ಉಲ್ಟಾ ಹೊಡೆವ ನೀರು!

Team Udayavani, Aug 26, 2019, 3:10 AM IST

ಮಳೆಗಾಲದಲ್ಲಿ ರಸ್ತೆಯಲ್ಲಿ ಮುಖ್ಯ ಕೊಳವೆ ಕಟ್ಟಿಕೊಂಡು, ಕೊಳಚೆ ನೀರು ಹಿಮ್ಮುಖವಾಗಿ ನುಗ್ಗಲು ತೊಡಗಿದರೆ, ಗಲೀಜು ನೀರಿನಿಂದ ಮನೆಯೆಲ್ಲ ಗಬ್ಬೆದ್ದು ಹೋಗುತ್ತದೆ. ಹಾಗಾಗಿ ನಾವು ಕೆಲ ಮುಂಜಾಗರೂಕತಾ ಕ್ರಮಗಳನ್ನು ತೆಗೆದು ಕೊಳ್ಳುವುದು ಉತ್ತಮ.

ಸಾಮಾನ್ಯವಾಗಿ ನೀರು- ಅದು ಕುಡಿಯುವ ನೀರಿರಲಿ ಅಥವಾ ತಾಜ್ಯ ನೀರಿರಲಿ, ಮೇಲಿನಿಂದ ಕೆಳಗೆ ಹರಿಯುತ್ತದೆ ಎಂದೇ ನಂಬಿರುತ್ತೇವೆ ಹಾಗೂ ನಮ್ಮ ಮನೆಗಳಲ್ಲಿ ಅನೇಕ ವ್ಯವಸ್ಥೆಗಳು ಈ ನಿಯಮದ ಆಧಾರದ ಮೇಲೆಯೇ ಕಾರ್ಯ ನಿರ್ವಹಿಸುತ್ತವೆ. ಆದರೆ ಕೆಲವೊಮ್ಮೆ ಪ್ರಕೃತಿ ನಿಯಮ ಮೀರಿದೆಯೇನೋ ಎನ್ನುವ ರೀತಿಯಲ್ಲಿ, ನೀರು ಹರಿದರೆ ನಮಗೆ ನಾನಾ ತೊಂದರೆಗಳು ತಪ್ಪಿದ್ದಲ್ಲ! ಅದರಲ್ಲೂ ಮಳೆಗಾಲದಲ್ಲಿ ರಸ್ತೆಯಲ್ಲಿ ಹರಿಯುವ ಮುಖ್ಯ ಕೊಳವೆ ಕಟ್ಟಿಕೊಂಡು, ಕೊಳಚೆ ನೀರು ಹಿಮ್ಮುಖವಾಗಿ ನುಗ್ಗಲು ತೊಡಗಿದರೆ, ಮನೆಯೆಲ್ಲ ಗಬ್ಬೆದ್ದು ಹೋಗುತ್ತದೆ. ಕುಡಿಯುವ ನೀರಿನ ಕೊಳಾಯಿ ಕೊಳದಪ್ಪಲೆಗಳಿಂದ ನೀರು ಹೀರುವುದು ಅಷ್ಟೇನೂ ಸಾಮಾನ್ಯ ಆಗಿರದಿದ್ದರೂ, ಕೆಲವೊಮ್ಮೆ ತುಂಬಿದ ಟ್ಯಾಂಕ್‌ ದಿಢೀರ್‌ ಎಂದು ಖಾಲಿ ಆಗುವುದೂ ಉಂಟು. ಹಾಗಾಗಿ ನಾವು ಕೆಲ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ.

