ಪ್ಲಾಸ್ಟಿಕ್‌ “ಕವರ್‌ ಸ್ಟೋರಿ’!

15,000 ಟನ್‌ ಭಾರತ ಪ್ರತಿದಿನ ಉತ್ಪಾದಿಸುವ ತ್ಯಾಜ್ಯ

Team Udayavani, Sep 23, 2019, 5:50 AM IST

ಪ್ಲಾಸ್ಟಿಕ್‌ ನಿಷೇಧ, ಪರಿಸರಕ್ಕೆ ವರದಾನ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಜನಸಾಮಾನ್ಯನಿಗಂತೂ ಇದರಿಂದ ಗೊಂದಲವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ಗೆ ಪರ್ಯಾಯ ಉತ್ಪನ್ನಗಳ ಕೊರತೆ ಮತ್ತು ಅವು ಜನರ ಬಳಿ ತಲುಪದೇ ಇರುವುದು ಅದಕ್ಕೆ ಕಾರಣ. ಈ ಪರ್ಯಾಯ ವಸ್ತುಗಳು ಮತ್ತದರ ಉದ್ಯಮದ ಬಗೆಗೆ ಇಣುಕುನೋಟ ಇಲ್ಲಿದೆ…

ಅಂಗಡಿಗಳಲ್ಲಿ, ಸೂಪರ್‌ ಮಾರ್ಕೆಟ್‌ಗಳಲ್ಲಿ ಗ್ರಾಹಕರು ವಸ್ತುಗಳನ್ನು ಬಿಲ್ಲಿಂಗ್‌ ಮಾಡಿಸಿದ ನಂತರ ಪ್ಲಾಸ್ಟಿಕ್‌ ಕವರ್‌ ಕೊಡಿ ಎಂದರೆ ಅಂಗಡಿಯಾತನ ಉತ್ತರ: “ಪ್ಲಾಸ್ಟಿಕ್‌ ಕವರ್‌ ಇಲ್ಲ, ಬಟ್ಟೆ ಬ್ಯಾಗ್‌ ಇದೆ. ಅದಕ್ಕೆ ಚಾರ್ಜ್‌ ಆಗುತ್ತೆ’. ಮುಂಚೆ ಗ್ರಾಹಕರು 10 ರೂ. ವಸ್ತುವನ್ನೇ ಖರೀದಿಸಲಿ, 500 ರೂ. ಯ ವಸ್ತುಗಳನ್ನೇ ಖರೀದಿಸಲಿ; ಅಂಗಡಿಯಾತ ತಾನಾಗಿಯೇ ಪ್ಲಾಸ್ಟಿಕ್‌ ಕವರೊಂದನ್ನು ನೀಡುತ್ತಿದ್ದ. ಇಂದು 50 ರೂ. ಬೆಲೆಯ ವಸ್ತುಗಳನ್ನು ಖರೀದಿಸಿದ ಗ್ರಾಹಕ ತಬ್ಬಿಬ್ಟಾಗುತ್ತಿದ್ದಾನೆ. ಅತ್ತ ವಸ್ತುಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗಲೂ ಆಗದೆ, ಇತ್ತ 50 ರೂ. ಬಿಲ್‌ಗೆ 5 ರಿಂದ 10 ರೂ.ಗಳನ್ನು ಬ್ಯಾಗಿಗೇ ಕೊಡಬೇಕಲ್ಲಪ್ಪಾ ಎಂಬ ಸಂಕಟ ಬೇರೆ.

ಪ್ಲಾಸ್ಟಿಕ್‌ ನಿಷೇಧದ ವಿಚಾರ ಇಂದು ನೆನ್ನೆಯದಲ್ಲ. ಬಹಳ ಹಿಂದಿನಿಂದಲೇ ಸಂಘಸಂಸ್ಥೆಗಳು ಈ ಕುರಿತು ಜಾಗೃತಿ ಮೂಡಿಸುತ್ತಲೇ ಬಂದಿದ್ದವು. ಆದರೀಗ ಸರ್ಕಾರವೇ ಅದನ್ನು ಜಾರಿಗೆ ತರುತ್ತಿದೆ. ವಾಯುಮಾಲಿನ್ಯದ ವಿಚಾರವಾಗಿ ವಿಶ್ವಶಂಸ್ಥೆಯಿಂದ ಬುದ್ಧಿ ಹೇಳಿಸಿಕೊಂಡಿರುವ ಭಾರತ, ಮಾಲಿನ್ಯ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವುದರ ಫ‌ಲವಾಗಿ ಆಟೋಮೊಬೈಲ್‌ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ತಂದಿತ್ತು. ಪ್ಲಾಸ್ಟಿಕ್‌ ನಿಷೇಧವೂ ಅದರ ಭಾಗವೇ.

