ಮನಸ್ಸು ತಡೀತಿಲ್ಲ, ಹಾಗಾಗಿ ಹೇಳಿ ಬಿಡ್ತೀನಿ ಐ ಮಿಸ್ ಯೂ…
Team Udayavani, Jun 4, 2019, 6:00 AM IST
ನೀನು ನನಗೆ ಪರಿಚಯವಾಗದಿದ್ದರೆ, ನನ್ನ ಪುಟ್ಟ ಜಗತ್ತಿನೊಳಗೆ ಪ್ರವೇಶ ಪಡೆಯದಿದ್ದರೆ ಡಿಗ್ರಿಯಲ್ಲಿ ನಾ ಕಳೆದ ಎಲ್ಲಾ ದಿನಗಳು ಬೇರೆಯದೇ ರೀತಿ ಇರುತ್ತಿದ್ದವು. ನಿಷ್ಕಲ್ಮಶ ನಗುವಿನ ನಿನ್ನ ಮುಖವನ್ನು ಯಾವತ್ತು ನಾನು ಕಂಡೆನೋ, ಅಂದಿನಿಂದ ನನ್ನ ಜೀವನ ಬೇರೆಯದೇ ತಿರುವು ಪಡೆಯಿತು. ನನ್ನ ಯೋಚನೆ, ಆಲೋಚನೆ, ಭಾವನೆಗಳೆಲ್ಲಾ ಬರೀ ನಿನ್ನ ಸುತ್ತವೇ ಗಿರಕಿ ಹೊಡೆಯತೊಡಗಿದವು. ನಾನು ಏನೇ ಕೆಲಸ ಮಾಡಿದ್ರೂ ಅದು ಕೇವಲ ನಿನಗಾಗಿ, ನಿನ್ನನ್ನು ಬಿಟ್ಟು ನನ್ನ ಹೃದಯದಲ್ಲಿ ಬೇರೊಂದು ಹುಡುಗಿಗೆ ಸ್ಥಾನವಿಲ್ಲ ಅನ್ನುವಷ್ಟರ ಮಟ್ಟಿಗೆ ನಿನ್ನನ್ನು ಹಚ್ಚಿಕೊಂಡುಬಿಟ್ಟೆ.
ನಮ್ಮ ಕಾಲೇಜು ದಿನಗಳು ಮುಗಿಯುವುದಕ್ಕೆ ಮೂರು ತಿಂಗಳಷ್ಟೇ ಬಾಕಿ ಇದೆ. ಇದ್ದಷ್ಟು ದಿನ ನನ್ನ ಜೊತೆಗಿರು. ನನ್ನ ಜೊತೆಗಿರು ಅಂದ್ರೆ ನನ್ನ ಜೊತೆ ಸುತ್ತಾಡು, ಮಾತಾಡು ಅಂತಲ್ಲ. ಇರುವಷ್ಟು ದಿನ ನನ್ನವಳಾಗಿರು, ಕೇವಲ ನನ್ನವಳಾಗಿ. ಈ ಮೂರು ತಿಂಗಳಲ್ಲಿ ಒಂದು ಕ್ಷಣವೂ ಮುನಿಸಿಕೊಳ್ಳಬೇಡ. ನಾನು ನಿನ್ನನ್ನು ನೋಡುವ ಕೊನೇ ದಿನದ, ಕೊನೇ ಕ್ಷಣದವರೆಗೂ ನೀನು ನಗುತ್ತಾ, ಖುಷಿಯಿಂದ ಇರಬೇಕು. ಅದೇ ನೀ ನನಗೆ ಕೊಡುವ ಉಡುಗೊರೆ.
ನನ್ನದೊಂದು ಕೊನೇ ಮಾತು; ಈ ಮಾತನ್ನು ಯಾವ ಹುಡುಗಿಗೂ ಹೇಳಬಾರದು ಅಂದ್ಕೋಡಿದ್ದೆ, ನಿನಗೂ ಕೂಡ. ಆದರೂ, ಮನಸ್ಸು ತಡೆಯುತ್ತಿಲ್ಲ. ಹೇಳಿಯೇ ಬಿಡುತ್ತೇನೆ ಕೇಳು- “ಐ ಲವ್ ಯೂ ಅಂಡ್ ಐ ಮಿಸ್ ಯೂ’.
-ಮೈಲಾರಿ ಸಿಂಧುವಾಳ