ಗೋಗ್ರೀನ್‌ ನೆಪದಲ್ಲಿ ಸ್ವಾಗತಾರ್ಹ ಸೇವೆಗಳು


Team Udayavani, Sep 4, 2017, 2:36 PM IST

04-ISIRI-5.jpg

ಒಂದೆಡೆ ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬ ಪ್ರಜೆಯೂ ಬ್ಯಾಂಕ್‌ ಖಾತೆಯನ್ನು ಹೊಂದಬೇಕು ಮತ್ತು ಸಾಧ್ಯವಾದಷ್ಟೂ ಮಟ್ಟಿಗೆ ಕಾಗದ ರಹಿತ ಹಣಕಾಸು ವ್ಯವಹಾರ ನಡೆಯಬೇಕು ಎಂಬ ಕಲ್ಪನೆಯಿಂದ ಹೊಸ ಹೊಸ ಯೋಜನೆ, ಕಟ್ಟುಪಾಡುಗಳನ್ನು ಜಾರಿಗೊಳಿಸುತ್ತಿದ್ದಾರೆ. ಎಸ್‌ಬಿ ಖಾತೆದಾರ ಮೃತಪಟ್ಟರೆ 2 ಲಕ್ಷ ರೂ. ವಿಮೆ ಎಂಬಲ್ಲಿಯವರೆಗೆ ಆಮಿಷ ಒಡ್ಡಲಾಗುತ್ತಿದೆ. ಇದೇ ವೇಳೆ ಬ್ಯಾಂಕಿಂಗ್‌ ಕ್ಷೇತ್ರ ಗ್ರಾಹಕರ ಜೇಬಿನಲ್ಲಿ ಇರಬಹುದಾದ ಕಿಂಡಿಗಳನ್ನೆಲ್ಲ ಲೆಕ್ಕಹಾಕಿ ಹಣ ಪಡೆಯಲು ಹೊಂಚು ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಸುಚೇತಾ ದಲಾಲ್‌ ಎಂಬ ಗ್ರಾಹಕ ಕಾರ್ಯಕರ್ತೆ ಒಂದು ಆಂದೋಲನವನ್ನೇ ರೂಪಿಸುತ್ತಿದ್ದಾರೆ. ಆ ಬಗ್ಗೆ ಇನ್ನೊಮ್ಮೆ ವಿವರವಾಗಿ ಮಾತಾಡೋಣ.

ದೇಶದಲ್ಲಿ ಬ್ಯಾಂಕಿಂಗ್‌ ಒಂಬುಡ್ಸ್‌ಮನ್‌ ಇದೆ. ಇದನ್ನು ಸಂಪರ್ಕಿಸುವ ಮೊದಲು ಸಂತ್ರಸ್ತ ಗ್ರಾಹಕ ಸದರಿ ಬ್ಯಾಂಕ್‌ನ ಆಂತರಿಕ ದೂರು ನಿವಾರಣಾ ವ್ಯವಸ್ಥೆಯಲ್ಲಿ ದೂರಬೇಕು. ಅಲ್ಲಿನ ಪರಿಹಾರ ಸೂತ್ರ ಸಮಾಧಾನತರದಿದ್ದರೆ ಅಥವಾ ಪರಿಹಾರವೇ ದಕ್ಕದಿದ್ದರೆ ಆತ ಬ್ಯಾಂಕಿಂಗ್‌ ಲೋಕಪಾಲದ ಮೊರೆ ಹೋಗಬಹುದು. ಆದರೆ ಬ್ಯಾಂಕ್‌ಗಳ ವಿರುದ್ಧ ಆಯಾ ಬ್ಯಾಂಕ್‌ಗಳಲ್ಲಿ ದೂರು ಸಲ್ಲಿಸುವ ವ್ಯವಸ್ಥೆ ಮಾತ್ರ ಸಂಕೀರ್ಣವಾಗಿದೆ. ಬ್ಯಾಂಕ್‌ನ ಶಾಖೆಗಳಲ್ಲಿ ದೂರಬಹುದು. ಮೇಲಿನ ಹಂತಗಳಿಗೆ ಇ ಮೇಲ್‌ ಮಾಡಬಹುದು, ಕೆಲವು ಬ್ಯಾಂಕ್‌ಗಳು ಆನ್‌ಲೈನ್‌ ದೂರು ಅರ್ಜಿ ಮಾದರಿಗಳನ್ನು ಒದಗಿಸಿವೆ. ಅವನ್ನು ಅಲ್ಲಿಯೇ ತುಂಬಿ ದೂರು ಸಲ್ಲಿಸಲೂ ಅವಕಾಶವಿದೆ. ಉದಾಹರಣೆಗೆ ಖಾಸಗಿಯವರ ಎಸ್‌ಬಿ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌ ಮೊದಲಾದ ಹಲವಾರು ಬ್ಯಾಂಕ್‌ಗಳು ಇಂತಹ ಸೌಲಭ್ಯ ನೀಡಿವೆ.

ಬ್ಯಾಂಕಿಂಗ್‌ ವ್ಯವಹಾರ ಜಾಸ್ತಿಯಾಗುತ್ತಿದೆ ಎಂದಮೇಲೆ ಈ ಕ್ಷೇತ್ರದ ದೂರುಗಳ ಸಂಖ್ಯೆಯೂ ಹೆಚ್ಚಾಗುವುದು ಸಹಜ ಪ್ರಕ್ರಿಯೆ. ಐಡಿಬಿಐ ಬ್ಯಾಂಕ್‌ನ ಸಣ್ಣ ಉದಾಹರಣೆಯನ್ನೇ ತೆಗೆದುಕೊಂಡರೆ, 2016-17ರಲ್ಲಿ ಅವರು 57,328 ದೂರುಗಳನ್ನು ಸ್ವೀಕರಿಸಿದ್ದಾರೆ. 57,766 ದೂರು ಪರಿಹಾರವಾಗಿದೆ. ಎಟಿಎಂಗಳಿಗೆ ಸಂಬಂಧಿಸಿದಂತೆ 43,185 ದೂರುಗಳ ಪೈಕಿ 42,744 ಇತ್ಯರ್ಥಗೊಂಡಿವೆ. ಇಂತಹ ಸಂದರ್ಭದಲ್ಲಿ ದೊಡ್ಡ ದೊಡ್ಡ ಬ್ಯಾಂಕ್‌ಗಳು ಗ್ರಾಹಕ ದೂರುಗಳಿಗೆ ಹೆಚ್ಚು ಸುಲಭವಾದ ದೂರು ದಾಖಲು ವ್ಯವಸ್ಥೆ ಮಾಡಬೇಕಿತ್ತಲ್ಲವೇ?

