ಸಕ್ಕರೆಗೆ ಮುತ್ತಿಕೊಳ್ಳುವ ರಾಜಕಾರಣ

Team Udayavani, Jun 17, 2019, 5:00 AM IST

ಭಾರತದ ಕಬ್ಬಿನ ಕೃಷಿಕರದ್ದು ಕಣ್ಣೀರಿನ ಕತೆ. ಕಬ್ಬು ಬೆಳೆಯಲು ನಮ್ಮ ರೈತರಿಗೆ ಪ್ರೋತ್ಸಾಹ ನೀಡುವ ರಾಜಕಾರಣಿಗಳು ಅವರ ಹಿತ ಕಾಯುತ್ತಿಲ್ಲ. ಹಾಗಾಗಿ, ಕಬ್ಬು ಬೆಳೆಗಾರರದ್ದು ಬವಣೆಯ ಬದುಕಾಗಿದೆ…

ಭಾರತದಲ್ಲಿ ಆರ್ಥಿಕತೆ, ನೀರಿನ ಲಭ್ಯತೆ ಮತ್ತು ರಾಜಕೀಯ ಚದುರಂಗ- ಇವು ಮೂರರ ಮೇಲೆ ಪರಿಣಾಮ ಬೀರುವ ಒಂದೇ ಒಂದು ಬೆಳೆ ಕಬ್ಬು. ಕಬ್ಬಿನ ಕೃಷಿಗೆ ನಮ್ಮ ದೇಶದಲ್ಲಿ 2,000 ವರುಷಗಳ ಇತಿಹಾಸ. ಜಗತ್ತಿನಲ್ಲಿ ಮೊಟ್ಟಮೊದಲಾಗಿ ಕಬ್ಬು ಬೆಳೆದ ಮತ್ತು ಸಕ್ಕರೆ ತಯಾರಿಸಿದ ದೇಶ ನಮ್ಮದು. ಈಗಂತೂ, ಬ್ರೆಜಿಲ್‌ನ ನಂತರ ಅತ್ಯಧಿಕ ಸಕ್ಕರೆ ಉತ್ಪಾದಿಸುವ ದೇಶ ಎಂಬ ಹೆಗ್ಗಳಿಕೆ ನಮ್ಮದು.

ಬ್ರೆಜಿಲ್‌ ಉತ್ಪಾದಿಸುವ ಸಕ್ಕರೆಯ ಬಹುಪಾಲು ರಫ್ತಾಗುತ್ತದೆ. ಇಥನಾಲ್‌ ಇಂಧನ ಲಾಬಿ ಅಲ್ಲಿ ಕಬ್ಬು ಕೃಷಿ ಮತ್ತು ಸಕ್ಕರೆ ಉತ್ಪಾದನೆಯ ಬೆಂಬಲಕ್ಕಿದೆ. ಆದರೆ, ಭಾರತದ ಕಬ್ಬಿನ ಕೃಷಿಕರದ್ದು ಕಣ್ಣೀರಿನ ಕತೆ. ಕಬ್ಬು ಬೆಳೆಯಲು ನಮ್ಮ ರೈತರಿಗೆ ಪ್ರೋತ್ಸಾಹ ನೀಡುವ ರಾಜಕಾರಣಿಗಳು ಅವರ ಹಿತ ಕಾಯುತ್ತಿಲ್ಲ. ಹಾಗಾಗಿ, ಕಬ್ಬು ಬೆಳೆಗಾರರದ್ದು ಬವಣೆಯ ಬದುಕಾಗಿದೆ. ಯಾಕೆಂದರೆ, ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಪಾವತಿಸಲು ಬಾಕಿ ಮಾಡಿರುವ ಹಣ 24,000 ಕೋಟಿ ರೂಪಾಯಿ.

