ಬಹು ಬೆಳೆಯ ಶೇಖರ್‌

ವರ್ಷಕ್ಕೆ 10 ಲಕ್ಷ ಆದಾಯ !

Team Udayavani, Jun 3, 2019, 6:00 AM IST

ಜಮೀನು ಇಟ್ಕೊಂಡು ಏನು ಬೆಳೆಯೋದು? ಬೆಳೆದರೂ ಲಾಭ ಮಾಡುವುದು ಹೇಗೆ? ಅನ್ನೋ ರೈತರಿಗೆ ತಳೂರು ಸೋಮಶೇಖರ್‌ ಉದಾಹರಣೆಯಾಗಿದ್ದಾರೆ. ಬಹುಬೆಳೆ ಪದ್ಧತಿಯಿಂದಲೇ ವರ್ಷಕ್ಕೆ ಹತ್ತು ಲಕ್ಷ ನಿವ್ವಳ ಲಾಭ ಮಾಡುತ್ತಿರುವ ಇವರು, ಕೃಷಿಯಿಂದ ಲಾಭ ಇದೆ ಅನ್ನೋದನ್ನು ಸಾರುತ್ತಿದ್ದಾರೆ.

ಆಧುನಿಕ ತಂತ್ರಜಾnನದ ಜೊತೆಗೆ ಪರಂಪರೆಯಿಂದ ಬಂದ ದೇಸಿ ಜಾnನವನ್ನೂ ಜೋಡಿಸಿಕೊಂಡು ಕೃಷಿ ಮಾಡಿದರೆ ಲಾಭ ನಿಶ್ಚಿತ ಅನ್ನೋದಕ್ಕೆ ಇಲ್ಲಿದೆ ಉದಾಹರಣೆ. “ನಾವು ಇದುವರೆಗೆ ಕೃಷಿಯಲ್ಲಿ ನಷ್ಟ ಅನುಭವಿಸಿಲ್ಲ. ನಮಗಿರುವ ಆರು ಎಕರೆ ಜಮೀನಿನಲ್ಲಿ ಖರ್ಚುವೆಚ್ಚ ಕಳೆದು ವಾರ್ಷಿಕ ಸುಮಾರು ಹತ್ತು ಲಕ್ಷ ರೂಪಾಯಿ ಲಾಭಗಳಿಸುತ್ತೇವೆ ‘ ಕೃಷಿಕ ಸೋಮಶೇಖರ್‌ ಸದೃಢ ವಿಶ್ವಾಸದಿಂದ ಹೀಗೆ ಹೇಳಿದಾಗ ಸ್ವಲ್ಪ ಗಾಬರಿಯಾಯಿತು.

ಏಕೆಂದರೆ, ಬಹುತೇಕ ಹೊಸ ತಲೆಮಾರಿನ ಯುವಕರು ಕೃಷಿ ಲಾಭದಾಯಕ ಉದ್ಯೋಗ ಅಲ್ಲ. ಲಾಭಕ್ಕಿಂತ ನಷ್ಟ ಹೆಚ್ಚು ಎಂದುಕೊಂಡು ಹಳ್ಳಿಬಿಟ್ಟು ಪಟ್ಟಣದ ಕಡೆಗೆ ಮುಖಮಾಡಿರುವ ಈ ಸನ್ನಿವೇಶದಲ್ಲಿ ಇವರು ಭಿನ್ನವಾಗಿ ಕಂಡದ್ದು ಸತ್ಯ.  ಅಂದಹಾಗೆ, ಈ ಸೋಮಶೇಖರ್‌ ಯಾರು ಅಂದರೆ, ಮೈಸೂರು ತಾಲೂಕಿನ ತಳೂರು ಗ್ರಾಮದವರು. ಎರಡು ದಶಕದ ಹಿಂದೆ ಉದ್ಯೋಗಕ್ಕಾಗಿ ಹಳ್ಳಿಬಿಟ್ಟು ಮೈಸೂರಿಗೆ ಬಂದಿದ್ದರು. ಖಾಸಗಿ ಕಾರ್ಖಾನೆಯೊಂದರಲ್ಲಿ ನೌಕರಿ, ಒಳ್ಳೆಯ ಸಂಬಳವೂ ಇತ್ತು. ಕಾರಣಾಂತರದಿಂದ ಕಾರ್ಖಾನೆಗೆ ಬೀಗಬಿತ್ತು. ಆಗ, ಎಲ್ಲೊ ಹೋಗಿ ಸಂಬಳಕ್ಕಾಗಿ ದುಡಿಯುವ ಬದಲು ಕೃಷಿ ಮಾಡಿ ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳೋಣ ಎಂದು ಮರಳಿ ಹಳ್ಳಿಗೆ ಬಂದು ಕೃಷಿ ಮಾಡಲು ನಿರ್ಧರಿಸಿದರು.

