ಹೀಟ್‌ ಪ್ರೂಫ್ ಮನೆ! ಬೇಸಗೆಯಲ್ಲೂ ಬಿಸಿ ತಟ್ಟದಿರಲಿ

Team Udayavani, Oct 21, 2019, 4:35 AM IST

ಹಿಂದೆ ರಾಜರು, ಬೇಸಿಗೆ ಕಾಲದ ಅರಮನೆ, ಚಳಿಗಾಲದ ಅರಮನೆ ಹೀಗೆ ಕಾಲಕ್ಕೆ ತಕ್ಕಂತೆ ವಾಸಸ್ಥಳಗಳನ್ನು ಹೊಂದಿರುತ್ತಿದ್ದರು. ಆ ಸೌಕರ್ಯ ನಮಗೆಲ್ಲಿ ಬರಬೇಕು?! ಹೀಗಾಗಿ ಮನೆ ಕಟ್ಟಿಸುವಾಗಲೇ ಋತುಮಾನ ಬದಲಾವಣೆಯನ್ನೂ ಗಮನದಲ್ಲಿ ಇರಿಸಿಕೊಂಡರೆ ಹಲವು ಉಪಯೋಗಗಳಿವೆ.

ಆಯಾ ಕಾಲಕ್ಕೆ ತಕ್ಕಂತೆ ನಮ್ಮ ಬಟ್ಟೆಗಳನ್ನು ಬದಲಾಯಿಸುವಂತೆ ಮನೆಗಳನ್ನು ಬದಲಾಯಿಸಲು ಆಗುವುದಿಲ್ಲ! ಬೇಸಗೆಕಾಲದಲ್ಲಿ ಒಂದಷ್ಟು ಸೆಕೆ ಇರುತ್ತದೆ, ಚಳಿಗಾಲದಲ್ಲಿ ಮನೆಯೊಳಗೆ ಗಡಗಡ ನಡುಗುವಷ್ಟು ಚಳಿ ಇಲ್ಲದಿದ್ದರೂ ತಣ್ಣಗಂತೂ ಇರುತ್ತದೆ. ಇನ್ನು ಮಳೆಗಾಲದಲ್ಲಿ ತೇವಾಂಶ ವಿಪರೀತವಾಗಿ ಬೆವರುವಂತಿದ್ದರೂ, ಬಟ್ಟೆಬರೆ ಒಣಗುವುದೇ ಇಲ್ಲ! ಈ ಎಲ್ಲದರ ಹಿಂದೆ ಸೂರ್ಯನ ಶಾಖದ ಕೈವಾಡವಿದೆ. ಇದರಿಂದಾಗುವ ತಾಪಮಾನಗಳ ವೈಪರೀತ್ಯದ ಬಗ್ಗೆ ಒಂದಷ್ಟು ಮಾಹಿತಿ ಇದ್ದರೆ, ನಮ್ಮ ಮನೆಗಳ ವಿನ್ಯಾಸ ಮಾಡುವುದರಲ್ಲಿ ಬದಲಾವಣೆಗಳಾಗುವುದರ ಜೊತೆಗೆ ಅನಗತ್ಯವಾದ ಫ್ಯಾನ್‌ ಹಾಗೂ ಹೀಟರ್‌ಗಳ ಬಳಕೆಯನ್ನು ಕಡಿಮೆ ಮಾಡಬಹುದು. ಋತುಗಳ ಬದಲಾವಣೆಯ ಹಿಂದೆ ಸೂರ್ಯನ ಸುತ್ತ ಸುತ್ತುವ ಭೂಮಿಯ ಮುಖದ ಮೇಲ್ಮೆ„ಯ ಶಾಖದ ಶೇಖರಣೆ ಅಥವಾ ಕಳೆದುಕೊಳ್ಳುವುದರ ಲೆಕ್ಕಾಚಾರ ಇದ್ದರೆ, ನಾವು ವಾಸಿಸುವ ಮನೆಗಳ ಒಳಾಂಗಣದ ತಾಪಮಾನ ಕೂಡ ಇದೇ ರೀತಿಯಲ್ಲಿ ಕೆಲಕಾಲ ತಂಪಾಗಿಯೂ ಮಿಕ್ಕ ಕಾಲದಲ್ಲಿ ಬೆಚ್ಚಗೆ ಇಲ್ಲವೇ ಸೆಕೆ ಎನ್ನುವಂತಿರುತ್ತದೆ.

