ಕೃಷಿ ಕಾಡಿನ ಜೀವದಾರಿ

Team Udayavani, Sep 10, 2018, 8:46 PM IST

ನಮ್ಮ ನೆಲಕ್ಕೆ ಯಾರೂ ಬರುವುದು ಬೇಡವೆಂದು ಬೆಳೆ ರಕ್ಷಣೆಗೆ ಸುಭದ್ರ ಬೇಲಿ ಹಾಕಿ ಕೃಷಿ ಕೋಟೆಯಲ್ಲಿ ಗೆಲ್ಲಲು ಹೋರಾಡುತ್ತೇವೆ. ನಾವು ಎಷ್ಟೆಲ್ಲ ಕಸರತ್ತು ಮಾಡಿದರೂ,  ತೋಟಕ್ಕೆ ಕಳ್ಳಗಿಂಡಿಯಲ್ಲಿ ಬರುವವರು ಬಂದೇ ಬರುತ್ತಾರೆ. ಕೃಷಿಯ ಜೊತೆಗಿನ ಜೀವಲೋಕದ ಕೊಡುಕೊಳ್ಳುವಿಕೆಯ ನೋಟ ಇಲ್ಲಿದೆ.

ಕರಾವಳಿ ಗದ್ದೆಗಳಲ್ಲಿ ಬೇಸಿಗೆ ಬೆಳೆ ರಕ್ಷಣೆಗೆ ಮರಳಿನಲ್ಲಿ ಚೆಂದದ ಕಂಟ ಕಟ್ಟುತ್ತಾರೆ. ಕುಂದಾಪುರದ ಗುಡ್ಡದಲ್ಲಿ ನಿರ್ಮಿಸಿದ ಮಣ್ಣಿನ ಗೋಡೆ, 40-50 ವರ್ಷಗಳಷ್ಟು ಸುದೀರ್ಘ‌ ಮಳೆಗೆ ಅಂಜದೇ ಬೆಳೆಯನ್ನು ಕಾಯುತ್ತದೆ. ಬಯಲು ಸೀಮೆಯ ಜೋಳದ ಹೊಲದಲ್ಲಿ ಹಂದಿ ಹಾವಳಿ ತಡೆಯಲು ಹಳೆಯ ಸೀರೆ ಸುತ್ತುತ್ತ ಭೂತಾಯಿಗೆ ತಾತ್ಕಾಲಿಕ ಬಣ್ಣದ ಅಲಂಕಾರ ಇಂದು ನಡೆಯುತ್ತದೆ.  ವಿದ್ಯುತ್‌ ಬೇಲಿ, ಹಸಿರು ಬೇಲಿ, ಮುಳ್ಳಿನ ಬೇಲಿ, ಕಳ್ಳಿ ಬೇಲಿ,  ತಂತಿ ಜಾಲರಿ, ಕಲ್ಲಿನ ಬೇಲಿ, ಕಾಂಕ್ರೀಟ್‌ ಗೋಡೆ, ಮಣ್ಣಿನ ಅಂಗಳ ಸೇರಿದಂತೆ ಪ್ರದೇಶಕ್ಕೆ ತಕ್ಕಂತೆ ಬೆಳೆ ಸಂರಕ್ಷಣೆಗೆ ನೂರಾರು ಉಪಾಯಗಳಿವೆ. ದನಕರು, ಕಾಡು ಪ್ರಾಣಿಗಳಿಂದ ಫ‌ಸಲು ರಕ್ಷಣೆಗೆ  ಗೋಮಾಳ, ಬೆರ್ಚಪ್ಪ(ಬೆದರು ಗೊಂಬೆ), ಡಬ್ಬಿ ಬಡಿತ, ಬೆಂಕಿ, ಬೇಟೆಗಳಂತೂ ಎಲ್ಲರಿಗೂ ಗೊತ್ತೇ ಇದೆ. ಕಾವಲು ಎಷ್ಟೇ ಇರಲಿ, ನಮ್ಮ ಭೂಮಿಯ ಜೊತೆ ಕಾಡಿನ ಮೂಲೆಯಿಂದ ಜೀವದಾರಿ ಯಾವತ್ತೂ ಇರುತ್ತದೆ.