ಹಾಗಾಗಿಯೇ, ಹಲವು ಕಬ್ಬು ಬೆಳೆಗಾರರು ಕಬ್ಬನ್ನು ರಸ್ತೆಯಲ್ಲಿ ಎಸೆಯುತ್ತಿದ್ದಾರೆ ಅಥವಾ ಬೆಂಕಿಯಲ್ಲಿ ಸುಡುತ್ತಿದ್ದಾರೆ. ಅದು ಅವರ ಪ್ರತಿಭಟನೆಯ ವಿಧಾನ. ಸಕ್ಕರೆ ಉದ್ಯಮವನ್ನು ಅವಲಂಬಿಸಿದ ರೈತರ ಸಂಖ್ಯೆ 50 ದಶಲಕ್ಷ ಹಾಗೂ ಕಾರ್ಮಿಕರ ಸಂಖ್ಯೆ ಎರಡು ದಶಲಕ್ಷ.

ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಕರ್ನಾಟಕ- ಈ ಮೂರು ರಾಜ್ಯಗಳು ಒಟ್ಟಾಗಿ ಉತ್ಪಾದಿಸುವುದು ಭಾರತದ ಒಟ್ಟು ಸಕ್ಕರೆ ಉತ್ಪಾದನೆಯ ಶೇ.81ರಷ್ಟು. ಈಗ ಪುನಃ ಸಕ್ಕರೆ ಉದ್ಯಮದ ಬಿಕ್ಕಟ್ಟಿನಲ್ಲಿ ಕೇಂದ್ರ ಮತ್ತು ಈ ರಾಜ್ಯ ಸರಕಾರಗಳು ಮಧ್ಯಪ್ರವೇಶ ಮಾಡಲಿವೆ. ಯಾಕೆಂದರೆ, ಈ ಮೂರು ರಾಜ್ಯಗಳು 158 ಸದಸ್ಯರನ್ನು ಮೇ 2019ರ ಮಹಾಚುನಾವಣೆಯಲ್ಲಿ ಲೋಕಸಭೆಗೆ ಚುನಾಯಿಸಿ ಕಳಿಸಿವೆ. ಮಾತ್ರವಲ್ಲ, ಈ ರಾಜ್ಯಗಳ ಲೋಕಸಭಾ ಸದಸ್ಯರು ಸಕ್ಕರೆ ಲಾಬಿ ಜೊತೆ ಕೈಜೋಡಿಸಿದವರು. 183 ಸಕ್ಕರೆ ಕಾರ್ಖಾನೆಗಳ ಬಗ್ಗೆ ಲಭ್ಯವಿರುವ ಮಾಹಿತಿಯನ್ನು ಗಮನಿಸಿದಾಗ ತಿಳಿದು ಬರುವ ಒಂದು ಸಂಗತಿ- 1993ರಿಂದ 2005ರ ವರೆಗೆ, ಈ ಕಾರ್ಖಾನೆಗಳ 101 ಚೇರ್ಮನ್ನರು ರಾಜ್ಯ ಅಥವಾ ಕೇಂದ್ರ ಚುನಾವಣೆಗಳಲ್ಲಿ ಸ್ಪರ್ಧಿಸಿ¨ªಾರೆ.

ಸಕ್ಕರೆ ಉದ್ಯಮ ಮತ್ತು ಸರಕಾರಗಳ ನಡುವಿನ ಅನಾರೋಗ್ಯಕರ ಸಂಬಂಧದ ಪರಿಣಾಮವಾಗಿ ಅನೇಕ ನೋಟಿಫಿಕೇಷನುಗಳು ಮತ್ತು ಕಾಯಿದೆಗಳು ಜಾರಿಯಾಗಿವೆ. ಸರಕಾರಗಳು ಏನು ಮಾಡುತ್ತವೆ? ಕಬ್ಬಿನ ಮತ್ತು ಸಕ್ಕರೆಯ ಬೆಲೆಯನ್ನು ನಿರ್ಧರಿಸುತ್ತವೆ. ಚುನಾವಣೆಗಳು ಮತ್ತು ಕಬ್ಬಿನ ಕೃಷಿಕರು ಹಾಗೂ ಸಕ್ಕರೆ ಉದ್ಯಮವನ್ನು ಆರ್ಥಿಕವಾಗಿ ಬೆಂಬಲಿಸುವ ಘೋಷಣೆಗಳ ನಡುವಿನ ಸಂಬಂಧ ಎದ್ದು ಕಾಣುತ್ತದೆ.

