ನೀವು ಹೀಗೆ ಮಾಡ್ತೀರ?

ಕಿಕ್ಕರ್‌- ಅಮ್ಮನ್ನ ರೇಗೋದು, ಅಪ್ಪನ ಬೈಯ್ಯೋದು

Team Udayavani, Sep 17, 2019, 5:55 AM IST

ಮೊಬೈಲ್‌ ಕಿತ್ತುಕೊಂಡರು ಅಂತ ಮಗ ಅಪ್ಪನನ್ನೇ ಕೊಲೆಗೈದ ಧಾರುಣ ಘಟನೆ ಮೊನ್ನೆಯಷ್ಟೇ ನಡೆದಿದೆ. ಈ ಕಾಲದ ಮಕ್ಕಳಿಗೆ, ಹೆತ್ತು ಹೊತ್ತು ಬೆಳೆಸಿದವರ ಮೇಲೆ ಸ್ವಲ್ಪವೂ ಕರುಣೇ ಇರಲ್ವೇ? ಈಗಿನ ಯುವಜನ ಹೀಗೇಕೆ ವರ್ತಿಸುತ್ತದೆ? ಬರೀ ಸಿಟ್ಟು ಸಿಡುಕಿನ ರೂಪದಲ್ಲೇ ಮಕ್ಕಳು ಉಳಿದಿಬಿಡುವುದು ಏಕೆ? ಇಂಥ ಅನೇಕ ಆತಂಕಗಳು ಎದ್ದಿವೆ. ನೀವು ಹೀಗೆ ಮಾಡ್ತೀರ? ಏಕೆ ಮಾಡ್ತೀರ ಅಂತ ಗೊತ್ತಾ? ಇಲ್ಲಿದೆ ಉತ್ತರ

“ನನ್ನ ಮಗ ಶ್ರೀಕಾಂತ್‌ ಕಾಲೇಜಿಗೆ ಹೋಗುತ್ತಿಲ್ಲ’ ಹುಡುಗನ ತಾಯಿ ಹೀಗಂದಳು.
“ಕಳೆದ ವರ್ಷ ಇವನ ಓದು ಹೇಗಿತ್ತು?’ ಕೇಳಿದೆ.
“ಇಲ್ಲ, ಆಗೆಲ್ಲ ಚೆನ್ನಾಗಿ ಅಂಕಗಳನ್ನು ತೆಗೆಯುತ್ತಿದ್ದ. ಅದ್ಯಾಕೋ ಈ 7-8 ತಿಂಗಳಿಂದ ಅವನ ವರ್ತನೆ ಬದಲಾಗಿದೆ’ ಆತಂಕದಿಂದ ಹೇಳಿದಳು ಆ ತಾಯಿ.
ಮಾತು ಮುಂದುವರಿದು, “ಯಾವಾಗಲೂ ಮೊಬೈಲ್‌, ಗೇಮ್‌ ಅಂತೆಲ್ಲ ಆಡುತ್ತಿರುತ್ತಾನೆ. ತಡರಾತ್ರಿ ತನಕ, “ಹೊಡಿ, ತಗೋ ಇಲ್ಲಿದೆ ಗನ್‌’ ಅಂತೆಲ್ಲ ಮಾತನಾಡಿಕೊಳ್ಳುತ್ತಿರುತ್ತಾನೆ. ನಾನು ಒಂದಷ್ಟು ಸಲ ಬೈದೆ. ಮೊಬೈಲ್‌ ಕಿತ್ತು ಕೊಂಡೆ – ಆಗಲೇ ಅವನ ನಿಜವಾದ ರೌದ್ರಾವತಾರ ಕಂಡಿದ್ದು. ನನ್ನ ಬಾಯಿಗೆ ಬಂದಂತೆ ಬೈದು, ಹಣೆ ಚಚ್ಚಿಕೊಂಡ. ಇವನೇನಾ ನನ್ನ ಮಗ ಅಂತ ಅನುಮಾನ ಬಂತು’  ಆಕೆಯ ಕಣ್ಣಲ್ಲಿ ಝಳ, ಝಳ ನೀರು ಬಂತು. ಅಲ್ಲೇ ನನಗೆ ಕಾರಣವೂ ಸಿಕ್ಕಿತು.