“ಬ್ಯಾಕ್‌ ಫ್ಲೋ’- ಹಿಮ್ಮುಖ ಹರಿವು ಆಗುವುದೇಕೆ?: ನೀರು ಒಂದು ಬದಿಯಿಂದ ಇನ್ನೊಂದು ಬದಿಗೆ ಹರಿದುಹೋಗಲು ಸಾಕಷ್ಟು ಇಳಿಜಾರು ಇರಬೇಕಾದುದರ ಜೊತೆಗೆ, ಆ ಇನ್ನೊಂದು ಬದಿ ತೆರೆದುಕೊಂಡಿರಬೇಕು. ಮಳೆ ಹಾಗೂ ಇನ್ನಿತರ ಕಾರಣಗಳಿಂದಾಗಿ ಆ ಇನ್ನೊಂದು ಬದಿ ಮುಚ್ಚಿಕೊಂಡಿದ್ದರೆ, ಇಲ್ಲವೇ ಅಲ್ಲಿಂದಲೇ ಪ್ರವಾಹದಂತೆ ನೀರು ನುಗ್ಗುತ್ತಿದ್ದರೆ, ಮನೆಯ ನೀರು ಹೊರಹೋಗಲಾಗದೆ, ನಮ್ಮ ಟಾಯ್ಲೆಟ್‌ ಶೌಚಾಲಯಗಳಲ್ಲಿ ನೀರು ಉಕ್ಕತೊಡಗುತ್ತವೆ. ಮಳೆಗಾಲದಲ್ಲಿ ಹಿಮ್ಮುಖ ಹರಿವಿನ ತೊಂದರೆ ಹೆಚ್ಚಿದ್ದರೂ ಇತರೆ ಸಮಯದಲ್ಲೂ ಬ್ಯಾಕ್‌ ಫ್ಲೋ ಅಗಬಹುದು. ಸಾಮಾನ್ಯವಾಗಿ ರಸ್ತೆಯಲ್ಲಿ ಹರಿಯುವ ಸ್ಯಾನಿಟರಿ ಕೊಳವೆಗೆ ಸಂಪರ್ಕ ಕಲ್ಪಿಸುವ ಜಾಗದಲ್ಲಿ ಕಟ್ಟಿಕೊಂಡಿದ್ದರೆ, ನೀರು ಮುಂದೆ ಹರಿಯಲು ಸಾಧ್ಯವಾಗದೆ, ಹಿಂದಕ್ಕೆ ಹರಿಯಲು ತೊಡಗುತ್ತದೆ.

ತಡೆಯಲು ಉಪಾಯಗಳು: ಮನೆಗೆ ತ್ಯಾಜ್ಯ ನೀರು ಸಂಪರ್ಕ ಕಲ್ಪಿಸಲು ರಸ್ತೆಯಲ್ಲಿ ಹರಿಯುವ ಮುಖ್ಯ ಕೊಳವೆಯ ಮಟ್ಟವನ್ನು ಕೂಲಂಕಷವಾಗಿ ಪರಿಶೀಲಿಸಿ, ಅದರ ಇಳಿಜಾರು ಹೇಗಿದೆ? ಅದು ಸುಲಭದಲ್ಲಿ ಕಟ್ಟಿಕೊಳ್ಳುವ ಸಾಧ್ಯತೆ ಇದೆಯೇ? ಹಾಗೆ ಕಟ್ಟಿಕೊಳ್ಳಲು ಇರುವ ಕಾರಣಗಳೇನು ಇತ್ಯಾದಿಯನ್ನು ಪರಿಶೀಲಿಸಿ ನಮ್ಮ ಮನೆಯ ನೆಲಮಟ್ಟ- ಫ್ಲೋರ್‌ ಲೆವೆಲ್‌ಅನ್ನು ನಿರ್ಧರಿಸಬೇಕು. ಮನೆಯ ಪ್ಲಿಂತ್‌ ಮಟ್ಟವನ್ನು ಸಾಮಾನ್ಯವಾಗಿ ಒಂದೂವರೆ ಅಡಿಯಿಂದ ಎರಡು ಅಡಿಗಳ ಎತ್ತರದಲ್ಲಿ ಇರಿಸಲಾಗುತ್ತದೆ. ಹೀಗೆ ಮಾಡಲು ಮುಖ್ಯ ಕಾರಣ- ಮನೆಯ ತ್ಯಾಜ್ಯ ನೀರು, ಸುಲಭದಲ್ಲಿ ಹರಿದು ಹೋಗಲು ಹಾಗೂ ಹಿಮ್ಮುಖವಾಗಿ ಹರಿದರೂ ರಸ್ತೆಯ ಮ್ಯಾನ್‌ಹೋಲ್‌ನಲ್ಲಿ ತುಂಬಿ ಹರಿಯಬೇಕು, ಆದರೆ ಮನೆಯೊಳಗೆ ಹಿಮ್ಮುಖವಾಗಿ ಹರಿಯಬಾರದು ಎಂಬ ಕಾರಣಕ್ಕೆ.

