ಸ್ವಲ್ಪ ಸ್ವಲ್ಪ ಉಳಿಸಿ, ವಿಶ್ವಾಸ ಗಳಿಸಿ

ಮನಿ ಮ್ಯಾಟರ್‌ : ಮನೆಯಲ್ಲೇ ಬೆಳೆಯಲಿ ದುಡ್ಡಿನ ಗಿಡ

Team Udayavani, Apr 29, 2019, 6:00 AM IST

ಉಳಿತಾಯದ ಹಣ ಆದಷ್ಟು ಬೇಗ ನಮ್ಮ ಕೈ ಸೇರಬೇಕು. ಆಗ ಮಾತ್ರ ಮನಸ್ಸಿಗೆ ಸಮಾಧಾನವಾಗುತ್ತದೆ. ಅದಕ್ಕೆ ನಾವೇನು ಮಾಡಬೇಕು ಅಂದರೆ, ಚಿಕ್ಕ ಮೊತ್ತದ ಉಳಿತಾಯಕ್ಕೆ ಮುಂದಾಗಬೇಕು. ಪೋಸ್ಟ್‌ ಆಫೀಸ್‌, ಬ್ಯಾಂಕ್‌ ಅಥವಾ ಭಾರೀ ನಂಬಿಕೆಯ ಚಿಟ್‌ ಫ‌ಂಡ್‌ ಕಂಪನಿಯಲ್ಲಿ ಮೊದಲು 12 ತಿಂಗಳಿಗೇ ಮುಗಿದು ಹೋಗುವಂಥ ಯೋಜನೆಗಳಲ್ಲಿ ಹಣ ತೊಡಗಿಸಬೇಕು.

ಅನುಮಾನ ಬೇಡ. ಇವತ್ತು ದುಡ್ಡಿದ್ದರೆ ಮಾತ್ರ ಸಮಾಜದಲ್ಲಿ ಮರ್ಯಾದೆ ಸಿಗುತ್ತದೆ. ಕೈ ತುಂಬಾ ದುಡ್ಡಿದ್ದಾಗ ಮಾತ್ರ ಯಾವುದೇ ಛಾಲೆಂಜಿಗೆ ಎದೆಯೊಡ್ಡಿ ನಿಲ್ಲುವ ಧೈರ್ಯ ಬರುತ್ತದೆ. ಬೆಟ್ಟದಂಥ ಸಮಸ್ಯೆಯೊಂದು ಎದುರಾದಾಗ, ಅದೇನಾಗುತ್ತೋ ಆಗಿಬಿಡಲಿ; ಒಂದು ಕೈ ನೋಡಿಯೋ ಬಿಡೋಣ ಎನ್ನುವಂಥ ಉದ್ಗಾರ ಹೊರಬೀಳುವುದು- ದೊಡ್ಡದೊಂದು ಹಣದ ಗಂಟು ಜೊತೆಗಿದ್ದಾಗ ಮಾತ್ರ.

“ಹಣದ ಗಂಟು’ ಅಂದಾಕ್ಷಣ ಹೆಚ್ಚಿನವರು -“ನಾವು ಮಿಡ್ಲ್ ಕ್ಲಾಸ್‌ ಜನ ಸ್ವಾಮಿ. ನಮ್ಮ ಹತ್ರ ಹೆಚ್ಚಿನ ಹಣ ಎಲ್ಲಿಂದ ಬರಬೇಕು? ನಮಗೆ ಸಿಗುವ ಸಂಬಳವೇ ಕಡಿಮೆ. ಪ್ರತಿ ತಿಂಗಳು 20ನೇ ತಾರೀಖು ಬರುವಷ್ಟರಲ್ಲಿ ಜೇಬು ಖಾಲಿಯಾಗಿರುತ್ತೆ. ಹೀಗಿರುವಾಗ ಉಳಿತಾಯ ಮಾಡುವುದಾದರೂ ಹೇಗೆ?’ ಅಂದು ಬಿಡುತ್ತಾರೆ. ನಿಜ ಹೇಳಬೇಕೆಂದರೆ, ಉಳಿತಾಯ ಮಾಡಬೇಕು ಅಂದರೆ ಮೊದಲು ಅಗತ್ಯವಿರುವುದು ಹಣವಲ್ಲ! ನಾನು ಉಳಿತಾಯ ಮಾಡಬೇಕು, ಖಂಡಿತ ಉಳಿತಾಯ ಮಾಡಬಲ್ಲೆ ಎಂಬ ನಿರ್ಧಾರ ಕೈಗೊಳ್ಳುವ ಮನಸ್ಸು ಬೇಕು.

