ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ

ಬೇಡ ಎನ್ನದ ಮಹಾನಗರ...ಬಾ ಎನ್ನದ ನನ್ನೂರು !

Team Udayavani, Sep 24, 2019, 5:14 AM IST

ಮಹಾನಗರಗಳು ಯುವಕರನ್ನು ಹಾಗೇ ಸೆಳೆಯುತ್ತದೆ. ಆದರೆ, ಒಳಗೆ ಹೋದರೆ ಚಕ್ರವ್ಯೂಹ. ಯಾಂತ್ರಿಕ ಜೀವನಕ್ಕೆ ಬೇಸತ್ತು ಮತ್ತೆ ಊರಿಗೆ ಹೋಗೋಣ ಅಂತ ತೀರ್ಮಾನ ಮಾಡಿದರೆ ಅತ್ತ ಅಲ್ಲಿ ಎಲ್ಲವೂ ಬದಲು, ಆಯೋಮಯ. ಸಾಕಪ್ಪಾ ಸಾಕು ಈ ಸಿಟಿ ಸವಾಸ ಅಂತ ಹೇಳುತ್ತಲೇ ಅಲ್ಲೇ ಬದುಕು ಸವೆಸಬೇಕೆ ಹೊರತು, ಮತ್ತೆ ಊರ ಸೇರಲು ದಾರಿಗಳಿದ್ದರೂ ಮನಸ್ಸು ಇರೋಲ್ಲ. ಇಂದಿನ ಯುವಕರಲ್ಲಿ ಊರಿಗೆ ಹೋಗಬೇಕಾ, ಇಲ್ಲೇ ಇರಬೇಕ? ಅನ್ನೊ ದೊಡ್ಡ ಗೊಂದಲವೇ ಏರ್ಪಟ್ಟಿದೆ.

“ನಿಮ್ಮ ಮಗ ಯಾವ ಏರಿಯಾದಲ್ಲಿ ಇರೋದು ? ‘
“ಇವ್ದೆನಾ ಬೆಂಗಳೂರಲ್ಲಿ ಇರೋದು ? ಯಾವ ಕಂಪನಿಲಿ ಕೆಲ್ಸ ?’
“ಅಲ್ರಿ , ಮಗಳು ಬೆಂಗಳೂರಲ್ಲೇ ಕೆಲಸ ಮಾಡ್ಕೊಂಡ್‌ ಇದ್ರೆ , ಮದ್ವೆ ಯಾವಾಗ್‌ ಮಾಡ್ತೀರ
? ವಯಸ್ಸಾಯ್ತು ಅಲ್ವ ಅವ್ಳಿಗೆ ? ‘
“ಅಯ್ಯೋ, ನೆಟ್ಟಗೆ ನೆಟ್‌ ವರ್ಕ್‌ ಸಿಗ್ದಿರೋ ಈ ಊರಲ್ಲಿ ಏನ್‌ ಮಾಡ್ತೀರ ? ಸುಮ್ನೆ
ನಗರದಲ್ಲಿರೋ ಮಗನ ಮನೆಗೆ ಹೋಗಿದಿºಡಿ’

ಹಳ್ಳಿಗೆ ಹೋದರೆ ಇಂಥ ಹತ್ತಾರು ಮಾತುಗಳು ಈಗೀಗ ಕಿವಿಗೆ ಬೀಳುವುದು ಸರ್ವೇಸಾಮಾನ್ಯ. ಬಹುತೇಕ ಇಡೀ ರಾಜ್ಯದ ಎಲ್ಲಾ ಹಳ್ಳಿಗಳಿಂದ ಯುವಕರು ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಮಂಗಳೂರುಗಳಂಥ ಮಹಾನಗರಗಳಿಗೆ ಬದುಕು ಕಟ್ಟಿಕೊಳ್ಳಲು ಬಂದವರಿದ್ದಾರೆ. ಅದರಲ್ಲೂ ಬೆಂಗಳೂರು ಇದಕ್ಕೆ ರಾಜಧಾನಿ. ಹಾಗೆ ಇಲ್ಲದಿರುವ ಹಳ್ಳಿಗಳೇನಾದರೂ ಇದ್ದರೆ ಅವುಗಳು ವಿಶೇಷವಾದ ಅಧ್ಯಯನಕ್ಕೆ ಅರ್ಹವಾಗಿವೆ ಎಂದೇ ಅರ್ಥ. ಈ ನಗರಗಳೂ ಅಷ್ಟೇ. ಬೇಡ ಎನ್ನುವುದನ್ನೇ ಕಲಿತಿಲ್ಲ. ಎಲ್ಲರನ್ನೂ ಸ್ವಾಗತಿಸುತ್ತವೆ. ಅದರಲ್ಲೂ ಬೆಂಗಳೂರಿಗೆ ಬಂದಿಳಿದವರಲ್ಲಿ ಎಲ್ಲಾ ವರ್ಗದವರೂ, ಜಾತಿಯವರೂ, ಧರ್ಮದವರೂ ಇದ್ದಾರೆ.

