ಯು ಆರ್‌ ಅಂಡರ್‌ ಫಾರೆಸ್ಟ್‌ !

ಎರಡು ದಶಕಗಳಿಂದ ಉಳುಮೆ ಮಾಡಿಲ್ಲ

Team Udayavani, Aug 12, 2019, 5:00 AM IST

ಮಹೋಗನಿ, ಸಿಲ್ವರ್‌ ಓಕ್‌, ಬೇವು, ಹೆಬ್ಬೇವು, ರಕ್ತಚಂದನ, ತೇಗ, ಹುಣಸೆ, ಬೀಟೆ, ಶ್ರೀಗಂಧ, ಸಾಗುವಾನಿ ಮತ್ತಿತರ ಮರಗಳು. ಪಕ್ಕದಲ್ಲೊಂದು ಸದಾ ನೀರು ತುಂಬಿರುವ ಕೆರೆ. ನೂರಾರು ಬಗೆಯ ಸಸ್ಯರಾಶಿ, ಪಕ್ಷಿಗಳ ಕಲರವ. ಇದರ ಜೊತೆ ಮಾವು, ತೆಂಗು, ಬಿದಿರು, ನೆಲ್ಲಿ, ಅಂಜೂರ, ಸೀತಾಫ‌ಲ, ರಾಮಫ‌ಲ, ಲಕ್ಷ್ಮಣಫ‌ಲಗಳು. ಕೇಳಿದರೆ ಯಾವುದೋ ಪ್ರಕೃತಿ ನಿರ್ಮಿತ ದಟ್ಟಾರಣ್ಯ ಕುರಿತ ವಿವರಣೆಯಂತೆ ತೋರುತ್ತಿದೆಯಲ್ಲವೇ? ದಟ್ಟಾರಣ್ಯ ಎಂಬುದೇನೋ ನಿಜ ಆದರೆ ಪ್ರಕೃತಿ ನಿರ್ಮಿತವಲ್ಲ, ಮಾನವ ನಿರ್ಮಿತ!

ವೆಂಕಟರಾಮಾಂಜನೇಯ ಅವರ ತಂದೆ ಸುಬ್ಬರಾವ್‌ ಅವರಿಗೆ ತಮ್ಮ ಜಮೀನಿನಲ್ಲಿ ಕಾಡು ಕಟ್ಟುವ ಆಸೆಯಿತ್ತು. ಆದರೆ ಅವರಿಗೆ ತಮ್ಮಾಸೆಯನ್ನು ಪೂರೈಸಲು ಆಗಲಿಲ್ಲ. ನೂರೆಂಟು ವಿಘ್ನಗಳು ಬಂದರೂ ತಮ್ಮ ತಂದೆಯ ಆಸೆಯನ್ನು ಈಡೇರಿಸಲೇ ಬೇಕೆಂದು ಜಿದ್ದಿಗೆ ಬಿದ್ದರು ರಾಮಾಂಜನೇಯ ಅವರು. ಅದರಂತೆ ಅರಣ್ಯಾಧಿಕಾರಿಯೊಬ್ಬರ ಸಲಹೆ ಪಡೆದು 1100 ತೇಗದ ಗಿಡಗಳನ್ನು ಮೊದಲಿಗೆ ತರಿಸಿಕೊಂಡರು. ಅವರತ್ತ ಕುಹಕ ನಗೆಯನ್ನು ಬೀರಿದವರು, ಅಪ್ಪನ ಜಮೀನನ್ನು ಹಾಳುಗೆಡವುತ್ತಾನೆ ಮಗ ಅಂತ ಕಾಲೆಳೆದವರಿಗೂ ಕಡಿಮೆಯಿರಲಿಲ್ಲ. ಕಾಡಿನಲ್ಲಿ ಬೆಳೆಯಬೇಕಾದ ಮರಗಳನ್ನು ತೋಟದಲ್ಲಿ ಬೆಳೆಸಿದರೆ ಹಾಕಿರುವ ಬೆಳೆಯ ಇಳುವರಿ ಕುಂಠಿತಗೊಳ್ಳುವುದು ನಿಶ್ಚಿತ ಎಂದು ಅನೇಕರು ಭವಿಷ್ಯ ಬೇರೆ ನುಡಿದಿದ್ದರು.

