ಒಂದು ಏಕಾಂತದ ಪಯಣ

ಕಳೆದುಹೋಗಿ ತನ್ನನ್ನೇ ತಾವು ಭೇಟಿ ಆಗೋದೇ ಏಕಾಂತ

Team Udayavani, May 7, 2019, 6:15 AM IST

ಒಬ್ಬಂಟಿತನಕ್ಕೂ ಏಕಾಂಗಿತನಕ್ಕೂ ನೆಲ- ಮುಗಿಲ ವ್ಯತ್ಯಾಸ. ಬದುಕಿನ ಬವಣೆಗಳು, ಗೊಂದಲದ ಸಂಘರ್ಷಗಳು- ಇವುಗಳಿಂದ ಜನಿಸಿದ ಒಬ್ಬಂಟಿತನ ದಿಗಿಲು ಹಿಡಿಸುವಂಥದ್ದು. ಆದರೆ, ಇನ್ನೊಂದು ಅದು ಕ್ಲಾಸಿಕ್‌… ಸ್ವತಃ ಕಳೆದುಹೋಗಿ- ತಮ್ಮನ್ನು ತಾವು ಭೇಟಿಯಾಗುವ ಸ್ಥಿತಿಯ ಆಲಾಪನೆ ಅದು. ಈ ಏಕಾಂತದ ಜೊತೆ ಏನೋ ಒಂದು ಹುಚ್ಚಿರುತ್ತದೆ…

ಮರುಭೂಮಿಂತೆ ಮೈಯೆಲ್ಲ ಸುಡುತ್ತಿತ್ತು. “ಎಲ್ಲಿದ್ದೇನೆ?’- ಯೋಚಿಸಲಾರದಷ್ಟು ನಿತ್ರಾಣ. ಆರನೇ ದಿನಕ್ಕೆ ಜ್ವರ ಇಳಿಯುತ್ತಾ ಬಂದರೂ ನಿತ್ರಾಣ ಮಾತ್ರ ಹಾಗೆಯೇ ಇತ್ತು. ಮನೆಯವರೆಲ್ಲ ಅದ್ಯಾವುದೋ ಕಾರ್ಯಕ್ರಮ ಅಂತೇಳಿ ಹೊರಟುಬಿಟ್ಟರು. ಆಗಾಗ್ಗೆ ಬಂದು ನನ್ನ ಕುಶಲ ವಿಚಾರಿಸುವಂತೆ, ಅಕ್ಕನಿಗೆ ಸೂಚನೆ ಹೋಯಿತು.

ದಿನ ಪೂರ್ತಿ ನಿತ್ರಾಣದಲ್ಲಿ ಕಳೆದರೂ, ನಾಲ್ಕು ದಿನ ಒಬ್ಬಳೇ. ಅಕ್ಕ ಆಗ- ಈಗ ಬಂದು ಹೋದರೂ, ಸಂಪೂರ್ಣ ಏಕಾಂತ… ಇದು ಮೊದಲ ಸಲವಲ್ಲವಾದರೂ, ಓದುತ್ತಿದ್ದ ಸಮಯದಲ್ಲಿ ಊರು ಅಂತ ಅಪ್ಪ- ಅಮ್ಮ ಹೊರಟರೆ, ನಾಲ್ಕಾರು ದಿನ ಒಬ್ಬಳೇ ಇರುತ್ತಿದ್ದೆ.. ಇಡೀ ಮನೆ- ಜಗತ್ತು ನನ್ನದೇ ಎನ್ನುವ ಭಾವ ಹುಟ್ಟುತ್ತಿತ್ತು. ಅರ್ಧರಾತ್ರಿಯವರೆಗೂ ಇಷ್ಟದ ಸಿನಿಮಾ, ಸಂಗೀತ- ಹೀಗೆ ಆ ಏಕಾಂತದ ಅವಧಿಗೆಂದೇ ತುಂಬಿ ಹರಿಯುವಷ್ಟು ಪ್ಲಾನ್‌.

