ಅವತ್ತು ಮೇಷ್ಟ್ರು ಬೈದು ತಿದ್ದದೇ ಹೋಗಿದ್ದರೆ…

Team Udayavani, Apr 16, 2019, 6:39 AM IST

ಪಕ್ಕದಲ್ಲಿರುವವರೆಲ್ಲ ಗೈಡ್‌ ತೆಗೆದು, ಕದ್ದು ಕದ್ದು ನೋಡಿ ಬರೆಯುತ್ತಿರುವುದನ್ನು ಗಮನಿಸಿದೆ. ನನಗೂ ತಡೆಯಲಾಗಲಿಲ್ಲ. ನಾನು ಓದದೇ ಇದ್ದ ಒಂದು ಗಾದೆ ಮಾತಿನ ವಿವರಣೆಯ ಪ್ರಶ್ನೆಗೆ ಉತ್ತರ ಆಲೋಚಿಸುತ್ತ ಕುಳಿತಿದ್ದೆ. ಎಷ್ಟೇ ಯೋಚಿಸಿದರೂ ಉತ್ತರ ಹೊಳೆಯಲಿಲ್ಲ. ಸರಿ, ಎಲ್ಲರೂ ಕಾಪಿ ಮಾಡುತ್ತಿದ್ದಾರೆ. ನಾನೂ ಅದೊಂದು ಪ್ರಶ್ನೆಯನ್ನು ಕಾಪಿ ಮಾಡೇ ಬಿಡೋಣ ಅಂತ ನಿರ್ಧರಿಸಿದೆ.

ಹೈಸ್ಕೂಲ್‌ನಲ್ಲಿ ಕ್ಲಾಸಿಗೆ ಜಾಣ ವಿದ್ಯಾರ್ಥಿ ಎನಿಸಿಕೊಂಡಿದ್ದ ಹುಡುಗ ನಾನು. ಆ ಜಾಣತನವೆಲ್ಲವೂ ಹೆತ್ತವರ, ಶಿಕ್ಷಕರ ಶ್ರೀರಕ್ಷೆ ಎಂದರೆ ತಪ್ಪಲ್ಲ. ನಾನು ಸಣ್ಣವನಿದ್ದಾಗ ನನ್ನ ಅಪ್ಪ-ಅಮ್ಮ ಪುಣೆ, ಮಹಾರಾಷ್ಟ್ರ, ಮೀರಜ…, ಸಾಂಗಲಿಗೆ ಉದ್ಯೋಗ ನಿಮಿತ್ತ ಹೋಗಬೇಕಾದಾಗ ನನ್ನನ್ನು ಅಜ್ಜ ಅಜ್ಜಿಯ ಹತ್ತಿರ ಬಿಟ್ಟು, ಶಾಲೆ ಕಲಿಯುವಂತೆ ಮಾಡಿದರು. ನಾನು ಅಜ್ಜಿಯ ಮನೆಯಲ್ಲಿದ್ದುಕೊಂಡು ಓದಿದೆ.

ಜಾಣ ವಿದ್ಯಾರ್ಥಿ ಎಂದರೆ ಕೇಳಬೇಕೆ? ಅಂಕದ ಜೊತೆಗೆ ಅಹಂಕಾರವೂ ಸ್ವಲ್ಪ ಜಾಸ್ತಿ. ಎಲ್ಲರೆದುರು ಗುರುತಿಸಿಕೊಳ್ಳುವ ತುಡಿತ, ಶಾಲೆಯ ಎಲ್ಲ ಕಾರ್ಯಕ್ರಮದಲ್ಲಿ ಮೊದಲ ಸ್ಥಾನ ಪಡೆಯಬೇಕು ಎಂಬ ಹುಚ್ಚು ಹಂಬಲ.