ಬಗೆ ಬಗೆಯ ಮರಗಳು
ಇಂದು ಪಕ್ಕನೆ ನೋಡಿದರೆ ಮಲೆನಾಡಿನ ಯಾವುದೋ ಹಳ್ಳಿಯಲ್ಲಿರುವಂತೆ ತೋರುವ ಕಾಡು ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ನಿರ್ಮಾಣಗೊಂಡಿದೆ. ಲೆಕ್ಕ ಹಾಕಿದರೆ ಸುಮಾರು 3,000 ಹೆಚ್ಚು ಮರಗಳು ಸಿಗಬಹುದು ಎಂದು ನಗುತ್ತಾರೆ ರಾಮಾಂಜನೇಯರವರು. ಸಾಗುವಾನಿ, ಮಹೋಗನಿ, ಸಿಲ್ವರ್‌ ಓಕ್‌, ಬೇವು, ಹೆಬ್ಬೇವು, ರಕ್ತಚಂದನ, ಶ್ರೀಗಂಧ, ಬೀಟೆ, ಬಿದಿರು, ಮತ್ತಿ ಮುಂತಾದಮರಗಳೂ ತೋಟದಲ್ಲಿವೆ. ಅರ್ಧ ಅಡಿ ಸುತ್ತಳತೆ ಹೊಂದಿದ ಮರಗಳಿಂದ ಹಿಡಿದು, ಐದು ಅಡಿ ಸುತ್ತಳತೆಯುಳ್ಳ ಮರಗಳು, ಸಣ್ಣ ಗಿಡಗಳಿಂದ ಹಿಡಿದು ಎಪ್ಪತ್ತು ಅಡಿಗಳಷ್ಟು ಎತ್ತರ ಬೆಳೆದ ಮರಗಳನ್ನೂ ಕಾಣಬಹುದು. ಅಲ್ಪಕಾಲಿಕ ಮರಗಳಲ್ಲದೆ 28 ವರ್ಷ ವಯಸ್ಸಿನ ಮರಗಳೂ ಇವರ ಕಾಡಿನಲ್ಲಿವೆ.

ಮಣ್ಣಿಗೆ ಎಲೆಗಳ ಹೊದಿಕೆ
ಕೃಷಿ ನಿರ್ವಹಣೆಗಾಗಿ ರಾಮಾಂಜನೇಯ ಅವರು ಸರಳ ಮಾರ್ಗೋಪಾಯಗಳನ್ನು ಕೈಗೊಂಡಿದ್ದಾರೆ. ತೋಟದಲ್ಲಿ ಅಲ್ಲಲ್ಲಿ ಗ್ಲಿರಿಸೀಡಿಯಾ ಗಿಡಗಳಿವೆ. ಇವುಗಳ ಟೊಂಗೆಗಳನ್ನು ಎರಡು ತಿಂಗಳಿಗೊಮ್ಮೆ ಕತ್ತರಿಸುತ್ತಾರೆ. ಎಲ್ಲಿ ಕತ್ತರಿಸುತ್ತಾರೋ, ಅಲ್ಲಿಯೇ ಸುತ್ತಮುತ್ತ ಸೊಪ್ಪನ್ನು ಎರ್ರಾಬಿರ್ರಿ ಹರಡಿ ಬಿಡುತ್ತಾರೆ. ಇದರಿಂದ ಭೂಮಿಗೆ ಹೊದಿಕೆ ಲಭ್ಯವಾದಂತಾಗುತ್ತದೆ. ಮಣ್ಣಿಗೆ ಎಲೆಗಳ ಹೊದಿಕೆ ಹೊದಿಸಲೆಂದೇ ಕೊಕ್ಕೊ ಗಿಡವನ್ನೂ ಬೆಳೆಯುತ್ತಾರೆ. ಅದರ ಎಲೆಗಳು ವರ್ಷಪೂರ್ತಿ ಉದುರುತ್ತಲೇ ಇರುತ್ತದೆ, ಚಿಗುರುತ್ತಲೇ ಇರುತ್ತದೆ. ಹೀಗಾಗಿ ಯಾವ ಕಾಲಕ್ಕೂ ಮಣ್ಣಿಗೆ ಎಲೆಗಳ ಹೊದಿಕೆ ಸಿಗುತ್ತದೆ. ಉಳಿದಂತೆ ತೆಂಗಿನಗರಿ, ಅರಣ್ಯ ಮರಗಳ ಎಲೆಗಳು, ಅಡಕೆ ಸೋಗೆ, ಇತರ ಕೃಷಿ ತ್ಯಾಜ್ಯ ತೋಟದ ಮಣ್ಣಿಗೇ ಸೇರುತ್ತದೆ.

