆ, ಈಗ ಆಭರಣ ಕೊಳ್ಳುವಿಕೆಗೂ ದೊಡ್ಡ ಪೆಟ್ಟು ಬಿದ್ದಿದೆ.

ಈ ವರ್ಷ ಚಿನ್ನಕ್ಕೆ ಒಳ್ಳೆ ಭವಿಷ್ಯ ಇದೆ ಅಂತ ವರ್ಲ್ಡ್ ಗೋಲ್ಡ್‌ ಕೌನ್ಸಿಲ್‌ ಹವಾಮಾನದ ಮುನ್ಸೂಚನೆ ನೀಡಿದೆ. ಜೊತೆಗೆ ಜಾಗತಿಕ ಚಿನ್ನದ ಡಿಮ್ಯಾಂಡ್‌ 750ರಿಂದ 850 ಟನ್‌ ಆಗಲಿದೆ. ಇದರಲ್ಲಿ ಈ ಜನವರಿ ಮತ್ತು ಮಾರ್ಚ್‌ ತಿಂಗಳಲ್ಲಿ 159 ಟನ್‌ ಡಿಮ್ಯಾಂಡ್‌ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 5ರಷ್ಟು ಈಗಾಗಲೇ ಏರಿಕೆಯಾಗಿದೆ ಅನ್ನೋದು ಕೌನ್ಸಿಲ್‌ ನೀಡಿರುವ ಅಂಕಿ ಅಂಶ ಚೇತೋಹಾರಿಯಾಗಿದೆ. ಇದಕ್ಕಿಂತ ಮುಖ್ಯವಾಗಿ ಡಾಲರ್‌ ಎದುರು ರುಪಾಯಿ ಅಲುಗಾಡದೇ ಇದ್ದದ್ದು, ಇದೇ ಸಮಯದಲ್ಲಿ ಬಂಗಾರದ ಬೆಲೆ ಸಣ್ಣಗೆ ಇಳಿದದ್ದು, ಕೊಳ್ಳುವವರ ಮನದಲ್ಲಿ ಆಸೆಯ ಬುಗ್ಗೆ ಹುಟ್ಟಿಸಿದೆಯಂತೆ.

ಈಗಾಗಲೇ ಚಿನ್ನ ಮಾರುವ ಒಂದಷ್ಟು ಬ್ಯಾಂಕ್‌ಗಳು ಬೆನ್ನು ತಟ್ಟಿಕೊಳ್ಳುತ್ತಿವೆ. ಸೆಂಟ್ರಲ್‌ ಬ್ಯಾಂಕ್‌, ಈ ಮೊದಲು ಅವಧಿಗೆ 40.3 ಟನ್‌ ಚಿನ್ನವನ್ನು ಮಾರಾಟ ಮಾಡಿದೆಯಂತೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ. 68ರಷ್ಟು ಹೆಚ್ಚು. ಚಿನ್ನದ ಬಾರ್‌, ಕಾಯಿನ್‌ಗಳ ಮೇಲೆ ಹೂಡಿಕೆಯಲ್ಲಿ ಶೇ.1ರಷ್ಟು ಕುಗ್ಗಿದೆಯಂತೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಮಾರ್ಚ್‌ ತಿಂಗಳ ಒಡವೆ ಚಿನ್ನದ ಡಿಮ್ಯಾಂಡ್‌ ಶೇ. 5ರಷ್ಟು ಹೆಚ್ಚಿದೆ. ಅಂದರೆ ಹೆಚ್ಚುಕಮ್ಮಿ 27.070 ಕೋಟಿಯಷ್ಟು ಚಿನ್ನ ಮಾರಾಟವಾಗಿದೆ. ಈ ಮಾಸದ ಚಿನ್ನದ ಡಿಮ್ಯಾಂಡ್‌ 32.3 ಟನ್‌ ಇದ್ದದ್ದು, 33.6 ಟನ್‌ಗೆ ಏರಿದೆ. ಇವೆಲ್ಲದರ ಜೊತೆ ಭಾರತದ ರೀಸೈಕಲ್ಡ್‌ ಗೋಲ್ಡ್‌ನಲ್ಲಿ ಶೇ. 16ರಷ್ಟು ಏರಿಕೆ ಕಂಡಿದೆ.

ಏನೇ ಹೇಳಿದರೂ, ಏನೇ ಮಾಡಿದರೂ ಗ್ರಾಹಕರು ಮೊದಲಷ್ಟು ಸುಲಭವಾಗಿ ಚಿನ್ನವನ್ನು ಕೊಳ್ಳಲು ಆಗುತ್ತಿಲ್ಲ ಅನ್ನೋದಂತೂ ಸತ್ಯ.