ಶ್ರೀಕಾಂತ ನಮ್ಮ ಯುವ ಸಮಾಜ ಎದುರಿಸುತ್ತಿರುವ ಸಮಸ್ಯೆಯ ಪ್ರತಿನಿಧಿಯಷ್ಟೇ. ಅವನ ಅಮ್ಮನಂತೆ, ಇವತ್ತಿನ ಶೇ.70ರಷ್ಟು ತಾಯಿ ಸಮೂಹ ಇಂಥದೇ ಆತಂಕದಲ್ಲಿ ಬದುಕುತ್ತಿದೆ.

ಸಮಸ್ಯೆ ಇರೋದು ಕಾಲನದ್ದೇ. ಅಂದರೆ, ಮಕ್ಕಳಿಗೆ ಕಾಲ ಕಳೆಯಲು ಇರುವ ಏಕೈಕ ರಾಜ ಮಾರ್ಗ ಅಂದರೆ ಮೊಬೈಲ್‌ ಅಂತ ಆಗಿರುವುದು. ನಿಮಗೂ ತಿಳಿದಿರಬಹುದು. ಮೊನ್ನೆಯಷ್ಟೇ ಪಬ್ಜಿ ಆಟ ಆಡುತ್ತಿದ್ದಾನೆ ಅಂತ ಮೊಬೈಲ್‌ ಕಿತ್ತುಕೊಂಡದ್ದಕ್ಕೆ ಆತ ತಂದೆಯನ್ನೇ ಕೊಲೆ ಮಾಡಿಬಿಟ್ಟ. ಜೀವನ ಪೂರ್ತಿ ಹೆತ್ತು, ಹೊತ್ತು, ಹೊಟ್ಟೆ ಬಟ್ಟೆ ಕಟ್ಟಿ ಮಗನ ಬದುಕನ್ನು ಕಟ್ಟಿಕೊಟ್ಟಿದ್ದ ತಂದೆಯ ಜೊತೆಗೆ ಯಾವುದೇ ಭಾವನಾತ್ಮಕ ಸಂಬಂಧ ಇರಲಿಲ್ಲವೇ ಇವನಿಗೆ?

ಇತ್ತು. ಅದು ಆಟದಲ್ಲಿ ಕೊಚ್ಚಿ ಹೋಗಿತ್ತು. ಈ ಹಿಂದೆ, ನಮ್ಮ ಟಿವಿಗಳಲ್ಲಿ ಪ್ರಸಾರವಾಗುತ್ತಿದ್ದ ಧಾರವಾಹಿಗಳಲ್ಲೂ ಇಂಥದೇ ಹಿಂಸಾಪ್ರಚೋದನ ಸರಕುಗಳು ಪ್ರದರ್ಶನವಾಗುತ್ತಿದ್ದವು. ಈಗ ಅದು ಮೊಬೈಲ್‌ಗೆ ರವಾನೆಯಾಗಿದೆ. ಹೊಡೆದಾಟದ ಗೇಮುಗಳಲ್ಲಿ ನೆಗೆಟೀವ್‌ ಥ್ರಿಲ್‌ ಇರೋದು ಸತ್ಯ. ಸದಾಕಾಲ ಗುದ್ದಾಡುತ್ತಲೇ ಥ್ರಿಲ್‌ ಪಡೆಯುವ ಮಕ್ಕಳ ಮನೋಸ್ಥಿತಿಯಲ್ಲಿ ಇವರು ನಮ್ಮ ಅಪ್ಪ, ನಮ್ಮ ಅಮ್ಮ ಅನ್ನೋ ಭಾವನೆಗಳು ನಶಿಸಿಹೋಗುತ್ತವೆ.

