ಹಸಿರು ಹುಡುಗರು

ಕೊಟ್ಟೂರ ಕೊಡುಗೈಗಳು

Team Udayavani, Jan 14, 2020, 6:00 AM IST

ಸೇವೆ ಅಂದರೆ ಊಟ, ಬಟ್ಟೆ ಕೊಡೋದು, ಕಷ್ಟದಲ್ಲಿರುವವರಿಗೆ ಹಣ ಸಹಾಯ ಮಾಡೋದು ಮಾತ್ರವಲ್ಲ. ಹೀಗೂ ಮಾಡಬಹುದು ಅಂತ ಕೊಟ್ಟೂರಿನ ಯುವಕರು ತೋರಿಸುತ್ತಿದ್ದಾರೆ. ಅವರು ಒಂದಷ್ಟು ಪಾರ್ಕ್‌ಗಳನ್ನು ದತ್ತು ಪಡೆದು ತಾವೇ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಸುತ್ತಮುತ್ತಲ ಹಸಿರವಾತಾವರವಣ ನಿರ್ಮಾಣವಾಗಿದೆ.

ರೌಂಡ್‌-ಹೊನಲು ಪಡೆಯ ಈ ಕಾಯಕದಿಂದ ಪಾರ್ಕ್‌ಗಳಲ್ಲಿ ಹಸಿರು ನಳನಳಿಸುತ್ತಿದೆ. ಇವರ ಪರಿಸರ ಕಾಳಜಿ, ಬದ್ಧತೆ ಮೆಚ್ಚಿ ಎಲ್ಲರೂ ಕೈ ಜೋಡಿಸುತ್ತಿದ್ದಾರೆ. ದಿನ ಬೆಳಗಾದರೆ ಸಾಕು, ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಕೆಲ ಪಾರ್ಕ್‌ಗಳಲ್ಲಿ ಕೆಲವೊಂದಿಷ್ಟು ಹುಡುಗರ ದಂಡು ಕಾಣುತ್ತೆ. ಇವರು ತಮ್ಮ ಆರೋಗ್ಯಕ್ಕಾಗಿ ಪಾರ್ಕ್‌ಗಳಿಗೆ ಇಳಿಯುವ ಯುವಕರಲ್ಲ. ಬದಲಾಗಿ ಪಾರ್ಕ್‌ನ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುವ ಹುಡುಗರು. ಉದ್ಯಾನವನದ ಉದ್ಧಾರಕ್ಕಾಗಿ ಅಹರ್ನಿಶಿ ದುಡಿಯುವ ಇವರು, ಕೆಲವು ಪಾರ್ಕ್‌ಗಳನ್ನು ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ ದತ್ತು ಪಡೆದು ನಿರ್ವಹಣೆ ಮಾಡುತ್ತಿದ್ದಾರೆ. ಇವರ ಶ್ರಮದಿಂದ ಉದ್ಯಾನವನಗಳು ನಂದನವನಗಳಾಗಿವೆ. ಹಿಂದೊಮ್ಮೆ ಕಳೆ ಸಸ್ಯ, ತ್ಯಾಜ್ಯದಿಂದ ತುಂಬಿ ಜನರಿಂದ ದೂರವಿದ್ದ ಪಾರ್ಕ್‌ಗಳೀಗ ಹಸಿರನ್ನೇ ಉಸಿರಾಗಿಸಿಕೊಂಡು, ವಾಯು ವಿಹಾರಿಗಳಿಂದ ತುಂಬಿ ತುಳುಕುತ್ತಿವೆ!