8ನೇ ತರಗತಿಯ ವಾರ್ಷಿಕ ಪರೀಕ್ಷೆಗಳು ಆರಂಭವಾಗಿದ್ದವು. ಅಂದು ಹಿಂದಿ ಪರೀಕ್ಷೆ. ಎಲ್ಲರಿಗಿಂತ ನಾನು ಚೆನ್ನಾಗಿ ಓದಿಕೊಂಡು ಪರೀಕ್ಷೆಗೆ ಹೋಗಿದ್ದೆ. ಪರೀಕ್ಷೆಯಲ್ಲಿ ಆರಾಮಾಗಿ ನಕಲು ಮಾಡಬಹುದು ಅಂತ ಗೆಳೆಯರು ಹೇಳುತ್ತಿದ್ದುದನ್ನು ನಂಬಿಕೊಂಡು ಎಲ್ಲರಂತೆ ಒಂದು ಗೈಡನ್ನೂ ಕೂಡ ಹೊತ್ತು ತಂದಿದ್ದೆ. ಆದರೆ ಆ ಗೈಡ್‌ ಅನ್ನು ಪರೀಕ್ಷಾ ಕೇಂದ್ರಕ್ಕೆ ಒಯ್ಯದೇ, ಶಾಲೆಯ ಸ್ವಲ್ಪ ದೂರದಲ್ಲಿದ್ದ ಶೌಚಾಲಯದ ಗೋಡೆಯ ಮೇಲೆ ಯಾರಿಗೂ ಕಾಣದಂತೆ ಬಚ್ಚಿಟ್ಟು ಬಂದಿದ್ದೆ.

ಗಂಟೆ ಬಾರಿಸಿದ ನಂತರ ಎಲ್ಲರೂ ತರಗತಿಯೊಳಗೆ ಹೋಗಿ ಕುಳಿತೆವು. ಪ್ರಶ್ನೆಪತ್ರಿಕೆ ಕೈಗೆ ಬಂದ ತಕ್ಷಣವೇ ಬರೆಯಲು ಆರಂಭಿಸಿದೆ. ಬಹುತೇಕ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದೆ. ನೂರಕ್ಕೆ ನೂರು ತೆಗೆಯಬೇಕು ಎನ್ನುವ ತವಕ. ಹೆಚ್ಚಾ ಕಡಿಮೆ ಎಲ್ಲದಕ್ಕೂ ಉತ್ತರಿಸಿದ್ದೆ.

ಪಕ್ಕದಲ್ಲಿರುವವರೆಲ್ಲ ಆಗಾಗ ಅಂಗಿಯೊಳಗಿಂದ ಗೈಡ್‌ ತೆಗೆದು, ಕದ್ದು ಕದ್ದು ನೋಡಿ ಬರೆಯುತ್ತಿರುವುದನ್ನು ಗಮನಿಸಿದೆ. ನನಗೂ ತಡೆಯಲಾಗಲಿಲ್ಲ. ನಾನು ಓದದೇ ಇದ್ದ ಒಂದು ಗಾದೆ ಮಾತಿನ ವಿವರಣೆಯ ಪ್ರಶ್ನೆಗೆ ಉತ್ತರ ಆಲೋಚಿಸುತ್ತ ಕುಳಿತಿದ್ದೆ. ಎಷ್ಟೇ ಯೋಚಿಸಿದರೂ ಉತ್ತರ ಹೊಳೆಯಲಿಲ್ಲ. ಸರಿ, ಎಲ್ಲರೂ ಕಾಪಿ ಮಾಡುತ್ತಿದ್ದಾರೆ. ನಾನು ಅದೊಂದು ಪ್ರಶ್ನೆಯನ್ನು ಕಾಪಿ ಮಾಡೋಣ ಅಂತ ನಿರ್ಧರಿಸಿದೆ. ಅಂದು ಕೊಠಡಿಯ ಮೇಲ್ವಿಚಾರಕರಾಗಿ ಬಂದಿದ್ದವರು, ಹಿಂದಿ ಗುರುಗಳಾದ ಪ್ರಭುದೇವ ಸರ್‌. ಶೌಚಾಲಯಕ್ಕೆ ಹೋಗಬೇಕು ಅಂತ ಅವರನ್ನು ಕೇಳಿದೆ. ಅವರು ಹೋಗಿ ಬಾ ಅನ್ನುವಂತೆ ತಲೆ ಅಲ್ಲಾಡಿಸಿದರು. ಸೀದಾ ಶೌಚಾಲಯದತ್ತ ಓಡಿದವನೇ, ಅಲ್ಲಿ ಮುಚ್ಚಿಟ್ಟಿದ್ದ ಗೈಡ್‌ ತೆರೆದು, ಆ ಗಾದೆಮಾತಿನ ವಿವರದ ಪುಟವನ್ನು ಕಿತ್ತು ಅಂಗಿಯೊಳಗಿಟ್ಟುಕೊಂಡು, ಏನೂ ಮಾಡಿಲ್ಲ ಅನ್ನುವಂತೆ ಒಳಬಂದ ಕುಳಿತೆ.