ಜೀವಲೋಕದ ಜಾಣ ಹಾದಿಗಳು…
ಭೂಮಿ ನಮ್ಮದೆಂದು ಗಡಿ ಕಾಯುವ ಉದ್ದೇಶ ಒಂದಾದರೆ, ಒಳಗಡೆಯ ಬೆಳೆ ಉಳಿಸುವ ಸಾಹಸಗಳೆಲ್ಲ ಸೇರಿ ಬೇಲಿ ಪರಿಕಲ್ಪನೆಯಾಗಿದೆ. ಕೋತಿಗಳ ಕಾಟಕ್ಕೆ ಹುಲಿ ಧ್ವನಿ ಹೊರಡಿಸುವ ಸಲಕರಣೆಗಳು, ಏರ್‌ಗನ್‌ಗಳು ಬಳಕೆಗೆ ಬಂದಿವೆ.  ಇಷ್ಟಾದರೂ ಹಾರುವ ಹಕ್ಕಿಗಳು, ಮಣ್ಣಿನಿಂದ ಮೇಲೇಳುವ ಕೀಟಗಳು, ಬಿಲದಿಂದ ನುಸುಳುವ ಇಲಿ, ಹಾವುಗಳಿವೆ. ಓತಿಕ್ಯಾತ, ಕಪ್ಪೆಗಳು ಜೊತೆಗಿವೆ. ನಾವು ಬೆಳೆದ ಬೆಳೆಯ ಹಕ್ಕು ನಮ್ಮದೆಂದು ರೈತ ಪ್ರಯತ್ನಿಸಿದರೂ ತಮ್ಮ ಪಾಲು ಪಡೆಯಲು  ಜೀವಲೋಕದ ಜಾಣ್ಮೆಗಳು ಕಾಲಕ್ಕೆ ತಕ್ಕಂತೆ  ವಿಕಾಸವಾಗುತ್ತಿವೆ. ಕಾಡಿನ ಮೂಲೆಯಿಂದ ಕೃಷಿ ಭೂಮಿಗೆ ಒಳನುಸುಳುವ ಜೀವದಾರಿಗಳಲ್ಲಿ ನಮಗೆ ಅನುಕೂಲವಾಗುವ ಉಪಕಾರಿ ಜೀವಿಗಳು ಬರುತ್ತವೆ. ಜೀವಿಗಳ ಮೂಲ ನಿವಾಸ ಕಾಡಾಗಿದ್ದರೂ ಆಹಾರ ಆಹಾರಕ್ಕೆ ಕೃಷಿ ನೆಲದ ಸಂಬಂಧ ಉಳಿದಿದೆ. ವನ್ಯಲೋಕದ ಸರಹದ್ದಿನಲ್ಲಿರುವ ನಾವು ನಮಗೆ ಬೆಳೆಯಷ್ಟೇ ಬೇಕು. ವನ್ಯ ಸಂಕುಲಗಳು ಬೇಡವೆಂದು ಅನ್ಯಲೋಕದಂತೆ ವರ್ತಿಸಲಾಗುವುದಿಲ್ಲ,  

ಭಯೋತ್ಪಾದಕರ ತಾಣವೆಂದು ಜೀವದಾರಿಯನ್ನು ಸಂಪೂರ್ಣ ಮುಚ್ಚಲಾಗುವುದಿಲ್ಲ. ಆದರೆ  ರಾಸಾಯನಿಕ ಕೀಟನಾಶಕ, ಕಳೆನಾಶಕಗಳ ಅಬ್ಬರದಲ್ಲಿ ಬೆಳೆಗೆ ನೆರವಾಗುವ ಹಲವು ಜೀವಿಗಳ ಹಂತಕರಾಗಿದ್ದೇವೆ.  ಕಾಡು-ತೋಟ ಎಲೆಮರೆಯ ಇಂಥ ಸೇವಕರ ಆಶ್ರಯ ತಾಣವಾಗಿ ಕೃಷಿಗೆ ನೆರವಾಗುತ್ತದೆ.  

