ಮಳೆ ಬಂದೀತು ಜೋಕೆ

ಮನೆ ಮೇಲೆ ಮರದ ಕೊಂಬೆ ಬಿದ್ದರೆ...

Team Udayavani, Apr 29, 2019, 4:52 PM IST

ಮರಗಳ ರೆಂಬೆಗಳು ನಾನಾ ಕಾರಣದಿಂದಾಗಿ ಒಂದೇ ಕಡೆ ಬಾಗುತ್ತವೆ. ರಸ್ತೆಬದಿಯ ಕಂಬಗಳಲ್ಲಿ ಹಾದುಹೋಗುವ ವಿದ್ಯುತ್‌ ವಾಹಕಗಳಿಗೆ ತಾಗಬಾರದು ಎಂದು ನೇರವಾಗಿ ಬೆಳೆಯುವ ರೆಂಬೆಗಳನ್ನು ಕಡಿದು ಹಾಕಲಾಗುತ್ತದೆ. ಒಂದೇ ಬದಿಗೆ ಬೆಳೆಯುವ ರೆಂಬೆಗಳು ತಮ್ಮ ಉದ್ದಕ್ಕೆ ಸರಿಯಾಗಿ ದಪ್ಪ ಇದ್ದು, ಮರದ ಬೇರುಗಳಿಗೆ ಸಾಕಷ್ಟು ಆಧಾರ ಸಿಕ್ಕರೆ ಅವು ಸಾಮಾನ್ಯ ಗಾಳಿ ಮಳೆಗೆ ಬೀಳುವುದಿಲ್ಲ.

ಬೇಸಿಗೆ ಕಾಲದಲ್ಲಿ ಸಹಿಸಲಾಗದ ಧಗೆಗೆ ಒಂದಷ್ಟು ಮಳೆ ಸುರಿದರೆ ಸಾಕಪ್ಪ ಎಂದು ಎಲ್ಲರೂ ಇದ್ದರೂ, ಈ ಅವಧಿಯಲ್ಲಿ ಸುರಿಯುವ ಮಳೆ ಅಂತಿಂಥದ್ದಲ್ಲ. ಇದ್ದಕ್ಕಿದ್ದಂತೆ ಜೋರಾಗಿ ಗುಡುಗು, ಸಿಡಿಲು ಸಹಿತ ಆಲಿಕಲ್ಲಿನ ಮಳೆಯೇ ಸುರಿದುಬಿಡುತ್ತದೆ. ಮಳೆಯ ಹೊಡೆತ ಇಲ್ಲದೆ ಬಿರುಸಾಗಿ ಉದ್ದುದ್ದ ಬೆಳೆದಿದ್ದ ಮರದ ಕೊಂಬೆಗಳೆಲ್ಲ ಧೋ ಎಂದು ಸುರಿಯುವ ಮಳೆಯ ಭಾರ-ಭರಾಟೆ ತಡೆಯಲಾಗದೆ ತುಂಡಾಗಿ ಕೆಳಗೆ ಬಿದ್ದಾಗ ಜೀವ ಹಾನಿ ಆಗುವುದೂ ಉಂಟು.

ಕೆಲವೊಮ್ಮೆ ದೊಡ್ಡ ದೊಡ್ಡ ಮರಗಳೂ ಧರೆಗೆ ಉರುಳುತ್ತವೆ. ಜೊತೆಗೆ ಲಘು ಸೂರು – ಹೆಂಚು, ಶೀಟು ಇತ್ಯಾದಿಯ ಸೂರು ಹಾರಿಹೋಗುವುದೂ ಸಾಮಾನ್ಯ. ಇದ್ದಕ್ಕಿದ್ದಂತೆ ಬೀಳುವ ಮಳೆಗೆ ಸೂರಿನಲ್ಲಿ ಶೇಖರವಾಗಿರುವ ಎಲೆ, ಕಸ ನೀರನ್ನು ಕೆಳಗೆ ಹರಿಸುವ ದೋಣಿ ಕೊಳವೆಗಳಲ್ಲಿ ಕಟ್ಟಿಕೊಂಡು ನೀರು ನಿಲ್ಲುವುದೂ ಇದ್ದದ್ದೇ.

