ರಿಯಲ್‌ “ಮಿ’ ಸ್ಟಾರ್‌

ಎಂಟರ್‌ ದಿ ಡ್ರಾಗನ್‌ ಪ್ರೊಸೆಸರ್‌!

Team Udayavani, Sep 2, 2019, 5:55 AM IST

ಮಾರುಕಟ್ಟೆಯಲ್ಲಿನ ಪೈಪೋಟಿಯಿಂದಾಗಿ ಕಂಪೆನಿಗಳು ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ಹೆಚ್ಚಿನ ಸವಲತ್ತುಗಳುಳ್ಳ ಮೊಬೈಲ್‌ ಫೋನ್‌ಗಳನ್ನು ಕೈಗೆಟುಕುವ ದರಕ್ಕೆ ನೀಡುತ್ತಿವೆ. ಅಂಥ ಇನ್ನೆರಡು ಮಾಡೆಲ್‌ಗ‌ಳನ್ನು ರಿಯಲ್‌ ಮಿ ಕಂಪೆನಿ ಇದೀಗ ಬಿಡುಗಡೆ ಮಾಡಿದೆ. ರಿಯಲ್‌ ಮಿ 5 ಮತ್ತು ರಿಯಲ್‌ ಮಿ 5 ಪ್ರೊ ಆ ಎರಡು ಮಾಡೆಲ್‌ಗ‌ಳು. ಆ ಮೊಬೈಲ್‌ಗ‌ಳಲ್ಲಿ ಯಾವ ಯಾವ ತಾಂತ್ರಿಕ ಅಂಶಗಳಿವೆ ಎಂಬುದರ ವಿವರ ಇಲ್ಲಿದೆ.

ಚೀನಾದ ಬಿಬಿಕೆ ಎಲೆಕ್ಟ್ರಾನಿಕ್ಸ್‌ ಕಂಪೆನಿ ಒನ್‌ಪ್ಲಸ್‌, ವಿವೋ, ಒಪ್ಪೋ ಮೊಬೈಲ್‌ ಫೋನ್‌ ಬ್ರಾಂಡ್‌ಗಳ ಒಡೆತನ ಹೊಂದಿದೆ. ಒನ್‌ಪ್ಲಸ್‌ ಬ್ರಾಂಡ್‌ನ‌ಡಿ ಪ್ರೀಮಿಯಂ- ಫ್ಲಾಗ್‌ಶಿಪ್‌ ಮೊಬೈಲ್‌ಗ‌ಳನ್ನೂ, ಮಧ್ಯಮ ದರ್ಜೆಯ ವಿಭಾಗದಲ್ಲಿ ವಿವೋ, ಒಪ್ಪೋ ಮೊಬೈಲ್‌ಗ‌ಳನ್ನೂ (ಅಂಗಡಿಗಳ ಮಾರಾಟಕ್ಕೆ ಆದ್ಯತೆ) ಮಾರಾಟ ಮಾಡುತ್ತಿದೆ. ಮಧ್ಯಮ ದರ್ಜೆಯ ವಿಭಾಗದಲ್ಲಿ ಆನ್‌ಲೈನ್‌ ಬ್ರಾಂಡ್‌ ಇರದಿರುವುದರ ಕೊರತೆ ಅರಿತು, ವರ್ಷದಿಂದೀಚಿಗೆ “ರಿಯಲ್‌ ಮಿ’ ಹೆಸರಿನಲ್ಲಿ ಆನ್‌ಲೈನ್‌ಗೆ ಸೀಮಿತವಾಗಿ ಬಿಡುಗಡೆ ಮಾಡುತ್ತಿದೆ. ಚೀನಾದ ಇನ್ನೊಂದು ಮೊಬೈಲ್‌ ಬ್ರಾಂಡ್‌ “ಶಿಯೋಮಿ’ಗೂ, ಬಿಬಿಕೆಯ “ರಿಯಲ್‌ ಮಿ’ಗೂ ಸಂಬಂಧವಿಲ್ಲ ಎಂಬುದು ನೆನಪಿರಲಿ.

