ಪಟಾಕಿ ಪಟ್ಟಣ ವೆಲ್‌ಕಮ್‌ ಟು ಶಿವಕಾಶಿ

Team Udayavani, Oct 21, 2019, 5:15 AM IST

ಇಡೀ ಭಾರತಕ್ಕೇ ಬೆಳಕು ಹಂಚುವ ಶಿವಕಾಶಿ ಪಟ್ಟಣದಲ್ಲಿ 520 ನೋಂದಾಯಿತ ಮುದ್ರಣ ಕೈಗಾರಿಕೆಗಳು, 53 ಬೆಂಕಿ ಕಡ್ಡಿತಯಾರಿಕಾ ಕಾರ್ಖಾನೆಗಳು, 32 ರಾಸಾಯನಿಕ ಕಾರ್ಖಾನೆಗಳಿವೆ. ರಾಸಾಯನಿಕಗಳ ಹೊಳೆಯಲ್ಲಿ ಮಿಂದೇಳುವ ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿರುವ ಈ ಪಟ್ಟಣದ ಒಂದು ಪಕ್ಷಿ ನೋಟ…

“ಶಿವಕಾಶಿ’ ಎಂಬ ಪದ ಕಿವಿಗೆ ಬೀಳುತ್ತಲೇ ನಮ್ಮೆಲ್ಲರ ಕಣ್ಣುಗಳಲ್ಲಿ ಬೆಳಕು ಮಿನುಗುತ್ತದೆ. ಭಾರತದಲ್ಲಿ ಉರಿಸಲ್ಪಡುವ ಪಟಾಕಿಗಳಲ್ಲಿ ಸಿಂಹಪಾಲು, ಅಂದರೆ ಶೇ. 90ರಷ್ಟನ್ನು ಶಿವಕಾಶಿ ಪಟ್ಟಣವೊಂದೇ ಸರಬರಾಜು ಮಾಡುತ್ತದೆ ಎಂದರೆ ಅದರ ಪ್ರಾಬಲ್ಯವನ್ನು ಊಹಿಸಬಹುದು. ಆದರೆ ಶಿವಕಾಶಿಯ ಆರ್ಥಿಕತೆ ಪಟಾಕಿಗೇ ಸೀಮಿತವಾಗಿಲ್ಲ.

ಶಿವಕಾಶಿಯ ಆರ್ಥಿಕತೆ
ಇಡೀ ಪಟ್ಟಣ ಜೀವನೋಪಾಯಕ್ಕಾಗಿ ಹೆಚ್ಚಾಗಿ ಪಟಾಕಿ ತಯಾರಿಕೆಯನ್ನೇ ಅವಲಂಬಿಸಿದ್ದರೂ, ಪಟಾಕಿಯ ಹೊರತಾಗಿ ಬೆಂಕಿ ಕಡ್ಡಿ ತಯಾರಿಕೆ, ಡೈರಿ ಪುಸ್ತಕ ಮತ್ತು ಮುದ್ರಣ ಕ್ಷೇತ್ರದಲ್ಲೂ ಪಟ್ಟಣ ಮುಂದಿದೆ. ಪಟ್ಟಣದಲ್ಲಿ 520 ನೋಂದಾಯಿತ ಮುದ್ರಣ ಕೈಗಾರಿಕೆಗಳು, 53 ಬೆಂಕಿ ಕಡ್ಡಿತಯಾರಿಕಾ ಕಾರ್ಖಾನೆಗಳು, 32 ರಾಸಾಯನಿಕ ಕಾರ್ಖಾನೆಗಳಿವೆ. ಶಿವಕಾಶಿ, ರಾಷ್ಟ್ರಮಟ್ಟದಲ್ಲಿ ಪಟಾಕಿ ತಯಾರಿಕೆಗೆ ನೋಡಲ್‌ ಕೇಂದ್ರವಾಗಿದೆ. ಏನಿಲ್ಲವೆಂದರೂ ವಾರ್ಷಿಕ 6000 ಕೋಟಿ ರೂ. ವ್ಯವಹಾರ ನಡೆಸುತ್ತದೆ ಅಲ್ಲಿನ ಪಟಾಕಿ ಉದ್ಯಮ. ಶಿವಕಾಶಿ ಪಟಾಕಿಗೆ ಹೆಸರು ಮಾಡುವುದರ ಹಿಂದೆ ಪ್ರಕೃತಿಯ ಪಾಲೂ ಇದೆ. ಏಕೆಂದರೆ, ಶಿವಕಾಶಿ ಒಣ ಹವೆಯನ್ನು ಹೊಂದಿದೆ. ಅತಿ ಕಡಿಮೆ ಮಳೆಯನ್ನು ಪಡೆಯುವ ಪ್ರದೇಶವಾಗಿದ್ದು ಪಟಾಕಿ ತಯಾರಿಕೆಗೆ ಹೇಳಿ ಮಾಡಿಸಿದಂತಿದೆ.

