ಕಣ ಕಣದಲ್ಲೂ ಕಾಸು


Team Udayavani, Apr 8, 2019, 9:30 AM IST

money

ಮತ ಹಾಕುವುದು ಪವಿತ್ರವಾದ ಕೆಲಸ. ಅದು ನಮ್ಮ ಆಜನ್ಮಸಿದ್ಧ ಹಕ್ಕು ಅಂತೆಲ್ಲ ಹೇಳಿ ಪ್ರಜಾಪ್ರಭುತ್ವದ ಭಗವದ್ಗೀತೆ- ಸಂವಿಧಾನವನ್ನು ತೋರಿಸಿ ಮತಹಾಕಿಸಿಕೊಳ್ಳುವ ನಮ್ಮ ರಾಜಕೀಯ ವ್ಯಕ್ತಿಗಳ ಪಾಲಿಗೆ ಇದು ಪಕ್ಕಾ ಬ್ಯುಸಿನೆಸ್‌; ಸೇವೆಗೆ ಹಾಕಿದ ಮುಖವಾಡ. ಕೋಟಿ ಸುರಿದು ಐದು ವರ್ಷಗಳಲ್ಲಿ ಕೋಟಿ ಕೋಟಿ ಎತ್ತುವ ಲಾಭದಾಯಕ ಉದ್ಯಮ ಅಂದರೆ ಪಾಲಿಟಿಕ್ಸ್‌. ಇವತ್ತು ಹಣವಿಲ್ಲದೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವೇ ಇಲ್ಲ ಅನ್ನುವ ಸ್ಥಿತಿಗೆ ಬಂದು ಮುಟ್ಟಿದ್ದೇವೆ. ಶ್ರೀರಾಮನವಮಿಯ ಪಾನಕವನ್ನು ಗಟ ಗಟ ಕುಡಿಯುವಂತೆ ಚುನಾವಣೆಯಲ್ಲಿ ಈಜಿ ಗೆಲ್ಲುವ ರಾಜಕೀಯ ನಾಯಕರ ವ್ಯವಹಾರ ತಂತ್ರಗಳು ಏನು, ಹೇಗೆ? ನೋಡೋಣ ಬನ್ನಿ

