ಬೇಸಿಗೆ ಮನೆ

Team Udayavani, Apr 8, 2019, 11:36 AM IST

ಮನೆ ಕಟ್ಟುವವರು ಬೇಸಿಗೆ ಶುರುವಾಗುವುದನ್ನೇ ಕಾಯುತ್ತಿರುತ್ತಾರೆ. ಏಕೆಂದರೆ, ಈ ಅವಧಿಯಲ್ಲಿ ಮಳೆ ಬರುವುದಿಲ್ಲ. ಪಾಯ ತೋಡಿದರೂ ನೀರು ನುಗ್ಗಿ ತೊಂದರೆ ಆಗುವುದಿಲ್ಲ.  ಸಿಮೆಂಟ್‌ ಮೂಟೆಗಳನ್ನು ಸ್ಟಾಕ್ ಮಾಡಿದರೂ ಗಟ್ಟಿಯಾಗುವುದಿಲ್ಲ ಎನ್ನುವ ಒಂದಷ್ಟು ಕಾರಣಗಳು ಇವೆ. ಇದಲ್ಲದೇ, ಕೆಲವು ಖಾಸಗಿ ಕೆಲಸಗಳಿಂದಲೂ ಮುಕ್ತರಾಗಬಹುದು ಅನ್ನೋದೂ ಇದೆ. ಅಂದರೆ, ಮಕ್ಕಳನ್ನು ಶಾಲೆಗೆ ಕಳುಹಿಸುವ ಜವಾಬ್ದಾರಿ ಇರುವುದಿಲ್ಲ, ವರ್ಷದ ರಜೆಗಳು ಇನ್ನೂ ಮುಗಿದಿಲ್ಲವಾದ ಕಾರಣ, ಮನೆ ಕಟ್ಟಲು ಒಂದಷ್ಟು ಸಮಯವನ್ನೂ
ಪಡೆದುಕೊಳ್ಳಬಹುದು ಇತ್ಯಾದಿ ಇತ್ಯಾದಿ. ಮಳೆಗಾಲದಲ್ಲಿ ಕೂಲಿಯವರು ತಮ್ಮ ತಮ್ಮ ಮೂಲ ಸ್ಥಳಗಳಿಗೆ ಹೊರಟು ಅಲ್ಲೊಂದಿಷ್ಟು ಸಮಯ ಕಳೆಯುತ್ತಲೇ ಬೆಳೆ ಬೆಳೆಯಲು, ಉತ್ತು ಬಿತ್ತಿಬರಲು ತೆರಳುತ್ತಾರೆ. ಜೊತೆಗೆ ಮಳೆಗಾಲದಲ್ಲಿ ಮನೆ ಕೆಲಸ ಶುರು ಮಾಡಿದರೆ ನೀರು ಬೀಳುವುದರಿಂದಾಗುವ ತೊಂದರೆಗಳ ಜೊತೆ ಇತರೆ ಕಿರಿಕಿರಿಗಳೂ ಇದ್ದದ್ದೇ.

