ಇಂಡೋ – ಪಾಕ್‌ ಕದನ ಲಾಭ


Team Udayavani, Mar 4, 2019, 12:30 AM IST

leed-sss.jpg

ಭಾರತ ಪಾಕಿಸ್ತಾನದ ಸಂಬಂಧ ಹಳಸಿದೆ ಎಂಬುದು ಗುಟ್ಟೇನಲ್ಲ. ಹೀಗಿರುವಾಗ, ಮುಂಬರುವ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಆಡಬಾರದು ಎಂಬ ಕ್ರಿಕೆಟ್‌ ಪ್ರೇಮಿಗಳು ಒತ್ತಾಯಿಸುತ್ತಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ, ಭಾರತೀಯ ಕ್ರಿಕೆಟ್‌ ಮಂಡಳಿಗಳಿಗೆ ಪಂದ್ಯ ನಡೆಯುವ ಆಸೆ ಇದೆ. ಇದಕ್ಕೆ ಕಾರಣ ಕ್ರೀಡಾ ಸ್ಫೂರ್ತಿಯಾಗಲೀ, ಕ್ರಿಡಾಲೆಕ್ಕಾಚಾರವಾಗಲಿ ಅಲ್ಲ, ಬದಲಾಗಿ ಕಾಸಿನ ಲೆಕ್ಕಾಚಾರ !. ಭಾರತ- ಪಾಕ್‌ ನಡುವೆ ಪಂದ್ಯ ನಡೆದರೆ, ಜಾಹೀರಾತು ಕಂಪನಿಗಳಿಂದ ಬಿಸಿಸಿಐ, ಪಿಸಿಬಿ ಮತ್ತು ಐಸಿಸಿಗಳಿಗೆ ಹಣ ಹೊಳೆಯೇ ಹರಿದುಹೋಗುತ್ತದೆ. 

ಕೋಟ್ಯಂತರ ಮಂದಿ ಉಸಿರು ಬಿಗಿಹಿಡಿದು ನೋಡಿದರು, ಪಂದ್ಯ ಮುಗಿದ ನಂತರ ಟೀವಿಗಳು ಪುಡಿಪುಡಿಯಾದವು, ಕರಾಚಿಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡ, ಭಾರತದಲ್ಲಿ ಹೃದಯಾಘಾತದಿಂದ ಅಭಿಮಾನಿ ಸಾವು, ಉತ್ತರಪ್ರದೇಶದಲ್ಲಿ ಭಾರೀ ಗಲಾಟೆಯಾಯಿತು, ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹಾ°ನಂತರ ರಸ್ತೆಗಳು ಬಿಕೋ ಎನ್ನುತ್ತಿದ್ದವು…

ಒಂದು ವೇಳೆ ನೀವು ಇಂತಹ ಸಾಲುಗಳನ್ನು ಪತ್ರಿಕೆಗಳಲ್ಲಿ ಓದುತ್ತಿದ್ದೀರೆಂದರೆ, ಅದು ಶೇ.99ರಷ್ಟು ಸಂದರ್ಭದಲ್ಲಿ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್‌ ಪಂದ್ಯಕ್ಕೆ ಸಂಬಂಧಪಟ್ಟಿದ್ದೆ ಆಗಿರುತ್ತದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಈ ಎರಡು ರಾಷ್ಟ್ರಗಳು ಎದುರಾಗಲಿ, ಎರಡೂ ದೇಶಗಳ ಬಹುತೇಕ ಅಭಿಮಾನಿಗಳು ಮಾಡುವ ಕೆಲಸ ಬಿಟ್ಟು ಕ್ರಿಕೆಟ್‌ ನೋಡುವುದಕ್ಕೆ ಕೂತಿರುತ್ತಾರೆ. ಬಹುತೇಕ ಸಂದರ್ಭದಲ್ಲಿ ಉಸಿರು ಬಿಗಿಹಿಡಿದು ನೋಡುತ್ತಿರುತ್ತಾರೆ, ನಿರೀಕ್ಷಿತ ಫ‌ಲಿತಾಂಶ ಬರದಿದ್ದರೆ ಕೆಲವರಿಗೆ ಉಸಿರೇ ನಿಂತು ಹೋಗಿರುತ್ತದೆ.

