ಫೈಬರ್‌ ಜಿಂದಾ ಹೈ!

ರಿಲಯನ್ಸ್‌ನಿಂದ ಬ್ರಾಡ್‌ಬ್ಯಾಂಡ್‌ ಸೇವೆಗೆ ಮರುಜೀವ

Team Udayavani, Aug 19, 2019, 5:02 AM IST

ಭೂಮಿಯನ್ನು ಏಳು ಸುತ್ತು ಸುತ್ತುವಷ್ಟು ಬೃಹತ್ತಾದ ಆಪ್ಟಿಕಲ್‌ ಫೈಬರ್‌ ಕೇಬಲ್‌ ಸಂಪರ್ಕ ಭಾರತದಲ್ಲಿದೆ. ಹಾಗಿದ್ದೂ ಈ ಕಾಲದಲ್ಲೂ ಒಂದು ಜಾಲತಾಣ ಓಪನ್‌ ಆಗಲು, ಒಂದು ಹಾಡು ಕೇಳಲು “ನೆಟ್‌ವರ್ಕ್‌ ಪ್ರಾಬ್ಲೆಂ’ ನೆಪ ಹೇಳುವುದು ತಪ್ಪುತ್ತಿಲ್ಲ. ಇದಕ್ಕೆಲ್ಲಾ ಫ‌ುಲ್‌ಸ್ಟಾಪ್‌ ಹಾಕಲು ಬರುತ್ತಿದೆ ಜಿಯೋ ಫೈಬರ್‌ ಬ್ರಾಡ್‌ಬ್ಯಾಂಡ್‌. ಮನರಂಜನಾ ಉದ್ಯಮಕ್ಕೇ ಸೆಡ್ಡು ಹೊಡೆಯುವಂತೆ ತೋರುತ್ತಿರುವ ಈ ವ್ಯವಸ್ಥೆಯ ರೂಪುರೇಷೆಗಳು ಇಲ್ಲಿವೆ…

ಹಳ್ಳಿ ಹಳ್ಳಿಗೂ ಆಪ್ಟಿಕಲ್‌ ಫೈಬರ್‌ ತಲುಪಿಸುವುದು ಪ್ರಧಾನಿ ಮೋದಿಯವರ ಕನಸು. ಇದಕ್ಕೆ ಪೂರಕವಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಕಂಪನಿಯು ವಾರ್ಷಿಕ ಶೇರುದಾರರ ಸಭೆಯಲ್ಲಿ, ಹೊಸ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಸೆಪ್ಟೆಂಬರ್‌ನಲ್ಲಿ ಒದಗಿಸುವುದಾಗಿ ಮುಕೇಶ್‌ ಅಂಬಾನಿ ಘೋಷಿಸಿದ್ದಾರೆ. ಈಗಾಗಲೇ ದೇಶದಲ್ಲಿ ಜಿಯೋ ಕಂಪನಿಯ ಆಪ್ಟಿಕಲ್‌ ಫೈಬರ್‌ ನೆಟ್‌ವರ್ಕ್‌ ತಯಾರಾಗಿದೆ. ಇಲ್ಲಿಯವರೆಗೆ ನಮ್ಮ ದೇಶದಲ್ಲಿ ನೆಟ್ಟ ಆಪ್ಟಿಕಲ್‌ ಫೈಬರ್‌ ಉದ್ದ ಎಷ್ಟಾಗಬಹುದು ಅಂದುಕೊಂಡಿದ್ದೀರಿ? ಭೂಮಿಯನ್ನು ಏಳು ಸುತ್ತು ಸುತ್ತುವಷ್ಟು!

