ಅಗರು ಮರಕ್ಕೆ ಇನಾಕ್ಯುಲೇಷನ್‌

Team Udayavani, May 20, 2019, 6:00 AM IST

ನೋಡಲಿಕ್ಕೆ ಅಡಕೆ ಮರದಷ್ಟೇ ಎತ್ತರವಿರುವ, ಗಾತ್ರದಲ್ಲಿ ಅಡಕೆ ಮರಕ್ಕಿಂತ ದಪ್ಪವಿರುವುದು ಅಗರ್‌ ಮರದ ವೈವಿಷ್ಟ್ಯ. ಈ ಮರ ಬೆಳೆದರೆ ಸುಗಂಧ ತೈಲ ಉತ್ಪಾದಿಸುವುದು. ಕರಾವಳಿಯ ಹಲವು ರೈತರು ಅಗರ್‌ ಮರ ಬೆಳೆದಿದ್ದಾರೆ, ಬೆಳೆಯುತ್ತಿದ್ದಾರೆ…

ಅಗರು ಮರಕ್ಕೆ ಇನಾಕ್ಯುಲೇಷನ್‌ ಎಂಬ ವಿಷಯ ಬೆಳ್ತಂಗಡಿ ತಾಲೂಕಿನ ರೈತರಲ್ಲಿ ಕುತೂಹಲ ಮೂಡಿಸಿದ್ದು ತೀರಾ ಸಹಜ. ಇಲ್ಲಿ ಅನೇಕ ರೈತರು ಅಡಿಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಹತ್ತು ವರ್ಷಗಳ ಹಿಂದೆ ಅಗರು ಮರಗಳನ್ನು ನಾಟಿ ಮಾಡಿ ಸಲಹಿದ್ದಾರೆ. ಮರಗಳು ಈಗ ಅಡಿಕೆಮರದಷ್ಟೇ ಎತ್ತರ ಬೆಳೆದಿವೆ. ಅದಕ್ಕಿಂತ ದಪ್ಪವಾಗಿ ಒಂದು ಮೀಟರ್‌ ಸುತ್ತಳತೆಯೂ ಬಂದಿವೆ. ಇದು ಇನಾಕ್ಯುಲೇಷನ್‌ ಮಾಡಿಸಲು ಸಕಾಲ. ಮರದ ಒಳಗೆ ಶಿಲೀಂಧ್ರದ ಸಂಪರ್ಕವಾಗಬೇಕು. ಕ್ರಮಶಃ ಮರ ಸಾಯುತ್ತ ಬರಬೇಕು. ಆಗ ಮಾತ್ರ ಅದರೊಳಗೆ ಉತ್ಪನ್ನವಾಗುತ್ತದೆ. ಬೆಲೆಬಾಳುವ ಸುಗಂಧಿತ ತೈಲ. ಅದೇ ಲೋಕಪ್ರಸಿದ್ಧವಾದ ಅಗರು ಎಂಬ ಅತ್ಯಂತ ಸುವಾಸನೆಯ ದ್ರವ್ಯವೆಂಬ ಖ್ಯಾತಿ ಗಳಿಸಿದೆ.

