ಜೇಬಿನಿಂದ ತೆಗೆದು ಕೊಟ್ಟಾಗಷ್ಟೇ ಬೇಜಾರಾಗುತ್ತದೆ

Team Udayavani, Apr 8, 2019, 10:34 AM IST

“ಪರಮೇಶ ಎಲ್ಲೂ ಸಾಲ ತಗೊಂಡಿಲ್ಲವಂತೆ. ದಿನಕ್ಕೆ ಆರೋ,ಏಳ್ಳೋ ಸಿಗರೇಟು ಸೇದುವ ಒಂದು ಚಟ,ನಾಲ್ಕು ಬಾರಿ ತಪ್ಪದೇ  ಟೀ ಹೀರುವ ಮತ್ತೂಂದು ಚಟ, ಅವನೊಂದಿಗೇ ಉಳಿದಿದೆ. ಹಾಗೆಲ್ಲ ಶೋಕಿ ಮಾಡಿಕೊಂಡೂ ಅವನು ಎಲ್ಲಿಯೂ ಸಾಲ ಮಾಡಿಲ್ಲವಂತೆ. ಯಾವುದೋ ಚೀಟಿಯಲ್ಲಿ ಹಣ ತೊಡಗಿಸಿಚೆನ್ನಾಗಿ ಸಂಪಾದಿಸಿದನಂತೆ. ಆ ಹಣವನ್ನೇ
ಈ ಬಾರಿ ಮಕ್ಕಳ ಶಿಕ್ಷಣಕ್ಕೆ ಬಳಸುತ್ತಾನಂತೆ. ಕಾಲೇಜಿನ ಒಂದಲ್ಲ, ಎರಡು ಲಕ್ಷವಾದ್ರೂಚಿಂತೆಯಿಲ್ಲ. ಒಳ್ಳೆಯ ಕಾಲೇಜಿಗೇ ಸೇರಿಸ್ತೇನೆ. ಸ್ಕೋಪ್‌ ಇರುವ ಕಾಂಬಿನೇಷನ್‌ಗೆ ಸೇಟು ತಗೊಳ್ಳೋಣ ಎಂದೆಲ್ಲಾ ಮಕ್ಕಳಿಗೆ,ಭರವಸೆ ನೀಡಿದ್ದಾನಂತೆ. ಆ ಕಡೆ ಲೈಫ್ನ ಎಂಜಾಯ್‌ ಮಾಡಿಕೊಂಡೇ ಈ ಕಡೆ ಚೆನ್ನಾಗಿ ಉಳಿತಾಯವನ್ನೂ ಮಾಡುವುದು ಹೇಗೆ ಅಂತ ಒಮ್ಮೆ ಅವನನ್ನೇ
ಕೇಳಬೇಕು…’