ದುಡ್ಡಿನ ಗಿಡ ಬೆಳಸುವುದು ಹೇಗೆ?
ಸರಿ; ಹಣ ಜೋಡಿಸುವುದು ಹೇಗೆ? ಉಳಿತಾಯ ಮಾಡುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಒಂದೆರಡು ಸಂದರ್ಭಗಳನ್ನು ಗಮನಿಸಿಯೇ ಮುಂದುವರಿಯೋಣ. ಇವತ್ತು ಬಡತನ, ಬಡವ ಅಂದ ತಕ್ಷಣ ಎಲ್ಲರಿಗೂ ನೆನಪಾಗುವಾತ ರೈತ. ಒಬ್ಬ ರೈತ ಉಳಿತಾಯ ಮಾಡಲು ಅನುಸರಿಸುವ ವಿಧಾನಗಳನ್ನೇ ಇಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳೋಣ. ಒಬ್ಬ ರೈತನಿಗೆ ಜಮೀನಿನಲ್ಲಿ ಒಂದು ಹಲಸಿನ ಮರ ಇದೆ ಅಂದುಕೊಳ್ಳಿ.

ಹಲಸಿನ ಮರ ಅಂದಮೇಲೆ, ಪ್ರತಿ ವರ್ಷವೂ ನೂರರ ಸಂಖ್ಯೆಯಲ್ಲಿ ಹಲಸಿನ ಹಣ್ಣು ಸಿಕ್ಕೇ ಸಿಗುತ್ತದೆ. ಐದಾರು ಮಂದಿಯೊಂದಿಗೆ ಬದುಕುವ ಆ ರೈತ, ಹತ್ತಿಪ್ಪತ್ತು ಹಣ್ಣುಗಳನ್ನು ಮನೆಗೆ ಇಟ್ಟುಕೊಂಡು ಉಳಿದವನ್ನು ಮಾರಾಟ ಮಾಡುತ್ತಾನೆ. ಹಲಸಿನ ಹಣ್ಣಿನ ಸೀಜನ್‌ ಮುಗಿದು ಹೋಗುವ ವೇಳೆಗೆ, ಬೇರೆ ಸಂಪಾದನೆಯಿಲ್ಲದೆ ಕೈ ಖರ್ಚಿಗೆ ಹಣ ಸಾಲುತ್ತಿಲ್ಲವೆಂದು ಅರಿವಾಗುತ್ತದೆ. ಗಮನಿಸಿದ್ದೀರಾ? ಒಂದಷ್ಟು ಹಣ ಸಂಪಾದಿಸುತ್ತದೆ.

ಹಲಸಿನ ಮರದ ಸಮೀಪದಲ್ಲೇ ಮಾವಿನ ಸಸಿ ಹಾಕಿದರೆ ಹೇಗೆ ಎಂದು ಅಥವಾ ಜಮೀನಿನಲ್ಲಿ ಬದುವಿನ ಮೇಲೆ ಪಪ್ಪಾಯದ ಗಿಡಗಳನ್ನೋ ಬೆಳೆಯಲು ರೈತರು ನಿರ್ಧರಿಸುವುದೇ ಆಗ. ಈ ಹೊಸ ಬೆಳೆಯಿಂದ ಫ‌ಲ ಮತ್ತು ಲಾಭ ದೊರೆಯಲು ಎರಡು ವರ್ಷ ತಗುಲಬಹುದು. ಆದರೆ, ಒಮ್ಮೆ ಫ‌ಲ ಸಿಗುತ್ತದೆ ಎಂದಾದರೆ, ಅದು ನಿರಂತರ ಏಳೆಂಟು ವರ್ಷ ಖಂಡಿತ ಸಿಗುತ್ತದೆ.