ಹೀಗೆ ಆಗಬೇಕಾದರೆ, ಮನೆಯಿಂದ ಹೊರಹೋಗುವ ಕಡೆಯ ಸಂಪರ್ಕ- ಕಾಂಪೌಂಡ್‌ ಗೋಡೆಯ ಬಳಿ ಕಟ್ಟಲಾಗುವ ಇನ್‌ಸ್ಪೆಕ್ಷನ್‌ ಛೇಂಬರ್‌ಗಿಂತ ರಸ್ತೆಯಲ್ಲಿರುವ ಮ್ಯಾನ್‌ಹೋಲ್‌ ಕೆಳಮಟ್ಟದಲ್ಲಿ ಇರಬೇಕು. ಆದರೆ ಮ್ಯಾನ್‌ಹೋಲ್‌ಗ‌ಳು ಮನೆಯ ಮುಂದೆಯೇ ಇರುವುದಿಲ್ಲ ಹಾಗೂ ಕೆಲವೊಮ್ಮೆ ನಲವತ್ತು ಐವತ್ತು ಅಡಿ ದೂರದಲ್ಲಿ ಇರುತ್ತವೆ. ರಸ್ತೆ ಇಳಿಜಾರಾಗಿದ್ದರೆ, ನಮ್ಮ ಮನೆಗಿಂತ ಕೆಳಮಟ್ಟದಲ್ಲಿನ ಮ್ಯಾನ್‌ಹೋಲ್‌ ಕಟ್ಟಿಕೊಂಡಿದ್ದರೆ ಹಾಗೂ ಇನ್ನೊಂದು ಮ್ಯಾನ್‌ಹೋಲ್‌ ನಮ್ಮ ಮನೆಗಿಂತ ಮೇಲಿನ ಮಟ್ಟದಲ್ಲಿದ್ದರೆ, ಆಗ ಈ ಮೇಲು ಮಟ್ಟದ ಮ್ಯಾನ್‌ಹೋಲ್‌ನಲ್ಲಿ ತ್ಯಾಜ್ಯ ನೀರು ಹರಿದು ರಸ್ತೆಗೆ ಹೋಗುವ ಮೊದಲೇ ನಮ್ಮ ಮನೆಯಲ್ಲಿ ಬ್ಯಾಕ್‌ ಫ್ಲೋ ಆಗಿಬಿಡುತ್ತದೆ!

ಪ್ಲಿಂತ್‌ ಮಟ್ಟ ಎಷ್ಟಿರಬೇಕು?: ಮನೆಗಳಿಗೆ ಸಾಮಾನ್ಯವಾಗಿ ಎರಡು ಮೂರು ಮೆಟ್ಟಿಲುಗಳನ್ನು ಇಡಲಾಗುತ್ತದೆ. ಇದಕ್ಕೂ ಹೆಚ್ಚಿದ್ದರೆ, ಅದು ಅಷ್ಟೇನೂ ಅನುಕೂಲಕರವಾಗಿರುವುದಿಲ್ಲ. ರಸ್ತೆ ಇಳಿಜಾರಿದ್ದು, ಮ್ಯಾನ್‌ಹೋಲ್‌ಗ‌ಳು ಸೂಕ್ತ ರೀತಿಯಲ್ಲಿ ನಿರ್ಮಿಸಲಾಗಿದ್ದರೆ, ನಮ್ಮ ಮನೆಯಲ್ಲಿ ಬ್ಯಾಕ್‌ ಫ್ಲೋ ಆಗುವುದಕ್ಕಿಂತ ಮುಂಚೆ ರಸ್ತೆಯಲ್ಲೇ ಹರಿದು ಹೋಗುತ್ತದೆ ಎಂಬ ಖಾತರಿ ಇದ್ದರೆ, ನಾವು ಸುಮಾರು ಒಂದೂವರೆ ಅಡಿ ಎತ್ತರದಲ್ಲಿ ನಮ್ಮ ಮನೆಯ ನೆಲವನ್ನು ಅಂದರೆ ಫ್ಲೋರಿಂಗ್‌ ಮಟ್ಟವನ್ನು ಹಾಕಿಕೊಳ್ಳಬಹುದು.