ನಮ್ಮ ಪರಿಚಯದ ಜನರೆಲ್ಲ ಹೀಗೆ ಮಾತಾಡುತ್ತಿದ್ದರು. ಕಳೆದ 20 ವರ್ಷಗಳಿಂದ ನಮ್ಮ ಏರಿಯಾದಲ್ಲೇ ವಾಸಿಸುತ್ತಿರುವ; ವಿಪರೀತ ಅನ್ನುವಷ್ಟು ಸಿಗರೇಟು, ಟೀ-ಕಾಫಿ ಸೇವನೆಯಿಂದಲೇ ಎಲ್ಲರಿಗೂ ಪರಿಚಯ ಸಿಗುವ ಪರಮೇಶ್‌, “ಕೈ ತುಂಬಾ ಕಾಸಿದೆ. ಕಾಲೇಜು ಓದುವ ಮಕ್ಕಳಿಗೆ ಕೊಡಲು ಯಾರಿಂದಲೂ ನಯಾ ಪೈಸೆ ಕೇಳಲಾರೆ’ ಎಂದದ್ದೇ ಎಲ್ಲರ ಅಚ್ಚರಿಗೂ ಕಾರಣವಾಗಿತ್ತು. ಏಕೆಂದರೆ, ಒಂದು ಪ್ರೈವೇಟ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವನು, ಹೋಟೆಲು, ತಿಂಡಿ ಸಿಗರೇಟು ಎಂದೆಲ್ಲಾ ಖರ್ಚು ಮಾಡಿಕೊಂಡು, ಲಕ್ಷದಷ್ಟು ಹಣವನ್ನು ಹೇಗೆ ಉಳಿಸಿದ? ಯಾರಿಗಾದರೂ ಮೋಸ ಗೀಸ ಮಾಡಿ ದಿಢೀರನೆ ಕಾಸು ಮಾಡಿದನಾ? ಏಕ್‌ದಂ ದೊಡ್ಡ ಮೊತ್ತವನ್ನು ಕೊಡುವಂಥ ಚಿಟ್‌ ವ್ಯವಹಾರವಾದರೂ ಯಾವುದಿದೆ ಎಂಬ ಪ್ರಶ್ನೆ ಎಲ್ಲರದ್ದೂ ಆಗಿತ್ತು. ಅದನ್ನೇ ಎದುರು ನಿಂತು ಕೇಳಲು ಸಾಧ್ಯವಾಗದೆ,
ಪರಮೇಶ ಒಂದೇ ವರ್ಷದಲ್ಲಿ ಕಾಸು ಮಾಡಿದನಂತೆ ಎಂದು ಗುಸುಗುಸು
ಮಾತನಾಡುತ್ತಿದ್ದರು.

ಅದೊಮ್ಮೆ ಪರಮೇಶನೇ ಎದುರಿಗೆಸಿಕ್ಕಿದ. ಎಲ್ಲವನ್ನೂ ಅವನಿಗೆ ವಿವರವಾಗ ತಿಳಿಸಿ- “ಜನ ಹೀಗೆಲ್ಲ ಮಾತಾಡ್ತಿದಾರಲ್ಲಯ್ಯ? ಇದೆಲ್ಲ ನಿಜವಾ? ದಿಢೀರನೆ ಲಕ್ಷ ರೂಪಾಯಿ ಸಂಪಾದಿಸುವ ದಾರಿ ಯಾವುದು? ಅದ್ಯಾವುದೋ ಚೀಟಿ ಹಾಕಿದ್ದೆಯಂತಲ್ಲ. ಅವರು ನಯಾಪೈಸೆ ಕಟ್‌ ಮಾಡದೆ, ಬಡ್ಡಿ ಸೇರಿಸಿ ಕೊಟ್ಟರಂತೆ ನಮಗ್ಯಾರಿಗೂ ಗೊತ್ತಿಲ್ಲದಂತೆ ಹೇಗೆ ಹಣ ಸಂಪಾದಿಸಿದೆ? ‘ ಎಂದು ಪ್ರಶ್ನೆ ಹಾಕಿದೆ. “ಅಯ್ಯೋ ಅದರೆಲ್ಲೇನಿದೆ ಗುಟ್ಟು? “ಹನಿಗೂಡಿದರೆ ಹಳ್ಳ’ ಅಂತ ದೊಡ್ಡವರುಹೇಳಿದ್ದಾರಲ್ಲ: ಆ ಮಾತು ನನ್ನ ವಿಷಯದಲ್ಲಿ ನಿಜವಾಯ್ತು ಅಷ್ಟೆ ‘ ಅಂದ ಪರಮೇಶ್‌. ” ಇದೆಲ್ಲಾ ಒಗಟಿನ ಮಾತು ಬೇಡ. ಹೇಳುವುದಿದ್ದರೆ ನೇರವಾಗಿ, ವಿವರವಾಗಿ ಹೇಳಿ ಬಿಡು’ ಅಂದದ್ದಕ್ಕೆ ಅವನು ಹೇಳಿದ ವಿವರಣೆ ಹೀಗಿತ್ತು.