ಈ ಎರಡೂ ದೇಶಗಳ ನಡುವಿನ ಕ್ರಿಕೆಟ್‌ ಹೋರಾಟವನ್ನು ಯಾವುದೇ ಉತ್ಪ್ರೇಕ್ಷಿತ ವರ್ಣನೆ, ಹೋಲಿಕೆ, ಉಪಮೆಗಳಿಗೆ ಬೇಕಾದರೂ ಬಳಸಿಕೊಳ್ಳಬಹುದು. ಉಳಿದ ಸಂದರ್ಭದಲ್ಲಿ ಯಾವುದನ್ನು ನಾವು ಉತ್ಪ್ರೇಕ್ಷೆ ಎನ್ನಬಹುದೋ, ಈ ಎರಡು ದೇಶಗಳ ಕ್ರಿಕೆಟ್‌ ಹೋರಾಟದ ಸಂದರ್ಭದಲ್ಲಿ ಅವು ನಿಜವಾಗಿರುತ್ತವೆ. ಜಗತ್ತಿನ ಇತರೆ ಯಾವುದೇ ದೇಶಗಳ ನಡುವಿನ ಕ್ರಿಕೆಟ್‌ ಸಮರದಲ್ಲಿ ಈ ತೀವ್ರತೆಯನ್ನು ನೀವು ಕಾಣಲು ಸಾಧ್ಯವೇ ಇಲ್ಲ ! ಇಂಗ್ಲೆಂಡ್‌-ಆಸ್ಟ್ರೇಲಿಯ ನಡುವಿನ ಆ್ಯಷಸ್‌ ಟೆಸ್ಟ್‌ ಸರಣಿ ವೇಳೆಯೂ ಅಭಿಮಾನಿಗಳು ಮುಗಿಬೀಳುತ್ತಾರೆ, ಐದೂ ದಿನ ಬಿಡದೇ ನೋಡುತ್ತಾರೆ. ಮೈದಾನದಲ್ಲೂ ತುಂಬಿಕೊಂಡಿರುತ್ತಾರೆ. ಅವೆಲ್ಲ ಕೇವಲ ಪಂದ್ಯ ನಡೆಯುವ ಹಂತದಲ್ಲಿ ಮಾತ್ರ. ಪಂದ್ಯ ಮುಗಿದ ಬಳಿಕ ಬಹಳ ಕ್ರಿಕೆಟೇತರ ಚರ್ಚೆಗಳನ್ನು ಅವು ಉಳಿಸಿರುವುದಿಲ್ಲ. ಭಾರತ-ಪಾಕ್‌ ಪಂದ್ಯ ಮುಗಿದ ಮೇಲೂ ಚರ್ಚೆಗಳಾಗುತ್ತವೆ, ಹಲವು ಕ್ರಿಕೆಟೇತರ ಲೆಕ್ಕಾಚಾರಗಳು ಅಲ್ಲಿರುತ್ತವೆ. ದೇಶಭಕ್ತಿ, ಯುದ್ಧ, ಎರಡೂ ದೇಶಗಳ ನಡುವೆ ಎಂದಿಗೂ ಮುಗಿಯದಂತೆ ಕಾಣುತ್ತಿರುವ ದ್ವೇಷಗಳ ಜೊತೆಗೆ ಹಣಕಾಸಿನ ಲೆಕ್ಕಾಚಾರವೂ ಅಲ್ಲಿರುತ್ತವೆ. ಈ ದೇಶಗಳ ನಡುವೆ ಯಾವುದೇ ಹಂತದಲ್ಲಿ ಪಂದ್ಯ ನಡೆದರೂ ಸಂಬಂಧಪಟ್ಟ ಸಂಸ್ಥೆಗಳು ದಿಢೀರ್‌ ಶ್ರೀಮಂತವಾಗುತ್ತವೆ.