ಇವತ್ತು ಬ್ರಾಡ್‌ಬ್ಯಾಂಡ್‌ ಅಂದಾಕ್ಷಣ ನಮಗೆ ನೆನಪಾಗುವುದು ಕೇವಲ ಇಂಟರ್ನೆಟ್‌ ಮಾತ್ರ. ಮನೆಗೆ ಒಂದು ತಂತಿ ಬರುತ್ತದೆ, ಅದು ರೋಟರ್‌ನಲ್ಲಿ ಕೂರುತ್ತದೆ. ಅಲ್ಲಿಗೆ ಬ್ರಾಡ್‌ಬ್ಯಾಂಡ್‌ ಕಂಪನಿಯ ಕೆಲಸ ಮುಗಿಯಿತು, ಪ್ರತಿ ತಿಂಗಳ ಕೊನೆಗೆ ಬಿಲ್‌ ಬರುತ್ತದೆ. ಆದರೆ ಜಿಯೋ ಫೈಬರ್‌ ಮಾದರಿ ಹೊಸತು. ಮುಖ್ಯವಾಗಿ ನಾಲ್ಕು ರೀತಿಯ ಗ್ರಾಹಕರಿಗೆ ಜಿಯೋ ಕಂಪನಿಯು ಘೋಷಿಸಿದ ಬ್ರಾಡ್‌ಬ್ಯಾಂಡ್‌ ಸರ್ವಿಸ್‌ನಿಂದ ಅನುಕೂಲವಾಗಲಿದೆ. ಗೃಹ ಬಳಕೆಗೆ, ಸರ್ಕಾರಿ ಸಂಸ್ಥೆಗಳಿಗೆ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕಂಪನಿಗಳಿಗೆ ಹಾಗೂ ದೊಡ್ಡ ಕಾರ್ಪೊರೆಟ್‌ ಕಂಪನಿಗಳಿಗೆ.

ಜಿಯೋಗಿಗಾ ಫೈಬರ್‌ನಲ್ಲಿ ಈಗ ಕೇವಲ ಇಂಟರ್ನೆಟ್‌ ಅಷ್ಟೇ ಅಲ್ಲ, ನಾವು ಬಯಸುವ, ಊಹಿಸದ, ಬಹಳಷ್ಟು ಸವಲತ್ತುಗಳಿವೆ. ಅವೆಲ್ಲವನ್ನೂ ಇಲ್ಲಿ ಪಟ್ಟಿಮಾಡಲಾಗಿದೆ.
– ಮಿಂಚಿನ ವೇಗದ ಅಂತರ್ಜಾಲ
– ಉಚಿತ ಲ್ಯಾಂಡ್‌ಲೈನ್‌ ಫೋನ್‌ ಸೌಕರ್ಯ
– ಮನರಂಜನೆ ( HD, 4K)
– ಮಿಕ್ಸೆಡ್‌ ರಿಯಾಲಿಟಿ
– ವಿಡಿಯೋ ಕಾನ್ಫರೆನ್ಸಿಂಗ್‌
– ವರ್ಚುವಲ್‌ ವಾಯ್ಸ… ಅಸಿಸ್ಟೆನ್ಸ್‌
– ಸ್ಮಾರ್ಟ್‌ ಹೋಂ
– ಹೋಂ ಸೆಕ್ಯುರಿಟಿ
– ಹೈಡೆಫೆನಿಷನ್‌ ಕೇಬಲ್‌ ಟಿವಿ ಹಾಗೂ ಸೆಟ್‌ ಟಾಪ್‌ ಬಾಕ್ಸ್‌
– ಉಚಿತ ಓಟಿಟಿ ಸ್ಟ್ರೀಮಿಂಗ್‌ ಸೇವೆಗಳು

