ಹೌಸ್‌ ಟ್ರಬಲ್‌

ಮಳೆಗಾಲದಲ್ಲಿ ಮನೆ ಕಟ್ಟುವುದು

Team Udayavani, Nov 4, 2019, 4:11 AM IST

ಮಳೆ ಬರುವ ಸಂದರ್ಭದಲ್ಲಿ ಮನೆ ಕಟ್ಟುವಾಗ ಹಲವು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇದರಿಂದಾಗಿ ಕಟ್ಟುವ ಕೆಲಸವೂ ಸುಲಭವಾಗುವುದಲ್ಲದೆ, ಬಾಳಿಕೆಯೂ ದೀರ್ಘ‌ಕಾಲ ಬರುವುದು.

ಮನೆಯನ್ನು ಯಾವುದೇ ಕಾಲದಲ್ಲಿ ಕಟ್ಟಬೇಕೆಂದರೂ ಒಂದಷ್ಟು ತಲೆನೋವು ಇದ್ದದ್ದೇ. ಅದರಲ್ಲೂ ಮಳೆಗಾಲ ಒಂದಷ್ಟು ಹೆಚ್ಚಿನ ತಲೆನೋವನ್ನು ತಂದೊಡ್ಡಬಹುದು. ಈ ಅವಧಿಯಲ್ಲಿ ಕ್ಯೂರಿಂಗ್‌ ಸರಾಗವಾಗಿ ಆಗುತ್ತದೆಯಾದರೂ ಕಟ್ಟುವಿಕೆಗೆ ತೊಂದರೆ ಆಗಬಹುದು. ಜೊತೆಗೆ ನೀರಿನ ಅಂಶ ಹೆಚ್ಚಾದರೆ, ಸಿಮೆಂಟ್‌ ಗಾರೆ ಕರಗಿದಂತೆ ಆಗಿ ಹರಿದುಹೋಗಿ, ಮಾಡಿದ ಕೆಲಸವೂ ಒಂದು ಮಟ್ಟಕ್ಕೆ ನಷ್ಟ ಆಗಬಹುದು. ಆದರೆ, ಈ ಕಾರಣಗಳಿಗೆ ಮನೆ ಕಟ್ಟುವುದನ್ನು ಯಾರೂ ಮಳೆಗಾಲದಲ್ಲಿ ನಿಲ್ಲಿಸುವುದಿಲ್ಲ. ಒಮ್ಮೆ ಕೆಲಸ ಶುರು ಮಾಡಿದ ಮೇಲೆ ನಿಲ್ಲದೆ ಮುಂದುವರಿಯಬೇಕು ಎಂಬುದೇ ಎಲ್ಲರ ಆಶಯ ಆಗಿರುತ್ತದೆ. ಆದುದರಿಂದ, ಈ ಅವಧಿಯಲ್ಲಿ ಒಂದಷ್ಟು ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಂಡರೆ, ಮುಂದಾಗಬಹುದಾದ ತೊಂದರೆಗಳಿಂದ ಪಾರಾಗಬಹುದು.

ಪಾಯದ ಕಿರಿಕಿರಿ: ನೀರು ಸ್ವಾಭಾವಿಕವಾಗಿಯೇ ಕೆಳಮಟ್ಟಕ್ಕೆ ಹರಿದು ನಿಲ್ಲುತ್ತದೆ. ಒಮ್ಮೆ ಒಂದೆರಡು ಅಡಿ ಆಳ ಅಗೆದಮೇಲೆ ಮಳೆ ಬಂದರೆ, ಹೆಚ್ಚಿನ ತೊಂದರೆ ಏನೂ ಆಗುವುದಿಲ್ಲ. ನಿಂತ ನೀರು ಒಂದೆರಡು ಗಂಟೆಗಳಲ್ಲಿ ಹೀರಲ್ಪಟ್ಟು, ಪಾಯದ ಮಣ್ಣು ಒಂದಷ್ಟು ಮೆತ್ತಗಾಗಿ, ಅಗೆಯಲು ಸುಲಭವೇ ಆಗುತ್ತದೆ. ಈ ಹಂತದಲ್ಲಿ ಮಳೆ ಜೋರಾಗಿ ಬಂದರೂ ನಮಗೆ ತೊಂದರೆ ಏನೂ ಇಲ್ಲ. ಆದರೆ ಪಾಯದ ಮಟ್ಟ, ಅಂದರೆ ಸುಮಾರು ಐದು ಅಡಿಗಳಷ್ಟು ಆಳ ಹೋದಮೇಲೆ ಜೋರು ಮಳೆ ಬಂದರೆ, ಅದರಿಂದ ನಾನಾ ತೊಂದರೆಗಳು ಉಂಟಾಗಬಹುದು.

