ಮೌಲ್ಯಾಧಾರಿತ ಆ್ಯಪ್‌! ನೋಟ್‌ ಮೌಲ್ಯ ತಿಳಿಸುವ ತಂತ್ರಾಂಶ

Team Udayavani, Jan 20, 2020, 5:45 AM IST

ಹೊಸ ಬಗೆಯ ನೋಟುಗಳು ಚಲಾವಣೆಗೆ ಬಂದಾಗ ಅದರ ಬಣ್ಣ ಚೆನ್ನಾಗಿಲ್ಲ, ಗಾತ್ರ ಚಿಕ್ಕದಾಯಿತು, 100 ಮತ್ತು 500ರ ನಡುವೆ ಗೊಂದಲ ಮೂಡುತ್ತಿದೆ… ಹೀಗೆ ಹಲವು ದೂರುಗಳು ಕೇಳಿಬಂದಿದ್ದವು. ಎಲ್ಲಕ್ಕಿಂತ ಗಂಭೀರ ಸಮಸ್ಯೆ ಎದುರಾಗಿದ್ದು ದೃಷ್ಟಿಮಾಂದ್ಯರಿಗೆ. ಅವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಆರ್‌ಬಿಐ ಇದೀಗ ಹೊಸದೊಂದು ಆ್ಯಪ್‌ ಬಿಡುಗಡೆಗೊಳಿಸಿದೆ.

ಹಳೆಯ ನೋಟುಗಳಿಗೆ ಒಗ್ಗಿಹೋಗಿದ್ದ ದೃಷ್ಟಿಮಾಂದ್ಯರಿಗೆ ಹೊಸ ನೋಟುಗಳಲ್ಲಿ ಯಾವುದು ಎಷ್ಟು ಮೌಲ್ಯದ್ದು ಎಂದು ಪತ್ತೆಹಚ್ಚುವುದು ಇಷ್ಟು ದಿನ ಕಷ್ಟವಾಗಿತ್ತು. ನೋಟಿನ ಮೌಲ್ಯದ ಸಂಖ್ಯೆಯನ್ನು ದೊಡ್ಡದಾಗಿ ಮುದ್ರಿಸುವುದು, ಕೈಬೆರಳುಗಳ ಸ್ವರ್ಶದಿಂದ ನೋಟಿನ ಮೌಲ್ಯ ತಿಳಿಯಲು ಸಾಧ್ಯವಾಗುವಂತೆ, ವಿವರಗಳನ್ನು ಇನ್‌ಟ್ಯಾಗಿಲೋ ಮುದ್ರಣ ತಂತ್ರಜ್ಞಾನ ಬಳಸಿ ಮುದ್ರಿಸುವುದು, ಹೀಗೆ ಹಲವು ಸೌಲಭ್ಯಗಳನ್ನು ದೃಷ್ಟಿ ಸಮಸ್ಯೆ ಇರುವವರಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ನೀಡುತ್ತಿದೆ. ಈಗ ದೃಷ್ಟಿಮಾಂದ್ಯರಿಗೆ ನೆರವಾಗುವ ನಿಟ್ಟಿನಲ್ಲಿ ಆರ್‌ಬಿಐ, “ಮ್ಯಾನಿ’ (MANI- ಮೊಬೈಲ್‌ ಏಡೆಡ್‌ ನೋಟ್‌ ಐಡೆಂಟಿಫೈಯರ್‌) ಆ್ಯಪ್‌ ಒಂದನ್ನು ಬಿಡುಗಡೆಗೊಳಿಸಿದೆ.