ಎರೆಹುಳಗಳಿಂದ ಉಳುಮೆ
ರಾಮಾಂಜನೇಯರ ತೋಟದ ನೆಲ ಜೀವರಾಶಿಗಳಿಂದ ಫ‌ಲವತ್ತಾಗಿದೆ. ನಾಲ್ಕಾರು ಪದರಗಳ ಎಲೆ ಹಾಸು ತೆರವುಗೊಳಿಸಿದ ನಂತರವೇ ಹುಡಿ ಹುಡಿಕಪ್ಪನೆಯ ಮಣ್ಣು ಸಿಗುತ್ತದೆ. ಮಣ್ಣಿನೊಳಗಿರುವ ಹುಳ ಹುಪ್ಪಡಿ, ಎರೆ ಹುಳಗಳಂತೂ ಅಸಂಖ್ಯಾತ. ಅಚ್ಚರಿಯ ಸಂಗತಿ ಎಂದರೆ ರಾಮಾಂಜನೇಯ ಅವರು ಭೂಮಿ ಉಳುಮೆ ಮಾಡದೇ ಎರಡು ದಶಕಗಳೇ ಕಳೆದಿದೆ. ಆ ಕೆಲಸವನ್ನು ಹುಳ ಹುಪ್ಪಡಿಗಳು ಮಾಡುತ್ತಿವೆ. ಬಿದ್ದ ಎಲೆಗಳನ್ನು ಮೆಲ್ಲುವುದು, ಹಿಕ್ಕೆ ಹಾಕುವುದು, ಭೂಮಿಯೊಳಗೆ ನುಸುಳಿ ಮಣ್ಣು ಸಡಿಲಗೊಳಿಸುವುದು. ಮಣ್ಣನ್ನು ತಂಪಾಗಿರಿಸುವುದು. ಗಾಳಿಯಾಡುವಂತೆ ವ್ಯವಸ್ಥೆ ಗೊಳಿಸುವುದು ಇವೆಲ್ಲವನ್ನು ಎರೆಹುಳುಗಳೇ ಮಾಡುತ್ತಿವೆ. ಹಾಗಾಗಿ ಇವರಿಗೆ ಉಳುಮೆಯ, ಗೊಬ್ಬರದ ಖರ್ಚೂ ಇಲ್ಲ.

ತೋಟದ ನಡುವೆ ಉಳುಮೆ ಮಾಡದಿದ್ದರೆ ಕಳೆ ಜಾಸ್ತಿ ಬೆಳೆಯುತ್ತದೆ. ಭೂಮಿಗೆ ಬಿಸಿಲು ಬೀಳದಿದ್ದರೆ ಕೃಷಿ ಚೆನ್ನಾಗಿ ಆಗೊಲ್ಲ ಎನ್ನುವ ಅಭಿಪ್ರಾಯ ಹಲವರಲ್ಲಿದೆ. ಆದರೆ, ಇವೆಲ್ಲಾ ತಪ್ಪು ಕಲ್ಪನೆಗಳು. ಉಳುಮೆ ಮಾಡದೆ ಹಾಗೇ ಬಿಟ್ಟರೆ ಒಂದೆರಡು ವರ್ಷ ಕಷ್ಟವಾಗಬಹುದು. ಆದರೆ ನಂತರ ಎಲ್ಲವೂ ಒಳ್ಳೆಯದೇ ಆಗುತ್ತದೆ. ಅಲ್ಲದೆ ಸಾವಿರಾರು ರುಪಾಯಿ ಉಳುಮೆ ಖರ್ಚು ಮಿಗುತ್ತಿದೆ.
– ರಾಮಾಂಜನೇಯ, ಕೃಷಿಕ

– ಕೊಡಕಣಿ ಜೈವಂತ ಪಟಗಾರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