ಹಾಗೆ ಬಂದು ಹೀಗೆ ಹೋದವರು …
“ಪ್ಯಾಟೆ ನೋಡೋಕ್‌ ಚೆಂದ, ಹಳ್ಳಿ ಬದ್ಕೋಕ್‌ ಚೆಂದ ‘ ಎಂಬ ಕ್ಲೀಷೆಗೊಳಗಾದ ಗಾದೆಯನ್ನು ಧಿಕ್ಕರಿಸಿ, ಪ್ಯಾಟೆಯ ಮೇಲಿನ ಫ್ಯಾಸಿನೇಶನ್‌ ನಿಂದಾಗಿ ಇಲ್ಲಿಗೆ ಬಂದು, ಎಂಥೆಂಥದೋ ಕೆಲಸಗಳನ್ನು ಮಾಡಿಕೊಂಡಿದ್ದು, ಇಲ್ಲಿನ ರೂಂ ರೆಂಟ್‌, ಕರೆಂಟ್‌ ಬಿಲ…, ವಾರ್ಟ್‌ ಬಿಲ…, ಪಾರ್ಕಿಂಗ್‌ ಚಾರ್ಜ್‌, ಸಿಲಿಂಡರ್‌ ಬಿಲ…, ಬಸ್‌ ಪಾಸ್‌, ಮುಂತಾದವುಗಳನ್ನೆಲ್ಲ ನ್ಯಾಯಯುತವಾಗಿ ನಿಭಾಯಿಸಿ ,ಕೊನೆಗೆ ತಮ್ಮ ಬ್ಯಾಲೆನ್ಸ್‌ ಶೀಟ್‌ ನೋಡಿಕೊಂಡು “ಇಲ್ಲಿದ್ದು ಏನೂ ಉಳಿಸಕಾಗ್ತಿಲ್ಲ ಅಂದಮೇಲೆ ಇಲ್ಯಾಕೆ ಇಬೇìಕು? ನಮ್ಮೂರೆ ನಮಗೆ ಸವಿಬೆಲ್ಲ’ ಎಂದರಿತು, ಹೆಗಲಿಗೆ ಬ್ಯಾಗ್‌ ಏರಿಸಿಕೊಂಡು ಹೊರಟು ಹೋಗಿದ್ದಾರೆ.