ಪರೀಕ್ಷೆ ಮುಗಿಯಲು ಇನ್ನೂ ಅರ್ಧಗಂಟೆಯಿತ್ತು. ಆಗ, “ರಾಜು ಎದ್ದು ನಿಲ್ಲು’ ಎಂಬ ಪ್ರಭುದೇವ ಸರ್‌ ಕೂಗು ಕಿವಿಗೆ ಅಪ್ಪಳಿಸಿತು. ನನಗೆ ಗಾಬರಿಯಾಯ್ತು. ಕ್ಲಾಸ್‌ನಲ್ಲಿದ್ದ ಎಲ್ಲರೂ ನನ್ನನ್ನೇ ನೋಡುತ್ತಿದ್ದರು. ನಡುಗುತ್ತಲೇ ಎದ್ದು ನಿಂತೆ. “ಚೀಟಿ ಕೊಡು’ ಎಂದರು. ಧಾರಾಕಾರವಾಗಿ ಬೆವರುತ್ತಲೇ, “ಚೀಟಿ ಇಲ್ಲ ಸರ್‌’ ಎಂದೆ. “ಒಳ್ಳೆ ಮಾತಿನಲ್ಲಿ ಕೊಡು. ನಾನು ನೋಡಿದ್ದೀನಿ’ ಅಂದ್ರು ಸರ್‌. “ಇಲ್ಲ ಸರ್‌’ ಅಂತ ನಾನೂ ವಾದಿಸಿದೆ. “ಕಿಲಿಪ್ರಟ್‌ ಕೆಳಗಡೆ ಏನಿದೆಯೋ ಅದನ್ನು ಕೊಡು’ ಅಂದರು ಗುರುಗಳು.

ಇನ್ನು ಸುಳ್ಳು ವಾದಿಸಿ ಪ್ರಯೋಜನವಿಲ್ಲ ಅಂತ ಅರಿವಾಗಿ, ನಡುಗುವ ಕೈಗಳಿಂದ ಗೈಡ್‌ನಿಂದ ಹರಿದ ಹಾಳೆಯನ್ನು ಅವರ ಕೈಗಿಟ್ಟೆ. ಆ ಕ್ಷಣ ಮನದೊಳಗೆ ದುಗುಡ, ದುಮ್ಮಾನ, ಪಶ್ಚಾತ್ತಾಪ, ಜುಗುಪ್ಸೆ, ನಿರುತ್ಸಾಹ, ಕೋಪ, ಅಳು, ಎಲ್ಲವೂ ಒಟ್ಟಿಗೆ ಮೇಳೈಸಿದವು. ಜಾಣ ವಿದ್ಯಾರ್ಥಿ ಅಂತ ಎಲ್ಲರಿಂದ ಹೊಗಳಿಸಿಕೊಂಡಿದ್ದ ನಾನು, ನಕಲು ಚೀಟಿ ಹಿಡಿದು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದೆ! ನಾನು ನಿರೀಕ್ಷಿಸಿದಂತೆ ಗುರುಗಳು ನನಗೆ ಹೊಡೆಯಲಿಲ್ಲ. ಬದಲಿಗೆ- “ಶ್ಯಾಣೆ ಶ್ಯಾಣೆ ಅಂದ್ರ, ಬರಬರ್ತಾ ರಾಯರ ಕುದುರಿ ಕತ್ತಿ ಆತಂತ. ಹಂಗ ಆದೆಲ್ಲೋ’ ಅಂತ ಮಾತಿನಲ್ಲೇ ಛಾಟಿ ಏಟು ಕೊಟ್ಟರು. ಕ್ಲಾಸಿನವರೆಲ್ಲ ಗೊಳ್‌ ಎಂದು ನಗಲಾಗದಿದ್ದರೂ, ನನ್ನನ್ನು ನೋಡಿ ಒಳಗೊಳಗೇ ಮುಸಿಮುಸಿ ನಕ್ಕರು. ಅವಮಾನದಿಂದ ಪ್ರಾಣ ಹೋದಂತಾಗಿತ್ತು.