ನೈಸರ್ಗಿಕವಾಗಿ ಲಭ್ಯವಿರುವ ವಸ್ತುಗಳನ್ನೇ ಬಳಸಿಕೊಂಡು ವಿಷಯುಕ್ತ ರಾಸಾಯನಿಕಗಳನ್ನು ಸೇರಿಸದೇ ಹಲವು ವಸ್ತುಗಳನ್ನು ತಯಾರು ಮಾಡುವ ವ್ಯಕ್ತಿಗಳು, ಸಂಘ ಸಂಸ್ಥೆಗಳು ನಮ್ಮ ನಡುವೆ ಇದೆ. ಅವರೆಲ್ಲರೂ ಪ್ಲಾಸ್ಟಿಕ್‌ ಬ್ಯಾನ್‌ ನೆಪದಿಂದಾಗಿ ಬೆಳಕಿಗೆ ಬರುವಂತಾಗಿದೆ.

ಪ್ಲಾಸ್ಟಿಕ್‌ಗೆ ಪಕ್ಕಾ ಪ್ರಾಕೃತಿಕ ಪ್ರತಿಸ್ಪರ್ಧಿ!
ಅಗ್ಗದ, ಮಡಚಿದರೆ ಮಡಿಸಿಕೊಳ್ಳುವ, ಬಿಚ್ಚಿದರೆ ಅಳತೆಗೂ ಮೀರಿ ತೆರೆದುಕೊಳ್ಳುವ, ಪ್ಲಾಸ್ಟಿಕ್‌ನ ಸ್ಥಾನವನ್ನು ಬೇರೆ ನೈಸರ್ಗಿಕ ವಸ್ತು ನೂರಕ್ಕೆ ನೂರು ಪ್ರತಿಶತ ತುಂಬುವುದಕ್ಕೆ ಸಾಧ್ಯವಿಲ್ಲ. ಆದರೆ ಇಲ್ಲೊಬ್ಬರು ಅದನ್ನು ಸಾಧಿಸಿ ತೋರಿಸಿದ್ದಾರೆ. ಅಶ್ವಥ್‌ ಹೆಗಡೆ ಅವರು ಆವಿಷ್ಕರಿಸಿರುವ ಈ ಬ್ಯಾಗು ನೋಡಲು ಪ್ಲಾಸ್ಟಿಕ್‌ನಂತೆಯೇ ಇದೆ. ಅಷ್ಟು ಮಾತ್ರವಲ್ಲ, ಅದರ ಗುಣಲಕ್ಷಣಗಳೂ ಪ್ಲಾಸ್ಟಿಕ್‌ಅನ್ನು ಹೋಲುತ್ತದೆ. ಅದಕ್ಕೂ ಮಿಗಿಲಾಗಿ ಪ್ಲಾಸ್ಟಿಕ್‌ಗಿಂತ ಹೆಚ್ಚಿನ ಭಾರ ತಡೆಯಬಲ್ಲುದು! ಇದು ಸಂಪೂರ್ಣ ಪರಿಸರಸ್ನೇಹಿ. ಈ ಬ್ಯಾಗುಗಳಿಗೆ ಬೆಂಕಿ ಹಚ್ಚಿದರೆ ಪ್ಲಾಸ್ಟಿಕ್‌ ಸೂಸುವ ವಾಸನೆ ಬರುವುದಿಲ್ಲ. ಇದನ್ನು ಬಿಸಿ ನೀರಿನಲ್ಲಿ ಹಾಕಿ ಜೋರಾಗಿ ಕದಡಿದರೆ ಕರಗಿಬಿಡುತ್ತದೆ! ಹೀಗಾಗಿ ಎಸೆದ ಮೇಲೂ ಈ ಬ್ಯಾಗುಗಳು ಉಳಿದುಕೊಂಡು ಪೆಡಂಭೂತವಾಗುವುದು ದೂರದ ಮಾತು. ಸಂಸ್ಕರಿಸಿದ ತರಕಾರಿ ತ್ಯಾಜ್ಯ, ವೆಜಿಟೇಬಲ್‌ ಆಯಿಲ್‌, ನ್ಯಾಚುರಲ್‌ ಸ್ಟಾರ್ಚ್‌ನಿಂದ ತಯಾರಾಗಿರುವ ಈ ವಸ್ತು ವಿಷಕಾರಿಯಲ್ಲ, ಪ್ರಾಣಿಗಳು, ಅಷ್ಟೇ ಯಾಕೆ, ಮನುಷ್ಯರು ಇದನ್ನು ಸೇವಿಸಿದರೂ ಏನೂ ಆಗದು. ಅಷ್ಟು ಮಾತ್ರಕ್ಕೆ ಇದು ತಿನ್ನಲರ್ಹ ಪದಾರ್ಥವೆಂದು ಮಾತ್ರ ತಿಳಿದುಕೊಳ್ಳಬಾರದು! ಅಶ್ವಥ್‌ ಹೆಗ್ಡೆ ಅವರು “ಎನ್ವಿ ಗ್ರೀನ್‌’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಅಡಿಯಲ್ಲಿ ಈ ಪರಿಸರಸ್ನೇಹಿ ಉತ್ಪನ್ನವನ್ನು ತಯಾರಿಸುತ್ತಿದ್ದಾರೆ. “ಸದ್ಯ ಕಾರ್ಪೊರೆಟ್‌ ಆರ್ಡರ್‌ಗಳನ್ನೇ ನಿಭಾಯಿಸಲು ಕಷ್ಟವಾಗುತ್ತಿರುವುದರಿಂದ ಜನಸಾಮಾನ್ಯರಿಗೆ ಜನರಿಗೆ ತಲುಪಿಸುವ ಕೆಲಸ ವಿಳಂಬವಾಗುತ್ತಿದೆ. ಸರ್ಕಾರದ ಸಹಾಯ ಸಿಕ್ಕರೆ ಇನ್ನಷ್ಟು ಉತ್ತೇಜನ ಸಿಕ್ಕಂತಾಗುತ್ತದೆ’ ಎನ್ನುತ್ತಾರೆ ಅಶ್ವಥ್‌. ಮುಂದಿನ ದಿನಗಳಲ್ಲಿ ಈ ಉತ್ಪನ್ನ ಗಾತ್ರಕ್ಕೆ ತಕ್ಕಂತೆ 2ರೂ., 3 ರೂ. ಹಾಗೂ 4 ರೂ.ಗಳಿಗೆ ಜನಸಾಮಾನ್ಯರಿಗೆ ದೊರೆಯಲಿದೆ ಎನ್ನುವ ವಿಶ್ವಾಸ ಅವರದು.
ಜಾಲತಾಣ: envigreen.in

