ಕಾಡಿನ ಮಕ್ಕಳ ಕತೆ

ನಮ್ಕಡೆ ಸ್ವಲ್ಪ ನೋಡಿ ಸಾರ್‌

Team Udayavani, Oct 1, 2019, 5:42 AM IST

ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಫೋಟೋ ಹಾಕಬೇಕು, ಮಾಲ್‌ನಲ್ಲಿ ಶಾಪಿಂಗ್‌ಗೆ ಹೋಗಬೇಕು. ಸ್ಮಾರ್ಟ್‌ ಫೋನ್‌ ಇದ್ದರೆ ಇಡೀ ಜಗತ್ತೇ ನಮ್ಮ ಕೈಯಲ್ಲಿ ಅನ್ನುವ ಈ ಕಾಲದಿಂದ ಬಹಳ ದೂರ ಉಳಿದಿದ್ದಾರೆ ಈ ಹಳ್ಳಿಯ ಮಕ್ಕಳು. ಸಂಜೆ ಶಾಲೆಯಿಂದ ಮಗು ಬರುವುದು ತಡವಾದರೆ ಹೆದರುವ ಇವತ್ತಿನ ಸ್ಥಿತಿಯಲ್ಲಿ , ಇವರು ಪ್ರತಿದಿನ ಕನಿಷ್ಠ 5 ಕಿ.ಮೀ ದಟ್ಟ ಕಾಡಿನ ಹಾದಿಯಲ್ಲಿ, ಅಂಗೈಯಲ್ಲಿ ಜೀವ ಹಿಡಿದುಕೊಂಡೇ ಶಾಲೆ ಸೇರುತ್ತಾರೆ. ಮಳೆ ಬಂದರಂತೂ ಸೀಮೆ ಎಣ್ಣೆ ದೀಪದ ಬೆಳಕಿನಲ್ಲೇ ಓದು. ಇಂಥ ವಿದ್ಯಾರ್ಥಿಗಳ ಎದೆಯಲ್ಲಿ ಏನೆಲ್ಲ ತಳಮಳಗಳಿವೆ ಗೊತ್ತಾ?

ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯದ ಗರ್ಭದಲ್ಲಿ ಹೆಮ್ಮಡಗಾ, ಪಾಲಿ, ತೇರೆವಾಡಿ, ಮಂಗೀನಾಳ, ಡೊಂಗರಗಾಂವ, ದೇಗಾಂವ, ಜಾಮಗಾಂವ, ಅಬನಾಳಿ ಸೇರಿದಂತೆ ಹತ್ತಾರು ಹಳ್ಳಿಗಳಿವೆ. ಇಲ್ಲಿನ ಮಕ್ಕಳಿಗೆ ಓದುವ ಆಸೆ ಜೋರು. ಈ ಎಲ್ಲ ಊರಿನ ಮಕ್ಕಳಿಗೆಂದೇ ಶೀರೋಲಿಯಲ್ಲಿ ಶಾಲೆ ಇದೆ. ಅದಕ್ಕೆ ಈ ಹಳ್ಳಿಗಳ ಮಕ್ಕಳೇ ವಿದ್ಯಾರ್ಥಿಗಳು. ಎಷ್ಟೋ ಕಡೆ ಬಸ್ಸೇ ಇಲ್ಲ. ಪ್ರತಿ ದಿನ ಬರೋಬ್ಬರಿ 10 ಕಿ.ಮೀ ಕಾನನವನ್ನು ಸೀಳಿಕೊಂಡು ನಟರಾಜ ಸರ್ವೀಸಿನಲ್ಲೇ ಈ ಶಾಲೆ ಸೇರಬೇಕು. ಇವರು ಬರುವ ತನಕ ಮಾಸ್ತರರ ಎದೆಯಲ್ಲಿ ಢವಢವ. ಶಾಲೆ ಮುಗಿಸಿ ಕೊಂಡ ಮಕ್ಕಳು, ಮನೆ ಮುಟ್ಟುವ ತನಕ ಹೆತ್ತವರ ಹೃದಯದಲ್ಲಿ ಪುಕಪುಕ. ಆಕಾಶದಲ್ಲಿ ಮೋಡ ಮುಸುಕಿದರೆ ಜೀವ ಬಾಯಿಗೆ ಬಂದು ಬಿಡುತ್ತದೆ. ಇಷ್ಟಾದರೂ, ಮಕ್ಕಳು ಓದುವುದನ್ನು ಬಿಟ್ಟಿಲ್ಲ.