ನಗರ ಪ್ರದೇಶಗಳಲ್ಲಿ ಮನೆ ಕಟ್ಟುವಕೆಲಸ ಬೇಸಿಗೆಯಲ್ಲೇ ಜೋರಾಗಿ ಜರುಗುವುದರಿಂದ, ಬರ ಪೀಡಿತ ಪ್ದೇ ಶಗಳಿಂದಲೂ ಕಾರ್ಮಿಕರು ವಲಸೆ ಬರುತ್ತಾರೆ ಹಾಗೂ ಸುಲಭದಲ್ಲಿ ಸಿಗುತ್ತಾರೆ. ಚಳಿಗಾಲದಲ್ಲಿ ಸುಡಲು ಶುರು ಮಾಡುವ ಮಣ್ಣು ಇಟ್ಟಿಗೆಗಳು ಬೇಸಿಗೆಯ ಹೊತ್ತಿಗೆಮಾರುಕಟ್ಟೆಗೆ ಬರಲು ಶುರು ಮಾಡಿ ಅಗ್ಗದ ಬೆಲೆಗೂ ದೊರಕುತ್ತವೆ. ಬೇಸಿಗೆಯ ಲಾಭಗಳು ಮನೆ ಕಟ್ಟಲು ಬೇಸಿಗೆಕಾಲ ಹೆಚ್ಚು ಸೂಕ್ತ ಎನ್ನುವ ಕಾರಣಗಳಲ್ಲಿ ಮುಖ್ಯವಾದವು ವೇಗಕ್ಕೆ ಸಂಬಂಧಿಸಿದ್ದೇ ಆಗಿರುತ್ತವೆ. ಸಿಮೆಂಟ್‌, ಬೇಸಿಗೆಯಲ್ಲಿ ಬೇಗನೆ ಸೆಟ್‌
ಆಗುತ್ತದೆ. ಇದಕ್ಕೆ ತಾಪಮಾನ ಮುಖ್ಯ ಭೂಮಿಕೆ ವಹಿಸುತ್ತದೆ. ಇಟ್ಟಿಗೆ ಗೋಡೆ ಕಟ್ಟುವಾಗ ನಾವು ನೆನೆಸಿದ ಇಟ್ಟಿಗೆ ಬಳಸುವುದರಿಂದ, ಮಳೆಗಾಲದಲ್ಲಿ ಎಲ್ಲವೂ ತೇವಮಯವಾಗಿದ್ದು, ಅವು ಸ್ವಲ್ಪ ಅಲುಗಾಡಿದರೂ ಗೋಡೆಯ ತೂಕ -ಪ್ಲಂಬ್‌ ತಪ್ಪುತ್ತದೆ. ಅಂದರೆ, ಗೋಡೆ ನೇರವಾಗಿ ತೂಕುಗುಂಡಿಗೆ ಸಮವಾಗಿ ತೂಗದೆ ಸ್ವಲ್ಪ ಓರೆಕೋರೆಯಾಗಿ ಬರುವ ಸಾಧ್ಯತೆ ಇರುತ್ತದೆ. ಇದನ್ನು ನಾವು ಗೋಡೆಗೆ ಪ್ಲಾಸ್ಟರ್‌ ಮಾಡುವಾಗ ಸರಿಪಡಿಸಿಕೊಳ್ಳಬೇಕು. ಅದೇ ಬೇಸಿಗೆಯಲ್ಲಿ ಸಿಮೆಂಟ್‌ ಗಾರೆ ಬೇಗನೆ ಸೆಟ್‌ ಆಗುವುದರಿಂದ, ಗೋಡೆ ಬೇಗ ಗಟ್ಟಿಗೊಂಡು ಗುಣಮಟ್ಟ ಉತ್ತಮವಾಗಿರುತ್ತದೆ. ಅದೇ ರೀತಿಯಲ್ಲಿ ಗೋಡೆಗೆ ಪ್ಲಾಸ್ಟರ್‌ ಮಾಡುವಾಗಲೂ ಸಿಮೆಂಟ್‌ ಗಾರೆ ಸುಲಭದಲ್ಲಿ ಗೋಡೆಗೆ ಅಂಟುವುದರಿಂದ ಗಾರೆಯವರಿಗೆ ಮಟ್ಟಮಾಡಲು ಸಲಭವಾಗುತ್ತದೆ. ಹೆಚ್ಚು ಪರಿಶ್ರಮವಿಲ್ಲದೆ ಉತ್ತಮ ಗುಣಮಟ್ಟದ ಪ್ಲಾಸ್ಟರ್‌ ನಮ್ಮದಾಗುತ್ತದೆ. ಮಳೆಗಾಲದಲ್ಲಿ ಸೀಲಿಂಗ್‌ ಅಂದರೆ, ಸೂರಿನ ಕೆಳಭಾಗದಲ್ಲಿ ಪ್ಲಾಸ್ಟರ್‌ ಮಾಡಲು ಹರಸಾಹಸ ಪಡಬೇಕಾಗುತ್ತದೆ.

ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಸಿಮೆಂಟ್‌ ಬಳಿಯುವುದರಿಂದ, ಅದು ಸೀಲಿಂಗ್‌ಗೆ ಸುಲಭದಲ್ಲಿ ಅಂಟುವುದಿಲ್ಲ. ಮೆತ್ತಿದ್ದರಲ್ಲಿ ಅರ್ಧ ಕೆಳಗೇ ಬೀಳುತ್ತ ಇರುತ್ತದೆ. ಮಳೆಗಾಲದಲ್ಲಿ ಸೀಲಿಂಗ್‌ ಸಹಜವಾಗೇ ಸ್ವಲ್ಪ ತೇವವಾಗಿರುವುದರಿಂದ, ಪ್ಲಾಸ್ಟರ್‌ ಮಾಡುವುದು ಮತ್ತೂ ಕಷ್ಟ ಆಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಮನೆಯ ಹೊರಾಂಗಣದ ಕೆಲಸ ಮಳೆಗಾಲದಲ್ಲಿ ಹೆಚ್ಚು ತೊಂದರೆಗೆ ಒಳಗಾಗುವುದರಿಂದ ಬೇಸಿಗೆ ಕಾಲ, ಮನೆಯ μನಿಶಿಂಗ್‌ ಕಾರ್ಯಗಳಿಗೆ ಹೇಳಿ ಮಾಡಿಸಿದಂತಿದೆ.

ಮಳೆಗಾಲದಲ್ಲಿ ಮಣ್ಣು ಹೆಚ್ಚು ತೇವಾಂಶದಿಂದ ಕೂಡಿರುವುದರಿಂದ ಅಗೆಯುವುದು ಸುಲಭ ಆದರೂ, ಅದರಲ್ಲಿ ನೀರು ತುಂಬಿಕೊಂಡು ಪಾಯ ಹಾಕುವಾಗ ತೊಂದರೆ ಆಗುವುದೇ ಹೆಚ್ಚು. ಜೊತೆಗೆ ಮಣ್ಣು ಕುಸಿಯುವುದು ಕಾಂಕ್ರಿಟ್‌ ಜೊತೆ ಬೆರೆಯುವುದು ಇತ್ಯಾದಿ ಆಗುತ್ತಲೇ ಇರುತ್ತದೆ. ಬೇಸಿಗೆಯಲ್ಲಿ ಈ ತೊಂದರೆ ಇರುವುದಿಲ್ಲ. ಮಣ್ಣು ಅಗೆಯುವುದು ಸ್ವಲ್ಪ ಕಷ್ಟ ಆದರೂ ಇತ್ತೀಚಿನ ದಿನಗಳಲ್ಲಿ ಪಾಯ ಅಗೆಯಲು ಜೆ.ಸಿ.ಬಿಗಳ ಬಳಕೆ ಹೆಚ್ಚುತ್ತಿದೆ. ಈ ಯಂತ್ರಗಳಿಗೆ ಮಣ್ಣು ಗಟ್ಟಿ ಇದ್ದರೂ ತೊಂದರೆ ಏನೂ ಇರುವುದಿಲ್ಲ. ಅಚ್ಚುಕಟ್ಟಾಗಿ ಬೆಲ್ಲದಚ್ಚಿನಂತೆ ಅಕ್ಕಪಕ್ಕದ ಮಣ್ಣು ಉಳಿಯುವುದರಿಂದ, ಪಾಯವೂ ಉತ್ತಮ ಗುಣಮಟ್ಟದ್ದಾಗಿರುತ್ತದೆ. ಮುಖ್ಯವಾಗಿ ಪಾಯದ
ಮಣ್ಣು ಕುಸಿದಾಗ ಉಕ್ಕಿನ ಸರಳುಗಳಿಗೆ ಒದ್ದೆ ಮಣ್ಣು ತಾಗಿದರೆ, ಅದನ್ನು ಶುದ್ಧ ಮಾಡುವುದೇ ದೊಡ್ಡ ತೊಂದರೆ ಆಗಿಬಿಡುತ್ತದೆ. ಬೇಸಿಗೆಯಲ್ಲಿ ಒಣಮಣ್ಣು ತಾಗಿದರೂ ಸರಳುಗಳಿಗೆ ಅಂಟುವುದಿಲ್ಲ ಹಾಗೂ ಪುಡಿಪುಡಿಯಾಗಿ
ಬೀಳುವ ಹೆಂಟೆಗಳನ್ನು ತೆಗೆದು ಹಾಕುವುದೂ ಕೂಡ ಸುಲಭದ ಕೆಲಸವೇ ಅಗಿರುತ್ತದೆ.

