ಕೀ ಪ್ಯಾಡ್‌ ಮೊಬೈಲ್‌ಗ‌ಳು ಈಗಲೂ ಬದುಕಿವೆ… !

Team Udayavani, Jan 6, 2019, 1:16 PM IST

ಸ್ಮಾರ್ಟ್‌ಫೋನ್‌ ಅಬ್ಬರ ಇದ್ದರೂ ಕೀಪ್ಯಾಡ್‌ ಮೊಬೈಲ್‌ಗ‌ಳು  ಈಗಲೂ ಮಾರಾಟವಾಗುತ್ತಿವೆ. ಇದರಿಂದ ಕಂಪೆನಿಗಳು ಆಗಾಗ ಹೊಸ ಮಾಡೆಲ್‌ಗ‌ಳನ್ನು ಬಿಡುಗಡೆ ಮಾಡುತ್ತಲೂ ಇವೆ.  ತಂದೆಗೋ, ತಾಯಿಗೋ ಅಥವಾ ಹೆಚ್ಚುವರಿಯಾಗಿ ಇಟ್ಟುಕೊಳ್ಳಲು ಒಂದು ಕೀ ಪ್ಯಾಡ್‌ ಮೊಬೈಲ್‌ ಬೇಕು. ಯಾವುದು ಬೆಸ್ಟ್‌ ಎಂಬ ಪ್ರಶ್ನೆ ಹಲವರಲ್ಲಿರುತ್ತದೆ. ಅದಕ್ಕಾಗಿ ಇಲ್ಲಿದೆ ಮಾಹಿತಿ.

ಇಂದಿನ ದಿನಗಳಲ್ಲಿ ಮೊಬೈಲ್‌ ಫೋನ್‌ ಎಂದಾಕ್ಷಣ ನಮ್ಮೆಲ್ಲರ ಕಲ್ಪನೆಗೆ ಬರೋದು ಸ್ಪರ್ಶ ಪರದೆ, ದೊಡ್ಡ ಪರದೆ ಇರುವ ಸ್ಮಾರ್ಟ್‌ ಫೋನ್‌ಗಳೇ. ಅವುಗಳ ರ್ಯಾಮು, ರೋಮು, ಪಿಕ್ಸೆಲ್‌ ಭರಾಟೆಯಲ್ಲಿ ಸಾಮಾನ್ಯ ಕೀಪ್ಯಾಡ್‌ ಮೊಬೈಲ್‌ಗ‌ಳು ಮೂಲೆ ಸೇರಿವೆ. ಆದರೂ ಹಿರಿಯರಿಗೆ, ಸ್ಮಾರ್ಟ್‌ ಫೋನ್‌ ಬಳಕೆ ಕಷ್ಟ ಎನ್ನುವವರಿಗೆ, ನಿರುಮ್ಮಳವಾಗಿ ಮೂರು ದಿನ ಬ್ಯಾಟರಿ ಬಾಳಿಕೆ ಬರಬೇಕು ಎನ್ನುವವರಿಗೆ, ಕೀಪ್ಯಾಡ್‌ ಮೊಬೈಲ್‌ ಅತ್ಯಗತ್ಯ. ಎಷ್ಟೋ ಜನ ಒಂದು ಸ್ಮಾರ್ಟ್‌ಫೋನ್‌ ಇಟ್ಟುಕೊಂಡು, ಕರೆ ಮಾಡಲು ಇನ್ನೊಂದು ಕೀಪ್ಯಾಡ್‌ ಮೊಬೈಲ್‌ ಸಹ ಜೊತೆಗಿರಿಸಿಕೊಂಡಿರುತ್ತಾರೆ. ಸ್ಮಾರ್ಟ್‌ ಫೋನ್‌ ಎಲ್ಲಾದರೂ ಕೈಕೊಡಬಹುದು. ಆದರೆ ಕೀಪ್ಯಾಡ್‌ ಫೋನ್‌ ಕೈಕೊಡಲ್ಲ! ಎಷ್ಟು ಸಾರಿ ಬೀಳಿಸಿದರೂ ಹಾಳಾಗಲ್ಲ. 
 