ಹತ್ತು ವರ್ಷದ ಹಿಂದೆ, ನಮ್ಮ ,ಕಂಪನಿಯವರು ಬೇರೆ ಬ್ಯಾಂಕ್‌ಗೆಅಕೌಂಟ್‌ ಬದಲಿಸಿಕೊಳ್ಳಲು ಹೇಳಿದ್ರು. ಅವತ್ತೂಂದು ದಿನ ಬ್ಯಾಂಕಿಗೆ ಹೊರಟವನು, ಬ್ಯಾಂಕಿನ ಒಳಗೆ ಕಾಲಿಡುವ ಮೊದಲು, ಅಭ್ಯಾಸಬಲದಂತೆ ಒಂದು ಸಿಗರೇಟು ಸೇದಿ ನಂತರವೇ ಹೋದೆ. ಎರಡು ನಿಮಿಷದ ಮಾತುಕತೆಯಲ್ಲೇ ನಾನು ಜಾಸ್ತಿ ಸಿಗರೇಟು ಸೇದುತ್ತೇನೆ ಎಂಬ ವಿಷಯ ಅಲ್ಲಿನ ಮ್ಯಾನೇಜರ್‌ಗೆ ಗೊತ್ತಾಗಿ ಹೋಯಿತು. ,ಅವರು ಹಿರಿಯರು. ನನ್ನನ್ನೇ ಒಮ್ಮೆ ದಿಟ್ಟಿಸಿ ನೋಡಿ “ಸತ್ಯ ಹೇಳಿ, ಒಂದು ದಿನಕ್ಕೆ ಎಷ್ಟು ,ಸಿಗರೇಟು ಸೇದಿರಾ? ಅಂದರು.

“ಅಯ್ಯೋ, ಅದನ್ನೆಲ್ಲ ಲೆಕ್ಕ ಇಡಲ್ಲ ಸಾರ್‌, ತಲೆಕೆಟ್ರೆ ಒಂದೊಂದ್ಸಲ ದಿನಕ್ಕೆ 30 ,ಸೇದುವುದೂ ಉಂಟು. 10 ಸಿಗರೇಟಂತೂ ಸೇದೇ ಸೇದಿನಿ’ ಅಂದೆ. ಆ ಮ್ಯಾನೇಜರ್‌ ಕ್ಷಣ ಕಾಲ ಏನೂ ಮಾತಾಡಲಿಲ್ಲ. ನಂತರ ಒಂದು ಫಾರ್ಮ್ಟ್ಟು, ಮೂರು ಕಡೆ ಸಹಿ ಹಾಕಿಸಿಕೊಂಡರು. ನಂತರ, “ಇನ್ಲೆ ಪ್ರತಿ ತಿಂಗಳ ಸಂಬಳದಲ್ಲಿ 3000 ರೂಪಾಯಿ ಕಟ್‌ ಆಗುತ್ತೆ. ಈ ದುಡ್ಡು ನಿಮ್ಮ ಅಕೌಂಟ್‌ನಲ್ಲೇ ಇರುತ್ತೆ. ದಿನಕ್ಕೆ 10 ಸಿಗರೇಟ್‌ ಸೇದೆನೆ, ನಾಲ್ಕು ಕಾಫಿ ಕುಡೀತೀನಿ ಅಂದ್ರಿ ಅಲ್ಲವಾ? ಅದನ್ನು ಪೂರ್ತಿ ಬಿಟ್ಟು ಬಿಡಿ ಅಂತ ನಾನು ಹೇಳಲ್ಲ. ಆದರೆ, ದಿನಕ್ಕೆ 6 ಸಿಗರೇಟ್‌, 2 ಕಾಫಿಗೆ ನಿಮ್ಮನ್ನು ಒಗ್ಗಿಸಿಕೊಳ್ಳಿ. ಹೀಗೆ ಉಳಿಯುತ್ತಲ್ಲದುಡ್ಡು; ಅದೇ ನಿಮ್ಮಅಕೌಂಟಿಗೆ ಹೋಗುತ್ತೆ.ನೀವು ಅರ್ಜಿ ತುಂಬಿಸಿ, ಕ್ಯೂನಿಂತು ಹಣ ಕಟ್ಟುವ ಸೀನ್‌ ಇಲ್ಲವೇ ಇಲ್ಲ.

