ಮಾನ್ಸೂನ್‌ ಅಂದ್ರೆ ಕನಸು,ಕಾಂಚಾಣ!

ಮಳೆಯೆಂದರೆ ಹನಿಯಲ್ಲ, Moneyಯ ಹೊಳೆ

Team Udayavani, Jun 17, 2019, 5:00 AM IST

ಮಳೆ ಚೆನ್ನಾಗಿ ಬರುತ್ತದೆ ಎಂಬ ಒಂದು ಸುದ್ದಿಯಲ್ಲಿ ಹಲವು ಸಂಚಲನಗಳು ಸೃಷ್ಟಿಯಾಗುತ್ತವೆ. ಒಂದೆಡೆ ರೈತ ಈ ಬಾರಿ ಯಾವ ಬೆಳೆ ಬೆಳೆಯಲಿ ಎಂದು ಯೋಚಿಸುತ್ತಾನೆ ಅಥವಾ ಎಷ್ಟು ಕ್ಷೇತ್ರದಲ್ಲಿ ಬೆಳೆಯಲಿ ಎಂದು ಯೋಚಿಸುತ್ತಾನೆ. ಮಳೆ ಚೆನ್ನಾಗಿ ಆಗುತ್ತದೆ ಎಂದು ತಿಳಿಯುತ್ತಿದ್ದಂತೆ ಕೃಷಿಗಾಗಿ ಎಷ್ಟು ಸಾಲ ನೀಡಬೇಕು ಎಂದು ಬ್ಯಾಂಕ್‌ಗಳು ನಿರ್ಧರಿಸುತ್ತವೆ.

ನಮ್ಮ ಸಂಪ್ರದಾಯದಲ್ಲಿ “ರೇನ್‌ ರೇನ್‌ ಗೋ ಅವೇ’ ಅನ್ನೋದೇ ಇಲ್ಲ. “ಬಾ ಮಳೆಯೇ ಬಾ…’ ಎಂದೇ ಹೇಳುತ್ತೇವೆ. ಯಾಕೆಂದರೆ ನಮಗೆ ಮಳೆ ಬಂದಷ್ಟೂ ಖುಷಿ. ಮಳೆಯ ಒಂದೊಂದು ಹನಿಯೂ ಮುಂದೊಂದು ದಿನ ನಮ್ಮ ಜೇಬಿನಲ್ಲಿ ನಾಣ್ಯವಾಗಿ ಪರಿವರ್ತನೆಯಾದೀತು ಎಂದು ಕನಸು ಕಾಣುತ್ತೇವೆ. ನೀರಿನ ಒಂದು ಬಿಂದುವಿನಲ್ಲಿ ಒಂದು ಬೀಜದ ಜೀವ ಇದೆ. ಇದು ದೇಶದ ಪ್ರತಿ ವ್ಯಕ್ತಿಯ ಜೀವ ಸೆಲೆ. ಹಾಗೆಯೇ ಆತನ ಬದುಕಿನ ಆಸರೆಯೂ ಹೌದು.