ಇದಕ್ಕೆ ಉದಾಹರಣೆ ಇನ್ನೊಂದಿದೆ. ಹದಿನೈದು ವರ್ಷದ ಸ್ವಾಮಿಗೆ, ಓದಲು ಇಂಟರ್‌ನೆಟ್‌ ಇರಬೇಕು. ಹೆತ್ತವರಿಗೆ ಇವನು ಬೇರೆ ಏನಾದರು ನೋಡಿದರೆ ಅನ್ನೋ ಭಯ. ಕೊಡದೇ ಇದ್ದರೆ ಅಕ್ಕಪಕ್ಕದ ಮನೆಯವರಿಗೆಲ್ಲಾ ಕೇಳುವಂತೆ ಬಾಗಿಲು ಬಡಿಯುತ್ತಾನೆ ‘ ಅಂತ ಸ್ವಾಮಿಯ ತಂದೆ ಹೇಳಿ ಬೇಸರ ಮಾಡಿಕೊಂಡಿದ್ದರು.

ಎಷ್ಟೋ ಜನ ಹುಡುಗಿಯರಿಗೆ ಫೇಸ್‌ಬುಕ್‌, ಇನ್ಸ್‌ಟಾಗ್ರಾಮ್‌ನಲ್ಲಿ ಸ್ನೇಹಿತರ ಫೋಟೋ ಹಾಕಬೇಕು. ಕಾಲೇಜಿಗೆ ಚಕ್ಕರ್‌ಹೊಡೆಯಬೇಕು, ಸ್ಕೂಟಿಯಲ್ಲಿ ಸುತ್ತಬೇಕು, ಮಾಲ್‌ನಲ್ಲಿ ಶಾಪಿಂಗ್‌ ಮಾಡಬೇಕು ಅನ್ನೋ ಆಸೆ ಇರುತ್ತದೆ. ಇದೆಲ್ಲವೂ ಚಟಗಳೇ.  ಈಗಂತೂ, ಒಂದು ಪಕ್ಷ ತಂದೆ-ತಾಯಿ ಪ್ರಶ್ನೆ ಮಾಡಿದರೆ, ಬೆಲೆಬಾಳುವ ಮೊಬೈಲನ್ನು ಎತ್ತಿ ಬಿಸಾಡುವುದು, ಮನೆಬಿಟ್ಟು ಓಡಿ ಹೋಗುವುದು, ಬರೀ ಹೊಲಸು ಮಾತುಗಳಲ್ಲಿ ಬಯ್ಯುವುದೂ ಕೂಡ ಸಮಾನ್ಯ ಪ್ರಕರಣಗಳಂತೆ ಕಾಣುತ್ತಿದೆ. ಇದಕ್ಕೆಲ್ಲಾ ಕಾರಣ ಆಗಿರುವುದು ಮೊಬೈಲ್‌. ಮೊಬೈಲಿನ ಮೋಜನ್ನು ಸವಿಯುವ ಭರದಲ್ಲಿ ತರ್ಕಬದ್ಧ ಆಲೋಚನೆಯನ್ನು ಮಕ್ಕಳು ಕಳೆದುಕೊಳ್ಳುತ್ತಿದ್ದಾರೆ.

ಈ ಕೋಪ ಬರಲು ಹತಾಶೆ ಮತ್ತು ಕೀಳರಿಮೆ ಕಾರಣ. ಇವು ಅದೃಶ್ಯವಾದವು. ಇದನ್ನು ವರ್ತನೆಯ ಮೂಲಕವೇ ಗುರುಚಿಸಬೇಕು. ಎಲ್ಲ ಸೇರಿ ಮಾನಸಿಕ ಅಸ್ಥಿರತೆ ಉಂಟುಮಾಡುತ್ತದೆ. ನಮ್ಮ ಕಣ್ಣಿಗೆ ಕಾಣುವುದು ಕೋಪದ ರೌದ್ರಾವತಾರ ಮಾತ್ರ. ಕೋಪದ ವರ್ತನೆಯನ್ನು ಬದಲಾಯಿಸುವ ಮುನ್ನ ಹತಾಶೆ ಮತ್ತು ಕೀಳರಿಮೆ ಉಂಟು ಮಾಡುವ ಸಂಗತಿಗಳ ಮೇಲೆ ಗಮನ ಹರಿಸಬೇಕಾಗುತ್ತದೆ. ಇಂಥವರ ಕೈಯಲ್ಲಿ ಮೊಬೈಲ್‌ ಕೊಟ್ಟರೆ – ಮಾನಸಿಕ ರೋಗ ಮತ್ತಷ್ಟು ಉಲ್ಬಣವಾಗುವುದರಲ್ಲಿ ಆಶ್ಚರ್ಯವೇ ಇಲ್ಲ. ಈ ಸಮಸ್ಯೆಗೆ ಮೂಲ ಎಲ್ಲಿದೆ ಅಂತ ಹುಡುಕುತ್ತಾ ಹೋದರೆ ಎದುರಾಗಿದ್ದು ಏಪ್ರಿಲ್‌, ಮೇ, ಅಕ್ಟೋಬರ್‌ ತಿಂಗಳುಗಳು. ಅರೆ ಇದೇ ಅನ್ನಬೇಡಿ.