ವೇದಕಾಲದಿಂದಲೇ ಬಳಕೆಯಲ್ಲಿರುವ ನೈಸರ್ಗಿಕ ಪರಿಮಳ ದ್ರವ್ಯವಾಗಿರುವ ಅಗರ್‌ ಗಿಡಗಳ ಕೃಷಿಯು ಕರಾವಳಿಯ ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕುಂದಾಪುರ ಮತ್ತು ಹಾಸನ, ಮಲೆನಾಡುಗಳು ಸೇರಿದಂತೆ ಕರ್ನಾಟಕದ ಬಹು ಭಾಗದಲ್ಲಿ ಹರಡಲು ಕಾರಣವಾದವರು ವನದುರ್ಗಿ ಅಗರ್‌ವುಡ್‌ ಕಂಪೆನಿಯವರು. ಬೆಳ್ತಂಗಡಿ ತಾಲೂಕಿನ ಹಲವು ರೈತರು ಹತ್ತು ವರ್ಷಗಳ ಹಿಂದೆ ಈ ಕೃಷಿಯತ್ತ ಒಲವು ತೋರಿದರು. ಹೆಚ್ಚು ಆರೈಕೆ ಬೇಡದೆ ನೈಸರ್ಗಿಕವಾಗಿ ಬೆಳೆಯುವ ಅಗರ್‌ ಕೃಷಿ ಕೈಗೊಂಡವರಲ್ಲಿ ಮದ್ದಡ್ಕದ ಸಮೀಪದ ಕೆವುಡೇಲು ಮನೆಯ ಗಂಗಾಧರ ಭಟ್ಟರೂ ಒಬ್ಬರು. ಅವರ ಅಡಿಕೆ-ಅಗರ್‌ ಸಮ್ಮಿಶ್ರ ಕೃಷಿಯ ತೋಟದಲ್ಲಿ ಬೆಳೆದ 150 ಅಗರ್‌ ಮರಗಳ ಪೈಕಿ ಹತ್ತು ಮರಗಳಿಗೆ ಇನಾಕ್ಯುಲೇಷನ್‌ ಸಂಭ್ರಮ.

ಮರಗಳಿಗೆ ಚುಚ್ಚು ಮದ್ದು
ಇತ್ತೀಚೆಗಿನ ವರೆಗೂ ಅಗರ್‌ ಮರಗಳಿಗೆ ಇನಾಕ್ಯುಲೇಷನ್‌ ಮಾಡಲು ಚೀನಾದೇಶದಿಂದ ಪರಿಣತರು ಬರುತ್ತಿದ್ದರು. ಆದರೆ ಈಗ ವನದುರ್ಗಿ ಕಂಪೆನಿಯವರು ಸ್ಥಳೀಯ ರೈತರಿಗೆ ತರಬೇತಿ ನೀಡಿ ಈ ಕೆಲಸವನ್ನು ಮಾಡಿಸುತ್ತಿದ್ದಾರೆ. ಮಾಣಿಯ ಪ್ರವೀಣಚಂದ್ರ ಮತ್ತು ಹುಬ್ಬಳ್ಳಿಯ ಶಿವರಾಜ್‌ ಜತೆಗೂಡಿ ಬೆಳ್ತಂಗಡಿಯ ರೈತರ ಸಿದ್ಧವಾಗಿ ನಿಂತ ಮರಗಳಿಗೆ ಶಿಲೀಂಧ್ರ ಸಂಪರ್ಕವಾಗುವ ಚುಚ್ಚುಮದ್ದನ್ನು ಕೊಡುವ ಕೆಲಸ ಮಾಡುತ್ತಿದ್ದಾರೆ.

ಇನಾಕ್ಯುಲೇಷನ್‌ ಮಾಡುವ ಮರದ ಬುಡದಿಂದ ಶಿರೋಭಾಗದ ತನಕ ನೂರೆಪ್ಪತ್ತಕ್ಕಿಂತ ಅಧಿಕ ರಂಧ್ರಗಳನ್ನು ಕೊರೆಯಲಾಗುತ್ತದೆ. ಪೆಟ್ರೋಲ್‌ ಚಾಲಿತ ಯಂತ್ರವನ್ನು ಬಳಸಿ ಭೈರಿಗೆಯಿಂದ ರಂಧ್ರ ಕೊರೆದು ವಿಶಿಷ್ಟವಾದ ಸಿರಿಂಜಿನೊಳಗೆ ಔಷಧವನ್ನು ತುಂಬಿ ಸೂಜಿಯಿಂದ ರಂಧ್ರದೊಳಗೆ ಅದನ್ನು ಸೇರಿಸಿ ಮರದ ಬಿರಡೆಯಿಂದ ಲಾಕ್‌ ಮಾಡುತ್ತಾರೆ. ಇದರಲ್ಲಿ ಬಳಸುವ ಮೂರು, ನಾಲ್ಕು ಧದ ಔಷಧಿಗಳಿವೆ. ಗಂಗಾಧರ ಭಟ್ಟರ ತೋಟದಲ್ಲಿ ಯಾವ ಔಷಧದಿಂದ ಶೀಘ್ರವಾಗಿ ಶಿಲೀಂಧ್ರ ಬೆಳೆಯುತ್ತದೆ ಎಂಬ ಪರೀಕ್ಷೆಗಾಗಿ ಪ್ರಾಯೋಗಿಕವಾಗಿ ಎಲ್ಲವನ್ನೂ ಉಪಯೋಗಿಸಿದ್ದಾರೆ. ಪ್ರತಿಯೊಂದು ಮರದ ಮೇಲೂ ಔಷಧ ಪ್ರಯೋಗಿಸಿದ ದಿನಾಂಕ ಮತ್ತು ಅದರ ಹೆಸರಿನ ತಗಡಿನ ಸ್ಟಿಕ್ಕರ್‌ ಅಂಟಿಸುತ್ತಾರೆ.

