ಶಾಸನಗಳ ಕಣ್ಣಲ್ಲಿ ಕೆರೆ ಪರಂಪರೆ

Team Udayavani, Sep 16, 2019, 5:00 AM IST

ವಿಜಯನಗರ ಕಾಲದ ಕ್ರಿ.ಶ. 1369ರ ಶಾಸನ, ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪೋರುಮಾಮಿಲ್ಲದಲ್ಲಿ ದೊರಕಿದೆ. ಕೆರೆ ಯೋಗ್ಯ ಸ್ಥಳದ ಆಯ್ಕೆ, ನಿರ್ಮಾಣ, ನಿರ್ವಹಣೆಯ ಮಾರ್ಗದರ್ಶಕ ಅಂಶಗಳು ಇದರಲ್ಲಿವೆ. ಕೆರೆ ವಿಚಾರದಲ್ಲಿ ಈಗ ನಾವು ಏನೆಲ್ಲ ಹೇಳುತ್ತಿದ್ದೇವೆಯೋ ಅದೆಲ್ಲವನ್ನೂ ಈ ಶಾಸನ 600 ವರ್ಷಗಳ ಹಿಂದೆಯೇ ಹೇಳಿ ಮುಗಿಸಿದೆ!

ಎರಡು ಸಾವಿರ ವರ್ಷಗಳ ಹಿಂದೆಯೇ ನಮ್ಮ ದೇಶದಲ್ಲಿ ಕೆರೆ ನಿರ್ಮಾಣ ಶುರುವಾಯೆಂಬ ಮಾತಿದೆ. ಇದಕ್ಕೆ ಆಧಾರವಾಗಿ ಪ್ರಾಚ್ಯ ಸಂಶೋಧನಾ ಶಾಸ್ತ್ರ, ಪ್ರಾಗ್ರೆçತಿಹಾಸಿಕ ಸಂಶೋಧನೆ, ಉತನನ, ಶಾಸನ, ಸಾಹಿತ್ಯಕೃತಿ, ದೇಶಿ ಪ್ರವಾಸಿಗಳ ಬರಹ, ಅರಸುಯುಗದ ದಾಖಲೆ, ಸರಕಾರದ ಕಡತಗಳಲ್ಲಿ ಕೆರೆ ಕಥನಗಳಿವೆ. ಸಾವಿರಾರು ವರ್ಷಗಳಿಂದ ಕೆರೆ ಸನಿಹದ ಕಲ್ಲು ಬಂಡೆ, ತೂಬು, ದೇಗುಲಗಳ ಸನಿಹದಲ್ಲಿ ಬರೆದಿಟ್ಟ ಶಾಸನಗಳು ಜಲಗಾಥೆ ಸಾರುತ್ತಿವೆ.

ಕೆರೆ, ಮಡುವು, ದೊಣೆ, ಗುಂಡು, ಜಲಾಶಯ, ಕೊಳ, ಸಮುದ್ರ ಮುಂತಾದ ಹೆಸರುಗಳಿಂದ, ಜಲಪಾತ್ರೆ ಶಾಸನಗಳಲ್ಲಿ ಹೆಸರಿಸಲ್ಪಟ್ಟಿದೆ. ಮೌರ್ಯರು, ಗುಪ್ತರು, ಶಾತವಾಹನರು, ಕದಂಬರು, ಗಂಗರು, ರಾಷ್ಟ್ರಕೂಟರು, ಚಾಳುಕ್ಯರು, ಹೊಯ್ಸಳರು, ವಿಜಯನಗರ ಅರಸರು, ಕಲ್ಯಾಣದ ಚಾಲುಕ್ಯರು, ಸೌಂದತ್ತಿ ರಟ್ಟರು, ಸೇವುಣರು, ಆದಿಲ್‌ ಶಾ, ಕೆಳದಿ ಅರಸರು, ಮೈಸೂರು ಅರಸರು, ಸೋದೆ ಅರಸರು, ಚಿತ್ರದುರ್ಗದ ನಾಯಕರಿಂದ, ಬೆಂಗಳೂರು ನಿರ್ಮಾತೃ ಕೆಂಪೇಗೌಡರವರೆಗೂ ಕಾಯಕ ಯಾತ್ರೆ ಕಾಣಿಸುತ್ತದೆ.

