ಎಂದಿಗೂ “ಭತ್ತ’ದ ಪ್ರೀತಿ!

Team Udayavani, Sep 9, 2019, 5:00 AM IST

ದೇಸಿ ತಳಿಯ ಭತ್ತದ ಬಗ್ಗೆ ಇತ್ತೀಚೆಗೆ ಹೆಚ್ಚು ಮಾತುಗಳು ಕೇಳಿ ಬರುತ್ತಿವೆ. ದೇಸೀ ತಳಿಯ ಬೀಜ ಮೇಳಗಳು ಅಲ್ಲಲ್ಲಿ ನಡೆಯುತ್ತಿವೆ. ಕೃಷಿ ಮೇಳಗಳಲ್ಲಿ ದೇಸೀ ಬೀಜ ಮಳಿಗೆಗಳಿಗೆ ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಈ ಅವಕಾಶವನ್ನು ಉಪಯೋಗಪಡಿಸಿಕೊಳ್ಳಲು ಹಲವರು ಮುಂದಾಗುತ್ತಿದ್ದಾರೆ. ಅಂಥವರಲ್ಲಿ, ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕುಂಬಳೂರು ಗ್ರಾಮದ ಎನ್‌. ಆಂಜನೇಯ ಅಂದನೂರು ಅವರೂ ಒಬ್ಬರು.

ಸಾವಯವ ಕೃಷಿ ಮಾತ್ರವಲ್ಲದೆ, ವೈವಿಧ್ಯಮಯ ತಳಿಗಳನ್ನು ಬೆಳೆಯುವುದು ಆಂಜನೇಯ ಅವರ ವೈಶಿಷ್ಟé. ದೇಶೀಯ ತಳಿ ಬೀಜಗಳ ಸಂಗ್ರಹಣೆ ಇವರ ಆಸಕ್ತಿಗಳಲ್ಲೊಂದು. ಇವರ ಸಂಗ್ರಹದಲ್ಲಿ 150ಕ್ಕೂ ಹೆಚ್ಚು ತಳಿಯ ಭತ್ತದ ಬೀಜಗಳಿವೆ. ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಆಧರಿಸಿ ತಮ್ಮ ಜಮೀನಿನಲ್ಲಿ ದೇಶೀಯ ತಳಿಯ ಭತ್ತದ ಕೃಷಿ ಮಾಡುವುದು ಇವರ ವಿಶೇಷತೆ. ಸಿದ್ದ ಸಣ್ಣ, ಸಿಂಧೂರ ಮಧುಸಾಲೆ, ಹೆಚ್‌.ಎಮ್‌.ಟಿ, ಅಂದನೂರು ಸಣ್ಣ ಮುಂತಾದ ತಳಿಯ ಭತ್ತದ ಕೃಷಿಯನ್ನು ತಾವೇ ಮಾಡುತ್ತಾ ಸಂಗ್ರಹಿಸುತ್ತಿದ್ದಾರೆ.

ತಳಿಗಳ ಅಭಿವೃದ್ಧಿ
“ಅಂದನೂರು ಸಣ್ಣ ತಳಿಯ ಇಳುವರಿ ಕಡಿಮೆ. ಹಾಗಾಗಿ ಇದನ್ನು ಬೆಳೆಯುವುದನ್ನು ಕೈ ಬಿಟ್ಟಿದ್ದೆ. ಬೀಜ ಸಂಗ್ರಹವೂ ಕಡಿಮೆಯಿತ್ತು. ವಿಶೇಷ ಪೌಷ್ಠಿಕಾಂಶಗಳನ್ನು ಹೊಂದಿರುವ ಈ ತಳಿಯ ಬೀಜಗಳಿಗೆ ಇತ್ತೀಚೆಗೆ ತುಮಕೂರು ಭಾಗಗಳ ರೈತರಿಂದ ಬೇಡಿಕೆ ಬರುತ್ತಿದೆ. ಹಾಗಾಗಿ, ಬರುವ ಹಂಗಾಮಿನಲ್ಲಿ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆಯುವ ಆಲೋಚನೆಯಲ್ಲಿದ್ದೇನೆ. ಕೃಷಿಮೇಳಗಳ ಮಳಿಗೆಗಳಲ್ಲಿ ಸಿಂಧೂರ ಮಧುಸಾಲೆ ಭತ್ತವನ್ನು ವೀಕ್ಷಿಸಿದ ಅನೇಕ ರೈತರು ಈ ತಳಿಯ ಬೀಜಕ್ಕಾಗಿ ಸಂಪರ್ಕಿಸುತ್ತಿದ್ದಾರೆ. ಹೆಚ್ಚಿನ ಬೇಡಿಕೆಯನ್ನು ಈ ಎರಡು ತಳಿಯ ಬೀಜಗಳು ಪಡೆದುಕೊಳ್ಳುತ್ತಿವೆ’ ಎನ್ನುತ್ತಾರೆ ಅಂಜನೇಯ. ಇವೆರಡೂ ತಳಿಗಳನ್ನು ಸ್ವತಃ ಇವರೇ ಅಭಿವೃದ್ಧಿಪಡಿಸಿರುವುದು ವಿಶೇಷ.