ಇದಕ್ಕೆ ಕಾರಣ, ಕೊಟ್ಟೂರಿನ ಹಸಿರು ಹೊನಲು ಯುವಕರ ಪಡೆ. ಪರಿಸರ, ಅದರಲ್ಲೂ ಸ್ವಸ್ಥ ಪಾರ್ಕ್‌ಗಳ ನಿರ್ಮಾಣದ ಸಂಕಲ್ಪ ಈ ತಂಡದ್ದು. ಅಂಕಿ-ಅಂಶಗಳಲ್ಲಿ ಮರಗಿಡಗಳನ್ನು ತೋರಿಸದೇ, ನೆಟ್ಟ ಅಷ್ಟೂ ಗಿಡಗಳನ್ನೂ ಆರೈಕೆ ಮಾಡಿ ಬೆಳವಣಿಗೆಯ ಬಲ ತೋರಿಸುವುದು ಇವರ ಪರಮ ಗುರಿ. ಹೀಗಾಗಿ ಇವರಿಗೆಲ್ಲ ಕುಂತರೂ, ನಿಂತರೂ ಪಾರ್ಕ್‌ಗಳ ಅಭಿವೃದ್ಧಿಯದ್ದೇ ಧ್ಯಾನ!. ಈ ನಿಟ್ಟಿನಲ್ಲಿ ಈ ತಂಡ ಕಳೆದ ಮೂರು ವರ್ಷದಿಂದ ಕ್ರಿಯಾಶೀಲವಾಗಿದೆ. ಇದು ಹುಟ್ಟಿದ್ದೂ ಆಕಸ್ಮಿಕವಾಗಿಯೇ. ದೈಹಿಕ ಶಿಕ್ಷಕ ನಾಗರಾಜ ಬಂಜಾರ್‌, ಕೊಟ್ಟೂರಿನ ನೇಕಾರ ಕಾಲೋನಿಯಲ್ಲಿಯ ಪಾರ್ಕ್‌ಗೆ ಪೌರಕಾರ್ಮಿಕರೊಂದಿಗೆ ಸೇರಿ ಕಾಯಕಲ್ಪ ನೀಡಲು ಮುಂದಾದರು. ಈ ಪಾರ್ಕ್‌ನ ಸುತ್ತ ತಂತಿ ಫೆನ್ಸಿಂಗ್‌ ಮತ್ತು ಅನತಿ ದೂರದಲ್ಲಿ ನೀರಿನ ಟ್ಯಾಂಕ್‌ ಇದ್ದದ್ದು ಪ್ರೇರಣೆ ಆಗಿತ್ತು. ಥೇಟ್‌ ಮೈದಾನದಂತಿದ್ದ ಪಾರ್ಕ್‌ನಲ್ಲಿದ್ದ ಹುಲ್ಲು, ಕಸಕಡ್ಡಿ ತೆಗೆದು, ಸಸಿ ಹಾಕಲು ಭೂಮಿ ಹದ ಮಾಡಿದರು. ಪೈಪ್‌ಲೈನ್‌ ಮಾಡಿ ನೀರಿನ ಟ್ಯಾಂಕ್‌ನಿಂದ ಪಾರ್ಕ್‌ಗೆ ನೀರು ತಂದರು. ಸಪೋಟ, ನೇರಳೆ, ಹೊಂಗೆ, ಬೇವು.. ಗಿಡಗಳನ್ನು ನೆಟ್ಟರು. ನಿತ್ಯ ಕೊಡದಲ್ಲಿ ನೀರು ಹೊತ್ತು ಹಾಕಿದರು. ಇವರ ಆಸಕ್ತಿ, ಶ್ರಮ ಕಂಡು, ಸ್ಥಳೀಯ ಯುವಕ ಉಮೇಶ ಕೈಜೋಡಿಸಿದ. ಎಲ್ಲರೂ ಸೇರಿ ತಮ್ಮ ಕೆಲಸ ಮತ್ತು ಚಿಂತನೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ಅಲ್ಲೊಂದಿಷ್ಟು ವೈವಿಧ್ಯಮಯ ಗಿಡಗಳು, ಅವುಗಳನ್ನು ಬೆಳೆಸಲು ಬೇಕಾದ ಸಲಕರಣೆಗಳು.. ಇತ್ಯಾದಿಗಳಿಗೆ ದಾನಿಗಳನ್ನು ಹುಡುಕಿಕೊಂಡರು. ಪಾರ್ಕ್‌ನಲ್ಲಿ ಈ ಬದಲಾವಣೆ ಆದದ್ದನ್ನು ನೋಡಿ ಗುರು ಪೇಂಟರ್, ನಟರಾಜ, ಅಭಿಷೇಕ್‌, ಜಡಿಯಪ್ಪ, ವೀರೇಶ್‌, ಕೊಟ್ರೇಶ್‌, ಪರಶುರಾಮ್‌.. ಹೀಗೆ, ಸ್ವಯಂ ಸ್ಫೂರ್ತಿಯಿಂದ ಬಂದ ಯುವಕರ ಸಂಖ್ಯೆ ಮೂವತ್ತು ಆಯ್ತು!. ಪರಿಣಾಮ, ಇಡೀ ಪಾರ್ಕ್‌ಗಳಲ್ಲಿ ಗಿಡಗಳ ಮೆರವಣಿಗೆ ಶುರುವಾಯ್ತು. ನಿಂಬೆ ಹುಲ್ಲು, ಮಂಗರವಳ್ಳಿ, ಸರ್ಪಗಂಧ, ಶತಾವರಿ.. ಹೀಗೆ ಕೆಲವೊಂದಿಷ್ಟು ಔಷಧಿ ಸಸ್ಯಗಳನ್ನು ಹಾಕಿ ಬೆಳೆಸಿದರು. ಈ ಔಷಧಿ ಗಿಡಗಳ ಮಹತ್ವವನ್ನು ಜನರಿಗೆ ತಿಳಿಸಲೂ ಮುಂದಾದರು. ಇದಕ್ಕಾಗಿ ಪ್ರತಿ ತಿಂಗಳು ಒಂದು ಭಾನುವಾರ ವಾಯು ವಿಹಾರಕ್ಕೆ ಬಂದವರಿಗೆ ಈ ಔಷಧಿ ಸಸ್ಯಗಳಿಂದ ಮಾಡಿದ ಕಷಾಯ ನೀಡಿದರು!. ಹಿತ್ತಲ ಗಿಡ ಮದ್ದು ಎಂದು ಮನದಟ್ಟು ಮಾಡಿದರು.

