ಟೈಟಾನಿಕ್‌ ಏರಿ ಹೊರಟವರು!

Team Udayavani, Jan 22, 2019, 3:31 AM IST

ಗಾಯಕಿ ಆಶಾ ಭೋಂಸ್ಲೆ ಟ್ವಿಟ್ಟರಿನಲ್ಲಿ ಹಾಕಿದ ಈ ಫೋಟೋವನ್ನು ನೋಡಿ… ಅಲ್ಲಾರೋ ಯುವಕರು ಕೂತಿದ್ದಾರೆ ಅಂತಲ್ಲ. ಹಾಗೆ ನೋಡುತ್ತಾ ನೋಡುತ್ತಾ ಅವರ ಜಾಗದಲ್ಲಿ ನಾವೇ ಇದ್ದಂತೆ ನಿಮಗೆ ಅನ್ನಿಸುವುದಿಲ್ಲವೇ?

ಮಧುರ ಕಂಠದ ಗಾಯಕಿ ಆಶಾ ಭೋಂಸ್ಲೆ ಇತ್ತೀಚೆಗೆ ಒಂದು ಫೋಟೋವನ್ನು ಟ್ವೀಟಿಸಿದ್ದರು. ಬಾಗೊªàಗ್ರಾದಿಂದ ಕೋಲ್ಕತ್ತಾಕ್ಕೆ ಹೊರಟಿದ್ದ ಅವರಿಗೆ ವಿಮಾನಕ್ಕೆ ಕೆಲ ಹೊತ್ತು ಕಾಯಬೇಕಿತ್ತು. ಏರ್‌ಪೋರ್ಟ್‌ನ ವೇಟಿಂಗ್‌ ರೂಮ್‌ನಲ್ಲಿ ಸೋಫಾದ ಮೇಲೆ ಒರಗಿದರು. ಅವರ ಅಕ್ಕಪಕ್ಕದಲ್ಲಿ ನಾಲ್ವರು ತರುಣರು ಕುಳಿತು, ಅದೇ ವಿಮಾನಕ್ಕೆಂದೇ ಕಾಯುತ್ತಿದ್ದರು. ಇನ್ನೂ ನಲ್ವತ್ತೋ ಐವತ್ತೋ ನಿಮಿಷ ಕಾಯಬೇಕಿತ್ತು. ಅಲ್ಲಿದ್ದ ನವತರುಣರು ಯಾರೂ ಯಾರ ಬಳಿಯೂ ಮಾತಾಡುತ್ತಿಲ್ಲ ಎಂಬಂಥ ವಿಚಿತ್ರ ಮೌನ ಆ ಕೋಣೆಯನ್ನು ಆಳುತ್ತಿತ್ತು. ಅದಕ್ಕೆ ಕಾರಣ, ಆ ನಾಲ್ವರ ಕೈಯಲ್ಲಿದ್ದ ಸ್ಮಾರ್ಟ್‌ಫೋನು. ಮೊಬೈಲ್‌ ಪರದೆಯಲ್ಲಿ ಅವರೆಲ್ಲ ಏನನ್ನೋ, ನೋಡುತ್ತಾ, ಕೇಳುತ್ತಾ, ಮಾಯಾಲೋಕದಲ್ಲಿ ಮುಳುಗಿದ್ದಾರೆ. ಆ ಯುವಕರ ಅವಸ್ಥೆ ಕಂಡು ಆಶಾ ಭೋಂಸ್ಲೆ, ಎರಡೂ ಕೈಯನ್ನು ಕೆನ್ನೆಗೆ ಕಂಬವಾಗಿಸಿ, ಸುಮ್ಮನೆ ಕುಳಿತುಬಿಟ್ಟಿದ್ದರು.

ಯಾರೋ ತೆಗೆದ ಈ ಚಿತ್ರ, ಭೋಂಸ್ಲೆ ಅವರ ಕೈಗೆ ಸೇರಿತು. “ನನ್ನ ಕೋಲ್ಕತ್ತಾ ಪ್ರಯಾಣದ ವೇಳೆ, ಇವರೆಲ್ಲ ಒಳ್ಳೆಯ ಕಂಪನಿ ಕೊಟ್ಟರು. ಆದರೆ, ಯಾರೂ ಯಾರ ಬಳಿಯೂ ಮಾತಾಡಲಿಲ್ಲ. ಥ್ಯಾಂಕ್ಯೂ ಅಲೆಕ್ಸಾಂಡರ್‌ ಗ್ರಹಾಂಬೆಲ್‌’ ಎಂದು ಹೇಳಿ, ಆಶಾ ಭೋಂಸ್ಲೆ ಆ “ಫೋಟೋ ಟ್ವೀಟ್‌’ಗೆ ಫ‌ುಲ್‌ಸ್ಟಾಪ್‌ ಇಟ್ಟಿದ್ದರು. 