ಬೇಸಿಗೆಯ ಆರಂಭದಲ್ಲಿ ಮಲೆನಾಡಿನ ಭತ್ತದ ಗದ್ದೆಗಳಲ್ಲಿ ಕೆರೆ ಹಾವುಗಳ ಸುತ್ತಾಟ ಜೋರು. ಇಲಿಗಳನ್ನು ಆಹಾರವಾಗಿ ನಂಬಿದ ಹಾವು, ಭತ್ತದ ರಕ್ಷಣೆಗೆ ನೆರವಾಗುತ್ತದೆ. ಒಂದು ಜೋಡಿ ಇಲಿಗಳು ವರ್ಷಕ್ಕೆ ಮರಿ ಹಾಕುತ್ತವಲ್ಲ; ಅವಷ್ಟೂ ಉಳಿದರೆ 880 ಇಲಿಗಳಾಗುತ್ತವಂತೆ!  ಗೂಬೆಗಳು ಇಲಿ ನಿಯಂತ್ರಣ ಮಾಡುತ್ತವೆಂದು ಇವುಗಳನ್ನು ಸಾಕಿ ಚೈನಾದಲ್ಲಿ ಇಲಿ ನಿಯಂತ್ರಿಸುವ ಯತ್ನ ನಡೆದಿದೆ. ಅಪಶಕುನದ ಖ್ಯಾತಿಯ ಗೂಬೆಗೆ ಸಂರಕ್ಷಣೆಯ ಯೋಗ ಈ ಕಾರಣಕ್ಕಾದರೂ ಪ್ರಾಪ್ತವಾಗಿದ್ದು  ಖುಷಿಯ ಸಂಗತಿ. ಮಲೆನಾಡಿನಲ್ಲಿ ಭತ್ತದ ಗದ್ದೆಗಳಲ್ಲಿ ತೂಬರು(ಬೀಡಿ ಎಲೆ) ಗಿಡದ ಗೂಟ ಊರುವ ವಿಶಿಷ್ಟ ಪದ್ಧತಿ  ಇದೆ.  ರಾತ್ರಿ “ಗೂಟದ ಮೇಲೆ ಗುಮ್ಮ(ಗೂಬೆ) ಕೂಡ್ರುತ್ತದೆ, ಅದು ಇಲಿ ಹಿಡಿಯುತ್ತದೆ’ ಎಂದೆಲ್ಲ ರೈತರು ವಿವರಿಸುತ್ತಾರೆ. ನಮ್ಮ ಬೆಳೆ ರಕ್ಷಣೆಗೆ ಗೂಬೆ ಬೇಕೆಂದರೆ ಪಕ್ಕದಲ್ಲಿ ಕಾಡಿರಬೇಕು. ಕಾಡಿನಲ್ಲಿ ಇವುಗಳ ವಾಸಕ್ಕೆ ಅನುಕೂಲಕರ ಮರವಿರಬೇಕು. ಇಲ್ಲವೇ ನಮ್ಮ ಭೂಮಿಯಲ್ಲಿ ಆವಾಸದ ಅವಕಾಶ ಈ ಮಾಂಸಹಾರಿ ಪಕ್ಷಿಗೆ ಬೇಕು. 

ಸಸ್ಯ ಪರಾಗಸ್ಪರ್ಶದಲ್ಲಿ ಜೇನು, ಮಿಸರಿ(ಮುಜಂಟಿ)ಗಳ ಪಾತ್ರ ಪ್ರಮುಖವಾದದ್ದು. ಮಾವು, ಅಡಿಕೆ, ಕಾಫಿ, ಪಪಾಯ, ಬಾಳೆ, ಸೂರ್ಯಕಾಂತಿ, ನೇರಳೆ, ನೆಲ್ಲಿ, ದಾಳಿಂಬೆ ಸೇರಿದಂತೆ ಬೆಳೆ ಯಾವುದಿದ್ದರೂ ಜೇನು ಬೇಕು. ತೋಟಗಾರಿಕಾ ಬೆಳೆಗಳಲ್ಲಿ ಜೇನಿಲ್ಲದಿದ್ದರೆ ಶೇಕಡಾ 25-30 ರಷ್ಟು  ಉತ್ಪಾದನೆ ಕಡಿಮೆಯಾಗಬಹುದು. ಹೀಗಾಗಿಯೇ, ಕೃಷಿ ವಿಜಾನಿಗಳು ಜೇನು ಸಾಕಣೆಯನ್ನು ಪೂರಕವಾಗಿ ಕೈಗೊಳ್ಳಲು ಸೂಚಿಸುತ್ತಾರೆ. ತೋಟದ ಬೆಳೆಯಲ್ಲಿ ವರ್ಷಕ್ಕೆ ಒಮ್ಮೆ  ಒಂದೆರಡು ದಿನ, ವಾರ ಹೂವು ದೊರೆಯುತ್ತದೆ. ಒಂದಾದ ನಂತರ ಒಂದು ಸಸ್ಯ ಹೂವರಳಿಸುತ್ತ ವರ್ಷವಿಡೀ ಜೇನಿನ ಬದುಕಿಗೆ ಪರಾಗ, ಮಕರಂದದ ಪೂರೈಕೆಯನ್ನು ನೈಸರ್ಗಿಕ ಕಾಡಿನ ನೂರಾರು ಸಸ್ಯಗಳು ನಿರಂತರವಾಗಿ ನೀಡುತ್ತವೆ. ಪುಟ್ಟ ಹುಲ್ಲಿನ ಹೂವು, ಬಳ್ಳಿಗಳು ಆಹಾರ ನೀಡಿ ಜೇನನ್ನು ಬದುಕಿಸುತ್ತವೆ. ಕಾಡಿನ ನೆರವು ಪಡೆದು ಬದುಕುವ ಪುಟ್ಟ ಜೇನು ದುಂಬಿಗಳು ಉತ್ಪಾದನೆ ಹೆಚ್ಚಿಸಿ ಕೃಷಿಕರನ್ನು ಉಳಿಸುತ್ತವೆ. ಹೆಜ್ಜೆàನುಗಳು ಗೂಡಿನಿಂದ ಹತ್ತಾರು ಕಿ.ಲೋ ಮೀಟರ್‌ ದೂರದವರೆಗೂ ಹೋಗಿ ಆಹಾರ ಹುಡುಕುತ್ತವೆ. ತುಡವಿ ಜೇನುಗಳು ಒಂದೆರಡು ಕಿಲೋ ಮೀಟರ್‌ ಸನಿಹದ ಹೂವಿನ ಸಂಬಂಧ ಸಂಪಾದಿಸುತ್ತವೆ. ಗೂಡಿಗೆ ಹತ್ತಿರವಿರುವ ಹೂವಿಗೆ ಭೇಟಿ ನೀಡುವುದು ಜೇನು ಹುಳುವಿನ ಗುಣ. ತೋಟದ ಸನಿಹ ಜೇನಿದ್ದರೆ ಅದರ ನೇರ ಲಾಭ ನಮಗೆ ದೊರೆಯುತ್ತದೆ. ಜೇನು ಹಾಗೆಲ್ಲ ಸಿಗಬೇಕೆಂದರೆ, ಜೇನು ಹುಳುಗಳು ಬದುಕುವ ವಾತಾವರಣವನ್ನು ನಮ್ಮ ಪರಿಸರದಲ್ಲಿ ಉಳಿಸುವುದು ಮುಖ್ಯ.