ಹೈಸ್ಪೀಡ್‌ ಇಂಟರ್ನೆಟ್‌
ಇಂಟರ್ನೆಟ್‌ ವೇಗವು ಇವತ್ತು ನಮ್ಮ ದೇಶದಲ್ಲಿ ಅತಿ ಹೆಚ್ಚು ಅಂದರೆ 90- 100Mbps. . ಆದರೆ ಜಿಯೋ ಫೈಬರ್‌ನ ಕನಿಷ್ಠ ವೇಗವೇ 100mbps. ಅಲ್ಲಿಂದ ಶುರುವಾಗಿ 1Gbps ತನಕದ ವೇಗವನ್ನು ಗ್ರಾಹಕರು ಪಡೆದುಕೊಳ್ಳಬಹುದು. ಇಂಟರ್ನೆಟ್‌ ಸ್ಪೀಡ್‌ ಹೆಚ್ಚಿದರೆ ವೆಬ್‌ಸೈಟುಗಳು ಬೇಗನೆ ತೆರೆದುಕೊಳ್ಳುತ್ತವೆ, ವಿಡಿಯೋಗಳನ್ನು ಯಾವುದೇ ಅಡೆತಡೆಯಿಲ್ಲದೆ ನೋಡಬಹುದು. ಅದು ಬಿಟ್ಟರೆ ಬೇರಾವ ಪ್ರಯೋಜನವಿದೆ ಎಂದು ಕೆಲವರಿಗೆ ಅನ್ನಿಸಬಹುದು. ಆದರೆ ಹೈಸ್ಪೀಡ್‌ ಇಂಟರ್ನೆಟ್‌ ಹೆದ್ದಾರಿ ಇದ್ದಂತೆ. ಮುಂದೆ ಈ ಹೆದ್ದಾರಿಯ ಇಕ್ಕೆಲಗಳಲ್ಲಿ ಹಲವಾರು ಸೇವೆಗಳು ಜಾಗ ಕಂಡುಕೊಳ್ಳುತ್ತವೆ. ಈಗಾಗಲೇ ನೆಟ್‌ಫ್ಲಿಕ್ಸ್‌, ಅಮೆಜಾನ್‌ನಂಥ ಆನ್‌ಲೈನ್‌ ಸ್ಟ್ರೀಮಿಂಗ್‌ ಸೇವೆಗಳು ಭಾರತದಲ್ಲಿ ಜನಪ್ರಿಯವಾಗುತ್ತಿವೆ. ಇದರ ಗ್ರಾಹಕರು ಎದುರಿಸುವ ಮುಖ್ಯ ಸಮಸ್ಯೆ ಇಂಟರ್ನೆಟ್‌ ಸ್ಪೀಡ್‌ನ‌ದ್ದು. ಸಿನಿಮಾ ನೋಡುವಾಗ ಕ್ಲೈಮ್ಯಾಕ್ಸ್‌ನಲ್ಲಿ ಪರದೆ ಲೋಡಿಂಗ್‌ ಎಂದು ಬರುತ್ತಲೇ ಇದ್ದರೆ ಆ ಸಿನಿಮಾ ನೀಡುವ ರೋಚಕ ಅನುಭವದಿಂದ ಗ್ರಾಹಕ ವಂಚಿತನಾಗುವುದಿಲ್ಲವೆ? ಈ ರೀತಿಯ ಹಲವು ಸಮಸ್ಯೆಗಳಿಗೆ ಪರಿಹಾರ ಹೈಸ್ಪೀಡ್‌ ಇಂಟರ್ನೆಟ್‌.