ನೀರಿನಲ್ಲೇ ಕೃಷಿಕನ ಇದೆ. ಈ ಸಾರಿ ಮಳೆ ಚೆನ್ನಾಗಿ ಬಂದರೆ ಏನೇನೆಲ್ಲ ಬಿತ್ತಬಹುದು ಎಂದು ರೈತ ಜನವರಿಯಿಂದಲೇ ಕನಸು ಕಾಣುತ್ತಿರುತ್ತಾನೆ . ಈ ಬಾರಿ ಮಳೆ ಚೆನ್ನಾಗಿ ಬಂದರೆ ಯಾವ ಯಾವ ಬೀಜಗಳನ್ನು ರೈತನಿಗೆ ಮಾರಬಹುದು ಎಂದು ಕಂಪನಿಯೂ, ಈ ಬಾರಿ ಮಳೆ ಚೆನ್ನಾಗಿ ಹುಯ್ದರೆ ಯಾವ ಯಾವ ರಸಗೊಬ್ಬರಗಳನ್ನು ರೈತನಿಗೆ ಮಾರಬಹುದು ಎಂದು ರಸಗೊಬ್ಬರ ಕಂಪನಿಯೂ, ಈ ಬಾರಿ ಚೆನ್ನಾಗಿ ಮಳೆಯಾಗಿ ರೈತ ಅದರಲ್ಲಿ ಬೆಳೆದು ಆತನ ಕೈಗೆ ಚೆನ್ನಾಗಿ ಕಾಸು ಬಂದರೆ ಆತ ನಮ್ಮ ಕಂಪನಿಯ ಸಾಮಗ್ರಿಯನ್ನು ಖರೀದಿ ಮಾಡಬಹುದು ಎಂದು ವಿವಿಧ ಗೃಹೋಪಯೋಗಿ ಸಾಮಗ್ರಿ ತಯಾರಿಸುವ ಕಂಪನಿಗಳೂ ಲೆಕ್ಕ ಹಾಕುತ್ತಿರುತ್ತವೆ.

ಯಾವಾಗ ಮೇ ಹೊತ್ತಿಗೆ ಭಾರತೀಯ ಹವಾಮಾನ ಇಲಾಖೆಯು ಈ ಬಾರಿ ಮಾನ್ಸೂನ್‌ ಹೇಗಿರುತ್ತದೆ ಎಂಬ ಮುನ್ಸೂಚನೆಯ ವರದಿಯನ್ನು ಬಿಡುಗಡೆ ಮಾಡುತ್ತದೆಯೋ ಆಗಲೇ ಮುಂದಿನ ಒಂದರಿಂದ ಒಂದೂವರೆ ವರ್ಷದ ಆರ್ಥಿಕ ಸ್ಥಿತಿ ಕಣ್ಣಿಗೆ ಕಟ್ಟಿಬಿಡುತ್ತದೆ. ಹವಾಮಾನ ಇಲಾಖೆಯ ಮಾನ್ಸೂನ್‌ ಮುನ್ಸೂಚನೆ ಕೇವಲ ಮಳೆಯ ಮುನ್ಸೂಚನೆಯಲ್ಲ. ಅದು ಮುಂದಿನ ಒಂದು ವರ್ಷದ ಇಡೀ ದೇಶದ ಭವಿಷ್ಯವೂ ಇರುತ್ತದೆ.

ನಮ್ಮ ಇಡೀ ದೇಶದ ಆರ್ಥಿಕತೆ ನಿಂತಿರುವುದೇ ನೈಋತ್ಯ ಮಾನ್ಸೂನ್‌ ಮೇಲೆ. ಈ ಮಾರುತಗಳು ಬರಿ ಮಳೆ ಹಾಗೂ ಗಾಳಿಯನ್ನಷ್ಟೇ ಹೊತ್ತು ತರುವುದಿಲ್ಲ, ಇದರೊಂದಿಗೆ ಕನಸುಗಳೂ ಇರುತ್ತವೆ. ನಮ್ಮ ದೇಶದ ಶೇ. 75 ರಷ್ಟು ಭೂ ಭಾಗಕ್ಕೆ ಈ ಮಾನ್ಸೂನ್‌ ಮಾರುತಗಳು ನೀರುಣಿಸುತ್ತವೆ. ಮಳೆಯ ಮೊದಲ ಹನಿ ಬಿದ್ದ ಹೊತ್ತಿಗೆ ಹೊಲಕ್ಕೆ ಧಾವಿಸುವ ರೈತರು ಭತ್ತ, ಹತ್ತಿ, ಸೋಯಾ ಹಾಗೂ ಧಾನ್ಯಗಳನ್ನು ಬಿತ್ತುತ್ತಾನೆ. ಹೀಗಾಗಿ ದೇಶದ ಅರ್ಧಕ್ಕೂ ಹೆಚ್ಚು ಬೆಳೆ ಈ ನೈಋತ್ಯ ಮಾನ್ಸೂನ್‌ ಶುರುವಾದ ಮೊದಲ ಅರ್ಧದಲ್ಲಿ ಅಂದರೆ ಮುಂಗಾರಿನ ಸಮಯದಲ್ಲಿ ಬೆಳೆಯುತ್ತದೆ. ಇನ್ನುಳಿದದ್ದು ಹಿಂಗಾರಿನಲ್ಲಿ. ಅಂದರೆ ಸೆಪ್ಟೆಂರ್ಬ ತಿಂಗಳಿನಿಂದ ಬೆಳೆ ಆರಂಭವಾಗುತ್ತದೆ. ಹಿಂಗಾರೂ ಕೂಡ ಮೊದಲ 3-4 ತಿಂಗಳಲ್ಲಿ ಸುರಿದು ಹೋದ ಮಳೆಯನ್ನೇ ಅವಲಂಬಿಸಿರುತ್ತದೆ.