ಸೂರ್ಯ ಕಿರಣಗಳು ತಾಗಿದರೆ…
ಕಂದು ಬಣ್ಣದ ತರಿತರಿ ಗ್ರಾನೈಟ್‌ ಕಲ್ಲು ಹಾಸುಗಳ ಮೇಲೆ ಬೇಸಗೆಕಾಲದಲ್ಲಿ ಬರಿಗಾಲಲ್ಲಿ ನಡೆದಾಡಲೂ ಕಷ್ಟ ಆಗುವಷ್ಟು ಬಿಸಿ ಏರಿರುತ್ತದೆ. ಇದನ್ನು ನೀವು ದೇವಸ್ಥಾನಗಳಲ್ಲಿ ಬರಿಗಾಲಲ್ಲಿ ನಡೆದಾಡುವಾಗ ಅನುಭವಿಸಿರಬಹುದು. ಇನ್ನು ಕರಿ ಡಾಂಬರು ರಸ್ತೆಯ ಮೇಲೆ ಬರಿಗಾಲಲ್ಲಿ ನಡೆದಾಡಿದರೆ, ಚರ್ಮ ಸುಟ್ಟು ಬೊಬ್ಬೆ ಬರುವ ಸಾಧ್ಯತೆ ಇರುತ್ತದೆ. ಆದರೆ, ಹಸಿರು ಹುಲ್ಲಿನ ಮೇಲೆ ಕುಳಿತರೆ ನಮಗೆ ಹೆಚ್ಚಿನ ಶಾಖದ ಅನುಭವ ಆಗುವುದಿಲ್ಲ! ಹಾಗೆಯೇ ನೆರಳಿನಲ್ಲಿ ಅದರಲ್ಲೂ ಮರಗಳ ಕೆಳಗೆ ತಂಪಾಗಿರುತ್ತದೆ. ಬಿರು ಬೇಸಿಗೆಯಲ್ಲೂ ಮನೆಯ ಒಳಗೆ ನೆಲಹಾಸಿನ ಮೇಲೆ ನಡೆದಾಡಿದರೆ ನಮಗೆ ತಂಪಾದ ಅನುಭವವೇ ಆಗುತ್ತದೆ! ಹೀಗೆ ಆಗಲು ಮುಖ್ಯ ಕಾರಣ ವಿವಿಧ ವಸ್ತುಗಳು ವಿವಿಧ ರೀತಿಯಲ್ಲಿ ಸೂರ್ಯನ ಶಾಖವನ್ನು ಹಿಡಿದಿಡಬಲ್ಲವು. ಟಾರ್‌ ರಸ್ತೆಯ ತಾಪಮಾನ ಸುಮಾರು 70 ಡಿಗ್ರಿ ಸೆಲಿÏಯಸ್‌ ಅಷ್ಟಿದ್ದರೆ, ಗ್ರಾನೈಟ್‌ ಸ್ಲಾ$Âಬ್‌ಗಳು ತಾಪಮಾನ ಸುಮಾರು ಐವತ್ತರಷ್ಟು ಇರುತ್ತದೆ. ಆರ್‌ ಸಿ ಸಿ ಸೂರಿನ ಮೇಲ್ಮೆ„ ತಾಪಮಾನ 60 ಡಿಗ್ರಿಯಷ್ಟಿದ್ದು ಅದರ ಕೆಳಗೆ ಅಂದರೆ ಸೂರಿನ ಅಡಿ ಸುಮಾರು 30ರ ಆಸುಪಾಸಿನಲ್ಲಿ ಇರುತ್ತದೆ. ನಮ್ಮ ದೇಹಕ್ಕೂ ತಾಗುವ ಸೂರ್ಯ ಕಿರಣಗಳು ಮೈಯ ತಾಪಮಾನವನ್ನು ವಿಪರೀತ ಎನ್ನುವಷ್ಟು ಎತ್ತರಿಸಬಹುದು. ಆದರೆ ನಾವು ಹಾಕಿಕೊಳ್ಳುವ ಬಟ್ಟೆಗಳು ಹಾಗೂ ಆವಿಯಾಗುವ ನೀರಿನ ಅಂಶ- ನಮ್ಮ ಗಾಳಿ ಹಾಗೂ ಬೆವರಿನಿಂದಾಗಿ ನಮ್ಮ ದೇಹ ತನ್ನ ಮಾಮೂಲಿ ತಾಪಮಾನ 37 ಡಿಗ್ರಿ ಸೆಲಿÒಯಸ್‌ ಕಾಯ್ದುಕೊಳ್ಳಲು ಸಮರ್ಥ ಆಗಿರುತ್ತದೆ.