ಕಳೆದ ಲೋಕಸಭಾ ಚುನಾವಣೆ ಮುಗಿದು ನಾಲ್ಕೈದು ತಿಂಗಳಾಗಿರಲಿಲ್ಲ. ಆಗ ನಮ್ಮ ನಾಡಿನ ಎಂ.ಪಿ ಒಬ್ಬರು “ಲೋಕಸಭಾ ಸದಸ್ಯರಿಗೆ ಸಂಬಳ ಜಾಸ್ತಿ ಮಾಡಬೇಕು. ನಮಗೆ ದಿನ ನಿತ್ಯದ ಖರ್ಚುಗಳನ್ನ ತೂಗಿಸುವುದಕ್ಕೂ ಆಗುತ್ತಿಲ್ಲ ಅಂತ ಹೇಳಿಕೆ ನೀಡಿದರು. ಇದನ್ನು ಕೇಳಿದ ಸ್ವಪಕ್ಷ, ವಿಪಕ್ಷದ ಮಂದಿ “ಇವನ್ಯಾರೋ ಚಿಲ್ಟೆರಿ, ಸಾರ್ವಜನಿಕವಾಗಿ ಈ ರೀತಿ ಹೇಳಿಕೆ ಕೊಡ್ತಾನಲ್ಲ’ ಅಂತ ಬಿಕ್ಕಿ ಬಿಕ್ಕಿ ನಕ್ಕರು. ಈ ರೀತಿ ನಗುವನ್ನು ಮುಕ್ಕಳಿಸಿದವರೆಲ್ಲಾ ಚುನಾವಣೆಗಾಗಿ, ದಿನದ ಖರ್ಚಿಗಾಗಿ ಅಂತಲೇ ಒಂದಷ್ಟು ಆದಾಯ ಹುಡುಕಿಕೊಂಡವರೇ. ಹಾಗೆ ನೋಡಿದರೆ, ಆ ಎಂ.ಪಿ ಸಾಹೇಬರ ಮಾತಲ್ಲಿ ಎಳ್ಳಷ್ಟೂ ಸುಳ್ಳಿರಲಿಲ್ಲ. ಲೋಕಸಭಾ ಸದಸ್ಯರ ಸಂಬಳ50 ಸಾವಿರ ರೂ. ಭತ್ಯೆ ಸೇರಿದರೆ ತಿಂಗಳಿಗೆ 2.7 ಲಕ್ಷ ರೂ. ಕೈಗೆ ಬರುತ್ತದೆ. ಇದರಲ್ಲಿ ಸಕುಟುಂಬ ಸಮೇತರಾಗಿ ಸುಖೀ ಜೀವನ ಸಾಗಿಸಬಹುದು. ಆದರೆ ಹಿಂಬಾಲಕರ ದಂಡನ್ನು ಸಾಕಬೇಕಲ್ಲ? ಕ್ಷೇತ್ರದಲ್ಲಿ ಹಬ್ಬ ಹರಿದಿನ, ಜಾತ್ರೆಗಳನ್ನೂ ಮಾಡಬೇಕಲ್ಲ? ಅದೇನು ಕಡಿಮೆ ಕೆಲಸವೇ? ಹೀಗಾಗಿ, ತನ್ನ ಸಂಬಳವನ್ನು ಇತ್ತ ತಿರುಗಿಸಿದರೆ
ಬದುಕು ದುರ್ಬರವಾಗುತ್ತದೆ ಅನ್ನೋದು ತಿಳಿದೇ ಎಂ.ಪಿ ಸಾಹೇಬರು ಸಂಬಳ ಜಾಸ್ತಿ ಮಾಡಿ ಅಂದದ್ದು. ಸಾಮಾನ್ಯವಾಗಿ, ಪಳಗಿದ ರಾಜಕೀಯ ವ್ಯಕ್ತಿಗಳು ಚುನಾವಣೆಗಾಗಿಯೇ ಒಂದಷ್ಟು ಆಸ್ತಿಗಳು, ಚಿನ್ನ, ಸೈಟು, ಕ್ಯಾಷ್‌ ಅಂತೆಲ್ಲ ಎತ್ತಿಟ್ಟಿರುತ್ತಾರೆ. ಈ ಸಂದರ್ಭದಲ್ಲಿ ಅವುಗಳನ್ನು ಕರಗಿಸಿ ಚುನಾವಣೆಗೆ ಹೂಡಿಕೆ ಮಾಡುವುದು ವಾಡಿಕೆ. ಇವರಿಗೆಲ್ಲಾ ಮೂವೆಬಲ್‌ ಚಿನ್ನ ಬಹಳ ಅಚ್ಚುಮೆಚ್ಚು. ಇದಲ್ಲದೇ, ಚುನಾವಣೆ ಹೂಡಿಕೆಗೆ ಒಂದಷ್ಟು ಬಿಲ್ಡರ್‌ಗಳನ್ನು ಹಣದಂತೆ ಸಿದ್ಧ ಮಾಡಿ ಇಟ್ಟುಕೊಂಡಿರುತ್ತಾರಂತೆ. ಈ ವಿಚಾರವನ್ನು ಪಕ್ಕಕ್ಕೆ ಇಡಿ. ಇವತ್ತು ಲಕ್ಷ ಲಕ್ಷ ಸಂಬಳ ಬರುವ ಎಂಪಿ ಸ್ಥಾನಕ್ಕೆ ಕೋಟಿ ಕೋಟಿ ಸುರಿಯುವವರು ಹಾಕಿದ ಹಣವನ್ನು ಹೇಗೆ ವಾಪಸ್ಸು ಪಡೆಯುತ್ತಾರೆ? ಈ ಸಲದ ಎಂ.ಪಿ ಅಭ್ಯರ್ಥಿಯ ಆಸ್ತಿ 70 ಲಕ್ಷ ಇದ್ದರೆ ಮುಂದಿನ ಬಾರಿ ಚುನಾವಣೆಗೆ ನಿಲ್ಲುವ ಹೊತ್ತಿಗೆ ಆ ಆಸ್ತಿ 7 ಕೋಟಿ ಆಗಿರುತ್ತದೆ. ಇದು ಹೇಗೆ ಸಾಧ್ಯ? ಅಂತ ಕೇಳಿ ನೋಡಿ,

“ಇಲ್ರಿ, ಅವರದು ಬೇರೆ ಬ್ಯುಸಿನೆಸ್‌ ಹಾಳು ಮೂಳೆಲ್ಲಾ ಇರ್ತವೆ’ ಅನ್ನೋ ಸಮರ್ಥನೆಯ ಸಬೂಬು ಬರುತ್ತದೆ. ಅರೆ, ಇವರು ರಾಜಕೀಯಕ್ಕೆ ಧುಮುಕುವ ಮೊದಲಿನ ಅಷ್ಟೂ ವರ್ಷ 70ಲಕ್ಷದ ಆಸ್ತಿ ಏಕೆ 7 ಕೋಟಿ ಮುಟ್ಟಿರಲಿಲ್ಲ?ಅಂತೇನಾದರೂ ಮರು ಪ್ರಶ್ನೆ ಹಾಕಿದರೆ ನಿಶ್ಯಬ್ದವೇ ಉತ್ತರ.