ಆದರೆ ಮ್ಯಾನ್‌ಹೋಲ್‌ ಗಳ ನಿಯೋಜನೆ ಸರಿಯಿಲ್ಲದೆ, ಅಲ್ಲಿ ಕಟ್ಟಿಕೊಂಡರೆ, ನಮ್ಮ ಮನೆಯಲ್ಲಿ ಹಿಮ್ಮುಖವಾಗಿ ಹರಿಯುವ ಸಾಧ್ಯತೆ ಇದೆ ಎಂದಾದರೆ, ಆಗ ಅನಿವಾರ್ಯವಾಗಿ ಹೆಚ್ಚು ಎತ್ತರದ ಪ್ಲಿಂತ್‌ ಹಾಕಿಕೊಳ್ಳಬೇಕು. ಕೆಲವೊಂದು ಸ್ಥಳಗಳಲ್ಲಿ ಮೂರು ಅಡಿ ನಾಲ್ಕು ಅಡಿ ಎತ್ತರದ ಪ್ಲಿಂತ್‌ಗಳನ್ನೂ ಹಾಕಬೇಕಾಗುತ್ತದೆ. ಆದರೆ ಇದು ದುಬಾರಿಯಾದ ಕಾರಣ, ನಾವು ಹಾಕಲೇಬೇಕಾದ ಪರಿಸ್ಥಿತಿಯಲ್ಲಿ ಮಾತ್ರ, ಪ್ರತಿನಿತ್ಯ ನಾಲ್ಕಾರು ಮೆಟ್ಟಿಲುಗಳನ್ನು ಹತ್ತಿದರೂ ಪರವಾಗಿಲ್ಲ, “ಬ್ಯಾಕ್‌ ಫ್ಲೋ’ ಮಾತ್ರ ಬೇಡ ಎಂದಾದರೆ ಆಗ ಎತ್ತರದ ಪ್ಲಿಂತ್‌ ಹಾಕಿಕೊಳ್ಳಬಹುದು. ಇಂಥಾ ತೊಂದರೆಗಳ ಬಗ್ಗೆ ಮನೆ ಕಟ್ಟುವಾಗಲೇ ತಿಳಿದಿದ್ದರೆ, ಮುಂಚಿತವಾಗಿ ಸೂಕ್ತ ತಯಾರಿ ಮಾಡಿಕೊಳ್ಳಬಹುದು!

ಕಂಬಗಳ ಮೇಲೆ ಮನೆ: ಎಲ್ಲೆಲ್ಲೂ ನೀರೋ ನೀರು ಎಂಬಂಥ ಸಂದರ್ಭದಲ್ಲಿ ನೀರು ಹಿಮ್ಮುಖವಾಗಿ ಹರಿಯುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ನಾವು ಮನೆ ಕಟ್ಟುವಾಗ, ಅಕ್ಕಪಕ್ಕದವರನ್ನು ವಿಚಾರಿಸಿ, ನಾಲ್ಕಾರು ವರ್ಷಗಳಲ್ಲಿ ಅತಿ ಹೆಚ್ಚು ಮಳೆ ಬಂದಾಗ, ನೀರಿನ ಮಟ್ಟ ಎಷ್ಟಿತ್ತು? ಹಾಗೂ ಅದರಿಂದ ಆದ ಇತರೆ ತೊಂದರೆಗಳೇನು? ಎಂದು ಪರಿಶೀಲಿಸಿ ಮನೆಯ ಮಟ್ಟವನ್ನು ನಿರ್ಧರಿಸಬೇಕಾಗುತ್ತದೆ. ಪ್ರವಾಹದ ಮಟ್ಟ ಪ್ರತಿವರ್ಷವೂ ನಾಲ್ಕಾರು ಅಡಿಗಳಷ್ಟು ಇರುತ್ತದೆ ಎಂದಾದರೆ, ಆಗ ಅನಿವಾರ್ಯವಾಗಿ “ಸ್ಟಿಲ್ಟ್ ಫ್ಲೋರ್‌’ ಅಂದರೆ, ಮನೆಯನ್ನು ಕಂಬಗಳ ಮೇಲೆ ಆಳೆತ್ತರಕ್ಕೆ ಎತ್ತಿ, ಎಷ್ಟೇ ಜೋರಾಗಿ ಮಳೆ ಬಂದರೂ ನಮ್ಮ ಮನೆಗೆ ನುಗ್ಗುವುದಿಲ್ಲ ಎನ್ನುವಂತೆ ವಿನ್ಯಾಸ ಮಾಡಬೇಕಾಗುತ್ತದೆ. ಇದೂ ಕೂಡ ದುಬಾರಿ ಸಂಗತಿಯೇ ಆದರೂ, ಕೆಳಗಡೆ ಬೇಕಾದರೆ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಬಹುದು. ಆದರೆ ಒಮ್ಮೆ ಈ ವಾಹನಗಳು ಮುಳುಗಿದಾಗ, ಆಗುವ ಹಾನಿಯನ್ನು ಮೆಕಾನಿಕ್‌ಗಳಿಂದ ರಿಪೇರಿ ಮಾಡಿಸಿಕೊಳ್ಳಲು ತಯಾರಿರಬೇಕು!