ಈ ವರ್ಷ ಇಂಗ್ಲೆಂಡ್‌ನ‌ಲ್ಲಿ ಏಕದಿನ ವಿಶ್ವಕಪ್‌ ಕ್ರಿಕೆಟ್‌ ನಡೆಯಲಿದೆ. ರೌಂಡ್‌ ರಾಬಿನ್‌ ಲೀಗ್‌ ಮಾದರಿಯ ಈ ಬಾರಿಯ ಲೀಗ್‌ ಹೋರಾಟದಲ್ಲಿ, ಭಾರತ ತಂಡ ಪಾಕಿಸ್ತಾನವನ್ನು ಓಲ್ಡ್‌ಟ್ರಾಫ‌ರ್ಡ್‌ನಲ್ಲಿ ಜೂ.16ರಂದು ಎದುರಿಸಲಿದೆ. ಇದು ಕೂಟದ 22ನೇ ಪಂದ್ಯ. ಈ ಪಂದ್ಯ ನಡೆಯುತ್ತಾ, ಇಲ್ಲವಾ ಎನ್ನುವುದು ಇನ್ನೂ ಖಚಿತಗೊಂಡಿಲ್ಲ. ಎರಡೂ ದೇಶಗಳ ನಡುವೆ ಯುದ್ಧಮಯ ವಾತಾವರಣ ಇರುವುದರಿಂದ, ಪಾಕ್‌ ವಿರುದ್ಧ ಭಾರತ ಆಡಬಾರದು ಎಂಬ ವಾದ ಇಡೀ ಭಾರತದಲ್ಲಿ ನಡೆಯುತ್ತಿದೆ. ಮತ್ತೂಂದು ಕಡೆ ಈ ಪಂದ್ಯ ನಡೆಯಬೇಕು ಎಂಬ ವಾದವೂ ಜೋರಾಗಿಯೇ ಇದೆ. ಎರಡೂ ವಾದಗಳು ಸರಿಯೆಂಬಂತೆ ಕಾಣುತ್ತಿವೆ. ಇದರ ಮಧ್ಯೆ ಬಿಸಿಸಿಐಗಾಗಲೀ (ಭಾರತೀಯ ಕ್ರಿಕೆಟ್‌ ಮಂಡಳಿ), ಪಿಸಿಬಿಗಾಗಲೀ (ಪಾಕಿಸ್ತಾನ ಕ್ರಿಕೆಟ್‌ ಮಂಡಳಿ), ಐಸಿಸಿಗಾಗಲೀ (ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ) ಈ ಪಂದ್ಯ ನಡೆಯದಿರುವುದು ಬೇಕಿಲ್ಲ. ಅದಕ್ಕೆ ಕಾರಣ ಕ್ರೀಡಾಸ್ಫೂರ್ತಿಯಾಗಲೀ, ಕ್ರೀಡಾ ಲೆಕ್ಕಾಚಾರವಾಗಲೀ ಅಲ್ಲ. ಅದಕ್ಕೂ ಮಿಗಿಲಾಗಿರುವುದು ಹಣಕಾಸು ಲೆಕ್ಕಾಚಾರ!

ಟಿ.ವಿ ವಾಹಿನಿ ಆದಾಯವಿರುವುದೇ ಇಲ್ಲಿ
2015ರಿಂದ 2023ರವರೆಗೆ ನಡೆಯುವ ಎಲ್ಲ ಐಸಿಸಿ ಕೂಟಗಳನ್ನು ನೇರಪ್ರಸಾರ ಮಾಡುವ ಹಕ್ಕನ್ನು ಸ್ಟಾರ್‌ನ್ಪೋರ್ಟ್ಸ್ ಪಡೆದುಕೊಂಡಿದೆ. ಭಾರತದಲ್ಲಿ ಸ್ಟಾರ್‌ ಇಂಡಿಯಾ, ಇನ್ನುಳಿದ ಕಡೆ ಸ್ಟಾರ್‌ ಮಿಡ್ಲ್ ಈಸ್ಟ್‌ ಸಂಸ್ಥೆ, ಐಸಿಸಿ ಆಯೋಜಿತ ಕ್ರಿಕೆಟನ್ನು ಪ್ರಸಾರ ಮಾಡುತ್ತವೆ. ಎಲ್ಲಿ ಸ್ಟಾರ್‌ ಸಮೂಹದ ಹಿಡಿತವಿಲ್ಲವೋ, ಆ ದೇಶದಲ್ಲಿ ಸ್ಟಾರ್‌ ಸಂಸ್ಥೆ ಬೇರೆ ಟಿ.ವಿ ವಾಹಿನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ ಸ್ಟಾರ್‌, ಐಸಿಸಿಗೆ ನೀಡಿರುವ ಮೊತ್ತ ಅಂದಾಜು 14,000 ಕೋಟಿ ರೂ.! ಈ ಅವಧಿಯಲ್ಲಿ ಸ್ಟಾರ್‌ ಮುಖ್ಯವಾಗಿ, 2 ಏಕದಿನ ವಿಶ್ವಕಪ್‌ (2019, 2023), 2 ಟಿ20 ವಿಶ್ವಕಪ್‌ (2016, 2020), 2 ಚಾಂಪಿಯನ್ಸ್‌ ಟ್ರೋಫಿ (2017, 2021)ಗಳನ್ನು ನೇರಪ್ರಸಾರ ಮಾಡಲಿದೆ. ಅಷ್ಟು ಮಾತ್ರವಲ್ಲ, ಬಿಸಿಸಿಐ, ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿ, ಇಂಗ್ಲೆಂಡ್‌ ಮಂಡಳಿ ಜೊತೆಗೂ ಸ್ಟಾರ್‌ ಒಪ್ಪಂದವಿದೆ. ಬರೀ ಐದು ವರ್ಷಗಳ ಅವಧಿಗೆ ಐಪಿಎಲ್‌ ನೇರಪ್ರಸಾರಕ್ಕೇ ಸ್ಟಾರ್‌ 18,000 ಕೋಟಿ ರೂ.ಗಳನ್ನು ವ್ಯಯ ಮಾಡಿದೆ! 