ಏಕಾಂತದ ಮಾತೆತ್ತಿದಾಗ, ರಷ್ಯಾದ ಲೇಖಕ ಆಂಟನ್‌ ಚೆಕಾವ್‌ನ “ದ ಬೆಟ್‌’ ಕತೆ ನೆನಪಿಗೆ ಬಂತು. ಅದು ನನ್ನೊಳಗೆ ಅಗಾಧ ಆಳಕ್ಕಿಳಿದಂತೆ ಉಳಿದುಬಿಟ್ಟಿದೆ… ಅದೊಂದು ಪಾರ್ಟಿ. ಅಲ್ಲೊಬ್ಬ ಅಗರ್ಭ ಶ್ರೀಮಂತ ಬ್ಯಾಂಕರ್‌. ಮಾತಾಡುತ್ತಾ, ಮಾತಾಡುತ್ತಾ ಲೈಫ್ ಇಂಪ್ರಿಸನ್‌ಮೆಂಟ್‌ ಮತ್ತು ಡೆತ್‌ ಸೆಂಟೆನ್ಸ್‌ಗಳಲ್ಲಿ, ಡೆತ್‌ ಸೆಂಟೆನ್ಸ್‌ ಅತಿ ಸುಲಭ ಎಂದು ವಾದಿಸುತ್ತಾನೆ.

ಇಪ್ಪತ್ತೈದರ ತರುಣ ಲಾಯರ್‌ ಒಬ್ಬ, ಲೈಫ್ ಇಂಪ್ರಿಸನ್‌ಮೆಂಟ್‌ ನಂತರ ಇನ್ನೂ ಅಗಾಧ ಬದುಕು ಉಳಿಯುವುದರಿಂದ ಅದೇ ಸರಿ ಅಂತ ವಾದಿಸುತ್ತಾನೆ. ಆಗ ಬ್ಯಾಂಕರ್‌, ಹದಿನೈದು ವರ್ಷ ಯಾರ ಸಂಪರ್ಕವೂ ಇಲ್ಲದೇ ಬದುಕಿದರೆ, ಅಗಾಧ ಮೊತ್ತ ನೀಡುವುದಾಗಿ ಘೋಷಿಸುತ್ತಾನೆ. ಅಗಾಧ ಮೊತ್ತ..! ಲಾಯರ್‌ ಗೆದ್ದೇ ತೀರುತ್ತೇನೆ ಎಂಬಂತೆ ಒಪ್ಪಿಕೊಳ್ಳುತ್ತಾನೆ.

ಆ ಪ್ರಕಾರವಾಗಿ, ಲಾಯರ್‌ಗೆ ಸಕಲ ಸವಲತ್ತು ನೀಡಲಾಯಿತು; ಮನುಷ್ಯರ ಸಾಂಗತ್ಯವೊಂದು ಬಿಟ್ಟು. ಅವನು ಒಂಟಿಯಾಗಿದ್ದು ಹಾಡುತ್ತಾನೆ, ಅಳುತ್ತಾನೆ, ಚೀರಾಡುತ್ತಾನೆ- ಕೊನೆಗೆ ಅವನ ಪರಿಸ್ಥಿತಿ ಹುಚ್ಚನಂತಾಗಿ ಹೋಗುತ್ತೆ…. ಇನ್ನೇನು ಉಸಿರು ಬಿಡಬೇಕೆನ್ನುವಾಗ ಪುಸ್ತಕ ಓದಲು ಆರಂಭಿಸುತ್ತಾನೆ. ಯಾವ ಪರಿ ಅವನಲ್ಲಿ ಜೀವ ಬರುತ್ತದೆಂದರೆ, ನಾಲ್ಕು ವರ್ಷಗಳಿಗೆ ಆರು ನೂರು ವಾಲ್ಯೂಂ ಮುಗಿಸುತ್ತಾನೆ. ಹೀಗೆ ಓದು- ಬರಹದೊಂದಿಗೆ ಸಾಗುವ ಅವನ ಬದುಕು ಕಡೆಗೆ ಮೆಡಿಸಿನ್‌- ಥಿಯಾಲಜಿ ಎಲ್ಲವನ್ನೂ ಓದಿ ಮುಗಿಸಿರುತ್ತಾನೆ.

ಇತ್ತ ಬ್ಯಾಂಕರ್‌ನ ವ್ಯವಹಾರ ಇಳಿಮುಖವಾಗುತ್ತೆ. ಗೆದ್ದರೆ, ಲಾಯರ್‌ಗೆ ನೀಡಬೇಕಾದ ಅಗಾಧ ಮೊತ್ತದ ಬಗ್ಗೆ ಚಿಂತಿತನಾಗುತ್ತಾನೆ. ಆದರೆ, ಬೆಟ್‌ ಮುಗಿಯುವ ಐದಾರು ದಿನ ಮೊದಲೇ ಲೌಕಿಕ ವಸ್ತುಗಳು ಯಾವುದೂ ತನಗೆ ಅಗತ್ಯವಿಲ್ಲವೆಂದು ಬರೆದಿಟ್ಟು ಲಾಯರ್‌ ಹೊರಟುಬಿಟ್ಟಿರುತ್ತಾನೆ. ಬ್ಯಾಂಕರ್‌ ಆ ಪತ್ರ ನೋಡಿ ತನ್ನನ್ನು ಉಳಿಸಿದ್ದಕ್ಕಾಗಿ ಉಸಿರು ಬಿಡುತ್ತಾನೆ.

