ಸೋರುತಿದೆಯಾ ಮನೆಯ ಮಾಳಿಗೇ…?

Team Udayavani, May 27, 2019, 6:00 AM IST

ಮಳೆ ಶುರುವಾಗುತ್ತಿದ್ದಂತೆಯೇ ಮನೆಯ ಕೆಲ ಭಾಗದಲ್ಲಿ ಸೋರಲು ಶುರುವಾದರೆ, ಸಹಜವಾಗಿಯೇ ದಿಗಿಲಾಗುತ್ತದೆ. ಸೋರುವುದು ನಿಂತರೆ ಸಾಕು ಎಂದು ಯೋಚಿಸಿಯೇ ತರಾತುರಿಯಲ್ಲಿ ರಿಪೇರಿ ಕೆಲಸವೂ ನಡೆಯುತ್ತದೆ. ಆನಂತರವೂ ಸೋರುವುದು ಮುಂದುವರಿದರೆ ಏನು ಮಾಡಬೇಕು ಅಂದಿರಾ? ಈ ಬರಹ ಓದಿ…

ಕೆಲವೊಮ್ಮೆ ಮನೆಯ ಕೆಲ ಭಾಗ ಸೋರಲು ಶುರುಮಾಡಿದರೆ, ಏನೇ ಮಾಡಿದರೂ ನಿಲ್ಲುವುದೇ ಇಲ್ಲ. ಮಾಮೂಲಿ ಪರಿಹಾರಗಳಾದ ಸಿಮೆಂಟ್‌ ತುಂಬುವುದು, ನೀರುನಿರೋಧಕ ಮಿಶ್ರಣಗಳನ್ನು ಬಳಿಯುವುದು ಇತ್ಯಾದಿ ಮಾಡಿದರೂ ಸೋರುವುದು ಸಂಪೂರ್ಣವಾಗಿ ನಿಲ್ಲುವುದಿಲ್ಲ. ಕೆಲವೊಮ್ಮೆ, ಒಂದೆರಡು ವರ್ಷಗಳು ನಿಂತಂತೆ ಇದ್ದರೂ ಮತ್ತದೇ ವರಸೆ ಶುರುವಾಗಿಬಿಡುತ್ತದೆ. ಇಂದಿನ ದಿನಗಳಲ್ಲಿ “ಮಳೆ ಹುಯ್ದರೆ ಸಾಕಪ್ಪ’ ಎಂಬಂತೆ ಇರುವಾಗ, ಮಳೆ ಬರುವ ಮುನ್ಸೂಚನೆ ಕಂಡರೆ ಸೋರುವಿಕೆಯ ದಿಗಿಲು ಶುರುವಾಗಿಬಿಡುತ್ತದೆ.ಯಾರಿಗೇ ಆದರೂ ಒಂದೆರಡು ಸಲ ರಿಪೇರಿ ಮಾಡಿದ ಮೇಲೂ ಸರಿಹೋಗದಿದ್ದರೆ, ಬೇಸರ ಆಗುವುದು ಖಂಡಿತ. ಪದೇ ಪದೇ ರಿಪೇರಿಗೆ ಬರುತ್ತಿದ್ದರೆ ನಾವು ಸೋರುವಿಕೆಯ ಮೂಲಕ್ಕೆ ಹೋಗಿ ಪರಿಶೀಲಿಸುವುದು ಉತ್ತಮ.