ಸಾಮ್ರಾಜ್ಯ ಕಟ್ಟಿದ ಸಮುದಾಯ ಕೆರೆಗಳು
ಹೊಯ್ಸಳ ಅರಸು ವಿಷ್ಣುವರ್ಧನನ ಹಿರಿಯ ದಂಡನಾಯಕ ಗಂಗಪ್ಪಯ್ಯ. ಕಣಗಿಲೆ ಯುದ್ಧದಲ್ಲಿ ಅದ್ಭುತ ಜಯ ತಂದುಕೊಡುತ್ತಾನೆ. ಅತ್ಯಂತ ಖುಷಿಪಟ್ಟ ರಾಜ ಏನು ಬಹುಮಾನ ನೀಡಬೇಕೆಂದು ಕೇಳುತ್ತಾನೆ. “ನನಗೆ ಒಂದು ಹಳ್ಳಿಯನ್ನು ನೀಡಿ, ಅಲ್ಲಿ ಒಂದು ಕೆರೆ ಕಟ್ಟಿಸುತ್ತೇನೆ. ಅದರ ನೀರನ್ನು ಕುಲದೇವರ ಪೂಜೆಗೆ ಬಳಸುತ್ತೇನೆ. ಕೆರೆಯಿಂದ ಖಾತರಿಯಾಗಿ ನೀರು ಒದಗಿ ಸಾಗುವಳಿಯಾಗಿ ಅಲ್ಲಿ ಬೆಳೆದ ಆಹಾರ ಧಾನ್ಯಗಳನ್ನು ದೇಗುಲದ ದಾಸೋಹಕ್ಕೆ ಬಳಸುತ್ತೇನೆ’ ಎಂದು ಹೇಳುತ್ತಾನೆ. ರಾಜ ನೀಡಿದ ಪರಮಹಳ್ಳಿಯಲ್ಲಿ ಗಂಗಸಮುದ್ರ ನಿರ್ಮಿಸುತ್ತಾನೆ. ಜಲ ಸಂರಕ್ಷಣೆಯ ಮಹತ್ವ ದಂಡನಾಯಕರಿಗೂ ಗೊತ್ತಿತ್ತು. ಹಂಪಿಯ ಕಡಲೆ ಕಾಳು ಗಣೇಶನ ಗುಡಿಯ ಮುಂದಿನ ಅಗಸೆಯಲ್ಲಿನ ಶಾಸನದ “ಕೆರೆಯಂ ಕಟ್ಟಿಸು ಬಾಯಂ ಸವೆಸು ದೇವಾಗಾರಮಂ ಮಾಡಿಸು…’ ಸಾಲು ಚಿರಪರಿಚಿತ. ವಿಜಯನಗರದ ಅರಸ ಪ್ರೌಢ ಪ್ರತಾಪ ದೇವರಾಯನ ಮಂತ್ರಿ ಲಕ್ಷ್ಮೀಧರನು ಮಗುವಾಗಿದ್ದಾಗ, ಅವರ ತಾಯಿ ಹಾಲೆರೆಯುವಾಗ ಹೇಳಿದ ಹಾಡು, ಕೆರೆ ಕಟ್ಟಿಸಲು ಪ್ರೇರಣೆಯಾಯೆ¤ಂದು ಇಲ್ಲಿ ದಾಖಲಾಗಿದೆ.

ಯಾರ್ಯಾರು ಕಟ್ಟಿಸಿದರು?
ಹೊಸಪೇಟೆ ತಾಲೂಕಿನಲ್ಲಿ 60ಕ್ಕೂ ಹೆಚ್ಚು ಕೆರೆಗಳಿವೆ. ಇವುಗಳಲ್ಲಿ 50ಕ್ಕೂ ಹೆಚ್ಚು ವಿಜಯನಗರ ಕಾಲದವು. ಶಾಸನ ಸಮೀಕ್ಷೆಗಳ (ವಿಜಯನಗರ ಸಾಮ್ರಾಜ್ಯ ನೀರಾವರಿ ವ್ಯವಸ್ಥೆ – ಸಿ.ಟಿ.ಎಂ.ಕೊಟ್ರಯ್ಯ/ ಹಂಪಿ ಪರಿಸರದ ಕೆರೆಗಳು- ಸಿ. ಎಸ್‌. ವಾಸುದೇವನ್‌) ಪ್ರಕಾರ, ಇವುಗಳಲ್ಲಿ ರಾಜರು, ಮಂತ್ರಿಗಳು, ಮಾಂಡಲಿಕರು, ರಾಜೋದ್ಯೋಗಿಗಳು ಶೇಕಡಾ 23ರಷ್ಟು ಕೆರೆಗಳನ್ನು ನಿರ್ಮಿಸಿದವರು. ಶೇಕಡಾ 29.90ರಷ್ಟು ಸ್ಥಳೀಯ ಅಧಿಕಾರಿಗಳು ನಿರ್ಮಿಸಿದ್ದಾಗಿದೆ. ವ್ಯಾಪಾರಿಗಳು, ಶ್ರೀಮಂತರು ಶೇಕಡಾ 26.56 ಕೆರೆಗಳನ್ನೂ, ರಾಜ್ಯದ ಸಾಮಂತರು ಶೇ. 20.54 ಕೆರೆಗಳನ್ನು ರೂಪಿಸಿದ್ದಾರೆ. ಕೆರೆ ನಿರ್ಮಾಣ ಎಲ್ಲರ ಕಾರ್ಯವಾಗಿತ್ತೆಂದು ಇಲ್ಲಿ ತಿಳಿಯುತ್ತದೆ. ಕೆಳದಿಯ ದೊರೆ ಸದಾಶಿವ ನಾಯಕರು (1512-46), ರಾಜದಾನಿ ಕೆಳದಿಯ ಸುತ್ತ 14 ಕೆರೆ ಕಟ್ಟಿಸಿದವರು. ಕ್ರಿ.ಶ. 1573ರ ಕೆಳದಿ ರಾಮರಾಜ ನಾಯಕನ ಶಾಸನವು, ರಾಜ್ಯದ ವರ್ತಕರು, ಸೆಟ್ಟಿಗಳು ಸಾವನ್ನಪ್ಪಿದಾಗ ಅವರಿಗೆ ಮಕ್ಕಳಿಲ್ಲದಿದ್ದರೆ ಹಣವನ್ನು ರಕ್ತ ಸಂಬಂಧಿಗಳು, ವಿಧವೆ ಪತ್ನಿ ಪಡೆದುಕೊಳ್ಳಬಹುದು. ಉಳಿದ ಹಣವನ್ನು ಕೆರೆಕಟ್ಟೆ, ದೇಗುಲ ನಿರ್ಮಾಣಕ್ಕೆ ಕೊಡಬಹುದೆಂದು ಹೇಳಿದೆ.