ಆದರೆ ಒಂದಷ್ಟು ವರ್ಷ ಇಲ್ಲಿ ನೆಲೆ ನಿಂತವರಿಗೆ ಇಂತಹ ನಿರ್ಧಾರ ಕಷ್ಟಸಾಧ್ಯ. ಅವರದ್ದು “ಇಲ್ಲಿರಲಾರೆ;ಅಲ್ಲಿಗೆ ಹೋಗಲಾರೆ’ ಎಂಬಂಥ ಅಯೋಮಯ ಸ್ಥಿತಿ. ಹತ್ತಾರು ವರ್ಷಗಳು ಕಳೆದರೂ ಬೆಂಗಳೂರು ಅವರದ್ದಾಗಿರುವುದಿಲ್ಲ. “ಯಾವ ಊರು ನಿಮ್ಮದು ?’ ಎಂದರೆ, ತಂತಮ್ಮ ಜಿಲ್ಲೇಯದ್ದೋ, ತಾಲ್ಲೂಕಿನದ್ದೋ ಅಥವಾ ಯಾರೋ ತಮ್ಮ ಸ್ಥಳದ ಜನಪ್ರಿಯ ರಾಜಕಾರಣಿಯದ್ದೋ ಮೂಲಕ ಐಡೆಂಟಿಟಿ ಹೇಳಿಕೊಳ್ಳುವ ಇವರನ್ನು ಬೆಂಗಳೂರಂಥ ಮಹಾನಗರ ವೃಥಾ ಸಾಕುತ್ತಲೇ ಇರುತ್ತದೆ. ತಮ್ಮ ಮಕ್ಕಳು ಕೂಡ ತಮ್ಮದು ಬೆಂಗಳೂರು ಎಂದು ಹೇಳಿಕೊಳ್ಳಬಾರದೆಂಬುದು ಇವರ ಅಭಿಲಾಷೆ. ಹಾಗಾಗಿಯೇ, ಮೂಲ ಬೆಂಗಳೂರಿಗರಾದ ತಮ್ಮ ಸ್ನೇಹಿತ ವಲಯದವರಿಂದ ಆಗಾಗ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ ಕೂಡ. ಶರಾವತಿ ಮತ್ತು ಕಾವೇರಿ ನೀರನ್ನು ಬೆಂಗಳೂರಿಗೆ ತರಬೇಕೆಂದು ಹೊರಟಾಗ ಬೆಂಗಳೂರಿನಲ್ಲಿರುವ ಮಲೆನಾಡಿಗರು ಅಥವಾ ಮಂಡ್ಯದವರು ವಿರೋಧ ವ್ಯಕ್ತಪಡಿಸಿದರೆ ಆಗ ; ಅಲ್ಲಿಂದ ಬಂದು ಇಲ್ಲಿ ಉಳಿದಿರೋರಿಗೆಲ್ಲ ನೀರನ್ನು ಮತ್ತೆಲ್ಲಿಂದ ತಂದುಕೊಡಬೇಕು ? ಎಂದವರು ಪ್ರಶ್ನಿಸಿದಾಗ ನಾವೆಂಥ ಇಬ್ಬಂದಿತನದಲ್ಲಿದ್ದೇವೆ ಎಂಬ ಅರಿವಾಗುತ್ತದೆ.

ಸಾಕಪ್ಪ ಸಾಕು, ಈ ನಗರ ಬಿಟ್ಟೋ ಹೋಗಿಬಿಡ್ತೀನಿ ಎನ್ನುತ್ತಲೇ ಬಿಡಲಾಗದವರು “ಅಯ್ಯೋ ಇಲ್ಯಾರು ಪರ್ಮನೆಂಟ್‌ ಆಗಿ ಇರ್ತಾರೆ ? ಇಂದಲ್ಲ ನಾಳೆ ನಾನೇನಿದ್ದರೂ ನಮ್ಮೂರಿಗೇ ಹೋಗುವವನು’ ಎನ್ನುವ ಉದ್ಘಾರ ತೆಗೆಯುವವರೇ ಹೆಚ್ಚು. ಹಾಗೆ ಅವರು ಹೇಳುತ್ತಲೇ ಹತ್ತಾರು ವರ್ಷಗಳಾಗಿರುತ್ತವೆ ಎಂಬುದು ಬೇರೆ ಮಾತು. ಹಾಗಂತ, ಅವರೇನು ತಮ್ಮೂರಿಗೆ ವಾಪಸ್‌ ಹೋಗುವ ಪ್ರಯತ್ನವನ್ನು ಮಾಡಿಯೇ ಇರುವುದಿಲ್ಲ ಎಂದಲ್ಲ. ಅನೇಕರು ಪ್ರಾಮಾಣಿಕವಾಗಿ ಹಿಂತಿರುಗಲು ಯತ್ನಿಸಿ ಸೋತಿದ್ದಾರೆ.