ಭಾರತಕ್ಕೆ ಮೊಬೈಲ್‌ ಫೋನ್‌ ಬಂದ ಹೊಸತರಲ್ಲಿ ನೋಕಿಯಾ ಕಂಪೆನಿ 3310 ಅತ್ಯಂತ ಜನಪ್ರಿಯ ಕೀಪ್ಯಾಡ್‌ ಫೋನ್‌. ಸುಮಾರು 3 ರಿಂದ 4 ಸಾವಿರ ರೂ. ಬೆಲೆಯ ಆ ಫೋನ್‌ಗೆ  ಇದ್ದ ಮರ್ಯಾದೆ ಈಗ ಐಫೋನ್‌ಗೂ ಇಲ್ಲವೇನೋ? ಅಂಥದ್ದೊಂದು ಪುಟ್ಟ ಉಪಕರಣದಲ್ಲಿ ವೈರ್‌ ಸಂಪರ್ಕ ಇಲ್ಲದೇ ಎಲ್ಲೆಂದರಲ್ಲಿ ಅದು ಹೇಗೆ ಮಾತಾಡಲು ಸಾಧ್ಯ ಎಂಬ ಬೆರಗುಂಟಾಗುತ್ತಿತ್ತು.

ಅದಿರಲಿ, ಈಗ ಟಾಪಿಕ್ಕಿಗೆ ಬರೋಣ. ಸ್ಮಾರ್ಟ್‌ಫೋನ್‌ ಅಬ್ಬರ ಇದ್ದರೂ ಕೀಪ್ಯಾಡ್‌ ಮೊಬೈಲ್‌ಗ‌ಳು  ಈಗಲೂ ಮಾರಾಟವಾಗುತ್ತಿವೆ. ನೋಕಿಯಾ ಕಂಪೆನಿ ಆಗಾಗ ಹೊಸ ಮಾಡೆಲ್‌ಗ‌ಳನ್ನು ಬಿಡುಗಡೆ ಮಾಡುತ್ತಲೂ ಇದೆ. ತಂದೆಗೋ, ತಾಯಿಗೋ ಅಥವಾ ಹೆಚ್ಚುವರಿಯಾಗಿ ಇಟ್ಟುಕೊಳ್ಳಲು ಒಂದು ಕೀ ಪ್ಯಾಡ್‌ ಮೊಬೈಲ್‌ ಬೇಕು. ಯಾವುದು ಬೆಸ್ಟ್‌ ಎಂಬ ಪ್ರಶ್ನೆ ಹಲವರಲ್ಲಿರುತ್ತದೆ. ಅದಕ್ಕಾಗಿ ಕೆಲವು ಉತ್ತಮ ಎನಿಸಬಹುದಾದ ಕೆಲವು ಮೊಬೈಲ್‌ಗ‌ಳ ಸಂಕ್ಷಿಪ್ತ ಪರಿಚಯ ನೀಡಲಾಗಿದೆ.