Unhappy? ಒಂದು ಎಸ್‌ಎಂಎಸ್‌ ಮಾಡಿ!
ಭಾರತದ ಅಗ್ರಕ್ರಮಾಂಕದ ರಾಷ್ಟ್ರೀಕೃತ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಗ್ರಾಹಕರ ದೂರು ವ್ಯವಹಾರದಲ್ಲಿ ಕಾಗದದ ಬಳಕೆಗೆ ಸಂಪೂರ್ಣ ಗುಡ್‌ ಬೈ ಹೇಳುವ ಪ್ರಯತ್ನದಲ್ಲಿದೆ. ಅದು ಹುಟ್ಟುಹಾಕಿರುವ ಗ್ರಾಹಕ ದೂರು ಪರಿಹಾರ ವ್ಯವಸ್ಥೆ “ಎಸ್‌ಎಂಎಸ್‌ ಅನ್‌ಹ್ಯಾಪಿ’ ನಿಜಕ್ಕೂ ಕ್ರಾಂತಿಕಾರಕವಾದುದು. ಈ ವ್ಯವಸ್ಥೆ ತುಂಬಾ ಸರಳ. ಈ ಬ್ಯಾಂಕ್‌ನ ಗ್ರಾಹಕ ತನ್ನ ಯಾವುದೇ ದೂರು ದುಮ್ಮಾನಗಳನ್ನು ಬ್ಯಾಂಕ್‌ನ ಗಮನಕ್ಕೆ ತಂದು ಪರಿಹಾರ ಪಡೆಯಲು ಯೋಚಿಸಿದ್ದರೆ ಅದಕ್ಕೆ ಪತ್ರ, ಅರ್ಜಿ ಬರೆಯಬೇಕಾಗಿಲ್ಲ. ಮೊಬೈಲ್‌ನಿಂದ ಒಂದು ಎಸ್‌ಎಂಎಸ್‌ ಮಾಡಿದರೆ ಸಾಕು.  ಮುಂದಿನ 48 ಘಂಟೆಗಳಲ್ಲಿ ಈ ದೂರಿನ ಬಗ್ಗೆ ಸದರಿ ಬ್ಯಾಂಕ್‌ ಪರಿಹಾರ ಒದಗಿಸುವ ಎಲ್ಲ ಪ್ರಯತ್ನ ಮಾಡುತ್ತದೆ.

ಬ್ಯಾಂಕ್‌ನ ಖಾತೆದಾರ ತನ್ನ ಮೊಬೈಲ್‌ನಿಂದ ಮೊಬೈಲ್‌ ನಂ. 8008202020ಗೆ Unhappy ಎಂದು ಚುಟುಕು ಸಂದೇಶ ಕಳುಹಿಸಬೇಕು. ಇದು ಆ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಜಿಎಂ ಮೇಲ್ವಿಚಾರಣೆಯ ಪ್ರತ್ಯೇಕ ‘ಹ್ಯಾಪಿ ರೂಂ’ಗೆ ತಲುಪುತ್ತದೆ. ತಕ್ಷಣ ಸ್ವಯಂಚಾಲಿತ ಕಂಪ್ಯೂಟರ್‌ ವ್ಯವಸ್ಥೆ ಗ್ರಾಹಕನ ಮೊಬೈಲ್‌ ನಂಬರ್‌ನ್ನು ದಾಖಲಿಸಿಕೊಂಡು, ದೂರು ಸಂಖ್ಯೆ, ಸ್ವೀಕೃತಿ ಮಾಹಿತಿಯನ್ನು ಸಂದೇಶದ ರೂಪದಲ್ಲಿಯೇ ಕಳುಹಿಸುತ್ತದೆ. ಹ್ಯಾಪಿ ರೂಂ ಅಧಿಕಾರಿ ದೂರುದಾರರಿಗೆ ಕರೆ ಮಾಡಿ ದೂರಿನ ವಿವರ ಪಡೆದುಕೊಳ್ಳುತ್ತಾರೆ. ಈ ವಿವರವನ್ನು ಸಾಫ್ಟ್ ರೂಪದಲ್ಲಿಯೇ ದಾಖಲಿಸಿಕೊಂಡು ಸಂಬಂಧಿಸಿದ ಬ್ಯಾಂಕ್‌ ಶಾಖೆಗೆ ಇ-ದೂರು ರವಾನೆಯಾಗುತ್ತದೆ. ಜೊತೆಜೊತೆಗೆ ದೂರು ಮೇಲ್‌ ಆಗಿರುವ ವಿಚಾರವನ್ನು ಆ ಬ್ರಾಂಚ್‌ ಮ್ಯಾನೇಜರ್‌ಗೆ ಎಸ್‌ಎಂಎಸ್‌ ಮೂಲಕ ತಿಳಿಸಲಾಗುತ್ತದೆ.