ಮನೆಯನ್ನು ತಂಪಾಗಿಡುವುದು ಹೇಗೆ?
ನಮ್ಮ ದೇಶದಲ್ಲಿ, ಅದರಲ್ಲೂ ದಕ್ಷಿಣಭಾರತದಲ್ಲಿ ವರ್ಷದ ಬಹುಪಾಲು ತಿಂಗಳುಗಳಲ್ಲಿ ನಾವು ಸೂರ್ಯನ ತಾಪಮಾನದಿಂದ ರಕ್ಷಣೆ ಪಡೆಯುವುದೇ ಮುಖ್ಯವಾಗಿ ಬಿಡುತ್ತದೆ. ನಮ್ಮ ದೇಹದ ಒಳಭಾಗದ ತಾಪಮಾನಕ್ಕಿಂತ ಹೊರಮೈಯ ತಾಪಮಾನ ಅಂದರೆ ಚರ್ಮದ್ದು ಸುಮಾರು 33 ಡಿಗ್ರಿಯಷ್ಟು ಇರುತ್ತದೆ. ಆದರೆ ನಮ್ಮ ದೇಹ ನಿರಂತರವಾಗಿ ಶಾಖವನ್ನು ಉತ್ಪಾದಿಸುವ ಕಾರಣ ಅದಕ್ಕೆ “ಏ.ಸಿ.’ ತಾಪಮಾನ ಅಂದರೆ ಏರ್‌ಕಂಡಿಷನರ್‌ಗಳನ್ನು ಇಡುವ ಡಿಗ್ರಿ- ಸುಮಾರು 23ರಷ್ಟು ಕಡಿಮೆ ಇದ್ದರೆ ಆರಾಮ ಎಂದೆನಿಸುತ್ತದೆ. ಹಾಗಾಗಿ ನಾವು ನಮ್ಮ ದೇಹಕ್ಕಿಂತ 10 ಡಿಗ್ರಿಯಷ್ಟು ಕಡಿಮೆ ತಾಪಮಾನದ ವಾತಾವರಣದಲ್ಲಿದ್ದರೆ ಬೆವೆರುವ ಕಸಿವಿಸಿ ಇರುವುದಿಲ್ಲ. ಸೂರ್ಯನ ಕಿರಣಗಳು ಮನೆಯನ್ನು ತಾಗಿದೊಡನೆ, ಅದರ ಹೊರಮೈ ಬಿಸಿಯೇರಲು ತೊಡಗುತ್ತದೆ. ಅದರಲ್ಲೂ ಗಾಜು ಬಲುಬೇಗ ಬಿಸಿಯೇರುವುದರ ಜೊತೆಗೆ ಸಾಕಷ್ಟು ತಾಪಮಾನವನ್ನೂ ಒಳಾಂಗಣಕ್ಕೆ ವರ್ಗಾಯಿಸುತ್ತದೆ. ಆದುದರಿಂದ ನಾವು ಗಾಜನ್ನು ಅಗತ್ಯಕ್ಕಿಂತ ಹೆಚ್ಚು ಬಳಸುವುದನ್ನು ಬಿಡಬೇಕು. ಗಾಜು ಅನಿವಾರ್ಯ ಆದಾಗ, ಅದರ ಮೇಲೆ ಸಜ್ಜಾ ಅಥವ ಇತರೆ ಸಾಧನಗಳ ಮೂಲಕ ನೆರಳು ಬೀಳುವಂತೆ ಮಾಡಬೇಕು, ಗಾಜು ನೆರಳಲ್ಲಿ ಇದ್ದರೆ, ಅದರ ಮೂಲಕ ಬಿಸಿ ಒಳಗೆ ಹರಡುವುದಿಲ್ಲ. ಇತರೆ ಕೆಲ ವಸ್ತುಗಳಿಗಿಂತ ಗಾಜು ಅತಿ ಹೆಚ್ಚು ಶಾಖವನ್ನು ವರ್ಗಾಯಿಸಬಲ್ಲದು. ಈ ಕಾರಣಕ್ಕಾಗಿಯೇ ಸೋಲಾರ್‌ ನೀರು ಹೀಟರ್‌ಗಳಲ್ಲಿ ಗಾಜಿನ ಹಿಂದೆ ನೀರಿನ ಕೊಳವೆಗಳನ್ನು ಅಳವಡಿಸುವುದು.