ಕೆಲವೊಮ್ಮೆ ಸಜ್ಜಾ ಪೋರ್ಟಿಕೋಗಳ ಮೇಲೂ ನೀರು ನಿಲ್ಲಬಹುದು. ಒಂದೇ ಏಟಿಗೆ ಒಂದೆರಡು ಇಂಚಿನಷ್ಟು ಸುರಿಯುವ ಮಳೆ, ಒಂದೆರಡು ದಿನಗಳಲ್ಲೇ ನಾಲ್ಕಾರು ಇಂಚಿನಷ್ಟು ನೀರನ್ನು ಸೂರಿನ ಮೇಲೆ ಶೇಖರ ಆಗುವಂತೆ ಮಾಡಬಹುದು. ಇದರಿಂದಾಗಿ ಸೂರು ಸ್ವಲ್ಪ ಬಾಗಿದಂತಾಗಿ, ಅದಕ್ಕೆ ಪೂಸಿರುವ ಪ್ಲಾಸ್ಟರ್‌ ಸಡಿಲಗೊಂಡು, ಬೀಳಲೂಬಹುದು. ಆದುದರಿಂದ ಮಳೆಯ ಹಾನಿ ಎದುರಿಸಲು ಕೆಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡರೆ ಉತ್ತಮ.

ಶೀಟು ಹಾರಿದರೆ
ಮಂಗಳೂರು ಮಾದರಿಯ ಹೆಂಚುಗಳು ಒಂದಕ್ಕೆ ಒಂದು ಬೆಸೆದುಕೊಂಡಂತೆ – “ಇಂಟರ್‌ ಲಾಕಿಂಗ್‌’ ಮಾದರಿಯಲ್ಲಿ ಇರುತ್ತವೆ. ಹಾಗಾಗಿ, ಮಾಮೂಲಿ ಗಾಳಿ ಮಳೆಗೆ ಇವು ಬಿಟ್ಟುಕೊಡುವುದಿಲ್ಲ. ಆದರೆ ಜೋರು ಮಳೆ ಬಿರುಸಿನ ಗಾಳಿಯೊಂದಿಗೆ ಬಂದರೆ, ಹೆಂಚುಗಳನ್ನು ಸ್ವಲ್ಪ ಎತ್ತಿದಂತಾಗಿ – ಅವುಗಳಲ್ಲಿ ಅಳವಡಿಸಲಾಗಿರುವ ಬೆಸುಗೆ ಬಿಟ್ಟುಹೋಗುತ್ತದೆ.

ಕೆಲವೊಮ್ಮೆ ಗಾಳಿಯ ಬೀಸಿನಲ್ಲಿ ಬದಲಾವಣೆ ಪದೇಪದೇ ಆಗುತ್ತಿದ್ದರೆ, ಹೆಂಚುಗಳು ಅಲುಗಾಡಲು ತೊಡಗಿ, ಒಂದಕ್ಕೊಂದು ಬಡಿದುಕೊಂಡು ಬಿರುಕು ಬಿಡುತ್ತವೆ. ಮುರಿದೂ ಹೋಗಬಹುದು. ಈ ಮಾದರಿಯ ತೊಂದರೆಗಳನ್ನು ತಡೆಯಲು ಸೂಕ್ತ ದೂರದಲ್ಲಿ ಒಂದೆರಡು ವರಸೆ ಇಟ್ಟಿಗೆ ಇಲ್ಲವೇ ಕಾಂಕ್ರಿಟ್‌ ಬ್ಲಾಕ್‌ನಲ್ಲಿ ಮೋಟು ಗೋಡೆ ಕಟ್ಟಿದರೆ, ಇದರ ಭಾರಕ್ಕೆ ಹೆಂಚುಗಳು ಅಲುಗಾಡುವುದು ತಪ್ಪುತ್ತದೆ. ಆದರೆ, ಈ ರೀತಿ ದಿಮ್ಮಿ ಮಾದರಿಯ ಗೋಡೆಗಳನ್ನು ಕಟ್ಟುವಾಗ, ಕೆಳಗೆ ಸೂಕ್ತ ಆಧಾರವನ್ನು ಕೊಡಲು ಮರೆಯಬೇಡಿ.

ಕೆಳಗೆ ಒಂದು ಗೋಡೆ ಇಲ್ಲವೇ ಸೂಕ್ತ ಗಾತ್ರದ ಮರದ ಇಲ್ಲವೇ ಉಕ್ಕಿನ ರಿಪೀಸಿನ ಆಧಾರ ಇರಬೇಕಾಗುತ್ತದೆ. ಈ ಮಾದರಿಯ ದಿಮ್ಮಿ ಗೋಡೆಯನ್ನು ಇಳಿಜಾರಿನ ನೇರಕ್ಕೆ ಕಟ್ಟಬೇಕು. ಅಡ್ಡಡ್ಡಕ್ಕೆ ಕಟ್ಟಬಾರದು. ಇಲ್ಲದಿದ್ದರೆ ನೀರಿನ ಹರಿವಿಗೆ ತೊಂದರೆಯಾಗಿ, ನಿಲ್ಲುವ ಹಾಗೂ ಕೆಳಗೆ ಸೋರುವ ಸಾಧ್ಯತೆ ಇರುತ್ತದೆ.