ಹಳ್ಳಿಗಳಲ್ಲಿ ಸಾಮಾಜಿಕ ಚಲನೆ
ನಗರದಷ್ಟು ವೇಗದಲ್ಲಿ ಇಲ್ಲದಿರಬಹುದು. ಆದರೆ, ಹಳ್ಳಿ ಮತ್ತು ಸಣ್ಣ ಸಣ್ಣ ಪಟ್ಟಣಗಳು ಪ್ರತಿನಿತ್ಯ ಬದಲಾಗುತ್ತಲೇ ಇರುತ್ತವೆ. ನಾವು ಬಿಟ್ಟು ಬಂದಾಗ ಇದ್ದ ಊರು, ಮತ್ತೆ ಹೊರಡಲು ಅನುವಾದಾಗ ಹಾಗೆಯೇ ಇರುವುದಿಲ್ಲ. ಸಾಕಷ್ಟು ಬದಲಾವಣೆ ಆಗಿರುತ್ತದೆ. ಕೂಡಿದ್ದ ಮನೆಯ ಆಸ್ತಿ ಭಾಗವಾಗಿರುತ್ತದೆ. ಒಂದು ಮನೆ ಮೂರಾಗಿ ಬದಲಾಗಿರುತ್ತದೆ. ಅಪ್ಪನ ಪಾಲಿಗೆ ಬಂದ ಆಸ್ತಿಯೂ ದೊಡ್ಡ ಪ್ರಮಾಣದ್ದು ಅನ್ನಿಸುವುದಿಲ್ಲ. ಜೊತೆಯಲ್ಲಿ ಓದಿದ ಅಥವಾ ಓದದ ಗೆಳೆಯರೆಲ್ಲರೂ ತಮ್ಮ ಶಕಾöನುಸಾರ ಒಂದೊಂದು ನೆಲೆ ಕಂಡುಕೊಂಡಿದ್ದಾರೆ.

ತಮ್ಮದೇ ಆದ ಒಂದು ಜೀವನ ಶೈಲಿಯನ್ನು ರೂಢಿಸಿಕೊಂಡಿರುತ್ತಾರೆ. ಗ್ರಾಮೀಣ ಅರ್ಥವ್ಯವಸ್ಥೆಗೆ ಅನುಗುಣವಾದ ಒಂದು ಆರ್ಥಿಕ ಶಿಸ್ತು ಅವರಿಗೆ ಮೈಗೂಡಿರುತ್ತದೆ. ಇತ್ತ ಬೆಂಗಳೂರೆಂಬ ಕನಸುಗಳ ನಗರದಲ್ಲಿ ಕೆಲ ವರ್ಷಗಳ ವಾಸ ನಮ್ಮನ್ನು ಸಾಕಷ್ಟು ಮೃದುವಾಗಿಯೂ, ಸೊಫೆಸ್ಟಿಕೇಟೆಡ್‌ ಆಗಿಯೂ ಮಾಡಿಬಿಟ್ಟಿರುತ್ತದೆ. ಪ್ರತಿಯೊಬ್ಬ ಹಳ್ಳಿಗನೂ ಹೀಗೆ ಊರುಬಿಟ್ಟು ಮಹಾನಗರ ಸೇರಿದವನ ಬಗ್ಗೆ ಏನೋ ಅನುಮಾನವನ್ನು ಇಟ್ಟುಕೊಂಡೇ ಇರುತ್ತಾನೆ. ಪ್ರತಿ ಬಾರಿ ಊರಿಗೆ ಹೋದಾಗಲೂ ನಮ್ಮ ವೃತ್ತಿ, ವೇತನ, ಮನೆ ಇರುವ ಸ್ಥಳ , ಅದರ ಬಾಡಿಗೆ ಎಲ್ಲವನ್ನೂ ಪುನಃ ಪುನಃ ಕೇಳಿ ಖಾತರಿಪಡಿಸಿಕೊಳ್ಳುತ್ತಾನೆ. ಕೆಲವೊಮ್ಮೆ ತನ್ನ ನೇರ ಪ್ರಶ್ನೆಗಳಿಂದ ನಮ್ಮನ್ನು ಮುಜಗರಕ್ಕೂ ಈಡು ಮಾಡುತ್ತಾನೆ. ಅಂಥವನ ಎದುರು ಮತ್ತೆ ಅಲ್ಲಿಗೆ ಹೋಗಿ ಕಾಲ ಹಾಕಲಾದೀತೆ ? ಈ ನಗರದಲ್ಲೋ ತಾನು ಎಂಥದ್ದೋ ಒಂದು ಜೀವನ ನಡೆಸಿಕೊಂಡು ಹೋಗಬಹುದು. ಅಕ್ಕಪಕ್ಕದವರಾಗಲೀ, ಗೆಳೆಯರಾಗಲೀ ಆ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಾರರು. ಆದರೆ ಹಳ್ಳಿಗಳು ಹಾಗಲ್ಲ. ಸಾಕುಸಾಕು ಮಾಡಿಬಿಡುತ್ತವೆ.
ಅದರಲ್ಲೂ ಹಿಂದೆ ಸಹಪಾಠಿಗಳಾಗಿದ್ದವರು ಊರಿಗೆ ಬಂದಾಗ ತನಗಿಂತ ಹೆಚ್ಚಿನ ಅಂತಸ್ತನ್ನು ಗಳಿಸಿದ್ದ ಅಂತಿಟ್ಟುಕೊಳ್ಳಿ. ಆಗ ನಗರ ಬಿಟ್ಟು ಹೋದವನು ಅವನೊಟ್ಟಿಗೆ ಬೆರೆಯಲು ಸಾಧ್ಯವೇ? ಇಬ್ಬರ ಮನೋಸ್ಥಿತಿ ಹೇಗಿರಬಹುದು?