“ಕಾಸ್ಟ್‌ ಅವೇ’ ಚಿತ್ರದಲ್ಲಿನ ಒಂದು ಸನ್ನಿವೇಶ. ಸಮುದ್ರ ಯಾನದಲ್ಲಿದ್ದ ನಾಯಕ ಬಿರುಗಾಳಿಗೆ ಸಿಲುಕಿ, ನೌಕೆ ನುಚ್ಚುನೂರಾಗಿ, ಒಂದು ದ್ವೀಪಕ್ಕೆ ಹೋಗಿ ಧೊಪ್ಪನೆ ಬೀಳುತ್ತಾನೆ. ನರಮಾನವರಾರೂ ಇಲ್ಲದ ಆ ದ್ವೀಪದಲ್ಲಿಯೇ ವರುಷಗಳು ಉರುಳುತ್ತವೆ. ತನ್ನ ಮಾತು, ಸಂಭಾಷಣೆ ನಿಂತು ಹೋಗುತ್ತದೆಂಬ ದಿಗಿಲಿನಿಂದ, ಅವನೊಂದು ಉಪಾಯ ಮಾಡುತ್ತಾನೆ. ನೀರಿನಲ್ಲಿ ತೇಲಿಕೊಂಡು ಬಂದ ಫ‌ುಟ್ಬಾಲ್‌ ಒಂದಕ್ಕೆ ಮಸಿಕೆಂಡದಿಂದ, ಮನುಷ್ಯನ ಕಣ್ಣು, ಮೂಗು, ಬಾಯಿ, ಮೀಸೆಗಳನ್ನೆಲ್ಲ ಚಿತ್ರಿಸುತ್ತಾನೆ. ಫ‌ುಟ್ಬಾಲ್‌ನ ಮೇಲೆ ಮನುಷ್ಯನನ್ನು ಕಲ್ಪಿಸಿಕೊಳ್ಳುತ್ತಲೇ, ತಾನು ಈ ದ್ವೀಪದಲ್ಲಿ ಒಂಟಿ ಅಲ್ಲ ಎಂದುಕೊಂಡು, ಹರ್ಷಿಸುತ್ತಾನೆ. ಅವನಿಗೇನೋ ಧೈರ್ಯ ಉಕ್ಕಿದಂತೆ. ನಿತ್ಯವೂ ಅದರೊಂದಿಗೆ ಮಾತಾಡುತ್ತಾ, ತನ್ನ ಜೀವಂತಿಕೆಯನ್ನೂ, ಮಾತಿನ ಅಸ್ತಿತ್ವವನ್ನೂ ಉಳಿಸಿಕೊಳ್ಳುವ ಆ ದೃಶ್ಯ, ಇಡೀ ಚಿತ್ರದ ಮುಖ್ಯಧ್ವನಿ.

ಬಹುಶಃ ಇವೆರಡೂ ಚಿತ್ರ ಈಗಾಗಲೇ ನಿಮ್ಮೊಂದಿಗೆ ಸಂವಾದಕ್ಕೆ ಕುಳಿತಿರಬಹುದು. ಎದುರಿಗೆ ವ್ಯಕ್ತಿ ಇದ್ದೂ, ಒಂದೇ ಒಂದು ಮಾತನ್ನೂ ಆಡದೇ, ಮೊಬೈಲಿನಲ್ಲಿ ಮುಳುಗುವ ಒಂದು ಮನೋಪ್ರಪಂಚ; ಯಾವುದಾದರೂ ಜೀವ ಎದುರು ಬಂದರೆ ಸಾಕು, ಮಾತಾಡಿ ಬಿಡೋಣ ಎಂದು ಕಾತರಿಸುವ ಮನುಷ್ಯ ಮತ್ತೂಂದು ಬದಿ. ಸ್ಮಾರ್ಟ್‌ಫೋನ್‌ ಸಾಗರದಲ್ಲಿ, ಇಂಟರ್ನೆಟ್‌ ಎಂಬ ಸುನಾಮಿ ಎದ್ದು, “ಕಾಸ್ಟ್‌ ಅವೇ’ ನಾಯಕನಂತೆ, ನಾವೆತ್ತಲೋ ಕೊಚ್ಚಿ ಹೋಗಿದ್ದೇವೆ. ಹಾಗೆ ಕಳೆದುಹೋಗಿ, ಎಷ್ಟೋ ವರುಷಗಳಾಗಿವೆ. ಕೆಲವೊಮ್ಮೆ ನಮ್ಮ ದ್ವೀಪದಲ್ಲಿ ಯಾರೂ ಇಲ್ಲ ಅಂತನ್ನಿಸಿಬಿಡುತ್ತದೆ. ಬಹುಶಃ ಆ ಕಾರಣಕ್ಕೇ ಇಂದು ನಮ್ಮೊಳಗೆ ಮಾತೇ ಹುಟ್ಟುತ್ತಿಲ್ಲ.