ಗೋಡೆ ಮೇಲೆ ನೆರಳು ಬೀಳಲಿ
ಮನೆಗಳ ಪಶ್ಚಿಮದ ಗೋಡೆಗಳು ಅತಿಹೆಚ್ಚು ಶಾಖವನ್ನು ಹೀರಿಕೊಂಡು ಒಳಾಂಗಣಕ್ಕೂ ವರ್ಗಾಯಿಸಬಲ್ಲವು. ಹಾಗಾಗಿ ಈ ದಿಕ್ಕಿನ ಗೋಡೆಗಳಿಗೆ ಸೂಕ್ತ ಶಾಖನಿರೋಧಕಗಳನ್ನು ಅಳವಡಿಸುವುದು ಸೂಕ್ತ. ಈ ಹಿಂದೆ ನಿವೇಶನಗಳು ದೊಡ್ಡದಿದ್ದಾಗ ದಪ್ಪನೆಯ ಅಂದರೆ ಒಂದೂವರೆ ಇಟ್ಟಿಗೆ ದಪ್ಪ ಇಲ್ಲವೆ ಕಲ್ಲಿನ ಹದಿನೆಂಟು ಇಂಚಿನ ಗೋಡೆಗಳನ್ನು ಕಟ್ಟಿ, ಸೂರ್ಯನ ಶಾಖದಿಂದ ರಕ್ಷಣೆ ಪಡೆಯುತ್ತಿದ್ದರು, ಆದರೆ ಈಗ ನಿವೇಶನಗಳು ಚಿಕ್ಕದಿರುವುದರಿಂದ, ದಪ್ಪನೆಯ ಗೋಡೆಗಳನ್ನು ಕಟ್ಟಿದರೆ, ಒಳಾಂಗಣದ ವಿಸ್ತೀರ್ಣ ಕಡಿಮೆ ಆಗುತ್ತದೆ. ಆದುದರಿಂದ ನಾವು ಗೋಡೆಗಳ ಮೇಲೆ ನೆರಳು ಬೀಳುವಂತೆ ಮಾಡುವುದರ ಮೂಲಕ ಮನೆಯನ್ನು ತಂಪಾಗಿ ಇಟ್ಟುಕೊಳ್ಳಬಹುದು. ಕಿಟಕಿಗಳಿಗೆ ನೀಡುವ ಸಜ್ಜಾಗಳನ್ನು ಎರಡೂ ಕಡೆಗೂ ವಿಸ್ತರಿಸುವ ಮೂಲಕವೂ ನಾವು ಗೋಡೆಗಳಿಗೆ ಬಿಸಿಯೇರುವುದನ್ನು ತಕ್ಕಮಟ್ಟಿಗೆ ತಡೆಯಬಹುದು. ಇಲ್ಲವೆ ಸೂಕ್ತ ಪೆರ್ಗೊಲ- ಅಡ್ಡಕ್ಕೆ ಹಾಗೂ ಉದ್ದಕ್ಕೆ ಅಳವಡಿಸಲಾಗುವ ತೆಳು ತೊಲೆಗಳನ್ನೂ ಬಳಸಬಹುದು. ಸೂರನ್ನೂ ಹೊರಚಾಚಬೇಕೆಂದರೆ, ಅದರ ಅಗಲ ಒಂದು ಅಡಿಗಿಂತ ಹೆಚ್ಚು ಇರಬಾರದು, ಇಲ್ಲದಿದ್ದರೆ, ಕಿಟಕಿಗಳಿಗೆ ಬರುವ ಬೆಳಕು ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ತೆಳುವರ್ಣದ ಅಂದರೆ ಲೈಟ್‌ ಕಲರ್‌ ವಸ್ತುಗಳನ್ನು- ಕಲ್ಲು ಇಲ್ಲವೆ ಪ್ಲಾಸ್ಟರ್‌ನ ಬಣ್ಣ ಬಿಳಿಬಣ್ಣಕ್ಕೆ ಹತ್ತಿರ ಇರುವಂತೆಯೂ ಮಾಡಿ ಶಾಖ ಪ್ರತಿಫ‌ಲಿಸುವಂತೆ ಮಾಡಬಹುದು.