ದಿಟ್ಟ ನಿರ್ಧಾರ
ಅಂಥ ಒಂದು ದಿಟ್ಟ ನಿರ್ಧಾರ ಇಂದು ಅವರ ಕುಟುಂಬದ ಬದುಕಿನ ದಿಕ್ಕನ್ನೇ ಬದಲಿಸಿದೆ. ಕೂಡಿ ಬಾಳಿದರೆ ಸ್ವರ್ಗಸುಖ ಎಂಬ ಮಾತಿನ ಮೇಲೆ ನಂಬಿಕೆ ಇಟ್ಟವರಂತೆ ಕಾಣುವ ಸೋಮಶೇಖರ್‌, ಅಣ್ಣ ನಂಜುಂಡಸ್ವಾಮಿ ಅವರೊಂದಿಗೆ ಸೇರಿಕೊಂಡು, ತಮ್ಮ ಆರು ಎಕರೆ ಭೂಮಿಯನ್ನೇ ಪ್ರಯೋಗಶಾಲೆ ಮಾಡಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಎಸ್ಸೆಸ್ಸೆಲ್ಸಿ ವರೆಗೆ ವಿದ್ಯಾಭ್ಯಾಸ ಮಾಡಿರುವ ನಂಜುಂಡಸ್ವಾಮಿ ಅವರ ಮಗ ಪುನೀತ್‌ ಕುಮಾರ್‌ ಸಹ ಯುವರೈತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಟ್ಟಾರೆ ಇಡೀ ಕುಟುಂಬ ಕೃಷಿಗೆ ತೆರೆದುಕೊಂಡಿದೆ. ಇವರಿಗೆ ತಳೂರಿನಲ್ಲಿ ನಾಲ್ಕು ಎಕರೆ, ಚಿಕ್ಕ ಕಾಟೂರಿನಲ್ಲಿ ಎರಡು ಎಕರೆ ಒಟ್ಟು ಆರು ಎಕರೆ ಜಮೀನು ಇದೆ. ನೀರಿಗಾಗಿ ಕೊಳವೆಬಾವಿ ಆಶ್ರಯಿಸಿದ್ದಾರೆ. ಹನಿ ನೀರಾವರಿ ಮೂಲಕ ಸುಸ್ಥಿರ ಕೃಷಿ ಪದ್ಧತಿಯನ್ನು ರೂಪಿಸಿಕೊಂಡಿದ್ದಾರೆ.

ಥರಹೇವಾರಿ ತರಕಾರಿ
ಈರುಳ್ಳಿ,ಆಲೂಗಡ್ಡೆ,ಶುಂಠಿ, ಅರಿಶಿಣದಂತಹ ಗೆಡ್ಡೆ ಪದಾರ್ಥಗಳನ್ನು ಬಿಟ್ಟು ಉಳಿದ ಎಲ್ಲ ಬಗೆಯ ಸೊಪ್ಪು, ತರಕಾರಿಗಳನ್ನು ನಾವು ಬೆಳೆಯುತ್ತೇವೆ ಎನ್ನುವ ಸೋಮಶೇಖರ್‌, ತಾವು ಬೆಳೆದ ಪದಾರ್ಥಗಳನ್ನು ಎಪಿಎಂಸಿ ಮಾರುಕಟ್ಟೆ, ಮಾಲ್‌ಗ‌ಳಿಗೂ ಮಾರಾಟ ಮಾಡುತ್ತಾರೆ. ಅದಕ್ಕಾಗಿ ತರಕಾರಿ ಸಾಗಿಸಲು ಸ್ವಂತ ಆಫೆ ಆಟೋ ಹೊಂದಿದ್ದಾರೆ. ಕೇವಲ 20 ಗುಂಟೆಯಲ್ಲಿ ತರಕಾರಿ ಬೆಳೆಯುವ ಇವರಿಗೆ ಬಹುಬೆಳೆಯಲ್ಲಿ ವಿಶ್ವಾಸ.