ಸ್ಯಾಮ್‌ಸಂಗ್‌ ಗುರು ಮ್ಯೂಸಿಕ್‌ 2: ಕೀಪ್ಯಾಡ್‌ ಮೊಬೈಲ್‌ ಎಂದಾಕ್ಷಣ ತೀರಾ 1 ಸಾವಿರ ಅಥವಾ ಅದಕ್ಕಿಂತ ಕಡಿಮೆ ಬೆಲೆಯೊಳಗೆ ಕೊಳ್ಳಲು ಹೋದರೆ ತುಂಬಾ ಚಿಕ್ಕದಾದ, ಕೀಪ್ಯಾಡ್‌ಗಳು ಬಳಸಲು ಮೃದುವಾಗಿಲ್ಲದ, ಬಳಸಲು ಕಿರಿಕಿರಿಯೆನಿಸುವಂಥ ಮೊಬೈಲ್‌ಗ‌ಳು ಸಿಗುತ್ತವೆ. ಹಾಗಾಗಿ, 1500-1600 ರೂ. ಬಜೆಟ್‌ನ ಫೋನುಗಳು ಕೊಂಡರೆ ಒಳಿತು. ಈ ಬಜೆಟ್‌ನಲ್ಲಿ ಬಹಳ ಉತ್ತಮವಾದ ಫೋನ್‌ ಎಂದರೆ ಸ್ಯಾಮ್‌ಸಂಗ್‌ ಗುರು ಮ್ಯೂಸಿಕ್‌ 2. ಬೇಸಿಕ್‌ ಫೋನ್‌ ಬೇಕೆನ್ನುವ ಹಲವರಿಗೆ ಈ ಫೋನ್‌ ಬೆಸ್ಟ್‌. ಅಂಗಡಿಗೇ ಹೋದರೂ ಅಥವಾ ಅಮೆಜಾನ್‌ನಲ್ಲಿ ಕೊಂಡರೂ ಈ ಫೋನ್‌ ಬೆಲೆ 1625 ರೂ. ಆಸುಪಾಸಿನಲ್ಲೇ ಇರುತ್ತದೆ.   ಇದರಲ್ಲಿ 800 ಎಂಎಎಚ್‌ ಬ್ಯಾಟರಿ ಇದೆ.  2 ಇಂಚಿನ  ಡಿಸ್‌ಪ್ಲೇ, ಡುಯಲ್‌ ಸಿಮ್‌ ಸೌಲಭ್ಯ ಇದೆ. ಮೆಮೊರಿ ಕಾರ್ಡ್‌ಗೆ ಎಂಪಿ3 ಹಾಡುಗಳನ್ನು ಡೌನ್‌ಲೋಡ್‌ ಮಾಡಿಕೊಂಡು  ಕೇಳಬಹುದು. ಕ್ಯಾಮೆರ ಸೌಲಭ್ಯ ಇಲ್ಲ. ನೆನಪಿರಲಿ ಬೇಸಿಕ್‌ ಕೀಪ್ಯಾಡ್‌ ಫೋನ್‌ ಗಳಲ್ಲಿ 3ಜಿ 4ಜಿ  ನೆಟ್‌ವರ್ಕ್‌ ಸೌಲಭ್ಯ ಇರುವುದಿಲ್ಲ. (ಜಿಯೋ ಫೋನ್‌ ಹೊರತುಪಡಿಸಿ)

ನೋಕಿಯಾ 216: ಕೀಪ್ಯಾಡ್‌ ಮೊಬೈಲ್‌ಗ‌ಳಲ್ಲಿ ಆಕರ್ಷಕವಾದ ಇನ್ನೊಂದು ಮೊಬೈಲ್‌ ಎಂದರೆ, ಈ ನೋಕಿಯಾ 216. ಇದರ ಕೀಪ್ಯಾಡ್‌ ವಿನ್ಯಾಸ . 2.4 ಇಂಚಿನ ಪರದೆ,  ನೋಡಲು ಸುಂದರವಾಗಿದೆ. 2000 ಕಾಂಟಾಕ್ಟ್ (ನಂಬರ್‌ಗಳು) ಗಳನ್ನು ಸೇವ್‌ ಮಾಡಿಕೊಳ್ಳಬಹುದು. 1020 ಎಂಎಎಚ್‌ ಬ್ಯಾಟರಿ ಇದೆ. 32 ಜಿಬಿವರೆಗೆ ಮೆಮೊರಿ ಕಾರ್ಡ್‌ ಹಾಕಿಕೊಳ್ಳಬಹುದು.

ಮೆಮೊರಿಕಾರ್ಡ್‌ನಲ್ಲಿ ವಿಡಿಯೋ ಹಾಗೂ ಎಂಪಿ3 ಹಾಡುಗಳನ್ನು ಡೌನ್‌ ಲೋಡ್‌ ಮಾಡಿ ವೀಕ್ಷಣೆ-ಆಲಿಸಬಹುದು. 0.3 ಮೆಗಾಪಿಕ್ಸಲ್‌ ಹಿಂಬದಿ ಕ್ಯಾಮರಾ (ಎಲ್‌ಇಡಿ ಫ್ಲಾಶ್‌!) ಮತ್ತು 0.3 ಮೆ.ಪಿ. ಸೆಲ್ಫಿà ಕ್ಯಾಮೆರ ಕೂಡ ಇದೆ.  ಇದರ ದರ ಅಮೆಜಾನ್‌ನಲ್ಲಿ 2, 450 ರೂ.  ಅಂಗಡಿಗಳಲ್ಲೂ ಇದೇ ದರ ಅಥವಾ ಇದಕ್ಕಿಂತ ಕೊಂಚ ಕಡಿಮೆ ಬೆಲೆಗೆ ದೊರಕಬಹುದು.