ಕಡಿ ಜೇನುಗಳ ಬಗ್ಗೆ ಗೊತ್ತಾ?
ಕಾಡುಗಳಲ್ಲಿ ಕಡಿಜೇನುಗಳೆಂಬ ಅತ್ಯಂತ ವಿಷಕಾರಿ ಜೀನಿದೆ. ಮರದ ಹೊಟ್ಟು, ಮಣ್ಣು ಬಳಸಿ ದೈತ್ಯ ಗೂಡು ನಿರ್ಮಿಸುವ ಇವುಗಳ ಕುಟುಂಬದಲ್ಲಿ ಸಾವಿರಾರು ಜೇನು ದುಂಬಿಗಳಿರುತ್ತವೆ. ಮಾಂಸಹಾರಿಗಳಾದ ಇವು ಕೀಟಗಳನ್ನು ಹಿಡಿದು ತಿನ್ನುತ್ತವೆ. ಮಲೆನಾಡಿನಲ್ಲಿ ನವೆಂಬರ್‌- ಡಿಸೆಂಬರ್‌ನಲ್ಲಿ ಮಳೆಗಾಲದ ಭತ್ತ ಕಟಾವಿನ ಕಾಲಕ್ಕೆ ದೈತ್ಯ ಗೂಡುಗಳನ್ನು ಮರಗಳಲ್ಲಿ ನೋಡಬಹುದು. ಇವು ಎಷ್ಟು ಅಪಾಯಕಾರಿಯೆಂದರೆ-ಮನುಷ್ಯರು,  ದನಕರುಗಳ ಮೇಲೆ ಪ್ರಾಣಾಂತಿಕ ಹಾನಿ ಮಾಡಬಲ್ಲವು. ಈಗಾಗಲೇ ಹೇಳಿದಂತೆ ಇವು ಮಾಂಸಹಾರಿಗಳಾದ್ದರಿಂದ ನಮಗೆ ಸಿಹಿಜೇನು ನೀಡುವ ದುಂಬಿಗಳನ್ನು ಕೊಂದು ತಿನ್ನುತ್ತವೆ. ಜೇನು ಗೂಡಿಗೆ ದಾಳಿ ನೀಡಲು ಶುರುವಾದರೆ ಇಡೀ ಜೇನು ಹುಳುವಿನ ಸಂಸಾರವನ್ನೇ ಸಂಹರಿಸುತ್ತವೆ. ನಮಗೆ ಒಂದು ದುಂಬಿ ಚುಚ್ಚಿದರೆ ಆಸ್ಪತ್ರೆಗೆ ಓಡಬೇಕು, ಇನ್ನು ಹತ್ತಾರು ಕಡಿದರೆ ಏನಾದೀತೆಂದು ಊಹಿಸಿಕೊಳ್ಳಬಹುದು. ಚೈನಾದಲ್ಲಿ 42ಕ್ಕೂ ಹೆಚ್ಚು ಜನ ಕೆಲವು ವರ್ಷಗಳ ಹಿಂದೆ ಇದೇ ಕಡಿಜೇನು ದಾಳಿಗೆ ತುತ್ತಾಗಿ ಸತ್ತಾಗ ದೊಡ್ಡ  ಆತಂಕ ಎದುರಾಗಿತ್ತು. ಕಡಿಜೇನು ಗೂಡು ಕಂಡಲ್ಲಿ ಸುಟ್ಟು ನಾಶಪಡಿಸಲು ಚೀನ ಸರ್ಕಾರ ನಿರ್ಧರಿಸಿತ್ತು. 

