
ನಿನ್ನನ್ನು ನಾನು ಭೇಟಿಯಾಗಲೇಬಾರದಿತ್ತು!
Team Udayavani, Jun 19, 2018, 5:05 PM IST

ನಿನ್ನ ಮಾತುಗಳನ್ನು ಕೇಳಿಸಿಕೊಳ್ಳಲೆಂದೇ ಕ್ಯಾಬಿನ್‌ನಿಂದ ಹೊರಬರುತ್ತಿದ್ದೆ. ನೀನು ನನ್ನನ್ನು ನೋಡಲಿ ಎನ್ನುವ ಕಾರಣಕ್ಕಾಗಿಯೇ ಉಳಿದ ಸಿಬ್ಬಂದಿಯನ್ನು ಚೆನ್ನಾಗಿ ಮಾತಾಡಿಸುತ್ತಿದ್ದೆ. ನಿನಗ್ಗೊತ್ತಾ? ಆವಾಗೆಲ್ಲಾ ನಾನು ಏನು ಮಾತಾಡ್ತಿದ್ದೆ ಅನ್ನೋದು ನನಗೇ ಅರ್ಥವಾಗ್ತಾ ಇರಲಿಲ್ಲ…
ಹಾಯ್ ರಾಜೀ,
ಇವತ್ತಿಗೆ ನಿನ್ನ ಪರಿಚಯವಾಗಿ ಸರಿಯಾಗಿ ಎರಡು ವರ್ಷ ಆಯ್ತು. ಈ ಹೊತ್ತಿಗೂ, ನಿನ್ನ ನೋಡುತ್ತಿದ್ದಾಗೆಲ್ಲಾ ಅನ್ನಿಸೋದೇ ಇಷ್ಟು. ಆವತ್ತು ನಿನ್ನನ್ನು ನಾನು ಭೇಟಿ ಆಗಲೇಬಾರದಿತ್ತು. ಯಾಕೆ ಅನ್ನೋದು ನಿನಗೆ ಗೊತ್ತಿದೆಯೋ, ಇಲ್ವೋ ಅನ್ನುವುದೇ ಈ ಹೊತ್ತಿಗೂ ನನ್ನನ್ನು ಕಾಡುತ್ತಿರುವಂಥದ್ದು.
ನಾನು ಇದ್ದ ಪರಿಸ್ಥಿತಿಯಲ್ಲಿ ನಿನ್ನನ್ನು ಪ್ರೀತಿಸುವ ಮಾತಿರಲಿ, ನಿನ್ನ ಸ್ನೇಹವನ್ನು ಹೊಂದುವುದೇ ಕೆಲವರ ಕಣ್ಣಿಗೆ ಬೇಡದ ವಿಚಾರವಾಗಿತ್ತು. ಆದರೆ ಸತ್ಯ ಏನೆಂದರೆ ಅದು ನನಗೆ ಮಾತ್ರ ಬಹಳ ಖುಷಿ ತರುವ ವಿಚಾರವಾಗಿತ್ತು.
ನನ್ನ ನಿನ್ನ ಭೇಟಿ ಅನಿವಾರ್ಯವಾದದ್ದು. ಹಾಗಾಗಿ ಅದನ್ನು ತಪ್ಪಿಸಿಕೊಳ್ಳುವ ಮಾತೇ ಇರಲಿಲ್ಲ. ನಾನು ಇರುವ ಬ್ಯಾಂಕ್‌ಗೆ ನೀನು ದಿನಾ ಸಂಜೆ ಪಿಗ್ಮಿ ಹಣ ತಂದು ಲೆಕ್ಕಕ್ಕೆ ಕೂರುತ್ತಿದ್ದೆಯಲ್ಲ; ಆಗೆಲ್ಲಾ ವಾರೆಗಣ್ಣಿನಿಂದ ನಿನ್ನನ್ನು ಗಮನಿಸುತ್ತಿದ್ದೆ. ನೀನು ತಲೆತಗ್ಗಿಸಿ ನೋಟುಗಳನ್ನು ಎಣಿಸುತ್ತ, ಮಧ್ಯೆ ಮಧ್ಯೆ ತಲೆ ಎತ್ತಿ ನನ್ನ ಕಡೆ ನೋಡುತ್ತಿರುವಂತೆಯೇ ನಾನು ತಲೆ ತಗ್ಗಿಸಿ ನನ್ನೆದುರಿನ ಕಂಪ್ಯೂಟರಿನಲ್ಲಿ ಅದೇನೋ ಹುಡುಕಾಟಕ್ಕೆ ನಿಂತವನಂತೆ ನಟಿಸುತ್ತಿದ್ದೆ. ಅದೇಕೋ ಕಾಣೆ: ನಿನ್ನನ್ನು ತಲೆ ಎತ್ತಿ ನೋಡುವ ಧೈರ್ಯ ಬರಲೇ ಇಲ್ಲ.