ನಂತರ ಈ ಸೇವೆ, ವಿದ್ಯಾನಗರ, ಬಸವೇಶ್ವರ ನಗರ, ಎಲ್‌. ಬಿ. ಬಡಾವಣೆ, ಕೆರೆಯ ಹತ್ತಿರ.. ಹೀಗೆ ಪಟ್ಟಣದ ಏಳು ಪಾರ್ಕ್‌ಗಳಿಗೆ ವಿಸ್ತರಣೆ ಗೊಂಡಿತು. ಇಲ್ಲೆಲ್ಲಾ ಈಗಾಗಲೇ ವೈವಿಧ್ಯಮಯ ನೂರಾರು ಗಿಡಗಳು ಬೆಳೆದು ನಿಂತಿವೆ. ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾದರೆ ಟ್ಯಾಂಕರ್‌ ನೀರು ಒದಗಿಸುವ, ಇವರ ಕೆಲಸಕ್ಕೆ ಇಂಧನ ತುಂಬಲು ಸಲಿಕೆ, ಹಾರೆ, ಗುದ್ದಲಿ, ಪುಟ್ಟೆ… ಮುಂತಾದ ಸಲಕರಣೆಗಳನ್ನು ನೀಡುವ ಮೂಲಕ ಪಟ್ಟಣ ಪಂಚಾಯಿತಿಯೂ ಸಾಥ್‌ ನೀಡುತ್ತಿದೆ.

“ಹಸಿರ ಹೊನಲು’ ಪಡೆಯ ಸದಸ್ಯರಲ್ಲಿ ಇಬ್ಬರಂತೆ ಪ್ರತಿ ದಿನ ಸರದಿ ಪ್ರಕಾರ ಪಾರ್ಕ್‌ಗಳಲ್ಲಿ ಬೆಳಗ್ಗೆ ಆರರಿಂದ ಎಂಟರವರೆಗೆ ನಿರ್ವಹಣೆಯಲ್ಲಿ ತೊಡಗುತ್ತಾರೆ. ರಜಾ ದಿನಗಳಲ್ಲಿ ಎಲ್ಲರೂ ಸೇರಿ ಬೆಳಗ್ಗೆ ಮತ್ತು ಸಂಜೆ ಉದ್ಯಾನವನಗಳಲ್ಲಿ ಗಿಡಗಳಿಗೆ ಪಾತಿ ಮಾಡುವ, ನೀರುಣಿಸುವ, ಗೊಬ್ಬರ ಹಾಕುವ, ಸ್ವತ್ಛ ಮಾಡುವ ಕೆಲಸ ಮಾಡುತ್ತಾರೆ. ಅನೇಕರು ತಮ್ಮ ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವದ ನಿಮಿತ್ತ ಪಾರ್ಕ್‌ಗಳ ಅಭಿವೃದ್ಧಿಗೆ ಬೇಕಾದ ವಸ್ತುಗಳನ್ನು ಉಡುಗೊರೆ ನೀಡುತ್ತಾರೆ.