ಜಿಯೋ ಗಿಗಾ ಫೈಬರ್‌ ಟಿವಿ
ಬ್ರಾಡ್‌ಬ್ಯಾಂಡ್‌ ಬಳಸಿ ಎಲ್ಲ ಟಿವಿ ಚಾನಲ್‌ಗ‌ಳನ್ನೂ ನೋಡಬಹುದು. ಡಾಟಾ ಪ್ಯಾಕ್‌ನಲ್ಲಿಯೇ ಇದೂ ಕವರ್‌ ಆಗುತ್ತದೆ. ಟಿವಿ ಚಾನೆಲ್‌ ಅಂದಾಕ್ಷಣ ಇಲ್ಲಿ ನಿಮಗೆ ಒಂದು ಪ್ರಶ್ನೆ ಎದುರಾಗಬಹುದು. ನಾವೆಲ್ಲ ಕೇಬಲ್‌ ಆಪರೇಟರ್‌ ಹತ್ತಿರ ಸೇವೆ ಪಡೆಯುತ್ತಿದ್ದೇವೆ. ಈಗ ಮತ್ತೆ ಹೊಸ ಸೆಟ್‌ ಟಾಪ್‌ ಬಾಕ್ಸ್‌ ತಗೋಬೇಕಾ? ನಮ್ಮ ದೇಶದಲ್ಲಿ ಒಂದು ಲಕ್ಷ ಕೇಬಲ್‌ ಆಪರೇಟರ್‌ಗಳಿದ್ದಾರೆ. ಅವರ ಕೆಳಗೆ ಲಕ್ಷಾಂತರ ಜನರು ಉದ್ಯೋಗಿಗಳಿದ್ದಾರೆ. ಅವರೆಲ್ಲರ ಕೆಲಸಕ್ಕೆ ಕುತ್ತು ಬರುತ್ತಾ? ಮುಂತಾದ ಆತಂಕಗಳಿಗೆ ರಿಲಯನ್ಸ್‌ ಸಂಸ್ಥೆ ಫ‌ುಲ್‌ಸ್ಟಾಪ್‌ ಇಟ್ಟಿದೆ. ಜಿಯೋ ಕಂಪನಿಯ ಮಾತೃಸಂಸ್ಥೆಯಾದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌, ನಾಲ್ಕು ದೊಡ್ಡ ಲೋಕಲ್‌ ಕೇಬಲ್‌ ಆಪರೇಟರ್‌ ಕಂಪನಿಗಳನ್ನು ಖರೀದಿ ಮಾಡಿದೆ. ಅಷ್ಟು ಮಾತ್ರವಲ್ಲ, ಆ ಸಂಸ್ಥೆಗಳ ಉಪಕರಣಗಳನ್ನು ಆಧುನೀಕರಿಸಿದೆ. ಹೀಗಾಗಿ ಇವತ್ತು ಯಾರು ಆ ಕಂಪನಿಯ (ಉದಾಹರಣೆಗೆ- ಹಾಥ್‌ವೇ) ಕೇಬಲ್‌ ಬಳಸುತ್ತಿದ್ದಾರೋ ಅವರಿಗೆ ಡಿಟಿಎಚ್‌ಗಿಂತ ಉತ್ತಮ ಗುಣಮಟ್ಟದ ಸಿಗ್ನಲ್‌ ಸಿಗಬಹುದಾಗಿದೆ. ಇನ್ನುಳಿದ ಕೇಬಲ್‌ ಆಪರೇಟರ್ ಹಾಗೂ ಅವರ ಗ್ರಾಹಕರು ಜಿಯೋ ಡಾಟಾ ಬಾಕ್ಸ್‌ ಬಳಸಿ ಸಿಗ್ನಲ್‌ ಸ್ವೀಕರಿಸುವ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದೆ. ಜಿಯೋ ಫೈಬರ್‌ ಪ್ರೀಮಿಯಮ್‌ ಎಂಬ ಪ್ಲ್ರಾನ್‌ ಅಡಿಯಲ್ಲಿ ಗ್ರಾಹಕರಿಗೆ ಹೊಸ ಸಿನಿಮಾದ ಫ‌ಸ್ಟ್‌ ಡೇ ಫ‌ಸ್ಟ್‌ ಶೋ ನೋಡುವ ಅವಕಾಶ ಕೂಡ ಇರುತ್ತದೆ. ಕೊನೆಯಲ್ಲಿ, ಜಿಯೋ ಫೈಬರ್‌ ವಾರ್ಷಿಕ ಸ್ಕೀಮ್‌ ಯಾರು ಚಂದಾದಾರರಾಗುತ್ತಾರೋ ಅವರಿಗೆ HD/4K LED ಟೆಲಿವಿಷನ್‌ ಹಾಗೂ 4ಓ ಸೆಟ್‌ ಅಫ್ ಬಾಕ್ಸ್‌ ಉಚಿತವಾಗಿ ಕಂಪನಿಯಿಂದ ಸಿಗಲಿದೆ.