ಫ‌ುಡ್‌ಗ್ರೇಡ್‌ ಪ್ಯಾಕೇಜಿಂಗ್‌
ಅಂಗಡಿಗಳಲ್ಲಿ, ಹೋಟೆಲ್‌ಗ‌ಳಲ್ಲಿ ಗ್ರಾಹಕರು ತಿಂಡಿ- ಖಾದ್ಯಗಳನ್ನು ಪಾರ್ಸೆಲ್‌ ಮಾಡಿಸಿಕೊಂಡಾಗ ಬಾಕ್ಸ್‌ನಲ್ಲಿ ಹಾಕಿಕೊಡುವುದನ್ನು ನೋಡಿರಬಹುದು. ದ್ರವ ಪದಾರ್ಥವಾದರೆ ಪ್ಲಾಸ್ಟಿಕ್‌ನಲ್ಲಿ ಕಟ್ಟಿಕೊಡುತ್ತಾರೆ. ಅದಲ್ಲ. ಇಡ್ಲಿ, ದೋಸೆ, ವಡೆ ಮುಂತಾದ ಒಣ ಆಹಾರ ಪದಾರ್ಥಗಳನ್ನು ಕಟ್ಟಿಕೊಡುವಾಗ ತೆಳು ರಟ್ಟಿನ ಬಾಕ್ಸ್‌ನಲ್ಲಿ ಕೊಡುತ್ತಾರೆ. ಇವುಗಳನ್ನು ಬೇಕರಿಗಳಲ್ಲಿ ಕೇಕ್‌, ಸಿಹಿ ತಿಂಡಿಗಳನ್ನು ಪಾರ್ಸೆಲ್‌ ಮಾಡಲೂ ಬಳಸುತ್ತಾರೆ. ಈ ಬಾಕ್ಸ್‌ಗಳ ಒಳಪದರವನ್ನು ಪ್ಲಾಸ್ಟಿಕ್‌ನಿಂದ ಲ್ಯಾಮಿನೇಟ್‌ ಮಾಡಲಾಗಿರುತ್ತದೆ. ಏಕೆಂದರೆ ಆಹಾರ ಪದಾರ್ಥ ಬಾಕ್ಸ್‌ಗೆ ಅಂಟಿಕೊಳ್ಳದಿರಲಿ ಅಥವಾ ಜಿಡ್ಡನ್ನು ಹೀರಿಕೊಳ್ಳದಿರಲಿ ಎಂಬ ಕಾರಣದಿಂದ. ಅದನ್ನು ಎಸೆದಾಗ, ಆಹಾರ ಪದಾರ್ಥದ ವಾಸನೆಗೆ ಜಾನುವಾರುಗಳ ಹೊಟ್ಟೆಯ ಪಾಲಾಗುವುದುಂಟು. ಆದರೆ ಕಾಗದದ ಜೊತೆ ಜೊತೆಗೆ ಲ್ಯಾಮಿನೇಟೆಡ್‌ ಪ್ಲಾಸ್ಟಿಕ್‌ ಕೂಡಾ ಅದರ ಹೊಟ್ಟೆಗೆ ಸೇರುತ್ತದೆ. ಆದರೀಗ ಪ್ಲಾಸ್ಟಿಕ್‌ನ ಗುಣವನ್ನು ಹೊಂದಿರುವ ಪರಿಸರ ಸ್ನೇಹಿ ಪದರವನ್ನೇ ಲ್ಯಾಮಿನೇಟ್‌ ಮಾಡಿದ ಡಬ್ಬಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇವು ಫ‌ುಡ್‌ ಗ್ರೇಡೆಡ್‌(ಆರೋಗ್ಯಕರ) ಗುಣಮಟ್ಟವನ್ನು ಹೊಂದಿವೆ.
ಸಂಪರ್ಕ-9844095277