ಶಾಖ ನಿರೋಧಕ ಪದರ
ಬರಿ ಸೂರ್ಯನ ಕಿರಣಗಳ ಆಘಾತವನ್ನೇ ಅಲ್ಲದೆ ಮಳೆಗಾಳಿಯ ಹೊಡೆತವನ್ನೂ ಎದುರಿಸುವುದು ನಮ್ಮ ಮನೆಯ ಸೂರು. ನಾವು ಹಾಕುವ ಮಾಮೂಲಿ ಆರ್‌.ಸಿ.ಸಿ ಸೂರು ನಾನಾ ಕಾರಣಗಳಿಂದಾಗಿ ನೀರು ನಿರೋಧಕ ಗುಣವನ್ನು ಹೊಂದಿರುವುದಿಲ್ಲ. ಕಾಂಕ್ರೀಟ್‌ ಗಟ್ಟಿಗೊಳ್ಳುವಾಗ ಸ್ವಾಭಾವಿಕವಾಗೇ ಸ್ವಲ್ಪ ಕುಗ್ಗುವುದರಿಂದ, ಅದರಲ್ಲಿ ಸಣ್ಣಸಣ್ಣ ಕೂದಲೆಳೆಯಷ್ಟು ಸೂಕ್ಷ್ಮ ಬಿರುಕುಗಳು ಉಂಟಾಗಿರುತ್ತದೆ. ಇದು ಬಲದ ದೃಷ್ಟಿಯಿಂದ ಹಾನಿಕಾರಕ ಅಲ್ಲದಿದ್ದರೂ ನೀರು ನಿರೋಧಕ ಗುಣವನ್ನು ಕಡಿಮೆಗೊಳಿಸಿರುತ್ತದೆ. ಆದುದರಿಂದ ನಾವು ಕಡ್ಡಾಯವಾಗಿ ಕಾಂಕ್ರೀಟಿಗೆ ಹೆಚ್ಚುವರಿ ನೀರು ನಿರೋಧಕ ಪದರವನ್ನು ಹಾಕಬೇಕಾಗುತ್ತದೆ. ಈ ನೀರು ನಿರೋಧಕ ಪದರ ಸರಾಸರಿ ಒಂದೆರೆಡು ಇಂಚು ಮಾತ್ರ ದಪ್ಪ ಇದ್ದು, ಒಂದಷ್ಟು ಶಾಖವನ್ನು ತಡೆದರೂ, ನಂತರದಲ್ಲಿ ಒಳಾಂಗಣಕ್ಕೆ ಬಿಸಿಯನ್ನು ವರ್ಗಾಯಿಸಬಲ್ಲದು. ಆದುದರಿಂದ ಹೆಚ್ಚುವರಿಯಾಗಿ ಒಂದು ಪದರ ಕ್ಲೆಟೈಲ್ಸ್‌ – ಜೇಡಿಮಣ್ಣಿನ ಸುಟ್ಟ ಬಿಲ್ಲೆಗಳನ್ನು ಅಳವಡಿಸಿದರೆ, ಶಾಖ ವರ್ಗಾವಣೆಯನ್ನು ಯಶಸ್ವಿಯಾಗಿ ತಡೆಯಬಹುದು. ಈ ಬಿಲ್ಲೆಗಳ ಮತ್ತೂಂದು ವಿಶೇಷತೆ ಎಂದರೆ, ಅವು ಮನೆಯನ್ನು ಬೇಸಿಗೆಯಲ್ಲಿ ತಂಪಾಗಿಡುವಂತೆಯೇ ಚಳಿಗಾಲದಲ್ಲಿ ಬೆಚ್ಚಗೂ ಇಡಬಲ್ಲವು!

ಹೆಚ್ಚಿನ ಮಾಹಿತಿಗೆ ಫೋನ್‌ 9844132826

 - ಅರ್ಕಿಟೆಕ್ಟ್ ಕೆ ಜಯರಾಮ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