ಹೆದರೋ ಹೃದಯಕ್ಕೆ ಸಮಾಧಾನ ಮಾಡೋ…

Team Udayavani, Jul 9, 2019, 5:30 AM IST

ನಿಮ್ಮಮ್ಮನ ಹತ್ರ ಹೋಗಿ, “ಆಂಟಿ, ನಿಮ್ಮ ಮಗನ್ನ ನಂಗೆ ಮದುವೆ ಮಾಡಿ ಕೊಡಿ. ಅವನನ್ನ ತುಂಬಾ ಚೆನ್ನಾಗಿ ನೋಡ್ಕೊಳ್ತೀನಿ. ಪ್ಲೀಸ್‌, ಬೇರೆ ಯಾರಿಗೂ ಕೊಟ್ಟು ಮದುವೆ ಮಾಡಬೇಡಿ’ ಅಂತೆಲ್ಲಾ ಕೇಳಿ ಬಿಡೋಣ ಅನ್ನಿಸುತ್ತೆ. ಆದರೆ, ಏನ್ಮಾಡೋದು ಹಾಗೆ ಮಾಡೋದಿಕ್ಕೆ ಆಗಲ್ಲವಲ್ಲ!

ತರೆಲ, ತುಂಟಾಟ ಮಾಡಿಕೊಂಡು ನನ್ನ ಪಾಡಿಗೆ ನಾನಿದ್ದೆ. ಅದೆಲ್ಲಿಂದ ಬಂದೆಯೋ ನೀನು ಗೊತ್ತಿಲ್ಲ. ಈಗಂತೂ ಮೂರು ಹೊತ್ತೂ ನಿನದೇ ಧ್ಯಾನ. ಪ್ರೀತಿ-ಪ್ರೇಮ ಅಂದ್ರೆ ಮೂಗು ಮುರಿದು, ಮೈಲಿ ದೂರ ಓಡುತ್ತಿದ್ದ ನನ್ನಂಥವಳಿಗೇ ಮೋಡಿ ಮಾಡಿದ್ದೀಯ ಅಂದರೆ, ನೀನೆಂಥ ಮಾಯಗಾರನಿರಬೇಕು?

ಯಾರನ್ನೂ ಅಷ್ಟಾಗಿ ಹಚ್ಚಿಕೊಳ್ಳದ ಈ ಹೃದಯ, ಅಪ್ಪ-ಅಮ್ಮನಿಗಿಂತ ಒಂದು ಗ್ರಾಂ ಹೆಚ್ಚೇ ನಿನ್ನನ್ನು ಹಚ್ಚಿಕೊಂಡಿದೆ. ಒಮ್ಮೊಮ್ಮೆ ತುಂಬಾ ಭಯ ಆಗುತ್ತೆ; ನನ್ನಿಂದ ಯಾರಾದ್ರೂ ನಿನ್ನನ್ನು ಕಸಿದುಕೊಂಡು ಬಿಡ್ತಾರೇನೋ ಅಂತ. ತಕ್ಷಣ ಸೀದಾ ನಿಮ್ಮಮ್ಮನ ಹತ್ರ ಹೋಗಿ, “ಆಂಟಿ, ನಿಮ್ಮ ಮಗನ್ನ ನಂಗೆ ಮದುವೆ ಮಾಡಿ ಕೊಡಿ. ಅವನನ್ನ ತುಂಬಾ ಚೆನ್ನಾಗಿ ನೋಡ್ಕೊಳ್ತೀನಿ. ಪ್ಲೀಸ್‌, ಬೇರೆ ಯಾರಿಗೂ ಕೊಟ್ಟು ಮದುವೆ ಮಾಡಬೇಡಿ’ ಅಂತೆಲ್ಲಾ ಕೇಳಿ ಬಿಡೋಣ ಅನ್ನಿಸುತ್ತೆ. ಆದರೆ, ಏನ್ಮಾಡೋದು ಹಾಗೆ ಮಾಡೋದಿಕ್ಕೆ ಆಗಲ್ಲವಲ್ಲ!

ನಂಗೊತ್ತು, ನಾನು ನಿಂಗೆ ತುಂಬಾ ಗೋಳಾಡಿಸ್ತೀನಿ ಅಂತ. ನಿನ್ನ ಹತ್ರ ಅದೆಷ್ಟು ಸಲ ಜಗಳ ಮಾಡಿದ್ದೀನಿ ಅಂತ ಲೆಕ್ಕಾನೇ ಇಲ್ಲ. ಯಾಕೋ ಗೊತ್ತಿಲ್ಲ, ಇತ್ತೀಚೆಗೆ ಮನಸ್ಸು ತುಂಬಾ ಹಠಮಾರಿಯಾಗಿದೆ. ಒಂದು ಕ್ಷಣವೂ ನಿನ್ನ ಬಿಟ್ಟಿರೋಕೆ ಕೇಳ್ತಾ ಇಲ್ಲ. ನಿಂಜೊತೆ ಮಾತನಾಡದೆ, ಮೆಸೇಜ್‌ ಮಾಡದೆ ಇರೋಕೆ ಆಗಲ್ಲ. ಬೇರೆ ಯಾರಾದ್ರೂ ನಿನ್ನ ಮಾತಾಡಿದ್ರೆ ಸಿಕ್ಕಾಪಟ್ಟೆ ಕೋಪ ಬರುತ್ತೆ. ಅವರು ನಮ್ಮಿಬ್ಬರನ್ನು ದೂರ ಮಾಡಿಬಿಟ್ಟರೆ ಅಂತ ಭಯ ಶುರುವಾಗುತ್ತೆ. ನಿನ್ನ ಬಗ್ಗೆ ತುಂಬಾ ಪೊಸೆಸಿವ್‌ ಆಗಿದೀನಿ.

ನಂಗೆ ಹೀಗೆಲ್ಲಾ ಆಗುತ್ತೆ ಅಂತ ನಿನ್ನ ಬಳಿಯೂ ಹೇಳಿಕೊಂಡಿದ್ದೇನೆ. ನೀನು ಏನೂ ಹೇಳದೆ ನಕ್ಕು ಸುಮ್ಮನಾಗಿಬಿಡ್ತೀಯ. ಹೇಳು, ಕಳೆದುಕೊಳ್ಳೋ ಭಯ ಇರೋದು ತಪ್ಪಾ? ಪ್ರೀತಿಯಲ್ಲಿ ಸ್ವಾರ್ಥ ಸರಿಯಲ್ವಾ? ನಿಂಗೂ ಈ ರೀತಿ ಪೊಸೆಸಿವ್‌ನೆಸ್‌ ಕಾಡೋದೇ ಇಲ್ವಾ? ಏನಾದ್ರೂ ಹೇಳಿ, ಹೆದರೋ ಹೃದಯಕ್ಕೆ ಸಮಾಧಾನ ಮಾಡು.

ಇಂತಿ ನಿಮ್ಮಮ್ಮನ ಸೊಸೆ
ಜಾನು…


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