ಇವತ್ತಿನ ರಾಜಕೀಯ ಪರಿಸ್ಥಿತಿ ಹೇಗಾಗಿದೆ ಅಂದರೆ, ನೀವು ರಿಯಲ್‌ ಎಸ್ಟೇಟ್‌ ಕುಳ ಅಥವಾ ಸಕ್ಕರೆ ಕಾರ್ಖಾನೆ ಮಾಲೀಕರು ಆಗಿದ್ದರೆ ಚುನಾವಣೆಗೆ ನಿಲ್ಲಬಹುದು. ಬೆಳಗಾವಿ, ಹಳಿಯಾಳ, ಧಾರವಾಡ ಭಾಗದ ಬಹುತೇಕ ರಾಜಕೀಯ ನಾಯಕರ ಇತಿಹಾಸ ಕೆದಕಿದರೆ ಎಲ್ಲರ ಹೆಸರಲ್ಲೂ ಸಕ್ಕರೆ ಕಾರ್ಖಾನೆಗಳು ಸಿಗುತ್ತವೆ. ಒಂದು ಸಕ್ಕರೆ ಕಾರ್ಖಾನೆ ಇದ್ದರೆ ಶಾಸಕರು, ಲೋಕಸಭಾ ಸದಸ್ಯರಾಗ ಬೇಕಾದ ಮತಗಳು ಜೇಬಿಗೆ ಬಿದ್ದಂತೆ. ಇದು ಹೇಗೆಂದರೆ, ಒಂದು ಕಾರ್ಖಾನೆಯಲ್ಲಿ ಕನಿಷ್ಠ 500-1000 ಮಂದಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕೆಲಸ ಮಾಡುತ್ತಿರುತ್ತಾರೆ.50-60 ಗ್ರಾಮದ ರೈತರು ಕಬ್ಬು ತಂದು ಇದೇ ಕಾರ್ಖಾನೆಗೆ ಸುರಿಯುತ್ತಿರುತ್ತಾರೆ. ಅಂದರೆ, ಹೆಚ್ಚುಕಮ್ಮಿ 50ರಿಂದ 60 ಸಾವಿರ ಮತದಾರರು ಇವರ ಕೈಯಲ್ಲಿ ಇದ್ದಂಗೆ ಆಯಿತು. ಕಾರ್ಖಾನೆಯ ಪ್ರಭಾವ ಬಳಸಿ ಎಂ.ಎಲ್‌.ಎ ಆಗಲು ಇದಕ್ಕಿಂತ ಮತ್ತೇನು ಬೇಕು?ಕಾರ್ಖಾನೆಯಲ್ಲಿ ಉದ್ಯೋಗ ಕೊಟ್ಟು ಜನಸೇವೆಯ ಹೆಸರಲ್ಲಿ ರಾಜಕೀಯಕ್ಕೆ ಇಳಿದರೆ, ಸ್ವಾಮಿಕಾರ್ಯ, ಸ್ವಕಾರ್ಯ ಎರಡೂ ಆದಂತೆಯೇ! ಇದರ ಮುಂದುವರಿದ ಭಾಗ ಶಾಲಾ ಕಾಲೇಜು, ಆಸ್ಪತ್ರೆ. ಇವತ್ತು ನಮ್ಮ ರಾಜಕೀಯ ವ್ಯಕ್ತಿಗಳಲ್ಲಿ ಶೇ. 50ರಷ್ಟು ಜನ ವೈದ್ಯಕೀಯ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರದ ಧಣಿಗಳಾಗಿದ್ದಾರೆ. ಇದೂ ಕೂಡ ಸಮಾಜ ಸೇವೆಗೆ ತೊಡಿಸಿದ ಇನ್ನೊಂದು ಮುಖವಾಡ. ಹಾಗಂತ, ನಾವು ವೋಟು ಹಾಕಿದವರೇ ಮಾಲೀಕರಲ್ವಾ, ಇಲ್ಲೆಲ್ಲ ಖರ್ಚು ಕಡಿಮೆ ಅನ್ನೋದೆಲ್ಲ ಭ್ರಮೆ. ಒಂದೋ ರಾಜಕೀಯಕ್ಕೆ ಬಂದು ಇವೆಲ್ಲ ಸಂಪಾದಿಸಿರುತ್ತಾರೆ. ಇಲ್ಲವೇ, ಸಂಪಾದಿಸಿದ
ಕೋಟಿ ಕೋಟಿ ಆಸ್ತಿ ರಕ್ಷಿಸಿಕೊಳ್ಳಲು ರಾಜಕೀಯಕ್ಕೆ ಬಂದಿರುತ್ತಾರೆ. ಬಹುತೇಕ
ರಾಜ್ಯಸಭಾ ಸದಸ್ಯತ್ವ, ವಿಧಾನ ಪರಿಷತ್‌ ಸ್ಥಾನಗಳೆಲ್ಲವೂ ಈ ರೀತಿ ಹಣ ಮಾಡಿದ ಮಂದಿಗೆ ನೈವೇದ್ಯವಾಗುತ್ತಿರುವುದು ಇದೇ ಕಾರಣಕ್ಕೆ.