ಈಗ ರಿಯಲ್‌ಮಿ, ಭಾರತದ ಮಾರುಕಟ್ಟೆಗೆ ಎರಡು ಮೊಬೈಲ್‌ಗ‌ಳನ್ನು ಹೊಸದಾಗಿ ಬಿಡುಗಡೆ ಮಾಡಿದೆ. ಅವೆಂದರೆ ರಿಯಲ್‌ ಮಿ 5 ಮತ್ತು ರಿಯಲ್‌ ಮಿ 5 ಪ್ರೊ. ಇವುಗಳಲ್ಲಿ ರಿಯಲ್‌ ಮಿ 5 ಮಾಡೆಲ್‌ನ ದರ 10 ಸಾವಿರದಿಂದ ಆರಂಭವಾದರೆ, ರಿಯಲ್‌ ಮಿ 5 ಪ್ರೊ ದರ 14 ಸಾವಿರ ರೂ. ಗಳಿಂದ ಆರಂಭವಾಗುತ್ತದೆ.

ಮೆಮೊರಿ ಮತ್ತು ಬ್ಯಾಟರಿ
ರಿಯಲ್‌ ಮಿ 5 ಆರಂಭಿಕ ಮಧ್ಯಮ ದರ್ಜೆಯ ಮೊಬೈಲ್‌. ಇದು 32 ಜಿ.ಬಿ ಆಂತರಿಕ ಸಂಗ್ರಹ ಮತ್ತು 3 ಜಿ.ಬಿ ರ್ಯಾಮ್‌, 64 ಜಿ.ಬಿ ಆಂತರಿಕ ಸಂಗ್ರಹ ಮತ್ತು 4 ಜಿ.ಬಿ ರ್ಯಾಮ್‌, 128 ಜಿ.ಬಿ ಆಂತರಿಕ ಸಂಗ್ರಹ ಮತ್ತು 4 ಜಿ.ಬಿ ರ್ಯಾಮ್‌ ಸಾಮರ್ಥ್ಯವನ್ನು ಹೊಂದಿದೆ. ರ್ಯಾಮ್‌ ಮತ್ತು ಆಂತರಿಕ ಸಂಗ್ರಹದಲ್ಲಿ ವ್ಯತ್ಯಾಸ ಬಿಟ್ಟರೆ ಮೂರೂ ಆವೃತ್ತಿಗಳಲ್ಲಿ ಇನ್ನುಳಿದ ವಿಶೇಷಣಗಳೆಲ್ಲ ಸಮನಾಗಿವೆ.

ಇದರಲ್ಲಿ ಸ್ನಾಪ್‌ಡ್ರಾಗನ್‌ 665 ಪ್ರೊಸೆಸರ್‌ ನೀಡಲಾಗಿದೆ. ಇದು 2.0 ಗಿ.ಹ. ವೇಗ ಹೊಂದಿದೆ. ಇದು ಮಧ್ಯಮ ದರ್ಜೆಯ ಪ್ರೊಸೆಸರ್‌ ಆಗಿದ್ದು ಈ ಹಂತದ ಫೋನ್‌ಗಳಿಗೆ ಉತ್ತಮ ಪ್ರೊಸೆಸರ್‌ ಆಗಿದೆ. ಮೊಬೈಲ್‌ನ ಪರದೆ 6.5 ಇಂಚು ಆಗಿದ್ದು, ಆಧುನಿಕ ತಂತ್ರಜ್ಞಾನದ ಡಿಸ್‌ಪ್ಲೇ ಹೊಂದಿದೆ. ಪರದೆಯಲ್ಲಿ ಒಂದು ಹಿನ್ನಡೆ ಎಂದರೆ ಇದು ಫ‌ುಲ್‌ ಎಚ್‌ಡಿ ಅಲ್ಲ. 720×1600 ಪಿಕ್ಸಲ್‌ (269 ಪಿ.ಪಿ.ಐ)ಹೊಂದಿದೆ. ಎಚ್‌ಡಿ ಪ್ಲಸ್‌ ಅಷ್ಟೇ. ಬ್ಯಾಟರಿ ಹೆಚ್ಚು ಸಾಮರ್ಥ್ಯ ಇರಬೇಕು ಎನ್ನುವವರಿಗೆ ಇದು ಉತ್ತಮ ಆಯ್ಕೆ ಎನ್ನಲಡ್ಡಿಯಿಲ್ಲ. ಇದು 5000 ಎಂಎಎಚ್‌ ಬ್ಯಾಟರಿಹೊಂದಿದೆ! ಆದರೆ ಇದಕ್ಕೆ ಫಾಸ್ಟ್‌ ಚಾರ್ಜರ್‌ ಇಲ್ಲ! ಮೈಕ್ರೊ ಯುಎಸ್‌ಬಿ ಪೋರ್ಟ್‌ ಹೊಂದಿದೆ. 5000 ಎಂಎಎಚ್‌ ಬ್ಯಾಟರಿ ಸಾಧಾರಣ 5ವಿ/ 2ಎ ಚಾರ್ಜರ್‌ನಲ್ಲಿ ಪೂರ್ತಿ ಚಾರ್ಜ್‌ ಆಗಲು ಕನಿಷ್ಠ 3 ರಿಂದ 3.5 ಗಂಟೆ ಹಿಡಿಯುತ್ತದೆ!