ಈಗ ಶಾಖೆ ದೂರುದಾರ ಬಳಕೆದಾರನ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕಾಗುತ್ತದೆ. ಅವರಿಗಿರುವ ಸಮಯ 48 ಘಂಟೆ. ದೂರಿಗೆ ತಾವು ತೆಗೆದುಕೊಂಡ ಕ್ರಮವನ್ನು ಹ್ಯಾಪಿ ರೂಂಗೆ ತಿಳಿಸಬೇಕಾಗುತ್ತದೆ. ಇಲ್ಲಿನ ಅಧಿಕಾರಿಗಳು ಇದನ್ನು ಪರಿಶೀಲಿಸಿ, ತೃಪ್ತಿಕರ ಎನ್ನಿಸಿದರೆ ಮತ್ತೆ ಗ್ರಾಹಕನಿಗೆ ಸಂದೇಶದ ರೂಪದಲ್ಲಿ ಫ‌ಲಿತಾಂಶ ತಿಳಿಸುತ್ತಾರೆ. ಬ್ಯಾಂಕ್‌ ಕ್ರಮದಿಂದ ಗ್ರಾಹಕ ಸಮಾಧಾನಗೊಂಡರೆ ಮಾತ್ರ ದೂರು ಸಂಖ್ಯೆಯ ಮುಂದೆ ಸಮಾಪ್ತಿಯನ್ನು ಘೋಷಿಸಲಾಗುತ್ತದೆ. ಇದು ಗಿಟ್ಟದಿದ್ದರೆ ಬ್ಯಾಂಕಿಂಗ್‌ ಒಂಬುಡ್ಸ್‌ಮನ್‌ ಸೇರಿದಂತೆ ಉಳಿದ ನ್ಯಾಯ ವ್ಯವಸ್ಥೆಗಳು ಬಳಕೆದಾರನ ಹಿತಕಾಯುತ್ತವೆ.

ಎಸ್‌ಬಿಎಂ, ಸ್ಟೇಟ್‌ ಬ್ಯಾಂಕ್‌ ಆಫ್ ಹೈದರಾಬಾದ್‌, ಬಿಕಾನೇರ್‌, ಪಾಟಿಯಾಲ ಸೇರಿದಂತೆ ಸಣ್ಣ ಪುಟ್ಟ ಬ್ಯಾಂಕ್‌ಗಳನ್ನು ತನ್ನೊಳಗೆ ಸೇರಿಸಿಕೊಂಡಿರುವ ಎಸ್‌ಬಿಐ ಈಗ ಜಗತ್ತಿನ ಎಂಟನೇ ಬೃಹತ್‌ ಬ್ಯಾಂಕ್‌. ಅದರದ್ದು ಈಗ 33 ಟ್ರಿಲಿಯನ್‌ ವ್ಯವಹಾರ, 420 ಮಿಲಿಯನ್‌ ಗ್ರಾಹಕರು, 2,78,000 ಉದ್ಯೋಗಿಗಳು, 59 ಸಾವಿರ ಎಟಿಎಂ, 24 ಸಾರ ಶಾಖೆಗಳ ಈ ವ್ಯವಸ್ಥೆ, ಎಸ್‌ಎಂಎಸ್‌ ದೂರು ವ್ಯವಸ್ಥೆಯನ್ನು ತಂದಿರುವುದು ಗಮನಾರ್ಹ. ಈಗಿರುವ ಮಾಹಿತಿ ಪ್ರಕಾರ, ಐಡಿಬಿಐ ಬ್ಯಾಂಕ್‌ ಐಈಆಐಇಅRಉ ಎಂದು 9220800800ಗೆ ಎಸ್‌ಎಂಎಸ್‌ ಮಾಡಿ ದೂರು ದಾಖಲಿಸುವ ವ್ಯವಸ್ಥೆ ತಂದಿರುವುದರ ಹೊರತಾಗಿ ಬಹಳಷ್ಟು ಬ್ಯಾಂಕ್‌ಗಳು ದೂರು ವ್ಯವಸ್ಥೆಯನ್ನು ಸರಳಗೊಳಿಸಿಲ್ಲ.

 ಬ್ಯಾಂಕ್‌ನಲ್ಲಿ, ಆರ್‌ಬಿಐ, ಬ್ಯಾಂಕಿಂಗ್‌ ಲೋಕಪಾಲದಲ್ಲಿ… ಹೀಗೆ ದೂರು ದಾಖಲಿಸುವಾಗ ಬಳಸುವ ಕಾಗದದ ಪ್ರಮಾಣ ದೊಡ್ಡ ಪ್ರಮಾಣದ್ದೇ. ಇದನ್ನು ತಪ್ಪಿಸುವ ಮತ್ತು ಕಾಗದ ರಹಿತ ವ್ಯವಹಾರಕ್ಕೆ ದಾರಿ ಮಾಡಿಕೊಡುವುದು ಈ ವ್ಯವಸ್ಥೆಯ ಹಿಂದಿರುವ ಇಂಗಿತ. ಮುಖ್ಯವಾಗಿ, ಅರ್ಜಿ ಬರೆದು ಪರಿಹಾರ ಕೇಳುವ ಸಂಸ್ಕೃತಿ ನಮ್ಮದಲ್ಲ. ಆ ಗೋಜಿಗೆ ಹೋಗಲಾಗದೆ ದೂರುಗಳು ಗ್ರಾಹಕನಲ್ಲಿಯೇ ಸತ್ತುಹೋಗುತ್ತಿದ್ದವು. ಈಗ ಆ ಸಮಸ್ಯೆ ಇಲ್ಲ. 