ಚುನಾವಣಾ ಆಯೋಗ ಒಂದು ಸಲ ಎಲೆಕ್ಷನ್‌ ನಡೆಸಲು ಸಾವಿರಾರು ಕೋಟಿ ಬೇಕು ಅಂತ ಹೇಳುತ್ತಿದೆ. ರಾಜಕೀಯ ಮೂಲಗಳ ಪ್ರಕಾರವೇ ಇವತ್ತು ಒಬ್ಬ ಅಭ್ಯರ್ಥಿ ಎಂ.ಎಲ್‌.ಎ ಆಗಲು ಕನಿಷ್ಠ 40ರಿಂದ 50 ಕೋಟಿ ಬೇಕು. ಸರಾಸರಿ 50 ಕೋಟಿ ಅಂತ ಇಟ್ಟುಕೊಂಡರೂ ನಮ್ಮ ಚುನಾವಣೆಗೆ ಸ್ಪರ್ಧಿಸುವ 224 ಮಂದಿ ಎಂ.ಎಲ್‌ಎಗಳ ಹೂಡಿಕೆ ಅಂದಾಜು 11, 200 ಕೋಟಿ ಯಾಗುತ್ತದೆ. ಇಷ್ಟು ಖರ್ಚು ಮಾಡಿದವರು ಸುಮ್ಮನೆ ಕೂರಲು ಸಾಧ್ಯವೇ? ಸಾಧ್ಯವೇ ಇಲ್ಲ.

ಕಮೀಷನ್ನೇ ಕೋಟಿ ಕೋಟಿ
ಪ್ರತಿಯೊಂದರಲ್ಲೂ ಕಮೀಷನ್‌ ದಂಧೆಯಂತೆ. ಒಬ್ಬ ಎಂಪಿಗೆ ಐದು ವರ್ಷಕ್ಕೆ ಕನಿಷ್ಠ 25 ಕೋಟಿ ಅನುದಾನ ಸಿಗುತ್ತದೆ. ಅದರಲ್ಲೂ ಹಾಗೂ ಇತರೆ ಅನುದಾನಗಳಲ್ಲಿ ಕೈಯಾಡಿಸಿ ‌ಕಮೀಷನ್‌ ಪಡೆಯುವುದುಂಟಂತೆ. ಇನ್ನು, ಶಾಸಕರಿಗಂತೂ ಕೇಳುವುದೇ ಬೇಡ. ರಾಜ್ಯ, ಕೇಂದ್ರದಿಂದ ಏನೇ ಅನುದಾನ ಬಿಡುಗಡೆ ಆದರೂ ಅದರಲ್ಲಿ ಕನಿಷ್ಠ ಶೇ.10ರಷ್ಟು ಇವರಿಗಾಗಿ ಎತ್ತಿಡಬೇಕು ಅನ್ನೋದು ಅಲಿಖೀತ ನಿಯಮ. ವಿಧಾನಸೌಧದ ಮೂಲಗಳು ಹೇಳುವ ಗಣಿತ ಹೀಗಿದೆ- ಒಂದು ವರ್ಷದಲ್ಲಿ ಶಾಸಕರಿಗೆ, ಅದರಲ್ಲೂ ಆಡಳಿತ ಪಕ್ಷದ ಶಾಸಕರಾದರೆ ಕನಿಷ್ಠ 300-ರಿಂದ 400 ಕೋಟಿಯಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಒಂದು ಪಕ್ಷ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೋ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಂಥ ದೊಡ್ಡ ದೊಡ್ಡ ಸರ್ಕಾರಿ ಯೋಜನೆಗಳು ಜಾರಿಯಾಗುವುದಿದ್ದರೆ ಅನುದಾನ ಅನಿಯಮಿತ. ಹೀಗೆ ಐದು ವರ್ಷದಲ್ಲಿ ಕನಿಷ್ಠ 500 ರಿಂದ 750 ಕೋಟಿಯಷ್ಟು ಅಭಿವೃದ್ದಿ ಕಾಮಗಾರಿ ಅಂತಿಟ್ಟುಕೊಂಡರೂ, ಇದರಲ್ಲಿ ಶೇ. 10ರಷ್ಟು ಇವರ ಕಮೀಷನ್‌ ತೆಗೆದರೂ 75 ಕೋಟಿ ಗ್ಯಾರಂಟಿ. ಇದಲ್ಲದೆ ಅಧಿಕಾರಿಗಳಿಂದ ವರ್ಗಾವಣೆಗಳು, ಕಂದಾಯ, ರೆವಿನ್ಯೂ ಇಲಾಖೆಗಳಿಂದ ಬರುವ ಮಾಮೂಲಿಗಳು ಇನ್ನು ಮುಂತಾದ ನಿಗೂಢ ಮೂಲಗಳ ಹಣವನ್ನು ಸೇರಿಸಿದರೆ ಆದಾಯ ಸಮೃದ್ಧ ಎನ್ನುತ್ತವೆ ಮೂಲಗಳು.