ವರ್ಷದೊಳಗೇ ಗೊತ್ತಾಗುತ್ತೆ
ಒಂಭತ್ತರಿಂದ ಹನ್ನೆರಡು ತಿಂಗಳೊಳಗೆ ಮರದ ಎಲೆಗಳು ಉದುರಿ ಕೊಂಬೆಗಳು ಒಣಗುವ ಪ್ರಕ್ರಿಯೆ ಆರಂಭವಾದರೆ ಇನಾಕ್ಯುಲೇಷನ್‌ ಕೆಲಸ ಮಾಡಿದೆ ಎಂದರ್ಥ. ಹಾಗಾಗಲಿಲ್ಲವೆಂದಾದರೆ ಮತ್ತೂಮ್ಮೆ ಇನಾಕ್ಯುಲೇಷನ್‌ ಮಾಡಿಸಬೇಕು. ಔಷಧ ಸ್ವೀಕೃತವಾದರೆ ಒಂದು ವರ್ಷದಲ್ಲಿ ಮರದ ಮಧ್ಯಭಾಗದಲ್ಲಿ ಕೆತ್ತಿ ನೋಡಿದರೆ ಒಳಗಿನ ತಿರುಳು ಕಂದು ಅಥವಾ ಕಪ್ಪು ವರ್ಣ ತಳೆದಿರುವುದು ಕಾಣಿಸುತ್ತದೆ. ಈ ಕಪ್ಪಗಿನ ತಿರುಳಿನಲ್ಲಿದೆ ಸುಗಂಧಿತವಾದ, ಬೆಲೆಬಾಳುವ ಅಗರ್‌ ತೈಲ. ಒಂದು ವರ್ಷದ ಮರದಲ್ಲಿ ಸಿಗುವ ತೈಲ ಹದಿನೈದರಿಂದ ಇಪ್ಪತ್ತು ಗ್ರಾಮ್‌. ಅಷ್ಟು ಸಿಗಬೇಕಾದರೆ ಮರವನ್ನು ಕತ್ತರಿಸಿದಾಗ ಎಪ್ಪತ್ತು ಕಿಲೋದಷ್ಟು ಚಕ್ಕೆಗಳು ದೊರಕಬೇಕು.

ಒಂದು ಮರದಿಂದ ಗರಿಷ್ಠ ಎಷ್ಟು ಆದಾಯ ಬರಬಹುದು? ಹದಿನೈದು ಗ್ರಾಮ್‌ ತೈಲ ಬಂದರೆ ಹತ್ತರಿಂದ ಹದಿನೈದು ಸಾವಿರ ನಿರೀಕ್ಷಿತ. ಎರಡು ವರ್ಷ ಹಾಗೆಯೇ ಉಳಿಸಿದರೆ ಹೆಚ್ಚು ಆದಾಯ ಸಿಗುತ್ತದೆ. ಐದು ವರ್ಷ ಕಾದರೆ ಒಂದು ಮರ ಇಪ್ಪತ್ತೆ„ದು ಸಾವಿರ ತರಲು ಸಾಧ್ಯವಿದೆ. ಸಾಮಾನ್ಯವಾಗಿ ಹತ್ತು ಮರಗಳಿಂದ ಒಂದು ಲಕ್ಷ ರೂಪಾಯಿ ಆದಾಯ ನಿರೀಕ್ಷಿಸಬಹುದು. ಲೆಕ್ಕ ಹಾಕಿದರೆ ಹತ್ತು ವರ್ಷಗಳಲ್ಲಿ ರಬ್ಬರ್‌ ಮತ್ತು ಅಡಿಕೆಮರಗಳಿಂದ ಇಷ್ಟು ಆದಾಯ ಬಂದಿರುವುದಿಲ್ಲ.