ಆಫ್ಲೈನ್‌ ಕಾರ್ಯಾಚರಣೆ
6 ಜೂನ್‌ 2018ರಂದು ಆರ್‌ಬಿಐ ಪ್ರಕಟಿಸಿದ ಅಭಿವೃದ್ಧಿ ಮತ್ತು ನಿಯಂತ್ರಣ ಕುರಿತ ವರದಿಯಲ್ಲಿ, ದೃಷ್ಟಿ ಸಮಸ್ಯೆ ಇರುವವರು ನೋಟುಗಳ ಮೌಲ್ಯ ಗುರುತಿಸಲು ಅನುಕೂಲವಾಗುವಂಥ ಮೊಬೈಲ್‌ ಫೋನ್‌ ಆಧಾರಿತ ತಂತ್ರಾಂಶ ಮೊದಲಾದ ಉಪಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿತ್ತು. ಅದರಂತೆ, ಈಗ ಎಮ್‌ಎಎನ್‌ಐ ಅಂದರೆ ಮೊಬೈಲ್‌ಫೋನ್‌ ಆಧಾರಿತ ನೋಟಿನ ಮೌಲ್ಯವನ್ನು ಗುರುತಿಸುವ ತಂತ್ರಾಂಶವನ್ನು ಆರ್‌ಬಿಐ ಬಿಡುಗಡೆ ಮಾಡಿದೆ. ಈ ತಂತ್ರಾಂಶವನ್ನು ಆಂಡ್ರಾಯ್ಡ ಮತ್ತು ಐಓಸ್‌(ಐಪೋನ್‌ ಮತ್ತಿತರ ಆ್ಯಪಲ್‌ ಸಂಸ್ಥೆಯ ಉತ್ಪನ್ನ) ಆ್ಯಪ್‌ ಸ್ಟೋರ್‌ಗಳಿಂದ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಂಡು ಬಳಸಬಹುದಾಗಿದೆ. ಡೌನ್‌ಲೋಡ್‌ ಮಾಡಿಕೊಂಡ ತಂತ್ರಾಂಶವನ್ನು ಅನುಷ್ಠಾನಗೊಳಿಸಲು ಮತ್ತು ಬಳಸಲು, ಇಂಗ್ಲೀಷ್‌ ಅಥವಾ ಹಿಂದಿ ಭಾಷೆಯಲ್ಲಿ ಧ್ವನಿ ಸಂದೇಶಗಳ (ವಾಯ್ಸ ಕಂಟ್ರೋಲ್‌) ಮೂಲಕ ಅಗತ್ಯ ಸೂಚನೆಗಳನ್ನು ಬಳಕೆದಾರರಿಗೆ ನೀಡಲಾಗುತ್ತದೆ. ಈ ತಂತ್ರಾಂಶವನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಲಷ್ಟೇ ಇಂಟರ್ನೆಟ್‌ ಸಂಪರ್ಕ ಬೇಕು. ಆದರೆ ಅದರ ಕಾರ್ಯಾಚರಣೆಗೆ ಇಂಟರ್ನೆಟ್‌ ಬೇಕಿಲ್ಲ. ಆಫ್ಲೈನಿನಲ್ಲೂ ಈ ಆ್ಯಪನ್ನು ಬಳಸಬಹುದಾಗಿದೆ.

ಇನ್‌ಸ್ಟಾಲ್‌ ಹೇಗೆ?
ಈ ತಂತ್ರಾಂಶವನ್ನು ಬಳಸುವ ಗ್ರಾಹಕರು, ಮೊದಲು ಹಿಂದಿ ಅಥವಾ ಇಂಗ್ಲೀಷ್‌ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ನಂತರ ತಮಗೆ ಇರುವ ಸಮಸ್ಯೆ ಯಾವುದೆಂದು ಆ್ಯಪ್‌ಗೆ ತಿಳಿಸಬೇಕು. ಅದು ಮೂರು ಆಯ್ಕೆಗಳನ್ನು ಬಳಕೆದಾರರ ಮುಂದಿರಿಸುತ್ತದೆ- ದೃಷ್ಟಿ ಸಮಸ್ಯೆ, ದೃಷ್ಟಿ ಮತ್ತು ಶ್ರವಣ ಸಮಸ್ಯೆ ಮತ್ತು ಯಾವ ಸಮಸ್ಯೆಯೂ ಇಲ್ಲ. ಈ ಮೂರರಲ್ಲಿ ಒಂದನ್ನು ಬಳಕೆದಾರರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ನೋಟಿನ ಮೌಲ್ಯವನ್ನು ನಮೂದಿಸಿರುವ ಭಾಗದಲ್ಲಿ ಸ್ಮಾರ್ಟ್‌ಫೋನಿನ ಕ್ಯಾಮರಾವನ್ನು ಕೇಂದ್ರಿಕರಿಸಿದಾಗ, ಆ ನೋಟಿನ ಮೌಲ್ಯವನ್ನು ಈ ತಂತ್ರಾಂಶವು ಗುರುತಿಸುತ್ತದೆ. ನೋಟಿನ ಯಾವ ಬದಿ ಫೋಕಸ್‌ ಮಾಡಿದರೂ, ಆ್ಯಪ್‌ ಮೌಲ್ಯವನ್ನು ಪತ್ತೆ ಹಚ್ಚುತ್ತದೆ. ಪತ್ತೆ ಹಚ್ಚಿದ ಮೌಲ್ಯವನ್ನು ಆ್ಯಪ್‌ ಜೋರಾಗಿ ಉಚ್ಚರಿಸಿ ತಿಳಿಸುತ್ತದೆ. ಬಳಕೆದಾರರು ದೃಷ್ಟಿ ಹಾಗೂ ಶ್ರವಣ ಸಮಸ್ಯೆ ಇರುವವರಾದರೆ, ಫೋನಿನಲ್ಲಿ ಇರುವ ವೈಬ್ರೇಷನ್‌ ಸೌಲಭ್ಯವನ್ನು ಬಳಸಿ, ನೋಟಿನ ಮೌಲ್ಯವನ್ನು ತಿಳಿಸಲಾಗುತ್ತದೆ.