ಇವಿಷ್ಟೇ ಅಲ್ಲ, ವಾರ್ಷಿಕ ಅನುದಾನ ಎರಡು ಕೋಟಿ, ಗೌರವಧನ, ಭತ್ಯೆ ಎಲ್ಲಾ ಸೇರಿ ಒಬ್ಬ ಶಾಸಕರಿಗೆ ತಿಂಗಳಿಗೆ ಸುಮಾರು ಒಂದೂವರೆ ಲಕ್ಷ ಸಿಗಬಹುದು. ಇಷ್ಟರಲ್ಲಿ ತಮ್ಮ ಕುಟುಂಬ, ಹಿಂಬಾಲಕರನ್ನು ಸಾಕಲು ಸಾಧ್ಯವೇ? ಕ್ಷೇತ್ರದ ಜನರ ಕಷ್ಟ ಸುಖ, ಮದುವೆ, ಮುಂಜಿ, ಜಾತ್ರೆ ಖರ್ಚುಗಳನ್ನು ಕೊಡಬೇಕಾಗುತ್ತದಂತೆ. ಹೀಗಾಗಿ, ಒಂದು ದಿನಕ್ಕೆ ಅವರ ಖರ್ಚಿಗೇ ಕನಿಷ್ಠ 25 ಸಾವಿರ ರೂ. ಬೇಕು. ಕ್ಷೇತ್ರ ಭೇಟಿಗೆ ಹೋದರೆ 50ಸಾವಿರ ದಾಟುತ್ತದೆ. ತಿಂಗಳ ಖರ್ಚು ಹೆಚ್ಚುಕಮ್ಮಿ 8ರಿಂದ 10 ಲಕ್ಷ ಬೇಕಂತೆ.
ಸರ್ಕಾರ ಕೊಡುವ ಒಂದೂವರೆ ಲಕ್ಷ ರೂ. ನಲ್ಲಿ ಇವೆಲ್ಲ ಹೇಗೆ ತೂಗಿಸಿಯಾರು? ಅನ್ನೋ ಅನುಮಾನ ಸುಳ್ಳೇನಲ್ಲ. “ಬಹಳ ಕಷ್ಟ ಇದೆ ರಾಜಕೀಯ ಬದುಕು. ಅಣ್ಣಮ್ಮನ ಕೂಡಿಸಿದ್ರೆ, ರಾಮನವಮಿ ಬಂದರೆ, ರಥೋತ್ಸವ ನಡೆದರೆ ಲಕ್ಷ ಲಕ್ಷ ಖರ್ಚು ಮಾಡಬೇಕು. ಆರ್ಕೇಸ್ಟ್ರಾ ಹಿಡಿಸಬೇಕು, ಇದಕ್ಕೆಲ್ಲ ದುಡ್ಡಿಲ್ಲ ಅಂದ್ರೆ ಕ್ಷೇತ್ರದ ಜನರೇ ನಗ್ತಾರೆ. ಪ್ರಸ್ಟೀಜ್‌ ಮೇಂಟೇನ್‌ ಮಾಡಲು ರಾಜಕಾರಣಿಗಳು ಬೇರೆ ಬೇರೆ ಉದ್ಯಮಗಳಲ್ಲಿ ಹೂಡಿಕೆ ಮಾಡಿ, ಆ ಲಾಭವನ್ನು ಇಲ್ಲೂ ತಂದು ಹಾಕ್ತಾರೆ’ ಅಂತಾರೆ ಬಹಳ ವರ್ಷಗಳ ಕಾಲ ಶಾಸಕರೊಬ್ಬರಿಗೆ ಸಹಾಯಕರಾಗಿ ದುಡಿದವರು.