ಮೊನ್ನೆ ಕೆಫೆಯೊಂದರ ಹುಡುಗನೊಬ್ಬ ಹೇಳುತ್ತಿದ್ದ… “ಚಹಾ ಕುಡಿಯಲೆಂದೋ, ಒಟ್ಟಿಗೆ ಊಟ ಮಾಡಲೆಂದೋ ಬರುತ್ತಾರೆ. ಆದರೆ, ಇಲ್ಲಿ ಪರಸ್ಪರ ಮಾತಿಗಿಂತ ಹೆಚ್ಚಾಗಿ ಅವರೆಲ್ಲ ತಮ್ಮ ಮೊಬೈಲಿನೊಳಗೆ ಮುಳುಗಿರುತ್ತಾರೆ. ಟೈಟಾನಿಕ್‌ ಹಡಗಿನಂತೆ ಅವರೆಲ್ಲ, ಮುಳುಗಿ ಹೋಗೋದನ್ನು ನಿತ್ಯವೂ ನೋಡುತ್ತಿರುತ್ತೇನೆ. ಎಷ್ಟೋ ಸಲ ಅವರ ಮಾತಿರಲಿ, ನಾನೇ “ಬೇರೇನು ಬೇಕು ಸರ್‌?’ ಅಂತ ಕೇಳಿದಾಗಲೂ, ತಲೆ ತಗ್ಗಿಸಿಯೇ ಕೂತಿರುತ್ತಾರೆ. ಮತ್ತೆ ನಾನೇ ಎರಡನೇ ಸಲ ಕೇಳಿ, ಮೊಬೈಲೊಳಗಿಂದ ಅವರನ್ನು ಮೇಲಕ್ಕೆತ್ತಬೇಕು’ ಎನ್ನುವ ಅವನ ಮಾತಿನಲ್ಲಿ, ದೈನಂದಿನ ಸಾಹಸದ ದಣಿವಿತ್ತು. ಇನ್ನೊಬ್ಬರಾರೋ ಮೊಬೈಲ್‌ ನೋಡುತ್ತಾ, ಇಡ್ಲಿ ಸಾಂಬಾರ್‌ ಆರ್ಡರ್‌ ಮಾಡಿ, ಕೊನೆಗೆ “ಮಸಾಲೆ ದೋಸೆ ಯಾಕೆ ತರ್ಲಿಲ್ಲ?’ ಅಂತ ಜಗಳಕ್ಕೂ ನಿಂತುಬಿಟ್ಟರಂತೆ.