ಸೌಲಭ್ಯ ಮತ್ತು ನಿಯಮಗಳು
30 ದಿನಗಳ ಅವಧಿಯಲ್ಲಿ ಯಾವ ಮೌಲ್ಯದ ನೋಟುಗಳನ್ನು ಈ ತಂತ್ರಾಂಶ ಬಳಸಿ ಗುರುತಿಸಲಾಗಿದೆ ಎನ್ನುವ ಮಾಹಿತಿಯನ್ನು ಕೂಡಾ ಈ ಆಪ್‌ನಿಂದ ತಿಳಿಯಬಹುದಾಗಿದೆ. ಬಳಕೆದಾರರಿಗೆ ಈ ಆ್ಯಪ್‌ ಬಳಸಲು ಅಗತ್ಯವಾದ ದಾಖಲೆಗಳನ್ನು ಕೂಡಾ ಈ ತಂತ್ರಾಂಶದಲ್ಲಿ ನೀಡಲಾಗಿದೆ. ಈ ತಂತ್ರಾಂಶ ಬಳಸಿ ನೋಟಿನ ಮೌಲ್ಯವನ್ನು ಗುರುತಿಸುವಾಗ ನೋಟು ಹಾಳಾಗಿರಬಾರದು, ಫೋನಿನ ಕ್ಯಾಮರಾ ನೋಟಿನ ಮೌಲ್ಯವನ್ನು ಗುರುತಿಸಲು ಅಗತ್ಯವಾಗುವಷ್ಟು ಬೆಳಕು ಇರಬೇಕು ಮೊದಲಾದ ಮಾಹಿತಿಯನ್ನು ಬಳಕೆದಾರರಿಗೆ ಈ ತಂತ್ರಾಂಶವನ್ನು ಡೌನ್‌ಲೋಡ್‌ ಮಾಡುವ ಮೊದಲು ಆರ್‌ಬಿಐ ನೀಡುತ್ತದೆ.

ಆಗಬೇಕಾದ ಸುಧಾರಣೆಗಳು
ಇಂಗ್ಲೀಷ್‌ ಮತ್ತು ಹಿಂದಿ ಭಾಷೆಗಳ ಆಯ್ಕೆ ಮಾತ್ರ ಈಗ ಲಭ್ಯವಿದೆ. ಇಷ್ಟು ಸಾಲದು. ಪ್ರಾದೇಶಿಕ ಭಾಷೆಗಳ ಆಯ್ಕೆಯನ್ನೂ ಸೇರಿಸಬೇಕು. ನೋಟುಗಳ ಮೌಲ್ಯಗಳನ್ನು ತಿಳಿಯಲು ಸಹಕಾರಿಯಾಗುವಂತೆ, ನಕಲಿ ನೋಟುಗಳನ್ನು ಗುರುತಿಸಿ ಎಚ್ಚರಿಕೆ ನೀಡುವ ಸೌಲಭ್ಯವನ್ನು ಸೇರಿಸಬೇಕು. ಧ್ವನಿ ಸೂಚನೆಯನ್ನು ನೀಡುವ ವ್ಯವಸ್ಥೆಯಲ್ಲಿ ಎಷ್ಟು ಜೋರಾಗಿ ಈ ಸಂದೇಶಗಳು ಕೇಳಬೇಕು ಎನ್ನುವ ಆಯ್ಕೆಯನ್ನು ಬಳಕೆದಾರನಿಗೆ ನೀಡಬೇಕು.

ಈ ತಂತ್ರಾಂಶ ಬಳಸಿ ನೋಟಿನ ಮೌಲ್ಯ ಗುರುತಿಸುವಂತೆ, ನಾಣ್ಯಗಳನ್ನು ಗುರುತಿಸುವ ಸೌಲಭ್ಯವನ್ನು ಕೂಡಾ ನೀಡಬೇಕು ಎಂದು ಅನೇಕ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೇ ಸಹಾಯವಾಣಿ ಮತ್ತು ಜಾಲತಾಣ ಸೌಲಭ್ಯವನ್ನು ಆರ್‌.ಬಿ.ಐ ನೀಡಿದರೆ ಚೆನ್ನ.

-ಉದಯಶಂಕರ ಪುರಾಣಿಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