ಪ್ರತಿ ಅವಧಿಯಲ್ಲಿ ತಮಗಿರುವ ಐದು ಎಕರೆ ಜಮೀನಿನಲ್ಲಿ ಮೂವತ್ತಕ್ಕೂ ಹೆಚ್ಚು ತಳಿಯ ದೇಶೀಯ ಭತ್ತದ ಕೃಷಿ ಮಾಡುತ್ತಾರೆ. ಸಿದ್ದ ಸಣ್ಣ, ಸಿಂಧೂರ ಮಧುಸಾಲೆ, ದೊಡ್ಡ ಭತ್ತ, ಕಾಲಾಜೀರಾ, ಕರಿಗಜಿಲಿ, ಡಾಂಬರ್‌ ಸಾಳೆ, ರತನ್‌ ಸಾಗರ್‌, ಹೆಚ್‌.ಎಮ್‌.ಟಿ, ಅಂದನೂರು ಸಣ್ಣ ಮುಂತಾದ ತಳಿಯ ಭತ್ತಗಳು ಇವರ ಗದ್ದೆಯಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳುತ್ತವೆ. ತಳಿ ಮಿಶ್ರ ಆಗದಂತೆ ಪ್ರತಿ ತಳಿಯನ್ನು ಪ್ರತ್ಯೇಕ ಗದ್ದೆಯಲ್ಲಿ ಅಂತರ ಕೊಟ್ಟು ಬೆಳೆಸುತ್ತಾರೆ.

ಪ್ರದರ್ಶನ ನೀಡಿದ್ದಾರೆ
ಸಾವಯವ ಕೃಷಿಯನ್ನು ಪ್ರೀತಿಸುವ ಇವರು ಭತ್ತದಲ್ಲಿನ ಪ್ರತೀ ಪ್ರಯೋಗದಲ್ಲಿಯೂ ಯಶಸ್ವಿಯಾಗಿದ್ದಾರೆ. ತಮ್ಮ ಕೃಷಿ ಖುಷಿಯನ್ನು ಹಂಚಿಕೊಳ್ಳಲು ಅನೇಕ ಬಾರಿ ಕ್ಷೇತ್ರೋತ್ಸವಗಳನ್ನು ನಡೆಸಿದ್ದಾರೆ. “ಸಹಜ ಸಮೃದ್ಧ’ದ ಭತ್ತ ಉಳಿಸಿ ಆಂದೋಲನ ಹಾಗೂ ಕೃಷಿ ಇಲಾಖೆಯ ಸಹಕಾರದೊಂದಿಗೆ ಎರಡು ಬಾರಿ ಕ್ಷೇತ್ರೋತ್ಸವ ಏರ್ಪಡಿಸಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಬಂದ ದೇಶೀಯ ಭತ್ತ ಪ್ರೀತಿಸುವ ಮಂದಿ ಅಚ್ಚರಿಪಟ್ಟು ಶಹಬ್ಟಾಶ್‌ಗಿರಿ ನೀಡಿದ್ದಾರೆ. ಅನೇಕರು ಬೀಜಗಳನ್ನು ಖರೀದಿಸಿ ಇವರ ಬೀಜ ಪ್ರೀತಿಯನ್ನು ಪ್ರೋತ್ಸಾಹಿಸಿದ್ದಾರೆ.