ಅಗಾಧ ಧನ ಕನಕ‌ಕ್ಕಾಗಿ ತನ್ನ ಏರು ಯವ್ವನದ 15 ವರ್ಷಗಳನ್ನು ಏಕಾಂತದ ಕೈಗಿಟ್ಟು, ಅದೇ ಧನಕನಕ ಕೈಸೇರುವ ಹೊತ್ತಿಗೆ ಇದ್ಯಾವುದೂ ಶಾಶ್ವತವಲ್ಲ ಎನ್ನುವುದನ್ನು ಸಾಕ್ಷಾತ್ಕರಿಸಿಕೊಳ್ಳುವ ಪರಿ, ಯಾಕೋ ನನ್ನ ಮನಸ್ಸನ್ನು ಅತಿಯಾಗಿ ಕಾಡಿತು. ಇದೇ ಏಕಾಂತದ ಫ‌ಲ… ಮನಸು ಕೊಸರಾಡುತ್ತದೆ… ಹಾರಾಡುತ್ತದೆ… ಅಳುತ್ತದೆ… ಹಾಡಾಗುತ್ತದೆ… ಆದರೆ, ಕೊನೆಗೆ ನಾವು ನಾವಾಗುತ್ತೇವೆ…

ನೆಲ್ಸನ್‌ ಮಂಡೇಲ! ಈ ಹೆಸರೇ ಒಂದು ಅಚ್ಚರಿ. ಬದುಕಿರುವಾಗಲೇ ದಂತಕತೆಯಾದ ದಮನಿತರ ಧ್ವನಿ. ರಾಷ್ಟ್ರಾಧ್ಯಕ್ಷರಾಗಿದ್ದರೆಂಬ ಕಾರಣಕ್ಕೆ ಅವರು ಗ್ರೇಟ್‌ ಆಗಿ ಕಾಣುವುದಿಲ್ಲ. ರಾಷ್ಟ್ರದ ಪ್ರತಿಯೊಬ್ಬರೂ ಅವರನ್ನು ಗೌರವಿಸುತ್ತಿದ್ದರು ಎಂಬುದೂ ಇಲ್ಲಿ ಮುಖ್ಯವಲ್ಲ. ಜೀವಿತದ ಅತ್ಯಂತ ಪ್ರಮುಖ ಸಮಯದಲ್ಲಿ ಇಪ್ಪತ್ತೇಳು ವರ್ಷಗಳನ್ನು ಜೈಲೊಳಗೇ ಕಳೆದರಲ್ಲಾ,… ಅದು ಗ್ರೇಟ್‌. ಅಲ್ಲಿಂದ ಹೊರಬಂದ ನಂತರ ಅಧ್ಯಕ್ಷ ಹಾದಿ ಇವರಿಗಾಗಿ ಕಾಯುತ್ತಿತ್ತು. ಇಷ್ಟಕ್ಕೂ ಇವರು ಸಾಧಿಸಿದ್ದು, ದಮನಿತರನ್ನು ಮೇಲೆತ್ತಿದ್ದು, ಹಾಗೆ ಮೇಲೆತ್ತಲು ಸಿಕ್ಕ ಶಕ್ತಿ ಇದೆಯಲ್ಲ, ಅದು ಏಕಾಂತದ ಸೋಜಿಗ.

ಉಸೇನ್‌ ಬೋಲ್ಟ್! ಈತ ಒಂದು ಜೀವಂತ ಅಚ್ಚರಿ. ಏಕೆಂದರೆ, ಈತನ ರೆಕಾರ್ಡ್‌ಗಳನ್ನು ಈತನೇ ಮುರಿಯಬೇಕು. ಹತ್ತು ಸೆಕೆಂಡ್‌ ಟ್ರ್ಯಾಕ್‌ ಮೇಲೆ ಓಡಲು ಆತ ಅದೆಷ್ಟು ವರ್ಷ ಟ್ರ್ಯಾಕ್‌ ಮೇಲೆ ಕಳೆದಿರುತ್ತಾನೆ… ಅಲ್ಲಿ ಯಾರೂ ಇರುವುದಿಲ್ಲ… ಆತ ಮತ್ತು ಆತನ ಓಟ ಮಾತ್ರ. ಅದೂ ಏಕಾಂತದ ಸನ್ನಿಧಾನದಲ್ಲಿನ ಓಟ.