ಇಪ್ಪತ್ನಾಲ್ಕು ತಾಸು ವಿದ್ಯುತ್‌, ವಾರಕ್ಕೊಮ್ಮೆ ರೆಸ್ಟೋರೆಂಟ್‌ ಊಟ, ಮಾಲ್‌ ನಲ್ಲಿ ಶಾಪಿಂಗ್‌ ಮತ್ತು ಸಿನಿಮಾ , ಕೂಗಿದೊಡನೆ ಬರುವ ಆಟೋ , ಓಲಾ , ಊರ್ಬ, ಸ್ವಿಗ್ಗಿ- ಜೊಮಾಟೋ ದ ಡೆಲಿವರಿ ಬಾಯ…, ಲೇಟ್‌ ನೈಟ್‌ ಪಾರ್ಟಿಗಳು, ಟೀಮ್‌ ಔಟಿಂಗ್‌ ಗಳು – ಇವೇ ಮುಂತಾದವಕ್ಕೆ ಒಗ್ಗಿಹೋದ ಜೀವ ನನ್ನೂರಿನ ಹಳ್ಳಿ ಜೀವನಕ್ಕೆ ಈಗ ಹೊಂದಿಕೊಂಡೀತಾದರೂ ಹೇಗೆ ? ಅಷ್ಟಕ್ಕೂ ಅಲ್ಲಿ ಹೋಗಿ ಮಾಡುವುದೇನು ಎಂಬುದು ಮತ್ತೂಂದು ಪ್ರಶ್ನೆ. ಹೆಸರಿಗೆ ರೈತನ ಮಗನಾಗಿದ್ದರೂ ” ಓದು’ವ ನೆಪದಲ್ಲಿ ಕೃಷಿಯನ್ನೂ ಸರಿಯಾಗಿ ಕಲಿಯಲಿಲ್ಲ. ಓರಗೆಯವರ ಜೊತೆ ಇಷ್ಟು ವರ್ಷಗಳ ನಂತರ ಗದ್ದೆಗೆ ಇಳಿಯಲು ಅದ್ಯಾವುದೋ ಹಿಂಜರಿಕೆ. ಜೊತೆಗೆ ಕೃಷಿಯನ್ನು ಲಾಭದಾಯಕವಾಗಿ ಮಾಡಬಲ್ಲಷ್ಟು ಭೂಮಿಯೂ ಅನೇಕಬಾರಿ ಇರುವುದಿಲ್ಲ. ಹಾಗಾಗಿ, ಊರಿಗೆ ವಾಪಸ್‌ ಹೋಗಿ ಬಿಡ್ತೀನಿ ಎಂಬುದು ಬೆಂಗಳೂರಲ್ಲಿ ಇದ್ದರೂ ನಾನೇನೋ ಮಹತ್ತರವಾದುದನ್ನು ಸಾಧಿಸಲಾಗುತ್ತಿಲ್ಲ ಎಂಬುದರ ಫ‌ಲಿತಾಂಶವೇ ಹೊರತು, ಹಳ್ಳಿಗೆ ಹಿಂತಿರುಗಬೇಕೆಂಬ ನೈಜವಾದ ಒತ್ತಾಸೆಯಲ್ಲ. ಹಾಗಾಗಿಯೇ ಅದು ಆಗಾಗ ಪುಟಿದೆದ್ದು ತಕ್ಷಣ ಮಕಾಡೆ ಮಲಗುವ ಒಂದು ಯೋಜನೆಯಷ್ಟೇ. ಹೀಗೆ, ಒಂದು ಪಕ್ಷ ಊರಿಗೆ ಹಿಂತಿರುಗಿದರೆ “ಅಯ್ಯೋ ಬೆಂಗಳೂರಲ್ಲಿ ಪಾಪರ್‌ ಆಗಿ ಊರು ಸೇರಿದವನು’ ಎಂಬ ಬಿರುದು ಅನಾಯಾಸವಾಗಿ ಬಂದುಬಿಡುತ್ತದೆ.