ಮಾರ್ಚ್‌ತಿಂಗಳಲ್ಲಿ ಹತ್ತನೇ ತರಗತಿಯ ಪರೀಕ್ಷೆ ಮುಗಿದರೆ ಮಕ್ಕಳಿಗೆ ಅಪ್ಪ ಅಮ್ಮ ಮೊಬೈಲ್‌ ಕೊಡಿಸುತ್ತಾರೆ. ತಕ್ಷಣ ಮಕ್ಕಳು ಜೂನ್‌ ವರೆಗೆ ಅಂತರ್ಜಾಲದಲ್ಲಿ ಮುಳುಗುತ್ತಾರೆ. ಮೊಬೈಲ್‌ ಸಹವಾಸದಲ್ಲಿ Instagram, Netfl ix, ಆನ್‌ಲೈನ್‌ ಚದುರಂಗ, ಪಬ್‌ ಜಿ, ಟಿಕ್‌-ಟಾಕ್‌ ವಿಡಿಯೋಗಳನ್ನು ಮಾಡುವುದು, ಡಬ್‌ ಮ್ಯಾಶ್‌ ಮತ್ತು ಕಾಮಿಕ್ಸ್‌, ಗೀಳು ಅಂಟಿಕೊಳ್ಳುತ್ತದೆ. ಹೆತ್ತವರಂತೂ ಅಬ್ಟಾ, ಮಕ್ಕಳು ಸುಮ್ಮನಿದ್ದಾರಲ್ಲ ಅಷ್ಟೇ ಸಾಕು ಅನಿಸಿ ನಿರುಮ್ಮಳವಾಗಿರುತ್ತಾರೆ. ಆದರೆ, ಮಕ್ಕಳ ಮಾನಸಿಕ ಸ್ಥಿತಿ ಬದಲಾಗಿದೆಯೆಂದು ತಿಳಿಯುವುದು ಕಾಲೇಜು ಸೇರಿದ ಮೇಲೆಯೇ. ಆ ಹೊತ್ತಿಗೆ ಬೌದ್ಧಿಕ ಬೆಳವಣಿಗೆ ಕುಂಠಿತವಾಗಿ, ಭ್ರಮಾಲೋಕದಲ್ಲಿ ಮುಳುಗಿ, ವಾಸ್ತವದೊಂದಿಗೆ ಸಂಪರ್ಕ ಕಳೆದುಕೊಂಡಿರುತ್ತಾರೆ. ಇವೆಲ್ಲ ತಿಳಿಯುವ ಹೊತ್ತಿಗೆ ಕ್ಯಾನ್ಸರ್‌ನಂತೆ ಮೊಬೈಲ್‌, ಅದರೊಳಗಿರುವ ಆಟಗಳು ಮಕ್ಕಳ ಮನಸ್ಸನ್ನು ಆಕ್ರಮಿಸಿಕೊಂಡಿರುತ್ತದೆ. ಅಡಿಕ್ಟ್ ಅಂದರೆ ಇದೇ.