ಹನ್ನೆರಡು ಸೂತ್ರಗಳು
ಅರಸರು ಎಲ್ಲವನ್ನೂ ತಾವು ಮಾತ್ರ ನಿಭಾಯಿಸಲು ಹೋಗಲಿಲ್ಲ. ಕೆರೆ ನಿರ್ಮಿಸುವವರಿಗೆ, ಕೆರೆ ರಕ್ಷಕರಿಗೆ ಧನ, ಧಾನ್ಯ, ದಾನ, ದತ್ತಿ, ಭೂಮಿ, ಕಟ್ಟು ಕೊಡುಗೆಗಳಿಂದ ಪ್ರೋತ್ಸಾಹಿಸಿದ್ದಾರೆ. ಕೆರೆ ನಿರ್ಮಾಣವು ಪುಣ್ಯದ ಕಾರ್ಯವೆಂದು ಬಿಂಬಿಸಿ ನಾಡಿಗೆ ನೀರಿನ ದಾರಿ ತೋರಿಸಿದ್ದಾರೆ. ವಿಜಯನಗರ ಕಾಲದ ಕ್ರಿ.ಶ. 1369ರ ಶಾಸನ, ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪೊರುಮಾಮಿಲ್ಲದಲ್ಲಿ ದೊರಕಿದೆ. ಕೆರೆ ಯೋಗ್ಯ ಸ್ಥಳ ಆಯ್ಕೆ, ನಿರ್ಮಾಣ. ನಿರ್ವಹಣೆಗೆ ಮಾರ್ಗದರ್ಶಕ ಪ್ರಮುಖ ಹನ್ನೆರಡು ಅಂಶಗಳು ಇದರಲ್ಲಿವೆ. ಕೆರೆಗಳ ವಿಚಾರದಲ್ಲಿ ಈಗ ಏನೆಲ್ಲ ಹೇಳುತ್ತಿದ್ದೇವೆಯೋ ಎಲ್ಲವನ್ನೂ ಈ ಶಾಸನ 600 ವರ್ಷಗಳ ಹಿಂದೆಯೇ ಹೇಳಿ ಮುಗಿಸಿದೆ!