ವಿಜ್ಞಾನಿಯೊಬ್ಬ ವರ್ಷಗಟ್ಟಲೇ ಕೋಣೆಯೊಳಗೆ ತನ್ನನ್ನೇ ತಾನು ಬಂಧಿಸಿಕೊಂಡು, ಸಂಶೋಧನೆ ಮಾಡುತ್ತಾನೆ. ಅಲ್ಲಿ ಅವನೊಟ್ಟೊಗೆ ಯಾರೂ ಇರುವುದಿಲ್ಲ. ತಾನು ತನ್ನ ಏಕಾಂತ ಮಾತ್ರವೇ… ಇಂಥದೇ ಏಕಾಂತ ಅರಸಿ ಅಲ್ಲವೇ ನಮ್ಮ ಋಷಿ- ಮುನಿಗಳು ಕಾಡು- ಹಿಮಾಲಯ ಅಂತ ಅಲೆಯುತ್ತಿದ್ದುದು. ಅದೂ ದೈವ ಸಾಕ್ಷಾತ್ಕಾರಕ್ಕಾಗಿ…

ಒಬ್ಬಂಟಿತನಕ್ಕೂ ಏಕಾಂಗಿತನಕ್ಕೂ ನೆಲ- ಮುಗಿಲ ವ್ಯತ್ಯಾಸ. ಬದುಕಿನ ಬವಣೆಗಳು, ಗೊಂದಲದ ಸಂಘರ್ಷಗಳು- ಇವುಗಳಿಂದ ಜನಿಸಿದ ಒಬ್ಬಂಟಿತನ ದಿಗಿಲು ಹಿಡಿಸುವಂಥದ್ದು. ಆದರೆ, ಇನ್ನೊಂದು; ಅದು ಕ್ಲಾಸಿಕ್‌… ಸ್ವತಃ ಕಳೆದುಹೋಗಿ- ತಮ್ಮನ್ನು ತಾವು ಭೇಟಿಯಾಗುವ ಸ್ಥಿತಿಯ ಆಲಾಪನೆ ಅದು. ಈ ಏಕಾಂತದ ಜೊತೆ ಏನೋ ಒಂದು ಹುಚ್ಚಿರುತ್ತದೆ. ವರ್ಷಾನುಗಟ್ಟಲೇ ನನ್ನನ್ನೇ ಧೇನಿಸಿ, ನನ್ನಲ್ಲಾ ನದಿಯಾಗಿ ಹರಿದುಬಿಡಬಲ್ಲೆ ಎನ್ನುವ ಹುಚ್ಚು!

ಈ ಏಕಾಂತದ ಬೆನ್ನು ಹತ್ತಿ ದುಡಿಯುವ ಜನರನ್ನೊಮ್ಮೆ ಆಲಿಸಿದಾಗಲೇ ಅರಿವಾಗಿದ್ದು… ಹಸಿದವನಿಗೆ ಕಿಶೋರ್‌ ದಾದಾನ ಹಾಂಟಿಂಗ್‌ ಮೆಲೋಡೀಸ್‌ ಆಗಲಿ, ಗುಲ್ಜಾರರ ಗಝಲ್ಲುಗಳಾಗಲಿ, ಅರ್ಥವಾಗಲಾರವು. ಭೌತಿಕವಾಗಿ ಹೆಚ್ಚಾಗಿ ಎಲ್ಲಿ ಹರಿಯಬೇಕೆಂದು ಅರಿಯದೆಯೇ, ಫೇಸ್‌ಬುಕ್‌ ಗೋಡೆಗಳಲ್ಲಿ ಹರಿದು ನಿಲ್ಲುವುದು…

ಏಕಾಂಗಿತನಕ್ಕೆ ಸಮಸ್ಯೆ- ಕಾಯಿಲೆ ಇತ್ಯಾದಿ ಹೆಸರುಗಳನ್ನು ಕೊಡುವುದನ್ನೂ ನೋಡಬಹುದು. ಅದು ಬೇರೆ. ಆದರೆ, ಇದು ನಿಜಕ್ಕೂ ಮನುಷ್ಯ ತನಗೆ ತಾನು ಕೊಟ್ಟುಕೊಳ್ಳುವ ಸಮಯ ಮತ್ತು ಧ್ಯಾನಕ್ಕೆ ತುಂಬಾ ಹತ್ತಿರವಾದಂತೆ ಸ್ಥಿತಿ. ಏಕಾಂತದಲ್ಲಿ ಏಕಾಂತದ ಬಗ್ಗೆ ಹರಿದ ಆಲೋಚನೆಗಳು ತಹಬದಿಗೆ ಬರುವಂತೆ ಕಾಣಲಿಲ್ಲ… ಪ್ರಯಾಸದಿಂದ ಎದ್ದು ಟಿ.ವಿ. ಹಾಕಿದೆ…