ದೇಶದ ಆರ್ಥಿಕತೆ ಹಾಗೂ ಮಾನ್ಸೂನ್‌ ಒಂದು ಚೈನ್‌ ಲಿಂಕ್‌ ವ್ಯವಹಾರವಿದ್ದ ಹಾಗೆ. ಮೇಲ್ನೋಟಕ್ಕೆ ಕೇವಲ ಶೇ. 15 ರಷ್ಟು ಜಿಡಿಪಿ ಮಾತ್ರ ಮಳೆ ಆಧರಿಸಿ ನಡೆಯುವ ಆರ್ಥಿಕತೆಯ ಮೇಲೆ ಅವಲಂಬಿಸಿರುತ್ತದೆ ಎಂದು ತೋರುತ್ತದೆ. ಆದರೆ ವಾಸ್ತವದ ಇನ್ನೊಂದು ಮಗ್ಗಲು ಬೇರೆಯೇ ಇದೆ. ದೇಶದ ಅರ್ಧದಷ್ಟು ಜನರು ಅಂದರೆ ಸುಮಾರು 60 ಕೋಟಿಗೂ ಹೆಚ್ಚು ಜನರು ಕೃಷಿಯನ್ನೇ ನೆಚ್ಚಿಕೊಂಡಿ¨ªಾರೆ. ಹೀಗಾಗಿ ಮಳೆ ಬಂತೆಂದರೆ ದೇಶದ ಅರ್ಧದಷ್ಟು ಜನರ ಖರ್ಚು ಮಾಡುವ ಸಾಮರ್ಥ್ಯ ಹೆಚ್ಚುತ್ತದೆ ಹಾಗೂ ಅವರು ಅದೇ ಪ್ರಮಾಣದಲ್ಲಿ ಉತ್ಪಾದನೆಯನ್ನೂ ಮಾಡುವ ಸಾಮರ್ಥ್ಯ ಪಡೆಯುತ್ತಾರೆ. ಹೀಗಾಗಿ ಇಷ್ಟು ದೊಡ್ಡ ಪ್ರಮಾಣದ ಜನರಿಗೆ ಆದಾಯ, ಉದ್ಯೋಗ ಒದಗಿಸುವ ಮಳೆ ಯಾವುದೇ ವಿಶ್ವದ ಯಾವುದೇ ಖಾಸಗಿ ಕಂಪನಿಗಿಂತ ದೊಡ್ಡ ವಹಿವಾಟುದಾರ!