ನಾನು ಬ್ಯಾಂಕ್ ಮ್ಯಾನೇಜರ್ ಅನ್ನೋದು ನನ್ನ ತಲೆಯಲ್ಲಿತ್ತಾ? ಗೊತ್ತಿಲ್ಲ. ಎಲ್ಲರೊಂದಿಗೂ ಬಿಂದಾಸ್ ಆಗಿ ಮಾತನಾಡುತ್ತಿದ್ದ ನಾನು, ನೀನು ಎದುರಿಗೆ ಬಂದಾಗ ಮಾತ್ರ ಇಲ್ಲದ ಗಾಂಭೀರ್ಯ ತಂದುಕೊಳ್ಳುತ್ತಿದ್ದೆ. ನಿನ್ನ ಚುರುಕುತನ, ಲವಲವಿಕೆ ನನ್ನನ್ನು ಇನ್ನಿಲ್ಲದಂತೆ ಸೆಳೆದಿತ್ತು. ಪಕ್ಕದಲ್ಲಿ ಕುಳಿತಿದ್ದ ನನ್ನದೇ ಸಿಬ್ಬಂದಿ ಜೊತೆ ನೀನು ಮಾತನಾಡುತ್ತಿದ್ದರೆ ಹೊಟ್ಟೆಯಲ್ಲಿ ಅವಲಕ್ಕಿ ಕುಟ್ಟಿದಂತಾಗುತಿತ್ತು. ನನ್ನದೇ ಕ್ಯಾಬಿನ್ ಒಳಗಡೆ ನೀರಿನ ಫಿಲ್ಟರ್ ಇದ್ದರೂ ನೀರು ಕುಡಿಯುವ ನೆಪದಲ್ಲಿ, ಶೌಚಾಲಯಕ್ಕೆ ಹೋಗುವ ನೆಪದಲ್ಲಿ ನಿನ್ನ ಮಾತುಗಳನ್ನು ಕೇಳಿಸಿಕೊಳ್ಳಲೆಂದೇ ಕ್ಯಾಬಿನ್‌ನಿಂದ ಹೊರಬರುತ್ತಿದ್ದೆ. ನೀನು ನನ್ನನ್ನು ನೋಡಲಿ ಎನ್ನುವ ಕಾರಣಕ್ಕಾಗಿಯೇ ಉಳಿದ ಸಿಬ್ಬಂದಿಯನ್ನು ಚಂದಗೆ ಮಾತನಾಡಿಸುತ್ತಿದ್ದೆ. ನಿನಗ್ಗೊತ್ತಾ? ಆವಾಗೆಲ್ಲಾ ನಾನು ಏನು ಮಾತಾಡ್ತಿದ್ದೆ ಅನ್ನೋದು ನನಗೇ ಗೊತ್ತಿರಲಿಲ್ಲ.
ನಿನ್ನ ಬಳಿ ಗಂಟೆಗಟ್ಟಲೆ ಕೂತು ದಿನವೂ ಹರಟಬೇಕೆನಿಸುತ್ತಿತ್ತು. ಆದರೆ ಅದ್ಯಾವುದೂ ಸಾಧ್ಯವಾಗಿಲ್ಲ. ಇನ್ನು ಮುಂದೆ ಸಾಧ್ಯವಾಗುವುದಂತೂ ಕನಸಿನ ಮಾತು. ಬಹುಶಃ ನಾನು ಒಂದು ವರ್ಷ ಮೊದಲೇ ನಿನ್ನನ್ನು ಭೇಟಿಯಗುವ ನಿರ್ಧಾರ ಮಾಡಿದ್ದರೆ ಇಷ್ಟು ಹೊತ್ತಿಗೆ ನನ್ನ ಬದುಕು ಅದೆಷ್ಟು ಚೆನ್ನಾಗಿರುತ್ತಿತ್ತು ಎನಿಸುತ್ತದೆ.
ನಿಜ ಹೇಳಲಾ? ನಾನು ಒಳಗೊಳಗೇ ನಿನ್ನನ್ನು ಜೀವದಂತೆ ಪ್ರೀತಿಸುತ್ತಿದ್ದೆ. ಆರಾಧಿಸುತ್ತಿದ್ದೆ. ಹೇಳಬೇಕೆನ್ನಿಸಿದರೂ ಹೇಳಲಾಗದೆ ಚಡಪಡಿಸುತ್ತಿದ್ದೆ. “ಪಿಗ್ಮಿ ಹುಡುಗಿಯನ್ನು ಪ್ರೀತಿಸುತ್ತೀಯಾ?’ ಎಂದು ಸ್ನೇಹಿತರು ಹೀಯಾಳಿಸುತ್ತಾರೇನೋ ಅಂತ ಯಾರಿಗೂ ಅದನ್ನು ಹೇಳದೆ ಮುಚ್ಚಿಟ್ಟೆ. ಅಂತಸ್ತನ್ನು ಅಳೆದ ನನ್ನ ಬಗ್ಗೆ ನನಗೇ ಅಸಹ್ಯವಾಗುತ್ತಿದೆ. ದಯವಿಟ್ಟು ನನ್ನನ್ನು ಕ್ಷಮಿಸು. ನನಗ್ಗೊತ್ತು: ಅದು ಖಂಡಿತಾ ಕ್ಷಮಿಸುವಂಥದ್ದಲ್ಲ. ಇದು ಪ್ರೀತಿಯೇ ಅಲ್ಲ ಅಂತ ನಿನಗನ್ನಿಸುತ್ತಿರಬಹುದು. ಆದರೂ ನಾನು ಪ್ರೀತಿಸಿದ್ದು ಸತ್ಯ.