ಉಚಿತ ವಿಡಿಯೋ ಕಾನ್ಫರೆನ್ಸ್‌
ಇವತ್ತು ದೂರದಲ್ಲಿರುವ ನಮ್ಮ ಸಂಬಂಧಿಕರೊಂದಿಗೆ ನಾವು ವಿಡಿಯೋ ಮೂಲಕ ಮಾತನಾಡಬೇಕು ಅಂದರೆ ಹೆಚ್ಚಾಗಿ ವಾಟ್ಸಾಪ್‌ ಅಥವಾ ವೆಬ್‌ಕ್ಯಾಮ್‌ ಬಳಕೆಯಾಗುತ್ತಿದೆ. ಅದರಲ್ಲಿ ವಿಡಿಯೋ ಕಾಲ್‌ ಆಯ್ಕೆ ಇರುತ್ತದೆ. ಇನ್ನು ದೊಡ್ಡ ದೊಡ್ಡ ಕಂಪನಿಗಳ ವಿಷಯಕ್ಕೆ ಬಂದರೆ, ವಿಡಿಯೋ ಕಾನ್ಫರೆನ್ಸ್‌ ಸೌಕರ್ಯಕ್ಕೆಂದೇ ಕೋಟ್ಯಂತರ ರು. ಖರ್ಚು ಮಾಡುತ್ತಾರೆ. ದೇಶ- ವಿದೇಶಗಳಲ್ಲಿ ಅವುಗಳು ಶಾಖೆ ಹೊಂದಿರುವುದರಿಂದ, ಮೀಟಿಂಗ್‌ ನಡೆಸಲು ಅವರಿಗೆ ವಿಡಿಯೋ ಕಾನ್ಫರೆನ್ಸ್‌ ಅತ್ಯಂತ ಸೂಕ್ತವಾದ ಹಾಗೂ ಸುಲಭವಾದ ಮಾರ್ಗ. ಹಾಗೆ ನೋಡಿದರೆ, ಸಂಸ್ಥೆಯು ಮೀಟಿಂಗುಗಳಿಗೆ ಹಾಜರಾಗಲು ತನ್ನ ನೌಕರರನ್ನೇ ಫಾರಿನ್‌ಟ್ರಿಪ್‌ಗೆ ಕಳುಹಿಸುವುದಕ್ಕಿಂತ ಇದು ಆಗ್ಗವೂ ಹೌದು. ಆದರೆ, ಸಣ್ಣ ಹಾಗೂ ಮಧ್ಯಮ ಮಟ್ಟದ ಕಂಪನಿಗಳಿಗೆ ವಿಡಿಯೋ ಕಾನ್ಫರೆನ್ಸ್‌ಗೆ ಖರ್ಚು ಮಾಡುವಷ್ಟೂ ಸಾಮರ್ಥ್ಯ ಇರುವುದಿಲ್ಲ. ಜಿಯೋ ಫೈಬರ್‌ ಇವೆಲ್ಲವನ್ನೂ ಬಗೆಹರಿಸಲಿದೆ. ಜಿಯೋ ಫೈಬರ್‌ ಟಿವಿಯಲ್ಲಿ ವಿಡಿಯೋ ಕಾನ್ಫರೆನ್ಸ್‌ ಸವಲತ್ತನ್ನು ಅಳವಡಿಸಲಾಗಿರುತ್ತದೆ. ಅದಕ್ಕೆ ಪ್ರತ್ಯೇಕ ಚಾರ್ಜ್‌ ಇಲ್ಲ, ಸಂಪೂರ್ಣ ಉಚಿತ.