ದೈಹಿಕ ಚಟುವಟಿಕೆ ಇಲ್ಲ
ಮೊಬೈಲ್‌ ಗೇಮ್‌ಗಳು ಮೆದುಳನ್ನು ಚುರುಕು ಮಾಡುತ್ತವೆ ಅನ್ನೋರೂ ಇದ್ದಾರೆ. ನಿಜವಿರಬಹುದು. ಆದರೆ, ದೈಹಿಕವಾಗಿ ನಿಷ್ಕ್ರಿಯ ಮಾಡುವುದಂತೂ ಖರೆ. ಬೆಳವಣಿಗೆ ಅಂದರೆ, ದೈಹಿಕ, ಮಾನಸಿಕ ಎರಡೂ ಸೇರಿರಬೇಕು. ಆದರೆ ಶಾರೀರಿಕ ಚಟುವಟಿಕೆ ಇಲ್ಲದೆ, ಸತತ ಎರಡು ತಿಂಗಳ ಮೊಬೈಲ್‌ ಬಳಕೆಯಿಂದ ಮಿದುಳು ಗೊಂದಲಕ್ಕೀಡಾಗುತ್ತದೆ. ರಾತ್ರಿಯೆಲ್ಲಾ ನಿದ್ದೆ ಮಾಡದೆ ಚಾಟಿಂಗ್‌ ಮಾಡುತ್ತಿದ್ದರೆ ಮಿದುಳಿನ ಮೇಲೆ ಖಂಡಿತಾ ದುಷ್ಪರಿಣಾಮ ಉಂಟಾಗುತ್ತದೆ. ಈ ಸತ್ಯ ಅವರಿಗೆ ತಿಳಿದೇ ಇರೋಲ್ಲ.

ಪ್ರೌಢಾವಸ್ಥೆಯಲ್ಲಿ ಶಾರೀರಿಕ ಮತ್ತು ಲೈಂಗಿಕ ಬೆಳವಣಿಗೆಯಾಗುತ್ತದೆ. ಬಹುತೇಕರಿಗೆ ಲೈಂಗಿಕ ವಿಚಾರದಲ್ಲಿ ಕುತೂಹಲವನ್ನು ಹುಟ್ಟಿರುತ್ತದೆ. ಇದರ ಸರಿಯಾದ ಮಾರ್ಗದರ್ಶನವಿಲ್ಲದೆ ಮಕ್ಕಳು ಸೊರಗುತ್ತಾರೆ. ಶರೀರ ಪಕ್ವವಾಗಿದ್ದರೂ ಮನಸ್ಸಿನಲ್ಲಿ ಪುಟಿದೇಳುವ ಪ್ರೀತಿ-ಪ್ರೇಮ-ಕಾಮದ ಬಗ್ಗೆ ಸಂದೇಹ ನಿವಾರಣೆಯಾಗುವುದಿಲ್ಲ. ಮಾನಸಿಕವಾಗಿ ಪ್ರೌಢರಾಗಲು ಸಾಧ್ಯವಾಗುವುದಿಲ್ಲ. ಭಾವನೆಗಳ ಬಗ್ಗೆ ನಿಯಂತ್ರಣ ಇರುವುದಿಲ್ಲ. ಈ ಗೊಂದಲದ ನಡುವೆ ಶಾಲೆಯಲ್ಲಿ ಅಂಕಗಳು ಕಡಿಮೆಯಾಗುತ್ತಾ ಹೋಗುತ್ತವೆ. ಅಂಕಗಳು ಕಡಿಮೆಯಾದರೆ ಮಕ್ಕಳು ಬೈಸಿಕೊಳ್ಳುತ್ತಾರೆ. ತಿರಸ್ಕೃತ ಭಾವನೆಯಿಂದ ಹತಾಶೆ ಶುರುವಾಗುತ್ತದೆ. ಅಂತರ್ಜಾಲದಲ್ಲಿ ಪ್ರೀತಿಯಿಂದ ಮಾತನಾಡಿಸುವ ಅಪರಿಚಿತರ ಜೊತೆ ಚಾಟಿಂಗ್‌ ನಡೆಸಲು ಮಕ್ಕಳು ಮುಂದಾಗುವುದೇ ಈ ಸಂದರ್ಭದಲ್ಲಿ.