ಆರ್ಥಿಕ ಸಬಲ ಪಕ್ಷಗಳು 2009ರಿಂದ 2014ರ ಚುನಾವಣೆಯ ನಡುವೆ ಚುನಾವಣಾ ಖರ್ಚು ಶೇ.247ರಷ್ಟು ಖರ್ಚು ಹೆಚ್ಚಳವಾಗಿದೆ. ಅಂದರೆ 3,870 ಕೋಟಿ ರೂ. 1954ರಲ್ಲಿ ನಡೆದ ಮೊದಲ ಚುನಾವಣೆಗೆ ಹೋಲಿಸಿದರೆ ಶೇ.370ರಷ್ಟು ಹೆಚ್ಚಳ ಕಂಡಿದೆ. ಕಳೆದ ಮೂರು ಲೋಕ ಸಭಾ ಚುನಾವಣೆ (2004,2009,20014)ಗಳಲ್ಲಿ ಯಾವ್ಯಾವ ಪಕ್ಷ ಎಷ್ಟೆಷ್ಟು ಖರ್ಚು ಮಾಡಿದೆ ಅನ್ನೋದರ ಪಟ್ಟಿಯನ್ನು ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರೀಫಾರ್ಮೆಷನ್‌( ಎಡಿಆರ್‌) ಅನ್ನೋ ಸಂಸ್ಥೆ ಬಿಡುಗಡೆ ಮಾಡಿದೆ. ಅದರ ಪ್ರಕಾರ- 2004 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 102.65 ಕೋಟಿ ಖರ್ಚುಮಾಡಿತ್ತು, 2009ರಲ್ಲಿ ಈ ಮೊತ್ತ 448.1 ಕೋಟಿಗೆ ಏರಿತು ಅಂದರೆ ಶೇ.300ರಷ್ಟು ಹೆಚ್ಚು. 2014ರ ವೇಳೆಗೆ 712.18 ಕೋಟಿ ಹೂಡಿಕೆ ಮಾಡಿದೆ. ಇದರಲ್ಲಿ ಕಾಂಗ್ರೆಸ್‌ ಪಕ್ಷ ಕೂಡ ಹಿಂದೆ ಬಿದ್ದಿಲ್ಲ. 2004ರ ಲೋಕಸಭಾ ಚುನಾವಣೆಯಲ್ಲಿ 149.61 ಕೋಟಿ ,2009ರಲ್ಲಿ ಈ ಮೊತ್ತ 380.4 ಕೋಟಿ, 2014ರ ಚುನಾವಣೆಯಲ್ಲಿ 486.21 ಕೋಟಿ ಖರ್ಚು ಮಾಡಿದೆ. ಮಜವಾದ ವಿಷಯ ಎಂದರೆ, ಈ ಮೂರು ಚುನಾವಣೆಗಳಲ್ಲಿ ಬಿಜೆಪಿ, ಕಾಂಗ್ರೆಸ್‌ ಹೊರತು ಪಡಿಸಿ ಉಳಿದ ಪಕ್ಷಗಳೆಲ್ಲವೂ ಸೇರಿ ಖರ್ಚುಮಾಡಿರುವುದು 117.68 ಕೋಟಿ ಮಾತ್ರ ! ಇನ್ನು ಕರ್ನಾಟಕದಲ್ಲಿ ನಡೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಆದ ಆಯವ್ಯಯಗಳ ಪಟ್ಟಿ ಎಡಿಆರ್‌ ಬಿಡುಗಡೆ ಮಾಡಿದೆ. ಅದರಲ್ಲಿ 8 ಪಕ್ಷಗಳು (ಜೆಡಿಎಸ್‌ ಹೊರತಾಗಿ) 356.04 ಕೋಟಿ ಹಣವನ್ನು ಕ್ರೂಡೀಕರಿಸಿವೆ. ಇದರಲ್ಲಿ ಎಲ್ಲಾ ಪಕ್ಷಗಳು ಸೇರಿ 170.16 ಕೋಟಿ ಖರ್ಚು ಮಾಡಿವೆಯಂತೆ. ಎಡಿಆರ್‌ ವರದಿಯಲ್ಲಿ- ಪಕ್ಷಗಳಲ್ಲಿ ಹಣದ ಮೂಲ ಡೋನರ್‌ ಅಂತ ಹೇಳಿದೆಯಾದರೂ, ಯಾವ ಡೋನರ್‌ ಎಷ್ಟು ಕೊಟ್ಟಿದ್ದಾರೆ, ಅವರ ತೆರಿಗೆ ಹಿನ್ನೆಲೆ ಏನು ಅನ್ನುವುದನ್ನು ಹೇಳಿಲ್ಲ ಎಂದಿದೆ. ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌ (ಸಿಎಂಎಸ್‌) ಪ್ರಕಾರ, ಕರ್ನಾಟಕದಲ್ಲಿ ನಡೆದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು 9.500, 10.500ಕೋಟಿ ರೂ. ಹೂಡಿಕೆ ಮಾಡಿದೆ ಎಂದು ಅಂದಾಜಿಸಿದೆ. ಇದರ ಹಿನ್ನೆಲೆಯಲ್ಲಿ ಹೇಳುವುದಾದರೆ 2019ರ ಲೋಕ ಸಭೆಯಲ್ಲಿ ಇದು 50ರಿಂದ 60 ಸಾವಿರ ಕೋಟಿಯಷ್ಟು ಖರ್ಚು ಮಾಡುವ ಸಂಭವವಿದೆ.