ಪ್ರೊನಲ್ಲಿ ಫ‌ುಲ್‌ ಎಚ್‌ಡಿ
ರಿಯಲ್‌ ಮಿ ಪ್ರೊ, ರಿಯಲ್‌ ಮಿ 5ನ ಅಣ್ಣ ಇದ್ದಂತೆ! ಇದರಲ್ಲಿ ಸ್ನಾಪ್‌ಡ್ರಾಗನ್‌ 712 ಪ್ರೊಸಸರ್‌ ಇದೆ. ಇದು 2.3 ಗಿ.ಹ. ವೇಗಹೊಂದಿದೆ. ಮೊದಲಿನದಕ್ಕಿಂತ ಈ ಪ್ರೊಸೆಸರ್‌ನ ವೇಗಹೆಚ್ಚು. ಇದು 6.3 ಇಂಚಿನ ಪರದೆ ಹೊಂದಿದೆ. ಇದರಲ್ಲಿ ಫ‌ುಲ್‌ ಎಚ್‌ಡಿ ಪ್ಲಸ್‌ (1240×1080) ಡಿಸ್‌ಪ್ಲೇ ಇದೆ. ಇದರಲ್ಲಿ 4034 ಎಂ.ಎ.ಎಚ್‌ ಬ್ಯಾಟರಿ ಇದ್ದು, ಇದಕ್ಕೆ ವೇಗದ ಚಾರ್ಜರ್‌ ಸವಲತ್ತಿದೆ. ಇದನ್ನು ರಿಯಲ್‌ ಮಿವೂಕ್‌ ಚಾರ್ಜರ್‌ ಎಂದು ಕರೆಯುತ್ತದೆ. ಯುಎಸ್‌ಬಿ ಟೈಪ್‌ ಸಿ ಕಿಂಡಿ ಇದ್ದು, 5ವಿ/ 4ಎ ವೇಗದ ಚಾರ್ಜರ್‌ ನೀಡಲಾಗಿದೆ. 30 ನಿಮಿಷಗಳಲ್ಲಿ ಶೂನ್ಯದಿಂದ ಶೇ. 55ರಷ್ಟು ಚಾರ್ಜ್‌ ಆಗುತ್ತದೆ ಎಂದು ಕಂಪೆನಿ ತಿಳಿಸಿದೆ.
ಕ್ಯಾಮರಾ ವಿಭಾಗದಲ್ಲಿ ಹಿಂದಿನ ಮೊಬೈಲ್‌ಗಿಂತ ಇದು ಉನ್ನತವಾಗಿದೆ. ಇದರಲ್ಲೂ ನಾಲ್ಕು ಲೆನ್ಸ್‌ಗಳಿವೆ. 48 ಮೆ.ಪಿ. (ಸೋನಿ ಐಎಂಎಕ್ಸ್‌ 586) 8 ಮೆ.ಪಿ., 2 ಮೆ.ಪಿ., 2 ಮೆ.ಪಿ. ಹಿಂಬದಿ ಕ್ಯಾಮರಾ ಇದೆ. 16 ಮೆ.ಪಿ. ಮುಂದಿನ ಕ್ಯಾಮರಾ ಹೊಂದಿದೆ. ಇದು ಸಹ ಅಂಡ್ರಾಯ್ಡ 9.0 ಪೈ ಆವೃತ್ತಿ, ಕಲರ್‌ ಓಎಸ್‌ ಒಳಗೊಂಡಿದೆ. ಬೆರಳಚ್ಚು ಸ್ಕ್ಯಾನರ್‌ ಮೊಬೈಲ್‌ನ ಹಿಂಬದಿಯಲ್ಲಿದೆ. ಈ ಮಾಡೆಲ್‌ನಲ್ಲೂ ಸಹ ಮೂರು ಆವೃತ್ತಿಗಳಿವೆ. 64 ಜಿಬಿ ಆಂತರಿಕ ಸಂಗ್ರಹ, 4 ಜಿಬಿ ರ್ಯಾಮ್‌ (14 ಸಾವಿರ ರೂ.), 64 ಜಿಬಿ ಆಂತರಿಕ ಸಂಗ್ರಹ ಮತ್ತು 6 ಜಿಬಿ ರ್ಯಾಮ್‌ (15 ಸಾವಿರ ರೂ.) ಹಾಗೂ 128 ಜಿಬಿ ಆಂತರಿಕ ಸಂಗ್ರಹ ಮತ್ತು 8 ಜಿಬಿ ರ್ಯಾಮ್‌ (17 ಸಾವಿರ ರೂ.) ಈ ಮಾಡೆಲ್‌ ಸಹ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಲಭ್ಯ.

