ನೋಟ್‌ದಾಗೆ ನಗೆಯ ಮೀಟಿ…ಶಿಯೋಮಿ ರೆಡ್‌ಮಿ ನೋಟ್‌ 8

Team Udayavani, Nov 11, 2019, 5:45 AM IST

64 ಜಿಬಿ ಆಂತರಿಕ ಸಂಗ್ರಹ, 4 ಜಿಬಿ ರ್ಯಾಮ್‌, ಹೆಚ್ಚಿನ ಮೆಗಾಪಿಕ್ಸೆಲ್‌ ಕ್ಯಾಮರಾ, ವೇಗದ ಟೈಪ್‌ ಸಿ ಚಾರ್ಜರ್‌, ಎರಡು ದಿನ ಬಾಳಿಕೆ ಬರುವ ಬ್ಯಾಟರಿ, ಗಾಜಿನ ದೇಹ ಇತ್ಯಾದಿ ಎಲ್ಲ ಸವಲತ್ತುಗಳು 10 ಸಾವಿರದೊಳಗಿನ ಫೋನ್‌ನಲ್ಲಿ ಸಿಗುವಂತಿದ್ದರೆ… ಎಂದು ಅನೇಕರಿಗೆ ಅನ್ನಿಸಿರಬಹುದು. ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಒಡ್ಡುವಲ್ಲಿ ಮುಂದಿರುವ ಶಿಯೋಮಿ ಅಂಥದ್ದೊಂದು ಫೋನಾದ “ರೆಡ್‌ಮಿ ನೋಟ್‌ 8’ಅನ್ನು ಇದೀಗ ಭಾರತದಲ್ಲಿ ಬಿಡುಗಡೆ ಮಾಡಿದೆ.

ವರ್ಷದ ಹಿಂದೆ, 4 ಜಿಬಿ ರ್ಯಾಮ್‌ ಮತ್ತು 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯದ ಮೊಬೈಲ್‌ ಫೋನ್‌ ಕೊಳ್ಳಬೇಕೆಂದರೆ 12 ಸಾವಿರದಿಂದ 15 ಸಾವಿರ ರೂ. ಕೊಡಬೇಕಾಗಿತ್ತು. ಈಗಲೂ ಅನೇಕ ಬ್ರಾಂಡ್‌ಗಳಲ್ಲಿ ಈ ಫೀಚರ್‌ಗಳ ಮೊಬೈಲ್‌ ಫೋನ್‌ಗಳಿಗೆ ಇದೇ ದರ ಇದೆ. ಮಾರುಕಟ್ಟೆಯಲ್ಲಿ ಪೈಪೋಟಿ ನೀಡುವುದಕ್ಕೇ ಹೆಸರಾದ ಶಿಯೋಮಿ 10 ಸಾವಿರ ರೂ.ಗಳೊಳಗೆ 4 ಜಿಬಿ ರ್ಯಾಮ್‌ ಮತ್ತು 64 ಜಿಬಿ ಆಂತರಿಕ ಸಂಗ್ರಹವುಳ್ಳ ಹೊಸ ಮೊಬೈಲ್‌ ಫೋನ್‌ ಅನ್ನು ಇದೀಗ ಬಿಡುಗಡೆ ಮಾಡಿದೆ. ಮಾತ್ರವಲ್ಲ ಈ ದರಕ್ಕೆ, ಪ್ರೊಸೆಸರ್‌ ತಯಾರಿಕೆಯಲ್ಲಿ ಅಗ್ರಗಣ್ಯವಾದ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ ಅನ್ನು ಸಹ ಅಳವಡಿಸಲಾಗಿದೆ. ಇದಿಷ್ಟೇ ಅಲ್ಲ, 10 ಸಾವಿರ ರೂ. ಒಳಗೆ ಬೇರೆ ಕಂಪೆನಿಗಳು ನೀಡಿರುವುದಕ್ಕಿಂತ ಹೆಚ್ಚಿನ ಸವಲತ್ತುಗಳನ್ನು ರೆಡ್‌ಮಿ ನೋಟ್‌ 8 ಒಳಗೊಂಡಿದೆ.