ಬಾಳೆ,ದಪ್ಪ ಮೆಣಸಿನಕಾಯಿ, ಸಾಂಬಾರ್‌ ಸೌತೆ, ಮಂಗಳೂರು ಸೌತೆ, ಹೀರೆಕಾಯಿ, ಸೌತೆಕಾಯಿ,ಲಾಂಗ್‌ ಯಾರ್ಡ್‌ ಬೀನಿಸ್‌, ಟೊಮೆಟೊ, ಎಲೆಕೋಸು, ಲೆಟ್ಯೂಸ್‌ ಹೀಗೆ ಬಹು ಬಗೆಯ ತರಕಾರಿಗಳು ಜಮೀನನ್ನು ತುಂಬಿಕೊಂಡಿದೆ. ಇವರು ಹೈನುಗಾರಿಯಲ್ಲೂ ಸೈ. ಆರು ಹಸುಗಳಿದ್ದು, ಅದರಿಂದ ಸಾಕಷ್ಟು ಕೊಟ್ಟಿಗೆ ಗೊಬ್ಬರ ಸಿಗುತ್ತದೆ. ಎರೆಹುಳು ಘಟಕ ಇದೆ. ತಾವೇ ಜೀವಾಮೃತ ಮಾಡಿಕೊಂಡು ಬಳಸುತ್ತಾರೆ. ಎರೆಹುಳುಗಳನ್ನು ಕೆ.ಜಿಗೆ ಮುನ್ನೂರು ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ಅರ್ಧ ಎಕರೆಯಲ್ಲಿ ಪಾಲಿಹೌಸ್‌ ನಿರ್ಮಾಣ ಮಾಡಿಕೊಂಡಿರುವುದರಿಂದ ತಮಗೆ ಹೆಚ್ಚಿನ ಲಾಭವಾಗಿದೆ ಎನ್ನುತ್ತಾರೆ ಸೋಮಶೇಖರ್‌.

ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿರುವ ಸೋಮಶೇಖರ್‌ ಸರಕಾರದ ಯೋಜನೆಗಳನ್ನು ಬಹುಜಾಣ್ಮೆಯಿಂದ ಬಳಸಿಕೊಳ್ಳುತ್ತಾರೆ. ಅರ್ಧ ಎಕರೆ ಪಾಲಿಹೌಸ್‌ನಲ್ಲಿ ಹೆಚ್ಚಿನ ಆದಾಯ ಗಳಿಸುತ್ತಿರುವ ಇವರು ಮತ್ತೆ ಅರ್ಧ ಎಕರೆಯಲ್ಲಿ ಪಾಲಿಹೌಸ್‌ ವಿಸ್ತರಣೆ ಮಾಡುವ ಸಿದ್ಧತೆಯಲ್ಲಿದ್ದಾರೆ.