ಈ ಊರು, ಡೈರಿ ಪುಸ್ತಕಗಳ ಉತ್ಪಾದನೆಯಲ್ಲೂ ಮುಂದಿದೆ ಎಂಬ ಸಂಗತಿ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಡೈರಿಗಳಲ್ಲಿ ಶೇ. 30 ರಷ್ಟು ಪಾಲನ್ನು ಶಿವಕಾಶಿ ತನ್ನದಾಗಿಸಿಕೊಂಡಿದೆ. ಈ ಊರು ಮುದ್ರಣ ಉದ್ಯಮದಲ್ಲೂ ಹೆಸರು ಮಾಡುವುದಕ್ಕೆ ಸ್ವಾರಸ್ಯಕರ ಕಾರಣವಿದೆ. ಪಟಾಕಿ ಬಾಕ್ಸ್‌ಗಳ ಮೇಲೆ ಲೇಬಲ್‌ಗ‌ಳನ್ನು ಅಗತ್ಯವಾಗಿ ಮುದ್ರಿಸಬೇಕು. ಅದನ್ನು ಒದಗಿಸುವ ಸಲುವಾಗಿ ಲೇಬಲ್‌ ತಯಾರಿಕೆಗಾಗಿ ಮುದ್ರಣ ಉದ್ಯಮ ಪ್ರಾರಂಭಗೊಂಡಿತು. ಹಾಗೆ ಶುರುವಾಗಿದ್ದು, ನಂತರದ ದಿನಗಳಲ್ಲಿ ಆಧುನಿಕ ಯಂತೋÅಪಕರಣಗಳೊಂದಿಗೆ ವಿಕಸನಗೊಂಡು ಪರಿಪೂರ್ಣ ಮುದ್ರಣ ಕೇಂದ್ರವಾಗಿ ಬೆಳೆಯಿತು.

ಮೊದಲ ಫ್ಯಾಕ್ಟರಿ
ಇದರ ಹಿನ್ನೆಲೆಯನ್ನು ಕೆದಕುತ್ತಾ ಹೋದಾಗ ಕುತೂಹಲಕರ ಮಾಹಿತಿ ಸಿಗುತ್ತದೆ. 1900 ಇಸವಿಯ ಪ್ರಾರಂಭದಲ್ಲಿ ಶಿವಕಾಶಿ ಎಂದೂ ಕಂಡರಿಯದ ಬರಗಾಲವನ್ನು ಕಂಡಿತ್ತು. ಆ ಸಮಯದಲ್ಲಿ ಕೆಲಸ ಅರಸಿಕೊಂಡು ಗುಳೇ ಹೊರಟವರಲ್ಲಿ ಷಣ್ಮುಗ ನಾಡರ್‌ ಮತ್ತು ಅಯ್ಯ ನಾಡರ್‌ ಎಂಬ ಸಹೋದರರೂ ಇದ್ದರು. ಅವರು ದೂರದ ಕೋಲ್ಕತಾಗೆ ಹೋದಾಗ ಬೆಂಕಿಪೊಟ್ಟಣ ಫ್ಯಾಕ್ಟರಿಯೊಂದರಲ್ಲಿ ಕೆಲಸ ಸಿಕ್ಕಿತು. ಅಲ್ಲಿ ಪರಿಣತಿ ಪಡೆಯುವಷ್ಟರಲ್ಲಿ ಊರಿನ ಸಂಕಷ್ಟ ಕಳೆದಿತ್ತು. ಷಣ್ಮುಗ ಮತ್ತು ಅಯ್ಯ ಇಬ್ಬರೂ ಸ್ವಂತ ಫ್ಯಾಕ್ಟರಿಯನ್ನು ಶಿವಕಾಶಿಯಲ್ಲಿ ತೆರೆದರು. ಅದೇ ಮೊದಲು. ಆವತ್ತು ಶುರುವಾದ ಪಟಾಕಿ ಬಿಜಿನೆಸ್‌ ಇವತ್ತಿನವರೆಗೂ ನಡೆಯುತ್ತಲೇ ಇದೆ.