ಪರದೆಯ ಹಿಂದೇನಿದೆ?
ಇದು 6.3 ಇಂಚಿನ ಫ‌ುಲ್‌ ಹೈ ಡೆಫಿನಿಷನ್‌ ಪ್ಲಸ್‌ (2280×1080) ಐಪಿಎಸ್‌ ಡಿಸ್‌ಪ್ಲೇ ಹೊಂದಿದೆ. 403 ಪಿಪಿಐ ಇದೆ. ಶೇ.90ರಷ್ಟು ಪರದೆ ಮತ್ತು ದೇಹದ ಅನುಪಾತವಿದೆ. ನೀರಿನ ಹನಿ ಜಾರುವಂಥ ವಿನ್ಯಾಸವನ್ನು ಪರದೆಯ ಮೇಲ್ಭಾಗದಲ್ಲಿ (ಮುಂದಿನ ಕ್ಯಾಮೆರಾ ಲೆನ್ಸ್‌ ಇರಿಸಲು) ನೀಡಲಾಗಿದೆ. ಪರದೆ ನೋಡಿದರೆ ಕಣ್ಣಿಗೆ ಅಪಾಯಕಾರಿಯಾಗದಂತೆ “ಟಿಯುವಿ ರೇನ್‌ಲಾÂಂಡ್‌’ ಪ್ರಮಾಣೀಕೃತ ಲೇಪನವನ್ನು ಪರದೆಗೆ ನೀಡಲಾಗಿದೆ. ಓದುವಾಗ ನೀಲಿ ಬೆಳಕಿನಿಂದ ಕಣ್ಣಿಗೆ ಆಗುವ ಆಯಾಸವನ್ನು ತಪ್ಪಿಸುತ್ತದೆ ಎನ್ನುವುದನ್ನು ಈ ಸರ್ಟಿಫಿಕೇಷನ್‌ ಖಾತರಿಪಡಿಸುತ್ತದೆ. ನೀಡಲಾಗುತ್ತದೆ.

ಗಾಜಿನ ದೇಹ
ಅಚ್ಚರಿಯೆಂದರೆ ಈ ದರಕ್ಕೆ ಗಾಜಿನ ದೇಹವನ್ನೂ ನೀಡಲಾಗಿದೆ. ಸಾಮಾನ್ಯವಾಗಿ 10 ಸಾವಿರಕ್ಕೆ ಅನೇಕ ಬ್ರಾಂಡ್‌ಗಳು ಪ್ಲಾಸ್ಟಿಕ್‌ ಬಾಡಿ ನೀಡುತ್ತವೆ. ರಿಯಲ್‌ ಮಿಯಲ್ಲಿ 17 ಸಾವಿರದ ಮೊಬೈಲ್‌ಗ‌ೂ ಪ್ಲಾಸ್ಟಿಕ್‌ ಬಾಡಿಯನ್ನೇ ಕೊಡಲಾಗುತ್ತಿದೆ. ಹೀಗಿರುವಾಗ ರೆಡ್‌ಮಿ 8ನಲ್ಲಿ 2.5 ಡೈಮೆನ್‌ಷನ್‌ ಗಾಜಿನ ದೇಹ ನೀಡಲಾಗಿದೆ. ಮಾತ್ರವಲ್ಲ, ಇದರ ಪರದೆ ಮತ್ತು ದೇಹದ ಗಾಜಿನ ಹಿಂಬದಿಗೆ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 5 ಸಹ ನೀಡಲಾಗಿದೆ. ಇದು ಫೋನ್‌ ಕೈ ಜಾರಿ ಬಿದ್ದಾಗ ಪರದೆಯನ್ನು ರಕ್ಷಿಸುತ್ತದೆ. ತುಂತುರು ಮಳೆ ಬಿದ್ದಾಗ ಫೋನಿನೊಳಗೆ ನೀರು ಸೇರದಂತೆ ಪಿ2ಐ ರಕ್ಷಣೆಯನ್ನೂ ಸಹ ಹೊಂದಿದೆ.