ಇಲ್ಲಿಂದ ನೀವು, ಅಲ್ಲಿಂದ ಅವರು
ಯಾಕೊ ಈ ನಗರ ಸಾಕಪ್ಪಾ ಅನ್ನಿಸಿರುತ್ತದೆ. ಇದೊಂದು ಅವಿರತ, ಆಯಾಸಮಯವಾದ ಜೀವನ ಎನಿಸತೊಡಗಿರುತ್ತದೆ. ಊರಿಗೆ ಹೋಗಿ, ಇರುವ ಐದಾರು ಎಕರೆ ಜಮೀನಿನಲ್ಲಿ ಆಧುನಿಕ ಕೃಷಿಯನ್ನೋ, ಜೊತೆಗೆ ಊರಲ್ಲೊಂದು ಸಣ್ಣ ವ್ಯಾಪಾರವನ್ನೋ ಪ್ರಾರಂಭಿಸೋಣ ಎಂದೆನ್ನಿಸುತ್ತಿರುತ್ತದೆ. ಬಾಲ್ಯದ ಬದುಕು ಕಣ್ಣ ಮುಂದೆ ಬಂದು, ಮತ್ತಷ್ಟು ಪ್ರಚೋದಿಸುತ್ತದೆ. ಅಪ್ಪನಿಗೆ ಆ ವಿಷಯ ತಿಳಿಸಲೆಂದು ಕಾಲ್‌ ಮಾಡುತ್ತಾನೆ. ಆದರೆ, ಇವನು ಹೇಳಲು ಹಿಂಜರಿಯುತ್ತಿದ್ದರೆ ಆ ಕಡೆಯಿಂದ ಅಪ್ಪ ಹೇಳುತ್ತಾನೆ ; ಇಡೀ ಜೀವನ ಇಲ್ಲೇ ಅಂಟಿಕೊಂಡಿ¨ªಾಯಿತು. ನಮಗೂ ವಯಸ್ಸಾಯಿತು. ಇದನ್ನೆಲ್ಲ ಮಾರಿ ನಿನ್ನ ಬಳಿ ಬಂದುಬಿಡುತ್ತೇವೆ . ಆ ಹಣವನ್ನು ನಿನಗೇ ಕೊಡುತ್ತೇನೆ. ಅಲ್ಲೊಂದು ಮನೆ ಕೊಳ್ಳಲು ಪ್ರಯತ್ನಿಸು. ಈ ಬಗ್ಗೆ ಯೋಚಿಸಿ ಯಾವುದಕ್ಕೂ ತಿಳಿಸು… .

ಯಾವಾಗ ನನ್ನೂರಿನ ಬಾಗಿಲು ನನಗೆ ಮುಚ್ಚಿದೆ ಅನ್ನುವುದು ಖಾತರಿಯಾಗುತ್ತದೋ ಆಗ ಮಗರಾಯ ಅಮೇರಿಕವೋ , ಆಸ್ಟ್ರೇಲಿಯಾವೋ, ಕೆನಡಾವೋ ಸೇರಲು ಹಂಬಲಿಸುತ್ತಾನೆ. ಊರಿನಿಂದ ಬೆಂಗಳೂರಿಗೆ ಬಂದ ಅಪ್ಪ ಅಮ್ಮಂದಿರನ್ನು ಇಲ್ಲಿಯ ಮನೆಯಲ್ಲಿ “ಇರಿಸಿ’ ತಾನು ಸಂಸಾರ ಸಮೇತ ವಿದೇಶಕ್ಕೆ ಹಾರುತ್ತಾನೆ. ಇತ್ತ ಅಪ್ಪ- ಅಮ್ಮ ಊರಿಗೆ ಮರಳುವ ಹಾಗೂ ಇಲ್ಲ. ಅತ್ತ ಅವನು ಬೆಂಗಳೂರಿಗೆ ಬರುವ ಬಗ್ಗೆ ಸ್ಪಷ್ಟವಾದ ಮಾಹಿತಿಯೂ ಇರುವುದಿಲ್ಲ.