ಇನಾಕ್ಯುಲೇಷನ್‌ ಮಾಡಿಸಲು ಎಷ್ಟು ವೆಚ್ಚ ಬರುತ್ತದೆ ಅಂದಿರಾ? ಒಂದು ಮರಕ್ಕೆ 800 ರೂಪಾಯಿಯ ಔಷಧಿ ಬೇಕು. ಇದರಲ್ಲಿ ಶೇ. 50 ವೆಚ್ಚವನ್ನು ವನದುರ್ಗಿ ಕಂಪೆನಿ ರೈತರಿಗೆ ಕೊಡುತ್ತದೆ. ರೈತರೇ ಇದನ್ನು ಮಾಡಲು ಕಲಿತರೆ ಕೂಲಿಯ ವೆಚ್ಚ ಉಳಿಯುತ್ತದೆ. ಆದರೆ ಮರದ ಮೇಲೆ ಏರಿ ರಂಧ್ರ ಕೊರೆಯಬೇಕು. ಇಬ್ಬರು ಒಂದು ದಿನದಲ್ಲಿ ಗರಿಷ್ಠ ನಾಲ್ಕಕ್ಕಿಂತ ಅಧಿಕ ಮರಗಳಿಗೆ ಔಷಧಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಒಂದು ಮರದ ಇನಾಕ್ಯುಲೇಷನ್‌ ಕೆಲಸಕ್ಕೆ ಒಂದೂವರೆಯಿಂದ ಎರಡು ಸಾವಿರ ರೂ. ವೆಚ್ಚ ತಗಲುತ್ತದೆ ಎಂದು ಹೇಳುತ್ತಾರೆ ಗಂಗಾಧರ ಭಟ್ಟರು. ರಂಧ್ರಕ್ಕೆ ಹಾಕುವ ಬಿರಡೆಗೂ ಹತ್ತು ರೂಪಾಯಿ ಬೆಲೆ ಇದೆಯಂತೆ.

ಗಂಗಾಧರ ಭಟ್ಟರ ತೋಟದಲ್ಲಿ ಇನಾಕ್ಯುಲೇಷನ್‌ ಮುಗಿದಿದೆ. ಇನ್ನು ಏನಿದ್ದರೂ ಒಂದು ವರ್ಷ ಕಾಯುವ ಕೆಲಸ. ಮರದೊಳಗೆ ಶಿಲೀಂಧ್ರ ಬೆಳೆದು ಮರ ಸತ್ತು ಒಳಗಿನ ತಿರುಳು ಕಂದು ವರ್ಣ ತಳೆದರೆ ಹತ್ತು ವರ್ಷದ ಶ್ರಮ ಸಾರ್ಥಕವಾಗುತ್ತದೆ, ಇನ್ನಷ್ಟು ರೈತರ ಒಲವು ಇದರ ಕೃಷಿಯತ್ತ ತಾನಾಗಿ ಹರಿಯುತ್ತದೆ.