“ಭೀಡ್‌ ಮೇ ಭೀ ಹೈ ತನಹಾಯೀ…
ಯಾದ್‌ ಹರ್‌ ಪಲ್‌ ತೆರೀ ಆಯೀ…’
ಕುಮಾರ್‌ ಸಾನು ಅವರ ಹಾಡು ಇಂಪಾಗಿ ಕಿವಿಗೆ ಬಿತ್ತು… ಜಗತ್ತಿನ ತುಂಬಾ ಜನರಿದ್ದರೂ, ಇಡೀ ಜಗತ್ತು ಇನ್ನೊಂದು ಜೀವದಲ್ಲೇ ಕಂಡು… ಅದರ ಜತನದಲ್ಲೇ ಉಸಿರು- ಲಯಗಳನ್ನು ಕಂಡುಕೊಂಡರೆ, ಅದನ್ನೇ ಧ್ಯಾನ- ಏಕಾಂತ ಎನ್ನಬಹುದೇ ಅಂತನ್ನಿಸಿತು.

– ಮಂಜುಳಾ ಡಿ. ; manjumannu791522@gmail.com

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸಂಗೀತ ಅನ್ನೋದು ದೇವರನ್ನು ಒಲಿಸಿಕೊಳ್ಳಲು ಇರುವ ಸಮೀಪದ ಹಾದಿ ಅಂತ ಅಂದುಕೊಳ್ಳುವ ಕಾಲ ಇದಲ್ಲ. ಈಗ ಸಂಗೀತ ಅನ್ನೋದು ಬದುಕಿನ ಬಂಡಿ ಹೊಡೆಯಲು ಇರುವ ಸಾಧನ. ಟಿ.ವಿಗಳಲ್ಲಿ,...

  • ಶಾಲೆ ಎಂದರೆ ಕೇವಲ ಸಿಲಬಸ್‌ ಸುತ್ತುತ್ತಲೇ ಓಡಾಡಿಕೊಂಡಿರುವ ಮೇಷ್ಟ್ರು, ವಿದ್ಯಾರ್ಥಿಗಳ ಕೂಟವಲ್ಲ.  ಇದ್ರ ‌ ಜೊತೆಗೆ, ಪಠ್ಯೇತರ ಚಟುವಟಿಕೆ ಕೂಡ ಮುಖ್ಯ. ಇದಕ್ಕೆ...

  • ಇಂಟರ್ವ್ಯೂ ಗೆ ಅಂತ ಹೋದಲ್ಲೆಲ್ಲ ಕರೆಯುತ್ತಿದ್ದ. ಸಿಕ್ಕಾಗಲೆಲ್ಲ ಡಬ್ಬ ಕೊಡುತ್ತಿದ್ದ. "ಇವೆಲ್ಲ ಮಾಮೂಲು ಗುರು' ಅಂತ ಆತ್ಮ ವಿಶ್ವಾಸ ತುಂಬುತ್ತಿದ್ದ. "ಅವತ್ತೂಂದು...

  • ಇತ್ತೀಚೆಗೆ ಯುವಕರು ಪ್ರತಿಯೊಂದು ವಿಚಾರವನ್ನೂ ಗೂಗಲ್‌ ಮಾಡಿ ನೋಡಿ ಕುತೂಹಲ ತಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ, ಅನಾರೋಗ್ಯ ಪೀಡಿತರಾಗಿದ್ದವರಲ್ಲಿ ಶೇ....

  • ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾದಾಗ ಇಡೀ ಸಮಾಜ ಅಂಕಗಳ ತಕ್ಕಡಿಯಲ್ಲಿ ಈ ಚಿದಾನಂದರನ್ನು ತೂಕ ಹಾಕಿತು. ಆಗ ಅವರು ತೀರ್ಮಾನ ಮಾಡಿದ್ದು; ನನ್ನಂತೆ ಫೇಲಾದವರು ಬದುಕಲ್ಲಿ...

ಹೊಸ ಸೇರ್ಪಡೆ