ಕೀಟ ಬಾಧೆ ತಲೆದೋರಲಿಲ್ಲ
ಒಂದು ದಿನ ಹೊಲದ ಮಧ್ಯೆ ಓಡಾಡುವಾಗ ಕೆಲವು ತೆನೆಗಳ ಬಣ್ಣ, ತೆನೆಯಲ್ಲಿನ ಭತ್ತದ ಗಾತ್ರ, ಬೀಜಗಳ ಪ್ರಮಾಣ ಎಲ್ಲವೂ ಭಿನ್ನವಾಗಿರುವುದನ್ನು ಕಂಡು ಕುತೂಹಲಗೊಂಡರು. ಕಾಳಜಿಯಿಂದ ಅವುಗಳನ್ನು ಕಟಾವಿನ ವೇಳೆ ಬೇರ್ಪಡಿಸಿಟ್ಟುಕೊಂಡರು. ಮುಂದಿನ ಹಂಗಾಮಿಗೆ ಆ ಬೀಜಗಳನ್ನು ಪ್ರತ್ಯೇಕವಾಗಿ ಮಡಿ ಮಾಡಿ ವಿಶೇಷ ಗದ್ದೆಗಳನ್ನು ನಿರ್ಮಿಸಿ ಬಿತ್ತಿದರು. ತೆನೆ ಬಿಡುವವರೆಗೂ ಕುತೂಹಲದಿಂದ ಕಾಳಜಿ ವಹಿಸಿದರು. ಬಣ್ಣ ಹಾಗೂ ಆಕಾರದಲ್ಲಿ ಭಿನ್ನವಾಗಿದ್ದ ತೆನೆ, ವೈವಿಧ್ಯಮಯ ಕಾಳುಗಳನ್ನು ಹೊಂದಿತ್ತು! ಅದನ್ನು ಕಟಾವು ಮಾಡಿದಾಗ, ಸುಮಾರು ಅರ್ಧ ಕಿಲೋಗ್ರಾಂ ಬೀಜ ಸಂಗ್ರಹವಾಯಿತು. ಸಂಪೂರ್ಣ ಬೀಜವನ್ನು ಮುಂದಿನ ಬಿತ್ತನೆಗೆ ಬಳಕೆ ಮಾಡಿದರು. ಇದರಿಂದ ಯಾವುದೇ ಕೀಟ ರೋಗದ ಬಾಧೆ ಸೋಂಕಿಸಿಕೊಳ್ಳದೆಯೇ ಭತ್ತದ ಸಸಿಗಳು ಬೆಳೆದು ನಿಂತವು. ನಿರೀಕ್ಷೆಯಂತೆ ಅಬ್ಬರದ ಫ‌ಸಲನ್ನು ತುಂಬಿಕೊಂಡವು.

ಹೆಸರು ಗೊತ್ತಿಲ್ಲದ ಈ ಭತ್ತಕ್ಕೆ ನಾಮಕರಣ ಮಾಡುವ ಮನಸ್ಸಾಯಿತು. ಜನರು “ಅಂದನೂರು ಸಣ’¡ ಎಂಬ ಹೆಸರಿನಿಂದ ಗುರುತಿಸತೊಡಗಿದ್ದರು. ಕಡೆಗೆ ಅದೇ ಹೆಸರನ್ನು ನೀಡಲಾಯಿತು. 2008ರಲ್ಲಿ ಅಭಿವೃದ್ಧಿಪಡಿಸಿದ “ಅಂದನೂರು ಸಣ್ಣ’ ತಳಿ, ಇಂದು ಹಲವರ ಜಮೀನುಗಳಲ್ಲಿ ಫ‌ಸಲು ನೀಡುತ್ತಿದೆ. ಇದೇ ಮಾದರಿಯಲ್ಲಿ 2012ರಲ್ಲಿ “ಸಿಂಧೂರ ಮಧುಸಾಲೆ’ ಎಂಬ ತಳಿಯನ್ನೂ ಅಭಿವೃದ್ಧಿಪಡಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ: 9972088929

– ಕೋಡಕಣಿ ಜೈವಂತ ಪಟಗಾರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