ಸ್ಯಾಮ್‌ಸಂಗ್‌ ಮೆಟ್ರೋ 350:  ಈ ಫೋನ್‌ ಸ್ಯಾಮ್‌ಸಂಗ್‌ ಗುರು ಮ್ಯೂಸಿಕ್‌ 2 ಗಿಂತ ದೊಡ್ಡದಾಗಿದೆ.  ಇದೂ ಕೂಡ 2.4 ಇಂಚಿನ ಪರದೆ ಹೊಂದಿದೆ. 2 ಮೆ.ಪಿ. ಹಿಂಬದಿ ಕ್ಯಾಮರಾ ಹೊಂದಿದೆ. 16 ಜಿಬಿವರೆಗೂ ಮೆಮೊರಿ ಕಾರ್ಡ್‌ ಹಾಕಬಹುದು. ಡುಯಲ್‌ ಸಿಮ್‌ ಸೌಲಭ್ಯ ಇದೆ. 1200 ಎಂಎಎಚ್‌ ಬ್ಯಾಟರಿ ಇದೆ. ಎಫ್ಎಂ ರೇಡಿಯೋ, ಮ್ಯೂಸಿಕ್‌ ಪ್ಲೇಯರ್‌, ವಿಡಿಯೋ ಪ್ಲೇಯರ್‌ ಇದೆ. ಬೆಲೆ- 2800 ರೂ. ಆಸುಪಾಸಲ್ಲಿದೆ.

ನೋಕಿಯಾ 3310:   ನೋಕಿಯಾ ಕಂಪೆನಿಯ 3310 ಮೊಬೈಲ್‌ನ ಜನಪ್ರಿಯತೆ ಎಷ್ಟಿತ್ತು ಎಂದರೆ, ಕಂಪೆನಿ ಈಗಿನ ಸ್ಮಾರ್ಟ್‌ಫೋನ್‌ ಜಮಾನದಲ್ಲೂ ಅದನ್ನು ಒಂದಷ್ಟು ಬದಲಾವಣೆ ಮಾಡಿ ಮತ್ತೆ 2017ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಹಳೆಯ ಜಾವಾ ಬೈಕ್‌ ಗಳಿಗಿರುವಂತೆಯೇ ಫೋನ್‌ಗಳಲ್ಲಿ ಈ ಮಾಡೆಲ್‌ಗ‌ೂ ಬಹಳ ಕ್ರೇಜ್‌ ಇದೆ.
ಹೆಚ್ಚು ಕಮ್ಮಿ ಹಳೆಯ 3310 ಫೋನ್‌ನಂತೆಯೇ ವಿನ್ಯಾಸವಿದೆ. ಎರಡು ಸಿಮ್‌ ಸೌಲಭ್ಯ. 2.4 ಇಂಚಿನ ಡಿಸ್‌ಪ್ಲೇ, 2 ಮೆ.ಪಿ. ಕ್ಯಾಮೆರ, 2000 ಕಾಂಟಾಕ್ಟ್$ ಸೇವ್‌ ಮಾಡಿಕೊಳ್ಳಬಹುದು. 1200 ಎಂಎಎಚ್‌ ಬ್ಯಾಟರಿ ಇದೆ. ಮೈಕ್ರೋ ಯುಎಸ್‌ಬಿ ಕೇಬಲ್‌ ಪೋರ್ಟ್‌ ಇದೆ.  ಎಂಪಿ3, ಎಫ್ ಎಂ ರೇಡಿಯೋ  ಇದೆ.  ಇದರ ದರ ಅಮೆಜಾನ್‌.ಇನ್‌ ನಲ್ಲಿ 3200 ರೂ. ಇದೆ.