ಮತ್ತೊಂದು ಉದಾಹರಣೆ ತೆಗೆದುಕೊಳ್ಳೋಣ. ಒಬ್ಬ ಭೂಮಿಯೇ ಇಲ್ಲದ ಬಡವ ಅಂದುಕೊಳ್ಳಿ. ಬದುಕಲು ಅವನು ಹಾಲು ಮಾರುವ ಕೆಲಸ ಮಾಡುತ್ತಿರುತ್ತಾನೆ. ವರ್ಷದಲ್ಲಿ ನಾಲ್ಕು ತಿಂಗಳು ಮಾತ್ರ ಹಸು ಹಾಲು ಕೊಡುತ್ತದೆ ಅಂದಾಗ, ಅವನೇನು ಮಾಡ್ತಾನೆ ಹೇಳಿ? ಹಾಲು ಮಾರಿದ ಹಣದಲ್ಲೇ ಪೈಸೆಗೆ ಪೈಸೆ ಕೂಡಿಸಿ ( ಅದು ಸಾಕಾಗದಿದ್ದಾಗ ಸ್ವಲ್ಪ ಸಾಲ ಮಾಡಿ) ಮತ್ತೊಂದು ಹಸುವನ್ನು ತಂದು ಬಿಡುತ್ತಾನೆ. ಎರಡನೇ ಹಸು ಮನೆಗೆ ಬಂದಾಗ, ತಕ್ಷಣವೇ ಅದು ಹಾಲು ಕೊಡುತ್ತದೆ ಎಂಬ ಗ್ಯಾರಂಟಿ ಇರುವುದಿಲ್ಲ.

ಮೊದಲು ಹಸುವಿನ ಆರೈಕೆ ಮಾಡಬೇಕು. ಅದಕ್ಕೆ ಒಳ್ಳೆಯ ಊಟ, ಆರೈಕೆ, ಪಶುವೈದ್ಯರಿಂದ ಚಿಕಿತ್ಸೆ ಎಂದೆಲ್ಲಾ ಓಡಾಡಬೇಕು. ಆಗೆಲ್ಲಾ ಒಂದಷ್ಟು ಹೆಚ್ಚಾಗಿಯೇ ಖರ್ಚು ಬೀಳಬಹುದು. ಹೀಗೆ ಆರೆಂಟು ತಿಂಗಳು ಆರೈಕೆ ಮಾಡಿದರೆ, ಆನಂತರದಲ್ಲಿ ನಿರೀಕ್ಷೆ ಮೀರಿ ಲಾಭವಾಗುತ್ತದೆ. ಒಂದು ಹಸು ಹಾಲು ಕೊಡುವುದನ್ನು ನಿಲ್ಲಿಸಿದ ತಕ್ಷಣ, ಇನ್ನೊಂದು ಹಸು, ಹೆಚ್ಚುವರಿ ಸಂಪಾದನೆಯ ಹಣ ರೈತನ ಕೈ ತಪ್ಪದಂತೆ ನೋಡಿಕೊಳ್ಳುತ್ತದೆ. ಮುಂದೆ, ಇದೇ ರೀತಿ ಮತ್ತೂಂದು ಹಸುವೂ ರೈತನ ಬಳಗ ಸೇರಿಕೊಂಡು, ವರ್ಷವಿಡೀ ಆತ ಹಾಲು ಮಾರಿಕೊಂಡೇ ಸಾವಿರ ಸಾವಿರ ಎಣಿಸುವಂಥ ಸಂಭ್ರಮಕ್ಕೂ ಕಾರಣ ಆಗಬಹುದು.

ಈಗ, ಈ ಎರಡು ಉದಾಹರಣೆಗಳನ್ನೇ ಗಮನಿಸಿ. ಎರಡೂ ಪ್ರಸಂಗಗಳಲ್ಲಿ ನಮ್ಮ ಕಣ್ಮುಂದೆ ಇದ್ದವರು ಅಬ್ಬೇಪಾರಿ ರೈತರು. ಅವರಿಗೆ ನಿಶ್ಚಿತ ಸಂಬಳವಾಗಲಿ, ನೌಕರಿಯಾಗಲಿ ಇರಲಿಲ್ಲ. ಆದರು ಅವರ ಸಂಪಾದನೆಯ, ಅದೂ ಏನು? ನಿರಂತರ ಸಂಪಾದನೆಯ ದಾರಿಯನ್ನು ಕಂಡುಕೊಂಡರಲ್ಲವಾ? ವಾಸ್ತವ ಹೀಗಿರುವಾಗ, ಸಣ್ಣದೊಂದು ಸಂಪಾದನೆಯೂ, ನೌಕರಿಯೂ ಇರುವ ಜನ ಹೇಗೆಲ್ಲಾ, ಎಷ್ಟೆಲ್ಲಾ ಹಣ ಉಳಿಸಬಹುದು ಗೊತ್ತಾ?