ಹೀಗೆ, ಊರಿಂದ ಮಹಾನಗಕ್ಕೆ ಬರುವವರು ಮತ್ತು ಮಹಾನಗರದಿಂದ ವಿದೇಶಕ್ಕೆ ಹಾರುವವರಿಂದಾಗಿ ಎರಡು ಪ್ರಮುಖ ವ್ಯವಸ್ಥೆಗಳು ಹುಟ್ಟಿಕೊಳ್ಳುತ್ತವೆ. ಒಂದು; ನಗರದ “ಮಾರುವ ಮತ್ತು ಕೊಳ್ಳುವ ವ್ಯವಸ್ಥೆ’ ಮತ್ತೂಂದು; ತನ್ನೆಲ್ಲ ಯುವಕರನ್ನು ಬೆಂಗಳೂರಿನಂಥ ನಗರಕ್ಕೆ ಕಳಿಸಿಕೊಟ್ಟು ಕ್ರಮೇಣ ವೃದ್ಧಾಶ್ರಮಗಳಂಥಾಗುತ್ತಿರುವ ಹಳ್ಳಿಗಳು. ಕೆಲವರು ಮೊದಲನೆಯದರ ಪಾಲುದಾರರಾದರೆ ಮತ್ತೆ ಕೆಲವರು ಎರಡನೆಯದರ ಫ‌ಲಾನುಭವಿಗಳಾಗುತ್ತಾರೆ, ಅಷ್ಟೇ.

ನೀವೇನಾದರೂ ಮಹಾನಗರವನ್ನು ಬಿಡುವ ಯೋಚನೆ ಮಾಡಿದ್ದಲ್ಲಿ ಒಂದು ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ಆ ವಿದೇಶಕ್ಕೆ ಹಾರಿದವನು ವಾಪಾಸ್ಸು ಬೆಂಗಳೂರಿಗೆ ಬರಬಹುದು ಮತ್ತು ನನ್ನೂರಿನ ಹೊಸ ತಲೆಮಾರಿನ ಯುವಕರೂ ಕೂಡ ಇಲ್ಲಿಗೇ ಬರಬಹುದು. ಏಕೆಂದರೆ ಈ ಮಹಾನಗರ ಯಾರನ್ನೂ ಬೇಡ ಎನ್ನುವುದಿಲ್ಲ. ಹಾಗೆಯೇ ನನ್ನೂರು, ನನ್ನನ್ನು ಮರಳಿ ಬಾ ಎನ್ನುವುದಿಲ್ಲ.

ಶಿವಕುಮಾರ್‌ ಮಾವಲಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸಂಗೀತ ಅನ್ನೋದು ದೇವರನ್ನು ಒಲಿಸಿಕೊಳ್ಳಲು ಇರುವ ಸಮೀಪದ ಹಾದಿ ಅಂತ ಅಂದುಕೊಳ್ಳುವ ಕಾಲ ಇದಲ್ಲ. ಈಗ ಸಂಗೀತ ಅನ್ನೋದು ಬದುಕಿನ ಬಂಡಿ ಹೊಡೆಯಲು ಇರುವ ಸಾಧನ. ಟಿ.ವಿಗಳಲ್ಲಿ,...

  • ಶಾಲೆ ಎಂದರೆ ಕೇವಲ ಸಿಲಬಸ್‌ ಸುತ್ತುತ್ತಲೇ ಓಡಾಡಿಕೊಂಡಿರುವ ಮೇಷ್ಟ್ರು, ವಿದ್ಯಾರ್ಥಿಗಳ ಕೂಟವಲ್ಲ.  ಇದ್ರ ‌ ಜೊತೆಗೆ, ಪಠ್ಯೇತರ ಚಟುವಟಿಕೆ ಕೂಡ ಮುಖ್ಯ. ಇದಕ್ಕೆ...