ಈ ಮಕ್ಕಳಿಗೆ ಪ್ರಾಣಿಗಳೇ ಸಹಪಾಠಿಗಳು. ಶಾಲೆಗೆ ಹೋಗಬೇಕಾದರೆ ಬೆಳಗ್ಗೆ 6ಕ್ಕೇ ಏಳಬೇಕು. ಅಪ್ಪ-ಅಮ್ಮ ಕೂಲಿಗೆ ಹೊರಟರೆ, ಇವರು ಬ್ಯಾಗ್‌ ಏರಿಸಿ ಶಾಲೆಯ ಕಡೆ ನಡೆಯುತ್ತಾರೆ. ಬರೋಬ್ಬರಿ ಒಂದೂವರೆ ಗಂಟೆ ಕಾನನದ ಪಯಣ. ಒಬ್ಬೊಬ್ಬರೇ ಹೋಗುವುದಿಲ್ಲ. ಐದು, ಆರು ಜನ ವಿದ್ಯಾರ್ಥಿಗಳ ಗುಂಪು ಮಾಡಿಕೊಂಡೇ ಹೊರಡುವುದು. ಏಕೆಂದರೆ, ಕಾಡಲ್ಲಿ ಪ್ರಾಣಿಗಳು ಎದುರಾದರೆ ಅನ್ನೋ ಭಯ.

“ವಾರದಲ್ಲಿ ನಾಲ್ಕೈದು ಬಾರಿಯಂತೂ ಕಾಡು ಕೋಣ, ಜಿಂಕೆ, ಕರಡಿ, ಚಿರತೆಯನ್ನು ನೋಡುತ್ತೇನೆ. ಪ್ರಾಣಿಗಳು ಬಂದರೆ ಸುಮ್ಮನೆ ನಿಂತು ಬಿಡುತ್ತೇವೆ. ಅದರ ಪಾಡಿಗೆ ಅದು ಹೋದಾಗ ಮತ್ತೆ ನಾವು ಮುಂದೆ ಸಾಗುತ್ತೇವೆ’ ಎನ್ನುತ್ತಾಳೆ ಭಯದ ಗಣ್ಣಿನ ಹುಡುಗಿ 9ನೇ ತರಗತಿಯ ಸರಿತಾ ಜೋಶಿಲಕರ.

ಪ್ರಾಣಿಗಳು ದಾಳಿ ಮಾಡೋದಿಲ್ಲವೇ?
ಸ್ಕೂಲಿಗೆ ಹೋಗುತ್ತಿದ್ದ ರೂಪೇಶಗಾವಡಾ, ರಾಜೇಶ ದೇಸಾಯಿ ಹೇಳುವ ಮಾತಿದು: ನಮ್ಮ ಮೇಲೆ ಪ್ರಾಣಿಗಳು ದಾಳಿ ಮಾಡಿದ್ದು ಇಲ್ಲ. ಆದರೆ ದಾಳಿ ಮಾಡಬಹುದೆಂಬ ಭಯ ನಿತ್ಯವೂ ಕಾಡುತ್ತೆ. ನಮ್ಮೂರಿನವರು-ಹುಷಾರ್‌ ಮಕ್ಕಳಾ, ಕರಡಿ ಮನುಷ್ಯರನ್ನು ನೋಡಿದ್ರೆ ಬಿಡಲ್ಲ ಅಂತೆಲ್ಲ ಹೇಳ್ತಿರ್ತಾರೆ. ದೂರದಲ್ಲಿ ಕರಡಿ ಕಂಡಾಗ, ಹಿಂದಕ್ಕೆ ಸರಿದು ಸುಮ್ಮನೆ ನಿಂತು ಬಿಡುತ್ತೇವೆ. ಪ್ರಾಣಿಗಳನ್ನು ಕಂಡಾಗೆಲ್ಲ ತುಂಬಾ ಭಯವಾಗುತ್ತೆ. ಯಾವಾಗ ಶಾಲೆಗೆ ಹೋಗಿ ತಲುಪುತ್ತೀವೋ, ಶಿಕ್ಷಕರನ್ನು ಯಾವಾಗ ಕಾಣುತ್ತೀವೋ ಅಂತ ಚಡಪಡಿಸುತ್ತಿರುತ್ತೇವೆ ಅಂದರು.