ಪಾಯದ ಕೆಳಗಿನ ಮಣ್ಣು ಸ್ವಾಭಾವಿಕವಾಗಿಯೇ ಗಟ್ಟಿಯಾಗಿದ್ದು, ನೀರು ಅಷ್ಟೊಂದು ಸುಲಭದಲ್ಲಿ ಹೀರಲ್ಪಡುವುದಿಲ್ಲ. ಮೇಲಿನ ಪದರಗಳಲ್ಲಿ ಗಿಡಗಳ ಬೇರು, ಮತ್ತೂಂದು ಇರುವುದರಿಂದ, ನೀರು ಬೇಗನೆ ಇಂಗಿಹೋಗುತ್ತದೆ. ಸತತವಾಗಿ ಮಳೆ ಬೀಳುತ್ತಿದ್ದರೆ, ನೀರು ತುಂಬಿ ಪಾಯ ಹೊಂಡದಂತೆ ಆಗಿದ್ದರೆ, ಆಗ ಅನಿವಾರ್ಯವಾಗಿ ಪಂಪ್‌ಗಳನ್ನು ಬಳಸಿ, ನೀರನ್ನು ಹೊರಹಾಕಬೇಕಾಗುತ್ತದೆ. ನೀರು ಕುಡಿದ ಮೇಲೂ ಪದರದ ಮಣ್ಣು ಸಹ ಸಡಿಲಗೊಂಡು, ಪಾಯದೊಳಗೆ ಕುಸಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ, ನಾವು ನಡೆದಾಡುವಾಗ ಎಚ್ಚರದಿಂದ ಇರಬೇಕಾಗುತ್ತದೆ. ಹಾಗೆಯೇ, ಮಣ್ಣು ಕುಸಿಯದಂತೆ ಸೂಕ್ತ ಸುರಕ್ಷತಾ ಕ್ರಮಗಳನ್ನೂ ತೆಗೆದುಕೊಳ್ಳಬೇಕಾಗುತ್ತದೆ.

ಜಲಾವೃತ ಆಗುವುದನ್ನು ತಪ್ಪಿಸಿ: ಮಳೆಗಾಲದಲ್ಲಿ ಪಾಯವನ್ನು ನೇರವಾಗಿ ಕಡಿಯದೆ, ಎರಡೂ ಬದಿಗೆ ಸ್ವಲ್ಪ ಇಳಿಜಾರಾಗಿ ಇರುವಂತೆ ತೋಡಿದರೆ, ಅಕ್ಕಪಕ್ಕದ ಮಣ್ಣು ಕುಸಿಯುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗೆಯೇ, ಪಾಯದ ಅಡ್ಡಕ್ಕೆ ಮರಗಳನ್ನು ಅಲ್ಲಲ್ಲಿ ಇರಿಸಿ, ಅದರ ಮೇಲೆ ಪ್ಲಾಸ್ಟಿಕ್‌ ಹೊದಿಕೆಯನ್ನು ಇಳಿಜಾರಾಗಿ ಅಳವಡಿಸುವ ಮೂಲಕವೂ, ನೀರು ಪಾಯದ ಒಳಗೆ ಹೋಗದಂತೆ ತಡೆಯಬಹುದು.

