ಕೊನೆಯ ಬೆಂಚಿನ ಕನವರಿಕೆ

Team Udayavani, Dec 3, 2019, 10:50 AM IST

ತರಗತಿಗೇನೋ ನಾವೇ ಹಿಂದು;

ಹಿಂದುಳಿದವರೇ ನಾವಿಲ್ಲಿ!

ಆಟದ ಬಯಲಲಿ ನೋಡಲಿ ಬಂದು

ಆಂಜನೇಯರೇ ನಾವಲ್ಲಿ!

ಇದು, ಕವಿ ಕೆಎಸ್‌ನ ನಮ್ಮ ಹುಡುಗರ ಬಗ್ಗೆ ಬರೆದ ಕವಿತೆಯ ಸಾಲು.

ಹೋಗೋ, ಲಾಸ್ಟ್‌ ಬೆಂಚ್‌ನಲ್ಲಿ ಕೂತ್ಕೊ..’ ಅಂತ ಲೆಕ್ಚರರ್‌ ಬೈದಾಗ ಹುಡುಗರು ಬರುವುದು ನನ್ನ ಕಡೆಗೇ. ಅಂದರೆ, ಲಾಸ್ಟ್‌ ಬೆಂಚ್‌ ಅನ್ನೋದು ಶಿಕ್ಷೆಯ ನಿಲ್ದಾಣ. ಪನಿಶ್‌ಮೆಂಟ್‌ ಕೊಡೋಕೆ ಅಂತಲೇ ನನ್ನನ್ನ ಇಟ್ಟುಕೊಂಡಿದ್ದಾರೋ ಏನೋ. ನಿಮಗೆ ಗೊತ್ತಾ?ಲಾಸ್ಟ್‌ ಬೆಂಚ್‌ನಲ್ಲಿ ಇದ್ದವರೇ ಬದುಕಲ್ಲಿ ಫ‌ಸ್ಟ್‌ ಬರೋದು. ಮಾಸ್ಟರ್‌ ಹಿರಣ್ಣಯ್ಯ ಲಾಸ್ಟ್‌ ಬೆಂಚಲ್ಲಿ ಇದ್ದರು. ಬೀಚಿ ಕೂಡ ಲಾಸ್ಟ್‌ ಬೆಂಚ್‌ನಲ್ಲಿ ಕೂತಿದ್ದವರು. ಆಮೇಲೆ ಅವರು ಬದುಕಲ್ಲಿ ಏನೇನೆಲ್ಲಾ ಆದರು ಅನ್ನೋದು ನಿಮಗೇ ಗೊತ್ತು.

ಅಬ್ದುಲ್‌ ಕಲಾಂ ಅವರಿಗೆ ಲಾಸ್ಟ್‌ ಬೆಂಚ್‌ ವಿದ್ಯಾರ್ಥಿಗಳು ಅಂದರೆ ಅಕ್ಕರೆ ಹೆಚ್ಚಿತ್ತು. ಹೀಗೆ, ಕಡೆಯ ಬೆಂಚ್‌ ಬದುಕಿನ ಮೊದಲಿಗೆ ಕಾರಣವಾಗಿರುವಾಗ, ಶಿಕ್ಷೆಕೊಡುವ ಬೆಂಚ್‌ ಹೇಗೆ ಆಗುತ್ತದೆ? ಲಾಸ್ಟ್‌ ಬೆಂಚಿನಲ್ಲಿ ಕುಳಿತವರೆಲ್ಲರೂ ಕೆಟ್ಟವರೇನಾ? ಸಂಸ್ಕಾರ ಇಲ್ಲದೆ ದೊಂಬಿ, ಗಲಾಟೆ ಮಾಡುವವರೇನಾ? ನೋ, ನೆವರ್‌. ನಮ್ಮವರು MBBS ಹುಡುಗರು. ಅಂದರೆ, MASTER OF BACK BENCH STUDENTS ಅವರು ನಿಜಕ್ಕೂ ಮಾಸ್ಟರ್‌ಗಳೇ. ಆದರೆ, ನಮ್ಮ ಶಿಕ್ಷಕರಿಗೆ ಏಕೋ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಯಾರೇ ಕಿರಿಕ್‌ ಮಾಡಿದರೂ ಕೊನೆಬೆಂಚ್‌ಗೆ ಎತ್ತು ಎಸೆಯುತ್ತಾರೆ.