ಸಮಸ್ಯೆಗಳೂ ಇವೆ
ಶತಮಾನದಿಂದಲೂ ಕಾರ್ಯಾಚರಿಸುತ್ತಿದ್ದರೂ ಪಟಾಕಿ ಉದ್ಯಮದ ಹೆಚ್ಚಿನ ಭಾಗ ಅಸಂಘಟಿತವಾಗಿದೆ. ಶಿವಕಾಶಿಯಲ್ಲಿ ಸುಮಾರು 8,000 ಅಸಂಘಟಿತ ಘಟಕಗಳು ಕಾರ್ಯನಿರ್ವಹಿಸುತ್ತವೆ. ಇಡೀ ಭಾರತಕ್ಕೇ ಪಟಾಕಿ ಪೂರೈಸಬೇಕಿರುವುದರಿಂದ ಇಡೀ ಪಟ್ಟಣವೇ ಹಗಲು ರಾತ್ರಿ ಕೆಲಸಕ್ಕೆ ಕೂತುಬಿಡುತ್ತದೆ. ಪತಿ, ಪತ್ನಿ ಮಕ್ಕಳು ಹೀಗೆ ಇಡೀ ಕುಟುಂಬವೇ ಕೆಲಸದಲ್ಲಿ ನಿರತರಾಗುತ್ತಾರೆ. ಮಕ್ಕಳು, ಹಗಲು ರಾತ್ರಿ ಮನೆಯವರಿಗೆ ನೆರವಾಗುವುದು ಕೆಲ ಸಮಯದ ಹಿಂದೆ ಸುದ್ದಿಯಾಗಿತ್ತು. ಶಿವಕಾಶಿಯಲ್ಲಿನ ಪಟಾಕಿನ ಉದ್ಯಮ ಬಾಲ ಕಾರ್ಮಿಕ ಪದ್ಧತಿಯನ್ನು ಪೋಷಿಸುತ್ತಿದೆ ಎಂಬ ವರದಿಗಳೂ ದಶಕದ ಹಿಂದೆ ಪ್ರಕಟವಾಗಿದ್ದವು. ಪಟಾಕಿ ಉದ್ಯಮ ಅಲ್ಲಿನವರಿಗೆ ಜೀವನಕ್ಕೆ ದಾರಿಯನ್ನೇನೋ ಹುಡುಕಿಕೊಟ್ಟಿದೆ. ಆದರೆ, ಅದರ ಜೊತೆಗೆ ಸಮಸ್ಯೆಗಳನ್ನೂ ತಂದೊಡ್ಡಿದೆ. ರಾಸಾಯನಿಕದೊಂದಿಗೆ ನಂಟನ್ನು ಹೊಂದಿರುವುದರಿಂದ, ಜನ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಸುರಕ್ಷಾ ಕ್ರಮಗಳನ್ನು ಪಾಲಿಸದೇ ಇರುವುದರಿಂದ ಅವಘಡಗಳು ಜರುಗಿವೆ. ಆರೋಗ್ಯ ಸೇವೆ, ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿದಲ್ಲಿ ಶಿವಕಾಶಿ ಇನ್ನಷ್ಟು ಅಭಿವೃದ್ದಿ ಹೊಂದುವುದರಲ್ಲಿ ಸಂಶಯವಿಲ್ಲ,.