ಮಳೆ ನಿರೀಕ್ಷೆ ಮಾಡುವುದು ಹೇಗೆ?
ಪ್ರತಿ ವರ್ಷ ಹವಾಮಾನ ಇಲಾಖೆಯು ಎರಡು ಬಾರಿ ಮಾನ್ಸೂನ್‌ ಮುನ್ಸೂಚನೆ ನೀಡುತ್ತದೆ. ಒಮ್ಮೆ ಏಪ್ರಿಲ್ನಲ್ಲಿ ಹಾಗೂ ಮತ್ತೂಮ್ಮೆ ಜೂನ್‌ನಲ್ಲಿ ಈ ವರದಿಯನ್ನು ಬಿಡುಗಡೆ ಮಾಡುತ್ತದೆ. ಮಾನ್ಸೂನ್‌ ಮುನ್ಸೂಚನೆ ನೀಡುವುದು ಎಂದರೆ ಗಣಿತ ಹಾಗೂ ವಿಶ್ಲೇಷಣೆಯ ಪ್ರಕ್ರಿಯೆ. ಮಾನ್ಸೂನ ಕಾರಣವಾಗುವ ಹಲವು ಅಂಶಗಳನ್ನು ಲೆಕ್ಕ ಹಾಕಿ ಅದರ ವರದಿ ಮಾಡುವುದು ಹವಾಮಾನ ಇಲಾಖೆಗೆ ತನ್ನ ಸಾಮರ್ಥ್ಯ ಪ್ರದರ್ಶನದ ಪ್ರಶ್ನೆಯೂ ಆಗಿರುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಮುನ್ಸೂಚನೆ ಭಾರಿ ತಪ್ಪಾಗಿ ಹವಾಮಾನ ಇಲಾಖೆ ಅಸ್ತಿತ್ವದಲ್ಲಿ ಇರಬೇಕೇ ಎಂಬ ಪ್ರಶ್ನೆ ಉಂಟಾಗಿದ್ದೂ ಇದೆ.

ಮುನ್ಸೂಚನೆ ಉತ್ತಮವಾಗಿದ್ದಷ್ಟೂ ಸರ್ಕಾರಗಳು ಪರಿಸ್ಥಿತಿಯನ್ನು ಎದುರಿಸಲು ಅನುಕೂಲವಾಗುತ್ತದೆ. ಅಂದರೆ ಒಂದು ವೇಳೆ ಮಾನ್ಸೂನ್‌ ಈ ಬಾರಿ ಕಡಿಮೆಯಾಗುತ್ತದೆ ಎಂದಾದರೆ ಅದರಿಂದಾಗಿ ಈ ಬಾರಿ ಜನವರಿ ವೇಳೆಗೆ ಮಾರುಕಟ್ಟೆ ಧಾನ್ಯಗಳ ಆವಕ ಕಡಿಮೆಯಾಗುತ್ತದೆ. ಹಾಗಾದಾಗ ಮಾರುಕಟ್ಟೆಯಲ್ಲಿ ಧಾನ್ಯಗಳ ಅಭಾವ ಸೃಷ್ಟಿಯಾಗುತ್ತದೆ. ಇದನ್ನು ಸರಿಪಡಿಸಲು ಸರ್ಕಾರ ಮೊದಲೇ ಯೋಜಿಸಿ ವಿದೇಶಗಳಿಂದ ಧಾನ್ಯ ಆಮದು ಮಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಇಡೀ ದೇಶದಲ್ಲಿ ಧಾನ್ಯದ ಕೊರತೆಯಿಂದ ಪರಿತಪಿಸುವಂತಾಗುತ್ತದೆ.

ರೈತರ ದೃಷ್ಟಿಯಿಂದ ಹೇಳುವುದಾದರೆ, ಮಳೆಯೇ ಆತನ ಜೀವಾಳ. ಮಳೆ ಬಂದರೆ ಬೆಳೆಗೆ ನೀರು. ಇಲ್ಲವಾದರೆ ನೀರಿಲ್ಲ. ಬೆಳೆಯಿಲ್ಲ. ಬೆಳೆಯಿಲ್ಲದಿದ್ದರೆ ಬದುಕೇ ಇಲ್ಲ. ಒಂದು ವರ್ಷ ಮಳೆ ಚೆನ್ನಾಗಿ ಬಂದರೆ ಅದು ಆತನಿಗೆ ಕನಿಷ್ಠ ಮುಂದಿನ ಒಂದೂವರೆ ವರ್ಷದವರೆಗೆ ಜೀವನಕ್ಕೆ ನೆರವಾಗುತ್ತದೆ.