ಹೀಗೆ ಚುನಾವಣೆಯ ಹೆಸರಲ್ಲಿ ಹಣ ಸುರಿಯುವುದು ದೇಶದ ಆರ್ಥಿಕತೆಯ ಮೇಲೆ ಪರೋಕ್ಷವಾಗಿ ಪರಿಣಾಮ ಬೀರದೆ ಇರದು ಅಂತಲೂ ಎಚ್ಚರಿಸಿದೆ. ಈಗ ಹೇಳಿ, ಚುನಾವಣೆ ಅನ್ನೋದು ಬ್ಯುಸಿನೆಸ್‌ ಅಲ್ಲದೆ ಮತ್ತೇನು?

ದುಡ್ಡು ಹಾಕಿ ಸುಮ್ಮನೆ ಕೂರ್ತಾರಾ..?
ಹೆಸರು ಹೇಳಲು ಇಚ್ಚಿಸದ ಮಾಜಿ ಲೋಕಸಭಾ ಸದಸ್ಯರು ಹೇಳುವ ಪ್ರಕಾರ, ” ಒಂದು ಲೋಕಸಭೆ ವ್ಯಾಪ್ತಿಯಲ್ಲಿ 5, 6 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಒಬ್ಬ ಅಭ್ಯರ್ಥಿ ಹೆಚ್ಚು ಕಮ್ಮಿ ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ ಐದು, ಆರು ಕೋಟಿ ವ್ಯಯಿಸಬಹುದು. ಅಭ್ಯರ್ಥಿ ಗೆಲ್ಲುವ ಭರವಸೆ ಹೆಚ್ಚಿರುವ ಪಕ್ಷವೇ ಒಂದಷ್ಟು ಹಣವನ್ನು ಪಂಪ್‌ ಮಾಡುತ್ತದೆ. ಗೆಲುವಿನ ಬಗ್ಗೆ ಅನುಮಾನ ಇದ್ದರೆ ಅಷ್ಟೊಂದು ಹಣ ವ್ಯಯಿಸುವುದಿಲ್ಲ. ಇದೇ ರೀತಿ, ವಿಧಾನಸಭೆ ಚುನಾವಣೆಗೆ ಬಂದರೆ, ಶಾಸಕನಾಗಲು ಬಯಸುವವರು ಕನಿಷ್ಠ 30 ಕೋಟಿಯಾದರೂ ಕೈಯಲ್ಲಿ ಇಟ್ಟುಕೊಂಡಿರಬೇಕಂತೆ. ಸ್ಪರ್ಧೆಗೆ ಬಿದ್ದರೆ ಇದು 50,60,70 ಕೋಟಿ ಆದರೂ ಆಗಬಹುದು. ಹೊಸ ಅಭ್ಯರ್ಥಿಯಾಗಿದ್ದರೆ, ಕೈಯಿಂದ ಪಾರ್ಟಿ ಫ‌ಂಡ್‌ ಕೊಟ್ಟು, ಚುನಾವಣೆ ಖರ್ಚೆಲ್ಲಾ ತಾನೇ ನಿಭಾಯಿಸಿಕೊಳ್ಳಬೇಕಾಗುತ್ತದಂತೆ’. ಇಷ್ಟೆಲ್ಲಾ ದುಡ್ಡು ಹಾಕಿದವರು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವೇ?