ಈ ನಿಟ್ಟಿನಲ್ಲಿ, 2019ರ ಲೋಕಸಭಾ ಚುನಾವಣೆಯ ಮುನ್ನ, ಕೆಲವು ಪ್ರಮುಖ ನಿರ್ಧಾರಗಳನ್ನು ಕೇಂದ್ರ ಸರಕಾರ ಕೈಗೊಂಡಿತು. ಜನವರಿ 2019ರಲ್ಲಿ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು 29ರಿಂದ 31ಕ್ಕೆ ಹೆಚ್ಚಿಸಲಾಯಿತು. ಸಕ್ಕರೆ ಉದ್ಯಮ ಇದನ್ನು ಸ್ವಾಗತಿಸಿತು. ಜೊತೆಗೆ, 2019ರ ಫೆಬ್ರವರಿಯಲ್ಲಿ ಕೇಂದ್ರ ಸರಕಾರ 10,540 ಕೋಟಿ ರೂ. ಸುಲಭ ಷರತ್ತಿನ ಸಾಲವನ್ನು ಸಕ್ಕರೆ ಕಾರ್ಖಾನೆಗಳಿಗೆ ಮಂಜೂರು ಮಾಡಿತು – ಕಬ್ಬು ಬೆಳೆಗಾರರಿಗೆ ಬಾಕಿ ಮಾಡಿರುವ ಕಬ್ಬಿನ ಹಣದ ಪಾವತಿಗಾಗಿ.

ಅದಕ್ಕಿಂತ ಮುಂಚೆ, ಜೂನ್‌ 2018ರಲ್ಲಿ, ದಾಖಲೆ ಸಕ್ಕರೆ ಉತ್ಪಾದನೆಯ ಸನ್ನಿವೇಶದಲ್ಲಿ, ಸಕ್ಕರೆ ಕಾರ್ಖಾನೆಗಳಿಗೆ 8,500 ಕೋಟಿ ರೂ. ಮೌಲ್ಯದ ಆರ್ಥಿಕ ಬೆಂಬಲ ಕಾರ್ಯಕ್ರಮವನ್ನು ಕೇಂದ್ರ ಸರಕಾರ ಘೋಷಿಸಿತು. ಇದರಲ್ಲಿ 4,440 ಕೋಟಿ ರೂ. ಸಕ್ಕರೆ ಕಾರ್ಖಾನೆಗಳಿಗೆ ಸುಲಭ ಷರತ್ತಿನ ಸಾಲ- ಇಥನಾಲ್‌ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲಿಕ್ಕಾಗಿ. ಅದಲ್ಲದೆ, ಕಬ್ಬು ಖರೀದಿಗಾಗಿ ಟನ್ನಿಗೆ 138.80 ರೂ. ಸಹಾಯವನ್ನೂ ನೀಡಲಾಯಿತು; ಇದಕ್ಕಾಗಿ ಕೇಂದ್ರ ಸರಕಾರ ಮಾಡಿದ ವೆಚ್ಚ 4,100 ಕೋಟಿ ರೂಪಾಯಿ. ಜೊತೆಗೆ, 3 ದಶಲಕ್ಷ ಟನ್‌ ಸಕ್ಕರೆಯ ಹೆಚ್ಚುವರಿ ದಾಸ್ತಾನು ಇಟ್ಟುಕೊಳ್ಳಲು ಸಕ್ಕರೆ ಕಾರ್ಖಾನೆಗಳಿಗೆ ಕೇಂದ್ರ ಸರಕಾರ ಅನುಮತಿ ನೀಡಿ, ಅದಕ್ಕಾಗಿ 1,175 ಕೋಟಿ ರೂ. ಒದಗಿಸಿತು.