ಹಸಿರು ಪಟಾಕಿಯಿಂದ ಪುನರುಜ್ಜೀವ
ಪಟಾಕಿಗಳಿಂದ ಉಂಟಾಗುವ ಮಾಲಿನ್ಯವನ್ನು ತಗ್ಗಿಸಲು ಕೇಂದ್ರ ಸರ್ಕಾರ ಕಳೆದ ವರ್ಷದಿಂದಲೇ ಹಸಿರು ಪಟಾಕಿ ತಯಾರಿಕೆಗೆ ಒತ್ತು ನೀಡತೊಡಗಿತ್ತು. ಮುಖ್ಯವಾಗಿ ಶಿವಕಾಶಿಯನ್ನೇ ಗುರಿಯಾಗಿಸಿಕೊಂಡು ಕೆಲ ಕ್ರಮಗಳನ್ನು ಜಾರಿಗೊಳಿಸಲಾಯಿತು. ಪಟಾಕಿ ತಯಾರಿಕೆಗೆ ಪ್ರಮುಖವಾಗಿ ಬಳಸುತ್ತಿದ್ದ ರಾಸಾಯನಿಕ- ಬೇರಿಯಂ ನೈಟ್ರೇಟ್‌. ಅದನ್ನೇ ಕೇಂದ್ರ ಸರ್ಕಾರ ನಿಷೇಧಿಸಿತು. ಅದಕ್ಕೆ ಬದಲಿಯಾದ ರಾಸಾಯನಿಕಗಳನ್ನು ಬಳಸಿ ಪಟಾಕಿ ತಯಾರಿಸುವುದು ಹೇಗೆ ಎಂಬುದರ ಬಗ್ಗೆ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಕೆಲಸಗಾರರಿಗೆ ತರಬೇತಿ ನೀಡಲಾಯಿತು. ಬದಲಿ ರಾಸಾಯನಿಕವನ್ನು ಸೂಚಿಸುವಲ್ಲಿ ನಾಗ್‌ಪುರದ “ಕೌನ್ಸಿಲ್‌ಆಫ್ ಸೈಂಟಿಫಿಕ್‌ ಅಂಡ್‌ ಇಂಡಸ್ಟ್ರಿಯಲ್‌ ರಿಸರ್ಚ್‌(ಸಿಎಸ್‌ಐಆರ್‌)’ ಮತ್ತು ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆ (ಎನ್‌ಇಇಆರ್‌ಐ) ಕಾಣಿಕೆ ಸಲ್ಲಿಸಿದೆ. ಅವೆರಡರ ಸಹಯೋಗದಲ್ಲಿ ಅನೇಕ ಪ್ರಯೋಗಗಳನ್ನು ಯಶಸ್ವಿಯಾಗಿ ಕೈಗೊಳ್ಳಲಾಯಿತು.

ಇದೀಗ, ಅಭಿವೃದ್ದಿ ಪಡಿಸಲಾಗಿರುವ ಹಸಿರು ಪಟಾಕಿ, ಹಿಂದಿನದಕ್ಕಿಂತ ಮಾಲಿನ್ಯವನ್ನು ಶೇ. 30 ರಷ್ಟು ತಗ್ಗಿಸುತ್ತದೆ. ಮಾಲಿನ್ಯ ಮಾತ್ರವಲ್ಲ, ಶಬ್ದವೂ ಕಡಿಮೆ! ಹಸಿರು ಪಟಾಕಿಗಳ ಶಬ್ದದ ಮಟ್ಟವು 125 ಡೆಸಿಬಲ್‌ ಆಗಿರುತ್ತದೆ. ಹಳೆಯ ಪಟಾಕಿಯ ಸದ್ದಿನ ಮಟ್ಟ ಹೆಚ್ಚಾ ಕಡಿಮೆ 160 ಡೆಸಿಬಲ್‌ ಆಸುಪಾಸಿನಲ್ಲಿತ್ತು. ಆದರೆ ಆರೋಗ್ಯಕರ ಮಟ್ಟ 90 ಡೆಸಿಬಲ್‌. ಮುಂದಿನ ದಿನಗಳಲ್ಲಿ ಅದೂ ಸಾಧ್ಯವಾಗಲಿದೆ.

