ಹಸಿವು, ಬ್ರೆಡ್‌ ಕೊಡ್ತೀರಾ?

Team Udayavani, Dec 18, 2018, 6:00 AM IST

ಸೀಸರ್‌ ನಿರಾಶ್ರಿತ ನಿಜ. ಅಲೆಮಾರಿಯೂ ಹೌದು. ಆದರೂ ಅವನಿಗೊಂದು ಶ್ರೀಮಂತ ಬಳಗವೇ ಇತ್ತು. ಅವರೆಲ್ಲ ಚಿಂತೆಯಿಂದ, ಆಸ್ಪತ್ರೆಯ ಬಾಗಿಲಲ್ಲಿ ಕಾಯುತ್ತಿದ್ದರು. ಅಂದಹಾಗೆ, ಅವರಾರೂ ಮನುಷ್ಯರಾಗಿರಲಿಲ್ಲ; ಶ್ವಾನಮಿತ್ರರು!

ಅವತ್ತು ಭಾನುವಾರ. ಜಗತ್ತಿಗೆಲ್ಲ ಅಂದು ರಜೆ. ಒಂದಷ್ಟು ಜನ ಸಿನಿಮಾ, ಮತ್ತೂಂದಷ್ಟು ಮಂದಿ ಶಾಪಿಂಗ್‌, ಮತ್ತೆ ಕೆಲವರು ಮನೆಗಳಲ್ಲಿ ಟಿವಿ ನೋಡುತ್ತಾ, ಆರಾಮಾಗಿ ಕಾಲ ಕಳೆಯುತ್ತಿದ್ದರು. ಆದರೆ, ಬ್ರೆಜಿಲ್‌ನ ಅಲ್ಟೋವೇಲ್‌ ನಗರದ ಬೀದಿಯಲ್ಲಿ ಸೀಸರ್‌ ಎಂಬ ಯುವ ಪ್ರಾಯದ ನಿರಾಶ್ರಿತ, ತೀವ್ರ ಬಳಲಿಕೆಯಿಂದ ಹೆಜ್ಜೆ ಇಡುತ್ತಿದ್ದ. ಹೊಟ್ಟೆಯಲ್ಲಿ ಹಸಿವಿನ ಮೇಳ. ಕಣ್‌ಕತ್ತಲೆ ಬಂದಂತಾದರೂ, ಬಹಳ ಪ್ರಯಾಸಪಟ್ಟೇ ನಡೆಯುತ್ತಿದ್ದ. ಹಾಗೆ ಸಾಗುತ್ತಾ ಸಾಗುತ್ತಾ, ಕೊನೆಗೂ ಅವನು ನಿರೀಕ್ಷಿಸಿದ್ದ ಆಸ್ಪತ್ರೆ ಬಂದಾಗಿತ್ತು.

ಆರಂಭದಲ್ಲಿಯೇ ಇದ್ದ ಚೀಟಿ ಕೌಂಟರ್‌ ಎದುರು ಸೀಸರ್‌ ನಿಂತುಕೊಂಡ. ಆಸ್ಪತ್ರೆ ಚೀಟಿಯ ಖಾಲಿ ಜಾಗಗಳನ್ನು ಭರ್ತಿ ಮಾಡುವಾಗ, ತಾನು “ಸಿಂಗಲ್‌’ ಎಂದು, ತನಗೆ ಯಾವ ವಿಳಾಸವೂ ಇಲ್ಲ ಎಂದೇ ನಮೂದಿಸಿದ್ದ. ಬೀದಿ ಬದಿಯಲ್ಲಿ ಚಿಂದಿ ಆಯ್ದು, ಭಿಕ್ಷೆ ಬೇಡುವವನಿಗೆ ಕುಟುಂಬವಾದರೂ ಎಲ್ಲಿಯದು? ಆಸ್ಪತ್ರೆಯವರು ಅನುಕಂಪ ತೋರಿ, ಯಾವುದೇ ಮುಜುಗರ ಪಡದೇ ಚಿಕಿತ್ಸೆ ನೀಡಲು ಮುಂದಾದರು.