ಔಷಧ ತಯಾರಿಕೆಗೆ ಅತ್ಯಗತ್ಯ
ಅಗರ್‌ ಮರದ ತೈಲದಲ್ಲಿ 150ಕ್ಕಿಂತ ಹೆಚ್ಚು ರಾಸಾಯನಿಕಗಳ ಸಂಯುಕ್ತವಾಗಿವೆ. ಸುಗಂಧ ದ್ರವ್ಯಗಳ ತಯಾರಿಕೆ ಮಾತ್ರವಲ್ಲ, ಔಷಧಿಗಳ ತಯಾರಿಕೆಯಲ್ಲೂ ಅದನ್ನು ಉಪಯೋಗಿಸುತ್ತಾರೆ. ತೈಲ, ಹುಡಿ, ಚಕ್ಕೆ ಎಲ್ಲವೂ ಉಪಯುಕ್ತವಾಗಿವೆ. ಕಾಮಾಲೆ, ಸಿಡುಬು, ಅಸ್ತಮಾ, ಸಂಧಿವಾತ, ಚರ್ಮದ ಕಾಯಿಲೆಗಳು, ಹೊಟ್ಟೆನೋವು, ಯಕೃತ್‌, ಕಿಡ್ನಿ, ಶ್ವಾಸಕೋಶ ಸಮಸ್ಯೆಗಳು, ಹೊಟ್ಟೆಯ ಗೆಡ್ಡೆ, ನರಮಂಡಲದ ತೊಂದರೆ, ಹೆರಿಗೆ ಸಮಯದ ನೋವು, ಕ್ಯಾನ್ಸರ್‌, ಅತಿಸಾರ ಹೀಗೆ ಹಲವು ವ್ಯಾಧಿಗಳ ಔಷಧ ತಯಾರಿಕೆಯಲ್ಲಿ ಅದರ ಪಾತ್ರವಿದೆ.

ಪ. ರಾಮಕೃಷ್ಣ ಶಾಸ್ತ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬಾಗಲಕೋಟೆ: ಜಿಲ್ಲಾ ಕಾಂಗ್ರೆಸ್‌ ನಾಯಕತ್ವ ಬದಲಾವಣೆಗೆ ಕೈ ನಾಯಕರು ಈಗ ಗಂಭೀರ ಚಿಂತನೆ ನಡೆಸಿದ್ದು, ಜಿಲ್ಲಾ ಅಧ್ಯಕ್ಷರ ಬದಲಾವಣೆಗಾಗಿಯೇ ಕೆಪಿಸಿಸಿಯಿಂದ ನೇಮಕಗೊಂಡಿದ್ದ...

  • ಬೆಳಗಾವಿ: ಸಹೋದರ ಲಖನ್ ಜಾರಕಿಹೊಳಿಗೆ ಒಳ್ಳೆಯದಾಗಲಿ. ಅವನು ಸತೀಶ್ ಜಾರಕಿಹೊಳಿ ಜೊತೆಗೆ ಸೇರಿ ಹಾಳಾಗುವುದು ಬೇಡ. ಲಖನ್ ಶಾಸಕ ಆದ್ರೆ ಮೊದಲು ಸಂತೋಷ ನಾನು ಪಡುತ್ತೇನೆ...

  • ಕುಂದಗೋಳ: ಸರ್ಕಾರಿ ಕಾರ್ಯಕ್ರಮಕ್ಕೆ ನಮ್ಮನ್ನು ಏಕೆ ಕರೆಯುತ್ತಿಲ್ಲ ಎಂದು ತಾಪಂ ಸರ್ವ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ತಾಪಂ...

  • ಧಾರವಾಡ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ತಂಬಾಕು ತನಿಖಾ ದಳ ದಿಂದ 21ಕ್ಕೂ ಹೆಚ್ಚು ದಿಢೀರ್‌ ದಾಳಿ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ...

  • ಧಾರವಾಡ: ಕೋಟಿ ಕೋಟಿ ರೂಪಾಯಿ ಸುರಿದು ಕಟ್ಟಿದ ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ. ಆದರೆ ಅಲ್ಲಲ್ಲಿ ಸೋರುತ್ತಿದೆ. ನೆಲ ಮಹಡಿಯಲ್ಲಿಯೋ ಚರಂಡಿ ನೀರು ಮತ್ತು ಮಳೆ...