  • ಇಂಟರ್ವ್ಯೂ ಗೆ ಅಂತ ಹೋದಲ್ಲೆಲ್ಲ ಕರೆಯುತ್ತಿದ್ದ. ಸಿಕ್ಕಾಗಲೆಲ್ಲ ಡಬ್ಬ ಕೊಡುತ್ತಿದ್ದ. "ಇವೆಲ್ಲ ಮಾಮೂಲು ಗುರು' ಅಂತ ಆತ್ಮ ವಿಶ್ವಾಸ ತುಂಬುತ್ತಿದ್ದ. "ಅವತ್ತೂಂದು...

  • ಇತ್ತೀಚೆಗೆ ಯುವಕರು ಪ್ರತಿಯೊಂದು ವಿಚಾರವನ್ನೂ ಗೂಗಲ್‌ ಮಾಡಿ ನೋಡಿ ಕುತೂಹಲ ತಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ, ಅನಾರೋಗ್ಯ ಪೀಡಿತರಾಗಿದ್ದವರಲ್ಲಿ ಶೇ....

  • ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾದಾಗ ಇಡೀ ಸಮಾಜ ಅಂಕಗಳ ತಕ್ಕಡಿಯಲ್ಲಿ ಈ ಚಿದಾನಂದರನ್ನು ತೂಕ ಹಾಕಿತು. ಆಗ ಅವರು ತೀರ್ಮಾನ ಮಾಡಿದ್ದು; ನನ್ನಂತೆ ಫೇಲಾದವರು ಬದುಕಲ್ಲಿ...

ಹೊಸ ಸೇರ್ಪಡೆ

  • ಬೆಂಗಳೂರು: ಹಿಂಗಾರು ಮಾರುತಗಳ ಭರ್ಜರಿ ಪ್ರವೇಶ ದಿಂದ ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮಳೆ ಅಬ್ಬರಿ ಸುತ್ತಿದೆ. ಇನ್ನೂ ಮೂರ್‍ನಾಲ್ಕು ದಿನಗಳು ಇದೇ ವಾತಾವರಣ...

  • ಏಷಿಯಾದ ಮೊದಲ "ಬಿಪಿಎಲ್‌'ಗೆ ಭಾನುವಾರ ಪ್ರಾಯೋಗಿಕ ಚಾಲನೆ ಸಿಕ್ಕಿದೆ. ಈ ಒಂದು ಪಥ ಯಶಸ್ವಿಯಾದರೆ, ನಗರ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಿಗೆ ಮುನ್ನುಡಿ...

  • ಬೆಂಗಳೂರು: ಅಲಯನ್ಸ್‌ ವಿವಿಯ ವಿಶ್ರಾಂತ ಕುಲಪತಿ ಹಾಗೂ ರಾಜಕಾರಣಿ ಡಾ.ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಎರಡನೇ ಪ್ರಮುಖ ಆರೋಪಿ ಹಾಗೂ ಸುಪಾರಿ ಹಂತಕನಿಗೆ ಉತ್ತರ...

  • ವೀರ ಸಾವರ್ಕರ್‌ಗೆ "ಭಾರತ ರತ್ನ' ನೀಡುವ ಮಹಾರಾಷ್ಟ್ರ ಬಿಜೆಪಿ ಪ್ರಣಾಳಿಕೆಯ ಅಂಶದ ಬಗ್ಗೆ ರಾಜಕೀಯ ನಾಯಕರ ವಾಕ್ಸಮರ ಭಾನುವಾರವೂ ಮುಂದುವರಿದಿದೆ. ಇದೇ ವಿಚಾರವಾಗಿ...

  • ಬೆಂಗಳೂರು: ಅನಿಷ್ಠ ಹಾಗೂ ನಿಷೇಧಿತ ದೇವದಾಸಿ ಪದ್ಧತಿಯಿಂದ ಮುಕ್ತಿ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದು ಗೌರವ ಹಾಗೂ ಘನತೆಯ ಬದುಕು ಕಟ್ಟಿಕೊಳ್ಳುತ್ತಿರುವ...