ವಾಶರ್‌ ಬಳಸಿ
ಶೀಟುಗಳಿಗೆ ಹಾಕಿರುವ “ಜೆ’ ಬೋಲ್ಟಾಗಳನ್ನು ಆಗಾಗ್ಗೆ ಪರಿಶೀಲಿಸುತ್ತಿರಬೇಕು. ಇವುಗಳನ್ನು ರಿಪೀಸಿಗೂ ಅದರ ಮೇಲೆ ಅಳವಡಿಸಲಾಗಿರುವ ಶೀಟುಗಳನ್ನು ಬಿಗಿಯಲು ಬಳಸಲಾಗುತ್ತದೆ. ಶೀಟಿಗೆ ರಂಧ್ರಮಾಡಿ ಬೋಲ್ಟ್ ಹಾಕುವುದರಿಂದ ರಬ್ಬರ್‌ ಮಾದರಿಯ ಇಲ್ಲವೇ ಡಾಂಬರ್‌ ಆಧಾರಿತ ವಾಶರ್‌ ಬಳಸಲು ಮರೆಯಬಾರದು. ಬಿಗಿಗೊಳ್ಳಲು ಶೀಟಿನ ವಾಶರ್‌ ಬಳಸಲಾಗುತ್ತಾದರೂ ಅದರ ಕೆಳಗೆ ಮೆದು ವಾಶರ್‌ ಬಳಸಿದರೆ ಒಳಿತು.

ಶೀಟುಗಳಿಗೆ ರಂಧ್ರಮಾಡುವಾಗ ಆದಷ್ಟೂ ಉಬ್ಬುಗಳಲ್ಲಿಯೇ ಮಾಡಬೇಕು. ಬಹುತೇಕ ಮಾದರಿಯ ಶೀಟುಗಳಲ್ಲಿ ಉಬ್ಬುತಗ್ಗುಗಳಿರುತ್ತವೆ. ಈ ಉಬ್ಬುಗಳಿಂದಲೇ ಸುಲಭದಲ್ಲಿ ಬಾಗುವ ಶೀಟುಗಳಿಗೆ ಹೆಚ್ಚುವರಿ ಶಕ್ತಿ ಬಂದು, ಅವು ಗಾಳಿಯಲ್ಲೂ ಸುಲಭದಲ್ಲಿ ಬಾಗುವುದಿಲ್ಲ. ಶೀಟುಗಳಿಗೆ ಅವುಗಳ ಕೆಳಗಿರುವ ರಿಪೀಸುಗಳು ಇಲ್ಲವೇ ಕಬ್ಬಿಣದ ಪೈಪುಗಳು ಆಧಾರವಾಗಿರುತ್ತವೆ.

ಹಾಗೆಯೇ, ಈ ರಿಪೀಸು ಹಾಗೂ ಚೌಕಾಕೃತಿಯ ಪೈಪುಗಳಿಗೆ ಕೆಳಗಿನ ಗೋಡೆ ಇಲ್ಲವೇ ಇತರೆ ಆಧಾರಗಳು ಇರುತ್ತವೆ. ಶೀಟುಗಳು ಹೆಂಚಿನಷ್ಟು ಭಾರ ಇರುವುದಿಲ್ಲವಾದ ಕಾರಣ, ನಾವು ಅವುಗಳ ಆಧಾರಗಳನ್ನು ಕಡ್ಡಾಯವಾಗಿ ಕೆಳಗಿನ ಗೋಡೆ/ ಭೀಮುಗಳಿಗೆ ಆ್ಯಂಕರ್‌ – “ಲಂಗರು’ ಹಾಕುವ ರೀತಿಯಲ್ಲಿ ಕ್ಲಾ$Âಂಪ್‌ಗ್ಳ ಮೂಲಕ ಬಿಗಿಗೊಳಿಸಬೇಕು. ಇಲ್ಲದಿದ್ದರೆ ಜೋರು ಗಾಳಿ ಮಳೆ ಬಂದಾಗ ಶೀಟುಗಳು ಹಾರಿಹೋಗುವ ಸಾಧ್ಯತೆ ಇರುತ್ತದೆ.