ಬ್ಯಾಟರಿ ಪವರ್‌
ಈ ಮೊಬೈಲಿನಲ್ಲಿ 4000 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಇದಿಷ್ಟೇ ಅಲ್ಲ ಇದಕ್ಕೆ ಟೈಪ್‌ ಸಿ ಪೋರ್ಟ್‌ನ ವೇಗದ ಚಾರ್ಜಿಂಗ್‌ ಸವಲತ್ತು ನೀಡಲಾಗಿದೆ! ಶಿಯೋಮಿಯವರು ಧಾರಾಳ ಮನಸ್ಸು ಮಾಡಿ ಇದರಲ್ಲಿ ವೇಗದ 18 ವ್ಯಾಟ್ಸ್‌ ಚಾರ್ಜರ್‌ ಅನ್ನು ಬಾಕ್ಸ್‌ನಲ್ಲೇ ನೀಡಿರುವುದು ವಿಶೇಷ!

ಎರಡು ಸಿಮ್‌ ಕಾರ್ಡ್‌ ಜೊತೆಗೆ 512 ಜಿಬಿವರೆಗೂ ಮೆಮೊರಿ ಕಾರ್ಡನ್ನೂ ಇದರಲ್ಲಿ ಹಾಕಿಕೊಳ್ಳಬಹುದು. 9,999 ರೂ.ಗೆ 4 ಜಿಬಿ ರ್ಯಾಮ್‌ ಮತ್ತು 64 ಜಿಬಿ ಆಂತರಿಕ ಸಂಗ್ರಹ ಆವೃತ್ತಿ ದೊರಕುತ್ತದೆ. 12,999 ರೂ.ಗಳಿಗೆ 6 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹ ಇರುವ ಆವೃತ್ತಿ ಲಭ್ಯವಾಗುತ್ತದೆ. ಕಪ್ಪು, ನೀಲಿ ಮತ್ತು ಬಿಳಿ ಬಣ್ಣದಲ್ಲಿ ಈ ಫೋನ್‌ ದೊರಕುತ್ತದೆ.

ಮಿ.ಕಾಮ್‌ ಮತ್ತು ಅಮೆಜಾನ್‌.ಇನ್‌ ನಲ್ಲಿ ಮಿ ಸ್ಟೋರ್‌ಗಳಲ್ಲಿ ಲಭ್ಯ.

ಸ್ನಾಪ್‌ಡ್ರಾಗನ್‌ 665 ಪ್ರೊಸೆಸರ್‌
ಆರಂಭಿಕ ದರದ ಫೋನಿನ ದರಕ್ಕೆ ಮಧ್ಯಮ ದರ್ಜೆಯ ಫೋನಿನ ವಿಶೇಷಣಗಳನ್ನು ಈ ಫೋನ್‌ ಹೊಂದಿರುವುದಕ್ಕೆ ಇನ್ನೊಂದು ನಿದರ್ಶನ. ಇದರಲ್ಲಿರುವುದು ಸ್ನಾಪ್‌ಡ್ರಾಗನ್‌ 665 ಪ್ರೊಸೆಸರ್‌. ಇದರಿಂದಾಗಿ ಫೋನು ವೇಗವಾಗಿ ಕೆಲಸ ನಿರ್ವಹಿಸುತ್ತದೆ. ಗೇಮ್‌ಗಳನ್ನು ಸಲೀಸಾಗಿ ಆಡಲು ಸಹಕಾರಿಯಾಗಿದೆ.