ಸೂರಿನಲ್ಲಿ ಸೋರಿಕೆ
ಸಾಮಾನ್ಯವಾಗಿ ಅತಿ ಹೆಚ್ಚು ಸೋರುವುದು ಸೂರಿನಿಂದಲೇ. ವಾತಾವರಣದ ವೈಪರೀತ್ಯದಿಂದಾಗುವ ಹಾನಿಯನ್ನು ಎದುರಿಸಬೇಕಾದ್ದು ಸೂರು. ಮಳೆ, ಬಿಸಿಲು, ಗಾಳಿಗಳಿಂದ ಪದೆ ಪದೇ ಪ್ರಹಾರಕ್ಕೆ ಒಳಗಾಗುತ್ತಿದ್ದರೆ, ಹತ್ತಾರು ವರ್ಷಗಳ ನಂತರ ಒಂದಷ್ಟಾದರೂ ನಿರ್ವಹಣೆ ಬೇಡುತ್ತದೆ. ಆದರೆ, ಈ ನಿರ್ವಹಣೆ ಮಾಡುವ ಮೊದಲೇ ಸೂರು ಲೀಕಾದರೆ ಇಲ್ಲವೆ ಒಂದೆರಡು ವರ್ಷಗಳ ನಂತರವೇ ಸೋರಲು ಶುರುಮಾಡಿದರೆ, ಅದಕ್ಕೆ ಕಾರಣವನ್ನು ಪತ್ತೆ ಹಚ್ಚಬೇಕಾಗುತ್ತದೆ. ಸಾಮಾನ್ಯವಾಗಿ, ನಾವು ಹಾಕುವ ಆರ್‌ಸಿಸಿ ಸೂರು, ನೀರುನಿರೋಧಕ ಗುಣ ಹೊಂದಿರುವುದಿಲ್ಲ. ಅದಕ್ಕೆ ಹೆಚ್ಚುವರಿಯಾಗಿ ಒಂದು ಪದರವನ್ನು ಸೂಕ್ತ ಇಳಿಜಾರಿನೊಂದಿಗೆ ನೀಡಬೇಕಾಗುತ್ತದೆ. ಎಲ್ಲ ಆರ್‌ ಸಿ ಸಿ ಸೂರುಗಳೂ ಭಾರ ಹೊರಬೇಕಾದರೆ ಒಂದಷ್ಟು ಬಾಗುತ್ತವೆ. ನಾವು ಒಂದು ಮರದ ಹಲಗೆಯ ಮೇಲೆ ನಿಂತರೆ ಅದು ಕೆಳಗೆ ಸ್ವಲ್ಪ ಬಗ್ಗಿಯೇ ಭಾರಹೊರುವುದು. ಈ ಬಾಗುವಿಕೆಯಿಂದಾಗಿ ಆರ್‌ ಸಿ ಸಿ ಸೂರುಗಳಲ್ಲಿ ಸಣ್ಣಸಣ್ಣ ಬಿರುಕುಗಳು ಉಂಟಾಗಿ, ನೀರು ನಿರೋಧಕ ಗುಣ ಕಡಿಮೆ ಆಗುತ್ತದೆ. ಆರ್‌ ಸಿ ಸಿ ಸ್ಲ್ಯಾಬ್ ನಲ್ಲಿ ಕೋಣೆಯ ಮಧ್ಯೆ ಹಾಗೂ ಗೋಡೆಗಳ ಉದ್ದಕ್ಕೂ ಸಣ್ಣಬಿರುಕುಗಳು – ಕೂದಲೆಳೆಗೂ ಸಣ್ಣದಾದವು ಉಂಟಾಗುವ ಸಾಧ್ಯತೆ ಇರುತ್ತದೆ. ಈ ಬಿರುಕುಗಳು ಸಣ್ಣದಾಗಿದ್ದರೆ ಪರವಾಗಿಲ್ಲ. ಇವು ಎಷ್ಟು ಕಿರಿದಾಗಿರುತ್ತವೆ ಎಂದರೆ ಅವು ಬರಿಕಣ್ಣ ನೋಟಕ್ಕೆ ಕಂಡುಬರುವುದೂ ಇಲ್ಲ. ಸೂರಿನ ಮೇಲೆ ನೀರು ನಿರೋಧಕ ಪದರ ಹೇಗಿದ್ದರೂ ಬರುವುದರಿಂದ, ನೀರು ಸೋರುವ ಸಾಧ್ಯತೆ ಇರುವುದಿಲ್ಲ. ಆದರೆ, ಈ ಬಿರುಕುಗಳು ದೊಡ್ಡದಾಗಿ, ಸೋರಲು ಶುರುಮಾಡಿದರೆ, ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ.