ಜೀವಲೋಕ ಸುಲಭಕ್ಕೆ ಅರ್ಥವಾಗದು. ದೈತ್ಯ ಕಡಿಜೇನಿನಲ್ಲೂ ಸದ್ಗುಣಗಳಿವೆ. ಸಾವಯವ ಭತ್ತ ಬೆಳೆಯಬೇಕೆಂದು ಹಂಬಲಿಸುವವರು, ಮೊದಲು ಈ ಜೇನಿಗೆ ಹಾನಿ ಮಾಡುವುದನ್ನು ನಿಲ್ಲಿಸಬೇಕು. ಮುಂಜಾನೆ ಐದು ಗಂಟೆಗೆ ಭತ್ತದ ಗದ್ದೆಯಲ್ಲಿ ಸಸಿ ಬುಡಗಳ ಒಳಹೊಕ್ಕು ಹಾರಾಡುತ್ತ ಕೀಟ ತಿನ್ನುವ ಕೆಲಸವನ್ನು ಇವು ಅತ್ಯಂತ ಪರಿಣಾಮಕಾರಿಯಾಗಿ ಮಾಡುತ್ತವೆ. ಇವುಗಳ ಝೇಂಕಾರದ ಆರ್ಭಟಕ್ಕೆ ಗದ್ದೆಗಳಲ್ಲಿ ಅಲ್ಲೋಲ ಕಲ್ಲೋಲವುಂಟಾಗುತ್ತದೆ.  ಚಳಿಗೆ ಮುದುಡಿದ ಕೀಟಗಳು ಥಟ್ಟನೆ ಹಾರಾಡಿ ಇವುಗಳ ಆಹಾರವಾಗುತ್ತವೆ. ಸಹಸ್ರಾಕ್ಷದ ನೆರವಿನಿಂದ ಹಸಿರೆಲೆಗಳ ನಡುನ ಹುಳು(ಲಾರ್ವಾ)ಗಳನ್ನು ತಿಂದು ಮುಗಿಸುತ್ತವೆ. ಗೂಡಿಗೆ ಯಾವ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಿದರೆ ನಮ್ಮ ಪಕ್ಕದಲ್ಲಿದ್ದರೂ ಏನೂ ಮಾಡುವುದಿಲ್ಲ. ಡಿಸೆಂಬರ್‌ ಚಳಿಯಲ್ಲಿ ಇವುಗಳ ಗೂಡಿನ ಸನಿಹದಲ್ಲಿ ಹಾರಾಡುತ್ತ  ಜೇನುಬಾಕ (Bee-eater) ಪಕ್ಷಿಗಳು ಕಡಿಜೇನಿನ ಇಡೀ ಕುಟುಂಬಗಳನ್ನು ಹಿಡಿದು ತಿನ್ನುತ್ತವೆ. 