ಚಿಕ್ಕ ಮೊತ್ತ ಹೂಡಿರಿ
ಉಳಿತಾಯದ ಹಣ ಆದಷ್ಟು ಬೇಗ ನಮ್ಮ ಕೈ ಸೇರಬೇಕು. ಆಗ ಮಾತ್ರ ಮನಸ್ಸಿಗೆ ಸಮಾಧಾನ­ವಾಗುತ್ತದೆ. ಅದಕ್ಕೆ ನಾವೇನು ಮಾಡಬೇಕು ಅಂದರೆ, ಚಿಕ್ಕ ಮೊತ್ತದ ಉಳಿತಾಯಕ್ಕೆ ಮುಂದಾಗಬೇಕು. ಪೋಸ್ಟ್‌ ಆಫೀಸ್‌, ಬ್ಯಾಂಕ್‌ ಅಥವಾ ಭಾರೀ ನಂಬಿಕೆಯ ಚಿಟ್‌ ಫ‌ಂಡ್‌ ಕಂಪನಿಯಲ್ಲಿ ಮೊದಲು 12 ತಿಂಗಳಿಗೇ ಮುಗಿದು ಹೋಗುವಂಥ ಯೋಜನೆಗಳಲ್ಲಿ ಹಣ ತೊಡಗಿಸಬೇಕು. ಆರಂಭದಲ್ಲಿ, ತಿಂಗಳಿಗೆ ಕೇವಲ 500ರೂ. ಉಳಿಸಬಹುದು ಅಂದುಕೊಂಡೇ ಈ ಕೆಲಸ ಆರಂಭಿಸಿ.

ಪ್ರತಿ ತಿಂಗಳೂ ತಪ್ಪಿಸದೇ 500 ರುಪಾಯಿ ಕಟ್ಟಿ ಹತ್ತು ತಿಂಗಳು ಕಳೆಯುತ್ತಿದ್ದಂತೆಯೇ, ಹನ್ನೊಂದನೇ ತಿಂಗಳಿಂದ ಮತ್ತೂಂದು ಉಳಿತಾಯ ಯೋಜನೆ ಆರಂಭಿಸಿ. ಅಂದರೆ, ಹನ್ನೊಂದನೇ ತಿಂಗಳು ಹಳೆಯದು ಮತ್ತು ಹೊಸದು, ಎರಡೂ ಸೇರಿ 500+500 ರುಪಾಯಿ ಕಟ್ಟಬೇಕಾಗುತ್ತದೆ. 12ನೇ ತಿಂಗಳು, ಒಂದು ಉಳಿತಾಯದ ಅವಧಿ ಮುಗಿದು, ಚಿಕ್ಕದೊಂದು ಇಡಿಗಂಟೂ ಕೈ ಸೇರುತ್ತದಲ್ಲ; ಆಗ, ಸೇವಿಂಗ್ಸ್‌ ಸ್ಕೀಂಗೆ ಹಣ ಕಟ್ಟಿದ್ದಕ್ಕೆ ಮನಸ್ಸು ಖುಷಿ ಪಡುತ್ತದೆ.

12 ನೇ ತಿಂಗಳ ನಂತರ, ಮತ್ತೆ ಕೇವಲ 500ರೂ. ಗಳೊಂದಿಗೆ ಉಳಿತಾಯ ಯೋಜನೆಯನ್ನು ಮುಂದುವರಿಸಿ. ಈ ಬಾರಿ ಆರು ತಿಂಗಳು ಕಳೆಯುತ್ತಿದ್ದಂತೆಯೇ ಮತ್ತೂಂದು ಹೊಸ ಉಳಿತಾಯ ಯೋಜನೆ ಆರಂಭಿಸಿ. ಹೀಗೆ ಕಟ್ಟಿದ ಹಣ, ಕೆಲವೇ ದಿನಗಳಲ್ಲಿ ವಾಪಸ್‌ ಬರುತ್ತದೆ ಎಂಬ ಗ್ಯಾರಂಟಿ ಇರುವುದರಿಂದ, ಒಂದಷ್ಟು ಹಣವನ್ನು ಈ ಯೋಜನೆಗೆ ಮೀಸಲಾಗಿಡುವ ಮನಸ್ಸೂ ಮಾನಸಿಕವಾಗಿ ಸಿದ್ಧವಾಗಿರುತ್ತದೆ. ಮನೆಯೊಳಗೆ ರೊಕ್ಕದ ಗಿಡ ಬೆಳೆಸಲು, ಮನಸ್ಸನ್ನು “ರೆಡಿ’ ಮಾಡಬೇಕಿರುವುದೇ ಹೀಗೆ.