ಹೊನಲು ಪಡೆಯ ಈ ಕಾಯಕದಿಂದ ಪಾರ್ಕಗಳಲ್ಲಿ ಹಸಿರು ನಳನಳಿಸುತ್ತಿದೆ. ಹಕ್ಕಿಗಳ ಕಲರವ ಕೇಳಿ ಬರುತ್ತಿದೆ. ಸಹಜವಾಗಿ ವಾಕಿಂಗ್‌ ಮತ್ತು ವ್ಯಾಯಾಮ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಇವರ ಪರಿಸರ ಕಾಳಜಿ, ಬದ್ಧತೆ ಮೆಚ್ಚಿ ಹಿರಿಯರಾದಿಯಾಗಿ ಎಲ್ಲರೂ ಕೈ ಜೋಡಿಸುತ್ತಿದ್ದಾರೆ. ಇದರೊಟ್ಟಿಗೆ ಆಯಾ ಭಾಗದ ಜನರಲ್ಲಿ ಈ ಪಾರ್ಕ್‌ ನಮ್ಮದು, ರಕ್ಷಿಸಬೇಕು ಎನ್ನುವ ಪ್ರಜ್ಞೆ ಮೂಡುತ್ತಿದೆ. ಈ ತಂಡ, ರುದ್ರಮ್ಮ ಅನಾಥಾಶ್ರಮ ಮತ್ತು ವಿ.ಎಫ್ ಹಾಸ್ಟೆಲ್‌ನ ಖಾಲಿ ಜಾಗದಲ್ಲಿ ಸಾವಯವ ಕಾಯಿ-ಪಲ್ಲೆಯನ್ನು ಬೆಳೆಯುತ್ತಿದೆ. ಇದರ ಹಿಂದಿರುವ ಉದ್ದೇಶವೇನು ಎಂದರೆ, ಹಸಿರ ಹೊನಲು ತಂಡದ ನಾಗರಾಜ್‌ ಬಂಜಾ ಹೀಗೆನ್ನುತ್ತಾರೆ -” ಸಾವಯವ ಪದ್ಧತಿಯಲ್ಲಿ ಬೆಳೆದ ಸೊಪ್ಪು ತರಕಾರಿ ಆರೋಗ್ಯಕ್ಕೆ ಒಳ್ಳೆಯದು. ವೃದ್ಧರಿಗೆ ಹೀಗೆ ಬೆಳೆದ ಸೊಪ್ಪು ತರಕಾರಿ ಕೊಟ್ಟರೆ ವೃದ್ಧರ ಆರೋಗ್ಯದಲ್ಲಿ ಚೇತರಿಕೆ ಆಗುತ್ತೆ ಎನ್ನುವ ಯೋಚನೆ ಬಂತು. ನಮ್ಮ ಹುಡುಗರಲ್ಲಿ ಇದನ್ನು ಚರ್ಚಿಸಿದೆ. ತಡಮಾಡದೆ ಕೆಲಸ ಶುರು ಮಾಡಿದೆವು’.