ಬಳಸಿ ಎಸೆಯಲರ್ಹ ತಟ್ಟೆಗಳು, ಲೋಟಗಳು
ಸಮಾರಂಭ ಚಿಕ್ಕದಿರಲಿ, ದೊಡ್ಡದಿರಲಿ ಪ್ಲಾಸ್ಟಿಕ್‌ ತಟ್ಟೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಯಾವ ಆಯಾಮದಲ್ಲಿ ನೋಡಿದರೂ ಇವು ಪರಿಸರಕ್ಕೆ ಮಾರಕವೇ. ಇದಕ್ಕೆ ಪರ್ಯಾಯವಾಗಿ ಪಟ್ಟೆಂದು ನಮಗೆ ಹೊಳೆಯುವುದು ಅಡಕೆ ತಟ್ಟೆಗಳು. ಅದರ ಬಗೆಗಿದ್ದ ಒಂದು ದೂರೆಂದರೆ, ಅದರಲ್ಲಿ ಹೆಚ್ಚು ಕಂಪಾರ್ಟ್‌ಮೆಂಟ್‌ ಇರುವುದಿಲ್ಲ ಎನ್ನುವುದು. ಆದರೆ ಈಗ ಸಾಂಬಾರ್‌, ಚಟ್ನಿ, ಪಲ್ಯವನ್ನು ಪ್ರತ್ಯೇಕವಾಗಿ ಬಡಿಸಿಕೊಳ್ಳಲು ಅನುವು ಮಾಡಿಕೊಡುವ ಹಲವು ಕಂಪಾರ್ಟ್‌ಮೆಂಟ್‌ ಉಳ್ಳ ಅಡಕೆ ತಟ್ಟೆಗಳೂ ಮಾರುಕಟ್ಟೆಯಲ್ಲಿವೆ.