ಎಂಎಲ್‌ಎ ಸಂಬಳ ಕರುನಾಡು ನಂ.1
ದೇಶದ 31 ರಾಜ್ಯಗಳಲ್ಲಿ 4, 120 ಎಂಎಲ್‌ಎಗಳು ಇದ್ದಾರೆ. ಪ್ರತಿಯೊಬ್ಬರಿಗೆ ವರ್ಷಕ್ಕೆ 4ರಿಂದ 5 ಕೋಟಿ ಅನುದಾನ ಸಿಗುತ್ತದೆ. ಒಟ್ಟಾರೆ, 543 ಎಂ. ಪಿಗಳು ಇದ್ದಾರೆ. ರಾಷ್ಟ್ರದ ಶಾಸಕರ ವಾರ್ಷಿಕ ಆದಾಯ ಸರಾಸರಿ 24.59 ಲಕ್ಷವಂತೆ. ಕರ್ನಾಟಕದ ಎಂಎಲ್‌ಎಗಳ ವರ್ಷದ ಆದಾಯ ಒಂದು ಕೋಟಿಗೂ ಹೆಚ್ಚು. ಅತಿ ಕಡಿಮೆ ಎಂದರೆ ಚತ್ತೀಸ್‌ಗಢದ ಶಾಸಕರ ಆದಾಯ 5.4ಲಕ್ಷರೂ. ಮಾತ್ರ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರೀಫಾರ್ಮ್ ಮತ್ತು ನ್ಯಾಷನಲ್‌ ಎಲಕ್ಷನ್‌ ವಾಚ್‌ ವರದಿಯಲ್ಲಿ ಹೇಳಿದೆ.ದಕ್ಷಿಣಭಾರತದ 711 ಶಾಸಕರದ್ದು 51.99 ಲಕ್ಷ, ಈಶಾನ್ಯ ಪ್ರಾಂತ್ಯದ 614 ಶಾಸಕರದ್ದು ಅತಿ ಕಡಿಮೆ. ಅಂದರೆ 8.53ಲಕ್ಷ ಎಂದಿದೆ. ಶೇ. 25ರಷ್ಟು ಶಾಸಕರು ತಮ್ಮ ವೃತ್ತಿ ವ್ಯವಸಾಯ ಅಂತ ಹೇಳಿಕೊಂಡಿದ್ದಾರೆ. ಶೇ. 63ರಷ್ಟು ಶಾಸಕರು ತಮ್ಮ ವಿದ್ಯಾರ್ಹತೆ ಡಿಗ್ರಿ ಅದಕ್ಕಿಂತ ಹೆಚ್ಚು ಅಂತ ಹೇಳಿಕೊಂಡಿದ್ದಾರಂತೆ. ಕುತೂಹಲಕರ ಮಾಹಿತಿ ಎಂದರೆ, ಕರ್ನಾಟಕ ಸರ್ಕಾರ 2013ರಿಂದ 2108ರ ವರೆಗೆ 235 ಕೋಟಿ ರೂ. ಗಳನ್ನು ಶಾಸಕರು, ವಿಧಾನಪರಿಷತ್‌ ಸದಸ್ಯರ ಗೌರವಧನಕ್ಕಾಗಿ ವ್ಯಯಿಸಿದೆ. ಇನ್ನೊಂದು ಅಚ್ಚರಿ ಎಂದರೆ, ಈ ಎಲ್ಲಾ ಸದಸ್ಯರ ವರ್ಷದ ದೂರವಾಣಿ ಬಿಲ್‌ ಎಷ್ಟು ಗೊತ್ತಾ 7.2 ಕೋಟಿ ರೂ. ಅಂದರೆ ನೀವು ನಂಬಲೇ ಬೇಕು. ತಿಂಗಳಿಗೆ ಹೆಚ್ಚು ಕಮ್ಮಿ 20 ಸಾವಿರ ರೂ.ನಷ್ಟು. ಹೀಗಾಗಿ, ಐದು ವರ್ಷಗಳ ಅವಧಿಯಲ್ಲಿ ಹೆಚ್ಚು ಕಮ್ಮಿ 36 ಕೋಟಿ ರೂ. ದಾಟಿದೆಯಂತೆ. ಜನರ ತೆರಿಗೆ ದುಡ್ಡನ್ನು ಈ ರೀತಿ ಏಕೆ ಪೋಲು ಮಾಡುತ್ತಿದ್ದೀರಿ? 500 ರೂ. ಕೊಟ್ಟರೆ ಅನ್‌ಲಿಮಿಟೆಡ್‌ ಕಾಲ್‌ ಸಿಗ್ತದಲ್ಲ ಅಂತ ಕೇಳಿದವರೂ ಉಂಟು. ಆದರೆ ಪ್ರಯೋಜನವಾಗಿಲ್ಲ

ಕಟ್ಟೆ ಗುರುರಾಜ್

ಟಾಪ್ ನ್ಯೂಸ್

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.