ಸೇನೆ ಜೊತೆ ನಂಟು
“ಶಿವಕಾಶಿ’ ಭಾರತೀಯ ಸೇನೆ ಜೊತೆಗೂ ನಂಟನ್ನು ಹೊಂದಿದೆ. ಅವರಿಗೆ ಅಗತ್ಯವಿರುವ ಅಮ್ಯುನಿಷನ್‌(ಸಿಡಿಮದ್ದು)ಅನ್ನು ಇಲ್ಲಿನ ಕಾರ್ಖಾನೆಗಳು ಪೂರೈಸುತ್ತವೆ. ಬಿರುಗಾಳಿಯ ನಡುವೆಯೂ ಉರಿಸಬಲ್ಲ ಬೆಂಕಿ ಕಡ್ಡಿಗಳು, ಸೈನಿಕರಿಗೆ ತರಬೇತಿ ನೀಡುವ ಸಮಯದಲ್ಲಿ ಬಳಕೆಯಾಗುವ ಬಾಂಬ್‌ಗಳು ಹೀಗೆ ಇನ್ನಿತರ ವಸ್ತುಗಳನ್ನು ಸೇನೆಗೆ ಒದಗಿಸುತ್ತದೆ.

ರಾಕೆಟ್‌ ಉಡಾವಣೆಗೆ ಶಿವಕಾಶಿ ಇಂಧನ
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ ರಾಕೆಟ್‌ ಉಡಾವಣೆಯ ಸಂದರ್ಭದಲ್ಲಿ ಅಧಿಕ ಪ್ರಮಾಣದಲ್ಲಿ ಸಿಡಿಮದ್ದುಗಳು ಮತ್ತು ಪ್ರೊಪೆಲ್ಲೆಂಟುಗಳು ಬೇಕಾಗುತ್ತವೆ. ಪಟಾಕಿಯನ್ನೇ ನಂಬಿ ಕುಳಿತಿರುವ ಶಿವಕಾಶಿಯ ಲಕ್ಷಾಂತರ ಕೆಲಸಗಾರರಿಗೆ ಇದುವೇ ಆಶಾಕಿರಣ. ಇಸ್ರೋಗೆ ಅಗತ್ಯವಿರುವ ಪ್ರೊಪೆಲ್ಲೆಂಟುಗಳನ್ನು ಶಿವಕಾಶಿಯೇ ಒದಗಿಸುವಂತೆ ಮಾಡುವ ಮಾಸ್ಟರ್‌ ಪ್ಲಾನ್‌ನಲ್ಲಿ ಐಐಟಿ ಮದ್ರಾಸ್‌ ನಿರತವಾಗಿದೆ. ಇದುವರೆಗೂ ಭಾರತ 29 ದೇಶಗಳ, 239 ಉಪಗ್ರಹಗಳನ್ನು ಉಡಾಯಿಸಿರುವುದನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಬಹುದು.. ಅಂದುಕೊಂತೆಯೇ ಆದರೆ ಪಟಾಕಿ ಕಾಶಿ ಎಂಬ ಹೆಸರು ಪಡೆದಂತೆಯೇ ರಾಕೆಟ್‌ ಪ್ರೊಪೆಲ್ಲೆಂಟುಗಳ ಕಾಶಿ ಎಂಬ ಕೀರ್ತಿಗೂ ಶಿವಕಾಶಿ ಪಾತ್ರವಾಗುವುದರಲ್ಲಿ ಅನುಮಾನವಿಲ್ಲ.

-ದೀಪಾ ಮಂಜರಗಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