ಹಿಂದೆ ಘೋರ ತಪಸ್ವಿಗಳೆಲ್ಲ ಓಂಕಾರದ ಹೊರತಾಗಿ, ಮಾತೇ ಆಡುತ್ತಿರಲಿಲ್ಲ ಎನ್ನುವುದನ್ನು ಕೇಳಿದ್ದೇವೆ. ಅಂತರಂಗದ ಪರದೆ ಮೇಲೆ ಪ್ರತ್ಯಕ್ಷಗೊಂಡ, ದೇವರ ಜತೆಗಷ್ಟೇ ಸಂವಹಿಸುತ್ತಿದ್ದರಂತೆ. ಆದರೆ, ಈ ಕಾಲದಲ್ಲಿ ದೇವರನ್ನು ಹುಡುಕುವ ಅಂಥ ಘೋರ ತಪಸ್ವಿಗಳು ಕಾಣಿಸುತ್ತಿಲ್ಲ. ಮೊಬೈಲಿನಲ್ಲಿ ಇಣುಕುವುದೇ ಈ ದಿನಗಳ ಧ್ಯಾನ. ಮೇನಕೆ ನರ್ತಿಸಿದರೂ, ತಪಸ್ಸು ಭಗ್ನಗೊಳ್ಳದ ವಿಶ್ವಾಮಿತ್ರರು ಇಲ್ಲಿರುವರು. ಯಾರೂ ಯಾರನ್ನೂ ಅಲುಗಾಡಿಸಲೂ ಆಗ ಮಹಾನ್‌ ತಪಸ್ವಿಗಳ ಯುಗವಿದು. ವಾಯು ದೇವನ ಗಾಳಿಯ ದಾಳಿಗೂ, ಅಗ್ನಿಯೇ ಕೆನ್ನಾಲಿಗೆ ಚಾಚಿದರೂ, ವರುಣದೇವ ಚಂಡಿ ಹಿಡಿಸುವ ಮಳೆಗೈದರೂ, ವಿಚಲಿತರಾಗದ “ಮಹಿಷಿ ಸಂಕಲ್ಪ’ದಂತೆ ಅನೇಕರ ಡಿಜಿಟಲ್‌ ಧ್ಯಾನ. ಅವರ ಸಂವಹನ ಏನಿದ್ದರೂ, ಅದೇ ಸ್ಮಾರ್ಟ್‌ ಪರದೆಯ ದೇವರ ಜತೆ. ಕೇಳಿದ್ದನ್ನೆಲ್ಲ ತೋರಿಸುತ್ತಾನೆ, ಬಯಸಿದ್ದಕ್ಕೆಲ್ಲ ಪರಿಹಾರ ಕೊಡುತ್ತಾನೆ, ಅವನನ್ನು ಓಲೈಸಿಕೊಳ್ಳಲು ಗಡ್ಡ ಬಿಟ್ಟು, ಹತ್ತಾರು ವರುಷ ಕಾಯಬೇಕಿಲ್ಲ; ನಿಮಿಷ ಸಾಕಷ್ಟೇ.

ಹಾಗೆ ನೋಡಿದರೆ, ಈ ಸ್ಮಾರ್ಟ್‌ಫೋನ್‌ ಕಣ್ಣಿಗೆ ಕಾಣದ ಉಗ್ರನಿದ್ದಂತೆ. ಬಗಲಲ್ಲಿ ಬಂದೂಕು ತೂಗಿಸಿಕೊಳ್ಳದೇ, ಬೆದರಿಕೆಯಿಂದ ಬೆಚ್ಚಿ ಬೀಳಿಸದೇ, ಮನಸ್ಸುಗಳನ್ನು ಕ್ಷಣಮಾತ್ರದಲ್ಲೇ ಅಪಹರಿಸಿಬಿಡುವ ಸ್ಮಾರ್ಟ್‌ಫೋನ್‌, ಮಹಾ ಪಾಕಡಾ. ಈ ಸೂಕ್ಷ¾ ನಿಮಗೂ ತಟ್ಟಿರಬಹುದು. ಮನೆಯಲ್ಲಿ ಹಿರಿಯರೇನೋ ಹೇಳುತ್ತಿರುತ್ತಾರೆ, ಕಿರಿಯರು ಅದನ್ನು ಕಿವಿಯಲ್ಲೂ ಬಿಟ್ಟುಕೊಳ್ಳದೇ, ವಾಟ್ಸಾéಪ್‌ನಿಂದ ಬಂದ ಇನ್ನಾವುದೋ ಸಂದೇಶಕ್ಕೆ ಪ್ರತಿಕ್ರಿಯೆ ನೀಡುತ್ತಿರುತ್ತಾರೆ.