ಪ್ರೀತಿ ಅರಳ್ಳೋದು, ಕೋಪ ಶಮನವಾಗುವುದು, ತಪ್ಪಿನ ಅರಿವಾಗೋದು, ಬದುಕಿನ ಮನ್ವಂತರ ಶುರುವಾಗುವುದು ಮೊದಲ ಬೆಂಚ್‌ನಿಂದಲ್ಲ, ನನ್ನಿಂದಲೇ. ಇವತ್ತು ನನ್ನ ಎದೆಯ ಮೇಲೆ ನೂರಾರು ಹುಡುಗ, ಹುಡುಗಿಯರು ಗೀಚಿದ ಸಾಲುಗಳು ನನ್ನೊಂದಿಗೆ ಬಿಕ್ಕುತ್ತಿವೆ. ಆವತ್ತಿನ ಪ್ರತಿ ಕ್ಷಣದ ಮಾತು, ಮುನಿಸು, ಸಂತೋಷಗಳನ್ನು ಹಂಚಿಕೊಂಡವರು ಇಂದು ಬದುಕಿನ ಯಾವ ತಿರುವಿನಲ್ಲಿ ಇದ್ದಾರೋ ನನ್ನ ಮಡಿಲಿನಲ್ಲಿ ಕಲೆತವರು ಅದೆಷ್ಟೋ ಜನ. ಅವರ ಕಾಲೇಜು ದಿನಗಳ ನೆನಪಿನ ಗುಂಗಿನಲ್ಲಿಯೇ ನಾನು ಯೌವ್ವನಕ್ಕೆ ಜಾರಿಬಿಡುತ್ತೇನೆ. ಕಾಲೇಜಿಗೆ ಆಗತಾನೆ ಬಂದು ಸೇರಿದಾಗ ನಾನು ಮೊದಲ ಸಾಲಿನ ಬೆಂಚೇ ಆಗಿದ್ದೆ. ಯಾವುದೋ ಕಾರ್ಯಕ್ರಮದ ನೆಪದಲ್ಲಿ ಹಿಂದಕ್ಕೆ ತಳ್ಳಿದರು, ಅಂದಿನಿಂದ ನನ್ನ ಸ್ಥಾನ ಕೊನೆಯದ್ದಾಯಿತು. ಹಿಂದಿನ ಸಾಲಿನ ಹುಡುಗರುಎಂದರೆ ನಮಗೇನೇನೂ ಭಯವಿಲ್ಲ!