ಮರುಳಾಗಿ ಕೊರಗಬೇಡಿ…
ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ ಅಥವಾ ಪೋಸ್ಟ್‌ ಆಫೀಸ್‌ನ ಖಾತೆಯಲ್ಲೇ ಹಾಕಿ. ಇಲ್ಲಿ ಸಿಗುವ ಬಡ್ಡಿ ಕಡಿಮೆ ಇರಬಹುದು. ಆದರೆ ಇಲ್ಲಿ ಯಾವುದೇ ಕಾರಣಕ್ಕೂ ಮೋಸ ಆಗುವುದಿಲ್ಲ.
ಮೂರು/ಐದು/ಹತ್ತು ವರ್ಷಗಳ ಅವಧಿಯಲ್ಲಿ, ಪ್ರತಿ ತಿಂಗಳೂ ಕಟ್ಟಲು ಸಾಧ್ಯವಿರುತ್ತದಲ್ಲ, ಅಷ್ಟು ಮೊತ್ತಕ್ಕೆ ಮಾತ್ರ ಕಂತು ಕಟ್ಟಿ. ಉಳಿತಾಯದ ರೂಪದಲ್ಲಿ ನೀವು ಕೊಡುವ ಹಣವನ್ನು ವರ್ಷ /ಎರಡು ವರ್ಷದಲ್ಲಿ ಎರಡು ಪಟ್ಟು ಮಾಡಲು ಸಾಧ್ಯವೇ ಇಲ್ಲ. ಹಾಗಾಗಿ, ಪ್ರೈವೇಟ್‌ ಕಂಪನಿಗಳ ಬಣ್ಣದ ಮಾತಿಗೆ ಮರುಳಾಗಬೇಡಿ.

— ಶ್ರೀಧರ್‌


ಈ ವಿಭಾಗದಿಂದ ಇನ್ನಷ್ಟು

  • ರೇಷ್ಮೆಯ ತವರು ಎಂದು ಹೆಸರಾದ ಊರು ಶಿಡ್ಲಘಟ್ಟ, ಇಲ್ಲಿರುವ ಹುರಿ ಮಿಷನ್‌ಗಳಲ್ಲಿ ವಿವಿಧ ಜಿಲ್ಲೆ, ರಾಜ್ಯಗಳ ಜನರು ಕೆಲಸ ಮಾಡುತ್ತಿದ್ದಾರೆ. ರೈತರನ್ನೇ ಪ್ರಧಾನ...

  • ರೇಷ್ಮೆ ಬೆಳೆಗೆ ಕಡಿಮೆ ನೀರು ಸಾಕು. ಜೊತೆಗೆ,ಒಂದು ವರ್ಷಕ್ಕೆ ನಾಲ್ಕು ಬೆಳೆ ತೆಗೆಯಬಹುದು. ಒಂದು ವೇಳೆ ರೇಷ್ಮೆ ಮೊಟ್ಟೆಗೆ ಬೆಲೆ ಸಿಗದಿದ್ದರೂ, ಹಿಪ್ಪು ನೇರಳೆ...

  • ಕೃಷಿ ಕಾರ್ಮಿಕರ ಕೊರತೆಯ ನೀಗಿಸಲು ಕಂಪನಿಗಳು ಕೃಷಿ ಯಂತ್ರೋಪಕರಣಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಇಂಥ ಒಂದು ವಿಶೇಷ ಅವಿಷ್ಕಾರವಾಗಿ ನಿವ್‌...

  • ಆನೆ ದೈತ್ಯ ಜೀವಿ. ಆನೆ ದಸರೆಯ ಜಂಬೂಸವಾರಿಯ ಕೇಂದ್ರ ಬಿಂದು. ಆನೆ ಗಣೇಶನ ಇನ್ನೊಂದು ರೂಪ.. ಇವೆಲ್ಲವೂ ಸರಿ. ಈಗ ವಿಶೇಷ ಸುದ್ದಿ ಏನೆಂದರೆ, ಆನೆಯನ್ನು ಮುಂದಿಟ್ಟುಕೊಂಡು...

  • ಇಂಗ್ಲೆಂಡಿನಲ್ಲಿ ವಿಶ್ವಕಪ್‌ ಕ್ರಿಕೆಟ್‌ ಆರಂಭಾವಾಗುವ ದಿನಗಳ ಹತ್ತಿರಾಗುತ್ತಿವೆ. ಇದೇ ವೇಳೆಗೆ ಆನ್‌ಲೈನ್‌ ಗೇಮಿಂಗ್‌ ಇಂಡಸ್ಟ್ರೀ ಕೂಡ ಭಾರಿ ಹುಮ್ಮಸ್ಸಿನಲ್ಲಿ...

ಹೊಸ ಸೇರ್ಪಡೆ