ಅಂತೂ ಎಲ್ಲವನ್ನೂ ಮೀರಿ ನಿನ್ನನ್ನು ಮದುವೆಯಾಗಲೇಬೇಕು ಅಂತಂದುಕೊಂಡು, ಬರೋಬ್ಬರಿ ಒಂದು ವರ್ಷದ ಬಳಿಕ ಧೈರ್ಯ ಮಾಡಿ ನಿನ್ನನ್ನು ಒಂದು ಪಾರ್ಕಿಗೆ ಕರೆದಿದ್ದೆ. ನೀನು ಸರಿಯಾದ ಸಮಯಕ್ಕೆ ಬಂದಿದ್ದೆ. ತಿಳಿ ನೇರಳೆ ಮತ್ತು ಬಿಳಿ ಬಣ್ಣದ ಸಲ್ವಾರ್‌ನಲ್ಲಿ ನೀನು ನಡೆದು ಬರುತ್ತಿದ್ದರೆ ನನ್ನ ಎದೆ ಬಡಿತ ಜೋರಾಗುತ್ತಿತ್ತು. “ಹಾಯ್ ಸರ್’ ಎನ್ನುತ್ತಲೇ ಹತ್ತಿರ ಬಂದು, ನೀನೇ ಮಾತಿಗೆ ಮೊದಲಿಳಿದೆ. ನೀನು ಯಾವತ್ತೂ ಅದೇ ಲವಲವಿಕೆಯ ರಾಜಿ. “ಸರ್, ನಿನ್ನೆಯೇ ಹೇಳುವಾ ಅಂದುಕೊಂಡಿದ್ದೆ. ಜೂನ್ 29ಕ್ಕೆ ನನ್ನ ಮದುವೆ ಸರ್. ಇಲ್ಲೇ ಧನ್ವಂತರಿ ಹಾಲ್‌ನಲ್ಲಿ. ನೀವು ತಪ್ಪದೇ ಬರಬೇಕು ಸರ್’ ಎಂದಾಗ, ಸೋಲಿನ ಹತಾಶೆ ಹೃದಯವನ್ನು ಆವರಿಸಿತು. ಆದರೂ ತೋರಿಸಿಕೊಳ್ಳಲಿಲ್ಲ. ನಾನು ಅದೆಂಥ ಪಾಖಂಡಿ ನೋಡು, “ಹಾ, ನನಗೆ ಗೊತ್ತಾಯ್ತು. ಅದಕ್ಕೆ ನಿನಗೇನಾದರೂ ಹಣದ ತೊಂದರೆಯಿದ್ದರೆ ಸಹಾಯ ಮಾಡುವ ಅಂತಲೇ ನಾನು ಕರೆದದ್ದು’ ಎಂದಿದ್ದೆ. ನೀನು “ಅಯ್ಯೋ ಸರ್, ಎಂಥ ದೊಡ್ಡ ಮಾತು! ಬೇಡ. ನೀವು ಕೇಳಿದ್ರಲ್ಲ ಸರ್, ಅಷ್ಟೇ ಸಾಕು. ಖುಷಿಯಾಯ್ತು’ ಅಂತ ಮತ್ತಷ್ಟು ಮಾತನಾಡಿ, ಹೊರಟು ಹೋದೆ! ಅದೇಕೋ ಗೊತ್ತಿಲ್ಲ ನಿನ್ನನ್ನು ಅವತ್ತು ಭೇಟಿಯಾಗಬಾರದಿತ್ತು ಅಂತನ್ನಿಸಿತ್ತು. ನಿನಗೆ ನನ್ನ ಒಳಮನಸು ತಿಳಿದಿತ್ತಾ? ಇವತ್ತಿಗೂ ಉತ್ತರ ಸಿಗುತ್ತಿಲ್ಲ.
ಇಂತಿ ಸ್ಟೇಟಸ್ ಮರೆತ ಹುಡುಗ
-ನರೇಂದ್ರ ಎಸ್. ಗಂಗೊಳ್ಳಿ
ಟಾಪ್ ನ್ಯೂಸ್