ನಮ್ಮಿಂದಾಗದು ಶಾಲೆಗೆ ತೊಂದರೆ; ನಮಗೆಂದೆಂದೂ ಜಯವಿಲ್ಲ! ಲಾಸ್ಟ್‌ ಬೆಂಚ್‌ ಹುಡುಗರು ಅಂದುಕೊಂಡಾಗೆಲ್ಲಾ ಪದೇ  ಪದೆ ಕೆಎಸ್‌ನರ ಪದ್ಯದ ಸಾಲುಗಳು ನೆನಪಾಗುತ್ತಲೇ ಇರುತ್ತವೆ.ಫ‌ಸ್ಟ್‌ ಬೆಂಚ್‌ಗೆ ಸಿಗದ ಪ್ರೀತಿ ನನಗೆ ಸಿಕ್ಕ ಬಗೆಗೆ ಹೆಮ್ಮೆ ಇದೆ. ಅದು ರ್‍ಯಾಂಕ್‌ಹುಡುಗರನ್ನು ತಯಾರು ಮಾಡುವ ಕಾರ್ಖಾನೆ ಅನ್ನೋ ಗೌವರವಿದೆ. ಆದರೇನು, ಬದುಕಲ್ಲಿ ರ್‍ಯಾಂಕು ಸಿಗಬೇಕಲ್ಲ; ಅದು ಸಿಗುವುದು ಕೊನೆಯ ಬೆಂಚ್‌ನಲ್ಲಿ.ಹೀಗಾಗಿ, ಕೊನೆ ಬೆಂಚ್‌ ಅಂದರೆ ಹುಡುಗ, ಹುಡುಗೀರಿಗೆ ಎಲ್ಲಿಲ್ಲದ ಪ್ರೀತಿ. ಹಾಗಾಗಿ, ಆ ಹಸಿ ಪ್ರೀತಿ, ಪಿಸುಮಾತಿನವಿರಹ ವೇದನೆಯ ಕೆತ್ತನೆ ನನ್ನ ಕೆನ್ನೆಯ ಮೇಲಿದೆ. ಇಷ್ಟದ ಲೆಕ್ಚರರ್‌ ಮುಖದ ವಕ್ರ ಚಿತ್ರವಿದೆ. ಇಷ್ಟವಿರದ, ಲೆಕ್ಚರರ್‌ನ ಸೊಟ್ಟ ಮೂಗಿನ ಮುಖಭಾವದ ಕೆತ್ತನೆ ನನ್ನ ಬೆನ್ನ ಮೇಲೆ, ಜೀವನದಲ್ಲಿ ಮೊದಲಬಾರಿಗೆ ಬರೆದ ಪ್ರೇಮ ಪತ್ರದ ಒಕ್ಕಣಿಕೆಗಳಿಗೆ ನಾನೇ ಸಾಕ್ಷಿ. ಕನಸಿನಲ್ಲಿ ಕಂಡ ಚೆಲುವೆಯ ಬಿಸಿಉಸಿರಿನ ಮಿಡಿತಗಳು ನನ್ನ ಕಿವಿಯಲ್ಲಿವೆ. ಅಚ್ಚು ಮೆಚ್ಚಿನ ಹುಡುಗಿಯ ಹೆಸರಿನ ಮೊದಲ ಅಕ್ಷರದ ಚಿತ್ತಾರವಿದೆ.