ಆಂಧ್ರದಲ್ಲಿ ಹುಟ್ಟಿದ ಕೂಸು!
ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ ಎಸ್‌ಬಿಐ ಸಿಜಿಎಂ ಶಿವಕುಮಾರ್‌ ಹಲವು ವರ್ಷಗಳಿಂದ ನಡೆಸಿದ ಚಿಂತನೆ, ಪ್ರಯೋಗಗಳ ಅನುಸಾರ ಡಿಸೆಂಬರ್‌ 2010ರಲ್ಲಿ ಮೊದಲ ಬಾರಿಗೆ ಹೈದರಾಬಾದ್‌ನಲ್ಲಿ ಎಸ್‌ಎಂಎಸ್‌ ಅನ್‌ಹ್ಯಾಪಿ ಜಾರಿಗೆ ಬಂದಿತು.  ಈ ಮುನ್ನ 10ರಿಂದ 12 ದಿನ ತೆಗೆದುಕೊಳ್ಳುತ್ತಿದ್ದ ದೂರು ಇತ್ಯರ್ಥ ಅವಧಿ ಇಲ್ಲಿ ಕೇವಲ 24ರಿಂದ 48 ಗಂಟೆಗಳಿಗೆ ಇಳಿಯಿತು. ಜನರ ಹ್ಯಾಪಿ ರೂಂ ದೂರುಗಳನ್ನು ನಾಲ್ಕು ಮಂದಿ ನೌಕರರು ನಿರ್ವಹಿಸುವ ವ್ಯವಸ್ಥೆ ಸುಲಭದ್ದಾದ ಕಾರಣ ವಾರ್ಷಿಕ 1,600 ದೂರು ಪಡೆಯುತ್ತಿದ್ದ ಹೈದರಾಬಾದ್‌ ಎಸ್‌ಬಿಐ ಈ ವ್ಯವಸ್ಥೆಯಡಿ 11 ತಿಂಗಳಲ್ಲಿ 22,209 ದೂರು ಸ್ವೀಕರಿಸಿತು. ಮುಖ್ಯವಾಗಿ, ಇದರಲ್ಲಿ 21,805 ಗ್ರಾಹಕರಿಗೆ ಸಮಾಧಾನವಾಗುವ ರೀತಿಯಲ್ಲಿ ಪರಿಹಾರಗೊಂಡಿತು. 2011ರಿಂದ ಕೇವಲ ಎಸ್‌ಬಿಐ ಅಲ್ಲದೆ ಅವತ್ತಿನ ಎಸ್‌ಬಿಎಂ ಕೂಡ ಇಂತಹ ವ್ಯವಸ್ಥೆಯನ್ನು ಜಾರಿಗೆ ತಂದಿತು.

ಎಸ್‌ಬಿಎಂ 2009-10ರಲ್ಲಿ 14,194 ದೂರುಗಳನ್ನು ಪಡೆದಿತ್ತು. ಇದರಲ್ಲಿ 1,888 ದೂರು ಇತ್ಯರ್ಥವಾಗದೆ ಉಳಿದಿದ್ದವು. 2010-11ರಲ್ಲಿ ಹೆಚ್ಚುವರಿಯಾಗಿ 35,302 ದೂರು ದುಮ್ಮಾನಗಳನ್ನು ಎದುರಿಸಲಾಗಿತ್ತು. ಇವೆಲ್ಲ ದೂರುಗಳು ಹಲವು ಪುಟಗಳ ದಾಖಲೆಯನ್ನೂ ಜೊತೆಯಲ್ಲಿ ಇರಿಸಿಕೊಳ್ಳಬೇಕಾದುದರಿಂದ ಕಾಗದ ದೊಡ್ಡ ಪ್ರಮಾಣದಲ್ಲಿಯೇ ವೆಚ್ಚವಾಗುವುದು ಖರೆ. ಇನ್ನೊಂದು ಮಾಹಿತಿಯಲ್ಲಿ ಈ ಮಾತಿನ ಸತ್ಯತೆ ಇನ್ನಷ್ಟು ಸ್ಪಷ್ಟವಾಗುತ್ತದೆ. ಐದು ಸೆಟ್‌ ದಾಖಲೆಗಳೊಂದಿಗೆ ಸಂಪರ್ಕಿಸಬೇಕಾದ ಲೋಕಪಾಲ ವ್ಯವಸ್ಥೆಯ ದೂರು ದಾಖಲು ಮಾದರಿಯಲ್ಲಿ ಅನಗತ್ಯವಾಗಿ ಕಾಗದ ವ್ಯಯವಾಗುತ್ತದೆ. ಕೇವಲ ಒಂದು ಬ್ಯಾಂಕ್‌ ಮಾಹಿತಿ ಮಾತ್ರ ಇಲ್ಲಿದೆ ಎಂಬುದು ಕಾಗದ ಬಳಕೆಯ ಅಗಾಧತೆಯನ್ನು, Unhappy ಸಂದೇಶ ತಾಂತ್ರಿಕತೆಯ ಅಗತ್ಯವನ್ನು ಪ್ರತಿಪಾದಿಸುತ್ತದಲ್ಲವೇ?

ಇದು ಎಲ್ಲಕ್ಕೂ ಪರಿಹಾರ ಅಲ್ಲ ಎಂಬುದು ಕೂಡ ಸತ್ಯವೇ. ಪ್ರಮುಖವಾಗಿ, ಶಾಖೆಗಳು ಗ್ರಾಹಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತೋರುವ ಸೋಮಾರಿತನ, ನಿರ್ಲಕ್ಷ್ಯದ ಧೋರಣೆಗೆ ಕಡಿವಾಣ ಹಾಕಿದೆ. ಈಗಲೂ ಬ್ಯಾಂಕಿಂಗ್‌ ನೀತಿಗಳ ವಿಚಾರದಲ್ಲಿ ಅನ್‌ಹ್ಯಾಪಿ ದುಃಖಕರವೇ! ಏನೂ ಇಲ್ಲ ಎಂಬುದಕ್ಕಿಂತ ಒಂದು ಅಸ್ತ್ರ ಇದೆ ಎಂಬುದು ಅಷ್ಟರಮಟ್ಟಿಗೆ ಸಮಾಧಾನಕರ.