ನಿಮ್ಮ ಸಂಬಳ ಆಗ್ತಿದ್ದಂಗೇ, ಆ ಒಟ್ಟುಹಣದಲ್ಲಿ 3000 ರೂಪಾಯಿ ಕಟ್‌ ಆಗಿಬಿಡುತ್ತೆ. ನೀವು ಜೇಬಿಂದ ತೆಗೆದು,ಅಷ್ಟೂ ದುಡ್ಡನ್ನು ಯಾರಿಗಾದ್ರೂ ಕೊಟ್ರೆ, ಅಯ್ಯೋ ನನ್ನ ಕಾಸು ಹೋಯ್ತು ಎಂಬ ಲ್‌ ಜೊತೆಯಾಗುತ್ತೆ. ಆದ್ರೆ ಇಲ್ಲಿ ನೀವು ಯಾರಿಗೂ ಕೊಡುವುದಿಲ್ಲ. ಅಷ್ಟೇ ಅಲ್ಲ,ಸಂಬಳ ಆದ ದಿನವೇ ಈ ಹಣ ಕಟ್‌ ಆಗಿ, ನಿಮ್ಮ ಉಳಿತಾಯದ ಲೆಕ್ಕಕ್ಕೆ ಸೇರುವುದರಿಂದ, ಉಳಿದ ಹಣದಲ್ಲಿಯೇ ಎಲ್ಲಾ ಖರ್ಚು ಸರಿದೂಗಿಸಲು ನಿಮ್ಮ ಮನಸ್ಸು ಅಡ್ಜಸ್ಟ್‌ ಆಗಿ ಬಿಡುತ್ತದೆ. ಹೀಗೆ ಹಣ ಹೂಡುವುದರಿಂದ ಭವಿಷ್ಯದಲ್ಲಿ ನಿಮಗೆ ತುಂಬಾ ಅನುಕೂಲ ಆಗುತ್ತೆ. ತಿಂಗಳಿಗೆ 3000 ಉಳಿತಾಯ ಮಾಡ್ತೀರಿ ಅಂದ್ರೆ ವರ್ಷಕ್ಕೆ 36 ಸಾವಿರ, ಹತ್ತು ವರ್ಷಕ್ಕೆ 3,60,000 ಆಗುತ್ತೆ. ಜೊತೆಗೆ ಬಡ್ಡೀನೂ  ಸಿಗುತ್ತೆ. ಇವತ್ತಿಂದ ಹತ್ತು ವರ್ಷ ನೀವು ಕೆಲಸಕ್ಕೆ ಹೋದರೆ ಸಾಕು…!ಅಂದಿದ್ದರು ಆ
ಮ್ಯಾನೇಜರ್‌.