ಉತ್ತಮ ಫಿನಿಶಿಂಗ್‌ ಇರುವ ತಟ್ಟೆಗಳು ಬೇಕೆಂದವರಿಗೆ ಇನ್ನೊಂದು ಆಯ್ಕೆಯೂ ಇದೆ. ಕಬ್ಬಿನ ಜಲ್ಲೆಯ ಉಳಿದ ಪದಾರ್ಥಗಳಿಂದ ತಯಾರಾದ ಡಿನ್ನರ್‌ವೆàರ್‌ಗಳು. “ಚಕ್‌’ ಎನ್ನುವ ಸಂಸ್ಥೆಯೊಂದು ಅದರ ತಯಾರಿಯಲ್ಲಿ ನಿರತವಾಗಿದೆ. ರಸವೆಲ್ಲಾ ಹೀರಲ್ಪಟ್ಟ ನಂತರ ಅಳಿದುಳಿದ ಕಬ್ಬಿನ ತ್ಯಾಜ್ಯವನ್ನು ಸಂಸ್ಕರಿಸಿ ಸುಂದರ ವಿನ್ಯಾಸದ ಊಟದ ತಟ್ಟೆಗಳನ್ನು ತಯಾರಿಸಲಾಗುತ್ತದೆ. ಇವುಗಳು ಒಂದು ಬಾರಿಯ ಬಳಕೆಗೆ ಸೂಕ್ತವಾದರೂ, ಮತ್ತೆ ತೊಳೆದು ಒಂದಕ್ಕಿಂತ ಹೆಚ್ಚು ಬಾರಿ ಬಳಸಬಹುದು.

ಸಂಸ್ಕರಿಸುವಾಗ ಅಕ್ಕಿಯಿಂದ ಬೇರ್ಪಡುವ ಭತ್ತದ ಜೊಳ್ಳನ್ನು ಬಳಸಿಯೂ ಪಾತ್ರೆ, ಮಗ್‌ಗಳನ್ನು ತಯಾರಿಸುವ ಸಂಸ್ಥೆಗಳಿವೆ. ನೋಡಲು ಯಾವ ಪಿಂಗಾಣಿ ಪಾತ್ರೆಗೂ ಕಡಿಮೆಯಿರದ ಈ ಡಿನ್ನರ್‌ವೆàರ್‌ಗಳು ಆಕರ್ಷಕವಾಗಿಯೂ ಕಾಣುತ್ತವೆ. ಇವುಗಳು ಕೆಳಕ್ಕೆ ಬಿದ್ದರೆ ಒಡೆಯುವುದಿಲ್ಲ. ಅಲ್ಲದೆ ಮೈಕ್ರೋವೇವ್‌ ಓವೆನ್‌ನಲ್ಲೂ ಇಡಬಹುದು.
ಅಡಕೆ ತಟ್ಟೆ: 7022080673
ಕಬ್ಬಿನ ಜಲ್ಲೆಯ ತಟ್ಟೆ: 9380911491
ಭತ್ತದ ಹೊಟ್ಟಿನ ತಟ್ಟೆ: 8026781090