ಮಿಸ್‌ ಕಾಲ್‌ ಕೂಡ ಒಂದು ಸೌಲಭ್ಯ!
ಅನ್‌ಹ್ಯಾಪಿ ಸ್ವರೂಪದ ವ್ಯವಸ್ಥೆಗಳನ್ನು ಎಲ್ಲೆಡೆ ಕಾಣಲಾಗದಿದ್ದರೂ ಮಿಸ್‌ಕಾಲ್‌ ಮಾಹಿತಿ ವ್ಯವಸ್ಥೆಯನ್ನು ಬಹುಪಾಲು ಬ್ಯಾಂಕ್‌ಗಳು ಕೊಟ್ಟಿವೆ. ಹೆಸರೇ ಸೂಚಿಸುವಂತೆ ಬ್ಯಾಂಕ್‌ ನಿಗದಿಪಡಿಸಿದ ನಂಬರಿಗೆ ಮಿಸ್‌ಕಾಲ್‌ ಕೊಟ್ಟರೆ ಅದು ನಿಮಗೆ ಈ ಕೆಳಗಿನ ಅಗತ್ಯ ಸೇವೆಯನ್ನು ಉಚಿತವಾಗಿ ನೀಡುತ್ತವೆ. 1. ಬ್ಯಾಲೆನ್ಸ್‌ ಚಾರಣೆ 2. ಮಿನಿ ಸ್ಟೇಟ್‌ಮೆಂಟ್‌ 3. ಚೆಕ್‌ ಬುಕ್‌ ವಿವರ 4. ಅಕೌಂಟ್‌ ಸ್ಟೇಟ್‌ಮೆಂಟ್‌ ವಿವರ 5. ಈ ಮೇಲ್‌ ಸ್ಟೇಟ್‌ಮೆಂಟ್‌ ಇತ್ಯಾದಿ. ಸೇವೆಗಳ ಸಂಖ್ಯೆ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಭಿನ್ನವಾಗಿದೆ.

ಇತ್ತೀಚೆಗೆ ಜನಸಾಮಾನ್ಯರು ಬ್ಯಾಂಕ್‌ ವ್ಯವಹಾರದಲ್ಲಿ ಹೆಚ್ಚಾಗಿ ತೊಡಗಿರುವುದರಿಂದ,  ಅವರು ಬ್ಯಾಲೆನ್ಸ್‌ ತಿಳಿಯಲು ಪಾಸ್‌ಬುಕ್ಕನ್ನು ಪದೇ ಪದೇ ಅಪ್‌ಡೇಟ್‌ ಮಾಡಲಾಗದಿರುವುದರಿಂದ, ಎಟಿಎಂ ಉಚಿತ ಬಳಕೆಗೆ ಆರ್‌ಬಿಐ ನಿರ್ಬಂಧಗಳನ್ನು ಹೇರಿರುವುದರಿಂದ ಹಲವಾರು ಬ್ಯಾಂಕುಗಳು ಈ ಗ್ರಾಹಕ ಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತಂದಿವೆ. ಇದರಿಂದ ಎಟಿಎಂ ಮತ್ತು ನೆಟ್‌ ಬ್ಯಾಂಕಿಂಗ್‌ ಬಳಕೆ ಕಡಿಮೆ ಮಾಡಿಯೂ ಮಾಹಿತಿ ಪಡೆಯುವ ಅಗತ್ಯತೆಯನ್ನು ಪೂರೈಸಿಕೊಳ್ಳಬಹುದು. ಹಲವು ಬ್ಯಾಂಕುಗಳು ಈ ಸೌಲಭ್ಯವನ್ನು ನೀಡುತ್ತಿವೆ. ವಿವಿಧ ಸೇವೆಗಳಿಗೆ ಬ್ಯಾಂಕಿನ ಮೊಬೈಲ್‌ ಸಂಖ್ಯೆ ಬೇರೆಬೇರೆಯಾಗಿರುತ್ತದೆ. ಮೊಟ್ಟಮೊದಲ ಬಾರಿಗೆ ಈ ಸೇವೆಯನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಆರಂಭಿಸಿದೆ. ಈ ಮೊದಲು ಅಣ್ಣಾ ಹಜಾರೆ ಭಾರತದಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಆಂದೋಲನಕ್ಕೆ ಮಿಸ್ಡ್ಕಾಲ್‌ ಸೇವೆಯನ್ನು ಬಳಸಿದ್ದು ಅತ್ಯಂತ ಯಶಸ್ವಿಯಾಗಿತ್ತು.

ಈ ಸೇವೆ ಪಡೆಯಲು ಬ್ಯಾಂಕಿನಲ್ಲಿ ಖಾತೆದಾರ ಮೊಬೈಲ್‌ ಸಂಖ್ಯೆಯನ್ನು ‘ಎಸ್‌ಎಂಎಸ್‌ ಬ್ಯಾಂಕಿಂಗ್‌ ಸೇವೆ’ಗೆ ನೋಂದಣಿ ಮಾಡಿಕೊಳ್ಳಲೇಬೇಕು. ಬ್ಯಾಂಕಿನಿಂದ ಅಧಿಕೃತವಾಗಿ ನಿಮ್ಮ ಮೊಬೈಲಿಗೆ ಒಪ್ಪಿಗೆ ಬಂದಮೇಲೆ ಈ ವ್ಯವಸ್ಥೆಯನ್ನು ದಿನದ 24 ಗಂಟೆಯೂ ಬಳಸಬಹುದು. ಯಾವುದೇ ಹಣಕಾಸಿನ ವ್ಯವಹಾರ ಇಲ್ಲಿ ನಡೆಯದೇ ಇರುವುದರಿಂದ ಸಂಪೂರ್ಣ ಸುರಕ್ಷತೆಯುಳ್ಳ ಈ ಸೌಲಭ್ಯ ಸಾಮಾನ್ಯ ಜನರಿಗೆ ವರವಾಗುವುದರಲ್ಲಿ ಅನುಮಾನವಿಲ್ಲ. ಆದರೆ ನೆನಪಿರಲಿ, “ಎಸ್‌ಎಂಎಸ್‌ ಬ್ಯಾಂಕಿಂಗ್‌ ಸೇವೆ’ ನೀಡಲು ಕೆಲವು ಬ್ಯಾಂಕುಗಳು ಸೇವಾಶುಲ್ಕ ಪಡೆಯುತ್ತಿವೆ. ಕೆಲವು ಬ್ಯಾಂಕುಗಳು ಈ ಸೇವೆಯನ್ನು ಉಚಿತವಾಗಿಯೂ ನೀಡುತ್ತಿವೆ.