ಕಂಪಾಸು ಸೂಜಿಯ ಮೊಳೆಯಿಂದ ಕೆತ್ತಿದ ಆತ್ಮೀಯ ಗೆಳೆಯನ ನೆಚ್ಚಿನ ಸಾಲುಗಳಿವೆ. ಪರೀಕ್ಷೆಯ ಕಾಲದ ಆಪದಾಪ್ಭಾಂಧವನಂತಿರುವ ಗಣಿತದ ಸೂತ್ರಗಳು, ವಿಜ್ಞಾನದ ಫಾರ್ಮುಲಾಗಳಿವೆ, ಇತಿಹಾಸದ ದಂಡೆಯಾತ್ರಯ ದಿನಾಂಕಗಳಿವೆ, ಅವಸರದಲ್ಲಿ ಬರೆದ ಕನ್ನಡ ಕತೆಗಳು, ಭೂಗೋಳದ ಜ್ಯಾಮಿತಿಗಳು, ಭೂಮಿ ಚಲನೆಯ ಒಳದಾರಿಗಳಿರುವುದು ಈ ಕೊನೆ ಬೆಂಚ್‌ನಲ್ಲಿ. ನೀರಿನ ಜೋರಿಗೆ ತೇಲದು ಬಂಡೆ;ಅಂತೆಯೆ ನಾವೀ ತರಗತಿಗೆ! ಪರೀಕ್ಷೆ ಎಂದರೆ ಹೂವಿನ ಚೆಂಡೆ? – ಚಿಂತಿಸಬಾರದು ದುರ್ಗತಿಗೆ. ಕಡೇ ಬೆಂಚಿನ ಹುಡುಗರು ಬದುಕುವುದನ್ನು ಕಲಿತಿರುತ್ತಾರೆ. ಏನೇ ಬಂದರೂ ಹೆದರುವುದಿಲ್ಲ. ಮೊದಲ ಬೆಂಚಿನ ವಿದ್ಯಾರ್ಥಿಗಳು ಹೀಗಿಲ್ಲ. ಎಷ್ಟೋ ನಪಾಸಾಗುವ ವಿದ್ಯಾರ್ಥಿಗಳನ್ನು ಮೆಲ್ಲಗೆ ಪರೀಕ್ಷೆಯ ಸಾಗರ ದಾಟಿಸಿದ ಖುಷಿ ನನಗಿದೆ. ಇವೆಲ್ಲ, ಮೊದಲ ಬೆಂಚಿಗೆ ಸಾಧ್ಯವೇ? ಆದರೂ, ನಾನೂ ಮೊದಲ ಸಾಲಲ್ಲಿ ಇರಬೇಕು ಅನ್ನೋ ಹೊಟ್ಟೆ ಕಿಚ್ಚು ಇಲ್ಲ ಅಂತಿಲ್ಲ. ಇವೆಲ್ಲ ನೆನಪಾದಾಗ ಅದು ಕಡಿಮೆಯಾಗುತ್ತದೆ. ಇವಿಷ್ಟೇ ಅಲ್ಲ, ಕನ್ನಡ ವ್ಯಾಕರಣದ ಸಂದಿಗೊಂದಿಯಲ್ಲಿ ಸಿಕ್ಕಿ ಹಾಕಿಕೊಂಡ ಸಮಾಸಗಳನ್ನು ರಕ್ಷಿಸಿದ್ದೇನೆ, ಲೆಕ್ಚರರ್‌ ನೀಡುವ ಶಿಕ್ಷೆಯಲ್ಲಿ ನನ್ನನ್ನು ಪಾಲುದಾರರನ್ನಾಗಿ ಮಾಡಿದ್ದಾರೆ.

ಇವುಗಳು ಪ್ರತಿ ವರ್ಷದ ಬಳುವಳಿಗಳು. ಅವಳಿಗಾಗಿ ತಂದ ಗುಲಾಬಿ ಹೂ ಅವಳ ಕುಡಿ ನೋಟವನ್ನು ಎದುರಿಸಲಾಗದೆ ನನ್ನೊಳಗೆ ಇಟ್ಟು ಮರೆತು ಹೋದ ಪ್ರೇಮಿಗಳಿಗೆ ಲೆಕ್ಕವಿಲ್ಲ. ಅವಳ ನೆನಪಿನಲ್ಲಿ ಚಂದದ ಚಿತ್ರ ಕೆತ್ತಿದ ಹುಡುಗರಿಗೆ, ನಾನು ಇವತ್ತು ಜ್ಞಾಪಕಕ್ಕೇ ಇಲ್ಲ. ಕಾಲೇಜು ದಿನಗಳ ನೋವು, ಹತಾಶೆ, ಭಯ, ನಗು, ನಲಿವು ಎಲ್ಲವೂ ನನ್ನೊಳಗಿನ ಭಾವಕೋಶದಲ್ಲಿ ಬಂದಿಯಾಗಿವೆ. ನೆನಪಾದಾಗೆಲ್ಲ ನನ್ನ ವಯಸ್ಸು ಇಳಿಯುತ್ತಾ ಹೋಗುತ್ತದೆ. ಏನು ಮಾಡಲಿ? ಕಾಲೇಜು ಬಿಟ್ಟು ಹೋಗುವ ನನ್ನ ಮೈಯಮೇಲೆ ಕೈಯಾಡಿಸಿ ಕಣ್ಣ ಹನಿ ಹಂಚಿದವರ ನೆನಪು ಮರೆಯಲಾಗುತ್ತಿಲ್ಲ. ಆತ್ಮೀಯಭಾವದ ಕೊಂಡಿಯ ತಂತೊಂದು ಕಾಲೇಜಿನ ನೆನಪಿನೊಂದಿಗೆ ಬೆಸೆದುಕೊಂಡಿದೆ.