ಒಂದು ಸಲವಂತೂ ಅಬ್ಬನಾಳಿ ಕ್ರಾಸ್‌ಗಿಂತ ಮುಂಚೆ- ಈ
ವಿದ್ಯಾರ್ಥಿಗಳ ದಂಡಿಗೆ ಕರಡಿ ನೇರಾನೇರ ಎದುರಾಗಿಬಿಟ್ಟಿತಂತೆ. ಅದನ್ನು ಅಬನಾಳಿಯ ನಾರಾಯಣ ಮಾದಾರನ ಮಾತಲ್ಲೇ ಕೇಳಿ: ಶಾಲೆಗೆ ಬರುವಾಗ ಕರಡಿ ನನ್ನ ಎದುರಿಗೆ ಬಂತು. ಅಲ್ಲಿಯೇ ನಿಂತುಕೊಂಡಿದ್ದರೆ ಕರಡಿ ನನ್ನ ಮೇಲೆ ದಾಳಿ ಮಾಡುತ್ತಿತ್ತು. ಸದ್ದು ಮಾಡದೇ ಬ್ಯಾಗ್‌ ಕೆಳಗೆ ಒಗೆದು ಗಿಡ ಹತ್ತಿದೆ. ಇದೇ ರೀತಿ ಒಂದು ದಿನ ಶಾಲೆಯಿಂದ ಬರುವಾಗ ಮೂರ್‍ನಾಲ್ಕು ಸಹಪಾಠಿಗಳು ನನ್ನೊಂದಿಗೆ ಇದ್ದರು. ಕಾಡುಕೋಣ ಬೆನ್ನತ್ತಿತು. ರಾಡಿ, ಕೆಸರಿನಲ್ಲಿ ಓಡೋಡಿ ಮನೆ ಸೇರಿಕೊಂಡೆವು.’

ಈ ಹುಡುಗರಿಗೆ ಪ್ರಾಣಿಗಳ ಕಾಟ ಮಾತ್ರ ಅಲ್ಲ, ಮಳೆಯೂ ಕಾಟ ಕೊಡುತ್ತಿದೆ. ಕಳೆದ ಎರಡು ತಿಂಗಳಿಂದ ಮಳೆಯಿಂದಾಗಿ ರಸ್ತೆಗಳೆಲ್ಲವೂ ಕೊಚ್ಚಿ ಹೋಗಿವೆ. ಈ ಎರಡು ತಿಂಗಳಿಂದ ಇಲ್ಲಿನ ವಿದ್ಯಾರ್ಥಿಗಳು, ಅದರಲ್ಲೂ ಬಸ್ಸನ್ನೇ ಕಾಣದ ಜಾಮಗಾವ್‌, ಡೋಂಗರ್‌ಗಾವ್‌, ಪಾಲಿ ಹಳ್ಳಿಗಳಲ್ಲಿ ವಿದ್ಯಾರ್ಥಿಗಳದ್ದು ದಿನಕ್ಕೆ 10ಕಿ.ಮೀ. ಪಾದಯಾತ್ರೆ. ಪಾಸ್ಟೋಲಿ, ಕೋಂಗಳಾ, ಗವ್ವಾಳಿ ಎಂಬ ಮೂರು ಊರಲ್ಲಿ ಕಂಬಳಿ ಕಟ್ಟಿಗೆ ಕಟ್ಟಿ- ಅನಾರೋಗ್ಯ ಪೀಡಿತರನ್ನು 8 ಕಿ.ಮೀ. ತಗೊಂಡು ಬರಬೇಕಾದ ಸ್ಥಿತಿ ಇದೆ.

ಮಳೆ ಬಂದರೆ ಹಳ್ಳಿಗಳಲ್ಲಿ ವಿದ್ಯುತ್‌ಕಟ್‌. ಹೀಗಾಗಿ, ಸೀಮೆ ಎಣ್ಣೆ ದೀಪದ ಬೆಳಕಿನಲ್ಲಿ ಓದುವುದು ಇವರಿಗೆಲ್ಲಾ ಸಾಮಾನ್ಯ ಸಂಗತಿ ಎನ್ನುವಂತಾಗಿದೆ. ಕರೆಂಟ್‌ ಬಂದಾಗ ಮೈಸೂರು ಅರಮನೆಯನ್ನು ನೋಡುವಂತೆ ಟಿ.ವಿಯನ್ನು ನೋಡುತ್ತಾರೆ. ನಗರ ಪ್ರದೇಶದಲ್ಲಿ ಮಕ್ಕಳು ಶಾಲಾವಾಹನದಲ್ಲಿ ಹೋಗುವಂತೆ, ನಾವೂ ವ್ಯಾನ್‌ನಲ್ಲಿ ಹೋಗಬೇಕು ಅನ್ನೋ ಆಸೆ ಈ ಮಕ್ಕಳಿಗೆ ಇದೆಯಂತೆ. “ನಮ್ಮ ಮನೆ ಹತ್ತಿರ ಬಸ್‌ ಬಂದಿದ್ದರೆ ಪ್ರಾಣಿ ಭಯ ಅನ್ನೋ ಮಾತೇ ಇರುತ್ತಿರಲಿಲ್ಲ ಅಂತಾರೆ ಡೊಂಗರಗಾಂವ ಹಳ್ಳಿಯ ರೇಣು ಭಟ್‌.