ಬ್ಯಾಂಕುಗಳು ನಿಗದಿಪಡಿಸಿದ ನಂಬರಿಗೆ ನೋಂದಾಯಿಸಿದ ಮೊಬೈಲ್‌ನಿಂದ ಕರೆ ಮಾಡಿದಾಗ ಎರಡು ರಿಂಗ್‌ ಆದ ತಕ್ಷಣ ಕರೆ ತಾನೇತಾನಾಗಿ ಕತ್ತರಿಸಲ್ಪಡುತ್ತದೆ. ಮುಂದಿನ 3-5 ನಿಮಿಷಗಳಲ್ಲಿ ನಿಮಗೆ ಬೇಕಾದ ಮಾಹಿತಿ ಲಭ್ಯವಾಗುತ್ತದೆ. ಕೆಲವು ಬ್ಯಾಂಕ್‌ಗಳ ಮಿಸ್‌ಕಾಲ್‌ ಮಾಹಿತಿ ಇಂತಿದೆ. ಕರೆ ಸಂಖ್ಯೆ ಬದಲಾಗುವ ಸಾಧ್ಯತೆ ಇರುವುದರಿಂದ ಇಲ್ಲಿನ ಮಾಹಿತಿಯನ್ನು ಗ್ರಾಹಕ ಬ್ಯಾಂಕ್‌ನಿಂದ ದೃಢಪಡಿಸಿಕೊಳ್ಳುವುದು ಒಳ್ಳೆಯದು.

ಆ್ಯಕ್ಸಿಸ್‌ ಬ್ಯಾಂಕ್‌-09225892258, ಎಸ್‌ಎಂಎಸ್‌ ಮೂಲಕ  ಮಾಹಿತಿಗೆ 5676782 ಅಥವಾ 9717000002ಕ್ಕೆ BALAVLಎಂದು ಟೈಪ್‌ ಮಾಡಿ ಸ್ಪೇಸ್‌ ಬಿಟ್ಟು ಅಕೌಂಟ್‌ ನಂಬರ್‌ ನಮೂದಿಸಿರಬೇಕು.

ಸಿಂಡಿಕೇಟ್‌ ಬ್ಯಾಂಕ್‌-09664552255 ಮಿಸ್ಡ್ ಕಾಲ್‌ ಬ್ಯಾಂಕಿಂಗ್‌ ನೋಂದಣಿಗೆ SREG  -ಸ್ಪೇಸ್‌- customer id ಹಾಕಿ ಎಸ್‌ಎಂಎಸ್‌ ಮಾಡಿ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌-18001802222/01202490000. ಎಸ್‌ಎಂಎಸ್‌ ಮೂಲಕವಾದರೆ @iI ಎಂದು 5607040ಗೆ ಸಂದೇಶ.

ಐಸಿಐಸಿಐ ಬ್ಯಾಂಕ್‌-02230256767, ಎಸ್‌ಎಂಎಸ್‌ ಮೂಲಕವಾದರೆ  BAL ಎಂದು 5676766/ 9215676766 ಗೆ ಸಂದೇಶ.

ಹೆಚ್‌ಡಿಎಫ್ಸಿ ಬ್ಯಾಂಕ್‌-18002703333, ಎಸ್‌ಎಂಎಸ್‌ಗೆ @iI ಎಂದು 5676712ಗೆ ಸಂದೇಶ.

ಬ್ಯಾಂಕ್‌ ಆಫ್ ಇಂಡಿಯಾ-02233598548

ಕೆನರಾ ಬ್ಯಾಂಕ್‌-09289292892 ಎಸ್‌ಎಂಎಸ್‌ ಮೂಲಕ ಮಾಹಿತಿ ಪಡೆಯಲು  

ಬ್ಯಾಂಕ್‌ ಆಫ್ ಬರೋಡಾಕ್ಕೆ@iI ಎಂದು ಟೈಪ್‌ ಮಾಡಿ ಖಾತೆಯ ಕೊನೆಯ ನಾಲ್ಕು ಅಂಕಿಗಳನ್ನು 5616150ಕ್ಕೆ ರವಾನಿಸಬೇಕು.

ಅಲಹಾಬಾದ್‌ ಬ್ಯಾಂಕ್‌ನಲ್ಲಿ @íIíXI- ಸ್ಪೇಸ್‌-ಅಕೌಂಟ್‌ ನಂ.- 9646211101ಗೆ ಎಸ್‌ಎಂಎಸ್‌

ಕರ್ನಾಟಕ ಬ್ಯಾಂಕ್‌ನ ಉಚಿತ ಮಿಸ್‌ಕಾಲ್‌ಗೆ ಬ್ಯಾಲೆನ್ಸ್‌ ಮಾತಿ ಹಾಗೂ ಮಿನಿ ಸ್ಟೇಟ್‌ಮೆಂಟ್‌ ನೀಡುವ ಸೌಲಭ್ಯವನ್ನು ತನ್ನ ಖಾತೆದಾರರಿಗೆ ಒದಗಿಸಿದೆ. 1800 425 1445 ನಂಬರ್‌ಗೆ  ಕರೆ ಮಾಡಿದ ಎರಡು ರಿಂಗ್‌ ನಂತರ ಕರೆ ಕತ್ತರಿಸಲ್ಪಡುತ್ತದೆ. ಖಾತೆದಾರರ ಬ್ಯಾಲೆನ್ಸ್‌ನ ಮಾಹಿತಿಯ ಎಸ್‌ಎಂಎಸ್‌ ಲಭ್ಯವಾಗುತ್ತದೆ. ಅದೇ ರೀತಿ 1800 425 1446ಗೆ ಕರೆ ಮಾಡಿದರೆ ಖಾತೆಯ ಸ್ಟೇಟ್‌ಮೆಂಟ್‌ ಎಸ್‌ಎಂಎಸ್‌ ಕ್ಷಣಾರ್ಧದಲ್ಲಿ ಲಭ್ಯ. ನಿಮ್ಮ ಖಾತೆಯ ದಾಖಲೆಯ ಜೊತೆಗೆ ನಿಮ್ಮ ಮೊಬೈಲ್‌ ನಂಬರ್‌ ದಾಖಲಾಗಿರಬೇಕು. ಒಂದಕ್ಕಿಂತ ಹೆಚ್ಚು ಖಾತೆಗೆ ನಿಮ್ಮ ಮೊಬೈಲ್‌ ಸಂಖ್ಯೆಯನ್ನೇ  ಜೋಡಿಸಿದ್ದರೆ, ಕೊನೆಯದಾಗಿ ದಾಖಲಾದ ಖಾತೆಯ ಮಾಹಿತಿಗಳು ಸಂದೇಶ ರೂಪದಲ್ಲಿ ಬರುತ್ತವೆ.