ಇಷ್ಟು ದುಬಾರಿ ಮೊತ್ತವನ್ನು ಕ್ರಿಕೆಟ್‌ ಜಗತ್ತಿನ ಮೇಲೆ ಹೂಡಿರುವ ಟೀವಿ ವಾಹಿನಿ, ಆ ಹಣವನ್ನು ಅದರ ದುಪ್ಪಟ್ಟು ಪ್ರಮಾಣದಲ್ಲಿ ಮರಳಿ ಪಡೆದುಕೊಳ್ಳಲು ಯೋಜನೆ ಮಾಡುವುದು ಸಹಜ. ತಾನು ಖರ್ಚು ಮಾಡಿರುವ ಹಣವನ್ನು ಜಾಹೀರಾತಿನ ಮೂಲಕ ಸ್ಟಾರ್‌ ವಾಪಸ್‌ ಪಡೆದುಕೊಳ್ಳುತ್ತದೆ. ಅದು ಸೆಕೆಂಡ್‌ಗೆ ಇಷ್ಟು ಹಣವೆನ್ನುವ ಲೆಕ್ಕಾಚಾರದ ಮೂಲಕ. ಅಂದರೆ, ಒಂದು ಜಾಹೀರಾತನ್ನು ಪ್ರತೀ ಬಾರಿ ಹತ್ತು ಸೆಕೆಂಡ್‌ ಪ್ರಸಾರ ಮಾಡಿದಾಗಲೂ ಸ್ಟಾರ್‌ ಸಂಸ್ಥೆಗೆ ಕನಿಷ್ಠ 5ರಿಂದ 6 ಲಕ್ಷ ರೂ. ಸಿಗುತ್ತದೆ. ಅದೇ ಭಾರತ-ಪಾಕಿಸ್ತಾನ ಪಂದ್ಯವಾದರೆ ಈ ಮೊತ್ತ ಕನಿಷ್ಠ 15 ಲಕ್ಷ ರೂ.ಗೇರುತ್ತದೆ! ಹೆಚ್ಚುಕಡಿಮೆ ಒಂದು ಪಂದ್ಯ ಮುಗಿಯುವಾಗ, ಕನಿಷ್ಠ ಒಂದು ಗಂಟೆ ಜಾಹೀರಾತು ಪ್ರಸಾರ ಮಾಡಿದರೂ, ಪಂದ್ಯ ಮುಗಿಯುವಾಗ ಕನಿಷ್ಠ 20 ಕೋಟಿ ರೂ.ಗಳನ್ನು ದುಡಿಯುತ್ತದೆ. ಒಂದು ವಿಶ್ವಕಪ್‌ ಮುಗಿಯುವಾಗ ಕನಿಷ್ಠ 1000 ಕೋಟಿ ರೂ.ಗಳನ್ನು ದುಡಿಯುತ್ತದೆ. ಇದು ಕೇವಲ ಕಡಿಮೆ ಲೆಕ್ಕಾಚಾರ.