ಕೆಂಪಿರುವೆ ಎಂಬ ಗೆಳೆಯ
ಕೆಂಪಿರುವೆ ಕೃಷಿಕರಿಗೆ ಚಿರಪರಿಚಿತ.  ಸೌಳಿ, ಸವಳಿ, ಚಗಳಿ, ಚೌಳಿ, ಉರಿ ಕೆಂಚುಗ ಮುಂತಾದ ಹೆಸರು ಇವಕ್ಕಿದೆ. ಕೆಂಪಿರುವೆ(Oecophylla smaragdina)ಗಳಿಗೆ ಮುಖ್ಯವಾಗಿ ಪ್ರೋಟಿನ್‌ ಹಾಗೂ ಸಕ್ಕರೆ ಆಹಾರ. ಪ್ರೋಟಿನ್‌ ಇಲಿ, ಕೀಟ, ಮಿಡತೆ, ಚಿಟ್ಟೆಗಳಿಂದ ದೊರೆಯುತ್ತದೆ. ಎಲೆ ಚಿಗುರಿದಾಗ, ಹೂವರಳಿ, ಫ‌ಲ ಬಿಡುವಾಗ ವೃಕ್ಷಗಳಿಗೆ ದಾಳಿ ನೀಡುವ ಕೀಟಗಳನ್ನು ಇವು ಹಿಡಿದು ತಿನ್ನುತ್ತವೆ.  ಮರದಲ್ಲಿ ಕೆಂಪಿರುವೆ ಇದ್ದರೆ ಮಾವು, ಚಿಕ್ಕು ಮುಂತಾದ ವೃಕ್ಷಗಳಲ್ಲಿ ಫ‌ಲಗಳೂ ಜಾಸ್ತಿ ಇರುತ್ತವೆ.  ಮರದ ಬುಡದಿಂದ ತುತ್ತ ತುದಿಯ ತನಕ ಟೊಂಗೆ ಟಿಸಿಲುಗಳಲ್ಲಿ ಸರಸರ ಓಡಾಡುತ್ತ ಆಹಾರ ಬೇಟೆ ನಡೆಸುತ್ತವೆ. ಕೆಂಪಿರುವೆಗಳ ಒಂದು ಗೂಡಿನಲ್ಲಿ ಸಾಮಾನ್ಯವಾಗಿ 4000-6000 ಪೌಢ ಕೆಲಸಗಾರ ಇರುವೆಗಳಿರುತ್ತವಂತೆ. ಸುಮಾರು ಒಂದು ಸಾವಿರ ಚದರ ಮೀಟರ್‌ ಕ್ಷೇತ್ರದ 10-15 ಮರಗಳಲ್ಲಿ ಒಂದು ಕುಟುಂಬದ ನೂರಾರು ಗೂಡುಗಳಿಂದ ಸುಮಾರು ಐದು ಲಕ್ಷ ಪ್ರೌಢ ಕೆಲಸಗಾರ ಇರುವೆಗಳಿರುತ್ತವೆ. ಬಾಳೆ, ಅಡಿಕೆ, ಮಾವು, ಕೊಕ್ಕೋ, ಗೇರು ಮುಂತಾದ ತೋಟಗಳಲ್ಲಿ ಬದುಕಿ ಕೃಷಿಕರಿಗೆ ನೆರವಾಗುತ್ತವೆ. 

ಮರಗಳಲ್ಲಿ ಹೆಚ್ಚು ಇರುವೆ ಗೂಡುಗಳಿವೆಯೆಂದರೆ ಆ ಪ್ರದೇಶದಲ್ಲಿ ಉತ್ತಮ ಪರಿಸರವಿದೆ.  ಅವುಗಳಿಗೆ ಆಹಾರ ಯೋಗ್ಯ ಕೀಟಗಳು ಸಾಕಷ್ಟು ದೊರೆಯುತ್ತಿವೆಯೆಂದು ತಿಳಿಯಬಹುದು. ಇರುವೆಗಳ ಸ್ನೇಹದಿಂದ ಕೀಟನಾಶಕ ಬಳಕೆ ಕಡಿಮೆಯಾಗುತ್ತದೆ.  ಒಂದು ಸಾವಿರ ವರ್ಷಗಳ ಹಿಂದೆಯೇ ಚೀನಿಯರು ಕೆಂಪಿರುವೆಗಳನ್ನು ‘ಲಿಂಬೂತೋಟದ ಗೆಳೆಯ’ ಎಂದು ಕೊಂಡಾಡಿದ್ದಾರೆ. ಆಸ್ಟ್ರೇಲಿಯಾ, ವಿಯಟ್ನಾಂನ  ಹಣ್ಣಿನ ತೋಟಗಳಲ್ಲಿ ಕೆಂಪಿರುವೆಗಳ ಇರುವಿಕೆಯಿಂದ ಶೇ. 25-50 ರಷ್ಟು ಕೀಟನಾಶಕ ಖರ್ಚು ಉಳಿತಾಯವಾಗಿದೆಯೆಂದು ಅಧ್ಯಯನಗಳು ಸಾರುತ್ತಿವೆ. ಅತ್ಯುತ್ತಮ ಗುಣಮಟ್ಟದ ಫ‌ಲ ಪಡೆಯಲು ತೋಟದಲ್ಲಿ ಕೆಂಪಿರುವೆ ಉಳಿಸುವ ಕಾಳಜಿ ಅಲ್ಲಿನ ಕೃಷಿಕರಲ್ಲಿದೆ. ತೋಟಗಳ ಅಕ್ಕಪಕ್ಕ ಕಾಡು ಮರಗಳನ್ನು ಬೆಳೆಸುವುದರಿಂದ ಇರುವೆ ಲಾಭದ ಜೀವದಾರಿಗಳು ಬೆಳೆದು ತೋಟದಲ್ಲಿ ಪರಿಸರಸ್ನೇಹಿ ಲಾಭದ ದಾರಿಯೂ ಕಾಣಿಸುತ್ತದೆ. 