ಹಿಂದಕ್ಕೆ ತಿರುಗಿಕೊಳ್ಳುತ್ತೆ!: ನಾವು ಎಲ್ಲೋ ಸ್ವಲ್ಪ ಕಟ್ಟಿಕೊಂಡಿರಬೇಕು ಎಂದು ಬಕೆಟ್‌ ನೀರನ್ನು ಜೋರಾಗಿ ಹುಯ್ದರೆ, ಅದು ಅಷ್ಟೇ ವೇಗವಾಗಿ ಹಿಂದಕ್ಕೆ ಬಂದು ಆಘಾತವನ್ನು ಉಂಟುಮಾಡುತ್ತದೆ. ನೀರಿಗೆ ಹರಿದು ಹೋಗಲು ಆಸ್ಪದವಿದ್ದರೆ ಎಷ್ಟು ಸರಾಗವಾಗಿ ಹರಿದು ಹೋಗುತ್ತದೋ ಅಷ್ಟೇ ಸುಲಭದಲ್ಲಿ, ಹರಿದುಹೋಗಲು ಆಗದಿದ್ದರೆ ಉಲ್ಟಾ ತಿರುಗುವುದೂ ಇದ್ದದ್ದೇ! ಇನ್ನು ಮನುಷ್ಯರೇ ಮುಳುಗಿ ಹೋಗುವ ಮ್ಯಾನ್‌ಹೋಲ್‌ ಗುಂಡಿ ತುಂಬಿಕೊಂಡರಂತೂ, ನಮ್ಮ ಮನೆಗಳಲ್ಲಿ ಬ್ಯಾಕ್‌ ಫ್ಲೋ ಆಗುವುದು ಖಾತರಿ. ರಸ್ತೆಯಲ್ಲಿ ಒಂದೆರಡು ಅಡಿ ನೀರು ನಿಂತರಂತೂ ಮನೆಯೊಳಗೆ ಎಲ್ಲ ಥರದ ನೀರೂ ಪ್ರವೇಶ ಪಡೆಯುತ್ತದೆ.

ಮಾಹಿತಿಗೆ: 984411 32826

* ಆರ್ಕಿಟೆಕ್ಟ್ ಕೆ. ಜಯರಾಮ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ರೈತರಿಗೂ ಪೆನ್ಷನ್ ರೂಪದಲ್ಲಿ ಒಂದಷ್ಟು ಹಣ ಸಿಗುವಂತೆ ಮಾಡುವ ಅಪರೂಪದ ಯೊಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಇದರಿಂದ ರೈತರಿಗೆ ಏನೇನು ಉಪಯೋಗಗಳಿವೆ ಎಂಬುದರ...

  • ಪ್ರಗತಿಪರ ಕೃಷಿಕ ವೆಂಕಟೇಶಪ್ಪ ಅವರು ಅನುಸರಿಸುತ್ತಿರುವ "ಗುಣಿರಾಗಿ ಪದ್ಧತಿ'ಯಲ್ಲಿ ಬಹಳಷ್ಟು ವಿಶೇಷತೆ ಇದೆ. ಇದು ಮಣ್ಣು- ನೀರು ಸೂಕ್ತ ನಿರ್ವಹಣೆಗೆ ಸಹಾಯಕ ಎಂಬ...

  • ಪ್ಲಾಸ್ಟಿಕ್‌ ನಿಷೇಧ, ಪರಿಸರಕ್ಕೆ ವರದಾನ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಜನಸಾಮಾನ್ಯನಿಗಂತೂ ಇದರಿಂದ ಗೊಂದಲವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ....

  • ಮಳೆಗಾಲದಲ್ಲಿ ನೆಲೆ ಕಳೆದುಕೊಂಡ ಪ್ರಾಣಿಗಳು, ಹುಳ ಹುಪ್ಪಟೆಗಳು ಮನೆ ಹೊಕ್ಕಲು ಪ್ರಯತ್ನಿಸಬಹುದು. ಇವುಗಳಲ್ಲಿ ವಿಷಜಂತುಗಳೂ ಇರುವುದರಿಂದ, ನಾವು ವಿಶೇಷ ಕಾಳಜಿ...

  • ಕೆಲವು ಹೋಟೆಲ್‌ಗ‌ಳು ವಿಶೇಷ ತಿಂಡಿ, ಊಟದಿಂದ ವಿಶೇಷವಾಗಿ ಗುರುತಿಸಿಕೊಂಡಿರುತ್ತವೆ. ಆದರೆ, ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿರುವ "ಲಕ್ಷ್ಮೀ ಹೋಟೆಲ್‌'...

ಹೊಸ ಸೇರ್ಪಡೆ