ಯುನಜನಾಂಗಕ್ಕೆ ಕೀಳರಿಮೆ ಅಂದರೆ ಅದು ಮುಖ್ಯವಾಗಿ ಮೈಕಟ್ಟಿನ ಬಗ್ಗೆ ಇರುತ್ತದೆ. ಇದನ್ನು body image issues ಎನ್ನುತ್ತಾರೆ. ನಾನು ನೋಡೋಕೆ ಚೆನ್ನಾಗಿಲ್ಲ ಮನೋಭಾವ ಶುರುವಾಗಿರುತ್ತದೆ. ಅವರಿಗೆ ಅವರ ಸ್ನೇಹಿತರ ಅಭಿಪ್ರಾಯವೇ ಮುಖ್ಯ. ಸ್ನೇಹಿತರ ಮೆಚ್ಚುಗೆ ಬೇಕು. ಬೆಳವಣಿಗೆಯ ವಿವಿಧ ಹಂತಗಳನ್ನು ಅರ್ಥಮಾಡಿಕೊಳ್ಳಲು ಅವರಲ್ಲಿ ತಾಳ್ಮೆ ಇರುವುದಿಲ್ಲ. ಕಾಲೇಜಿನಲ್ಲಿ ಅವಮಾನ; ಮನೆಯಲ್ಲಿ ನಿರಂತರ ಜಗಳ. ಹತಾಶೆ ಮತ್ತು ಕೀಳರಿಮೆಯಿಂದ ಮಕ್ಕಳು ಕ್ಯಾಶುವಲ್‌ ಆಗಿ ಪಬ…-ಜೀ ಶುರುಮಾಡುತ್ತಾರೆ. ಹೊರಗಿನ ಪ್ರಪಂಚವನ್ನು ಎದುರಿಸಲಾಗದೆ ಆನ್‌ ಲೈನ್‌ ಆಟದಲ್ಲಿ ಕಳೆದುಹೋಗುತ್ತಾರೆ. ಅಂತರ್ಜಾಲದಲ್ಲಿ ಇವರಂತೆಯೇ ಹತಾಶರಾದವರೂ ಇರುತ್ತಾರೆ. ಆಟದಲ್ಲಿ ಶತೃವನ್ನು ಕೊಲ್ಲುವುದು ಹತಾಶ ಮನಸ್ಸಿಗೆ ತೃಪ್ತಿ ನೀಡುತ್ತದೆ. ಗೆದ್ದೆ ಎಂಬ ಭಾವ ತುಂಬುತ್ತದೆ. ಶೈಕ್ಷಣಿಕವಾಗಿ ಸೋತಿರುವವರಿಗೆ ಆನ್‌ ಲೈನ್‌ ಆಟಗಳು ಭ್ರಮಾಲೋಕದಲ್ಲಿ ಗೆಲುವು ನೀಡುತ್ತದೆ. ಹೀಗಾಗಿ, ಅದನ್ನು ಬಿಟ್ಟಿರಲಾರರು. ಈ ರೀತಿ ವಾಸ್ತವದಿಂದ ಬಹಳ ದೂರ ಹೋದವರಿಗೆ, ಬಾಹ್ಯ ಪ್ರಪಂಚದ ಅರಿವಿರುವುದಿಲ್ಲ. ಇದನ್ನೇ Dissociation disorder ಅನ್ನುವುದು. ಇಂಥವರಿಗೆ ಅಪ್ಪ ಅಮ್ಮನ ಮುಂದೆ ಗಲಾಟೆ ಮಾಡಿರುವುದೇ ಜ್ಞಾಪಕ ಇರುವುದಿಲ್ಲ. ಇವರು ನೈತಿಕ ಮೌಲ್ಯಗಳಿಗೆ ಬೆಲೆ ಕೊಡಲಾರರು. ಸರಿ-ತಪ್ಪುಗಳ ವಿವೇಚನೆಯನ್ನು ಕಳೆದುಕೊಳ್ಳುತ್ತಾರೆ. ಸಮಾಜವನ್ನು ಸೂಕ್ಷ್ಮವಾಗಿ ಇಣುಕಿ ನೋಡಿದರೆ, ಇಂಥವರು ಬಹಳಷ್ಟು ಜನ ಕಾಣಸಿಗುತ್ತಾರೆ.