2014ರ ಲೋಕಸಭಾ ಚುನಾವಣೆಯ ಮುಂಚೆಯೂ ಹೀಗೆಯೇ ಆಗಿತ್ತು. ಆಗಿನ ಕೇಂದ್ರ ಸರಕಾರವು ಸಕ್ಕರೆ ಕಾರ್ಖಾನೆಗಳಿಗೆ 2013ರಲ್ಲಿ 7,200 ಕೋಟಿ ರೂ. ಬಡ್ಡಿರಹಿತ ಸಾಲ ನೀಡಿತ್ತು- ಕಬ್ಬು ಬೆಳೆಗಾರರಿಗೆ ಬಾಕಿ ಮಾಡಿದ್ದ ಹಣದ ಪಾವತಿಗಾಗಿ.
ಕೇಂದ್ರ ಸರಕಾರ ಈ ಎಲ್ಲ ಕ್ರಮ ಜಾರಿ ಮಾಡಿದರೂ, ಕಬ್ಬು ಬೆಳೆಗಾರರ ಬವಣೆ ತಪ್ಪಿಲ್ಲ. ತಮ್ಮ ಅಧಿಕಾರವನ್ನು ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಹೇಗೆ ದುರುಪಯೋಗ ಪಡಿಸುತ್ತಾರೆ ಎಂಬುದಕ್ಕೆ ಒಂದು ಉದಾಹರಣೆ: 2004 – 2005ರಲ್ಲಿ ಆಗಿನ ಕೇಂದ್ರ ಕೃಷಿ ಸಚಿವ ಶರದ್‌ ಪವಾರ್‌ ತೆಗೆದುಕೊಂಡ ವಿವಾದಾಸ್ಪದ ನಿರ್ಧಾರ. ಅವರು ಸಕ್ಕರೆ ರಫ್ತಿಗೆ ಒಪ್ಪಿಗೆ ನೀಡಿದರು; ಅದೇ ಸಮಯದಲ್ಲಿ ಬ್ರೆಜಿಲ್‌ನಿಂದ ಸಕ್ಕರೆ ಆಮದಿಗೂ ಒಪ್ಪಿಗೆ ನೀಡಿದರು. ಅಂದರೆ ಕಡಿಮೆ ಬೆಲೆಗೆ ಸಕ್ಕರೆ ಮಾರಾಟ ಮತ್ತು ಹೆಚ್ಚಿನ ಬೆಲೆಗೆ ಸಕ್ಕರೆ ಖರೀದಿ! ಇದರಿಂದಾಗಿ ಸರಕಾರಕ್ಕೆ ಭಾರೀ ನಷ್ಟವಾಯಿತು. ಗಮನಿಸಿ: ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘಟನೆಯ ಈಗಿನ ಅಧ್ಯಕ್ಷ ರೋಹಿತ್‌ ಪವಾರ್‌, ಎನ್‌ಸಿಪಿಯ ನಾಯಕ ಶರದ್‌ ಪವಾರ ಅವರ ಹತ್ತಿರದ ಸಂಬಂಧಿ.