ಸಣ್ಣಪುಟ್ಟ ಪರೀಕ್ಷೆಗಳೆಲ್ಲ ಮುಗಿದವು. ದೇಹದಲ್ಲಿ ರಕ್ತ ಕಡಿಮೆ ಆಗಿತ್ತು. ಸೊಂಟಕ್ಕೆ ಒಂದು ಇಂಜೆಕ್ಷನ್ನೂ ಬಿತ್ತು. ಕೊಟ್ಟ ಮಾತ್ರೆಯನ್ನು ಗುಳಕ್ಕನೆ ನುಂಗಿದ. ಒಂದೆರಡು ಗಂಟೆ ಆಸ್ಪತ್ರೆಯ ಬೆಡ್ಡಿನ ಮೇಲೆಯೇ ವಿರಮಿಸಿದ. ದಾದಿಯರು ಆತನಿಗೆ ಶುಶ್ರೂಷೆ ನೀಡಿ, ಹೊರಬಂದಾಗ ಅವರಿಗೆ ಅಚ್ಚರಿ. ಸೀಸರ್‌ ನಿರಾಶ್ರಿತ ನಿಜ. ಅಲೆಮಾರಿಯೂ ಹೌದು. ಆದರೂ ಅವನಿಗೊಂದು ಶ್ರೀಮಂತ ಬಳಗವೇ ಇತ್ತು. ಅವರೆಲ್ಲ ಚಿಂತೆಯಿಂದ, ಆಸ್ಪತ್ರೆಯ ಬಾಗಿಲಲ್ಲಿ ಕಾಯುತ್ತಿದ್ದರು. ಅಂದಹಾಗೆ, ಅವರಾರೂ ಮನುಷ್ಯರಾಗಿರಲಿಲ್ಲ; ಶ್ವಾನಮಿತ್ರರು!

ಆ ನಾಯಿಗಳೆಲ್ಲ ಬಾಲ ಅಲುಗಾಡಿಸುತ್ತಾ, ತಮ್ಮ ಸ್ನೇಹಿತ ಸೀಸರ್‌, ಆಸ್ಪತ್ರೆಯಿಂದ ಹುಷಾರಾಗಿ ಹೊರಬರುವುದನ್ನೇ ಕಾಯುತ್ತಿದ್ದವು. ಅವನು ಅವುಗಳೊಂದಿಗೆ, ನಿತ್ಯವೂ ಬ್ರೆಡ್‌ ಹಂಚಿಕೊಳ್ಳುತ್ತಿದ್ದ. ಅವನ ಬೆಚ್ಚನೆಯ ತೆಕ್ಕೆಯೊಳಗೆ, ಅಕ್ಕಪಕ್ಕದಲ್ಲಿ ಅವೂ ಮಲಗುತ್ತಿದ್ದವು. ಆ ಬಾಂಧವ್ಯವೇ ಅವುಗಳನ್ನು ಆಸ್ಪತ್ರೆಯ ತನಕ ಕರೆದೊಯ್ದಿತ್ತು.

ಶ್ವಾನಗಳ ಈ ಅಕ್ಕರೆಯನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ಕ್ರಿಸ್‌ ಮ್ಯಾಂಪ್ರಿಮ್‌, ಆ ನಾಯಿಗಳನ್ನೆಲ್ಲ ಒಳಗೆ ಬಿಟ್ಟುಕೊಂಡರು. ವಾರ್ಡ್‌ ಒಳಗೆ ವ್ಹೀಲ್‌ಚೇರ್‌ನಲ್ಲಿ ಕುಳಿತಿದ್ದ ತಮ್ಮ ಸ್ನೇಹಿತನನ್ನು ಕಂಡು ಖುಷಿಯಾಗಿ, ಅವುಗಳು ಇನ್ನೂ ಜೋರಾಗಿ ಬಾಲ ಅಲುಗಾಡಿಸಲು ಶುರುಮಾಡಿದವು.

ಸೀಸರ್‌ನ ಹಸಿವು ಮತ್ತಷ್ಟು ಜೋರಾಗಿತ್ತು. “ತಿನ್ನಲು ಏನಾದರೂ ಕೊಡುವಿರಾ?’ ಎಂದು ವಿನಂತಿಸಿಕೊಂಡ. ನರ್ಸ್‌ ಒಬ್ಬರು, ಒಂದು ಕಪ್‌ ಹಾಲು, 2 ಬ್ರೆಡ್‌ಗಳನ್ನು ತರಿಸಿ, ಆತನ ಕೈಗಿತ್ತರು. ಸೀಸರ್‌ ಅದರಲ್ಲಿ ಒಂದು ಬ್ರೆಡ್‌ ಅನ್ನು ಸವಿದು, ಉಳಿದ ಮತ್ತೂಂದು ಬ್ರೆಡ್‌ ಅನ್ನು ಅಲ್ಲಿದ್ದ ನಾಲ್ಕು ನಾಯಿಗಳಿಗೆ ಸಮನಾಗಿ ಹಂಚಿದ!


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