“ರಿಯಲ್‌’ ಬೆಲೆ
32 ಜಿಬಿ+ 3 ಜಿಬಿ ರ್ಯಾಮ್‌= 10 ಸಾವಿರ ರೂ.
64 ಜಿಬಿ+ 4 ಜಿಬಿ ರ್ಯಾಮ್‌= 11 ಸಾವಿರ ರೂ.
128ಜಿಬಿ + 4 ಜಿಬಿ ರ್ಯಾಮ್‌= 12 ಸಾವಿರ ರೂ.
ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಲಭ್ಯವಿದೆ.

ಕಲರ್‌ ಕಲರ್‌ ಓಎಸ್‌
ಈ ಮೊಬೈಲ್‌ನಲ್ಲಿ ಹಿಂಬದಿ ನಾಲ್ಕು ಲೆನ್ಸಿನ ಕ್ಯಾಮರಾ ನೀಡಲಾಗಿದೆ. ಗ್ರಾಹಕರನ್ನು ಆಕರ್ಷಿಸಲು 12 ಎಂಪಿ, 8 ಎಂ.ಪಿ, 2 ಎಂ.ಪಿ, 2 ಎಂ.ಪಿಯ ನಾಲ್ಕು ಲೆನ್ಸ್‌ಗಳನ್ನು ನೀಡಲಾಗಿದೆ. ಸೆಲ್ಫಿಗಾಗಿ 13 ಎಂ.ಪಿ. ಕ್ಯಾಮರಾ ಇದೆ. ಇದು ಅಂಡ್ರಾಯ್ಡ 9.0 ಪೈ ಕಾರ್ಯಾಚರಣೆ ವ್ಯವಸ್ಥೆ ಹೊಂದಿದ್ದು, ಇದಕ್ಕೆ ರಿಯಲ್‌ಮಿಯವರ ಕಲರ್‌ ಓಎಸ್‌ ಬೆಂಬಲವಿದೆ. ಮೊಬೈಲ್‌ ಹಿಂಬದಿಯಲ್ಲಿ ಬೆರಳಚ್ಚು ಸ್ಕ್ಯಾನರ್‌ ಇದೆ. ಬೆಲೆ ಹೊಂದಾಣಿಕೆ ದೃಷ್ಟಿಯಿಂದ ರಿಯಲ್‌ಮಿಯವರು ಇದರಲ್ಲೂ ಲೋಹದ ದೇಹ ನೀಡಿಲ್ಲ. ಪ್ಲಾಸ್ಟಿಕ್‌ ಬಾಡಿಯನ್ನೇ ನೀಡಲಾಗಿದೆ. ಮೆಟಲ್‌ ಬಾಡಿ ಇದ್ದರೆ ಉತ್ತಮವಾಗಿರುತ್ತಿತ್ತು.

– ಕೆ. ಎಸ್‌. ಬನಶಂಕರ ಆರಾಧ್ಯ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