ಭಾರತ-ಪಾಕ್‌ ಪಂದ್ಯಕ್ಕೆ ಲೆಕ್ಕಾಚಾರವೇ ಬದಲು
ಈ ಜಾಹೀರಾತು ದರ ಲೆಕ್ಕಾಚಾರ, ಭಾರತ-ಪಾಕಿಸ್ತಾನ ಪಂದ್ಯಕ್ಕೆ ಸಂಪೂರ್ಣ ಬದಲಾಗುತ್ತದೆ. 2017ರಲ್ಲಿ, ಇಂಗ್ಲೆಂಡ್‌ನ‌ಲ್ಲೇ ನಡೆದಿದ್ದ ಭಾರತ-ಪಾಕಿಸ್ತಾನ ನಡುವಿನ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯವನ್ನು ಗಮನಿಸಿದರೆ, ಈ ಲೆಕ್ಕಾಚಾರ ಖಚಿತಗೊಳ್ಳುತ್ತದೆ. ಇಲ್ಲಿ 30 ಸೆಕೆಂಡ್‌ನ‌ ಜಾಹೀರಾತಿಗೆ 1 ಕೋಟಿ ರೂ. ನಿಗದಿಯಾಗಿತ್ತು. ತೀರಾ ಮುಂಚಿತವಾಗಿಯೇ ಬುಕ್‌ ಮಾಡಿದ್ದರೆ ದರ 75 ಲಕ್ಷ ರೂ.ನಷ್ಟು ಕಡಿಮೆಯಾಗುತ್ತಿತ್ತು. ಈ ಒಂದು ಪಂದ್ಯ ಮುಗಿಯುವಾಗ ಟಿ.ವಿ ವಾಹಿನಿಯ ಆದಾಯ, ಕನಿಷ್ಠ 1 ಗಂಟೆಗೆ 120 ಕೋಟಿ ರೂ. ದಾಟಿರುತ್ತದೆ. ಇನ್ನು ಪಂದ್ಯ ಪೂರ್ವ, ಪಂದ್ಯಾನಂತರದ ಪ್ರಸಾರಗಳನ್ನು ಲೆಕ್ಕಾಚಾರ ಮಾಡಿದರೆ, ಹಣದ ಹೊಳೆಯೇ ಹರಿಯುತ್ತದೆ. ಇದೇ ಕಾರಣಕ್ಕೆ ನೇರಪ್ರಸಾರಕ್ಕಾಗಿ ಕೋಟ್ಯಂತರ ರೂ. ಸುರಿಯುವ ಟೀವಿವಾಹಿನಿಗಳಿಗೆ, ಅದನ್ನು ಹಿಂಪಡೆಯಲು ಭಾರತ-ಪಾಕಿಸ್ತಾನ ಪಂದ್ಯವೊಂದು ಸುಲಭ ದಾರಿ. ಇದು ಐಸಿಸಿ, ಬಿಸಿಸಿಐಗಳನ್ನು ಒತ್ತಡಕ್ಕೆ ಸಿಲುಕಿಸುತ್ತದೆ. 