ಬುದ್ಧಿ ಹೇಳಿಸಬೇಡಿ
ಉದ್ವಿಘ್ನತೆ ಹೆಚ್ಚಿರುವ ವ್ಯಕ್ತಿತ್ವದವರಿಗೆ ಗೀಳು ಬೇಗ ಅಂಟುತ್ತದೆ; ಹಠಮಾರಿಗಳಿಗೆ ಅಂಟಿದ ಚಟವನ್ನು ಬಿಡಿಸಲು ಸಮಯ ಬೇಕು; ಅಪ್ಪ ಅಮ್ಮನನ್ನು ನೋಯಿಸುತ್ತಿದ್ದೇನೆ ಎಂಬ ಪಾಪಪ್ರಜ್ಞೆ ಇರುವ ಮಕ್ಕಳು ಬೇಗ ಗುಣಮುಖರಾಗುವುದಿಲ್ಲ; ಮನೆಯಲ್ಲಿ ಅಪ್ಪ ಅಮ್ಮ ಕೋಪಗ್ರಸ್ತ ವ್ಯಕ್ತಿಗಳಾಗಿದ್ದರೆ ಚಿಕಿತ್ಸೆಗೆ ಸಮಯ ಹಿಡಿಯುತ್ತದೆ; ಮನೆಯಲ್ಲಿ ಅವರಿವರ ಹತ್ತಿರ ಬುದ್ಧಿವಾದ ಹೇಳಿಸಬೇಡಿ; ಕೋಪ ಜಾಸ್ತಿಯಾಗುತ್ತದೆ; ಸೈಕೋಟಿಕ್‌ ಹಂತವನ್ನು ತಲುಪಿದಾಗ ಅಪರಾಧಗಳಾಗುತ್ತವೆ.

ಪೋಷಕರೇ ಗಮನಿಸಿ
1 ಹತ್ತರಿಂದ ಹತ್ತೂಂಭತ್ತು ವಯಸ್ಸಿನವರೆಗೆ ಅದು ವಿಸ್ಮಯಕಾರಿ ಬೆಳವಣಿಗೆ. ಮಕ್ಕಳನ್ನು ಬೆಳೆಸಲು ಹೆತ್ತವರೂ ಬದಲಾಗಬೇಕು.
2 ತಾಳ್ಮೆ ಮುಖ್ಯ. ಒಬ್ಬರಿಗೊಬ್ಬರು ಬೈದಾಡಿಕೊಳ್ಳಬೇಡಿ.ಮಕ್ಕಳಿಂದ ಏಕಾಏಕಿ ಮೊಬೈಲ್‌ ಕಿತ್ತುಕೊಳ್ಳಬೇಡಿ.
3 ಹತಾಶೆ ಮತ್ತು ಕೀಳರಿಮೆಗಳನ್ನು ಗುರುತಿಸಿ. ಆಗ ಅವರ ಕೋಪ ಅರ್ಥವಾಗುತ್ತದೆ.
4 ಹದಿಹರೆಯದ ಇನ್ನಿತರ ಸಹಪಾಠಿಗಳನ್ನು ಸೇರಿಸಿಕೊಂಡು ದೈಹಿಕ ಶ್ರಮವಿರುವ ಆಟೋಟಗಳಲ್ಲಿ ಪಾಲ್ಗೊಳ್ಳಿ. ಆತ್ಮವಿಶ್ವಾಸ ಹೆಚ್ಚಿಸಿ. ಇಂದಿನ ಮಕ್ಕಳ ಮಾನಸಿಕ ಸ್ಥಿರತೆ ಹೆಚ್ಚುತ್ತದೆ.
5 ನೀವೂ ವಾಟ್ಸಾಪ್‌ ಮತ್ತು ಫೇಸುºಕ್ಕನ್ನು ಕಡಿಮೆ ಉಪಯೋಗಿಸಿ.