ವೃದ್ಧಾಶ್ರಮ ಕಟ್ಟಡದ ಮುಂದಿನ ಸುಮಾರು ಕಾಲು ಎಕರೆ ಜಾಗಕ್ಕೆ ದಾನಿಗಳೇ ಫೆನ್ಸಿಂಗ್‌ ಮಾಡಿಸಿದ್ದಾರೆ. ಅಲ್ಲಿ ಮೂಲಂಗಿ, ಟೊಮೆಟೊ, ಮೆಣಸಿನಕಾಯಿ, ಕಾಯಿ-ಪಲ್ಲೆ ಬೆಳೆಯುತ್ತಿದ್ದಾರೆ. ಈ ವಿ.ಎಫ್ ಹಾಸ್ಟೆಲ್‌ನ ಒಂದು ಬಯಲು ಜಾಗದಲ್ಲಿ ಹಾಸ್ಟೆಲ್‌ ಹುಡುಗರೂ ಸೇರಿದಂತೆ ಎಲ್ಲರೂ ಮೂರ್ತವಿಸರ್ಜನೆ ಮಾಡುತ್ತಿದ್ದರು. ಇದರಿಂದ ಸುತ್ತಲಿನ ವಾತಾವರಣ ಗಬ್ಬೆದ್ದು ನಾರುತ್ತಿತ್ತು. ಇವರ ಕೊಳಕು ಮನಸ್ಥಿತಿ ಬದಲಿಸಲು ಗಿಡಗಳನ್ನು ನೆಟ್ಟು ಪೊರೆದರು. ಜೊತೆಗೆ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆಂದೇ ಕಾಯಿ-ಪಲ್ಲೆ ಬೆಳೆದರು. ಈಗ ಆ ಪರಿಸರವನ್ನು ಎಲ್ಲರೂ ಸೇರಿ ಜತನ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ “ಹಸಿರು ಹೊನಲು’ ತಂಡದ ಯುವಕರ ನಿರಂತರ ಪರಿಸರ ಸ್ವತ್ಛತೆ, ಪಾರ್ಕ್‌ಗಳ ನಿರ್ವಹಣೆ ಕೆಲಸ ಜನರ ಮನಸ್ಥಿತಿ ಬದಲಿಸುತ್ತಿದೆ. ಹುಡುಗರ ಪಡೆ ಹಿಗ್ಗಿದ್ದಂತೆಲ್ಲಾ ಊರಿನಲ್ಲಿ ಹಸಿರು ಇಮ್ಮಡಿಸುತ್ತಿದೆ. ಮರಗಿಡಗಳ ಮೇಲೆ ಮಮಕಾರ ತಂದಿದೆ. ಜನರಲ್ಲಿ ಸಾಮಾಜಿಕ ಜವಾಬ್ದಾರಿ ಹೆಚ್ಚಿಸಿದೆ.

ಸ್ವರೂಪಾನಂದ ಎಂ. ಕೊಟ್ಟೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಸರ್ಕಾರಿ ಶಾಲೆ ಶಿಕ್ಷಕರು ಅಂದರೆ, ಬರೀ ಮೀಟಿಂಗ್‌, ರಜೆ ಇಷ್ಟರಲ್ಲೇ ಕಾಲ ಕಳೆಯುತ್ತಾರೆ ಅಂತ ಸುಲಭವಾಗಿ ಆರೋಪಿಸಬಹುದು. ಆದರೆ, ಮೂಡಿಗೆರೆ ತಾಲೂಕಿನ ಈ ಶಿಕ್ಷಕರ...

  • 19ನೇ ಶತಮಾನದ ಶ್ರೇಷ್ಠ ತಣ್ತೀಜ್ಞಾನಿಗಳಲ್ಲಿ ಒಬ್ಬನಾಗಿದ್ದ ಎ.ಎನ್‌. ವೈಟ್‌ಹೆಡ್‌ ಗಣಿತಜ್ಞನೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಗಣಿತದ ಪೊ›ಫೆಸರನೂ ಆಗಿದ್ದ....

  • ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗೆ ಶಿಕ್ಷಕನಾಗಿ ಸೇರಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ನನ್ನ ಬೋಧನಾ ಶೈಲಿ, ಇಂಗ್ಲೀಷ್‌ ಭಾಷೆ ಆರಂಭದಲ್ಲಿ ಅಲ್ಲಿಯ ಶ್ರೀಮಂತ...

  • ಗ್ರೂಪ್‌ಸ್ಟಡಿ ಮಾಡಬೇಕಾ ಬೇಡವಾ? ಈ ಮಕ್ಕಳು ಗ್ರೂಪ್‌ ಸ್ಟಡಿ ಅಂತ ಹೇಳ್ಕೊಂಡು ಏನೂ ಓದಲ್ಲ. ಬೇಡದ್ದೇ ಮಾಡ್ತವೆ ಅನ್ನೋ ಆರೋಪವೂ ಇದೆ. ಇಂಥ ಸಂದರ್ಭದಲ್ಲೇ ಗ್ರೂಪ್‌...

  • ಹಳ್ಳಿಗೆ ಹೋಗಿ ಕೆಲ್ಸ ಮಾಡೋದು ವೈದ್ಯ ವೃತ್ತಿಗೆ ಕಡ್ಡಾಯ. ದೇಶದ ಎಕಾನಿಮಿಯ ಹೃದಯ ಗ್ರಾಮೀಣ ಭಾಗ. ಎಲ್ಲರೂ ಹಳ್ಳಿಯ ಕಡೆ ನೋಡುತ್ತಿರುವುದು ಇದೇ ಕಾರಣಕ್ಕೆ. ಹೀಗಾಗಿ,...

ಹೊಸ ಸೇರ್ಪಡೆ