ಈ ಕಾಲದ ತೊಂದರೆಗಳು ತಾಪಮಾನ ಅತಿ ಹೆಚ್ಚು ಇರುವುದರಿಂದ, ಸಿಮೆಂಟ್‌ ಕ್ಯೂರಿಂಗ್‌ ಗೆ ಎಷ್ಟೇ ನೀರು ಉಣಿಸಿದರೂ ಬೇಗನೆ ಒಣಗಿಹೋಗಿ ಪದೇಪದೇ ನೀರು ಹಾಕಬೇಕಾಗುತ್ತದೆ.

ಬೇಸಿಗೆಯಲ್ಲಿ ನೀರು ಸಿಗುವುದು ಮೊದಲೇ ದುಸ್ತರವಾಗಿರುವ ಕಡೆ ಹೆಚ್ಚು ನೀರು ಬಳಸುವುದು ದುಬಾರಿ ಆಗಬಹುದು. ಕ್ಯೂರಿಂಗ್‌ ಕ್ರಿಯೆ ಈ ಕಾಲದಲ್ಲಿ ಶೀಘ್ರವಾಗಿ ಆಗುವ ಕಾರಣವೂ ಸಿಮೆಂಟ್‌ ಕಾಂಕ್ರಿಟ್‌ ಹೆಚ್ಚು ನೀರನ್ನು ಬಯಸುತ್ತದೆ. ಮುಖ್ಯವಾಗಿ ಕಾಲಂಗಳಿಗೆ ಅನಿವಾರ್ಯವಾಗಿ ತೇವಾಂಶವನ್ನು ಮೀರಿ ಹಿಡಿದಿಟ್ಟುಕೊಳ್ಳುವ ಗೋಣಿಚೀಲ ಇಲ್ಲವೆ, ರಾಗಿ ಹುಲ್ಲಿನಿಂದ ಮಾಡಿದ ಹಗ್ಗಗಳನ್ನು ಸುತ್ತಬೇಕು. ಅದಕ್ಕೆ ನೀರು ಹಾಕಬೇಕು. ಕ್ಯೂರಿಂಗ್‌ ಮುಗಿಯುವವರೆಗೂ ನೀರೆರೆಯುತ್ತಿರಬೇಕು. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್‌ ಶೀಟುಗಳನ್ನು ಕಾಲಂಗಳಿಗೆ ಹಾಕಿಯೂ ನೀರು ಆವಿಯಾಗದಂತೆ ಮಾಡಲಾಗುತ್ತದೆ. ಈ ಪ್ಲಾಸ್ಟಿಕ್‌ ಗಾಢವರ್ಣದವಾಗಿದ್ದರೆ, ಒಳಗೆ ಸಿಮೆಂಟ್‌ ಒಣಗಿದರೂ ಗೊತ್ತಾಗುವುದಿಲ್ಲ. ಆದುದರಿಂದ, ಪಾರದರ್ಶಕವಾಗಿರುವ
ಪ್ಲಾಸ್ಟಿಕ್‌ ಶೀಟುಗಳನ್ನು ಬಳಸುವುದು ಉತ್ತಮ. ಕಾಂಕ್ರಿಟ್‌ ಒಣಗಿದಾಗಲೆಲ್ಲ
ಮೇಲಿನಿಂದ ನೀರು ಉಣಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು ಇಲ್ಲವೇ ಪ್ಲಾಸ್ಟಿಕ್‌
ತೆಗೆದು, ನೀರು ಹಾಕಿ ನಂತರ ಮತ್ತೆ ಮುಚ್ಚಬೇಕು.