ಜಿಯೋ ಫೋನ್‌
ಇದೆಲ್ಲದರ ನಡುವೆ  ಜಿಯೋ ಕೀಪ್ಯಾಡ್‌ ಫೋನಿನ ಬಗ್ಗೆ ಹೇಳದಿದ್ದರೆ ತಪ್ಪಾದೀತು. ಕೀಪ್ಯಾಡ್‌ ಫೋನಿನಲ್ಲೇ 4ಜಿ ಇಂಟರ್‌ನೆಟ್‌ ಇರಬೇಕು.  ವಾಟ್ಸಪ್‌, ಫೇಸ್‌ಬುಕ್‌  ಬಳಸಬೇಕು ಎನ್ನುವವರಿಗಾಗಿ 1,500 ರೂ. ದರದಲ್ಲಿ “ಜಿಯೋ ಫೋನ್‌’ ಎಂಬ ಮಾಡೆಲ್‌ ಬಿಡುಗಡೆ ಮಾಡಿದೆ.  ಇದರಲ್ಲಿ ಮೈ ಜಿಯೋ  ಆ್ಯಪ್‌ಗ್ಳನ್ನು ಬಳಸಬಹುದು, ಜಿಯೋ ಟಿವಿ, ಜಿಯೋ ಸಿನಿಮಾ ನೋಡಬಹುದು. ವೀಡಿಯೋ ಕಾಲಿಂಗ್‌ ಮಾಡಬಹುದು. 2000 ಎಂಎಎಚ್‌ ಬ್ಯಾಟರಿ ಇದೆ. 4 ಜಿಬಿ ಆಂತರಿಕ ಮೆಮೊರಿ ಇದ್ದು, 128 ಜಿಬಿವರೆಗೂ ಮೆಮೊರಿ ಕಾರ್ಡ್‌ ಹಾಕಿಕೊಳ್ಳಬಹುದು. ನೆನಪಿಡಿ ಇದನ್ನು ಜಿಯೋ ನೆಟ್‌ವರ್ಕ್‌ಗೆ ಮಾತ್ರ  ಬಳಸಲು ಸಾಧ್ಯ. ಇಯರ್‌ಫೋನ್‌ ಕನೆಕ್ಟ್ ಮಾಡದೇ ಎಫ್ಎಂ ಕೇಳಬಹುದು. ಇದಕ್ಕೆ ಕಾಯ್‌ ಎಂಬ ಆಪರೇಟಿಂಗ್‌ ಸಿಸ್ಟಂ ಇದ್ದು, 1 ಗಿ.ಹ. ಎರಡು ಕೋರ್‌ನ ಪ್ರೊಸೆಸರ್‌ ಇದೆ.  2 ಮೆ.ಪಿ. ಹಿಂಬದಿ ಹಾಗೂ 0.3 ಮೆಪಿ. ಮುಂಬದಿ ಕ್ಯಾಮೆರ ಇದೆ. ಇದನ್ನು 1500 ರೂ. ಭದ್ರತಾ ಠೇವಣಿ ಇಟ್ಟು ಕೊಳ್ಳಬಹುದೆಂದು ಕಂಪೆನಿ ಹೇಳಿದೆ.

ಹೊಸ ಬಿಡುಗಡೆ ನೋಕಿಯಾ 106
ಈ ನಡುವೆ ಹೊಸ ವರ್ಷದ ಮೊದಲ ವಾರ ನೋಕಿಯಾ ಇನ್ನೊಂದು ಹೊಸ ಕೀಪ್ಯಾಡ್‌ ಫೋನ್‌ ಬಿಡುಗಡೆ ಮಾಡಿದೆ. ಇದರ ಹೆಸರು ನೋಕಿಯಾ 106. ಇದರ ದರ ಅಂಗಡಿಗಳಲ್ಲಿ 1300 ರೂ. ಇದೆ.  ಆದರೆ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಇದಕ್ಕಿಂತ 200 ರೂ. ಜಾಸ್ತಿ ದರವಿದೆ.  1.8 ಇಂಚಿನ ಡಿಸ್‌ಪ್ಲೇ, 800 ಎಂಎಎಚ್‌ ಬ್ಯಾಟರಿಯಿದೆ. 2000 ಫೋನ್‌ಬುಕ್‌, ಮೈಕ್ರೋ ಯುಎಸ್‌ಬಿ ಚಾರ್ಜಿಂಗ್‌, ಎಫ್ಎಂ ರೇಡಿಯೋ, ಕ್ಯಾಮರಾ ಇಲ್ಲ. 1300 ರೂ. ದರಕ್ಕೆ ಇದು ವ್ಯಾಲ್ಯೂ ಫಾರ್‌ ಮನಿ ಎನ್ನಲಡ್ಡಿಯಿಲ್ಲ.

– ಬನಶಂಕರ ಆರಾಧ್ಯ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