ಮಳೆ ಚೆನ್ನಾಗಿ ಬರುತ್ತದೆ ಎಂಬ ಒಂದು ಸುದ್ದಿಯಲ್ಲಿ ಹಲವು ಸಂಚಲನಗಳು ಸೃಷ್ಟಿಯಾಗುತ್ತವೆ. ಒಂದೆಡೆ ರೈತ ಈ ಬಾರಿ ಯಾವ ಬೆಳೆ ಬೆಳೆಯಲಿ ಎಂದು ಯೋಚಿಸುತ್ತಾನೆ ಅಥವಾ ಎಷ್ಟು ಕ್ಷೇತ್ರದಲ್ಲಿ ಬೆಳೆಯಲಿ ಎಂದು ಯೋಚಿಸುತ್ತಾನೆ. ಮಳೆ ಚೆನ್ನಾಗಿ ಆಗುತ್ತದೆ ಎಂದು ತಿಳಿಯುತ್ತಿದ್ದಂತೆ ಕೃಷಿಗಾಗಿ ಎಷ್ಟು ಸಾಲ ನೀಡಬೇಕು ಎಂದು ಬ್ಯಾಂಕYಳು ನಿರ್ಧರಿಸುತ್ತವೆ. ಇದೇ ಸಮಯದಲ್ಲಿ ವರ್ತಕರು, ಈ ಬಾರಿ ಮಳೆ ಚೆನ್ನಾಗಿ ಆಗುತ್ತದೆ ಹೀಗಾಗಿ ಸ್ಟಾಕ್‌ ಇರುವ ಧಾನ್ಯಗಳ ಸಂಗ್ರಹವನ್ನು ಖಾಲಿ ಮಾಡಬೇಕು ಎಂದು ಸ್ವಲ್ಪ ದರ ಇಳಿಸುತ್ತಾರೆ. ಇದೇ ಹೊತ್ತಿನಲ್ಲಿ ಗೃಹೋಪಯೋಗಿ ಸಾಮಗ್ರಿಗಳನ್ನು ಉತ್ಪಾದಿಸುವ ಕಂಪನಿಗಳು ಈ ಬಾರಿ ಮಳೆ ಚೆನ್ನಾಗಿ ಆಗಿ, ರೈತನ ಕೈಯಲ್ಲಿ ಹೆಚ್ಚು ಕಾಸು ಬಂದರೆ ನಮ್ಮ ಉತ್ಪನ್ನಗಳನ್ನು ಖರೀದಿ ಮಾಡಲು ಹೆಚ್ಚು ಜನರು ಬರುತ್ತಾರೆ. ಹೀಗಾಗಿ ಉತ್ಪಾದನೆ ಹೆಚ್ಚು ಮಾಡಬೇಕು ಎಂದು ಸಿದ್ಧವಾಗುತ್ತಾರೆ. ಅದೇ ರೀತಿ ದ್ವಿಚಕ್ರ ವಾಹನ ಹಾಗೂ ಟ್ರ್ಯಾಕ್ಟರ್‌ ಕಂಪನಿಗಳೂ ಈ ಬಾರಿ ರೈತರು ಮಳೆ ಚೆನ್ನಾಗಿ ಆಗಿ ಕೈಯಲ್ಲಿ ಕಾಸು ಬಂದರೆ ಖರೀದಿಗೆ ಬರುತ್ತಾರೆ ಎಂದು ಖುಷಿಯಾಗುತ್ತಾರೆ. ರಸಗೊಬ್ಬರ ಕಂಪನಿಗಳಂತೂ ಮಳೆಗಾಲದ ನಿರೀಕ್ಷೆಗೂ ಮೊದಲೇ ಗೊಬ್ಬರ ಸಂಗ್ರಹ ಸಿದ್ಧವಾಗಿಟ್ಟಿರುತ್ತಾರೆ.