ಅವತ್ತೇ ನಿರ್ಧರಿಸಿದೆ; ಪರೀಕ್ಷೆಯಲ್ಲಾಗಲೀ, ಬದುಕಿನಲ್ಲಾಗಲಿ ಇನ್ನೆಂದೂ ನಕಲು ಮಾಡಲಾರೆ, ಅಪ್ರಾಮಾಣಿಕನಾಗಲಾರೆ ಎಂದು. ಗುರುಗಳು ಹೇಳಿದ ಬುದ್ಧಿವಾದದ ಮಾತುಗಳು ಬದುಕಿನ ಪ್ರತಿ ಹಂತದಲ್ಲೂ ಜೊತೆಗಿವೆ. ಅಂದು ಶಿಕ್ಷಕರು ತಿದ್ದದೇ ಹೋಗಿದ್ದರೆ, ನಕಲು ಮಾಡುತ್ತಲೇ ಹಾಳಾಗುತ್ತಿದ್ದೆನೇನೋ!

ರಾಜು ಹಗ್ಗದ, ಮುದ್ದೇಬಿಹಾಳ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಇವತ್ತು ನಮ್ಮ ಸಮಾಜ ಹೇಗಿದೆ ಅಂದರೆ, 99 ಅಂಕ ಪಡೆದವರನ್ನು ಬಹಳ ಚೆನ್ನಾಗಿ ಆದರಿಸುತ್ತದೆ. 50 ಅಂಕ ಪಡೆದವರನ್ನು ಕ್ಯಾರೇ ಅನ್ನೋದಿಲ್ಲ. 90 ಅಂಕ ಪಡೆದ ವಿದ್ಯಾರ್ಥಿಗೆ...

  • ವಸ್ತುವಿನ ಮೇಲೆ ಬಿದ್ದ ಬೆಳಕು ಪ್ರತಿಫ‌ಲಿಸಿ ನೋಡುಗನ ಕಣ್ಣಿಗೆ ಕಂಡಾಗ ಆ ಚಿತ್ರಣದಲ್ಲಿ ಕಪ್ಪು ನೆರಳಿನ ಭಾಗ ಬಿಟ್ಟು ಇನ್ನುಳಿದವು ಕೆಂಪು, ಕಿತ್ತಳೆ ಅಥವಾ ಹಳದಿ...

  • ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಒಂದು ಸೇವಾ ಉದ್ಯಮವೆಂದರೆ ಆರೋಗ್ಯ ಸೇವಾ ಉದ್ಯಮ. ಅರ್ಥಾತ್‌ ಆಸ್ಪತ್ರೆ, ರೋಗ ಶುಶ್ರೂಷೆ. ಕೇವಲ ಕಟ್ಟಡ, ಉಪಕರಣ, ದಾದಿಯರು...

  • ಹುತಾತ್ಮರಾದ ಯೋಧರ ಅಂತ್ಯಕ್ರಿಯೆಗೆ ಹೆಗಲು ಕೊಡುವ ಶಹಾಪುರದ ಈಶ್ವರ್‌, ನಡು ರಾತ್ರಿಯೋ, ಬೆಳಗಿನ ಜಾವವೋ ಬರುವ ಯೋಧರು ವಿಶ್ರಾಂತಿ ತೆಗೆದುಕೊಳ್ಳುವಂತೆ ಏರ್ಪಾಟು...

  • ನಿನ್ನೊಂದಿಗೆ ಮಾತಿಗಿಳಿದರೆ ಯಾವ ಟ್ರಾಫಿಕ್‌ ಜಾಮ್‌ ಕೂಡಾ ವಿಳಂಬವೆನಿಸದು. . ನಿನ್ನ ಹೆಜ್ಜೆಗಳೊಂದಿಗೆ ಹೆಜ್ಜೆಗೂಡಿಸಿ ನಡೆಯುತ್ತಿದ್ದರೆ ಗೋಜಲ ಹಾದಿಯೇ ನಮ್ಮ...

ಹೊಸ ಸೇರ್ಪಡೆ