ಈ ಗ್ರಾಮಗಳ ಮಕ್ಕಳು, ನಗರದಿಂದ ನೆಂಟರು ಬರುವುದೇ ಕಾಯುತ್ತಿರುತ್ತಾರೆ. ಬಂದಾಕ್ಷಣ ಮೊದಲು ಅವರ ಮೊಬೈಲ್‌ ಇಸಿದುಕೊಂಡು ಸೆಲ್ಫಿ ತೆಗೆಸಿಕೊಳ್ಳುತ್ತಾರೆ. ಇನ್ನು ಶನಿವಾರ-ಭಾನುವಾರ ಬಂದರೆ ಸಾಕು; ಖಾನಾಪುರದ ಸಂತೆಗೆ ಹೋಗಿ ಪಟ್ಟಣದ ದರ್ಶನ ಮಾಡಿಕೊಂಡು ಬರುತ್ತಾರೆ. ಅದೂ ನಡೆದುಕೊಂಡೇ…

ಭೈರೋಬಾ ಕಾಂಬಳೆ


ಈ ವಿಭಾಗದಿಂದ ಇನ್ನಷ್ಟು

  • ಗಣಿತ ಸಮ್ಮೇಳನಗಳಲ್ಲಿ ಗಂಭೀರವಾದ ಉಪನ್ಯಾಸವಾದ ಮೇಲೆ ಪ್ರಶ್ನೋತ್ತರ ನಡೆಯುವುದು ರೂಢಿ. ಉಪನ್ಯಾಸದ ತಲೆಬುಡ ಅರ್ಥವಾಗದವರು ಕೂಡ ಆಗ ತಮಗೆಲ್ಲ ಅರ್ಥವಾಗಿದೆ ಎಂದು...

  • ನನ್ನ ಮೊಮ್ಮಗನನ್ನು ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ಹಾಸ್ಟೆಲ್‌ಗೆ ಸೇರಿಸುವ ಸಲುವಾಗಿ ಬಾಡಿಗೆ ಕಾರೊಂದರಲ್ಲಿ ಬೆಳಗಿನ ಜಾವ ಐದು ಘಂಟೆಗೆ ಚಿತ್ರದುರ್ಗದಿಂದ...

  • "ನಮ್ಮ ಕುಟುಂಬ' ಅಂತ ಒಂದು ಗ್ರೂಪ್‌ ರಚನೆ ಮಾಡಿದ್ದು ಚಿಕ್ಕಪ್ಪನ ಮಕ್ಕಳು. ಇದರ ಉದ್ದೇಶ, ಊರಲ್ಲಿದ್ದು, ನಗರಗಳಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಅಷ್ಟೂ ಸಂಬಂಧಿಕರನ್ನು...

  • ಬಸ್‌ಸ್ಟಾಪ್‌ ನಲ್ಲಿ ಇಳಿದೆ. ಹಸಿವಾಗಿತ್ತು. ನನ್ನ ಬಳಿ ಹೆಚ್ಚು ಹಣವಿರಲಿಲ್ಲ. ಅದೊಂದು ಚಿಕ್ಕ ಅಂಗಡಿ ಬಳಿ ಹೋದೆ. ಪೇಪರ್‌ ಮತ್ತು ಎರಡು ಬಾಳೆ ಹಣ್ಣು ಕೇಳಿ, ನನ್ನ...

  • ಮಳೆ ಎಂದರೆ ಮನುಷ್ಯರಿಗಷ್ಟೇ ಅಲ್ಲ, ಪರಿಸರದ ಜೀವ ಸಂಕುಲಗಳಿಗೆಲ್ಲ ಸಂಭ್ರಮ. ಕಪ್ಪೆಗಳು ನೀರಿನಲ್ಲಿ ಕುಳಿತು ಗಾಳಿಯೊಂದಿಗೆ ರಾಗ ಭಾವವನ್ನು ತೇಲಿ ಬಿಡುತ್ತವೆ....

ಹೊಸ ಸೇರ್ಪಡೆ