ಬಿಸಿಲ ಬೇಗೆಯಿಂದ ರಕ್ಷಣೆ ಒಳಾಂಗಣ ಸಾಕಷ್ಟು ತಂಪಾಗಿದ್ದರೂ ಈ ಅವಧಿಯಲ್ಲಿ ಹೊರಗಡೆ ಕೆಲಸ ಮಾಡುವುದು ಕಷ್ಟ. ಜೊತೆಗೆ ಪ್ಲಾಸ್ಟರ್‌ ಮಾಡುವಾಗ ನೇರವಾಗಿ ಬಿಸಿಲು ಬಿದ್ದರೆ, ಸಿಮೆಂಟ್‌ ಅತಿಬೇಗನೆ ಒಣಗಿ ನಿಶಿಂಗ್‌ ಮಾಡಲು ತೊಂದರೆ ಆಗಬಹುದು. ಹಾಗಾಗಿ, ಹೊರಾಂಗಣದಲ್ಲಿ ಕೆಲಸ ಮಾಡುವ ಸ್ಥಳಕ್ಕೆ ಒಂದಷ್ಟು ನೆರಳು ಬೀಳುವ ಹಾಗೆ ತೆಂಗಿನ ಗರಿಗಳನ್ನು ಇಲ್ಲವೆ ಪ್ಲಾಸ್ಟಿಕ್‌ ಶೀಟ್‌ – ಟಾರ್ಪಾಲಿನ್‌ ಗಳನ್ನು ಕಟ್ಟಬಹುದು. ಇದರಿಂದ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಸಿಗುವುದರ ಜೊತೆಗೆ ಉತ್ತಮ μನಿಶ್‌ ನೀಡಲೂ ಸಹಾಯಕಾರಿ. ಕಣ್ಣಿಗೆ ತೀಕ್ಷ್ಣತರವಾದ ಬೆಳಕು ಬೀಳುತ್ತಿದ್ದರೆ,ಕುಶಲ ಕರ್ಮಿಗಳಿಗೂ ಉತ್ತಮವಾಗಿ ಕಾರ್ಯನಿರ್ವಹಿಸಲು ಕಷ್ಟವಾಗುತ್ತದೆ. ಹಾಗಾಗಿ, ಒಂದಷ್ಟು ನೆರಳು ನೀಡುವುದು ಉತ್ತಮ. ಶೇಖರಿಸಿಟ್ಟ ಮರಳು ಮಣ್ಣು ಇತ್ಯಾದಿ ಬೇಸಿಗೆಯಲ್ಲಿ ಗಾಳಿಗೆ ಹಾರಿಹೋಗುವುದರಿಂದ, ಅವುಗಳಿಗೆ ಒಂದಷ್ಟು ನೀರು ಸಿಂಪಡಿಸುವುದು ಉತ್ತಮ. ಮನೆ ಕಟ್ಟುವಾಗ ಅದರಲ್ಲೂ ಬೇಸಿಗೆಯಲ್ಲಿ ವಿಪರೀತ ಎನ್ನುವಷ್ಟು ಧೂಳು ಹುಟ್ಟಿಕೊಳ್ಳುತ್ತದೆ. ಆದುದರಿಂದ ಗೋಡೆಗೆ ಕೊಳವೆ ಅಳವಡಿಸುವ ಸಲುವಾಗಿ ಕೊರೆಯುವಾಗ, ಗೋಡೆಗಳನ್ನೂ
ತೇವ ಮಾಡಿಕೊಂಡು ಮುಂದುವರೆಯುವುದು ಉತ್ತಮ. ಮರದ ವಸ್ತುಗಳು ತೇವಾಂಶ ಕಳೆದುಕೊಂಡು ಕುಗ್ಗುವುದರಿಂದ, ಬಾಗಿಲು ಕಿಟಕಿಗಳನ್ನು ಒಂದಷ್ಟು ಸಡಿಲವಾಗೇ ಕ್ಸ್‌ ಮಾಡಲು ಹೇಳಬೇಕು. ಇಲ್ಲದಿದ್ದರೆ,
ಮಳೆಗಾಲದಲ್ಲಿ ಹಿಗ್ಗಿದಾಗ ಸಿಕ್ಕಿಹಾಕಿಕೊಂಡು, ತೆರೆದು ಮುಚ್ಚಲು ಕಷ್ಟ ಆಗಬಹುದು.

ಆಯಾ ಋತುಮಾನದಲ್ಲಿ ಒಂದಷ್ಟು ಲಾಭ ಇದ್ದಹಾಗೆಯೇ ತೊಂದರೆಗಳೂ ಇರುತ್ತವೆ. ಅವುಗಳನ್ನು ಸರಿದೂಗಿಸಿಕೊಂಡು ಹೋದರೆ ಮನೆ ಕಟ್ಟುವಾಗ ಎದುರಾಗುವ ವೈಪರೀತ್ಯಗಳಿಂದ ತಪ್ಪಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ -98441 32826 .

ಆರ್ಕಿಟೆಕ್ಟ್ ಕೆ. ಜಯರಾಮ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