ಐಸಿಸಿಗೇನು ಲಾಭ, ನಷ್ಟ?
ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ ಸಾಮಾನ್ಯವಾಗಿ ಕ್ರಿಕೆಟ್‌ ಕೂಟವೊಂದನ್ನು ಆಯೋಜಿಸಿದರೆ, ನೂರಾರು ಮಾರ್ಗದಲ್ಲಿ ಹಣವನ್ನು ಮೊಗೆಯಲು ದಾರಿ ಹುಡುಕಿಕೊಂಡಿರುತ್ತದೆ. ನೇರಪ್ರಸಾರದ ಮೂಲಕ ಬರುವ ಭಾರೀ ಮೊತ್ತವನ್ನು ಬಿಟ್ಟೂ ಇನ್ನೂ ಹಲವು ದಾರಿಗಳು ಅದಕ್ಕಿರುತ್ತವೆ. ಕೂಟಕ್ಕೆ ಹಲವು ಪ್ರಾಯೋಜಕರನ್ನು ಅದು ಪಡೆದುಕೊಳ್ಳುತ್ತದೆ. ಅವುಗಳ ಮೂಲಕ ಸಾವಿರಾರು ಕೋಟಿ ರೂ. ಬರುತ್ತದೆ. ಈ ಪ್ರಾಯೋಜಕ ಸಂಸ್ಥೆಗಳ ಜಾಹೀರಾತನ್ನು ಪಂದ್ಯದ ವೇಳೆ ಮೈದಾನದ ಅಲ್ಲಲ್ಲಿ ಹಾಕಲಾಗಿರುತ್ತದೆ. ಟಿಕೆಟ್‌ ಮೂಲಕ ಹಣ ಸಂಗ್ರಹಿಸುತ್ತದೆ. ಇದರಿಂದಲೂ ಕೋಟ್ಯಂತರ ರೂ. ಬರುತ್ತದೆ. ಒಂದು ವೇಳೆ ಭಾರತ-ಪಾಕಿಸ್ತಾನ ಪಂದ್ಯ ಇಲ್ಲವಾದರೆ, ಐಸಿಸಿ ಈ ಎಲ್ಲರಿಗೂ ನಷ್ಟಭರ್ತಿ ಮಾಡಿಕೊಡುವ ಅನಿವಾರ್ಯತೆಗೆ ಸಿಕ್ಕಿಕೊಳ್ಳುತ್ತದೆ. ವಸ್ತುಸ್ಥಿತಿಯಲ್ಲಿ ಇದರಿಂದ ಐಸಿಸಿಗೆ ಭಾರೀ ನಷ್ಟ!

ಬಿಸಿಸಿಐ, ಪಿಸಿಬಿಗೇನಾಗುತ್ತೆ?
ಐಸಿಸಿ ರೀತಿಯೇ ಬಿಸಿಸಿಐ ಹಾಗೂ ಪಿಸಿಬಿಗಳು ತಮ್ಮದೇ ಮಾದರಿಯಲ್ಲಿ ಹಲವು ಹಣದ ಮೂಲಗಳನ್ನು ಹುಡುಕಿಕೊಂಡಿರುತ್ತವೆ. ಐಸಿಸಿ ಗಳಿಸುವ ಲಾಭದಲ್ಲಿ ಈ ಸಂಸ್ಥೆಗಳಿಗೂ ಪಾಲಿರುತ್ತದೆ. ಐಸಿಸಿ ಕೂಟವನ್ನು ನೇರಪ್ರಸಾರ ಮಾಡುವ ಸ್ಟಾರ್‌ನ್ಪೋರ್ಟ್ಸ್ ಬಿಸಿಸಿಐ ಆಯೋಜಿಸುವ ಪಂದ್ಯಗಳನ್ನು ನೇರಪ್ರಸಾರ ಮಾಡುವ ಹಕ್ಕು ಹೊಂದಿದೆ. ಪರೋಕ್ಷವಾಗಿ ಪಂದ್ಯ ರದ್ದಾಗದಂತೆ ನೋಡಿಕೊಳ್ಳುವ ಭಾವನಾತ್ಮಕ, ಆರ್ಥಿಕ ಒತ್ತಡ ಬಿಸಿಸಿಐ, ಪಿಸಿಬಿ ಮೇಲೂ ಇರುತ್ತದೆ. ಅವು ನಿರ್ಧಾರ ತೆಗೆದುಕೊಳ್ಳಲಾಗದೇ ಒದ್ದಾಡುತ್ತವೆ. ಈ ಪೈಕಿ ಬಿಸಿಸಿಐ ಪಂದ್ಯ ರದ್ದಾದರೂ ಸಹಿಸಿಕೊಳ್ಳಬಲ್ಲದು. ಪಾಕಿಸ್ತಾನ ಮಂಡಳಿ ತಡೆದುಕೊಳ್ಳಲಾರದು. ಪಾಕ್‌ ಕ್ರಿಕೆಟನ್ನು ಜೀವಂತವಿಟ್ಟಿರುವುದೇ ಭಾರತ-ಪಾಕ್‌ ಪಂದ್ಯಗಳು. ಅದು ವಿಶ್ವಮಟ್ಟದಲ್ಲಾದರೂ ನಡೆಯದೇ ಹೋದರೆ, ಅದರ ಪರಿಸ್ಥಿತಿ ವಿಕೋಪಕ್ಕೆ ಹೋದೀತು!

