ಗತ್ತು ಗಾಂಚಾಲಿ ಬಿಟ್ಟು ಉತ್ತರಿಸು…

Team Udayavani, Jul 9, 2019, 5:30 AM IST

ನಿನ್ನೆದುರು ಮನ ಬಿಚ್ಚಿ ಮಾತಾಡಲು ಕೊಂಚ ಭಯ. ಸ್ವಲ್ಪ ಸಂಕೋಚ, ಒಂದಿಷ್ಟು ನಾಚಿಕೆ. ಹಾಗಾಗಿ, ಮನದೊಳಗಿನ ಆಸೆಗಳೆಲ್ಲ ಬೀಗ ಹಾಕಿ ಸೈಲೆಂಟಾಗಿ ಕೂತು ಬಿಟ್ಟಿದ್ದೀನಿ. ನಾನು ಗಾಬರಿಯಿಂದ ಕಂಗಾಲಾಗುವ ಮೊದಲು ನೀನೇ ಮಾತಾಡು…

ನೀ ಯಾರೋ, ನಾನು ಯಾರೋ ಅನ್ನುವಂತೆ ಇದ್ವಿ ನಾವು. ನಿನ್ನೆ ಮೊನ್ನೆವರೆಗೂ ನನಗೆ ಗೊತ್ತಾಗಲಿಲ್ಲ. ಇಷ್ಟು ದಿನದಿಂದ ನನ್ನೊಡನೆ ಏಕೆ ಸಲುಗೆಯಿಂದ ಇದ್ದಿದ್ದು ಅಂತ. ನನ್ನ ಮೇಲೆ ರೇಗಿದ್ದು , ಕಾಳಜಿ ತೋರಿಸಿದ್ದು, ಆಗಾಗ ಜಗಳ ಮಾಡಿ ಬೈದಿದ್ದು ಹೀಗೆ, ನನ್ನ ಮೇಲೆ ಇಷ್ಟೊಂದು ಕೇರ್‌ ತೋರಿಸೋದು ಏಕೆ ಅಂತ ಹಾಳಾದ್‌ ನನ್ನ ಮನಸ್ಸಿಗೆ ಹೊಳೆಯಲೇ ಇಲ್ಲ ನೋಡು.

ಆದರೂ, ಒಮ್ಮೊಮ್ಮೆ ಅನಿಸುತ್ತಾ ಇತ್ತು, ಇವನು ಯಾರು? ನಾನ್ಯಾಕೆ ಇವನನ್ನ ಹುಚ್ಚಿಯಂತೆ ಇಷ್ಟೊಂದು ಹಚ್ಚಿಕೊಂಡಿದ್ದೀನಿ. ಇವನನ್ನ ಗೆಳೆಯ ಅನ್ನಬೇಕಾ ಅಥವಾ ಇನ್ನೇನಾದ್ರೂ ಬೇರೆ ಅರ್ಥದಲ್ಲಿ ತಿಳಿಯ ಬೇಕಾ ಅಂತ…

ಮೊದ ಮೊದಲು ನಿನ್ನೊಡನೆ ಮಾತಾಡಲು ಭಯ ಆಗಿತ್ತು. ಅದಕ್ಕೆ ತಕ್ಕಂತೆ, ನೀ ಬೇರೆ ರೌಡಿ ಥರ ಆವಾಜ್‌ ಹಾಕ್ತಿದ್ದೆ. ಹೇಗಪ್ಪಾ ಕೇಳ್ಳೋದು, ಏನಂತ ಹೇಳ್ಳೋದು ಅಂತ ಅನಿಸಿದರೂ, ಒಂದೇ ಒಂದು ಅವಕಾಶಕ್ಕೆ ಕಾದು ಕುಳಿತೆ. ನನ್ನ ಮನಸಿನ ಮಾತು ಆ ದೇವರಿಗೂ ಕೇಳಿಸಿತ್ತು ಅನ್ಸುತ್ತೆ. ಆ ಮಧುರ ದಿನ ಬಂದೇ ಬಿಡು¤. ಅದೇನೋ ಗೊತ್ತಿಲ್ಲ,

ಆ ದಿನ ನೀನೇ ಕೇಳಿಬಿಟ್ಟೆ ನಾ ಯಾರು ನಿನಗೆ…? ಏನಾಗಬೇಕು? ಅಂತ. ಕೇಳ್ಳೋಕೆ ತುಂಬಾ ಸರಳ ಅನ್ನಿಸಿದರೂ ಆ ಪ್ರಶ್ನೆ ನನ್ನ ಚುರುಕಿನ ಚಟುವಟಿಕೆಗಳಿಗೆ ಕಡಿವಾಣ ಹಾಕಿತ್ತು. ಇಡೀ ದಿನ, ನನ್ನ ಗಮನ ನೀ ಕೇಳಿದ ಪ್ರಶ್ನೆಯ ಕೈ ಹಿಡಿದುಕೊಂಡೇ ಓಡಾಡಿತು. ಯಾಕಂತ ಗೊತ್ತಿಲ್ಲ. ಏನೂ ಊತ್ತರ ಹೇಳದೆ ಸುಮ್ಮನೆ ಇದ್ದು ಬಿಡೋದೇ ಚೆಂದ ಅನ್ನಿಸ್ತು. ಹಾಗೇ ಮಾಡಿಬಿಟ್ಟೆ. ಆದರೂ, ಜಾಸ್ತಿ ಮಾತಾಡದೇ ಹೋದರೂ ನಾವು ಒಂದಷ್ಟು ಹೆಚ್ಚೇ ‘ಕ್ಲೋಸ್‌ ’ ಆದೆವು. ನೀನು ಇನ್ನಷ್ಟು ಹತ್ತಿರವಾದ ಮೇಲಂತೂ ನನ್ನ ಮನ ನಿನ್ನೆಡೆಯೇ ವಾಲಿತು. ನಾನಂತೂ ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಆತುರದಲ್ಲಿದೀನಿ. ಸನಿಹದ ಸಲುಗೆಯ ಬಯಕೆಯಲಿ ಕಾದಿರುವೆನು. ಕಾಯುವಳೆಂದು ಹೆಚ್ಚು ಸತಾಯಿಸಬೇಡ ದೊರೆಯೇ. ನಾನು ಮಾತಿನ ಮಲ್ಲಿಯೇ ಆದರೂ, ನಿನ್ನೆದುರು ಮೌನಿ. ಮೊದಲೇ ಹುಡುಗಿ ತುಸು ನಾಚಿಕೆ ಸ್ವಭಾವ. ನಿನ್ನೆದುರು ಮನ ಬಿಚ್ಚಿ ಮಾತಾಡಲು ಕೊಂಚ ಭಯ, ಜಾಸ್ತಿನೇ ಸಂಕೋಚ. ಮನದಲಿ ಹೊಸ ಯೋಚನೆ. ದಿನ ರಾತ್ರಿ ಕನಸಿನ ಪ್ರೇಮ ಕಥೆಗಳಲಿ ನೀನೇ ನಾಯಕ. ಹೀಗಾಗಿ, ಸಮಯ ಸರಿದು ಹೋಗುವ ಮುನ್ನ ಹೇಳಿ ಬಿಡು ದೊರೆ, ಕಾಯುತಲಿರುವೆ ನಿನ್ನ ಉತ್ತರದ ನಿರೀಕ್ಷೆಯಲಿ……..

-ಮಂಜುಳಾ ಎನ್‌. ಶಿಕಾರಿಪುರ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