ಮುಂದೊಂದು ದಿನ ನನಗೂ ಕ್ಲಾಸ್‌ ತಗೋತೀಯ?

Team Udayavani, May 14, 2019, 6:00 AM IST

ಹಾಯ್‌ ಲೇಡಿ ಡಾನ್‌,
ನೀನು ಬಸ್‌ ಸ್ಟಾಂಡ್‌ನ‌ಲ್ಲಿ ಅದ್ಯಾರಿಗೋ ಚೆನ್ನಾಗಿ ಮಂಗಳಾರತಿ ಮಾಡಿದೆಯಂತೆ? ಪ್ರಪೋಸ್‌ ಮಾಡೋಕೆ ಅಂತ ರೋಸ್‌ ಹಿಡಿದು ಬಂದವನ ಕೈಯಿಂದ ಗುಲಾಬಿ ಕಿತ್ತುಕೊಂಡು, ಪರಪರ ಅಂತ ಅದನ್ನು ಚೂರು ಮಾಡಿದೆಯಂತೆ, ಹೌದಾ?

ನಂಗೆ ನಿನ್ನೆ ವಿಷಯ ಗೊತ್ತಾಯ್ತು. ಒಂದು ವಾರದಿಂದ ನಾನು ಆಫೀಸ್‌ಗೆ ಹೋಗಿಲ್ಲ. ಹಾಗಾಗಿ, “ಸಹಕಾರ ಸಾರಿಗೆ’ ಬಸ್‌ನಲ್ಲಿಯೂ ನಾನು ಆಬ್ಸೆಂಟ್‌ ಇದ್ದೆ. ನಾನು ಇಲ್ಲದಿರುವಾಗ ಇಂಥದ್ದೊಂದು ರೋಚಕ ಘಟನೆ ನಡೆಯಿತು ಅಂತ ಫ್ರೆಂಡ್‌ ಹೇಳಿದ. ನೀನು ಇನ್ನೇನು ಬಸ್‌ ಹತ್ತಬೇಕು ಅನ್ನುವಷ್ಟರಲ್ಲಿ, ಆ ಹುಡುಗ ನಿನ್ನನ್ನು ಕರೆದನಂತೆ. ನೀನು ಅವನತ್ತ ತಿರುಗಿ ನೋಡಿದಾಗ, ಕೈಯಲ್ಲಿ ಗುಲಾಬಿ ಹೂವು ಇತ್ತಂತೆ. “ಏನು?’ ಅನ್ನುವಂತೆ ಹುಡುಗನತ್ತ ನೋಡಿದಾಗ ಅವನು ತೊದಲುತ್ತ, “ಐ ಲವ್‌ ಯೂ’ ಅಂದನಂತೆ. ಬಸ್‌ ಹತ್ತುತ್ತಿದ್ದ ನೀನು, ಅವನನ್ನು ಪಕ್ಕಕ್ಕೆ ಕರೆದು, ಚೆನ್ನಾಗಿ ಬೈದು, ಹೂವನ್ನೂ ಹರಿದು ಹಾಕಿ ಬುಸುಗುಟ್ಟಿದೆಯಂತೆ. ಪಾಪ, ಅವನು ಹೆದರಿ, ಅಲ್ಲಿಂದ ಕಾಲ್ಕಿತ್ತನಂತೆ. ಇವೆಲ್ಲವೂ ಎರಡೂ¾ರು ನಿಮಿಷದಲ್ಲಿ ನಡೆದು, ನೀನು ಮತ್ತೆ ಅದೇ ಬಸ್‌ ಹತ್ತಿ ಕಾಲೇಜಿಗೆ ಹೋದೆಯಂತೆ…

ಇಷ್ಟನ್ನೂ ಗೆಳೆಯ ಎಳೆಎಳೆಯಾಗಿ ವಿವರಿಸುವಾಗ ನನಗೆ ಜೋರು ನಗು, ಒಳಗೊಳಗೇ ಭಯ. ಆ ಹುಡುಗನ ಬಗ್ಗೆ ನನಗೆ ಮೊದಲಿಂದಲೂ ಅನುಮಾನವಿತ್ತು. ದಿನಾ ಬಸ್‌ಸ್ಟಾಂಡ್‌ನ‌ಲ್ಲಿ ನಿಂತು ನಿನ್ನನ್ನೇ ನೋಡುತ್ತಿದ್ದ, ಹಲ್ಲುಗಿಂಜುತ್ತಿದ್ದ. ಅವನಿಗೆ ತಕ್ಕ ಶಾಸ್ತಿ ಮಾಡಿದ್ದೀಯ. ನಿನ್ನ ಧೈರ್ಯಕ್ಕೆ ಸೆಲ್ಯೂಟ್‌ ಕಣೇ ಹುಡುಗಿ!

ಆದರೆ, ಮುಂದೊಂದು ದಿನ ನೀನು ನನಗೂ ಆ ರೀತಿ ಬೈಯುತ್ತೀಯೇನೋ! ಯಾಕಂದ್ರೆ, ನೀನಂದ್ರೆ ನನಗಿಷ್ಟ. ರೋಸ್‌ ಹಿಡಿದು ನಿನ್ನ ಮುಂದೆ ನಿಲ್ಲುವ ಕನಸನ್ನು ನಾನೂ ಕಂಡಿದ್ದೆ. ಆದರೀಗ ಭಯವಾಗ್ತಾ ಇದೆ. ಆ ಹುಡುಗನಿಗಾದ ಗತಿ ನನಗೂ ಆದರೆ ಅಂತ! ಅಷ್ಟಲ್ಲದೆ, ನಿನಗೂ ನನ್ನ ಮೇಲೆ ಗೌರವವಿರುವ ಹಾಗಿದೆ. ನಿನ್ನದೇ ಸೀನಿಯರ್‌ ಅಂತಲೋ, ಬ್ಯಾಂಕ್‌ನಲ್ಲಿ ಕೆಲಸಕ್ಕಿರುವವನು ಅಂತಲೋ, ಊರು ಮನೆಯ ಹುಡುಗ ಅಂತಲೋ, ಬಸ್‌ನಲ್ಲಿ ಡೀಸೆಂಟ್‌ ಆಗಿರೋ ಹುಡುಗ ಅಂತಲೋ, ನೀನು ಆಗಾಗ ನನಗೊಂದು ಸ್ಮೈಲ್‌ ಕೊಡ್ತೀಯ. ಪ್ರೀತಿಯ ವಿಷಯ ಹೇಳಿ, ಅದರಿಂದಲೂ ವಂಚಿತನಾಗಲಾ ಅಥವಾ ಹೇಳದೆಯೇ ಒಳ್ಳೆಯವನಾಗಿ ಉಳಿಯಲಾ? ಏನೊಂದೂ ಗೊತ್ತಾಗ್ತಾ ಇಲ್ಲ. ಏನ್ಮಾಡಲಿ ಅಂತ ನೀನೇ ಹೇಳು. ಪ್ರೀತಿ ನಿವೇದನೆ ಮಾಡಿ ಅದೃಷ್ಟ ಪರೀಕ್ಷೆ ಮಾಡಿ ಬಿಡಲಾ, ನನ್ನ ನಸೀಬಿನಲ್ಲಿ ನೀನಿಲ್ಲ ಅಂತ ಸುಮ್ಮನಾಗಲಾ?

-ಶರತ್‌ಚಂದ್ರ ಜಿ.ಎಸ್‌.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