ಮರ-ಕೊಂಬೆಗಳ ಬೀಳುವಿಕೆ
ಮರಗಳ ರೆಂಬೆಗಳು ನಾನಾ ಕಾರಣದಿಂದಾಗಿ ಒಂದೇ ಕಡೆ ಬಾಗುತ್ತವೆ. ಇವುಗಳಲ್ಲಿ ಮುಖ್ಯವಾದದ್ದು ರಸ್ತೆಬದಿಯ ಕಂಬಗಳಲ್ಲಿ ಹಾದುಹೋಗುವ ವಿದ್ಯುತ್‌ ವಾಹಕಗಳಿಗೆ ತಾಗಬಾರದು ಎಂದು ನೇರವಾಗಿ ಬೆಳೆಯುವ ರೆಂಬೆಗಳನ್ನು ಕಡಿದು ಹಾಕಲಾಗುತ್ತದೆ.ಒಂದೇ ಬದಿಗೆ ಬೆಳೆಯುವ ರೆಂಬೆಗಳು ತಮ್ಮ ಉದ್ದಕ್ಕೆ ಸರಿಯಾಗಿ ದಪ್ಪ ಇದ್ದು, ಮರದ ಬೇರುಗಳಿಗೆ ಸಾಕಷ್ಟು ಆಧಾರ ಸಿಕ್ಕರೆ ಅವು ಸಾಮಾನ್ಯ ಗಾಳಿ ಮಳೆಗೆ ಬೀಳುವುದಿಲ್ಲ.

ಆದರೆ ದಪ್ಪ ಆಗದೆ, ಸಣಕಲಾಗಿಯೇ ಇದ್ದು, ತೀರಾ ಉದ್ದುದ್ದ ಬೆಳೆದು, ಜೊತೆಗೆ ಎಲೆಗಳೂ ಸೋಂಪಾಗಿ ಬೆಳೆದಿದ್ದರೆ, ಪ್ರತಿ ಎಲೆಯ ಮೇಲಿನ ಮಳೆಹನಿಯ ಭಾರಕ್ಕೇ ಕೊಂಬೆ ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ, ಮರದ ರೆಂಬೆಗಳು ಮನೆಯ ಮೇಲೆ ಬಿದ್ದರೆ ಹೆಚ್ಚು ಹಾನಿಯೇನೂ ಆಗುವುದಿಲ್ಲ. ನಿಮ್ಮ ಮನೆಗೆ ಉದ್ದುದ್ದದ ಕ್ಯಾಂಟಿಲಿವರ್‌ – ಹೊರಚಾಚಿದ ಪೋರ್ಟಿಕೊ, ಸಜ್ಜಾ ಇತ್ಯಾದಿ ಇದ್ದು, ಇವುಗಳ ಮೇಲೆ ಮರದ ಕೊಂಬೆ ಬಿದ್ದರೆ, ಅವೂ ಕೂಡ ಮುರಿದು ಬೀಳುವ ಸಾಧ್ಯತೆ ಇರುತ್ತದೆ.

ಹಾಗಾಗಿ, ಚಳಿ ಹಾಗೂ ಬೇಸಿಗೆಯ ಶುರುವಿನಲ್ಲಿ, ರೆಂಬೆಕೊಂಬೆಗಳು ಎಷ್ಟು ಬೆಳೆದಿವೆ, ಮನೆಯ ಮೇಲೆ ಬೀಳುವ ಸಾಧ್ಯತೆ ಇದೆಯೇ? ಎಂದು ಪರಿಶೀಲಿಸಿ, ತೀರಾ ಹೆಚ್ಚು ಉದ್ದ ಇದ್ದರೆ, ಹೆಚ್ಚಿರುವ ಭಾಗವನ್ನು ಮಾತ್ರ, ಮುಂಜಾಗರೂಕತಾ ಕ್ರಮವಾಗಿ ಕತ್ತರಿಸಬಹುದು.

ನಾವೆಲ್ಲ ಸಾಮಾನ್ಯವಾಗಿ ಮನೆ ಎಂದರೆ ಮೇಲಿನಿಂದ ಮಾತ್ರ ಅದರ ಮೇಲೆ ಭಾರ ಬರುತ್ತದೆ, ಅದನ್ನು ಹೊರುವಂತಿದ್ದರೆ ಸಾಕು ಎಂದು ಯೋಚಿಸುತ್ತಿರುತ್ತೇವೆ. ಆದರೆ ಮಳೆಯೊಂದಿಗೆ ಬರುವ ಬಿರುಗಾಳಿ ಹಗುರ ಸೂರು – ಹೆಂಚುಗಳನ್ನು ಮೇಲಕ್ಕೆ ಎತ್ತಿಹಾಕಬಹುದು ಎಂಬುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುವುದಿಲ್ಲ.