ಅಶ್ವಮೇಧ ಯಾಗದ ಪುಣ್ಯ
ಕೋಲಾರದ ಕುರುಬರಹಳ್ಳಿ ಶಾಸನ, ಕೆರೆಗೆ ಬಿಟ್ಟ ಭೂಮಿಯನ್ನು, ಕೆರೆಯನ್ನು ರಕ್ಷಿಸಿದವನಿಗೆ “ಅಶ್ವಮೇಧ ಯಾಗ’ದ ಪುಣ್ಯ ದೊರೆಯುತ್ತದೆ ಎನ್ನುತ್ತದೆ. ಕೆರೆ ತೂಬಿನ ದುರಸ್ತಿಗೆ ದೇಗುಲದ ಹುಂಡಿ, ಭೂಮಿ ಮಾರಾಟದ ಹಣ ಬಳಸಿದ ದಾಖಲೆಗಳಿವೆ. ಬಳ್ಳಾರಿಯ ಮೋರಿಗೆರೆಯ ಮೊದಲನೆಯ ಸೋಮೇಶ್ವರನ ಶಾಸನ, ಕೆರೆ ನಿರ್ಮಾಣಕ್ಕೆ ಭೂಮಿ ಖರೀದಿಸುತ್ತಿದ್ದ ವಿಚಾರ ಪ್ರಸ್ತಾಪಿಸಿದೆ. ನಿರ್ಮಾಣಕ್ಕೆ ಮಣ್ಣು, ಕಲ್ಲು ಸಾಗಾಟ ಎತ್ತಿನ ಬಂಡಿಗಳಲ್ಲಿ ನಡೆಯುತ್ತಿದ್ದ ಕಾಲವದು. ಇದಕ್ಕಾಗಿ ಗ್ರಾಮಸ್ಥರು “ಕೆರೆಬಂಡಿ ಹಣ’ ತೆರಿಗೆ ನೀಡುತ್ತಿದ್ದರು. ಇದಲ್ಲದೇ “ತಿಪ್ಪೆ ತೆರಿಗೆ’ ಹಣವನ್ನೂ ಸರಕಾರ ಕೆರೆಗೆ ಬಳಸುತ್ತಿತ್ತೆಂದು ಕ್ರಿ.ಶ. 1367ರ ಹಾಸನದ ಕಲ್ಲಂಗೆರೆ ಶಾಸನ ಹೇಳುತ್ತದೆ.

ಕವಿ, ಕಲಾವಿದರು ಕೆರೆ ಕಟ್ಟಿಸಿದ್ದರು
“ಪದ್ಮರಸ’ ಹೊಯ್ಸಳರ ಕಾಲದ ಪ್ರಸಿದ್ಧ ಕವಿ. ಹರಿಹರ, ರಾಘವಾಂಕರ ಜೊತೆಗಿದ್ದವನು. ಈತ, ಬೇಲೂರಿನ ನರಸಿಂಹ ಬಲ್ಲಾಳನ ಆಳ್ವಿಕೆಯಲ್ಲಿ “ವಿಷ್ಣುಸಮುದ್ರ ಕೆರೆ’ ಕಟ್ಟಿಸಿದ್ದಾರೆ. ಹೀಗಾಗಿ “ಕೆರೆಯ ಪದ್ಮರಸ’ ಎಂಬುದು ಕವಿಯ ಬಿರುದಾಯ್ತು. ನಾಟಕ ಕಲೆಯಲ್ಲಿ ಪ್ರಸಿದ್ಧಿ ಪಡೆದಿದ್ದ ಶೃಂಗಾರಮ್ಮ ಕ್ರಿ.ಶ. 1599ರ ಶೃಂಗಾರ ಹಳ್ಳಿಯಲ್ಲಿ ಕೆರೆ ನಿರ್ಮಿಸಿದ್ದರಿಂದ ಹಳ್ಳಿ ಶೃಂಗಾರ ಸಾಗರವಾಗಿದೆ. ಕ್ರಿ.ಶ. 1396ರ ಶಾಸನದ ಪ್ರಕಾರ ವಿರೂಪಾಕ್ಷ ಪಂಡಿತ ಹಾಗೂ ನಾಯಕ ಪಂಡಿತರೆಂಬ ವಿಜಯನಗರ ಕಾಲದ ಹೆಸರಾಂತ ವಿದ್ವಾಂಸರು ಹಂಪಿಯಲ್ಲಿ ಒಂದು ದೇಗುಲ ಹಾಗೂ ಅದರ ಪಕ್ಕ ಕೆರೆ ನಿರ್ಮಿಸುತ್ತಾರೆ. ಬಾಣಾವರ ಹೊಯ್ಸಳ ಅರಸರ ಕಾಲದ ಪ್ರಮುಖ ವ್ಯಾಪಾರ ಕೇಂದ್ರ. ಕೇರಳದಿಂದ ಬಂದ ಒಂದು ವರ್ತಕ ಕುಟುಂಬ, ಹೊಯ್ಸಳ ಅರಸರಿಗೆ ಕರಾವಳಿಗೆ ಹಡಗಿನಲ್ಲಿ ಬಂದ ಕುದುರೆ, ಮುತ್ತುಗಳನ್ನು ಸರಬರಾಜು ಮಾಡುತ್ತಿತ್ತು. ಕಮ್ಮಟ ಶೆಟ್ಟಿ ಈ ಕುಟುಂಬದ ವರ್ತಕ. ಇವರು ಒಂದು ಸಣ್ಣ ಕೆರೆಯನ್ನು ದೊಡ್ಡದು ಮಾಡಿಸಿದ್ದಲ್ಲದೇ ಮಗನ ಹೆಸರಿನಲ್ಲಿ “ಕನಕನಕೆರೆ’ ನಿರ್ಮಿಸಿದ ಬಗ್ಗೆ ಶಾಸನವಿದೆ.

-ಶಿವಾನಂದ ಕಳವೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