ನಿವೇಶನ ದೊಡ್ಡದಿದ್ದರೆ, ಹತ್ತಾರು ಕಾಲಂಗಳು ಬರುತ್ತಿದ್ದರೆ, ಆಗ ನಾವು ಪಾಯವನ್ನು ಎರಡು ಹಂತವಾಗಿ ತೋಡಿ, ಒಂದು ಭಾಗವನ್ನು, ಅಂದರೆ ಸುಮಾರು ಆರು ಅಥವಾ ಏಳು ಗುಂಡಿಗಳನ್ನು ಅಗೆದು, ಕಂಬಗಳ ಫ‌ುಟಿಂಗ್‌ ಆದನಂತರ ಮಿಕ್ಕವನ್ನು ಅಗೆಯಬಹುದು. ಹೀಗೆ ಮಾಡುವುದರಿಂದ, ಇಡೀ ನಿವೇಶನ ಜಲಾವೃತ ಆಗುವುದನ್ನು ತಡೆಯುವುದರ ಜೊತೆಗೆ, ಮಣ್ಣು ಕುಸಿಯುವುದು, ಕಾಲು ಜಾರಿ ಹೊಂಡದಲ್ಲಿ ಬೀಳುವುದು ಇತ್ಯಾದಿ ಅವಘಡಗಳನ್ನು ತಡೆಯಬಹುದು. ಹಿಂದಿನ ಭಾಗವನ್ನು ಮೊದಲು ಅಗೆದು ನಂತರ ಮುಂದಿನದನ್ನು ಅಗೆದರೆ, ಓಡಾಡಲು ಹೆಚ್ಚು ಅನುಕೂಲ ಆಗುತ್ತದೆ.

ಮಣ್ಣು ಹೊರಹಾಕುವುದೇ ಕಷ್ಟ: ಜೋರು ಮಳೆಗೆ ಬರೀ ನೀರು ಹರಿದು ಪಾಯ ಹೊಕ್ಕರೆ ಅಷ್ಟೇನೂ ತೊಂದರೆ ಆಗುವುದಿಲ್ಲ, ಆದರೆ, ನೀರು ತನ್ನ ಜೊತೆಗೆ ಒಂದಷ್ಟು ಮಣ್ಣನ್ನೂ ತಂದು ಸುರಿಯುತ್ತದೆ. ಇದು ಪಾಯದ ಉದ್ದಗಲಕ್ಕೂ ಹರಡಿದರೆ, ಮಣ್ಣು ತೆಗೆಯುವುದೇ ದೊಡ್ಡ ಕೆಲಸ ಆಗಿಬಿಡುತ್ತದೆ. ಅದರಲ್ಲೂ, ಪಾಯದಲ್ಲಿ ಬೆಡ್‌ ಕಾಂಕ್ರೀಟ್‌ ಹಾಕಿದ ನಂತರ ಮ್ಯಾಟ್‌ ಕಟ್ಟಿ ಕಾಲಂ ಇಳಿಸಿದ್ದರೆ, ಕಂಬಿಗಳ ಮಧ್ಯೆ ತುಂಬಿರುವ ಮಣ್ಣು ತೆಗೆಯುವುದು ಕಿರಿಕಿರಿಯ ವಿಷಯ. ದೊಡ್ಡ ಸಲಕರಣೆ- ಸನಿಕೆಯಂಥವನ್ನು ಬಳಸಲು ಆಗುವುದಿಲ್ಲ, ನಿಧಾನವಾಗಿ ಸಣ್ಣ ಸಲಕರಣೆ- ಕರಣೆ ಅಂಥವನ್ನು ಬಳಸಬೇಕಾಗುತ್ತದೆ.