ನೀರು ಸೋರಿಕೆಯ ಜಾಗ ಪರಿಶೀಲಿಸಿ
ಸೂರಿನ ಅಗಲ ಹೆಚ್ಚಾದಷ್ಟೂ ಅದರ ಬಾಗುವಿಕೆಯೂ ಹೆಚ್ಚುತ್ತದೆ. ಹಾಗಾಗಿ, ನಾವು ಈ ಬಾಗುವಿಕೆಯನ್ನು ನಿಯಂತ್ರಣದಲ್ಲಿಡಲು ಅಗಲ ನೋಡಿಕೊಂಡು ಸ್ಲ್ಯಾಬ್ ನ ದಪ್ಪ ನಿರ್ಧರಿಸಬೇಕಾಗುತ್ತದೆ. ಹತ್ತು ಅಡಿ ಅಗಲದ ಕೋಣೆಗೆ ಸುಮಾರು ಐದು ಇಂಚು ದಪ್ಪದ ಸೂರು ಸಾಕಾದರೂ, ಹನ್ನೆರಡು – ಹದಿನಾಲ್ಕು ಅಡಿ ಅಗಲದ ಸೂರಿಗೆ ಕಡೇ ಪಕ್ಷ ಆರು ಇಂಚು ದಪ್ಪದ ಸೂರು ಹಾಕಬೇಕಾಗುತ್ತದೆ. ಈ ದಪ್ಪ ಕಡಿಮೆ ಆದರೆ, ಭಾರ ಹೊರುತ್ತ ಹೊರುತ್ತ ಕೆಳಗೆ ಬಾಗಿ, ಸ್ಲ್ಯಾಬ್ ನ ಮಧ್ಯೆ ಇಲ್ಲವೆ ಗೋಡೆಯ ಅಂಚಿನಲ್ಲಿ ಸೋರಬಹುದು. ನಾವು ಹಾಕುವ ಕಾಂಕ್ರಿಟ್‌ ಉತ್ತಮ ಗುಣಮಟ್ಟದ್ದು ಆಗಿದ್ದರೂ, ಸಾಕಷ್ಟು ಸ್ಟೀಲ್‌ ಸರಳುಗಳನ್ನು ಬಳಸಿದ್ದರೂ ದಪ್ಪ ಕಡಿಮೆ ಇದ್ದರೆ ಬಾಗುವಿಕೆಯೂ ಹೆಚ್ಚಾಗಿ, ಕಾಂಕ್ರಿಟ್‌ನಲ್ಲಿ ಸಣ್ಣಸಣ್ಣ ಬಿರುಕುಗಳು ಕಾಣಿಸಿಕೊಳ್ಳಬಹುದು. ಈ ಬಿರುಕುಗಳಿಂದಾಗಿ ಕಟ್ಟಡಕ್ಕೆ ತಕ್ಷಣಕ್ಕೆ ಏನೂ ತೊಂದರೆ ಆಗದಿದ್ದರೂ, ನೀರು ಸೋರುವಿಕೆ ಹಾಗೂ ಅದರಿಂದಾಗುವ ಇತರೆ ಉಪಟಳಗಳನ್ನು ನಿಯಂತ್ರಿಸಲು ನಾವು ಅನಿವಾರ್ಯವಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

ತಜ್ಞರ ಸಲಹೆ ಅತ್ಯಗತ್ಯ
ಹಾಲ್‌ ಲಿವಿಂಗ್‌ ರೂಮ್‌ ಇಂಗ್ಲೀಷ್‌ ಅಕ್ಷರ “ಎಲ್‌’ ಆಕಾರದಲ್ಲಿದ್ದರೆ, ಎರಡೂ ಕಡೆಯ ಅಗಲ ಕೇವಲ ಹತ್ತು ಇಲ್ಲ ಹನ್ನೆರಡು ಅಡಿ ಮಾತ್ರ ಇದೆ ಎಂದು ಐದು ಇಂಚು ದಪ್ಪದ ಕಾಂಕ್ರಿಟ್‌ ಹಾಕಿದರೆ, ಮೂಲೆಯ ಸ್ಪ್ಯಾನ್‌ – ಡಯಾಗನಲ್‌ ಸ್ವಲ್ಪ ಹೆಚ್ಚಿದಂತಾಗಿ, ಎರಡೂ ಕಡೆಯ ಮಧ್ಯಭಾಗದಲ್ಲಿ ಹೆಚ್ಚು ಬಾಗುವ ಸಾಧ್ಯತೆ ಇರುತ್ತದೆ. ಇದೇ ರೀತಿಯಲ್ಲಿ, ಮನೆಯ ಮೇಲಿನ ನೀರಿನ ಟ್ಯಾಂಕ್‌ನ ಒಂದು ಆಧಾರವನ್ನು ದೊಡ್ಡ ರೂಮಿನ ಮಧ್ಯಭಾಗದಲ್ಲಿ ನೀಡಿದರೆ, ಒಂದೇ ಕಡೆ ಹೆಚ್ಚುವರಿಯಾಗಿ ಬರಬಹುದಾದ ಒಂದು – ಒಂದೂವರೆ ಟನ್‌ ಭಾರದಿಂದಾಗಿಯೂ ಸೂರು ಸ್ವಲ್ಪ ಬಾಗಿ ಸೋರಲು ತೊಡಗಬಹುದು. ಕೆಲವೊಮ್ಮೆ ಮನೆಯ ಒಂದು ಭಾಗ ಎರಡು ಮಹಡಿ ಇದ್ದು, ಮಿಕ್ಕ ಭಾಗ ಒಂದೇ ಅಂತಸ್ತು ಇದ್ದರೂ, ಡಿಫ‌ರೆನ್ಷಿಯಲ್‌ ಸೆಟ್ಲಮೆಂಟ್‌ – ಕಟ್ಟಡದ ಪಾಯ ಭಾರ ಹೊರುವಾಗ ಅನಿವಾರ್ಯವಾಗಿ ಆಗುವ ಕೆಲ ಮಿಲಿಮೀಟರ್‌ ಗಳಷ್ಟು ಇಳಿಕೆಯಲ್ಲಿ ಆಗುವ ಏರುಪೇರಿನಿಂದಾಗಿಯೂ ಬಿರುಕುಗಳು ಕಾಣಿಸಿಕೊಳ್ಳಬಹುದು.