ಏರಿಕೆಯಲ್ಲಿ ತಿಣುಕಾಟ
ಕಳೆದ ವರ್ಷ ಮೇ. 18ತಾರೀಖೀಗೆ 24 ಕ್ಯಾರಟ್‌ ಚಿನ್ನದ ಬೆಲೆ 3,260 ರೂ.ಇತ್ತು. ನವೆಂಬರ್‌ 18ರ ಹೊತ್ತಿಗೆ ಗ್ರಾಂ.ಗೆ 3,350ರೂ. ಅಂದರೆ, 90ರೂ. ಜರುಗಲು 6 ತಿಂಗಳುಗಳ ಕಾಲ ಹಿಡಿದಿದೆ. ಜನವರಿ 24, 2019ಕ್ಕೆ ಗ್ರಾಂ. ಚಿನ್ನದ ಬೆಲೆ 3,455ರೂ. ಏರಿದಾಗ ಸಂಭ್ರಮ. ಅಂದರೆ, 195 ರೂ. ಜಿಗಿಯಲು ತೆಗೆದು ಕೊಂಡದ್ದು ಬರೋಬ್ಬರಿ 9ತಿಂಗಳು. ಫೆಬ್ರವರಿ 19ರ ಒಂದೇ ದಿನ 3, 540ರೂ. ಏರಿಕೆ ಕಂಡಿತು. ಅಂದರೆ 280ರೂ. ಜಾಸ್ತಿಯಾಗಲು 10 ತಿಂಗಳ ಬೇಕಾಯಿತು. ಈಗ ಚಿನ್ನ ಮಾರಲು ಹೋದರೆ, ಕಳೆದ ವರ್ಷ ಮೇತಿಂಗಳಲ್ಲಿ ಹಾಕಿದ ಗ್ರಾಂ.ಗೆ 3,260ರೂ.ಮೊತ್ತ ವಾಪಸ್ಸು ಬಂದರೂ, ಕಟ್ಟಿದ ಟ್ಯಾಕ್ಸ್‌ ಮೊತ್ತ ಹಿಂತಿರುಗುವುದೂ ಅನುಮಾನ. ಇದೂ ಕೂಡ ಸೆನ್ಸೆಕ್ಸ್‌ ರೀತಿ. ಏರಿದಾಗ ಮಾರಿಬಿಡಬೇಕು. ಇಳಿದಾ ಕೊಂಡಿಟ್ಟು ಬಿಡಬೇಕು. ಕಳೆದ ಮೂರು ತಿಂಗಳ ಸರಾಸರಿ ಚಿನ್ನದ ಮೌಲ್ಯ ಏರಿಕೆ ನೋಡಿದರೆ ಆಸೆಯ ಕಂಗಳಿಗೆ ನೀರು ತಣ್ಣೀರು ಎರಚಿದಂತೆ. ಏಕೆಂದರೆ, ಎಲ್ಲವೂ ಮೈನಸ್ಸೇ. ಫೆಬ್ರವರಿ ತಿಂಗಳಾಂತ್ಯ ಗ್ರಾಂ ಚಿನ್ನದ ಬೆಲೆಯಲ್ಲಿ -1.32ರಷ್ಟು ಕುಸಿದಿದೆ, ಮಾರ್ಚ್‌ನಲ್ಲಿ -6.81ರಷ್ಟು, ಏಪ್ರಿಲ್‌ನಲ್ಲಿ -1.23ರಷ್ಟು ತಳ ಕಂಡಿದೆ. ಅಂದರೆ ಹೂಡಿಕೆ ಮಾಡಿದ ಹಣಕ್ಕಿಂತ ಕಡಿಮೆಯಾಗಿದೆ. ಹೀಗೆ ಗ್ರಾಂ.ಗೆ ನೂರು ರೂ. ಏರಲು ತಿಣುಕಾಡುತ್ತಿರುವ, ಅದರ ಮೇಲೆ ತೆರಿಗೆಯ ಭಾರವನ್ನು ಹೊತ್ತು ಕೊಂಡಿರುವ ಚಿನ್ನ, ಈಗ ಹೂಡಿಕೆ ವಸ್ತುವಾಗಿ ಕಾಣುತ್ತಿಲ್ಲ.

ಭವಿಷ್ಯದ ಮಾರ್ಕೆಟ್‌ ಚೆನ್ನಾಗಿದೆ
ಫೆಬ್ರವರಿ, ಮಾರ್ಚ್‌ ತಿಂಗಳ ಎಂದರೆ ಬಂಗಾರದ ವಹಿವಾಟಿಗೆ ಶಾಪ. ಪರೀಕ್ಷೆ, ಅದರ ಪೂರ್ವ ಸಿದ್ಧತೆ ಎಲ್ಲವೂ ತಲೆ ನೋವೇ. ಈ ಸಂದರ್ಭದಲ್ಲಿ ಕೃಷಿ ಚಟುವಟಿಕೆಯಾಗಲೀ, ಮದುವೆ ಮುಂಜಿಗಳಂಥ ಸಂಭ್ರಮಗಳಾಗಲಿ ಇರುವುದಿಲ್ಲ. ಏಪ್ರಿಲ್‌ ತಿಂಗಳು ಪರವಾಗಿಲ್ಲ, ಮೇ, ಜೂನ್‌ನಿಂದ ಹಬ್ಬ, ಸಮಾರಂಭಗಳ ಸೀಸನ್‌ ಶುರು. ಹಾಗಾಗಿ, ಈ ಸಲ ಕಳೆದ ವರ್ಷಕ್ಕೆ ಹೋಲಿಸಿದರೆ ಮಾರ್ಚ್‌ನಲ್ಲಿ ಶೇ. 13ರಷ್ಟು ಚಿನ್ನದ ಮಾರಾಟ ಜಂಪ್‌ ಆಗಿದೆ. ಅಂದರೆ, ಕಳೆದ ವರ್ಷ ಈ ಹೊತ್ತಿಗೆ 41,610 ಟನ್‌ ಮಾರಾಟವಾಗಿತ್ತಂತೆ. ಈ ಸಾರಿ 47,010 ಟನ್‌ ಮಾರಾಟವಾಗಿದೆ.

ಕಟ್ಟೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