ಮುಂದಿನ ಭಾಗ- ಏಕಜಾತಿಯ ಅಪಾಯ ಹಾಗೂ ಕಾಡು ತೋಟದ ಉಪಾಯ

ದುಂಬಿಯೊಂದು ಹಾರಿಬಂದು…
ಅಡುಗೆ ಮನೆಯಲ್ಲಿ ತಾಳೆ ಏಣ್ಣೆ ಜನಪ್ರಿಯ. ಏಣ್ಣೆ ತಾಳೆ ಬೆಳೆಯುವ ಸಾಹಸ ರಾಜ್ಯದಲ್ಲಿ  ಅಲ್ಲಲ್ಲಿ ನಡೆದಿದೆ. ಅಧಿಕ ನೀರು ಬಯಸುವ ಈ ಬೆಳೆ ಗೆದ್ದಿದ್ದಕ್ಕಿಂತ ಸೋತಿದ್ದು ಜಾಸ್ತಿ. ಆದರೆ ಇಲ್ಲಿನ ವಿಷಯ ಅದಲ್ಲ. ನಮಗೆ ತಾಳೆ ಏಣ್ಣೆಯನ್ನು ಮಲೇಶಿಯಾ ಪೂರೈಸುತ್ತಿದೆ. ಆಫ್ರಿಕಾದ ಕಾಡಿನ ತಾಳೆ ಸಸ್ಯ ತಂದು 70 ರ ದಶಕದಲ್ಲಿ ಇವರು ಬೇಸಾಯ ಆರಂಭಿಸಿದವರು. ಮರ ಬೆಳೆದು ಹೂ ಗೂನೆಗಳು ಬಂದರೂ ಫ‌ಲ ಚೆನ್ನಾಗಿರಲಿಲ್ಲ. ಆಫ್ರಿಕಾದ ಕಾಡಿನ ತಾಳೆ ಮರಗಳಲ್ಲಿ ವಿವಿಲ್‌ ದುಂಬಿಯನ್ನು ಪರಾಗಸ್ಪರ್ಶಕ್ಕೆ ಸಹಾಯ ಮಾಡುತ್ತಿತ್ತು. ಮಲೇಶಿಯಾದ ಜನ ಸಸ್ಯ ತಂದಿದ್ದರೇ ಹೊರತು ವಿವಿಲ್‌ ದುಂಬಿ ತಂದಿರಲಿಲ್ಲ. ನಂತರದಲ್ಲಿ ಆಫ್ರಿಕಾದ ಕಾಡಿನಿಂದ ವಿವಿಲ್‌ ದುಂಬಿಯನ್ನು ಮಲೇಶಿಯಾಕ್ಕೆ ಒಯ್ದರು. ಪರಿಣಾಮ, ತಾಳೆ ಇಳುವರಿಯಲ್ಲಿ ಬದಲಾವಣೆಯಾಯಿತು. ಇಂದು ವಿಶ್ವದ ಪ್ರತಿಶತ ಶೇ.58ರಷ್ಟು ಖಾದ್ಯತೈಲವನ್ನು ಮಲೇಶಿಯಾ ಉತ್ಪಾದಿಸುತ್ತಿದೆ. ಇದು ಭಾರತಕ್ಕೂ ಆಮದಾಗಿ, ನಮ್ಮ ಅಡುಗೆ ಮನೆ ಸೇರಿದೆ. ಪುಟ್ಟ ವಿವಿಲ್‌ ಸಹಾಯದಿಂದ ಇದು ಸಾಧ್ಯವಾಗಿದೆ. ನಮ್ಮ ಶಿವಮೊಗ್ಗದಲ್ಲಿ ಏಣ್ಣೆ ತಾಳೆ ಬೆಳೆಯುವ ಕಾರ್ಯ 20 ವರ್ಷಗಳ ಹಿಂದೆ ಶುರುವಾಯಿತು. ಆಗ, ಹೂವಿನ ಪರಾಗಸ್ಪರ್ಶಕ್ಕೆ ಆಫ್ರಿಕಾ ಕಾಡಿನಿಂದ ವಿವಿಲ್‌ ದುಂಬಿಯನ್ನು ತರಿಸಲಾಯಿತು. ಆ ನಂತರದಲ್ಲಿ, ಶೇಕಡಾ 20-30 ರಷ್ಟು ಇಳುವರಿಯ ಹೆಚ್ಚಳವಾಯಿತು. ಮುಂದೆ, ಮಾರುಕಟ್ಟೆ ಸಮಸ್ಯೆಯಿಂದ ಅಪಾರ ನಷ್ಟವಾಗಿ ನಂತರ ದೈತ್ಯ ತಾಳೆ ಮರಗಳನ್ನು ರೈತರು ಕಿತ್ತೆಸೆದರು. ಪಾಪ! ಪರಾಗಸ್ಪರ್ಶಕ್ಕೆಂದು ಆಫ್ರಿಕನ್‌ ಕಾಡಿನಿಂದ ಬಂದ ವಿವಿಲ್‌ ಪರಿಸ್ಥಿತಿ ರಾಜ್ಯದಲ್ಲಿ ಏನಾಯೆ¤ಂಬ ಕುರಿತು ಏನೂ ವರದಿ ಇಲ್ಲ. 