ವಿಡಿಯೋ ಗೇಮಿಂಗ್‌
ಜಿಯೋ ಬ್ರಾಡ್‌ಬ್ಯಾಂಡ್‌ನ‌ ಇನ್ನೊಂದು ಪ್ರಯೋಜನ ಎಂದರೆ, ಅದರಲ್ಲಿ ಗೇಮಿಂಗ್‌ ಸವಲತ್ತನ್ನೂ ನೀಡಲಾಗಿದೆ. ವಿಡಿಯೋ ಗೇಮ್ಸ…ಗೆ ಬೇರೆ ಪ್ರತ್ಯೇಕ ಗೇಮಿಂಗ್‌ ಬಾಕ್ಸ್‌ ಖರೀದಿಸುವ ಅವಶ್ಯಕತೆಯಿಲ್ಲ. ಜಿಯೋ ಟಿವಿಯಲ್ಲಿಯೇ ಗೇಮಿಂಗ್‌ ಇದೆ. ವಿಡಿಯೋ ಕಾನ್ಫರೆನ್ಸ್‌ಬಳಸಿ ನಿಮ್ಮ ಗೆಳೆಯರ ಜೊತೆ ಮಾತನಾಡಿದ ಹಾಗೆ ಆಟವನ್ನೂ ಆಡಬಹುದು. ಡಾಟಾದ ವೇಗ ಹೆಚ್ಚಿರುವುದರಿಂದ ಲ್ಯಾಗಿಂಗ್‌ ಇರುವುದಿಲ್ಲ. ಅಂದರೆ, ಗೇಮ್‌ ಆಡುವಾಗ ನಡುವಲ್ಲಿ ಸ್ಟ್ರಕ್‌ ಆಗುವುದಿಲ್ಲ. ಹೀಗಾಗಿ ತುಂಬಾ ಸೂ¾ತ್‌ ಆದ ಗೇಮಿಂಗ್‌ ಅನುಭವವನ್ನು ಹೊಂದಬಹುದು.

ಆಗುವುದೆಲ್ಲಾ ಒಳ್ಳೆಯದಕ್ಕೇ
ಉಚಿತ ಜಿಯೋ ಸಿಮ್‌ ಬಿಡುಗಡೆ ಮಾಡಿದ್ದ ಸಂದರ್ಭದಲ್ಲಿ ಪ್ರತಿಸ್ಪರ್ಧಿಗಳೂ ಜಿಯೋಗೆ ಪೈಪೋಟಿ ಕೊಡುವ ನಿಟ್ಟಿನಲ್ಲಿ ತಮ್ಮ ದರಗಳನ್ನು ಪರಿಷ್ಕರಿಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಈ ಬಾರಿಯೂ, ಜಿಯೋ ಫೈಬರ್‌ ಬಿಡುಗಡೆಗೊಳ್ಳುತ್ತಿರುವ ಸಮಯದಲ್ಲಿ ಪ್ರತಿಸ್ಪರ್ಧಿ ಬ್ರಾಡ್‌ಬ್ಯಾಂಡ್‌ ಸಂಸ್ಥೆಗಳು ದರ ಕಡಿತಗೊಳಿಸುವುದರ ಜೊತೆಗೆ ತನ್ನ ಗ್ರಾಹಕರಿಗೆ ಹೆಚ್ಚು ಸೇವೆಗಳನ್ನು ಒದಗಿಸುವ ಕುರಿತು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು. ಹೀಗಾಗಿಬಿಟ್ಟರೆ, ಎಲ್ಲರೂ ಜಿಯೋ ಕಂಪನಿಯ ಗ್ರಾಹಕರಾಗಿ, ಉಳಿದ ಕಂಪನಿಗಳು ಬಾಗಿಲು ಮುಚ್ಚಿ ಬಿಡುತ್ತವಾ ಎಂಬ ಅನುಮಾನ ಬೇಡ. ಜಿಯೋದ ನೆಟ್‌ವರ್ಕ್‌ ವ್ಯಾಪಕವಾಗಿರುವುದು ನಗರಗಳಲ್ಲಿ ಮಾತ್ರ. ಗ್ರಾಮೀಣ ಪ್ರದೇಶಗಳಲ್ಲಿ ಏರ್‌ಟೆಲ್‌, ಬಿಎಸ್ಸೆನ್ನೆಲ್‌ ಪಾರಮ್ಯವೇ ಇದೆ. ಒಂದು ವೇಳೆ, ಪ್ರತಿ ಹಳ್ಳಿಗೂ ಜಿಯೋ ತನ್ನ ನೆಟ್‌ವರ್ಕ್‌ ಕೊಂಡೊಯ್ದರೆ, ಆಗ ಉಳಿದ ಕಂಪನಿಗಳೂ ಜಿಯೋ ನೀಡುವಂಥ ಸೇವೆಯನ್ನೇ ನೀಡಲು ಮುಂದಾಗುತ್ತವೆ!