ಒಂದು ವೇಳೆ ಮಳೆ ಚೆನ್ನಾಗಿ ಆಗಿಲ್ಲದೇ ಇದ್ದರೆ ಈ ಇಷ್ಟೂ ಚಟುವಟಿಕೆಗಳು ನಿರಾಶವಾಗುತ್ತವೆ. ಮಳೆಗಾಲದ ನಂತರ ಬ್ಯಾಂಕ್‌ಗಳು ಸಾಲ ವಸೂಲಾತಿ ಪರದಾಡುತ್ತವೆ. ಆಗ ಸರ್ಕಾರ ಮಧ್ಯ ಪ್ರವೇಶಿಸಿ ಸಾಲ ಮನ್ನಾವನ್ನೋ ಅಥವಾ ಬಡ್ಡಿ ಮನ್ನಾವನ್ನೋ ಮಾಡಿ ರೈತರನ್ನು ಉಳಿಸಬೇಕಾಗುತ್ತದೆ. ಇನ್ನೊಂದೆಡೆ ಸರ್ಕಾರವು ಬೆಂಬಲ ಬೆಲೆಯನ್ನು ಹೆಚ್ಚಿಸಿ, ರೈತರು ಬೆಳೆದಷ್ಟಾದರೂ ಬೆಳೆಗೆ ಉತ್ತಮ ಬೆಲೆ ಕೊಡಿಸುವ ಪ್ರಯತ್ನ ಮಾಡುತ್ತವೆ. ಹೀಗೆ ಸರ್ಕಾರ ತನ್ನ ಅಷ್ಟೂ ಬೊಕ್ಕಸವನ್ನು ರೈತರ ಜೀವ ಉಳಿಸಲು ಖರ್ಚು ಮಾಡುತ್ತಿದ್ದರೆ ಸರ್ಕಾರ ಮಾಡಬೇಕಾದ ಅಗತ್ಯ ಕೆಲಸಗಳೆಲ್ಲ ನನೆಗುದಿಗೆ ಬೀಳುತ್ತವೆ. ರಸ್ತೆಗಳಿಗೆ, ಹೊಸ ಹೊಸ ಯೋಜನೆಗಳಿಗೆ ಖರ್ಚು ಮಾಡಲು ಸರ್ಕಾರದ ಬಳಿ ಹಣ ಇರುವುದಿಲ್ಲ. ಇದರಿಂದ ಇತರ ಎಲ್ಲ ಉದ್ಯಮಗಳ ಮೇಲೂ ಹೊಡೆತ ಬೀಳುತ್ತದೆ.

ಹೀಗಾಗಿ ಈ ದೇಶದ ಪ್ರತಿಯೊಂದು ವಹಿವಾಟು ಕೂಡ ಮುಂಗಾರಿನ ಮೇಲೆ ನಿಂತಿದೆ. ಮಾನ್ಸೂನ್‌ ಎಂಬುದು ಕೇವಲ ಗಾಳಿ ಹಾಗೂ ನೀರಿನ ಆಟವಲ್ಲ. ಅದರಲ್ಲಿ ಜನರ ಜೀವನದ ಜಂಜಾಟವೂ ಇದೆ.

ಮಳೆಗೂ ಮನಿಗೂ ಚೈನ್‌ ಲಿಂಕ್‌!
ಮಳೆಗೂ ನಮ್ಮ ಕೈಗೆ ಸಿಗುವ ಹಣಕ್ಕೂ ನೇರ ಲಿಂಕ್‌ ಕೆಲವು ಬಾರಿ ಇಲ್ಲದಿದ್ದರೂ ಪರೋಕ್ಷವಾಗಿ ಇದ್ದೇ ಇರುತ್ತದೆ. ಮಳೆ ಚೆನ್ನಾಗಿ ಆದರೆ ಉತ್ತಮ ಬೆಳೆಯಾಗುತ್ತದೆ. ಮಾರುಕಟ್ಟೆಯಲ್ಲಿ ಅಕ್ಕಿ, ತೊಗರಿ ಬೇಳೆ ಹಾಗೂ ಇತರ ಧಾನ್ಯಗಳು ಕೈಗೆಟಕುವ ದರದಲ್ಲೇ ಸಿಗುತ್ತದೆ. ಒಂದು ವೇಳೆ ಮಳೆ ಕೊರತೆಯಾದರೆ ಅಥವಾ ವಿಪರೀತ ಮಳೆ ಬಂದು ಪ್ರವಾಹವಾದರೂ ಬೆಳೆ ಕಡಿಮೆಯಾಗಿ ಆಹಾರ ಧಾನ್ಯಗಳ ಬೆಲೆ ತುಟ್ಟಿಯಾಗುತ್ತದೆ. ಆಗ ನಮ್ಮ ಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಕಿಲೋ ಅಕ್ಕಿಗೆ 40 ರೂ. ಇದ್ದದ್ದು 60 ರೂ. ಆದರೆ ನಾವು ಕಡಿಮೆ ಖರೀದಿಸುತ್ತೇವೆ. ಆಗ ಮಾರುಕಟ್ಟೆಯೂ ಸೊರಗುತ್ತದೆ. ನಾವೂ ಸೊರಗುತ್ತೇವೆ. ಇದು ಗ್ರಾಹಕರ ದೃಷ್ಟಿಯಿಂದ ಮಾತ್ರ.