ಸಾಮಾನ್ಯವಾಗಿ ಒಂದೆರಡು ವರ್ಷಗಳ ನಂತರ ಪಾಯದಲ್ಲಾಗುವ ಸೂಕ್ಷ್ಮ ಇಳಿಯುವಿಕೆ ಹಾಗೂ ಆರ್‌ ಸಿ ಸಿ ಸ್ಲ್ಯಾಬ್  ನಲ್ಲಾಗುವ ಬಾಗುವಿಕೆ ನಿಲ್ಲುತ್ತದೆ. ಒಂದೆರಡು ಬಾರಿ ಸೂರಿನ ರಿಪೇರಿ ಮಾಡಿಸಿದರೆ, ಮತ್ತೆ ತೊಂದರೆ ಆಗುವುದಿಲ್ಲ. ಆದರೆ, ಕೆಲವೊಮ್ಮೆ ಸೂರಿನ ದಪ್ಪ ಕಡಿಮೆ ಇರುವುದರ ಜೊತೆಗೆ, ಉತ್ತಮ ದರ್ಜೆಯ ಕಾಂಕ್ರಿಟ್‌ ಹಾಕಿರದಿದ್ದರೆ, ಸರಿಯಾಗಿ ಕ್ಯೂರ್‌ ಆಗಿರದಿದ್ದರೆ, ಸಾಕಷ್ಟು ಸಂಖ್ಯೆಯಲ್ಲಿ ಉಕ್ಕಿನ ಸರಳುಗಳನ್ನು ಹೆಣೆದಿರದಿದ್ದರೆ, ಬಾಗುವುದು ನಿಲ್ಲದೇನೂ ಇರಬಹುದು. ಕೆಲವೊಮ್ಮೆ ಈ ಬಾಗುವಿಕೆ ಕಣ್ಣಿಗೇ ಕಾಣುವಷ್ಟಿದ್ದು, ಗಾಬರಿಯೂ ಆಗುತ್ತದೆ. ಇಂಥಹ ಸಂದರ್ಭಗಳಲ್ಲಿ ಅನಿವಾರ್ಯವಾಗಿ ಸೂರಿಗೆ ಹೆಚ್ಚುವರಿ ಬಲ ಬರಿಸಲು ಉಕ್ಕಿನ “ಐ’ ಗರ್ಡರ್‌ ಗಳನ್ನು ಸೂರಿನ ಕೆಳಗೆ ನೀಡುವುದು ಅನಿವಾರ್ಯ ಅಗುತ್ತದೆ. ಈ ಮಾದರಿಯ ಗರ್ಡರ್‌ ಗಳನ್ನು ನೀಡುವ ಮೊದಲು, ಅವುಗಳಿಗೆ ಸೂಕ್ತ ಅಧಾರ ಇದೆಯೇ? ಎಂಬುದನ್ನು ಪರಿಶೀಲಿಸಲು ನುರಿತ ಆರ್ಕಿಟೆಕ್ಟ್ ಇಂಜಿನಿಯರ್‌ಗಳ ಸಹಾಯ ಪಡೆಯುವುದು ಉತ್ತಮ. ಸೂರಿನ ಒಂದು ಪಾಲು ಭಾರ ಈ ಉಕ್ಕಿನ ತೊಲೆಗಳ ಮೇಲೆ ಬರುವುದರಿಂದ, ಅವುಗಳನ್ನು ಎರಡೂ ಕೊನೆಗಳಲ್ಲಿ ಹೊರುವ ಗೋಡೆಗಳೂ ಸದೃಢವಾಗಿರುವುದು ಅನಿವಾರ್ಯ. ಈ ಉಕ್ಕಿನ ತೊಲೆಗಳು ಗೋಡೆಗಳ ಮೇಲೆ ಕೂರುವ ಸ್ಥಳದಲ್ಲಿ ಕಡೇಪಕ್ಷ ಆರು ಇಂಚು ದಪ್ಪದ ಆರ್‌ ಸಿ ಸಿ ಕಾಂಕ್ರಿಟ್‌ ಪದರ ಇಲ್ಲವೆ ಅರ್ಧ ಇಂಚು ದಪ್ಪದ ಸ್ಟೀಲ್‌ ಪ್ಲೇಟ್‌ ಇಡುವುದು ಉತ್ತಮ. ಹೀಗೆ ಮಾಡುವುದರಿಂದ ಸೂರಿನ ಭಾರ ಒಂದೇ ಕಡೆ ಬೀಳದೆ, ಪ್ಲೇಟಿನ ಮೂಲಕ ಗೋಡೆಯ ಮೇಲೆ ಒಂದಷ್ಟು ಹಂಚಿಹೋಗಲು ಸಹಾಯಕಾರಿ.