ಪೂರ್ವಸಿದ್ಧತೆ ಹೀಗೆ
ಯಾವುದೇ ತರಕಾರಿ ಬೆಳೆಯಲು ಮುಂದಾಗುವ ಮೊದಲು, ಜಮೀನನ್ನು ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಇವರ ಯಶಸ್ಸಿನ ಗುಟ್ಟು ಅಡಗಿದೆ. ಹೇಗೆಂದರೆ, ಜಮೀನನ್ನು ಉಳುಮೆ ಮಾಡಿ, ಹದ ಮಾಡಿಕೊಂಡ ನಂತರ ಬೆಡ್‌ ಮಾಡುತ್ತಾರೆ. ಆನಂತರ ಮಧ್ಯಸಾಲು ಹೊಡೆದು ಅಲ್ಲಿಗೆ ಭೂತಾಳೆ ಗರಿಗಳನ್ನು ಕತ್ತರಿಸಿ ಉದ್ದಕ್ಕೂ ಹಾಕಿ ಮೇಲೆ ಮಣ್ಣು ಮುಚ್ಚುತ್ತಾರೆ. ತದನಂತರ ಬೆಡ್‌ ಮೇಲಕ್ಕೆ ಕಾಂಪೋಸ್ಟ್‌ ಗೊಬ್ಬರ ಹಾಕುತ್ತಾರೆ. ಕೊಟ್ಟಿಗೆ ಗೊಬ್ಬರವನ್ನು ಕಾಂಪೋಸ್ಟ್‌ ಮಾಡುವ ಮುನ್ನ ಅದಕ್ಕೆ ಟ್ರೆ„ಕೊಡರ್ಮಾ, ಸುಡೊಮನಸ್‌ ಮತ್ತು ಜೈವಿಕ ಶಿಲೀಂದ್ರನಾಶಕಗಳನ್ನು ಸೇರಿಸಿ ಗೊಬ್ಬರದ ಮೌಲ್ಯವರ್ಧನೆ ಮಾಡುತ್ತಾರೆ. ಇದರಿಂದ ಯಾವುದೇ ಗಿಡಗಳಿಗೆ ಬರುವ ಬೇರು ಮಾರಿ ರೋಗವನ್ನು ತಡೆಯಬಹುದಂತೆ.

ಇದಲ್ಲದೆ, ಯಾವುದಾದರೂ ನಾಲ್ಕು ಬಗೆಯ ಹಿಂಡಿಗಳನ್ನು ತಲಾ ಒಂದು ಕೆ.ಜಿಯಂತೆ ಒಟ್ಟು ನಾಲ್ಕು ಕೆ.ಜಿಯಷ್ಟು ಎರಡನೂರು ಲೀಟರ್‌ ಹಿಡಿಯುವ ಡ್ರಮ್‌ನಲ್ಲಿ ನೀರಿಗೆ ಸೇರಿಸಿ, ಮೂರು ದಿನಬಿಟ್ಟು ಪ್ರತಿ ಗಿಡದ ಬುಡಕ್ಕೆ ಅರ್ಧ ಲೀಟರ್‌ ಹಾಕಿದರೆ, ಗಿಡಗಳ ಇಳುವರಿಯೂ ಹೆಚ್ಚಾಗುತ್ತದೆ ಮತ್ತು ಆರೋಗ್ಯವಾಗಿಯೂ ಸದೃಢವಾಗಿಯೂ ಇರುತ್ತವೆ ಅನ್ನೋದು ಸೋಮಶೇಖರ್‌ ಅವರಿಗೆ ಅನುಭವ ಹೇಳಿಕೊಟ್ಟ ಪಾಠ.
ಹೆಚ್ಚಿನ ಮಾಹಿತಿಗೆ- 9342105899.

ಭೂತಾಳದಿಂದ ರೋಗ ಪಾತಾಳಕ್ಕೆ
ಯಾವುದೇ ಗಿಡಗಳನ್ನು ಹಾಕುವ ಮೊದಲು ಮಣ್ಣಿಗೆ ಭೂತಾಳೆ ಸೇರಿಸಿಬಿಟ್ಟರೆ, ಬೇರುಮಾರಿ ರೋಗ ಬರುವುದಿಲ್ಲ. ನಮ್ಮ ತಾತನ ಕಾಲದಲ್ಲಿ ಹೀಗೆ ಮಾಡುತ್ತಿದ್ದರು. ನಾವು ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ಥ್ರಿಫ್ ಮತ್ತು ಮೈಟ್ಸ್‌ ಜೈವಿಕದಲ್ಲಿ ನಿಯಂತ್ರಣಕ್ಕೆ ಬರದೆ ಇದ್ದಾಗ ಅನಿವಾರ್ಯವಾಗಿ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಕ್ರಿಮಿನಾಶಕ ಬಳಸುತ್ತೇವೆ. ಮಣ್ಣಿನ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಂಡರೆ ರೋಗದ ಹಾವಳಿ ಕಡಿಮೆ ಎನ್ನುವುದು ಇವರ ಸ್ವಅನುಭವ ಮಾತು.

ಚಿನ್ನಸ್ವಾಮಿ ವಡ್ಡಗೆರೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