ಕಂಬಿಗಳಿಗೆ ಮಣ್ಣು ಮೆತ್ತಿಕೊಂಡಿದ್ದರೆ, ಅದನ್ನೂ ಸಹ ನೀರು ಬಳಸಿ ತೊಳೆಯಬೇಕಾಗುತ್ತದೆ. ಹಾಗೆಯೇ, ಇದರಿಂದಾಗಿ ಶೇಖರಗೊಂಡಿರುವ ಹೆಚ್ಚುವರಿ ನೀರನ್ನೂ ಪಂಪ್‌ ಬಳಸಿ ಹೊರ ಹಾಕಬೇಕಾಗುತ್ತದೆ. ಫ‌ುಟಿಂಗ್‌ ಕಾಂಕ್ರೀಟ್‌ ಹಾಕಬೇಕಾದರೂ ಸೂಕ್ತ ಆಧಾರ ಕಲ್ಪಿಸಿಯೇ ಮುಂದುವರಿಯುವುದು ಉತ್ತಮ. ಇಲ್ಲದಿದ್ದರೆ, ಹಸಿ ಮಣ್ಣಿನ ಮೇಲೆ ನಡೆದಾಡಿದರೆ, ಅದೂ ಕುಸಿಯುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಮರಗಳನ್ನು ಇಲ್ಲವೆ ಮರದ ಹಲಗೆಗಳನ್ನು ಹಸಿ ಮಣ್ಣಿನ ಮೇಲೆ ಹಾಕಿ, ಸುಲಭದಲ್ಲಿ ನಡೆದಾಡಲು ಅನುವು ಮಾಡಿಕೊಡಲಾಗುತ್ತದೆ.

ಕಾಂಕ್ರೀಟ್‌- ನೀರು ಲೆಕ್ಕಾಚಾರ: ಈ ಅವಧಿಯಲ್ಲಿ ವಾತಾವರಣದಲ್ಲಿ ನೀರಿನ ಅಂಶ ಹೆಚ್ಚಿರುವ ರೀತಿಯಲ್ಲೇ ಮರಳು, ಜೆಲ್ಲಿಕಲ್ಲು ಇತ್ಯಾದಿ ಒದ್ದೆಯಾಗಿರುತ್ತದೆ. ಹಾಗಾಗಿ ನಾವು ಮಾಮೂಲಿ ಹಾಕುವ ನೀರಿನ ಪ್ರಮಾಣಕ್ಕಿಂತ ಕಡಿಮೆ ನೀರನ್ನು ಬಳಸಿ ಮಿಶ್ರಣವನ್ನು ತಯಾರಿಸಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ನೀರು ಹೆಚ್ಚಾಗಿ, ಮಿಶ್ರಣ ಸರಿಯಾಗಿ ಬೆರೆಯದೆ, ಬೇರ್ಪಡುವ ಸಾಧ್ಯತೆ ಇರುತ್ತದೆ. ಸ್ವಲ್ಪ ಒಣ ಎನ್ನುವ ರೀತಿಯಲ್ಲೇ ಮಿಶ್ರಣವನ್ನು ತಯಾರಿ ಮಾಡಿ, ಚೆನ್ನಾಗಿ ವೈಬ್ರೇಟರ್‌ ಹಾಕಿ, ಆ ಮೂಲಕ ಪ್ಯಾಕ್‌ ಆಗುವ ಹಾಗೆ ಮಾಡಬೇಕು,

ಹೀಗೆ ಮಾಡಿದ ನಂತರ, ಒಂದು ಸಣ್ಣ ಪದರದಷ್ಟು ನೀರು ಮೇಲೆ ಬಂದು ನಿಂತರೆ- ಅದು ಉತ್ತಮ ಕಾಂಕ್ರೀಟಿನ ಗುಣವಾಗಿರುತ್ತದೆ. ಕಾಂಕ್ರೀಟ್‌ ಅರ್ಧ ಗಂಟೆಯಲ್ಲಿ ಶುರುವಿನ ಸೆಟ್ಟಿಂಗ್‌ಗೆ ಒಳಪಡುತ್ತದೆ ಹಾಗೂ ನೀರನ್ನು ಕಡಿಮೆ ಬಳಸಿದ್ದರೆ, ಸಾಕಷ್ಟು ಗಟ್ಟಿಯೂ ಆಗಿರುತ್ತದೆ. ಹಾಗಾಗಿ, ನಂತರದಲ್ಲಿ ಮಳೆ ಬಂದರೂ, ಕಾಂಕ್ರೀಟ್‌ಗೇನೂ ತೊಂದರೆ ಆಗುವುದಿಲ್ಲ. ಸಾಮಾನ್ಯವಾಗಿ ವೈಬ್ರೇಟ್‌ ಮಾಡಿದರೆ, ಕಾಂಕ್ರೀಟ್‌ ತಂತಾನೇ ಮಟ್ಟಸವಾದ ಮೇಲ್ಮೈ ಹೊಂದಿರುತ್ತದೆ. ತೀರಾ ಮಟ್ಟ ಇಲ್ಲ ಎಂದೆನಿಸಿದರೆ, ಮಟ್ಟಗೋಲು ಬಳಸಿ, ಒಂದೇ ಮಟ್ಟಕ್ಕೆ ಬರುವಂತೆ ಮಾಡಿಕೊಳ್ಳಬಹುದು.