ಸ್ಲ್ಯಾಬ್  ಬಾಗಿದೆ ಎಂದು ನಿರ್ಧರಿಸುವುದು ಹೇಗೆ?
ಕೆಲವೊಮ್ಮೆ ಸ್ಲ್ಯಾಬ್  ಬಾಗಿರುವುದು ಕಣ್ಣಿಂದ ನೋಡಿದರೇನೇ ಗೊತ್ತಾಗಿ ಬಿಡುತ್ತದೆ. ಅತಿ ಕಡಿಮೆ ಅಂದರೆ ಎರಡು ಮೂರು ಮಿಲಿಮೀಟರ್‌ ಅಂದರೆ ಒಂದು ದಪ್ಪದಾರದಷ್ಟು ಬಾಗಿದ್ದರೆ ಅದನ್ನು ಪತ್ತೆ ಹಚ್ಚಲು ಸಣ್ಣದಾದ ದಾರವನ್ನು ಎರಡೂ ಕಡೆಗೆ ಸೂರಿನ ಕೆಳಗೆ ಹಿಡಿದರೆ, ಸ್ಲ್ಯಾಬ್ ಮಧ್ಯಭಾಗದಲ್ಲಿ ಬಾಗಿರುವುದು ತಿಳಿಯುತ್ತದೆ. ಜೊತೆಗೆ ಸ್ಲ್ಯಾಬ್  ಬಾಗಿದರೆ, ಅದು ಮನೆಯ ಹೊರಗೆ ಗೋಡೆಯಲ್ಲೂ ಬಿರುಕುಬಿಡುವಂತೆ ಮಾಡುತ್ತದೆ. ಈ ಬಿರುಕು ಸಾಮಾನ್ಯವಾಗಿ ಸೂರು ಹಾಗೂ ಅದರ ಕೆಳಗಿನ ಗೋಡೆ ಸೇರುವ ಸ್ಥಳದಲ್ಲಿ, ಉದ್ದಕ್ಕೂ ಬಿಟ್ಟಿರುತ್ತದೆ ಹಾಗೂ ಗೋಡೆಯೂ ತೇವ ಆಗಿರುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಸ್ಲಾéಬ್‌ ಬಾಗದೆ ಇದ್ದಾಗ ಗೋಡೆಯಲ್ಲಿ ಉದ್ದುದ್ದದ ಬಿರುಕುಗಳು ಕಾಣಿಸಿಕೊಳ್ಳುವುದಿಲ್ಲ.

ಸೂರು ಸೋರಲು ನಾನಾ ಕಾರಣಗಳಿರುತ್ತವೆ. ಅದರಲ್ಲಿ ಮುಖ್ಯವಾದವುಗಳಲ್ಲಿ ಒಂದು ಸ್ಲ್ಯಾಬ್  ಬಾಗುವುದರಿಂದಾಗಿ ಆಗುವ ಸೋರಿಕೆ. ಇತರೆ ವಿಧಾನಗಳಿಂದ ಸರಿಹೋಗದ ಸೋರುವಿಕೆ,ಸ್ಲ್ಯಾಬ್  ಬಲವರ್ಧಿಸಿದ ನಂತರ ನಿಲ್ಲಬಹುದು. ಆದುದರಿಂದ ತೊಂದರೆಯ ಮೂಲದಲ್ಲಿ ಪರಿಶೀಲಿಸಿ ಪರಿಹಾರ ಕಂಡುಕೊಳ್ಳುವುದು ಉತ್ತಮ.

ಆರ್ಕಿಟೆಕ್ಟ್ ಕೆ ಜಯರಾಮ್‌
ಹೆಚ್ಚಿನ ಮಾಹಿತಿಗೆ ಫೋನ್‌ 98441 32826

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