ಮಿಕ್ಸೆಡ್‌ ರಿಯಾಲಿಟಿ
ತಲೆಗೆ ಕನ್ನಡಕದಂಥ ಹೆಡ್‌ಗೆರ್‌ಗಳನ್ನು ಕಟ್ಟಿಕೊಂಡಾಗ, ಕಣ್ಣ ಮುಂದೆ ಕಾಣುವ ಡಿಜಿಟಲ್‌ ಪರದೆ ನಮ್ಮ ಚಲನೆಗೆ ಸ್ಪಂದಿಸುತ್ತಾ ನಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುವ ಮಿಕ್ಸೆಡ್‌ ರಿಯಾಲಿಟಿ(MR) ತಂತ್ರಜ್ಞಾನದ ಕುರಿತು ಅನೇಕರು ಕೇಳಿರಬಹುದು. ಆದರೆ ಬಹುತೇಕರಿಗೆ ಅದರ ಪ್ರಾತ್ಯಕ್ಷಿಕೆ ಮತ್ತು ಅನುಭವ ಆಗಿರಲಿಕ್ಕಿಲ್ಲ.

ಒಂದು ಕಾಲದಲ್ಲಿ ಮೊಬೈಲ್‌ ಹೇಗೆ ಕೇವಲ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಲಭ್ಯವಿತ್ತೋ ಇವತ್ತು ಅದೇ ಪರಿಸ್ಥಿತಿ ಮಿಕ್ಸೆಡ್‌ ರಿಯಾಲಿಟಿಯದ್ದು. ಕೆಲವರಷ್ಟೇ ಅದರ ಅನುಭವ ಪಡೆಯುತ್ತಿದ್ದಾರೆ. ಜಿಯೋ ಫೈಬರ್‌ ಆ ಪರಿಸ್ಥಿತಿಯನ್ನು ಬದಲಿಸಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಜಿಯೋ ಫೈಬರ್‌ನ ವಿಶೇಷತೆ ಅಂದರೆ ಅದರ ಜೊತೆ ಮಿಕ್ಸೆಡ್‌ ರಿಯಾಲಿಟಿ ಉಪಕರಣವೊಂದು ದೊರೆಯುತ್ತಿರುವುದು. ಈ MR ಡಿವೈಸ್‌ ಬಳಸಿ ಮನೆಯಲ್ಲಿಯೇ ಕೂತು ಅಂಗಡಿಯಲ್ಲಿ ಶಾಪಿಂಗ್‌ ಮಾಡುವ ಅನುಭವ ಪಡೆಯಬಹುದು. ಮಕ್ಕಳಿಗೆ ವಿಜ್ಞಾನ, ಗಣಿತ ಮುಂತಾದ ವಿಷಯಗಳನ್ನು ಸುಲಭವಾಗಿ ಕಲಿಸಬಹುದು. ಈ MR ಉಪಕರಣ ತೊಟ್ಟುಕೊಂಡು ಮನೆಯಲ್ಲಿ ಕೂತು ಸಿನೆಮಾ ಮಂದಿರದ ಅನುಭವ ಪಡೆಯಬಹುದು.