ಎಸ್‌ಬಿಐನಲ್ಲಿ SCE ಎಂದು ಟೈಪ್‌ ಮಾಡಿ ಸ್ಪೇಸ್‌ ಕೊಟ್ಟು ನಿಮ್ಮ ಅಕೌಂಟ್‌ ನಂಬರ್‌ ಟೈಪಿಸಿ 09223488888ಕ್ಕೆ ಎಸ್‌ಎಂಎಸ್‌ ಕಳುಹಿಸಬೇಕು. ನೋಂದಣಿ ಯಶಸ್ವಿಯಾದ ನಂತರ 09223766666ಗೆ ಮಿಸ್‌ ಕಾಲ್‌ ಕೊಟ್ಟರೆ ಖಾತೆಯ ಬ್ಯಾಲೆನ್ಸ್‌, 0223866666ಗೆ ಮಿಸ್‌ಕಾಲ್‌ ಕೊಟ್ಟರೆ ಕೊನೆಯ ಐದು ವ್ಯವಹಾರದ ವಿವರ ಸಿಗಲಿದೆ. ಎಸ್‌ಬಿಐನಲ್ಲಿ ಎಸ್‌ಎಂಎಸ್‌ಗೆ ಕೆಲವು ಹೆಚ್ಚಿನ ಸೇವೆಗಳು ಲಭ್ಯ.

ಹಸಿರೇ ಉಸಿರು: ಎಸ್‌ಬಿಐ ಗ್ರೀನ್‌ ಬ್ಯಾಂಕಿಂಗ್‌
ಹಣ ಕಟ್ಟುವ, ಹಿಂಪಡೆಯುವ, ಹಣ ವರ್ಗಾವಣೆ  ಪ್ರಕ್ರಿಯೆಗಳಿಗೆ ಚಲನ್‌ ತುಂಬುವ ಕೆಲಸಕ್ಕೆ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಗುಡ್‌ಬೈ ಹೇಳಿದೆ.  ಬ್ಯಾಂಕ್‌ ಗ್ರಾಹಕ ತನ್ನ ಎಸ್‌ಬಿಐ ಎಟಿಎಂ ಕಾರ್ಡ್‌ ಮೂಲಕವೇ ಈ ವ್ಯವಹಾರಗಳನ್ನು ಪೂರೈಸುವ ವ್ಯವಸ್ಥೆ ಜಾರಿಗೊಂಡಿದೆ. ಬ್ಯಾಂಕ್‌ನ ಏಕಗವಾಕ್ಷ ಕಿಂಡಿ(ಎಸ್‌ಡಬ್ಲ್ಯುಓ)ಯಲ್ಲಿರುವ ಬ್ಯಾಂಕ್‌ ಅಧಿಕಾರಿಯ ಬಳಿ ಸೇಲ್‌ ಮಿಷನ್‌ ಎಂಬ ಉಪಕರಣವಿರುತ್ತದೆ. ಇದರಲ್ಲಿ ಗ್ರಾಹಕ ತನ್ನ ಎಟಿಎಂ ಕಾರ್ಡ್‌ನ್ನು ಸ್ವೀಪ್‌ ಮಾಡಿದಾಗ ಆತನ ವಿವರಗಳು ಯಂತ್ರಕ್ಕೆ ಪೂರಣಗೊಳ್ಳುತ್ತವೆ. ಬೇಕಾದ ಸೇವೆಯನ್ನು ಆಯ್ದುಕೊಳ್ಳಲು ಯಂತ್ರ ಸೂಚಿಸುತ್ತದೆ. ಮುಂದಿನ ಹಂತದಲ್ಲಿ ಹಣದ ಮೊತ್ತವನ್ನು ನಮೂದಿಸಲು ಸೂಚಿಸಲಾಗುತ್ತದೆ. ಮೊತ್ತವನ್ನು ದೃಢೀಕರಿಸಿ ಗ್ರಾಹಕ ತನ್ನ ಗುಪ್ತ ಸಂಖ್ಯೆಯನ್ನು ನಮೂದಿಸಿದರೆ ಮುಂದಿನ ಹಂತದ ಕೆಲಸಗಳನ್ನು ಕೌಂಟರ್‌ನಲ್ಲಿರುವ ಬ್ಯಾಂಕ್‌ ನೌಕರ ಅಂತಿಮಗೊಳಿಸುತ್ತಾನೆ.  ಪ್ರಕ್ರಿಯೆಯ ನಂತರ ಹಿಂದಿನ ಶಿಲ್ಕು, ವ್ಯವಹರಿಸಿದ ಮೊತ್ತ, ಖಾತೆಯ ಉಳಿಕೆ ಶಿಲ್ಕುಗಳ ಮಾಹಿತಿ ಇರುವ ಕಂಪ್ಯೂಟರ್‌  ಚೀಟಿ ಲಭ್ಯವಾಗುತ್ತದೆ. ಇದರಿಂದ ಕಾಗದದ ವೆಚ್ಚ ಮತ್ತು ಕೌಂಟರ್‌ನಲ್ಲಿರುವ ವ್ಯಕ್ತಿ ಗ್ರಾಹಕನ ವರ ದಾಖಲಿಸುವ ತ್ರಾಸ ಕಡಿಮೆಯಾಗಲಿದೆ.         

ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
 

ಟಾಪ್ ನ್ಯೂಸ್

ಹರಿಪ್ರಿಯಾಗೆ ‘ಎಂದೂ ನಿನ್ನ ನೆರಳಾಗಿ ಕಾಯುವೆ’ ಎಂದ ವಸಿಷ್ಟ ಸಿಂಹ

ಹರಿಪ್ರಿಯಾಗೆ ‘ಎಂದೂ ನಿನ್ನ ನೆರಳಾಗಿ ಕಾಯುವೆ’ ಎಂದ ವಸಿಷ್ಟ ಸಿಂಹ

ಸಿ.ಟಿ ರವಿ ನಿವಾಸದೆದುರು ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

ಸಿ.ಟಿ ರವಿ ನಿವಾಸದೆದುರು ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

ʼವರಾಹ ರೂಪಂʼ ವಿವಾದ: ಕೊನೆಗೂ ಕಾನೂನು ಸಮರದಲ್ಲಿ ಗೆಲುವು ಸಾಧಿಸಿದ ʼಕಾಂತಾರʼ

ʼವರಾಹ ರೂಪಂʼ ವಿವಾದ: ಕೊನೆಗೂ ಕಾನೂನು ಸಮರದಲ್ಲಿ ಗೆಲುವು ಸಾಧಿಸಿದ ʼಕಾಂತಾರʼ

ಬಿಗ್‌ ಬಾಸ್‌: ಸಲ್ಮಾನ್‌ ಖಾನ್‌ ಗಿಂತ ಜಾಸ್ತಿ ಹಣ ನನಗೆ ಕೊಟ್ಟರೆ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗುತ್ತೇನೆ: ಅಶ್ನೀರ್​ ಗ್ರೋವರ್

ಬಿಗ್‌ ಬಾಸ್‌: ಸಲ್ಮಾನ್‌ ಖಾನ್‌ ಗಿಂತ ಜಾಸ್ತಿ ಹಣ ಕೊಟ್ಟರೆ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗುತ್ತೇನೆ: ಅಶ್ನೀರ್​ ಗ್ರೋವರ್

ನರೇಂದ್ರ ಮೋದಿ ದೇಶದ್ರೋಹಿಗಳಿಗೆ ಭಸ್ಮಾಸುರ: ಸಿ.ಟಿ.ರವಿ

ನರೇಂದ್ರ ಮೋದಿ ದೇಶದ್ರೋಹಿಗಳಿಗೆ ಭಸ್ಮಾಸುರ: ಸಿ.ಟಿ.ರವಿ

Michael Hussey spoke about next captain of CSK

ಧೋನಿ ಬಳಿಕ ಸಿಎಸ್ ಕೆಗೆ ಯಾರು ನಾಯಕ?: ಗುಟ್ಟು ಬಿಚ್ಚಿಟ್ಟ ಕೋಚ್ ಮೈಕ್ ಹಸ್ಸಿ

ಕರ್ನಾಟಕ ಸಿಎಂ ನಿಮ್ಮ ಮುಖದ ಮೇಲೆ ಉಗುಳಿದ್ದಾರೆ..ನಾಚಿಕೆಯಾಗಲ್ವಾ: ಮಹಾ ಸಿಎಂಗೆ ರಾವತ್

ಕರ್ನಾಟಕ ಸಿಎಂ ನಿಮ್ಮ ಮುಖದ ಮೇಲೆ ಉಗುಳಿದ್ದಾರೆ..ನಾಚಿಕೆಯಾಗಲ್ವಾ: ಮಹಾ ಸಿಎಂಗೆ ರಾವತ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಹರಿಪ್ರಿಯಾಗೆ ‘ಎಂದೂ ನಿನ್ನ ನೆರಳಾಗಿ ಕಾಯುವೆ’ ಎಂದ ವಸಿಷ್ಟ ಸಿಂಹ

ಹರಿಪ್ರಿಯಾಗೆ ‘ಎಂದೂ ನಿನ್ನ ನೆರಳಾಗಿ ಕಾಯುವೆ’ ಎಂದ ವಸಿಷ್ಟ ಸಿಂಹ

ಸಿ.ಟಿ ರವಿ ನಿವಾಸದೆದುರು ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

ಸಿ.ಟಿ ರವಿ ನಿವಾಸದೆದುರು ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

ʼವರಾಹ ರೂಪಂʼ ವಿವಾದ: ಕೊನೆಗೂ ಕಾನೂನು ಸಮರದಲ್ಲಿ ಗೆಲುವು ಸಾಧಿಸಿದ ʼಕಾಂತಾರʼ

ʼವರಾಹ ರೂಪಂʼ ವಿವಾದ: ಕೊನೆಗೂ ಕಾನೂನು ಸಮರದಲ್ಲಿ ಗೆಲುವು ಸಾಧಿಸಿದ ʼಕಾಂತಾರʼ

ಬಿಗ್‌ ಬಾಸ್‌: ಸಲ್ಮಾನ್‌ ಖಾನ್‌ ಗಿಂತ ಜಾಸ್ತಿ ಹಣ ನನಗೆ ಕೊಟ್ಟರೆ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗುತ್ತೇನೆ: ಅಶ್ನೀರ್​ ಗ್ರೋವರ್

ಬಿಗ್‌ ಬಾಸ್‌: ಸಲ್ಮಾನ್‌ ಖಾನ್‌ ಗಿಂತ ಜಾಸ್ತಿ ಹಣ ಕೊಟ್ಟರೆ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗುತ್ತೇನೆ: ಅಶ್ನೀರ್​ ಗ್ರೋವರ್

ನರೇಂದ್ರ ಮೋದಿ ದೇಶದ್ರೋಹಿಗಳಿಗೆ ಭಸ್ಮಾಸುರ: ಸಿ.ಟಿ.ರವಿ

ನರೇಂದ್ರ ಮೋದಿ ದೇಶದ್ರೋಹಿಗಳಿಗೆ ಭಸ್ಮಾಸುರ: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.