ಜಿಎಸ್‌ಎಂ ನೋಡಿ ಬ್ಯಾಗ್‌ ಕೊಳ್ಳಿ!
ಅಂಗಡಿ ಸಾಮಾನುಗಳನ್ನು ಕೊಂಡೊಯ್ಯಲು ಬಟ್ಟೆ ಕೈಚೀಲಗಳು ಸೂಕ್ತ ನಿಜ. ಆದರೆ, ಅವುಗಳ ಭಾರ ಹೊರುವ ಸಾಮರ್ಥ್ಯ ಬಹಳ ಸೀಮಿತವಾದುದು. ಅಲ್ಲದೆ, ಅವುಗಳ ಬೆಲೆಯೂ ದುಬಾರಿ. ಹೀಗಾಗಿ ಅವನ್ನು ಕೊಳ್ಳಲು, ಬಳಸಲು ಜನ ಹಿಂದೇಟು ಹಾಕುತ್ತಾರೆ. ಆದರೆ ಅದನ್ನು ತಿರಸ್ಕರಿಸುವ ಮುನ್ನ ಕೆಲ ಮಾಹಿತಿಯನ್ನು ತಿಳಿದುಕೊಳ್ಳುವುದು ಅವಶ್ಯ. ಬಟ್ಟೆಯ ಕೈಚೀಲಗಳನ್ನು ಕೊಳ್ಳುವಾಗ ಅದು ಎಷ್ಟು ಜಿಎಸ್‌ಎಂ ಎಂಬುದನ್ನು ತಿಳಿದು ನಂತರ ಖರೀದಿಸಿ. ಜಿ.ಎಸ್‌.ಎಂ ಎಂದರೆ ಕಾಗದದ ದಪ್ಪವನ್ನು ಅಳೆಯಲು ಬಳಸುವ ಮಾನದಂಡ. ಹೆಚ್ಚಿನ ಜಿಎಸ್‌ಎಂ ಎಂದರೆ ಹೆಚ್ಚು ದಪ್ಪವಿರುವುದು. ಜಿಎಸ್‌ಎಂನ ಚೀಲಗಳು ಬಾಳಿಕೆಯೂ ಹೆಚ್ಚು ಭಾರ ಹೊರುವ ಸಾಮರ್ಥ್ಯವೂ ಹೆಚ್ಚು. ಸ್ಕೂಲ್‌ ಬ್ಯಾಗ್‌ ಮತ್ತು ಆಫೀಸ್‌ ಬ್ಯಾಗುಗಳಲ್ಲಿ ಪರ್ಸ್‌ ಇಡಲು, ನೀರಿನ ಬಾಟಲಿ ಇಡಲು, ಲ್ಯಾಪ್‌ಟಾಪ್‌, ಪುಸ್ತಕ ಹೀಗೆ ಎಲ್ಲವಕ್ಕೂ ಪ್ರತ್ಯೇಕ ಕಂಪಾರ್ಟ್‌ಮೆಂಟುಗಳಿರುತ್ತವೆ, ಅದೇ ಮಾದರಿಯಲ್ಲಿ ತರಕಾರಿ ಬ್ಯಾಗು ಕೂಡಾ ಬಂದರೆ ಸಂತೆಯಲ್ಲಿ ಕೊಳ್ಳುವ ತರಕಾರಿಗಳನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಬಹುದು. ಬೆಳ್ಳಿ ಕಿರಣ ಎನ್ನುವ ಸಂಸ್ಥೆಯೊಂದು ಅಂಥದ್ದೊಂದು ಸದೃಢ ಬಟ್ಟೆ ಬ್ಯಾಗನ್ನು ತಯಾರಿಸುತ್ತಿದೆ.
ಕಂಪಾರ್ಟ್‌ಮೆಂಟ್‌ ಬ್ಯಾಗ್‌- 8971800223

ಆಡಿಸಿ ನೋಡು, ಪರಿಸರ ಉಳಿಸಿ ನೋಡು
ಹಿಂದೆಲ್ಲಾ ಆಟಿಕೆಗಳು ನೈಸರ್ಗಿಕ ವಸ್ತುಗಳಿಂದ ಮಾಡಲ್ಪಡುತ್ತಿತ್ತು. ಆದರೆ ಈಗ ಆಟಿಕೆಗಳು ಪ್ಲಾಸ್ಟಿಕ್‌ಮಯ. ಎಲ್ಲೆಂದರಲ್ಲಿ ಅಗ್ಗವಾಗಿ ದೊರೆಯುವ ಪ್ಲಾಸ್ಟಿಕ್‌ ಆಟಿಕೆಗಳಲ್ಲಿ ಎಲ್ಲವೂ ಕೃತಕ. ಅದೇ ಮರದಿಂದ ತಯಾರಾದ ಆಟಿಕೆಗಳಲ್ಲಿರುವ ಕಲಾಕಾರನ ಪ್ರೌಢಿಮೆ, ಪರಿಶ್ರಮ ಯಂತ್ರ ನಿರ್ಮಿತ ಪ್ಲಾಸ್ಟಿಕ್‌ ಆಟಿಕೆಗಳಲ್ಲಿ ಇರುವುದಿಲ್ಲ. ವಿಷಯುಕ್ತ ಪದಾರ್ಥಗಳಿಂದ ತಯಾರಿಸಲ್ಪಟ್ಟಿದೆ ಎಂದು ಗೊತ್ತಿದ್ದರೂ ಮಕ್ಕಳ ಕೈಗೆ ನಾವದನ್ನು ಕೊಡುತ್ತಿರುವುದು ವಿಪರ್ಯಾಸವಲ್ಲದೆ ಮತ್ತೇನು. ಪ್ಲಾಸ್ಟಿಕ್‌ ಆಟಿಕೆಗಳಲ್ಲಿ ಇರುವ ವೈವಿಧ್ಯತೆ ಮರದ ಆಟಿಕೆಗಳಲ್ಲಿ ಇರುವುದಿಲ್ಲ ಎನ್ನುವುದರಲ್ಲಿ ಸುಳ್ಳಿಲ್ಲ ಆದರೆ ಮಕ್ಕಳ ವಯೋಮಾನಕ್ಕೆ ತಕ್ಕಂತೆ ಅವರ ಬುದ್ದಿ ವಿಕಸನಕ್ಕೆ ಸಹಾಯವಾಗುವಂಥ ಆಟಿಕೆಗಳ ತಯಾರಿಯೂ ಉದ್ಯಮವಾಗಿ ಬೆಳೆಯುತ್ತಿದೆ. ಮನರಂಜನೆ ಮಾತ್ರವಲ್ಲದೆ ವೈಜ್ಞಾನಿಕ ಹಾಗೂ ಸಾಮಾಜಿಕ ಕಲಿಕೆಗೂ ಈ ಆಟಿಕೆಗಳು ಸಹಕಾರಿ. ಈ ನಿಟ್ಟಿನಲ್ಲಿ ಹಲವು ಸಂಘಸಂಸ್ಥೆಗಳು ವ್ಯಕ್ತಿಗಳು ಕೆಲಸ ಮಾಡುತ್ತಿದ್ದಾರೆ. ಅವುಗಳಲ್ಲೊಂದು “ಛಾಯಾ ನಿಸರ್ಗ’.
ಸಂಪರ್ಕ: 9448587136