ಮಳೆ ಬಿದ್ದು ಕಾಂಕ್ರೀಟ್‌ ಹಾಳಾಗಿದ್ದರೆ…: ಕೆಲವೊಮ್ಮೆ ಕಾಂಕ್ರೀಟ್‌ ಮಿಶ್ರಣ ಮಾಡುವಾಗಲೇ ಮಳೆ ಬಂದು ಒಂದಷ್ಟು ಸಿಮೆಂಟ್‌ ಧೂಳು ಹಾಗೂ ಮರಳು ಹರಿದು ಹೋಗಬಹುದು. ಆದರೆ ಜೆಲ್ಲಿ ಕಲ್ಲುಗಳು ಅಷ್ಟೊಂದು ಸುಲಭದಲ್ಲಿ ಹರಿದುಹೋಗದೆ ಅಲ್ಲಿಯೇ ಉಳಿಯುತ್ತದೆ. ಆದುದರಿಂದ ಅಂಥ ಮಿಶ್ರಣಗಳಿಗೆ ಅನಿವಾರ್ಯವಾಗಿ ಒಂದಷ್ಟು ಹೆಚ್ಚುವರಿಯಾಗಿ ಸಿಮೆಂಟ್‌ ಹಾಗೂ ಮರಳನ್ನು ಮಿಶ್ರಣಕ್ಕೆ ಬೆರೆಸಬೇಕಾಗುತ್ತದೆ.

ಕೆಲವೊಮ್ಮೆ ಕಾಂಕ್ರೀಟ್‌ ಹಾಕಿದ ಮೇಲೆ ಮಳೆ ಸುರಿದು, ಅದರ ಮೇಲ್ಮೈ ಪದರದಿಂದ ಸಿಮೆಂಟ್‌ ಹರಿದುಹೋಗಿ, ಜೆಲ್ಲಿಕಲ್ಲುಗಳು ತೊಳೆದಂತೆ ಎದ್ದು ಕಾಣಬಹುದು. ಸಾಮಾನ್ಯವಾಗಿ ಮಳೆ ಎಷ್ಟೇ ಜೋರಾಗಿ ಸುರಿದರೂ, ಜೆಲ್ಲಿಕಲ್ಲುಗಳು ಕೆಳಗಿನ ಪದರಗಳಿಗೆ ಸಾಕಷ್ಟು ರಕ್ಷಣೆಯನ್ನು ನೀಡುವುದರಿಂದ, ಅಲ್ಲಿಂದ ಸಿಮೆಂಟ್‌ ಹರಿದುಹೋಗುವುದಿಲ್ಲ. ಹಾಗಾಗಿ ನಾವು ಇಡೀ ಮಿಶ್ರಣದ ಬಗ್ಗೆ ಚಿಂತೆ ಮಾಡದೆ, ಮೇಲು ಪದರ ಮಾತ್ರ ಮಳೆನೀರಿನಿಂದ ತೊಂದರೆ ಅನುಭವಿಸದಿರುವುದನ್ನು ಖಾತರಿ ಮಾಡಿಕೊಂಡು, ಒಂದು ಪದರ ಮರಳು ಮಿಶ್ರಿತ ಸಿಮೆಂಟ್‌ ಅನ್ನು ಲೇಪಿಸಿದರೆ, ಸಾಕಾಗುತ್ತದೆ.

ಹೆಚ್ಚಿನ ಮಾಹಿತಿಗೆ: 9844132826

* ಆರ್ಕಿಟೆಕ್ಟ್ ಕೆ. ಜಯರಾಮ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