ನಮ್ಮಲ್ಲಿ ಬಿರುಗಾಳಿಗೆ ಮರದಿಂದಲೇ ಮಾಡಿರುವ ಪಾಶ್ಚಾತ್ಯ ದೇಶಗಳಲ್ಲಿನಂತೆ ಇಡೀ ಮನೆ ಹಾರುವ ಸಾಧ್ಯತೆ ಇಲ್ಲವಾದರೂ ಅದರ ಭಾಗಗಳು ಹಗುರವಾಗಿದ್ದರೆ ಹಾರುವ ಸಾಧ್ಯತೆ ಇರುತ್ತದೆ! ಈ ಕಾರಣಕ್ಕಾಗಿ ಇವುಗಳನ್ನು ಸೂಕ್ತ ರೀತಿಯಲ್ಲಿ ಬಿಗಿಗೊಳಿಸುವುದು ಅಗತ್ಯ.

ವಾಲುತ್ತಿದೆಯಾ ನೋಡಿ

ಮರಗಳಲ್ಲೂ ಗಟ್ಟಿ ಹಾಗೂ ಮೆದು ಮರಗಳಿರುತ್ತವೆ. ಸಾಮಾನ್ಯವಾಗಿ ಮರದ ಕೊಂಬೆ ಆರು ಇಂಚಿನಷ್ಟು ದಪ್ಪ, ಹತ್ತು ಅಡಿಗಳಷ್ಟು ಉದ್ದ ಇದ್ದರೆ ಪರವಾಗಿಲ್ಲ. ಆದರೆ, ಅದು ಬೆಳಕನ್ನು ಅರಸಿಕೊಂಡು ಹದಿನೈದು – ಇಪ್ಪತ್ತು ಅಡಿ ದಿಢೀರನೆ ಬೆಳೆದು, ಸೂರ್ಯಕಿರಣ ದೊರೆತ ಖುಷಿಯಿಂದಾಗಿ ತುದಿಯಲ್ಲಿ ಸೊಂಪಾಗಿ ಎಲೆಗಳನ್ನು ಬೆಳೆಸಿಕೊಂಡರೆ, ಮಳೆಗಾಲದಲ್ಲಿ ಭಾರ ತಾಳಲಾರದೆ ಮುರಿದು ಬೀಳುವ ಸಾಧ್ಯತೆಯೇ ಹೆಚ್ಚು.

ಕಾಡಿನಲ್ಲಿ ಸ್ವೇಚ್ಛೆಯಿಂದ ಬೆಳೆಯುವ ಈ ಮರಗಳು ನಗರದಲ್ಲಿ ನಾನಾರೀತಿಯ ಆಘಾತಗಳನ್ನು ಅನುಭವಿಸಬೇಕಾಗುತ್ತದೆ. ನೆಲದಾಳದಲ್ಲಿ ಕೊಳವೆ ಮತ್ತೂಂದು ಹಾಕಲು ಮರಗಳ ತಾಯಿಬೇರನ್ನೂ ಕಡಿದು ಹಾಕಲಾಗುತ್ತದೆ. ಹೀಗೆ ಏನಾದರೂ ನಿಮ್ಮ ಮನೆಯ ಆಸುಪಾಸಿನಲ್ಲಿ ಬೇರುಗಳನ್ನು ಕಡಿದಿದ್ದರೆ, ಮಳೆ ಬಂದಾಗ ಈ ಮರಗಳು ಏನಾದರೂ ವಾಲುತ್ತಿವೆಯೇ? ಎಂದು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ. ಮರಗಳು ಬಿದ್ದರೆ ಆಸ್ತಿಪಾಸ್ತಿಗೆ ಹಾನಿ ಆಗುವುದರ ಜೊತೆಗೆ ಜೀವಕ್ಕೂ ಅಪಾಯವಾಗುತ್ತದೆ.

— ಆರ್ಕಿಟೆಕ್ಟ್ ಕೆ ಜಯರಾಮ್‌
ಹೆಚ್ಚಿನ ಮಾಹಿತಿಗೆ-98331 32826.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