ಹರ್ಷವರ್ಧನ್‌ ಸುಳ್ಯ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಇಡೀ ಭಾರತಕ್ಕೇ ಬೆಳಕು ಹಂಚುವ ಶಿವಕಾಶಿ ಪಟ್ಟಣದಲ್ಲಿ 520 ನೋಂದಾಯಿತ ಮುದ್ರಣ ಕೈಗಾರಿಕೆಗಳು, 53 ಬೆಂಕಿ ಕಡ್ಡಿತಯಾರಿಕಾ ಕಾರ್ಖಾನೆಗಳು, 32 ರಾಸಾಯನಿಕ ಕಾರ್ಖಾನೆಗಳಿವೆ....

  • ಉದ್ಯೋಗದಲ್ಲಿರುವ ತಂದೆ ತಾಯಿಯರಿಗೆ ಮಕ್ಕಳ ಪಾಲನೆ ಎನ್ನುವುದು ಅತಿ ದೊಡ್ಡ ಪರೀಕ್ಷೆ. ಮಕ್ಕಳು ಚಿಕ್ಕವಾಗಿದ್ದರೆ ಮನೆಯಲ್ಲಿ ಬಿಡಲೂ ಆಗದ ಕಿರಿಕಿರಿ. ಅನಿವಾರ್ಯವಾಗಿಯಾದರೂ...

  • ಗುರುವಾರದಿಂದ ಬೆಂಗಳೂರು ಕೃಷಿ ವಿವಿ ಆವರಣದಲ್ಲಿ ಕೃಷಿ ಮೇಳ ಶುರುವಾಗುತ್ತಿದೆ. ಈ ಸಲ ಮೇಳಕ್ಕೆ ಬಂದ ರೈತರಿಗೆ ನಿರಾಸೆ ಅನ್ನೋದಿಲ್ಲ. ಏಕೆಂದರೆ, ಕೃಷಿ ವಿಶ್ವವಿದ್ಯಾಲಯ,...

  • ಹಿಂದೆ ರಾಜರು, ಬೇಸಿಗೆ ಕಾಲದ ಅರಮನೆ, ಚಳಿಗಾಲದ ಅರಮನೆ ಹೀಗೆ ಕಾಲಕ್ಕೆ ತಕ್ಕಂತೆ ವಾಸಸ್ಥಳಗಳನ್ನು ಹೊಂದಿರುತ್ತಿದ್ದರು. ಆ ಸೌಕರ್ಯ ನಮಗೆಲ್ಲಿ ಬರಬೇಕು?! ಹೀಗಾಗಿ...

  • ಇಂಟರ್‌ನೆಟ್‌ ಯುಗದಲ್ಲಿ, ಸುರಕ್ಷತೆಯ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ನಾವು ಎಲ್ಲೆಲ್ಲಾ ಎಚ್ಚರಿಕೆ ವಹಿಸಬೇಕು ಗೊತ್ತಾ? ವಿಳಾಸ ನೋಡಿ ಹಣಕಾಸು...

ಹೊಸ ಸೇರ್ಪಡೆ