– ಹುಡುಗರ ಲೈಂಗಿಕ ಆರೋಗ್ಯದ ಬಗ್ಗೆ ಮನೆಯಲ್ಲಿ ನಗೆಪಾಟಲು ಮಾಡಬಾರದು. ಉದ್ವಿಗ್ನತೆ ಸ್ವಭಾವದ ಮಕ್ಕಳಲ್ಲಿ ಲೈಂಗಿಕ ಆಲೋಚನೆಗಳು ಜಾಸ್ತಿ ಇರುತ್ತವೆ. OCD ಇರುವುದು ಕೆಲವೊಮ್ಮೆ ಗೊತ್ತಾಗುವುದಿಲ್ಲ. ಆಗ ವಿಡಿಯೋಗಳಿಗಾಗಿ ಗೂಗಲ್‌ ಮಾಡಿ ಬೇಡದ ಆಟಗಳಿಗೆ ಬಲಿಪಶುವಾಗಿರುತ್ತಾರೆ.

ಡಾ. ಶುಭ ಮಧುಸೂದನ್

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸಂಗೀತ ಅನ್ನೋದು ದೇವರನ್ನು ಒಲಿಸಿಕೊಳ್ಳಲು ಇರುವ ಸಮೀಪದ ಹಾದಿ ಅಂತ ಅಂದುಕೊಳ್ಳುವ ಕಾಲ ಇದಲ್ಲ. ಈಗ ಸಂಗೀತ ಅನ್ನೋದು ಬದುಕಿನ ಬಂಡಿ ಹೊಡೆಯಲು ಇರುವ ಸಾಧನ. ಟಿ.ವಿಗಳಲ್ಲಿ,...

  • ಶಾಲೆ ಎಂದರೆ ಕೇವಲ ಸಿಲಬಸ್‌ ಸುತ್ತುತ್ತಲೇ ಓಡಾಡಿಕೊಂಡಿರುವ ಮೇಷ್ಟ್ರು, ವಿದ್ಯಾರ್ಥಿಗಳ ಕೂಟವಲ್ಲ.  ಇದ್ರ ‌ ಜೊತೆಗೆ, ಪಠ್ಯೇತರ ಚಟುವಟಿಕೆ ಕೂಡ ಮುಖ್ಯ. ಇದಕ್ಕೆ...

  • ಇಂಟರ್ವ್ಯೂ ಗೆ ಅಂತ ಹೋದಲ್ಲೆಲ್ಲ ಕರೆಯುತ್ತಿದ್ದ. ಸಿಕ್ಕಾಗಲೆಲ್ಲ ಡಬ್ಬ ಕೊಡುತ್ತಿದ್ದ. "ಇವೆಲ್ಲ ಮಾಮೂಲು ಗುರು' ಅಂತ ಆತ್ಮ ವಿಶ್ವಾಸ ತುಂಬುತ್ತಿದ್ದ. "ಅವತ್ತೂಂದು...

  • ಇತ್ತೀಚೆಗೆ ಯುವಕರು ಪ್ರತಿಯೊಂದು ವಿಚಾರವನ್ನೂ ಗೂಗಲ್‌ ಮಾಡಿ ನೋಡಿ ಕುತೂಹಲ ತಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ, ಅನಾರೋಗ್ಯ ಪೀಡಿತರಾಗಿದ್ದವರಲ್ಲಿ ಶೇ....

  • ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾದಾಗ ಇಡೀ ಸಮಾಜ ಅಂಕಗಳ ತಕ್ಕಡಿಯಲ್ಲಿ ಈ ಚಿದಾನಂದರನ್ನು ತೂಕ ಹಾಕಿತು. ಆಗ ಅವರು ತೀರ್ಮಾನ ಮಾಡಿದ್ದು; ನನ್ನಂತೆ ಫೇಲಾದವರು ಬದುಕಲ್ಲಿ...

ಹೊಸ ಸೇರ್ಪಡೆ