ಕೇಂದ್ರ ಸರಕಾರ ಕೋಟಿಗಟ್ಟಲೆ ಸಾಲ ನೀಡಿದರೂ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರ ಕಬ್ಬಿನ ಬಾಕಿ ಹಣ ಪಾವತಿಸಿಲ್ಲ. ಬೆಳೆದು ನಿಂತಿರುವ ಕಬ್ಬಿನ ಬೆಳೆಯನ್ನು ಯಾವಾಗ ಕಟಾವು ಮಾಡಬೇಕು ಎಂಬುದೇ ಕಬ್ಬು ಬೆಳೆಗಾರರ ದೊಡ್ಡ ಸಮಸ್ಯೆ. ಯಾಕೆಂದರೆ, ಕಟಾವು ಮಾಡಿ ಒಂದೇ ದಿನದಲ್ಲಿ ಕಬ್ಬು ಕೊಳೆಯಲು ಆರಂಭಿಸುತ್ತದೆ. ಆಗ ಕಬ್ಬು ಬೆಳೆಗಾರರು ಕಬ್ಬನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಬೇಕಾಗುತ್ತದೆ. ಒಟ್ಟಿನಲ್ಲಿ ಸರಕಾರದ ರಾಜಕೀಯದಿಂದಾಗಿ ಕಬ್ಬು ಬೆಳೆಗಾರರ ಸಂಕಟ ಹೆಚ್ಚುತ್ತಿದೆ.

– ಅಡ್ಡೂರು ಕೃಷ್ಣ ರಾವ್‌


ಈ ವಿಭಾಗದಿಂದ ಇನ್ನಷ್ಟು

  • ನಮ್ಮಲ್ಲಿ ಸೀಸನಲ್‌ ಹಣ್ಣುಗಳಿರುವಂತೆಯೇ ವೃತ್ತಿಗಳಲ್ಲಿ ಸೀಸನಲ್‌ ವೃತ್ತಿಗಳಿವೆ. ಅವುಗಳಲ್ಲಿ ಒಂದು ಅಡಕೆ ಕೊನೆ (ಗೊನೆ) ಕೀಳುವ "ಕೊನೆಗಾರ'ನದ್ದು. ಅಡಕೆ ಕೊಯ್ಲು...

  • ಏರ್‌ಟೆಲ್‌ ಮತ್ತು ವೊಡಾಫೋನ್‌ ಮೊಬೈಲ್‌ ಕಂಪನಿಗಳು ಡಿಸೆಂಬರ್‌ ಮೊದಲ ವಾರದಿಂದ ತಮ್ಮ ಮೊಬೈಲ್‌ ಶುಲ್ಕವನ್ನು ಹೆಚ್ಚಿಸಲಿವೆ ಎಂಬುದು ಸದ್ಯದ ಸುದ್ದಿ. ಜಿಯೋ...

  • ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ "ಘಮ್‌' ಎನ್ನುವ ಸುವಾಸನೆಗೆ ಕಾರಣ. ಇದನ್ನು ಅಡುಗೆ ಮನೆಯಲ್ಲಿ ಮಾತ್ರವೇ ಅಲ್ಲದೆ, ಆಯುರ್ವೇದ ಔಷಧಗಳ ತಯಾರಿಕೆಗೂ...

  • ದೇಗುಲ ನಿರ್ಮಾಣಕ್ಕೆ ಒಂದು ಶಾಸ್ತ್ರವಿದೆ. ಇದರಂತೆ, ಕೆರೆಯ ಸ್ಥಳದ ಆಯ್ಕೆಗೂ ಇಂಥದ್ದೊಂದು ಪರಿಕಲ್ಪನೆ ಇದೆ. ರಾಜ್ಯದ ಕೆರೆಗಳನ್ನು ಸುತ್ತಿದರೆ ಬಂಡೆ ಬೆಟ್ಟದ...

  • ಮಲೆನಾಡು, ಕರಾವಳಿ ಭಾಗದ ಮನೆಗಳಲ್ಲಿ ಮಾಡುವ ಊಟಕ್ಕೆ ಅದರದ್ದೇ ಆದ ವಿಶೇಷ ಇದೆ. ಅದರಲ್ಲೂ ಹವ್ಯಕ ಬ್ರಾಹ್ಮಣರ ಮನೆಯ ಊಟ ಅಂದ್ರೆ ಕೇಳಬೇಕಾ?, ಅಕ್ಕಿರೊಟ್ಟಿ, ಚಪಾತಿ,...

ಹೊಸ ಸೇರ್ಪಡೆ