ಪ್ಲ್ರಾನ್‌ ಪ್ಯಾಕೇಜ್‌
ಜಿಯೋ ಫೈಬರ್‌ನ ಪ್ಲ್ರಾನ್‌ಗಳು 700 ರುಪಾಯಿಯಿಂದ ಶುರುವಾಗಲಿದೆ. ಈ 700 ರುಪಾಯಿಗೇ ಅನ್‌ಲಿಮಿಟೆಡ್‌ ಇಂಟರ್ನೆಟ್‌ ಮತ್ತು ಕೇಬಲ್‌ ಸೇವೆ ದೊರೆಯುತ್ತದೆ. 10,000 ರು. ತನಕದ ಪ್ಲಾನ್‌ಗಳು ಜಿಯೋ ಫೈಬರ್‌ ಪ್ಯಾಕೇಜ್‌ಗಳಲ್ಲಿ ಇರಲಿವೆ. ಗ್ರಾಹಕರು ತಮಗೆ ಎಷ್ಟು ಇಂಟರ್ನೆಟ್‌ ಸ್ಪೀಡ್‌ ಬೇಕು? ತಿಂಗಳಿಗೆ ಡಾಟಾ ಬಳಕೆ ಎಷ್ಟು? ವಿಡಿಯೋ ಕಾನ್ಫರೆನ್ಸಿಂಗ್‌ ಮಾಡುತ್ತೀರಾ? ಗೇಮಿಂಗ್‌ ಸವಲತ್ತು ಹೇಗಿರಬೇಕು ಎಂಬಿತ್ಯಾದಿ ವಿಚಾರಗಳ ಆಧಾರದ ಮೇಲೆ ತಮಗೆ ತಕ್ಕ ಪ್ಲ್ರಾನ್‌ಗಳನ್ನು ಆರಿಸಿಕೊಳ್ಳಬಹುದು.

– ವಿಕ್ರಮ್‌ ಜೋಶಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ರೈತರಿಗೂ ಪೆನ್ಷನ್ ರೂಪದಲ್ಲಿ ಒಂದಷ್ಟು ಹಣ ಸಿಗುವಂತೆ ಮಾಡುವ ಅಪರೂಪದ ಯೊಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಇದರಿಂದ ರೈತರಿಗೆ ಏನೇನು ಉಪಯೋಗಗಳಿವೆ ಎಂಬುದರ...

  • ಪ್ರಗತಿಪರ ಕೃಷಿಕ ವೆಂಕಟೇಶಪ್ಪ ಅವರು ಅನುಸರಿಸುತ್ತಿರುವ "ಗುಣಿರಾಗಿ ಪದ್ಧತಿ'ಯಲ್ಲಿ ಬಹಳಷ್ಟು ವಿಶೇಷತೆ ಇದೆ. ಇದು ಮಣ್ಣು- ನೀರು ಸೂಕ್ತ ನಿರ್ವಹಣೆಗೆ ಸಹಾಯಕ ಎಂಬ...

  • ಪ್ಲಾಸ್ಟಿಕ್‌ ನಿಷೇಧ, ಪರಿಸರಕ್ಕೆ ವರದಾನ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಜನಸಾಮಾನ್ಯನಿಗಂತೂ ಇದರಿಂದ ಗೊಂದಲವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ....

  • ಮಳೆಗಾಲದಲ್ಲಿ ನೆಲೆ ಕಳೆದುಕೊಂಡ ಪ್ರಾಣಿಗಳು, ಹುಳ ಹುಪ್ಪಟೆಗಳು ಮನೆ ಹೊಕ್ಕಲು ಪ್ರಯತ್ನಿಸಬಹುದು. ಇವುಗಳಲ್ಲಿ ವಿಷಜಂತುಗಳೂ ಇರುವುದರಿಂದ, ನಾವು ವಿಶೇಷ ಕಾಳಜಿ...

  • ಕೆಲವು ಹೋಟೆಲ್‌ಗ‌ಳು ವಿಶೇಷ ತಿಂಡಿ, ಊಟದಿಂದ ವಿಶೇಷವಾಗಿ ಗುರುತಿಸಿಕೊಂಡಿರುತ್ತವೆ. ಆದರೆ, ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿರುವ "ಲಕ್ಷ್ಮೀ ಹೋಟೆಲ್‌'...

ಹೊಸ ಸೇರ್ಪಡೆ