48 ಮೆಗಾಪಿಕ್ಸಲ್‌ ಕ್ಯಾಮರಾ!
ಸ್ಪರ್ಧೆಯಲ್ಲಿ ಪೈಪೋಟಿ ನೀಡುವ ಶಿಯೋಮಿ, ರೆಡ್‌ಮಿ ನೋಟ್‌ 8 ಫೋನಿನಲ್ಲಿ 10 ಸಾವಿರದೊಳಗೆ 48 ಮೆಗಾಪಿಕ್ಸಲ್‌ (ಮೆ.ಪಿ.) ಹಿಂಬದಿ ಕ್ಯಾಮರಾ ನೀಡಿದೆ. ಮಾತ್ರವಲ್ಲ ಒಟ್ಟು ನಾಲ್ಕು ಲೆನ್ಸ್‌ಗಳನ್ನು ಹೊಂದಿದೆ! (48 ಮೆಪಿ ಪ್ರಾಥಮಿಕ ಕ್ಯಾಮರಾ, 8 ಮೆಪಿ ವಿಶಾಲ ಕೋನದ ಲೆನ್ಸ್‌, 2 ಮೆಪಿ ಸೂಕ್ಷ್ಮ ಲೆನ್ಸ್‌, 2 ಮೆಪಿ ಡೆಪ್ತ್ ಸೆನ್ಸರ್‌) ಮುಂಬದಿ 13 ಮೆ.ಪಿ. ಕ್ಯಾಮರಾ ಇದೆ. 4 ಕೆ ವಿಡಿಯೋ ರೆಕಾರ್ಡಿಂಗ್‌ ಸಾಮರ್ಥ್ಯ ಕೂಡ ನೀಡಲಾಗಿದೆ.

ಕೆ.ಎಸ್‌. ಬನಶಂಕರ ಆರಾಧ್ಯ


ಈ ವಿಭಾಗದಿಂದ ಇನ್ನಷ್ಟು

  • ನಮ್ಮಲ್ಲಿ ಸೀಸನಲ್‌ ಹಣ್ಣುಗಳಿರುವಂತೆಯೇ ವೃತ್ತಿಗಳಲ್ಲಿ ಸೀಸನಲ್‌ ವೃತ್ತಿಗಳಿವೆ. ಅವುಗಳಲ್ಲಿ ಒಂದು ಅಡಕೆ ಕೊನೆ (ಗೊನೆ) ಕೀಳುವ "ಕೊನೆಗಾರ'ನದ್ದು. ಅಡಕೆ ಕೊಯ್ಲು...

  • ಏರ್‌ಟೆಲ್‌ ಮತ್ತು ವೊಡಾಫೋನ್‌ ಮೊಬೈಲ್‌ ಕಂಪನಿಗಳು ಡಿಸೆಂಬರ್‌ ಮೊದಲ ವಾರದಿಂದ ತಮ್ಮ ಮೊಬೈಲ್‌ ಶುಲ್ಕವನ್ನು ಹೆಚ್ಚಿಸಲಿವೆ ಎಂಬುದು ಸದ್ಯದ ಸುದ್ದಿ. ಜಿಯೋ...

  • ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ "ಘಮ್‌' ಎನ್ನುವ ಸುವಾಸನೆಗೆ ಕಾರಣ. ಇದನ್ನು ಅಡುಗೆ ಮನೆಯಲ್ಲಿ ಮಾತ್ರವೇ ಅಲ್ಲದೆ, ಆಯುರ್ವೇದ ಔಷಧಗಳ ತಯಾರಿಕೆಗೂ...

  • ದೇಗುಲ ನಿರ್ಮಾಣಕ್ಕೆ ಒಂದು ಶಾಸ್ತ್ರವಿದೆ. ಇದರಂತೆ, ಕೆರೆಯ ಸ್ಥಳದ ಆಯ್ಕೆಗೂ ಇಂಥದ್ದೊಂದು ಪರಿಕಲ್ಪನೆ ಇದೆ. ರಾಜ್ಯದ ಕೆರೆಗಳನ್ನು ಸುತ್ತಿದರೆ ಬಂಡೆ ಬೆಟ್ಟದ...

  • ಮಲೆನಾಡು, ಕರಾವಳಿ ಭಾಗದ ಮನೆಗಳಲ್ಲಿ ಮಾಡುವ ಊಟಕ್ಕೆ ಅದರದ್ದೇ ಆದ ವಿಶೇಷ ಇದೆ. ಅದರಲ್ಲೂ ಹವ್ಯಕ ಬ್ರಾಹ್ಮಣರ ಮನೆಯ ಊಟ ಅಂದ್ರೆ ಕೇಳಬೇಕಾ?, ಅಕ್ಕಿರೊಟ್ಟಿ, ಚಪಾತಿ,...

ಹೊಸ ಸೇರ್ಪಡೆ