ಅದರಲ್ಲಿ ಕೊನೆ ಬೆಂಚ್‌ ಸ್ಮತಿಪಟಲದಲ್ಲಿ ಹಾಗೇ ಇರುತ್ತದೆ. ಮೊನ್ನೆ ನಮ್ಮ ಕಾಲೇಜಿನ ಕೊನೆ ಬೆಂಚಿನ ಹುಡುಗರೆಲ್ಲ ಸೇರಿ ವಾಟ್ಸಾಪ್‌ ಗ್ರೂಪ್‌ ಮಾಡಿದ್ದಾರೆ. ಅದರ ಹೆಸರೂ ಕೊನೆ ಬೆಂಚಿನ ಹುಡುಗರುಅಂತ. ಅದರಲ್ಲಿ ನನ್ನ ಫೋಟೋ ಇದೆ. ಇತ್ತೀಚೆಗೆ ಖಾಸಗಿ ಶಾಲೆಗಳಲ್ಲಿ ನನಗೆ ಗೌರವ ದಕ್ಕುತ್ತಿದೆ. ಏಕೆಂದರೆ, ಅಲ್ಲಿ ಲಾಸ್ಟ್‌ ಬೆಂಚ್‌ಅಂತೇನೂ ಇಲ್ಲ. ವಿದ್ಯಾರ್ಥಿಗಳ ಎತ್ತರದ ಆಧಾರದ ಮೇಲೆ ಬೆಂಚ್‌ಗಳನ್ನು ಹಂಚುತ್ತಿದ್ದಾರೆ. ಹೈಟ್‌ ಜಾಸ್ತಿ ಇದ್ದರೆ ಹಿಂದಿನ ಬೆಂಚ್‌ನಲ್ಲಿ ಕೂಡಿಸುತ್ತಿದ್ದಾರಂತೆ. ಹೀಗಾಗಿ, ಬುದ್ಧಿವಂತರೂ ಕೂಡ ಕೊನೆ ಬೆಂಚಿನ ಸ್ನೇಹ ಮಾಡುತ್ತಿದ್ದಾರೆ ಅನ್ನೋದು ಖುಷಿಯ ವಿಷಯ. ಇಷ್ಟೆಲ್ಲಾ ನೆನಪು ಕಟ್ಟಿಕೊಟ್ಟ ನನಗೂ ವಿದಾಯದ ದಿನವಿದೆ. ಈ ಎಲ್ಲ ಹಚ್ಚ ಹಸಿರ ನೆನಪುಗಳೊಂದಿಗೆ ನಾನೂ ಒಂದು ದಿನ ಅಟ್ಟ ಸೇರುತ್ತೇನೆ. ಇಲ್ಲವೆ ಸುಟ್ಟು ಹೋಗುತ್ತೇನೆ ಅಥವಾ ಗೆದ್ದಲು ಹಿಡಿದಾಗ ಬದುಕು ಕೊನೆಯಾಗುತ್ತದೆ. ಆದರೆ, ನಾನು ಬದುಕಿರು ವುದು ಪ್ರತಿ ವಿದ್ಯಾರ್ಥಿಗಳ ಕೊನೆಯ ಬೆಂಚ್‌ ಅನ್ನೋ ನೆನಪಲ್ಲಿ.

 

ವೃಶ್ಚಿಕ ಮುನಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