ತುಂಬಾ ಹಿರಿಯರು ಅಂದೆನಲ್ಲವಾ? ಹಾಗಾಗಿ ಅವರಿಗೆ ಎದುರುತ್ತರ ಕೊಡಲು
ಮನಸ್ಸು ಬರಲಿಲ್ಲ. “ಸರಿ ಸರ್‌’ ಎಂದಷ್ಟೇ ಉತ್ತರ ಹೇಳಿ ಮನೆಗೆ ಬಂದುಬಿಟ್ಟೆ. ಆ ನಂತರದಲ್ಲಿ ಹತ್ತು ವರ್ಷ ಹೇಗೆ ಕಳೀತು ಅಂತಾನೇ ಗೊತ್ತಾಗಲಿಲ್ಲ. ಜನರಿಗೆ ನಾನು ದಿನವೂ ಎರಡು ಕಾಫಿ ಬಿಟ್ಟಿದ್ದಾಗಲಿ, ನಾಲ್ಕು ಸಿಗರೇಟು ಕಡಿಮೆ ಮಾಡಿದ್ದಾಗಲಿ ಕಾಣಲೇ ಇಲ್ಲ. ಹಾಗೆಯೇ, ನನ್ನ ಸಂಬಳದ ಹಣ ಪ್ರತಿ            ತಿಂಗಳೂ ಉಳಿತಾಯ ಖಾತೆಗೆ ಸೇರಿದ್ದೂ ಗೊತ್ತಾಗಲಿಲ್ಲ. ಇದನ್ನೆಲ್ಲ, ಪ್ರತಿಯೊಬ್ಬರಿಗೂ ವಿವರಿಸಿ ಹೇಳುವ ಅಗತ್ಯ ನನಗೂ ಕಾಣಲಿಲ್ಲ. ಹಾಗಾಗಿ ಸುಮ್ಮನೇ ಇದ್ದು ಬಿಟ್ಟೆ. ಈಗ ಉಳಿತಾಯದ ರೂಪದಲ್ಲಿ ಬಂದ ಹಣವೇ 3,60,000 ಆಗಿದೆ. ಬಡ್ಡಿಯ ರೂಪದಲ್ಲಿ 15 ಸಾವಿರ ಸಿಕ್ಕಿದೆ. ಒಂದರ್ಥದಲ್ಲಿ ಇದು ನಿರಾಯಾಸವಾಗಿ ಸಿಕ್ಕಿದ ಹಣ. ಮಕ್ಕಳಿಗೆ, ಕಾಲೇಜಿನ fees ಕಟ್ಟಲಿಕ್ಕೆ ಯಾರ ಮುಂದೇನೂ ಕೈ ಒಡ್ಡಬೇಕಿಲ್ಲ ಅಂದಿದ್ದು ಈ ಹಣವಿದೆ ಎಂಬ ಕಾರಣಕ್ಕೇ…’ ಪರಮೇಶ್‌ ಇಷ್ಟು ಹೇಳಿ ಮೌನವಾದ.

ಹೌದು, ಹಣ ಉಳಿಸಲು ಹಲವು ದಾರಿಗಳಿವೆ. ನಮ್ಮ ದುಡಿಮೆಯ ಹಣವನ್ನು ಬ್ಯಾಂಕಿನಿಂದ ತಗೊಂಡು ಹೋಗಿ ಅದನ್ನೇ ಪೋಸ್ಟ್‌ ಆಫಿಸಿನ ಎಫ್.ಡಿ. ಖಾತೆಗೆ ಕಟ್ಟಬೇಕು ಅಂದರೂ ಮನಸ್ಸು ಹಿಂದೇಟು ಹಾಕುತ್ತದೆ. ಆದರೆ, ನಿಮಗೇ ಗೊತ್ತಿಲ್ಲದಂತೆ ಸಂಬಳದ ಹಣ ಕಟ್‌ ಆಗಿ, ಅದು ಮತ್ತೆಲ್ಲೋ ಉಳಿತಾಯದ ಹಣವಾಗಿ ಸೇರಿಕೊಳ್ಳುತ್ತದೆ. ಅಂದರೆ ಆ ಹಣವನ್ನು ಮರೆತುಬಿಡಲು, ಉಳಿದಷ್ಟೇ ಹಣದಲ್ಲಿ ಎಲ್ಲ ಖರ್ಚುಗಳಿಗೂ ಅಡ್ಜಸ್ಟ್‌ ಆಗಲು ಮನಸ್ಸು ಸಿದ್ಧವಾಗುತ್ತದೆ. ಹನಿಗೂಡಿದರೆ ಹಳ್ಳ ಎಂಬ ಹಿರಿಯರ ಮಾತು ನಿಜ ಆಗುವುದು ಆ ನಂತರದ ದಿನಗಳಲ್ಲೆ ಕೂಡಿಟ್ಟ ಹಣ ಕೊಡೋ
ಖುಷಿನೇ ಬೇರೆಹಣ ಉಳಿಸಬೇಕು ಅಂದರೆ ಒಂದು ಕೆಲ್ಸ ಅಂತ ಇರಬೇಕು. ತಿಂಗಳು ತಿಂಗಳು ಸಂಬಳ ಬರ್ತಾ ಇರಬೇಕು. ಬ್ಯಾಂಕ್‌ನಲ್ಲಿ ಅಕೌಂಟ್‌ ಇರಬೇಕು. ಆಗ ಮಾತ್ರ ಉಳಿತಾಯ ಸಾಧ್ಯ. ನಾವು ಹಳ್ಳಿ ಜನ. ಕೃಷಿ ಮಾಡ್ತೇವೆ. ನಮಗೆ ಯಾವ ಆದಾಯವೂ ಇಲ್ಲವಲ್ಲ. ಉಳಿತಾಯ ಮಾಡುವುದು ಹೇಗೆ ಎಂದು ಹಲವರು ಗೊಣಗುವುದುಂಟು.