ನಿಜ ಅಲ್ವಾ? ಕಣ್ಮುಂದೆ ಯಾವುದೋ ಗುಂಡಿ ಇದ್ದರೆ, ಅಲ್ಲಿಗೆ ಬೇಲಿಯನ್ನೋ, ತಡೆಗೋಡೆಯನ್ನೋ ಕಟ್ಟಿ, ಅದರೊಳಗೆ ಮನುಷ್ಯರು ಧೊಪ್ಪನೆ ಬೀಳುವ ಅಪಾಯವನ್ನು ತಪ್ಪಿಸಬಹುದಿತ್ತು. ಆದರೆ, ಅಂಗೈಯಲ್ಲಿ ಪ್ರಪಂಚ ಹಬ್ಬಿಸಿಕೊಂಡಿರುವ ಮೊಬೈಲಲ್ಲೇ ಒಂದು ಕಾಣದ ಪ್ರಪಾತವಿದೆ. ಅದಕ್ಕೆ ಮಹಾಗೋಡೆ ಕಟ್ಟುವ “ಶಿ ಹುವಾಂಗ್‌ ಟಿ’ ಇಲ್ಲಾéರೂ ಇಲ್ಲ. ಕಣ್ತೆರೆದೇ ಆ ಪ್ರಪಾತದೊಳಗೆ ಬೀಳುವ ಸುಖದಲ್ಲಿದ್ದೇವೆ ಎಲ್ಲರೂ.

ಅಂದಹಾಗೆ, ಆಶಾ ಭೋಂಸ್ಲೆಯ ಅಕ್ಕಪಕ್ಕ ಕುಳಿತವರೆಲ್ಲ ಬೇರೆಲ್ಲೂ ಹೋಗಿರಲಿಲ್ಲ. ಕೆಫೇ ಹುಡುಗ ಕಂಡ ಟೈಟಾನಿಕ್ಕೊಳಗೇ ಇದ್ದರು! ನಾವೂ ಅಲ್ಲೇ ಇದ್ದೇವಾ?
    
ಕೀರ್ತಿ ಕೋಲ್ಗಾರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಪ್ರೀತಿ ಅನ್ನೋದು ಆಳವಾದ ಸಮುದ್ರ ಕಣೋ. ಕೆರೆ, ಬಾವಿ, ನದಿಗಳ ನೀರು ಬತ್ತಬಹುದು, ಆದರೆ, ಸಮುದ್ರದ ನೀರು ಎಂದೂ ಬತ್ತಲ್ಲ; ಬತ್ತಿದ ಬಗ್ಗೆ ಮಾಹಿತಿಯೂ ಇಲ್ಲ ಬಿಡು. ಅಂಥ‌...

  • ನಮ್ಮೂರು ಹೀಗಿರಬೇಕು ಅಂತ ಕನಸು ಕಂಡ ಮೇಲೆ ಈ ಗುಂಪು ಸಮ್ಮನೆ ಕೂರಲಿಲ್ಲ. ಊರಿನ ಗಲ್ಲಿ ಗಲ್ಲಿ ತಿರುಗಿ, ಕಸ, ನೀರಿನ ಮಹತ್ವ ತಿಳಿಸುವುದರ ಜೊತೆಗೆ ತಾವೇ ಸ್ವತ್ಛತಾ...

  • ಪ್ರಿಯ ಇವನೇ, ನನಗಂತೂ ಇತ್ತೀಚಿಗೆ ಮೊಬೈಲ್‌ ಗೀಳು. ಅವರಿವರ ಮೇಸೇಜು, ಪ್ರೊಫೈಲ್‌ ತಡಕಾಡುವುದು,ಅಪಡೇಟ್‌ ನೋಡುವ ಕೆಲಸವಲ್ಲ. ನೀನೇನಾದರೂ ಫೇಸ್‌ಬುಕ್ಕಲ್ಲಿ ಫ್ರೆಂಡ್‌...

  • ಚೈತ್ರಮಾಸ, ಪುನರ್ವಸು ನಕ್ಷತ್ರ, ನವಮಿ ತಿಥಿಯಲ್ಲಿ ಹುಟ್ಟಿದ ಶ್ರೀರಾಮ ಜೀವಿಸಿದ್ದ ಕಾಲಾವಧಿ ಯಾವುದು? ಅದನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಈಗ ಐದು ಸಾವಿರ...

  • ಮಳೆಗಾಲ ಎಂದರೆ ಮಕ್ಕಳ ಮನಸ್ಸು ಗಾಂಧೀ ಬಜಾರು. ಶಾಲೆ ಮುಂದೆ ಹರಿಯುವ ಝರಿಯಲ್ಲಿ ಆಟವಾಡುವುದು, ಹೆಂಚುಗಳ ಅಂಚಿಂದ ಸುರಿಯುವ ನೀರ ಕೆಳಗೆ ಕುಣಿಯುವುದು, ಮಳೆ ಹೆಚ್ಚಾಗಲಿ,...

ಹೊಸ ಸೇರ್ಪಡೆ