ಶಿವಾನಂದ ಕಳವೆ


ಈ ವಿಭಾಗದಿಂದ ಇನ್ನಷ್ಟು

  • ಮೊದಲ ಅವಧಿಯಲ್ಲಿ ಚಿನ್ನದ ವಹಿವಾಟಲ್ಲಿ ಚೇತರಿಕೆ ಕಂಡಿರುವುದರಿಂದ ಮುಂಬರುವ ಹಬ್ಬ ಹರಿದಿನ, ಮದುವೆ- ಮುಂಜಿಗಳು ಚಿನ್ನದ ಮಾರುಕಟ್ಟೆಯಲ್ಲಿ ಮನ್ವಂತರ ಸೃಷ್ಟಿಸಬಹುದು...

  • ಈ ಡಾಬಾದಲ್ಲಿ ಸಿಗುವ ಶಾವಿಗೆ ಖೀರು ತಿನ್ನುವುದಕ್ಕೆ ಲಾರಿ ಡ್ರೈವರ್‌ಗಳು ಮಾತ್ರವಲ್ಲ, ಲಾರಿಯ ಮಾಲೀಕರು ಕೂಡ ಬರುವುದುಂಟು. ಇನ್ನು, ಇಲ್ಲಿ ಸಿಗುವ ಚಿಕನ್‌, ಮಟನ್‌,...

  • ಜಿಯೋ ನೆಟ್‌ವರ್ಕ್‌ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್‌ ಕಂಪನಿ ಮಾಡಿದ ಸಾಧನೆ ಎಲ್ಲರಿಗೂ ಗೊತ್ತು. ಇದೀಗ, ಕಿರಾಣಿ ಅಂಗಡಿಯ ವ್ಯವಹಾರದಲ್ಲೂ ಅಧಿಪತ್ಯ...

  • ಇಪ್ಪತ್ತು ವರ್ಷ ಅವಧಿಯ ಜೀವ ವಿಮಾ ಪಾಲಿಸಿಯೊಂದಕ್ಕೆ ಕಂತು ಕಟ್ಟಲು ಆರಂಭಿಸುತ್ತೀರಿ. ಆದರೆ, ನಾಲ್ಕು ವರ್ಷ ಮುಗಿಯುವುದರೊಳಗೆ, ಹಣ ಕಟ್ಟಲು ಸಾಧ್ಯವಿಲ್ಲ ಅನಿಸುತ್ತದೆ....

  • ಒನ್‌ ಪ್ಲಸ್‌ ಕಂಪೆನಿಯ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಒನ್‌ ಪ್ಲಸ್‌ 7 ಮತ್ತು 7 ಪ್ರೊ ಫೋನ್‌ಗಳ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಏರ್ಪಡಿಸಲಾಗಿತ್ತು....

ಹೊಸ ಸೇರ್ಪಡೆ