ದಾಖಲೆಯ ವೀಕ್ಷಣೆಯಿಂದ ಹುಟ್ಟಿಸುವ ಭರವಸೆ
ಭಾರತ-ಪಾಕಿಸ್ತಾನ ಪಂದ್ಯವೆಂದರೆ ಜನರು ಟೀವಿ ಮುಂದೆ ಅಂಟಿಕೊಳ್ಳುತ್ತಾರೆ. ಟೀವಿ ವೀಕ್ಷಣೆ ಸಂಖ್ಯೆಯಲ್ಲಿ ಈ ಪಂದ್ಯಗಳು ದಾಖಲೆ ನಿರ್ಮಿಸಿವೆ. ಟೀವಿ ವಾಹಿನಿಗಳು, ಜಾಹೀರಾತುದಾರರು ಇದೇ ಕಾರಣಕ್ಕೆ ಈ ಪಂದ್ಯಗಳೆಂದರೆ ಮುಗಿಬೀಳುವುದು. ತಮ್ಮ ಉತ್ಪನ್ನಗಳನ್ನು ಗರಿಷ್ಠ ಪ್ರಮಾಣಕ್ಕೆ ಮುಟ್ಟಿಸಲು ಅವಕ್ಕೆ ಇದು ಸುವರ್ಣಾವಕಾಶ. ಭಾರತ-ಪಾಕ್‌ ನಡುವೆ ನಡೆದ 2017ರ ಚಾಂಪಿಯನ್ಸ್‌ ಟ್ರೋಫಿ ಲೀಗ್‌ ಪಂದ್ಯಕ್ಕೆ 32.4 ಕೋಟಿ ವೀಕ್ಷಕರು ಲಭಿಸಿದ್ದರು. ಇದು 3ನೇ ಸಾರ್ವಕಾಲಿಕ ದಾಖಲೆ. ಆ ವರ್ಷ ನಡೆದ ಇಡೀ ಐಪಿಎಲ್‌ ವೀಕ್ಷಣೆ ಪ್ರಮಾಣವೇ 41.10 ಕೋಟಿ!

ಗರಿಷ್ಠ ವೀಕ್ಷಣೆ ಕಂಡ ಪಂದ್ಯಗಳು
1.2011 ಏಕದಿನ ವಿಶ್ವಕಪ್‌: ಭಾರತ-ಶ್ರೀಲಂಕಾ ಫೈನಲ್‌-55.8 ಕೋಟಿ
2.2011 ಏಕದಿನ ವಿಶ್ವಕಪ್‌: ಭಾರತ  -ಪಾಕಿಸ್ತಾನ ಸೆಮಿಫೈನಲ್‌-49.5 ಕೋಟಿ
3. 2017 ಚಾಂಪಿಯನ್ಸ್‌ ಟ್ರೋಫಿ ಗುಂಪು ಹಂತ: ಭಾರತ-ಪಾಕಿಸ್ತಾನ-32.4 ಕೋಟಿ
4. 2015 ಏಕದಿನ ವಿಶ್ವಕಪ್‌: ಭಾರತ-ಪಾಕಿಸ್ತಾನ ಲೀಗ್‌ ಪಂದ್ಯ-31.3 ಕೋಟಿ
5. 2015 ಏಕದಿನ ವಿಶ್ವಕಪ್‌: ಭಾರತ-ದ.ಆಫ್ರಿಕಾ ಲೀಗ್‌ ಪಂದ್ಯ-30 ಕೋಟಿ

ಜಾಹೀರಾತು ದರ:
10 ಸೆಕೆಂಡ್‌ಗೆ (ಮಾಮೂಲಿ ಲೆಕ್ಕಾಚಾರ)
ಟಿ20 ಪಂದ್ಯ- 7-8 ಲಕ್ಷ ರೂ.
ಏಕದಿನ ಪಂದ್ಯ-5-6 ಲಕ್ಷ ರೂ.
ಟೆಸ್ಟ್‌ ಪಂದ್ಯ-1-2 ಲಕ್ಷ ರೂ. 

– ನಿರೂಪ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.