-ಕೃಷ್ಣ ಭಟ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಭೂಮಿ ತಾಯಿ, ತನ್ನನ್ನು ನಂಬಿದವರನ್ನು ಯಾವತ್ತೂ ಕೈಬಿಡುವುದಿಲ್ಲ ಎಂಬ ಒಂದು ಮಾತಿದೆ. ವೃದ್ಧರೈತರೊಬ್ಬರು ತಮ್ಮ ತುಂಡು ಭೂಮಿಯನ್ನೇ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿಕೊಂಡು,...

  • ಕೆಟಿಎಂ ಎಂದರೆ ಸಾಕು ಯುವಕರ ಹೃದಯ ಬಡಿತ ಏರುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಹವಾ ಸೃಷ್ಟಿಸಿರುವ ಕೆಟಿಎಂ ಹೈ ಪರ್ಫಾಮೆನ್ಸ್‌ ಬೈಕ್‌ಗಳಿಗೆ ಪ್ರಸಿದ್ಧಿ....

  • ಪ್ರಪಂಚಕ್ಕೆ ಝೀರೋವನ್ನು ಕೊಡುಗೆಯಾಗಿ ಕೊಟ್ಟವರು ಭಾರತೀಯರು. ನಮಗೆ ಉಳಿತಾಯ ಮಾಡುವುದನ್ನು ಹೇಳಿಕೊಡಬೇಕಾಗಿಲ್ಲ. ಇತ್ತೀಚಿಗೆ ಕೇಂದ್ರ ವಿತ್ತಸಚಿವರು ಬಜೆಟ್‌ನಲ್ಲಿ...

  • ಸೂರ್ಯನ ಬಳಸಿ ಬೆಳಕು ಪಡೆಯುವುದನ್ನು, ನೀರಿ ಬಿಸಿ ಮಾಡುವುದನ್ನು, ಆಹಾರ ತಯಾರಿಯಲ್ಲಿ ತೊಡಗುವುದನ್ನು ನೋಡಿರುತ್ತೀರಿ. ಇದೀಗ ಕೀಟನಾಶಕವಾಗಿಯೂ ಸೋಲಾರ್‌ ಶಕ್ತಿಯನ್ನು...

  • ಹಳ್ಳಿಯಲ್ಲಿ ಬೆಳೆದ ಆಲೂಗಡ್ಡೆಯ ಮೇಲೆ ಅಮೆರಿಕ ಕಂಪನಿ ಹಕ್ಕು ಸ್ಥಾಪಿಸಲು ಹೊರಟಾಗ ಏನಾಯ್ತು ಗೊತ್ತಾ? ರೈತರ ತಲೆ ಮೇಲೆ ಬಿದ್ದ ಕೋಟಿ ರು. ದಂಡವನ್ನವರು ಕಟ್ಟಿದರಾ? ಗುಜರಾತಿನ...

ಹೊಸ ಸೇರ್ಪಡೆ