ನಿಜ ಹೇಳಬೇಕೆಂದರೆ, ಹಣ ಉಳಿತಾಯ ಮಾಡಲು ಎಲ್ಲರಿಗೂ ಅವಕಾಶ ಇದ್ದೇ ಇದೆ. ಹೇಗೆ ಅಂದಿರಾ? ಒಬ್ಬ ಕೃಷಿಕ ಅಂದುಕೊಳ್ಳಿ. ಆತ ದಿನವೂ ಡೈರಿಗೆ ಹಾಲು ಹಾಕುತ್ತಾನೆ. ಇಲ್ಲವಾದರೆ  ತರಕಾರಿ ಬೆಳೆದು ಮಾರುತ್ತಾನೆ. ಅದಿಲ್ಲವಾದರೆ ಹೂವು/ತೆಂಗಿನಕಾಯಿ/ ಕೊಬ್ಬರಿ ಮಾರಾಟ ಮಾಡುತ್ತಾನೆ. ಈ ವ್ಯವಹಾರದಲ್ಲಿ ಸಿಗುತ್ತದಲ್ಲ; ಅದರಲ್ಲೇ ಒಂದು ಪಾಲನ್ನು ಎತ್ತಿಟ್ಟರೆ ಆಯಿತು. ಬ್ಯಾಂಕ್‌ನಲ್ಲಿ ಅಕೌಂಟ್‌ ಇಲ್ಲದಿದ್ದರೆ ಬೇಡ. ಈಗೆಲ್ಲ ಹಣ ಕೂಡಿಡಲು 15-20 ರುಪಾಯಿಗೆ ಹುಂಡಿಗಳು ಸಿಗುತ್ತವೆ. ಅವನ್ನು ತಂದಿಟ್ಟುಕೊಂಡು ದಿನ ಅಥವಾ ವಾರಕ್ಕೆ ಒಮ್ಮೆಯಂತೆ ಹಣ ಹಾಕುತ್ತಾ ಬಂದರೆ, ಒಂದು ಅಥವಾ ಎರಡು ವರ್ಷದೊಳಗೆ ಹುಂಡಿ ಭರ್ತಿಯಾಗುತ್ತದೆ. ನಮಗೇ ಗೊತ್ತಾಗದಂತೆ ಒಟ್ಟಾದ ಹಣವನ್ನು ಕಂಡಾಗ ಖುಷಿಯಾಗುವುದು ಮಾತ್ರವಲ್ಲ; ಹೊಸದೊಂದು ಹುಂಡಿ ತಂದು ಮತ್ತಷ್ಟು ಹಣ ಕೂಡಿ ಹಾಕಲೂ ಮನಸ್ಸು ಮುಂದಾಗುತ್ತದೆ. 20-30 ವರ್ಷಗಳ ಹಿಂದೆ,  ಹಲವು ಮನೆಗಳಲ್ಲಿ ಹೀಗೆ  ಡಬ್ಬಿಯೊಳಕ್ಕೆ ಮಕ್ಕಳಿಂದ ಪೈಸೆ ಪೈಸೆ ಹಾಕಿಸಿಯೇ, ಅದೇ ಹಣದಿಂದ ದೀಪಾವಳಿಯ ಪಟಾಕಿಯನ್ನು, ಹುಟ್ಟು ಹಬ್ಬಕ್ಕೆ ಬಟ್ಟೆಯನ್ನು ತರುತ್ತಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಿ.

ಫೆರ್ನಾಂಡಿಸ್

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